Srivathsa Joshi Column: ದಿನರಾತ್ರಿಯಲಿ ಏಕಾಂತದಲಿ ಏಕೋ ಹೇನೋ ನೋವಾಗುವುದು
ಚಿ.ಉದಯಶಂಕರ್ ಬರೆದ ಸಾಹಿತ್ಯದಲ್ಲೇ ‘ಹೇನೋ’ ಅಂತ ಇತ್ತೇ? ದಿನರಾತ್ರಿ ಹೇನಿನ ಕಾಟ (ತುರಿಕೆ, ನೋವು) ತಾಳಲಾರದ ಹೀರೋ “ದಿನರಾತ್ರಿಯಲಿ ಏಕಾಂತದಲಿ ಏಕೋ ಹೇನೋ ನೋವಾಗುವುದು" ಎಂದಿರಬಹುದೇ? ಆದರೆ ಅಲ್ಲೂ ಒಂದು ವಿರೋಧಾಭಾಸ ಉಂಟಾಗುತ್ತದೆ. ಹಗಲೂ ರಾತ್ರಿಯೂ ಏಕಾಂತದಲ್ಲೇ ಇದ್ದರೆ ತಲೆಯಲ್ಲಿ ಹೇನು ಎಲ್ಲಿಂದ ಬರಲು ಸಾಧ್ಯ? ಹಾಗಾಗಿ ಆ ತರ್ಕವನ್ನು ಅಲ್ಲಿಗೇ ಬಿಟ್ಟುಬಿಟ್ಟೆ
-
ತಿಳಿರು ತೋರಣ
ಅಪರೂಪಕ್ಕೊಮ್ಮೆ ಅಕಸ್ಮಾತ್ತಾಗಿ ಘಟಿಸಿದ ಉಚ್ಚಾರ ದೋಷವಿದು. ಎಸ್.ಪಿ ಬಾಲಸುಬ್ರಹ್ಮಣ್ಯಂ ಐದಾರು ದಶಕಗಳಲ್ಲಿ ಹಾಡಿರುವ ಸಾವಿರಾರು ಚಿತ್ರಗೀತೆಗಳಲ್ಲಿನ ಕನ್ನಡ ಉಚ್ಚಾರ ಶುದ್ಧಾನುಶುದ್ಧ ಸ್ಪಷ್ಟಾತಿಸ್ಪಷ್ಟವೇ ಆಗಿರುತ್ತಿತ್ತು. ಆಮೇಲೆ ಬಂದ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮ ನಿರೂ ಪಣೆಯ ವಿಷಯದಲ್ಲಿ ಹೀಗೆನ್ನಲಾರೆವಾದರೂ, ಅದರಲ್ಲಿ ತೆಲುಗು ಛಾಯೆ ಅಲ್ಲಲ್ಲಿ ಇಣುಕುತ್ತಿತ್ತಾ ದರೂ, ಕನ್ನಡ ಚಿತ್ರಗೀತೆ ಹಾಡುವಾಗಿನ ಅವರ ಉಚ್ಚಾರ ಮಾತ್ರ ಅಪರಂಜಿ ಚಿನ್ನವೇ.
ಆದ್ದರಿಂದಲೇ ಅಪರೂಪಕ್ಕೊಮ್ಮೆ ಅಕಸ್ಮಾತ್ತಾಗಿ ಎಂದಿದ್ದು- ‘ದೇವರಗುಡಿ’ ಚಿತ್ರದ ‘ಮಾಮರ ವೆಲ್ಲೋ ಕೋಗಿಲೆಯೆಲ್ಲೋ...’ ಹಾಡಿನ ಎರಡನೆಯ ಚರಣದಲ್ಲಿ ಏನು ‘ಹೇನು’ ಆದದ್ದನ್ನು. “ದಿನ ರಾತ್ರಿಯಲಿ ಏಕಾಂತದಲಿ ಏಕೋ ಹೇನೋ ನೋವಾಗುವುದು..." ಬೇಕಿದ್ದರೆ ನೀವೂ ಈಗೊಮ್ಮೆ ಕೇಳಿ ಸೂಕ್ಷ್ಮವಾಗಿ ಗಮನಿಸಿ. ಹಾಡಿನ ರೇಡಿಯೊ ಆವೃತ್ತಿಯಲ್ಲೂ, ಸಿನಿಮಾದಲ್ಲಿರುವ ಆವೃತ್ತಿ ಯಲ್ಲೂ ‘ಹೇನೋ’ ಎಂದೇ ಇದೆ!
ಸ್ವಾರಸ್ಯವೆಂದರೆ ಇದೇ ಹಾಡಿನಲ್ಲಿ ಬೇರೆಡೆ ಎಲ್ಲ ಏ-ಕಾರಗಳನ್ನು ಸರಿಯಾಗಿಯೇ ಉಚ್ಚರಿಸಿರುವ ಬಾಲು ಇದೊಂದು ಕಡೆ ಮಾತ್ರ ಹೇ-ಕಾರ ತಂದಿದ್ದಾರೆ.ಇದು ನನ್ನಲ್ಲೊಂದು ಹೊಸ ಆಲೋಚನೆ ಯನ್ನು ಹುಟ್ಟು ಹಾಕಿತು.
ಚಿ.ಉದಯಶಂಕರ್ ಬರೆದ ಸಾಹಿತ್ಯದಲ್ಲೇ ‘ಹೇನೋ’ ಅಂತ ಇತ್ತೇ? ದಿನರಾತ್ರಿ ಹೇನಿನ ಕಾಟ (ತುರಿಕೆ, ನೋವು) ತಾಳಲಾರದ ಹೀರೋ “ದಿನರಾತ್ರಿಯಲಿ ಏಕಾಂತದಲಿ ಏಕೋ ಹೇನೋ ನೋವಾಗು ವುದು" ಎಂದಿರಬಹುದೇ? ಆದರೆ ಅಲ್ಲೂ ಒಂದು ವಿರೋಧಾಭಾಸ ಉಂಟಾಗುತ್ತದೆ. ಹಗಲೂ ರಾತ್ರಿಯೂ ಏಕಾಂತದಲ್ಲೇ ಇದ್ದರೆ ತಲೆಯಲ್ಲಿ ಹೇನು ಎಲ್ಲಿಂದ ಬರಲು ಸಾಧ್ಯ? ಹಾಗಾಗಿ ಆ ತರ್ಕವನ್ನು ಅಲ್ಲಿಗೇ ಬಿಟ್ಟುಬಿಟ್ಟೆ.
ಇದನ್ನೂ ಓದಿ: Srivathsa Joshi Column: ಲೋಕವೇ ಹೇಳಿದ ಮಾತಿದು...ಆದರೆ ಮೂಲತಃ ಏನದು ?
ಇನ್ನೊಂದು ಆಲೋಚನೆ ಹೊಳೆಯಿತು. ಯಾವುದಾದರೂ ಚಿತ್ರಗೀತೆಯಲ್ಲಿ ಹೇನಿನ ಉಲ್ಲೇಖ ಆಗಿದ್ದಿದೆಯೇ? ನನ್ನ ಸೀಮಿತ ತಿಳಿವಳಿಕೆಯ ಪ್ರಕಾರ ಇಲ್ಲ. ನಾಯಕಿಯ ಜಡೆಯನ್ನು, ಮುಂಗು ರುಳನ್ನು, ಕೇಶರಾಶಿಯನ್ನು ನಾಯಕನು ಹೊಗಳುವ ಹಲವಾರು ಹಾಡುಗಳಿವೆ: “ನಿಲ್ಲು ನೀ ನಿಲ್ಲು ನೀ ನೀಳವೇಣಿ..." (ಅಮರಶಿಲ್ಪಿ ಜಕಣಾಚಾರಿ), “ಅಡಿಯ ಮುಟ್ಟ ನೀಳ ಜಡೆ ಮುಡಿಯ ತುಂಬ ಹೂವು ಹೆಡೆ..." (ಗೌರಿ), “ಹರಡಲು ಮೋಡ ಹೆಣೆಯಲು ಹಾವು ಏನದು ಹೇಳು... ನಿನ್ನಯ ಜಡೆಯೇ ಹಾವಿನ ಹೆಡೆಯೂ ಮೋಡವೇ ಮುಂಗುರುಳು..." (ತಂದೆಮಕ್ಕಳು), “ಕಣ್ಣೆರಡು ಕಮಲಗಳಂತೆ ಮುಂಗುರುಳು ದುಂಬಿಗಳಂತೆ..." (ಕವಿರತ್ನ ಕಾಳಿದಾಸ) ಇತ್ಯಾದಿ.
ಹಿಂದಿಯಲ್ಲೂ ಬೇಕಾದಷ್ಟು ಇವೆ: “ಯೇ ರೇಷ್‌ಮೀ ಜುಲೇಂ..." (ದೋ ರಾಸ್ತೇ), “ಯೇ ಜುಲ್ ಅಗರ್ ಖುಲ್‌ಕೇ ಬಿಖರ್ ಜಾಯೇ ತೋ ಅಚ್ಛಾ..." (ಕಾಜಲ್) ವಗೈರಾ. ಅಂದರೆ, ಚಿತ್ರಗೀತೆಗಳಲ್ಲಿ ಉಲ್ಲೇಖ ಯೋಗವನ್ನು ಹೇನು ಕೂದಲೆಳೆಯಿಂದ ತಪ್ಪಿಸಿಕೊಂಡಿದೆ!
ಚಿತ್ರಸಾಹಿತ್ಯದಲ್ಲಿ ಇಲ್ಲದಿದ್ದರೂ ಒಟ್ಟಾರೆಯಾಗಿ ಸಾಹಿತ್ಯದಲ್ಲಿ ಹೇನು ಕಾಣಿಸಿಕೊಂಡಿದೆಯೇ? ಇದು ನನ್ನ ನೆಕ್ಸ್ಟ್ ಆಲೋಚನೆ. ಸಾಹಿತ್ಯವೆಂದರೆ ಯಾವ ರೀತಿಯದು? ಗೂಗಲ್‌ನಲ್ಲಿ ‘ಹೇನು’ ಎಂದು ಎರಡಕ್ಷರ ಟಂಕಿಸಿ ಹುಡುಕಿದಾಗ ದಬದಬನೆ ಬರುತ್ತವಲ್ವಾ ಪುಟಗಳು- “ತಲೆಯಲ್ಲಿ ಹೇನು ಇದ್ಯಾ? ಹೀಗೆ ಮಾಡಿದ್ರೆ ಸಾಕು!", “ತಲೆಹೇನು ಪರಿಹಾರ ಏನು?", “ಹೇನು-ಕೂರೆ: ಸಮಸ್ಯೆ ಮತ್ತು ಪರಿಹಾರ", “ಹೇನು ಸೀರು ಹೋಗಲು ಅದ್ಭುತ ಮನೆಮದ್ದು" ರೀತಿಯ ಗೃಹಶೋಭಾ ಧಾಟಿಯ ಬರಹಗಳ ಬಗ್ಗೆಯಲ್ಲ ನಾನು ಹೇಳ್ತಿರೋದು. ಹೇನಿನ ಮೇಲೆಯೇ(ಹೇನನ್ನು ಮುಖ್ಯ ವಿಷಯವನ್ನಾ ಗಿಸಿ) ಬರೆದ ಕವನಗಳು, ಲಲಿತಪ್ರಬಂಧಗಳು, ಲಹರಿಗಳು, ಅಂಕಣಬರಹಗಳು ಇತ್ಯಾದಿ.
ಅಂಕಣಬರಹಗಳು ಅಂತ ಮುದ್ದಾಂ ನೆನಪಿಸಿಕೊಂಡಿದ್ದೇಕೆಂದರೆ-ಇದೇ ‘ವಿಶ್ವವಾಣಿ’ ಪತ್ರಿಕೆಯ ಸಹ-ಅಂಕಣಕಾರ ಶಿಶಿರ ಹೆಗಡೆ ಎರಡು ವರ್ಷಗಳ ಹಿಂದೊಮ್ಮೆ “ಕಿರಿಕಿರಿಯ ಹೇನು ಅವಸಾನದ ಅಂಚಿನಲ್ಲಿದೆಯೇ?" ಎಂಬೊಂದು ಚಂದದ ಲೇಖನವನ್ನು ‘ಶಿಶಿರಕಾಲ’ ಅಂಕಣದಲ್ಲಿ ಬರೆದಿದ್ದಾರೆ.
ಅದರಲ್ಲಿ ಹೇನು ಎಂಬ ಪರಾವಲಂಬಿ ಜೀವಿಯ ರೋಚಕ ಸಾಹಸಮಯ ಬದುಕು, ಜೀವವಿಕಾಸ ದಲ್ಲಿ ಹೇನು ಉಳಿದು ಬೆಳೆದು ಬಂದ ಬಗೆ, ಕ್ವೀನ್ ವಿಕ್ಟೋರಿಯಾ ಆಳ್ವಿಕೆಯ ಕಾಲದಲ್ಲಿ ಲಂಡನ್ನಿನ ಆಸ್ಪತ್ರೆಗಳಲ್ಲಿ ಹೇನುಗಳನ್ನು ನಿಯಂತ್ರಿಸಲಿಕ್ಕೆಂದೇ ಕೂಲಿಗಳ ನೇಮಕಾತಿ, ಅವರಿಗೆ ವೈದ್ಯರಿ ಗಿಂತಲೂ ಜಾಸ್ತಿ ಸಂಬಳ, ಹೇನೆಂದರೆ ಕಿರಿಕಿರಿಯ ದ್ಯೋತಕ, ಅದೊಂದು ಪಿಡುಗು, ತಲೆಯಲ್ಲಿ ಹೇನಾಗಿದೆಯೆಂದರೆ ಯಾವುದೋ ದೇವರ ಮುನಿಸು, ಕರ್ಮಫಲ ಎಂಬ ನಂಬಿಕೆ, ಮನುಷ್ಯನ ಹೋರಾಟದ ಬದುಕಿನ ರಂಜನೆಯ ವರ್ಣನೆಗೂ ಬಳಕೆ, ಗಲಿವರ್ಸ್ ಟ್ರಾವೆಲ್ಸ್ ಕಥೆಯ ಚಲನಚಿತ್ರ ದಲ್ಲಿ ಹೀರೋ ಅತಿ ಚಿಕ್ಕ ಗಾತ್ರದ ಮನುಷ್ಯರುಳ್ಳ ದ್ವೀಪಕ್ಕೆ ಹೋದಾಗ ಅವನ ತಲೆಯಲ್ಲಿದ್ದ ಹೇನು ಗಳು ಅಲ್ಲಿನವರಿಗೆ ಸಾಕುಪ್ರಾಣಿಗಳ ಗಾತ್ರದಲ್ಲಿ ಕಾಣಿಸುವುದು, ಪಾಪ ಮಾಡಿದವರನ್ನು ಹೇನು ತುಂಬಿದ ಬಾವಿಗೆ ದೂಡುವ ಶಿಕ್ಷೆ, ಈಗ ರೋಹಿಂಗ್ಯಾಗಳ ಕ್ಯಾಂಪುಗಳಲ್ಲಿ ಹೇನು ಕಾಟ... ಮುಂತಾದ ವೆರಿ ವೆರಿ ಇಂಟೆರೆಸ್ಟಿಂಗ್ ವಿಚಾರಗಳನ್ನು ಪೋಣಿಸಿದ್ದಾರೆ.
ಅಂತೆಯೇ ವಿಶ್ವವಾಣಿ ಪತ್ರಿಕೆಯ ಇನ್ನೊಬ್ಬ ಅಂಕಣಕಾರ ಡಾ.ನಾ.ಸೋಮೇಶ್ವರ ಸಹ “ನೆಪೋಲಿ ಯನ್‌ನನ್ನು ಸೋಲಿಸಿದ ಹೇನು!" ಎಂಬ ಶೀರ್ಷಿಕೆಯ ಲೇಖನವನ್ನು ‘ಹಿಂದಿರುಗಿ ನೋಡಿದಾಗ’ ಅಂಕಣದಲ್ಲಿ ಮೂರು ವರ್ಷಗಳ ಹಿಂದೆ ಬರೆದಿದ್ದಾರೆ.
ಲಕ್ಷಾಂತರ ವರ್ಷಗಳ ಹಿಂದಿನಿಂದಲೇ, ಮನುಷ್ಯ ಹುಟ್ಟುವುದಕ್ಕಿಂತ ಮೊದಲೇ ಈ ಭೂಮಿಯಲ್ಲಿ ಹೇನುಗಳು ಬೆಳೆದುಕೊಂಡು ಬಂದಿರುವುದು, ತಲೆಹೇನು ಒಡಲಹೇನು, ಜನನಾಂಗ ಹೇನು ಎಂದು ಪ್ರಭೇದಗಳು, ಸಾವಿರಾರು ವರ್ಷಗಳ ಹಿಂದೆಯೂ ಮನುಷ್ಯನ ತಲೆಯಲ್ಲಿ ಹೇನುಗಳಿರುತ್ತಿದ್ದುವು ಮತ್ತು ಅವುಗಳನ್ನು ತೆಗೆಯಲಿಕ್ಕಾಗುವ ಬಾಚಣಿಗೆಗಳ ಬಳಕೆ ಇತ್ತು ಎಂದು ಈಜಿಪ್ಟ್, ಇಸ್ರೇಲ್, ಬ್ರೆಝಿಲ್ ಮುಂತಾದ ದೇಶಗಳಲ್ಲಿ ಉತ್ಖನನದಿಂದ ತಿಳಿದುಬಂದಿರುವುದು, ಅಪ್ರತಿಮ ಸುಂದರಿ ರಾಣಿ ಕ್ಲಿಯೋಪಾತ್ರಳ ತಲೆಗೂದಲಲ್ಲೂ ಹೇನುಗಳಿದ್ದವು, ಪ್ರಾಚೀನ ಈಜಿಪ್ಟ್ ಸಂಸ್ಕೃತಿಯಲ್ಲಿ ಬಾಯಿತುಂಬ ಖರ್ಜೂರವನ್ನು ಜಗಿದು ಅದಕ್ಕೆ ಒಂದಷ್ಟು ನೀರನ್ನು ಸೇರಿಸಿ ಹೇನುಗಳಿದ್ದವರ ತಲೆಮೇಲೆ ಉಗಿಯುವ ಕ್ರಮ, ಪ್ರಾಚೀನ ಚೀನಾ ದೇಶದಲ್ಲಿ ಹೇನುಗಳನ್ನು ನಿವಾರಿಸಲು ಪಾದರಸ ಮತ್ತು ಶಂಖಪಾಷಾಣದ ಲವಣಗಳ ಬಳಕೆ, ಪೈರೆಥ್ರಮ್ ಎಂಬ ರಾಸಾಯನಿಕ ಪುಡಿ ಬಳಸಿ ಹೇನುಗಳ ನಿಯಂತ್ರಣ, ಮಾರ್ಕೊಪೋಲೊ ಅದೇ ಪುಡಿಯನ್ನು ಚೀನಾದಿಂದ ತಂದು ಯುರೋಪಿ ಯನ್ನರಿಗೆ ಪರಿಚಯಿಸಿದ್ದು, ಜನನಾಂಗ ಹೇನುಗಳು ಯುರೋಪಿಯನ್ನರಿಂದ ಭಾರತೀಯರಿಗೆ ಹರಡುವಂತಾದದ್ದು (ವಸುಧೇಂದ್ರರ ‘ತೇಜೋತುಂಗಭದ್ರ’ ಕಾದಂಬರಿಯಲ್ಲೂ ಇದರ ಪ್ರಸಂಗ ಇರುವುದು), ಒಡಲ ಹೇನುಗಳಿಂದ ಬರುವ ಟೈಫಸ್ ರೋಗ, ನೆಪೋಲಿಯನ್ ರಷ್ಯದ ಮೇಲೆ ಯುದ್ಧಕ್ಕೆ ಹೊರಟಾಗ ಟೈಫಸ್ನಿಂದಾಗಿ ಹಲವಾರು ಸೈನಿಕರ ಸಾವು, ಎರಡನೆಯ ಪ್ರಪಂಚ ಯುದ್ಧದಲ್ಲಿ ಬ್ರಿಟಿಷ್ ಮತ್ತು ಜರ್ಮನ್ ಸೈನಿಕರಲ್ಲನೇಕರು ಟೈಫಸ್‌ಗೆ ತುತ್ತಾದದ್ದು, ವಿಜ್ಞಾನಿಗಳು ಸೈನಿಕರ ಬರಿಮೈಮೇಲೆ ಡಿಡಿಟಿ ಸಿಂಪಡಿಸಿ ಹೇನುಗಳನ್ನು ಕೊಂದದ್ದು... ಇತ್ಯಾದಿ ಕುತೂಹಲಕಾರಿ ಅಂಶಗಳು ಆ ಅಂಕಣ ಬರಹದಲ್ಲಿವೆ.
‘ಪ್ರಜಾವಾಣಿ’ಯಲ್ಲಿ ವಿಜ್ಞಾನ ವಿಶೇಷ ಅಂಕಣ ಬರೆಯುವ ನಾಗೇಶ ಹೆಗಡೆ, ಅಂಕಣಬರಹಗಳ ತಮ್ಮದೊಂದು ಪುಸ್ತಕಕ್ಕೆ ‘ನ್ಯಾನೊ ಹೇನು’ ಎಂದೇ ಹೆಸರಿಟ್ಟಿರುವುದನ್ನು ಕೂಡ ಇಲ್ಲಿ ಸ್ಮರಿಸ ಬಹುದು. ಹಾಗೆಯೇ ಅಂಕಣಬರಹವೆಂದಾಗ ಇದನ್ನೂ ನೆನಪಿಸಿಕೊಳ್ಳಲೇಬೇಕು. 15 ವರ್ಷಗಳ ಹಿಂದೆ ‘ವಿಜಯ ಕರ್ನಾಟಕ’ ಪತ್ರಿಕೆಯ ‘ಪರಾಗಸ್ಪರ್ಶ’ ಅಂಕಣದಲ್ಲಿ ನಾನೂ ಒಂದು ಹೇನು ಪುರಾಣ ಬರೆದಿದ್ದೆ.
“ಹೇನು ಹೆಕ್ಕೋ ಹೆಂಗಸಿಗೆ ಡಿಮಾಂಡಪ್ಪೊ ಡಿಮಾಂಡು" ಎಂದು ಶೀರ್ಷಿಕೆ. ನಿಜವಾಗಿ ಅದು ಪುರಾಣವಲ್ಲ, ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ಹೇನುಗಾರಿಕೆ ಉದ್ಯಮ ನಡೆಸಿದ ಕೆರೆನ್ ಫ್ರಾಂಕೊ ಎಂಬ ಮಹಿಳೆಯ ಜೀವನಗಾಥೆ. “ಆರ್ಟ್ ಟೀಚರ್ ವೃತ್ತಿಯಲ್ಲಿದ್ದ ಕೆರೆನ್ ತನ್ನ ಮಗಳ ಶಾಲೆಯಲ್ಲಿ ಹುಡುಗಿಯರಿಗೆ ಹೇನಿನ ಕಾಟ ವಿಪರೀತವಾದಾಗ ಶಾಲೆಯಿಂದ ಅನುಮತಿ ಪಡೆದು ಅವರೆಲ್ಲರ ತಲೆಯ ಹೇನು ನಾಶದ ದೀಕ್ಷೆ ತೊಟ್ಟಳು.
ಅದರಲ್ಲಿ ಯಶಸ್ವಿಯಾಗಿ ನೆರೆಕೆರೆಯಲ್ಲೆಲ್ಲ ಪ್ರಸಿದ್ಧಳಾದಳು. ಹೇನು ನಿವಾರಣೆಗೆಂದು ಕೆರೆನ್‌ಗೆ ತಲೆ ಒಪ್ಪಿಸುವವರ ಸಂಖ್ಯೆ ಹೆಚ್ಚಾದಾಗ ‘ತಲಾ’ 18 ಡಾಲರ್ (ಯಹೂದ್ಯ ಸಂಪ್ರದಾಯದ ಕೆರೆನ್‌ಗೆ ಪವಿತ್ರಸಂಖ್ಯೆ) ಶುಲ್ಕ ವಸೂಲಿ ಮಾಡತೊಡಗಿದಳು. ಜಮೆಯಾದ ಹಣವನ್ನು ದತ್ತಿನಿಧಿಗೆ ದಾನ ಮಾಡಿದಳು. ‘ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಯು ಆಕೆಯ ಬಗ್ಗೆ ಒಂದು ನುಡಿಚಿತ್ರ ಪ್ರಕಟಿಸಿತು.
ಅವಳಿಗೆ ದೂರವಾಣಿ ಕರೆಗಳು ಇ-ಮೇಲ್‌ಗಳು ಪ್ರವಾಹದೋಪಾದಿ ಬರತೊಡಗಿದವು. ಒಂದೆರಡು ತಿಂಗಳಿಗೆಲ್ಲ ಕೆರೆನ್ ತನ್ನ ಆರ್ಟ್ ಟೀಚಿಂಗ್ ವೃತ್ತಿಯನ್ನು ಬಿಟ್ಟು ಪೂರ್ಣಾವಧಿ ಹೇನುಗಾರಿಕೆ ಆರಂಭಿಸಿದಳು. Lice and Advices ಎಂಬ ಕಂಪನಿ ಸ್ಥಾಪಿಸಿದಳು. ಪುಟ್ಟ ದೊಂದು ಆಫೀಸ್-ಕಮ್-ಕ್ಲಿನಿಕ್ ತೆರೆದಳು. ಸೆಕ್ರೆಟರಿ ಕೆಲಸಕ್ಕೆ ಅವಳ ಗಂಡನೇ ಮುಂದಾ ದನು. ಗಂಟೆಗೆ 85 ಡಾಲರ್ ಶುಲ್ಕ. ಮನೆಗೆ ಬಂದು ಸೇವೆ ಒದಗಿಸುವುದಾದರೆ ಗಂಟೆಗೆ 100 ಡಾಲರ್ ಮತ್ತು ಪ್ರಯಾಣವೆಚ್ಚ ಪ್ರತ್ಯೇಕ.
ಪೀಕ್ ಸೀಸನ್‌ನಲ್ಲಿ ದಿನಕ್ಕೆ ಐದರಿಂದ ಆರು ಸೆಷನ್‌ಗಳು. ಸೆಪ್ಟೆಂಬರ್-ಅಕ್ಟೋಬರ್ ತಿಂಗಳುಗಳಲ್ಲಿ ಹೆಚ್ಚು ಡಿಮಾಂಡು. ಆಗಷ್ಟೇ ಬೇಸಿಗೆ ರಜೆ ಮುಗಿದು ಹೊಸ ಶೈಕ್ಷಣಿಕ ವರ್ಷ ಆರಂಭವಾಗಿರುತ್ತದೆ. ರಜೆಯಲ್ಲಿ ಸಮ್ಮರ್ ಕ್ಯಾಂಪ್, ನೆಂಟರಮನೆ ಅಲ್ಲಿ ಇಲ್ಲಿ ಹೋಗಿ ಬಂದ ಮಕ್ಕಳ ತಲೆ ಹೇನುಗಳಿಗೆ ಅಭಯಾರಣ್ಯ ಆಗಿರುತ್ತದೆ; ಅದರಿಂದ ಮುಕ್ತಿಹೊಂದಲು ಹೆತ್ತವರು ಕೆರೆನ್ ಬಳಿ ಹೋಗುತ್ತಾರೆ.
ಕೆರೆನ್‌ಳ ಯಶಸ್ಸಿನಿಂದ ಪ್ರೇರಿತರಾಗಿ ಈಗ ಅಮೆರಿಕದ ಬೇರೆ ನಗರಗಳಲ್ಲೂ ಹೇನುಗಾರಿಕೆ ಆರಂಭಿಸಿ ದವರಿದ್ದಾರೆ. Hairy fairies ಎಂಬ ಕಂಪನಿಯು ಪ್ರಮುಖ ನಗರಗಳಲ್ಲಿ ಶಾಖೆಗಳನ್ನೂ ಹೊಂದಿದೆ..." ಹೀಗೆ ಸಾಗಿತ್ತು ಆ ಹೇನುಪುರಾಣ, ಅಲ್ಲ, ಹೇನುವರ್ತಮಾನ.
“ಹೇನು ಪದವೊಂದೇ ಸಾಕು, ಹಲವರಿಗೆ ಕೈಜಗ್ಗಿ ಹಿಡಿದೆಳೆದು ನೆನಪಿನಂಗಳಕ್ಕೆ ಒಯ್ದ ಅನುಭವ ವಾದೀತು. ಬಾಲ್ಯ ನೆನಪಾಗಿ ದುಃಖಮಿಶ್ರಿತ ಆನಂದದ ಕಣ್ಣೀರು ಹರಿದೀತು. ಫ್ರಾಕ್ ತೊಡುತ್ತಿದ್ದ ವಯಸ್ಸಿನಲ್ಲಿ ಪಕ್ಕಾ ಹೇನುಬುರುಕಿಯೊಬ್ಬಳು ಗೆಳತಿಯಾಗಿದ್ದದ್ದು, ಅವಳ ಮನೆಗೆ ಸ್ಲೀಪ್‌ಓವರ್‌ಗೆ ಹೋಗಿ ಹೇನು ಗಳನ್ನು ರಖಂ ಆಗಿ ಆಮದುಮಾಡಿಕೊಂಡಿದ್ದು ನೆನಪಾದೀತು.
ಕೆಲವರಿಗೆ ಅಮ್ಮನ ನೆನಪು ಒತ್ತರಿಸಿ ಬರಬಹುದು. ಕೂದಲು ಬಾಚುವಾಗ ‘ಸ್ಸ್...’ ಎಂದು ಬಾಯಿಂದ ಶಬ್ದಹೊರಡಿಸಿ ಹೇನು ಗಳಿಗೆ ಪಂಥಾಹ್ವಾನ ನೀಡಿ ಅವುಗಳನ್ನು ಹೊರಬರುವಂತೆ ಮಾಡುತ್ತಿದ್ದ ಅಮ್ಮ, ಬಾಚಣಿಗೆಯನ್ನು ನೆಲಕ್ಕೆ ಕೊಡವಿ ಉದುರಿದ ಹೇನುಗಳನ್ನು, ಮೊಟ್ಟೆಗಳನ್ನು ಉಗುರು ಗಳಿಂದ ‘ಚಟ್ ಚಟ್’ ಎಂದು ಸಶಬ್ದವಾಗಿ ಸಂಹರಿಸುತ್ತಿದ್ದ ಅಕ್ಕ, ತುಳಸಿ ದಳದ ರಸವನ್ನು ಎಣ್ಣೆಯಲ್ಲಿ ಕಾಯಿಸಿ ತಲೆಗೆ ಹಚ್ಚಿಕೊಳ್ಳುವುದೇ ಮೊದಲಾದ ಮನೆಮದ್ದುಗಳನ್ನು ಉಪದೇಶಿಸು ತ್ತಿದ್ದ ಅಜ್ಜಿ ನೆನಪಾಗಬಹುದು.
ಶಾಲೆಯಲ್ಲಿ ಒಬ್ಬಿಬ್ಬರು ಹೇನುಬುರುಕಿ ಸಹಪಾಠಿಗಳಿದ್ದದ್ದು, ‘ಜೇನು ಬೇಕೇ ಜೇನು?’ ಕನ್ನಡ ಪಾಠದ ಶೀರ್ಷಿಕೆಯನ್ನು ಮಾಸ್ತರರು ಬೇಕಂತಲೇ ‘ಹೇನು ಬೇಕೇ ಹೇನು?’ ಎಂದು ಓದಿ ತಮಾಷೆ ಮಾಡಿದ್ದು. ನೆನಪುಗಳದು ಅದ್ಭುತಶಕ್ತಿ. ಅವುಗಳ ನಾಗಾಲೋಟಕ್ಕೆ ಕುದುರೆಗಳೇ ಬೇಕಂತಿಲ್ಲ. ಹೇನುಗಳ ಸಾರೋಟಿನಲ್ಲೂ ಅವು ಮೆರವಣಿಗೆ ಹೊರಡಬಲ್ಲವು. ನೀವು ಹೇನಂತೀರಿ?" ಎಂದು ಆ ಅಂಕಣಬರಹದ ಮುಕ್ತಾಯ. ಆದರೆ ಅಂಕಣಬರಹಗಳನ್ನು ಶುದ್ಧ-ಶಿಷ್ಟ ಸಾಹಿತ್ಯ ಎಂದು ಕೆಲವರು ಒಪ್ಪುವುದಿಲ್ಲ. ಆದ್ದರಿಂದ ಬೇರೆ ಉದಾಹರಣೆಗಳಿವೆಯೇ ಹುಡುಕೋಣ.
ಪಂಜೆ ಮಂಗೇಶರಾಯರು ಮಕ್ಕಳಿಗೆಂದು ಬರೆದ ಕಥೆಗಳಲ್ಲಿ ‘ಹೇನು ಸತ್ತು ಕಾಗೆ ಬಡವಾಯಿತು’ ಅಂತೊಂದು ಕಥೆ. ಮಠದ ಗೋಡೆಯಲ್ಲಿ ವಾಸವಾಗಿದ್ದ ಹೇನಿಗೂ ಅರಳಿಮರದ ಮೇಲೆ ವಾಸ ವಾಗಿದ್ದ ಕಾಗೆಗೂ ಸ್ನೇಹ. ಹಬ್ಬದೂಟಕ್ಕೆ ಹೇನಿನಿಂದ ಕಾಗೆಗೆ ಆಹ್ವಾನ. ಪಾಯಸ ತಯಾರಿಸು ತ್ತಿದ್ದಾಗ ಅಕಸ್ಮಾತ್ತಾಗಿ ಅದರೊಳಗೆ ಬಿದ್ದು ಹೇನಿನ ಅಪಮೃತ್ಯು. ಕಾಗೆಗೆ ಬೇಸರ. ಮುಂದೆ ಅರಳಿ ಮರಕ್ಕೆ, ಬಸವನಿಗೆ, ಕೆರೆಗೆ, ಮುದುಕಿಗೆ, ಮುದುಕನಿಗೆ, ಮಗುವಿಗೂ ಬೇಸರ.
“ಹೇನು ಸತ್ತು ಕಾಗೆ ಬಡವಾಯಿತು; ಅರಳಿ ಎಲೆ ಉದುರಿಹೋಯಿತು; ಬಸವನ ಕೊಂಬು ಮುರಿದು ಹೋಯಿತು; ಕೆರೆಯ ನೀರು ಬತ್ತಿಹೋಯಿತು; ಮುದುಕಿಯ ಸೊಂಟ ಬಗ್ಗಿ ಹೋಯಿತು; ಮುದುಕನ ತಲೆ ನರೆತುಹೋಯಿತು; ಮಗುವಿನ ಮಾತು ಉಗ್ಗಿಹೋಯಿತು; ಸೂರ್ಯನ ಬಿಂಬ ಕಂತಿಹೋಯಿತು" ಎಂದು ಸರಣಿಘಟನೆಗಳು. ಮಾರನೆಯ ದಿನ ಸೂರ್ಯೋದಯವಾದಾಗ ಆಶ್ಚರ್ಯ! “ಮಗುವಿನ ಮಾತು ಸರಿಯಾಯಿತು; ಮುದುಕನ ಕೂದಲು ಕಪ್ಪಗಾಯಿತು; ಮುದು ಕಿಯ ಸೊಂಟ ನೆಟ್ಟಗಾಯಿತು; ಕೆರೆಯ ನೀರು ಉಕ್ಕಿಬಂದಿತು; ಬಸವನ ಕೊಂಬು ಉದ್ದವಾಯಿತು; ಅರಳಿ ಎಲೆ ಚಿಗುರಿತು; ಕಾಗೆಯ ಮೈ ತುಂಬಿಕೊಂಡಿತು; ಹೇನಿಗೆ ತಿರುಗಿ ಜೀವ ಬಂತು; ಆಮೇಲೆ ಎಲ್ಲರೂ ಸುಖದಲ್ಲಿ ಇದ್ದರು" ಘಟನಾವಳಿಯ ಅವರೋಹಣ.
ನನಗಿದರಲ್ಲಿ ತುಂಬ ಆಶ್ಚರ್ಯ ಎನಿಸುವುದು ಕಥೆಯ ಆರಂಭದಲ್ಲಿ “ಹೇನು ಕಾಗೆಯನ್ನು ಊಟಕ್ಕೆ ಕರೆಯಿತು. ಬೆಳಗ್ಗೆ ಎದ್ದು, ಸೆಗಣಿ ಬಳಿದು, ಮುಸುರೆ ತೊಳೆದು, ಸ್ನಾನ ಮಾಡಿತು; ಒಲೆಯಲ್ಲಿ ಬೆಂಕಿ ಹೊತ್ತಿಸಿ, ನೀರು ಮೊಗೆದು ಅಡುಗೆ ಮಾಡಿತು.
ಪಾಯಸಕ್ಕೆ ಪಾತ್ರೆಯನ್ನು ಒಲೆಯಮೇಲೆ ಇಟ್ಟು ಪಾತ್ರೆಯಲ್ಲಿ ಬೆಲ್ಲ ಹಾಕಿತು..." ಎಂಬ ವಿವರಣೆಯ ಬಳಿಕ “ಪಾಯಸವನ್ನು ಸಟ್ಟುಗದಿಂದ ಕೆದಕುವಾಗ ಆ ಹೇನು ಪಾಯಸದಲ್ಲಿ ಜಾರಿ ಬಿದ್ದು ಸತ್ತುಹೋಯಿತು" ಎಂಬ ಭಾಗ!
ಅಷ್ಟೆಲ್ಲ ಕೆಲಸಗಳನ್ನು ಮನುಷ್ಯರಂತೆ ನೀಟಾಗಿ ಮಾಡಿದ್ದ ಹೇನು ಪಾಯಸ ಕೆದಕುವಾಗ ಸತ್ತು ಹೋಗುವುದೆಂದರೇನು? ಯಾರೋ ಅಡುಗೆಭಟ್ಟನು ಸಟ್ಟುಗದಿಂದ ಪಾಯಸ ಕೆದಕುತ್ತಿದ್ದಾಗ ಆತನ ತಲೆಯಲ್ಲಿದ್ದ ಹೇನು ಪಾಯಸದಲ್ಲಿ ಬಿದ್ದು ಸತ್ತುಹೋಯಿತು ಅಂತಿದ್ದರೆ ಒಪ್ಪಬಹುದಪ್ಪಾ. ಇದು ಹಾಗಲ್ಲ ಸಟ್ಟುಗದಿಂದ ಪಾಯಸವನ್ನು ಕೆದಕುತ್ತಿದ್ದದ್ದು ಸ್ವತಃ ಹೇನೇ. ಹಾಗಿದ್ದರೆ ಅದು ಸಟ್ಟುಗವನ್ನೇ ಪೋಲ್‌ವಾಲ್ಟ್‌ನ ಪೋಲನ್ನಾಗಿ ಮಾಡಿಕೊಂಡು ಪಾಯಸದಲ್ಲಿ ಬೆಂದಿತೇ ಎಂದು ಬಗ್ಗಿನೋಡುವಾಗ ಸಟ್ಟುಗದ ತುದಿಯಿಂದ ಬಿದ್ದು ಸತ್ತಿರಬಹುದೇ? ಇರಲಿ, ಕಥೆಯ ಕೊನೆಗೆ ಪುನರ್ಜನ್ಮ ಪಡೆಯಿತಲ್ಲ ಅದೇ ಸಮಾಧಾನ.
ಸರ್ವಜ್ಞನ ವಚನಗಳಲ್ಲೂ ಹೇನು ಕಾಣಿಸಿದೆ: “ಜಡೆಯ ಕಟ್ಟದ ಮುನ್ನ ಒಡನೆ ಬಂದುದು ಮಾರಿ| ಗುಡುಗುಡಿಸಿ ಹೇನು ಹರಿಯಲು ಬೋಳಯ್ಯ| ಕಡು ನಗುವನಯ್ಯ ಸರ್ವಜ್ಞ||" ಅಂತ ಬೋಳು ತಲೆಯವರ ಭಾಗ್ಯ. “ಹೇನು ಕೂರೆಗಳನ್ನು ತಾನಾಗಿ ಜಿನ ಕೊಲ್ಲ| ಸ್ಥಾನ ಪಲ್ಲಟವ ಮಾಡದಡೆ ಆ ಮೇಲೆ| ಏನಾದುದರಿಯ ಸರ್ವಜ್ಞ||" ಅಂತ ಇನ್ನೊಂದು, ವಿಧಿಲೀಲೆಯ ಬಗ್ಗೆ.
ಫೇಸ್‌ಬುಕ್‌ನಲ್ಲಿ ಸಿಕ್ಕಿದ, ರವಿ ಕೋಡಮಗ್ಗಿ ಎಂಬುವರ ಒಂದು ಚೌಪದಿಯೂ ಉಲ್ಲೇಖಾರ್ಹವೇ. “ತಿಳಿನೀಲಿ ಬಾನ ತಾರೆಯಂತೆ ನೀನು| ಬಿಳಿಹಾಳೆ ಮೇಲೊಂದ ಕವಿತೆ ಗೀಚಲೇನು? ರಂಗು ಬಳಿದ ತುಟಿಯಲಿ ಸಿಹಿಯಾದ ಜೇನು| ಹೊಟ್ಟಿಲ್ಲದ ತಲೆಯಲಿ ತುಂಬಿತ್ತು ಹೇನು!" ಇಂಗ್ಲಿಷ್‌ನಲ್ಲೂ Lice Poetry ಸಮೃದ್ಧ ಬೆಳೆ ಇದೆ. ರಾಬರ್ಟ್ ಬರ್ನ್ಸ್ ಎಂಬ ಸ್ಕಾಟಿಷ್ ಕವಿಯ To A Louse, On Seeing One on a Lady's Bonnet at Church ಪ್ರಖ್ಯಾತ ಕವಿತೆ. ಡಬ್ಲ್ಯು.ಎಸ್ ಮರ್ವಿನ್‌ನ The Lice, ಆರ್ಥರ್ ರಿಂಬೌಡ್‌ನ The Seakers of Lice , ಐಸಾಕ್ ರೋಸೆನ್‌ಬರ್ಗ್‌ನ Louse Hunting ಕೂಡ. ಒಟ್ಟಾರೆಯಾಗಿ ಕೊಳೆಬುರುಕತನ, ಸಮರಕ್ಷೋಭೆ ಇತ್ಯಾದಿಗಳ ಅಭಿವ್ಯಕ್ತಿಗೆ ಹೇನುಗಳನ್ನು ರೂಪಕವಾಗಿಸಿವೆ ಈ ಕವಿತೆಗಳು.
ಆದರೆ ಶೃಂಗಾರರಸದ ಉತ್ಕಟತೆಗೂ ಹೇನನ್ನು ಬಳಸಬಹುದೇ? ಅದು ನಮ್ಮ ಸಂಸ್ಕೃತ ಕವಿಗಳಿ ಗಷ್ಟೇ ಸಾಧ್ಯ! ಇಲ್ಲಿದೆ ನೋಡಿ ಅನಾಮಧೇಯ ಕವಿಯೊಬ್ಬನ ರಚನೆ, ಸುಭಾಷಿತ ರತ್ನಕೋಶದಿಂದ: “ಸ ಖಲು ಸುಕೃತಿಭಾಜಾಮಗ್ರಣೀಃ ಸೋಧಿತಿಧನ್ಯೋ| ವಿನಿಹಿತಕುಚಕುಂಭಾ ಪೃಷ್ಠತೋ ಯನ್ಮೃ ಗಾಕ್ಷೀ|ಬಹಲತರ ನಖಾಗ್ರಕ್ಷೋದ ವಿನ್ಯಸ್ತಮಾರ್ಗೇ| ಶಿರಸಿ ಟಸಿತಿ ಲಿಕ್ಷಾಂ ಹಂತಿ ಹೂಂಕಾರ ಗರ್ಭಮ್||" ಇದರ ಭಾವಾರ್ಥ: ಅವನು ನಿಜಕ್ಕೂ ಪುಣ್ಯಕಾರ್ಯ ಮಾಡಿದವರಲ್ಲಿ ಶ್ರೇಷ್ಠನು, ಅತ್ಯಂತ ಭಾಗ್ಯವಂತನು.
ಜಿಂಕೆಕಣ್ಣುಗಳ ಪ್ರೇಯಸಿಯು ಕುಂಭಗಳಂತೆ ತುಂಬಿ ಗಟ್ಟಿಯಾದ ಸ್ತನಗಳನ್ನು ಅವನ ಬೆನ್ನಿಗೆ ಒತ್ತಿಕೊಂಡು, ಉಗುರುಗಳ ತುದಿಗಳಿಂದ ಅವನ ತಲೆಯ ಕೂದಲಿನಲ್ಲಿ ಹಲವಾರು ದಾರಿಗಳನ್ನು ಬಿಡಿಸುತ್ತಿದ್ದಾಳೆ. ಬಳಿಕ ಹೇನಿನ ಮೊಟ್ಟೆಯನ್ನು ‘ತ್ಸ್’ ಎಂದು ಶಬ್ದಮಾಡುತ್ತಾ ತೆಗೆದು ಹಾಕಿ, ಉನ್ಮಾದದಿಂದ ‘ಹೂಂ’ ಎನ್ನುತ್ತಿದ್ದಾಳೆ. ಆ ಕ್ಷಣವು ಅವನಿಗೆ ಅಪಾರ ಆನಂದವನ್ನು ನೀಡುತ್ತದೆ.
ಆಮೇಲೆ ಕದಾಚಿತ್ ಆ ಪ್ರೇಯಸಿಯು ದೂರವಿದ್ದಾಗ ಈ ಪ್ರಿಯಕರನಿಗೆ “ದಿನರಾತ್ರಿಯಲಿ ಏಕಾಂತದಲಿ ಏಕೋ ಹೇನೋ ನೋವಾ ಗುವುದು" ಸಹಜವೇ ತಾನೆ?