Surendra Pai Column: ಎಲ್ಲೋ ಕುಳಿತು ಭಾರತದ ಬಗ್ಗೆ ಸುಳ್ಳು ಇತಿಹಾಸ ಬರೆದವರು !
ಇಂತಹ ಅರೆಬರೆ ಮಾಹಿತಿಯ ಆ ವಿಡಿಯೋ ಲಕ್ಷಾಂತರ ಜನರಿಗೆ ತಲುಪಿ, ಅದೇ ಅಂತಿಮ ಸತ್ಯವೆಂಬಂತೆ ಬಿಂಬಿತವಾಗುತ್ತದೆ. ಇಂದು ಇಂಟರ್ನೆಟ್ ಯುಗದಲ್ಲಿ ನಡೆಯುತ್ತಿರುವ ಈ ‘ಅರೆಬರೆ ವಿಮರ್ಶೆಯ’ ಆಟ, ಅದೆಷ್ಟೋ ಶತಮಾನಗಳ ಹಿಂದೆ ಜಾಗತಿಕ ಮಟ್ಟದಲ್ಲಿ ಅತ್ಯಂತ ಗಂಭೀರವಾಗಿ ಮತ್ತು ವ್ಯವಸ್ಥಿತವಾಗಿ ನಡೆದಿತ್ತು. ವ್ಯತ್ಯಾಸವಿಷ್ಟೇ, ಅಂದು ಕ್ಯಾಮೆರಾ ಮತ್ತು ಯೂಟ್ಯೂಬ್ ಇರಲಿಲ್ಲ.
-
ಮಿಥ್ಯೇತಿಹಾಸ
ಸುರೇಂದ್ರ ಪೈ, ಭಟ್ಕಳ
ಇಂದಿನ ಡಿಜಿಟಲ್ ಯುಗದಲ್ಲಿ ನಾವು ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಚಿತ್ರ ಪ್ರವೃತ್ತಿ ಯನ್ನು ನಿತ್ಯವೂ ನೋಡುತ್ತಿದ್ದೇವೆ. ಬಹುಶಃ ನಿಮ್ಮ ಗಮನಕ್ಕೂ ಬಂದಿರಬಹುದು. ಬೆಂಗಳೂರಿನ ಟ್ರಾಫಿಕ್ನ ಅಥವಾ ಉತ್ತರ ಕರ್ನಾಟಕದ ಹಳ್ಳಿಯೊಂದಕ್ಕೆ ಕಾಲಿಡದ, ಜನರೊಂದಿಗೆ ಬೆರೆಯದ, ಪರಂಪರೆ ಸಂಸ್ಕೃತಿಯ ಗಂಧಗಾಳಿ ಗೊತ್ತಿರದ, ಸರಳವಾಗಿ ಹೇಳುವುದಾದರೆ ಸ್ವ ಅನುಭವಕ್ಕೆ ಒಳಗಾಗದ ಬೇರೆ ಯಾವುದೋ ರಾಜ್ಯದ, ಅಥವಾ ವಿದೇಶಿ ಯೂಟ್ಯೂಬರ್- ಬ್ಲಾಗರ್, ಯಾರೋ ಹಾಕಿದ ಒಂದೆರಡು ವಿಡಿಯೋ ತುಣುಕುಗಳನ್ನು ನೋಡಿ, ಭಾರತದ ಬೀದಿಗಳು ಹೀಗಿವೆ, ಇಲ್ಲಿನ ಜನರ ಬದುಕೇ ಇಷ್ಟೇ ಎಂದು ಠೇಂಕಾರದಿಂದ ವಿಮರ್ಶೆ ಬರೆದುಬಿಡುತ್ತಾನೆ.
ಇಂತಹ ಅರೆಬರೆ ಮಾಹಿತಿಯ ಆ ವಿಡಿಯೋ ಲಕ್ಷಾಂತರ ಜನರಿಗೆ ತಲುಪಿ, ಅದೇ ಅಂತಿಮ ಸತ್ಯವೆಂಬಂತೆ ಬಿಂಬಿತವಾಗುತ್ತದೆ. ಇಂದು ಇಂಟರ್ನೆಟ್ ಯುಗದಲ್ಲಿ ನಡೆಯುತ್ತಿರುವ ಈ ‘ಅರೆಬರೆ ವಿಮರ್ಶೆಯ’ ಆಟ, ಅದೆಷ್ಟೋ ಶತಮಾನಗಳ ಹಿಂದೆ ಜಾಗತಿಕ ಮಟ್ಟದಲ್ಲಿ ಅತ್ಯಂತ ಗಂಭೀರವಾಗಿ ಮತ್ತು ವ್ಯವಸ್ಥಿತವಾಗಿ ನಡೆದಿತ್ತು. ವ್ಯತ್ಯಾಸವಿಷ್ಟೇ, ಅಂದು ಕ್ಯಾಮೆರಾ ಮತ್ತು ಯೂಟ್ಯೂಬ್ ಇರಲಿಲ್ಲ.
ಬದಲಾಗಿ ಯುರೋಪಿನ ಯಾವುದೋ ಒಂದು ಗ್ರಂಥಾಲಯದ ಆರಾಮಕುರ್ಚಿಗಳಲ್ಲಿ ಕುಳಿತು ಬರೆದ ಬೃಹತ್ ಇತಿಹಾಸ ಗ್ರಂಥಗಳಿದ್ದವು. ತಮ್ಮ ಜೀವಿತಾವಽಯಲ್ಲಿ ಒಮ್ಮೆಯೂ ಭಾರತದ ನೆಲಕ್ಕೆ ಕಾಲಿಡದ, ಇಲ್ಲಿನ ಭಾಷೆ-ಸಂಸ್ಕೃತಿಯನ್ನು ಕಣ್ಣಾರೆ ಕಾಣದ ಪಾಶ್ಚಾತ್ಯ ಲೇಖಕರು, ಕೇವಲ ವ್ಯಾಪಾರಿಗಳ ಊಹಾಪೋಹಗಳು ಮತ್ತು ವಸಾಹತುಶಾಹಿ ವರದಿಗಳನ್ನೇ ಆಧರಿಸಿ ಭಾರತದ ಚರಿತ್ರೆಯನ್ನು ಬರೆದರು.
ಇದನ್ನೂ ಓದಿ: Surendra Pai Column: ಅಕ್ಷರ ಕಲಿಸುವ ಕೈಯಲ್ಲಿ ಸ್ವಿಗ್ಗಿ ಡೆಲಿವರಿ ಬ್ಯಾಗ್ !
ಕಣ್ಣಿಗೆ ಕಾಣದ ಸತ್ಯವನ್ನು ಮರೆಮಾಚಿ, ತಮ್ಮ ಕಲ್ಪನೆಯ ಸುಳ್ಳುಗಳನ್ನೇ ‘ಅಧಿಕೃತ ಇತಿಹಾಸ’ ವೆಂದು ಜಗತ್ತಿಗೆ ನಂಬಿಸಿದ ಆ ‘ಆರಾಮಕುರ್ಚಿ ಇತಿಹಾಸಕಾರರ’ ಅಸಲಿಯತ್ತು ಇಂದಿಗೂ ನಾವು ನಂಬುತ್ತಿದ್ದೇವೆ. ತಿರುಚಲ್ಪಟ್ಟ ಅದೇ ಸುಳ್ಳು ಇತಿಹಾಸವನ್ನು ಮುಂದಿನ ಪೀಳಿಗೆಯವರಿಗೆ ದಾಟಿಸುತ್ತಿದ್ದೇವೆ.
ಭಾರತದ ಇತಿಹಾಸವನ್ನು ಅತ್ಯಂತ ವ್ಯವಸ್ಥಿತವಾಗಿ ತಿರುಚಿದವರಲ್ಲಿ ಸ್ಕಾಟಿಷ್ ಇತಿಹಾಸಕಾರ ಜೇಮ್ಸ್ ಮಿಲ್ ಅಗ್ರಗಣ್ಯ. ಈತ ತನ್ನ ಜೀವಿತಾವಧಿಯಲ್ಲಿ ಒಮ್ಮೆಯೂ ಭಾರತಕ್ಕೆ ಭೇಟಿ ನೀಡಿರ ಲಿಲ್ಲ. ಇತನಿಗೆ ಸಂಸ್ಕೃತ, ಪರ್ಷಿಯನ್ ಅಥವಾ ಯಾವುದೇ ಭಾರತೀಯ ಭಾಷೆಗಳ ಜ್ಞಾನವಿರಲಿಲ್ಲ. 1817ರಲ್ಲಿ ಈತ ಬರೆದ ‘The History of British India’ ಕೃತಿಯು ಬ್ರಿಟಿಷ್ ಅಧಿಕಾರಿಗಳಿಗೆ ಪಠ್ಯ ಪುಸ್ತಕವಾಯಿತು.
ಮಿಲ್ ಭಾರತೀಯ ಸಮಾಜವನ್ನು ಅನಾಗರಿಕ, ಮೂಢನಂಬಿಕೆಗಳಿಂದ ಕೂಡಿದ ಮತ್ತು ಸ್ಥಗಿತಗೊಂಡ ಸಮಾಜ ಎಂದು ಚಿತ್ರಿಸಿದನು. ಮಿಲ್ ಭಾರತದ ಇತಿಹಾಸವನ್ನು ವೈಜ್ಞಾನಿಕವಾಗಿ ವಿಭಜಿಸುವ ಬದಲು ಧರ್ಮದ ಆಧಾರದ ಮೇಲೆ ಹಿಂದೂ ಯುಗ, ಮುಸ್ಲಿಂ ಯುಗ ಮತ್ತು ಬ್ರಿಟಿಷ್ ಯುಗ ಎಂದು ವಿಂಗಡಿಸಿದನು.
ಪ್ರಾಚೀನ ಭಾರತದ ಸುವರ್ಣ ಯುಗಗಳನ್ನು ಕಡೆಗಣಿಸಿ, ಭಾರತೀಯರಿಗೆ ಸ್ವಯಂ ಆಡಳಿತ ನಡೆಸುವ ಸಾಮರ್ಥ್ಯವಿಲ್ಲ, ಆದ್ದರಿಂದ ಬ್ರಿಟಿಷರ ಆಳ್ವಿಕೆಯೇ ಅವರಿಗೆ ವರದಾನ ಎಂದು ಪ್ರತಿಪಾದಿಸಿದ. ಸಮಾಜವಾದಿ ಚಿಂತಕ ಕಾರ್ಲ್ ಮಾರ್ಕ್ಸ್ ಕೂಡ ಭಾರತಕ್ಕೆ ಎಂದಿಗೂ ಭೇಟಿ ನೀಡದೆ, ಬ್ರಿಟಿಷ್ ವಸಾಹತುಶಾಹಿ ವರದಿಗಳು ಮತ್ತು ಜೇಮ್ಸ ಮಿಲ್ನಂತಹ ಲೇಖಕರ ಬರಹಗಳನ್ನು ಆಧರಿಸಿ ಭಾರತದ ಬಗ್ಗೆ ತಪ್ಪು ನಿರ್ಧಾರಗಳಿಗೆ ಬಂದನು.
ಮಾರ್ಕ್ಸ್ ಲಂಡನ್ ನ ಬ್ರಿಟಿಷ್ ಮ್ಯೂಸಿಯಂ ಗ್ರಂಥಾಲಯದಲ್ಲಿ ಕುಳಿತು ‘ನ್ಯೂಯಾರ್ಕ್ ಡೈಲಿ ಟ್ರಿಬ್ಯೂನ್’ ಪತ್ರಿಕೆಗಾಗಿ ಭಾರತದ ಕುರಿತು ಲೇಖನಗಳನ್ನು ಬರೆದನು. ಮಾರ್ಕ್ಸ್ ಭಾರತದ ಗ್ರಾಮೀಣ ವ್ಯವಸ್ಥೆಯನ್ನು ‘ಏಷ್ಯಾಟಿಕ್ ಮೋಡ್ ಆಫ್ ಪ್ರೊಡಕ್ಷನ್’ ಎಂದು ಕರೆದನು. ಈತನ ಪ್ರಕಾರ, ಭಾರತದ ಇತಿಹಾಸದಲ್ಲಿ ಯಾವುದೇ ಬದಲಾವಣೆಗಳೇ ಆಗಿಲ್ಲ, ಭಾರತಕ್ಕೆ ನಿಜವಾದ ಇತಿಹಾಸವೇ ಇಲ್ಲ, ಅದು ಕೇವಲ ಆಕ್ರಮಣಕಾರರ ಇತಿಹಾಸವಾಗಿದೆ.
1853ರ ತನ್ನ The British Rule in India ಲೇಖನದಲ್ಲಿ ಭಾರತದ ಪುರಾತನ ಗ್ರಾಮ ಸ್ವರಾಜ್ಯ ವ್ಯವಸ್ಥೆಯನ್ನು ನಾಶಪಡಿಸುತ್ತಿರುವ ಬ್ರಿಟಿಷರ ಕ್ರೌರ್ಯವನ್ನು ಸಾಮಾಜಿಕ ಕ್ರಾಂತಿ ಎಂದು ಕರೆದ. ಭಾರತೀಯರು ಹಾವು ಮತ್ತು ಮಂಗಗಳನ್ನು ಪೂಜಿಸುವವರು ಎಂದು ಹೀಯಾಳಿಸಿ, ಬ್ರಿಟಿಷರ ಆಕ್ರಮಣವು ಭಾರತವನ್ನು ಆಧುನಿಕಗೊಳಿಸಲು ಅನಿವಾರ್ಯವಾಗಿತ್ತು ಎಂಬ ತಪ್ಪು ಕಲ್ಪನೆ ಯನ್ನು ಬಿತ್ತಿದ.
ಜರ್ಮನ್ ತತ್ವಜ್ಞಾನಿ ಹೆಗೆಲ್ ಸಹ ಭಾರತದ ನೆಲವನ್ನು ನೋಡದೆಯೇ ಭಾರತೀಯ ತತ್ವಶಾಸ್ತ್ರ ಮತ್ತು ಇತಿಹಾಸದ ಬಗ್ಗೆ ಪೂರ್ವಾಗ್ರಹಪೀಡಿತ ವ್ಯಾಖ್ಯಾನಗಳನ್ನು ನೀಡಿದವರ ಸಾಲಿನಲ್ಲಿ ಕಾಣಸಿಗುತ್ತಾನೆ. ಈತ ತನ್ನ ‘ಲೆಕ್ಚರ್ಸ್ ಆನ್ ದಿ ಫಿಲಾಸಫಿ ಆಫ್ ಹಿಸ್ಟರಿ’ ಕೃತಿಯಲ್ಲಿ ಭಾರತವನ್ನು ಕನಸು ಕಾಣುವ ಮತ್ತು ಭ್ರಮೆಯಲ್ಲಿ ಬದುಕುವ ನಾಡು ಎಂದು ವರ್ಣಿಸಿದ. ಭಾರತೀಯರಿಗೆ ತರ್ಕಬದ್ಧ ಚಿಂತನೆ, ರಾಜಕೀಯ ಪ್ರe ಮತ್ತು ಐತಿಹಾಸಿಕ ಪ್ರಜ್ಞೆಯೇ ಇಲ್ಲ ಎಂದು ವಾದಿಸಿದ.
ಭಾರತೀಯರ ಆಧ್ಯಾತ್ಮಿಕ ಮತ್ತು ತಾತ್ವಿಕ ಗ್ರಂಥಗಳಾದ ಉಪನಿಷತ್ತುಗಳು ಮತ್ತು ಭಗವದ್ಗೀತೆಯ ಆಳವನ್ನು ಅರಿಯದೆ, ಭಾರತೀಯ ಸಮಾಜವು ಜಾತಿ ವ್ಯವಸ್ಥೆಯಲ್ಲಿ ಸಿಲುಕಿ ನೈತಿಕವಾಗಿ ಅಧಃಪತನಗೊಂಡಿದೆ ಎಂದು ಬರೆದನು. ಯುರೋಪಿಯನ್ ನಾಗರಿಕತೆಯೇ ವಿಶ್ವದ ಅತ್ಯುನ್ನತ ನಾಗರಿಕತೆ ಎಂದು ಬಿಂಬಿಸಲು ಭಾರತವನ್ನು ಕೀಳಾಗಿ ಚಿತ್ರಿಸಿದ.
ಮ್ಯಾಕ್ಸ್ ಮುಲ್ಲರ್ ಸಂಸ್ಕೃತ ಪಂಡಿತರಾಗಿದ್ದರೂ, ಜೀವನದಲ್ಲಿ ಒಮ್ಮೆಯೂ ಭಾರತಕ್ಕೆ ಭೇಟಿ ನೀಡಿರಲಿಲ್ಲ. ಭಾಷಾಶಾಸ್ತ್ರದ ಆಧಾರದ ಮೇಲೆ ಮ್ಯಾಕ್ಸ್ ಮುಲ್ಲರ್ ಮತ್ತು ಇತರ ಪಾಶ್ಚಾತ್ಯ ವಿದ್ವಾಂಸರು ಆರ್ಯನ್ ಆಕ್ರಮಣ ಸಿದ್ಧಾಂತವನ್ನು ಜನಪ್ರಿಯಗೊಳಿಸಿದರು. ಕ್ರಿ.ಪೂ. 1500ರ ಸುಮಾರಿಗೆ ಮಧ್ಯ ಏಷ್ಯಾದಿಂದ ಬಿಳಿಯರಾದ ಆರ್ಯರು ಭಾರತದ ಮೇಲೆ ಆಕ್ರಮಣ ಮಾಡಿ, ಮೂಲನಿವಾಸಿಗಳಾದ ದ್ರಾವಿಡರನ್ನು ದಕ್ಷಿಣಕ್ಕೆ ಓಡಿಸಿದರು ಮತ್ತು ವೇದಗಳನ್ನು ರಚಿಸಿದರು ಎಂಬ ಕಟ್ಟುಕಥೆಯನ್ನು ಕಟ್ಟಿದನು.
ಜನರು ಅದನ್ನೇ ನಿಜ ಎಂದು ನಂಬಿದರು. ಬ್ರಿಟಿಷರು ಭಾರತಕ್ಕೆ ಹೊರಗಿನಿಂದ ಬಂದ ಆಕ್ರಮಣ ಕಾರರಲ್ಲ, ಬದಲಾಗಿ ಹಿಂದೆ ಬಂದ ಆರ್ಯರ ಸಹೋದರರೇ ಆಗಿದ್ದು, ಭಾರತವನ್ನು ಉದ್ಧರಿಸಲು ಮತ್ತೆ ಬಂದಿದ್ದಾರೆ ಎಂಬ ರಾಜಕೀಯ ಸಂದೇಶ ನೀಡುವುದು ಇದರ ಹಿಂದಿನ ಉದ್ದೇಶವಾಗಿತ್ತು. ಪುರಾತತ್ವ ಶಾಸ್ತ್ರ ಮತ್ತು ಇತ್ತೀಚಿನ ಆನುವಂಶಿಕ (ಡಿಎನ್ಎ) ಸಂಶೋಧನೆಗಳು ಈ ಸಿದ್ಧಾಂತವನ್ನು ಸಂಪೂರ್ಣವಾಗಿ ತಳ್ಳಿಹಾಕಿವೆ.
ಇವರ ಸಾಲಿನಲ್ಲಿ ಮಧ್ಯಕಾಲೀನ ಯುರೋಪಿಯನ್ ಲೇಖಕರ ಕಾಲ್ಪನಿಕ ಕಥೆಗಳು ಸೇರಿಕೊಂಡಿವೆ. ಸರ್ ಜಾನ್ ಮ್ಯಾಂಡೆವಿ ಭಾರತಕ್ಕೆ ಬರದೆಯೇ ತನ್ನ ‘ದಿ ಟ್ರಾವೆಲ್ಸ್ ಆಫ್ ಸರ್ ಜಾನ್ ಮ್ಯಾಂಡೆವಿ’ (14ನೇ ಶತಮಾನ) ಕೃತಿಯಲ್ಲಿ ಭಾರತದಲ್ಲಿ ಒಂದೇ ಕಾಲಿನ ಮನುಷ್ಯರಿದ್ದಾರೆ (Sciapods), ನಾಯಿ ಮುಖದ ಮನುಷ್ಯ (Cynocephali) ರಿದ್ದಾರೆ ಮತ್ತು ಚಿನ್ನ ಅಗೆಯುವ ದೈತ್ಯ ಇರುವೆಗಳಿವೆ ಎಂದು ಬರೆದ.
ಯುರೋಪಿನಲ್ಲಿ ಈ ಪುಸ್ತಕ ಅತ್ಯಂತ ಜನಪ್ರಿಯವಾಗಿ ಭಾರತದ ಬಗ್ಗೆ ಮೂಢನಂಬಿಕೆಗಳನ್ನು ಹರಡಿತು. ಕುತೂಹಲಕಾರಿ ಸಂಗತಿಯೆಂದರೆ ಇತಿಹಾಸಕಾರರ ಪ್ರಕಾರ ಸರ್ ಜಾನ್ ಮ್ಯಾಂಡೆವಿ ಎಂಬ ಹೆಸರಿನ ವ್ಯಕ್ತಿಯೇ ನಿಜವಾಗಿ ಇರಲಿಲ್ಲ. ಅದು ಒಬ್ಬ ಅಜ್ಞಾತ ಯುರೋಪಿಯನ್ ಲೇಖಕ ಬಳಸಿದ ಕಾವ್ಯನಾಮ (Pseudonym).
ಬೇರೆ ಬೇರೆ ಪ್ರವಾಸಿಗರ ಕಥೆಗಳನ್ನು ಕದ್ದು, ಅದಕ್ಕೆ ಕಲ್ಪನೆ ಸೇರಿಸಿ ಬರೆದ ಕಾಲ್ಪನಿಕ ಕೃತಿ ಅದಾಗಿತ್ತು. ರೋಮನ್ ಲೇಖಕ ಪ್ಲಿನಿ ದಿ ಎಲ್ಡರ್ ಕೂಡ ಭಾರತಕ್ಕೆ ಕಾಲಿಟ್ಟಿಲ್ಲ. ಆದರೂ ತನ್ನ ‘ನ್ಯಾಚುರಲಿಸ್ ಹಿಸ್ಟೋರಿಯಾ’ (ಕ್ರಿ.ಶ. 1ನೇ ಶತಮಾನ) ಪುಸ್ತಕದಲ್ಲಿ ಭಾರತದ ಸಂಪತ್ತು, ವ್ಯಾಪಾರ ಮತ್ತು ಅಲ್ಲಿನ ಜನರ ಬಗ್ಗೆ ಹಲವಾರು ಉತ್ಪ್ರೇಕ್ಷಿತ ಮತ್ತು ಕಪೋಲಕಲ್ಪಿತ ಸಂಗತಿಗಳನ್ನು ದಾಖಲಿಸಿದ.
ಪಾಶ್ಚಾತ್ಯ ಇತಿಹಾಸಕಾರರು ಭಾರತದ ಪ್ರಮುಖ ಐತಿಹಾಸಿಕ ಘಟನೆಗಳನ್ನೂ ತಿರುಚುವಲ್ಲಿ ಹಿಂದೆ ಉಳಿಯಲಿಲ್ಲ. ಭಾರತದ ರಾಷ್ಟ್ರೀಯ ದಂಗೆ ಎಂದು ಒಪ್ಪಿಕೊಳ್ಳಲು ನಿರಾಕರಿಸಿದ ಬ್ರಿಟಿಷ್ ಇತಿಹಾಸ ಕಾರರಾದ ಜಾನ್ ವಿಲಿಯಂ ಕೇ ಮತ್ತು ಜಾರ್ಜ್ ಬ್ರೂಸ್ ಮಸನ್ ಇದನ್ನು ಕೇವಲ ಸಿಪಾಯಿ ದಂಗೆ ಎಂದು ಕರೆದರು.
ಭಾರತೀಯ ಸೈನಿಕರು ಹಸುವಿನ ಮತ್ತು ಹಂದಿಯ ಕೊಬ್ಬು ಸವರಿದ ಕಾಟ್ರಿಡ್ಜ್ಗಳ ವಿರುದ್ಧ ನಡೆಸಿದ ಸಣ್ಣ ಧಾರ್ಮಿಕ ಪ್ರತಿಭಟನೆ ಎಂದು ಬಿಂಬಿಸಿ, ಅದರ ಹಿಂದಿದ್ದ ಬೃಹತ್ ಸ್ವಾತಂತ್ರ್ಯದ ಕಿಚ್ಚನ್ನು ಮರೆಮಾಚಿದರು. ಹೀಗೆ ಇತಿಹಾಸದ ಮೂಲದ ಸತ್ಯಾನ್ವೇಷಣೆಗೆ ಸಾಗಿದರೆ, ಇಂತಹ ಅದೆಷ್ಟೋ ಸುಳ್ಳಿನ ಕಂತೆಗಳು ಕಾಣಸಿಗುತ್ತವೆ. ಇದೆಲ್ಲದ ಬಗ್ಗೆ ಅರಿವಿದ್ದರು ಸಹ ಇಂದಿಗೂ ಸತ್ಯವನ್ನು ನಿರ್ಭಯವಾಗಿ ಜನತೆಯ ಮುಂದಿರಿಸುವಲ್ಲಿ ಸರಕಾರಗಳು ಸೋತಿವೆ.
ಪಾಶ್ಚಾತ್ಯರು ಭಾರತದ ಬಗ್ಗೆ ಬರೆದ ಸುಳ್ಳುಗಳು ಮತ್ತು ಪೂರ್ವಾಗ್ರಹಗಳ ಹಿಂದಿನ ಅಜೆಂಡಾ ವನ್ನು ಮೊಟ್ಟಮೊದಲ ಬಾರಿಗೆ ಜಾಗತಿಕ ಮಟ್ಟದಲ್ಲಿ ಬಯಲಿಗೆಳೆದವರು ಪ್ಯಾಲೆಸ್ತೀನ್ ಮೂಲದ ಅಮೆರಿಕನ್ ಚಿಂತಕ ಎಡ್ವರ್ಡ್ ಸೈದ್. ಈತ ತನ್ನ Orientalism ಕೃತಿಯಲ್ಲಿ ಬ್ರಿಟನ್, ಫ್ರಾನ್ಸ್ ಮತ್ತು ಜರ್ಮನಿಯಂತಹ ಪಾಶ್ಚಾತ್ಯ ದೇಶಗಳ ವಿದ್ವಾಂಸರು (ಅವರಲ್ಲಿ ಹೆಚ್ಚಿನವರು ಎಂದಿಗೂ ಪ್ರಾಚ್ಯ ದೇಶಗಳಿಗೆ ಭೇಟಿ ನೀಡಿರಲಿಲ್ಲ) ಪೂರ್ವ ದೇಶಗಳಾದ (Orient) ಭಾರತ, ಅರಬ್ ದೇಶಗಳು ಮತ್ತು ಚೀನಾದ ಬಗ್ಗೆ ಬರೆಯುವಾಗ ಉದ್ದೇಶಪೂರ್ವಕವಾಗಿ ಅನಾಗರಿಕ, ನಿಗೂಢ, ಹಣಕಾಸಿನ ಹಸಿವಿಲ್ಲದ ಆದರೆ ದೌರ್ಬಲ್ಯವಿರುವ ಜನರೆಂದು ಚಿತ್ರಿಸಿದರು ಎಂದು ನಿರೂಪಿಸಿದರು.
ಪಾಶ್ಚಾತ್ಯರು ತಮ್ಮ ಶ್ರೇಷ್ಠತೆಯನ್ನು ಸಾಬೀತುಪಡಿಸಲು ಮತ್ತು ತಮ್ಮ ವಸಾಹತುಶಾಹಿ ಆಕ್ರಮಣ ವನ್ನು ನ್ಯಾಯಯುತಗೊಳಿಸಲು ಪೂರ್ವ ದೇಶಗಳ ಬಗ್ಗೆ ಒಂದು ಸುಳ್ಳು ಬಿಂಬವನ್ನು (Stereotype) ಸೃಷ್ಟಿಸಿದರು ಎಂದು ಸೈದ್ ಸಾಬೀತುಪಡಿಸಿದನು. ಭಾರತಕ್ಕೆ ಬಾರದ ಪಾಶ್ಚಾತ್ಯ ಲೇಖಕರು ತಮ್ಮ ಕಲ್ಪನೆಗಳನ್ನು ಸತ್ಯವೆಂದು ನಂಬಿಸಲು ಮೂರು ಮುಖ್ಯ ತಂತ್ರಗಳನ್ನು ಬಳಸಿದರು.
೧. ಆಯ್ದ ಮೂಲಗಳ ಆಯ್ಕೆ: ಬ್ರಿಟಿಷ್ ಆಡಳಿತಗಾರರಿಗೆ ಅಥವಾ ಮಿಷನರಿಗಳಿಗೆ ಅನುಕೂಲ ವಾಗುವ ಕೆಲವು ಸಂಸ್ಕೃತ ಗ್ರಂಥಗಳ ಶ್ಲೋಕಗಳನ್ನು (ಉದಾಹರಣೆಗೆ ಮನುಸ್ಮೃತಿಯ ಕೆಲವು ನಿರ್ದಿಷ್ಟ ಭಾಗಗಳು) ಮಾತ್ರ ದೊಡ್ಡದಾಗಿ ಬಿಂಬಿಸಿ, ಇಡೀ ಭಾರತೀಯ ಸಮಾಜವೇ ಅಧಃಪತನಗೊಂಡಿದೆ ಎಂದು ಬಿಂಬಿಸಲಾಯಿತು. ಉಪನಿಷತ್ತುಗಳು, ಭಗವದ್ಗೀತೆ, ವೇದಾಂತಗಳು ಮತ್ತು ಸ್ಥಳೀಯ ಸ್ವಾಯತ್ತ ಸಂಸ್ಥೆಗಳ ಸಾಧನೆಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಯಿತು.
೨. ಪ್ರಾಚೀನತೆಯನ್ನು ಕಿರಿದಾಗಿಸುವುದು: ಭಾರತದ ಇತಿಹಾಸವು ಲಕ್ಷಾಂತರ ವರ್ಷಗಳ ಹಳೆಯದು ಮತ್ತು ಸುದೀರ್ಘ ಖಗೋಳ ಹಾಗೂ ನಾಗರಿಕ ಪರಂಪರೆಯನ್ನು ಹೊಂದಿದೆ ಎಂಬುದನ್ನು ಒಪ್ಪಿಕೊಳ್ಳಲು ಬೈಬಲ್ನ ಕಾಲಗಣನೆಗೆ ಅಂಟಿಕೊಂಡಿದ್ದ ಪಾಶ್ಚಾತ್ಯ ವಿದ್ವಾಂಸರು ನಿರಾಕರಿಸಿದರು. ಭಾರತದ ಇತಿಹಾಸವು ಅಲೆಕ್ಸಾಂಡರ್ ದಾಳಿಯ (ಕ್ರಿ.ಪೂ.326) ನಂತರವೇ ಆರಂಭವಾಯಿತು ಎಂಬಂತೆ ಬಿಂಬಿಸಿ, ಸಿಂಧೂ ನಾಗರಿಕತೆಯ ಕಾಲವನ್ನು ತಗ್ಗಿಸುವಂತೆ ಮಾಡಿ ಕಡಿಮೆಗೊಳಿಸಲಾಯಿತು.
- ಸಮುದಾಯಗಳ ನಡುವೆ ಒಡೆದು ಆಳುವುದು: ಜೇಮ್ಸ್ ಮಿಲ್ನಿಂದ ಹಿಡಿದು ಪ್ರತಿಯೊಬ್ಬ ಪಾಶ್ಚಾತ್ಯ ಲೇಖಕರೂ ಭಾರತವನ್ನು ಜಾತಿ, ಧರ್ಮ ಮತ್ತು ಭಾಷೆಯ ಆಧಾರದ ಮೇಲೆ ತುಂಡು ತುಂಡಾಗಿ ವಿಂಗಡಿಸಿ ಬರೆದರು. ಭಾರತೀಯರಲ್ಲಿ ಎಂದಿಗೂ ರಾಷ್ಟ್ರೀಯ ಭಾವನೆ ಇರಲಿಲ್ಲ, ಅದು ಬ್ರಿಟಿಷರು ಬಂದ ನಂತರವೇ ಹುಟ್ಟಿಕೊಂಡಿತು ಎಂಬ ಸುಳ್ಳನ್ನು ವ್ಯವಸ್ಥಿತವಾಗಿ ಬಿತ್ತಲಾಯಿತು.
ಬ್ರಿಟಿಷ್ ವಸಾಹತುಶಾಹಿ ಆಡಳಿತಗಾರರು ಮತ್ತು ಪಾಶ್ಚಾತ್ಯ ಆರಾಮಕುರ್ಚಿ ಇತಿಹಾಸಕಾರರು ಸೃಷ್ಟಿಸಿದ ಪೂರ್ವಾಗ್ರಹಪೀಡಿತ ಇತಿಹಾಸವನ್ನು ಭಾರತೀಯ ವಿದ್ವಾಂಸರು ಕೇವಲ ಭಾವನಾತ್ಮಕ ವಾಗಿ ವಿರೋಧಿಸಲಿಲ್ಲ; ಬದಲಾಗಿ, ಬ್ರಿಟಿಷರದೇ ಸರ್ಕಾರಿ ದಾಖಲೆಗಳು, ಪ್ರಾಚೀನ ಶಾಸನಗಳು, ನಾಣ್ಯಶಾಸ್ತ್ರ ಮತ್ತು ಮೂಲ ಸಂಸ್ಕೃತ-ಪರ್ಷಿಯನ್ ಗ್ರಂಥಗಳ ವೈಜ್ಞಾನಿಕ ವಿಶ್ಲೇಷಣೆಯ ಮೂಲಕ ಪಾಶ್ಚಾತ್ಯರ ಸುಳ್ಳುಗಳನ್ನು ಎಳೆಎಳೆಯಾಗಿ ಬಯಲಿಗೆಳೆದರು.
ಪಾಶ್ಚಾತ್ಯ ಬರಹಗಾರರು ಭಾರತಕ್ಕೆ ಬರದೆಯೇ ಮತ್ತು ಇಲ್ಲಿನ ವಾಸ್ತವವನ್ನು ಅರಿಯದೆಯೇ ಬರೆದ ಈ ಗ್ರಂಥಗಳು ಕೇವಲ ಅಜ್ಞಾನದಿಂದ ಹುಟ್ಟಿದವುಗಳಲ್ಲ; ಅವು ಓರಿಯಂಟಲಿಸಂ ಎಂಬ ವಸಾಹತುಶಾಹಿ ಸಿದ್ಧಾಂತದ ಭಾಗವಾಗಿದ್ದವು. ಭಾರತೀಯರನ್ನು ದುರ್ಬಲರು, ವಿಭಜಿತರು ಮತ್ತು ಅನಾಗರಿಕರು ಎಂದು ಜಗತ್ತಿಗೆ ತೋರಿಸುವ ಮೂಲಕ, ಬ್ರಿಟಿಷ್ ಸಾಮ್ರಾಜ್ಯಶಾಹಿಯ ಶೋಷಣೆ ಯನ್ನು ಬಿಳಿಯನ ಹೊಣೆಗಾರಿಕೆ (White Man's Burden) ಎಂದು ಸಮರ್ಥಿಸಿಕೊಳ್ಳುವುದು ಈ ಎಲ್ಲಾ ತಿರುಚಿದ ಇತಿಹಾಸದ ಮುಖ್ಯ ಉದ್ದೇಶವಾಗಿತ್ತು.
ಆಧುನಿಕ ಭಾರತೀಯ ಇತಿಹಾಸಕಾರರಾದ ಆರ್.ಸಿ. ಮಜುಂದಾರ್, ಜದುನಾಥ್ ಸರ್ಕಾರ್, ಧರ್ಮಪಾಲ್ ಮುಂತಾದವರು ಮೂಲ ದಾಖಲೆಗಳ ಆಧಾರದ ಮೇಲೆ ಈ ಪಾಶ್ಚಾತ್ಯ ಸುಳ್ಳುಗಳನ್ನು ಬಯಲಿಗೆಳೆದು ಭಾರತದ ನೈಜ ಇತಿಹಾಸವನ್ನು ಪುನರ್ ನಿರ್ಮಿಸುವ ಕಾರ್ಯ ಮಾಡಿzರೆ. ಕೊನೆಯ ಮಾತು: ವಿದೇಶಿ ನೆಲದಲ್ಲಿ ಕುಳಿತು ಯಾರೋ ಬರೆದ ಸುಳ್ಳುಗಳನ್ನು ನಾವಿಂದು ಸತ್ಯವೆಂದು ನಂಬಿ ಮರುಕಪಡುತ್ತಿದ್ದೇವೆ ನಿಜ. ಆದರೆ ಅದಕ್ಕಿಂತಲೂ ದೊಡ್ಡ ದುರಂತವೆಂದರೆ, ಪಾಶ್ಚಾತ್ಯರ ಬೌದ್ಧಿಕ ದಾಳಿಗಿಂತಲೂ ವೇಗವಾಗಿ ನಾವೇ ನಮ್ಮ ಕೈಯಾರೆ ನಮ್ಮ ಶತಮಾನಗಳ ಹಿರಿಯರ ಆಚಾರ-ವಿಚಾರ, ಸಂಸ್ಕೃತಿ ಮತ್ತು ಜೀವಪರ ಆಚರಣೆಗಳನ್ನು ಕಳೆದುಕೊಳ್ಳುತ್ತಿರುವುದು.
ಕಳೆದ ಐವತ್ತು ವರ್ಷಗಳಲ್ಲಿ, ನಮ್ಮ ಬದುಕನ್ನೇ ತಿರುವಿ ಹಾಕಿ ನೋಡಿ. ಆಧುನಿಕತೆಯ ಗೀಳಿನಲ್ಲಿ ನಮ್ಮದೇ ಮಣ್ಣಿನ ಸಹಜ ಜೀವನಶೈಲಿ, ಸಾಮೂಹಿಕ ಹಬ್ಬಗಳು, ವಸುಧೈವ ಕುಟುಂಬಕದ ಭಾವನೆ ಹಾಗೂ ಪ್ರಕೃತಿಯೊಂದಿಗೆ ಇರಿಸಿಕೊಂಡಿದ್ದ ಪವಿತ್ರ ನಂಟನ್ನು ನಾವೇ ವ್ಯವಸ್ಥಿತವಾಗಿ ಕಳಚಿ ಕೊಂಡಿದ್ದೇವೆ. ಮೂಲ ಆಚಾರ ವಿಚಾರ, ಸಂಒದಾಯವನ್ನೇ ನಮಗೆ ಬೇಕಾದ ಹಾಗೇ ಬದಲಿಸಿ ದ್ದೇವೆ.
ಹೊರಗಿನವರ ಕಥೆಗಳನ್ನು ದೂರುವ ಮುನ್ನ, ನಾವೇ ನಮ್ಮ ಕೈಯಾರೆ ನಮ್ಮ ಸಂಸ್ಕೃತಿಯ ಉಸಿರನ್ನು ನಿಲ್ಲಿಸುತ್ತಿರುವ ಈ ಆತ್ಮಘಾತಕ ಧೋರಣೆಯನ್ನು ತಕ್ಷಣವೇ ಆತ್ಮಾವಲೋಕನ ಮಾಡಿ ಕೊಳ್ಳಬೇಕಿದೆ; ಇಲ್ಲದಿದ್ದರೆ ಮುಂದೊಂದು ದಿನ ನಾವು ಕಳೆದುಕೊಳ್ಳಲು ನಮ್ಮದೇ ಅಸ್ಮಿತೆ ಎಂಬುದು ಏನೂ ಉಳಿದಿರುವುದಿಲ್ಲ. ಆಗ ಆರಾಮಕುರ್ಚಿಯಲ್ಲಿ ಕುಳಿತು ಸುಳ್ಳಿನ ಕಂತೆಯನ್ನೇ ಇತಿಹಾಸವನ್ನಾಗಿಸಿದ ಪಾಶ್ಚಾತ್ಯರಿಗೂ, ನಮಗೂ ಯಾವ ವ್ಯತ್ಯಾಸವು ಉಳಿಯುವುದಿಲ್ಲ. ಯೋಚಿಸಿ!