Vinayaka V Bhat Column: ದೇವವ್ರತಃ ಸನಾತನ ಪರಂಪರೆಯ ಭರವಸೆಯ ಬೆಳಕು
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರೂ, ಮಹೇಶ್ ಅವರ ಸಾಧನೆಯನ್ನು ಮೆಚ್ಚಿ ಸನ್ಮಾನ ಮಾಡಿದ್ದಾರೆ. ದೇಶದ ಶಿಕ್ಷಣ ಮಂತ್ರಿಗಳಿಂದ, ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಗಳಿಂದ ಹೀಗೆ ದೇಶದ ವಿದ್ವತ್ ವಲಯದಿಂದ, ಭಾರತೀಯ ಸಂಸ್ಕೃತಿಯ ಬಗ್ಗೆ ಆಸಕ್ತಿ ಹೊಂದಿರುವ ಪ್ರತಿಯೊಬ್ಬ ರಿಂದ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ.
-
ವಿದ್ಯಮಾನ
ರಾಜ್ಯದಲ್ಲಿ ನವೆಂಬರ್ ಕ್ರಾಂತಿ ಶಾಂತವಾಗಿ ಸಾಗುತ್ತಿದೆ. ರಷ್ಯಾಧ್ಯಕ್ಷ ಪುಟಿನ್ ಗದ್ದಲವಿಲ್ಲದೇ ಭಾರತಕ್ಕೆ ಬಂದು ಹೋಗಿಯಾಯಿತು. ಸಂಸತ್ತಿನಲ್ಲಿ ಎಂದಿನಂತೆ ಗಲಾಟೆಯಲ್ಲದೇ ಬೇರೇನೂ ನಡೆಯುತ್ತಿಲ್ಲ. ಭಾರತದ ಅತಿ ಕಿರಿಯನೊಬ್ಬ ಕೃತಕ ಬುದ್ಧಿಮತ್ತೆಯಲ್ಲಿ (ಎಐ) ಸಾಧನೆ ಮಾಡಿ ಶ್ರೀಮಂತನಾಗಿ ಸುದ್ದಿ ಮಾಡಿದ. ವಿರಾಟ್ ಕೊಹ್ಲಿ ಸತತವಾಗಿ ಎರಡು ಶತಕ ಬಾರಿಸಿದ.
ಈ ಎಲ್ಲ ವಿದ್ಯಮಾನಗಳ ಮಧ್ಯದಲ್ಲಿ, ಮಹಾರಾಷ್ಟ್ರದ ತೇಜಸ್ವಿ ಯುವಕ ದೇವವ್ರತ ಮಹೇಶ ರೇಖೆ ತಮ್ಮ ‘ಹ್ಯೂಮನ್ ಇಂಟಲಿಜೆನ್ಸ್’ ಮೂಲಕ ದೇಶದ ಸನಾತನಿಗಳಿಗೆ ಸಮಾಧಾನವೀಯುವ ಸಾಧನೆ ಮಾಡಿ ಸುದ್ದಿಯಾಗಿದ್ದಾರೆ.
೧೯ ವರ್ಷದ ಯುವ ವೇದ ವಿದ್ವಾಂಸ ದೇವವ್ರತ್ ಮಹೇಶ್ ರೇಖೆ ಸಾಧನೆ ಈಗ ದೇಶದೆಡೆ ಸುದ್ದಿ ಯಾಗತೊಡಗಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಈತನ ಸ್ಮೃತಿ ಸಾಮರ್ಥ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
“ಕಾಶಿಯ ಸಂಸದನಾಗಿ, ಈ ಅಸಾಧಾರಣ ಸಾಧನೆ ಈ ಪವಿತ್ರ ನಗರದಲ್ಲಿ ನಡೆದಿದ್ದಕ್ಕೆ ನಾನು ಹರ್ಷಿಸುತ್ತೇನೆ. ಅವರ ಕುಟುಂಬಕ್ಕೆ, ಅವರನ್ನು ಬೆಂಬಲಿಸಿದ ಭಾರತದಾದ್ಯಂತದ ಹಲವಾರು ಸಂತರು, ಋಷಿಗಳು, ವಿದ್ವಾಂಸರು ಮತ್ತು ಸಂಸ್ಥೆಗಳಿಗೆ ನನ್ನ ಪ್ರಣಾಮಗಳು" ಎಂದು ಮೋದಿ ಹೇಳಿದ್ದಾರೆ.
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರೂ, ಮಹೇಶ್ ಅವರ ಸಾಧನೆಯನ್ನು ಮೆಚ್ಚಿ ಸನ್ಮಾನ ಮಾಡಿದ್ದಾರೆ. ದೇಶದ ಶಿಕ್ಷಣ ಮಂತ್ರಿಗಳಿಂದ, ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಗಳಿಂದ ಹೀಗೆ ದೇಶದ ವಿದ್ವತ್ ವಲಯದಿಂದ, ಭಾರತೀಯ ಸಂಸ್ಕೃತಿಯ ಬಗ್ಗೆ ಆಸಕ್ತಿ ಹೊಂದಿರುವ ಪ್ರತಿಯೊಬ್ಬರಿಂದ ಪ್ರಶಂಸೆಯ ಮಹಾಪೂರವೇ ಹರಿದುಬರುತ್ತಿದೆ.
ಮಹಾರಾಷ್ಟ್ರದ ಮುಖ್ಯಮಂತ್ರಿಗಳಂತೂ ದೇವವ್ರತನ ಬರವಿಗೆ ಕಾಯುತ್ತಿದ್ದಾರೆ. ಮಹಾರಾಷ್ಟ್ರ ಮೂಲದ ದೇವವ್ರತ ಮಹೇಶ್ ರೇಖೆ ಅವರ ಸಾಧನೆಗೆ ಕರ್ನಾಟಕದ ಶೃಂಗೇರಿ ಶಾರದಾ ಪೀಠದ ಶ್ರೀಗಳಿಂದ ಆಶೀರ್ವಾದಪೂರ್ವಕ ಪುರಸ್ಕಾರ ನೀಡಿ ಸನ್ಮಾನ ಮಾಡಲಾಗಿದೆ. ಕಾಶಿಯ ಶೃಂಗೇರಿ ಶಂಕರ ಮಠದಲ್ಲಿ ಶೃಂಗೇರಿ ಜಗದ್ಗುರುಗಳ ಪ್ರತಿನಿಧಿಗಳು ಮಹೇಶ್ ಅವರಿಗೆ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸನ್ನಿಧಾನದಿಂದ ವಿಶೇಷ ಆಶೀರ್ವಾದದ ಸಂದೇಶವನ್ನು ತಲುಪಿಸಿದ್ದಾರೆ.
ಇದೇ ವೇಳೆ ಶ್ರೀಮಠದಿಂದ ೫ ಲಕ್ಷ ರುಪಾಯಿ ಮೌಲ್ಯದ ಸುವರ್ಣ ಕಂಕಣ ಹಾಗೂ 1111156 ರು.ಗಳ ನಗದು ನೀಡಿ ಸನ್ಮಾನಿಸಲಾಗಿದೆ.ಎರಡು ಶತಮಾನಗಳ ನಂತರ ಪ್ರತಿಭಾವಂತ ವೇದ ವಿದ್ಯಾರ್ಥಿಯೊಬ್ಬ ಮಾಡಿದ ಸಾಧನೆಯ ಸನ್ಮಾನ ಸಮಾರಂಭದ ಭಾಗವಾಗಿ, ಕಾಶಿಯ ರಥಯಾತ್ರೆ ಕ್ರಾಸಿಂಗ್‌ನಿಂದ ಮಹಮೂರ್ಗಂಜ್‌ವರೆಗೆ ಸಂಗೀತ ವಾದ್ಯಗಳು, ಶಂಖಧ್ವನಿ ಮತ್ತು 500ಕ್ಕೂ ಹೆಚ್ಚು ವೈದಿಕ ವಿದ್ಯಾರ್ಥಿಗಳನ್ನು ಒಳಗೊಂಡ ಭವ್ಯ ಮೆರವಣಿಗೆ ನಡೆದಿದೆ.
ಇದನ್ನೂ ಓದಿ: Vinayaka V Bhat Column: ಇಸ್ರೇಲಿನ ನರಮೇಧದ ಕಥೆಯನ್ನು ನಾವ್ಯಾಕೆ ಓದಬೇಕು ?
ಯುವ ವೈದಿಕ ದೇವವ್ರತ ನಿರಂತರ ೫೦ ದಿನಗಳ ಕಾಲ ಪುಸ್ತಕದ ಸಹಾಯವಿಲ್ಲದೇ, ಕೇವಲ ಸ್ಮರಣಶಕ್ತಿಯಿಂದ ಶುಕ್ಲ ಯಜುರ್ವೇದದ ಮಾಧ್ಯಂದಿನ ಶಾಖೆಯ 2000 ಮಂತ್ರಗಳ ದಂಡ ಕ್ರಮ ಪಾರಾಯಣವನ್ನು ಕಾಶಿಯ ವಿದ್ವತ್ ವರ್ಗದ ಮುಂದೆ ಮಾಡಿ ಯಶಸ್ವಿಯಾಗಿದ್ದಾರೆ.
ದಂಡಕ್ರಮವನ್ನು ಇತಿಹಾಸದಲ್ಲಿ ಕೇವಲ ಮೂರು ಬಾರಿ ಮಾತ್ರ ಪ್ರದರ್ಶಿಸಲಾಗಿದೆಯಂತೆ. ದೇವವ್ರತ ಅವರ ಪಠಣ ದೋಷರಹಿತವಾಗಿದ್ದುದು ಮತ್ತು ಕಡಿಮೆ ಅವಧಿಯಲ್ಲಿ ಪೂರ್ಣಗೊಂಡಿ ರುವುದು ಐತಿಹಾಸಿಕ ಸಾಧನೆಯಾಗಿದೆ. ಅಷ್ಟೇ ಅಲ್ಲದೆ, ಕೇವಲ ೧೯ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿರುವುದು ದೊಡ್ಡ ಸಂಗತಿ. ವಲ್ಲಭಾರಂ ಶಾಲಿಗ್ರಾಮ ಸಂಗವೇದ ವಿದ್ಯಾಲಯದಲ್ಲಿ ಅಕ್ಟೋಬರ್ ೨ರಿಂದ ನವೆಂಬರ್ ೩೦ರವರೆಗೆ ನಡೆದ ಈ ಪಾರಾಯಣವನ್ನು ಕಾಶಿಯ ಹಲವಾರು ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆಗಳು ಕೊಂಡಾಡಿವೆ.
ವೇದ ವ್ಮಾಯವನ್ನು ಶ್ರುತಿ ಎಂದೂ ಕರೆಯತ್ತಾರೆ. ತಲತಲಾಂತರದಿಂದ ಗುರು-ಶಿಷ್ಯ ಪರಂಪರೆ ಯಲ್ಲಿ ಕೇಳಿ ಕಲಿತು ಉಳಿದುಕೊಂಡು ಬಂದಿರುವುದರಿಂದ ಹೀಗೆ ‘ಶ್ರುತಿ’ ಎನ್ನುತ್ತಾರೆ. ಯಾವುದೇ ಒಬ್ಬ ವ್ಯಕ್ತಿಯಿಂದ ಪ್ರಾಕಟ್ಯ ಹೊಂದಿಲ್ಲವಾದ್ದರಿಂದ ವೇದ ಸಾಹಿತ್ಯವನ್ನು ‘ಅಪೌರುಷೇಯ’ (ಮಾನವನಿಂದ ರಚಿಸಲ್ಪಟ್ಟಿಲ್ಲ) ಎಂತಲೂ ಭಾವಿಸುತ್ತಾರೆ.
ಹೀಗೆ ‘ಅಪೌರುಷೇಯ’ ಎಂದು ಪರಿಗಣಿಸಲು ಈ ಕಾರಣಗಳನ್ನು ಹೇಳುತ್ತಾರೆ: ಸನಾತನ ಧರ್ಮದ ನಂಬಿಕೆಯ ಪ್ರಕಾರ, ಪರಮಾತ್ಮನಿಂದ ಅಥವಾ ಬ್ರಹ್ಮನಿಂದ ಸೃಷ್ಟಿಯ ಪ್ರಾರಂಭದಲ್ಲಿ ಋಷಿಗಳಿಗೆ ತಿಳಿಸಲ್ಪಟ್ಟ ದೈವಿಕ ಜ್ಞಾನದ ವಾಣಿಗಳೇ ವೇದಗಳು. ಋಷಿಗಳು ಆ ಜ್ಞಾನವನ್ನು ಕಂಡವರೇ (ದ್ರಷ್ಟಾರರು) ವಿನಾ, ರಚಿಸಿದವರಲ್ಲ. ಆದ್ದರಿಂದ, ಅವು ಮಾನವನ ಸೀಮಿತ ಬುದ್ಧಿಯಿಂದ ಉದ್ಭವಿಸಿದ್ದಲ್ಲ.
ವೇದಗಳ ಜ್ಞಾನವು ಶಾಶ್ವತವಾದದ್ದು. ಅವು ಸತ್ಯ ಮತ್ತು ಧರ್ಮದ ಅಡಿಪಾಯವಾಗಿರುವುದರಿಂದ, ಅವುಗಳನ್ನು ದೋಷಪೂರಿತವಾದ ಹಾಗೂ ಸೀಮಿತ ಬುದ್ಧಿಯ ಮಾನವನಿಂದ ರಚಿಸಲು ಸಾಧ್ಯ ವಿಲ್ಲ ಎಂದು ನಂಬಲಾಗಿದೆ. ವೇದಗಳು ಪೀಳಿಗೆಯಿಂದ ಪೀಳಿಗೆಗೆ ಗುರು-ಶಿಷ್ಯ ಪರಂಪರೆಯಲ್ಲಿ ಕಂಠಪಾಠದ ಮೂಲಕ ಸಾಗಿಬಂದಂಥವು (ಶ್ರುತಿ- ಕೇಳುವ ಮೂಲಕ ಕಲಿಯುವುದು).
ಅವುಗಳ ಪಠಣದ ಸ್ವರ ಮತ್ತು ಶುದ್ಧತೆಯನ್ನು ಕಟ್ಟುನಿಟ್ಟಾಗಿ ಕಾಪಾಡಿಕೊಂಡು ಬರಲಾಗಿದೆ. ಈ ಸಂರಕ್ಷಣಾ ವಿಧಾನವು ಅವುಗಳ ಮೂಲ ದೈವಿಕ ರೂಪವನ್ನು ಬದಲಾಗದಂತೆ ಉಳಿಸಿಕೊಂಡಿದೆ ಎಂದು ಸೂಚಿಸುತ್ತದೆ. ವೇದಾಧ್ಯಯನದ ರೀತಿ-ನೀತಿಯೇ ರೋಚಕ, ಕಷ್ಟದ ಮಂತ್ರಗಳನ್ನು ಶಾಶ್ವತವಾಗಿ ನೆನಪಿನಲ್ಲುಳಿಯುವಂತೆ ಕಲಿಸುವ ಪಾರಂಪರಿಕ ಪದ್ಧತಿಯೇ ಅನನ್ಯ. ಮೊದಲ ಬಾರಿ ಹೊಸ ಮಂತ್ರವೊಂದನ್ನು ಹೇಳಿಕೊಡುವಾಗ, ವಿದ್ಯಾರ್ಥಿಯಾದವನು ಪುಸ್ತಕವನ್ನು ನೋಡುವ ಹಾಗಿಲ್ಲ, ಆಚಾರ್ಯರು ಹೇಳಿಕೊಡುವುದನ್ನಷ್ಟೇ ಗಮನವಿಟ್ಟು ಕೇಳಬೇಕು ಮತ್ತು ತಾನು ಅದನ್ನು ಎರಡು ಬಾರಿ ಪುನರಾವರ್ತಿಸಬೇಕು.
ಆಮೇಲೆ ಒಂದೊಂದು ವಾಕ್ಯಗಳನ್ನು ಐದು ಬಾರಿ, ಮತ್ತೆ ಹತ್ತು ಬಾರಿ ಪಠಿಸಿ ಕಂಠಸ್ಥ ಮಾಡಿ ಕೊಂಡು ಅಚಾರ್ಯರಿಗೆ ಒಪ್ಪಿಸಬೇಕು. ಮಂತ್ರಗಳೆಂದರೆ ಸಾಮಾನ್ಯ ಗದ್ಯ ಸಾಹಿತ್ಯವಲ್ಲ. ಸಂಸ್ಕೃತ ವೇ ಆದರೂ, ವೇದದ ಭಾಷೆ ಸುಲಲಿತವಲ್ಲ. ಆದರ ಪ್ರತಿ ಅಕ್ಷರಕ್ಕೆ ಉದಾತ್ತ, ಅನುದಾತ್ತ ಮತ್ತು ಸ್ವರಿತ ಎನ್ನುವ ಸ್ವರವಿರುತ್ತದೆ ( | ಮತ್ತು -). ಅವುಗಳ ಉಚ್ಚರಣೆಗೆ ಒಂದು ನಿರ್ದಿಷ್ಟ ಕ್ರಮವೂ ಇರುತ್ತದೆ. ಮಂತ್ರಗಳನ್ನು ಪಠಿಸುವಾಗ ಸ್ವರದಲ್ಲಿ ವ್ಯತ್ಯಾಸವಾದರೆ ಅವುಗಳ ಅರ್ಥದಲ್ಲಿಯೂ ವ್ಯತ್ಯಾಸವಾಗುವ ಸಂಭವನೀಯತೆ ಇರುತ್ತದೆ.
ಮೊದಲೇ ಹೇಳಿದಂತೆ, ನಮ್ಮ ಪಾರಂಪರಿಕ ಶಿಕ್ಷಣ ವ್ಯವಸ್ಥೆಯಲ್ಲಿ ಅಗಾಧವಾದ ಜ್ಞಾನ ಸಂಪತ್ತನ್ನು ನೆನಪಿನಲ್ಲಿಡಲು ಸರಳ ಉಪಾಯಗಳನ್ನು ಹೇಳಿದ್ದಾರೆ. ಉದಾಹರಣೆಗೆ, ಹದಿನೆಂಟು ಪುರಾಣಗಳನ್ನು ಒಂದಾದ ಮೇಲೆ ಒಂದರಂತೆ ಕಾಲಾನುಕ್ರಮದಲ್ಲಿ ನೆನಪಿಸುವುದಕ್ಕಾಗಿ, ’ಮ ದ್ವಯಂ ಭ ದ್ವಯಂ ಚೈವ ಭ್ರ ತ್ರಯಂ ವ ಚತುಷ್ಟಯಮ, ಅ ನಾ ಪ ಲಿಂಗ ಕೂ ಸ್ಕಾನಿ ಪುರಾಣಾನಿ ಪ್ರಚಕ್ಷತೆ’ ಎಂಬ ಒಂದು ಶ್ಲೋಕವನ್ನು ರಚಿಸುತ್ತಾರೆ.
‘ಮ’ ದ್ವಯವೆಂದರೆ, ಮತ್ಸ್ಯ ಹಾಗೂ ಮಾರ್ಕಂಡೇಯ ಪುರಾಣ, ‘ಭ’ ದ್ವಯವೆಂದರೆ ಭವಿಷ್ಯ ಹಾಗೂ ಭಾಗವತ, ‘ಬ್ರ’ ತ್ರಯವೆಂದರೆ ಬ್ರಹ್ಮ, ಬ್ರಹ್ಮವೈವರ್ತ ಹಾಗೂ ಬ್ರಹ್ಮಾಂಡ, ‘ವ’ ಚತುಷ್ಟಯ ವೆಂದರೆ ವಾಮನ, ವರಾಹ, ವಾಯು ಹಾಗೂ ವಿಷ್ಣು ಪುರಾಣಗಳು. ಇನ್ನು ‘ಅ ನಾ ಪ ಲಿಂಗ ಕೂ ಸ್ಕಾನಿ’ ಎಂದರೆ, ಅಗ್ನಿ, ನಾರದ, ಪದ್ಮ, ಲಿಂಗ, ಗರುಡ, ಕೂರ್ಮ ಹಾಗೂ ಸ್ಕಂದ ಪುರಾಣಗಳು. ಹದಿನೆಂಟು ಪರಾಣಗಳ ಹೆಸರುಗಳನ್ನು ನೆನಪಿನಲ್ಲಿಟ್ಟುಕೊಳ್ಳವುದು ಯಾರಿಗಾದರೂ ಕಷ್ಟವೇ, ಆದರೆ ಆ ಎಲ್ಲ ಹದಿನೆಂಟು ಪುರಾಣಗಳ ಮೊದಲಕ್ಷರವನ್ನು ಬಳಸಿ ರಚಿಸಿದ ಶ್ಲೋಕವೊಂದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಸುಲಭ.
ಹೀಗೆ, ಕರ್ಣಾಕರ್ಣಿತವಾಗಿ ಬಂದ ವೇದವಿದ್ಯೆಯನ್ನು ಉಳಿಸಲು ಪ್ರಾಜ್ಞರು ಕಂಡುಕೊಂಡ ಉಪಾಯವೇ ಈ ಜಟಾ, ಮಾಲಾ, ಶಿಖಾ, ರೇಖಾ, ಧ್ವಜ, ದಂಡ, ರಥ, ಘನ ಹೀಗೆ ಎಂಟು ರೀತಿಯ ವಿಕೃತಿಗಳು. ವೇದ ಮಂತ್ರಗಳ ಸಹಜ ಪಠನಕ್ಕೆ ಭಿನ್ನವಾಗಿರುವುದರಿಂದ ಈ ಕ್ರಮಗಳನ್ನು ವಿಕೃತಿ ಗಳು ಎಂದು ಕರೆಯಲಾಗಿದೆ.
ಈಗ ದೇವವ್ರತ ಘನಪಾಠಿಗಳು ಪಾರಾಯಣ ಮಾಡಿರುವುದು ೬ನೆಯದ್ದಾದ ದಂಡ ಎಂಬ ವಿಕೃತಿ ಯನ್ನು. ಸಂಹಿತಾ ಪಾಠ ಮತ್ತು ಪದ ಪಾಠವನ್ನು ‘ಪ್ರಕೃತಿಪಾಠ’ (ಪಠಣದ ನೈಸರ್ಗಿಕ ವಿಧಾನ) ಎಂದು ಕರೆಯಲಾಗುತ್ತದೆ. ಏಕೆಂದರೆ, ಇಲ್ಲಿ ಮಂತ್ರದಲ್ಲಿ ಬರುವ ಪದಗಳನ್ನು ಒಮ್ಮೆ ಮಾತ್ರ ಪಠಿಸಲಾಗುತ್ತದೆ. ಇದೇ ರೀತಿ, ಮಂತ್ರಗಳನ್ನು ವಿಶಿಷ್ಟವಾಗಿ ಪಠಿಸುವ ಒಂದು ವಿಧಾನವನ್ನು ‘ದಂಡ’ ಅಥವಾ ‘ದಂಡಕ’ ಎನ್ನುತ್ತಾರೆ. ಮಂತ್ರದ ಎರಡು ಅಕ್ಷರಗಳನ್ನು ಉಚ್ಚರಿಸುವುದು, ಮತ್ತೆ ಅದೇ ಅಕ್ಷರಗಳನ್ನು ತಿರುಗಿಸಿ ಹೇಳುವುದು, ಮೊದಲಿನ ಅಕ್ಷರವನ್ನು ಬಿಡುವುದು ಹಾಗೂ ಮೂರನೇ ಅಕ್ಷರವನ್ನು ಸೇರಿಸುವುದು, ಮತ್ತೆ ತಿರುಗಿ ಬರುವುದು, ಎರಡನೇ ಅಕ್ಷರವನ್ನು ಬಿಟ್ಟು ಮುಂದೆ ನಾಲ್ಕನೇ ಅಕ್ಷರವನ್ನು ಸೇರಿಸುವುದು ಹೀಗೆ ಈ ವಿಕೃತಿಗಳಲ್ಲಿ ಕ್ರಮಬದ್ಧವಾಗಿ ಹಿಂದೆ ಮುಂದೆ ಸಂಚಾರ ಮಾಡುತ್ತ, ಸ್ವರದಲ್ಲಿ ತಪ್ಪೆಸಗದೇ ಪಠಿಸಬೇಕಾಗುತ್ತದೆ.
ವೇದದಂಡಕ್ರಮ ಪಾರಾಯಣವು ದಂಡಕ ಶ್ಲೋಕಗಳ ಶಿಸ್ತುಬದ್ಧ, ಲಯಬದ್ಧ, ನಿಖರ ಪಠಣವನ್ನು ಸೂಚಿಸುತ್ತದೆ. ಇದು ಅಸಾಧಾರಣ ಉಸಿರಾಟದ ನಿಯಂತ್ರಣ, ಸ್ಮರಣಶಕ್ತಿ, ಏಕಾಗ್ರತೆ ಮತ್ತು ವೇದಗಳ ಸ್ವರ ಹಾಗೂ ಶ್ರುತಿಯ ಮೇಲೆ ಹಿಡಿತ ಹೊಂದಿದವರು ಮಾತ್ರ ಮಾಡಬಲ್ಲಂಥದ್ದು ಆಗಿದೆ.
ಪಠಣ ಮಾದರಿಗಳ ಉದಾಹರಣೆಗಳನ್ನು ಸಂಕ್ಷಿಪ್ತವಾಗಿ ನೋಡೋಣ: ಕ್ರಮ ಪಾಠ: ಈ ವಿಧಾನವು ಪದಗಳನ್ನು ಪ್ರಗತಿಪರ ಕ್ರಮದಲ್ಲಿ ಜೋಡಿಸುತ್ತದೆ. ಪಠಣದ ಮಾದರಿಯು ೧-೨, ೨-೩, ೩-೪ ಆಗಿರುತ್ತದೆ. ಪದಗಳು ಹೇಗೆ ಸಂಯೋಗಗೊಳ್ಳುತ್ತವೆ ಮತ್ತು ಉಚ್ಚಾರಣೆ (ಸ್ವರ) ಸಂಯೋಜನೆಯಲ್ಲಿ ಹೇಗೆ ಬದಲಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ.
ಜಟಾ ಪಾಠ (ಜಡೆಯಂತೆ ಹೆಣೆಯುವುದು): ಜಟಾ ಎಂದರೆ ಜಡೆ ಎಂದರ್ಥ. ಈ ವಿಧಾನವು ಎರಡು ಪಕ್ಕದ ಪದಗಳನ್ನು ಅವುಗಳ ಸಾಮಾನ್ಯ ಕ್ರಮದಲ್ಲಿ, ನಂತರ ಹಿಮ್ಮುಖ ಕ್ರಮದಲ್ಲಿ, ಮತ್ತು ನಂತರ ಮತ್ತೆ ಸಾಮಾನ್ಯ ಕ್ರಮದಲ್ಲಿ ಪಠಿಸುವುದನ್ನು ಒಳಗೊಂಡಿರುತ್ತದೆ.
ಉದಾಹರಣೆ- ೧-೨, ೨-೧, ೧-೨; ೨-೩, ೩-೨, ೨-೩; ೩-೪, ೪-೩, ೩-೪...
ಘನ ಪಾಠ: ಇದು ಅತ್ಯಂತ ಸಂಕೀರ್ಣ ಮತ್ತು ಹೆಚ್ಚು ಪರಿಗಣಿಸಲ್ಪಟ್ಟ ವಿಧಾನಗಳಲ್ಲಿ ಒಂದಾಗಿದೆ. ಇದನ್ನು ಕರಗತ ಮಾಡಿ ಕೊಳ್ಳಲು ಅನೇಕ ವರ್ಷಗಳು ಬೇಕಾಗುತ್ತವೆ. ಈ ನಿರ್ದಿಷ್ಟ ಮಾದರಿಯಲ್ಲಿ ಪದಗಳನ್ನು ಮುಂದಕ್ಕೆ ಮತ್ತು ಹಿಂದಕ್ಕೆ ಪುನರಾವರ್ತಿಸಲಾಗುತ್ತದೆ. ಉದಾಹರಣೆಗೆ, ೧-೨, ೨-೧, ೧-೨-೩, ೩-೨-೧, ೧-೨-೩; ೨-೩, ೩-೨, ೨-೩-೪...
ದಂಡಕ ಪಾಠ: ಇದು ಜಟಾ ಮತ್ತು ಘನ ಪಾಠಗಳಂಥ ಎಂಟು ವಿಕೃತಿ (ಕೃತಕ/ಸಂಕೀರ್ಣ) ಮಾರ್ಗ ಗಳಿಗೆ ಸೇರಿದ ಸಂಕೀರ್ಣ ಪಠಣದ ಮತ್ತೊಂದು ರೂಪವಾಗಿದೆ. ಈ ನಿರ್ದಿಷ್ಟ ಮಾದರಿಯು, ಪದಗಳನ್ನು ಕ್ರಮಕ್ಕಿಂತ ಹೆಚ್ಚು ಸಂಕೀರ್ಣವಾದ ಆದರೆ ಸಾಮಾನ್ಯವಾಗಿ ಹೆಚ್ಚು ಸಂಕೀರ್ಣವಾದ ಘನ ಪಾಠಕ್ಕಿಂತ ಸರಳವಾಗಿದೆ. ಇಲ್ಲಿ ಮಂತ್ರದ ಶಬ್ಧಗಳು ಕೋಲಿನಂತೆ (ದಂಡ) ಸಂಚಾರ ವಾಗುತ್ತವೆ. ವೇದ ಪಠಣಗಳ ಈ ಎಲ್ಲ ಸಂಕೀರ್ಣ ವಿಧಾನಗಳ ಪ್ರಾಥಮಿಕ ಉದ್ದೇಶವೆಂದರೆ, ಮೌಖಿಕ ಸಂಪ್ರದಾಯದ ಮೂಲಕ ತಲೆಮಾರುಗಳಾದ್ಯಂತ ವೈದಿಕ ಪಠ್ಯಗಳ ಪ್ರಾಚೀನ ಶುದ್ಧತೆ ಮತ್ತು ನಿಖರವಾದ ಧ್ವನಿಯನ್ನು ಸಂರಕ್ಷಿಸಲು ಒಂದು ದೋಷರಹಿತ ವ್ಯವಸ್ಥೆಯಾಗಿ ಕಾರ್ಯ ನಿರ್ವಹಿಸುವುದೇ ಆಗಿದೆ.
ಹೀಗೆ ವೇದಗಳನ್ನು ಘನಾಂತ ಅಧ್ಯಯನ ಮಾಡಿದವರನ್ನು ಘನಪಾಠಿಗಳೆಂದೂ, ಎರಡು ವೇದಗಳ ಅಧ್ಯಯನವಿರುವವರನ್ನು ದ್ವಿವೇದಿಗಳೆಂದೂ, ಮೂರನ್ನು ಅಭ್ಯಾಸ ಮಾಡಿದವರನ್ನು ತ್ರಿವೇದಿ ಗಳೆಂದೂ ಹಾಗೂ ನಾಲ್ಕೂ ವೇದಗಳನ್ನು ಕಲಿತವರನ್ನು ಚತುರ್ವೇದಿಗಳೆಂದೂ ಕರೆಯುವುದು ರೂಢಿಯಲ್ಲಿದೆ.
ಸಾಮಾನ್ಯವಾಗಿ ಆಧುನಿಕ ಶಿಕ್ಷಣ ತಲೆಗೆ ಹತ್ತದ ಮಕ್ಕಳನ್ನು ಪಾಲಕರು ವೇದಪಾಠ ಶಾಲೆಗೆ ಸೇರಿಸು ವುದು ರೂಢಿ, ಮಂತ್ರವನ್ನಾದರೂ ಕಲಿತು ಜೀವನ ಸಾಗಿಸುವಂತಾಗಲಿ ಎನ್ನುವುದು ಅವರ ಉದ್ದೇಶ. ಈಗಂತೂ, ‘ಒಂದೋ ತನ್ನ ಮಕ್ಕಳು ಎಂಜಿನಿಯರ್ ಆಗಬೇಕು ಅಥವಾ ವೈದ್ಯರಾಗಬೇಕು ಎಂದು ಬಯಸುವವರೇ ಹೆಚ್ಚು. ಆದರೆ, ಚಿರಂಜೀವಿ ದೇವವ್ರತನ ತಾಯಿ ರತ್ನಗರ್ಭಳಿಗೆ ತನ್ನ ಮಗ ವೇದದಲ್ಲಿಯೇ ಪ್ರಾವೀಣ್ಯವನ್ನು ಪಡೆಯುವಂತಾಗಲಿ ಎಂಬ ಹೆಬ್ಬಯಕೆ ಇತ್ತಂತೆ.
ದೇವವ್ರತನ ತಂದೆಯೇ ಈತನಿಗೆ ಆಚಾರ್ಯ. ಸುಮಾರು ೧೦-೧೧ ವರ್ಷಗಳ ನಿರಂತರ ಅಧ್ಯಯ ನದ ಫಲವೇ ಶತಮಾನಕ್ಕೆ ಸಲ್ಲುವ ಈ ಅಪ್ರತಿಮ ದಂಡಕ್ರಮ ಪಾರಾಯಣದ ಸಾಧನೆ. “ಯಾವುದೇ ವಸ್ತೂಪಲಬ್ಧಿಗಾಗಿ, ಪ್ರಚಾರಕ್ಕಾಗಿ ಅಥವಾ ಕೀರ್ತಿಕಾಮನೆಯಿಂದ ಮಾಡಿದ ಪಾರಾಯಣ ಇದಲ್ಲ, ಸನಾತನ ಪರಂಪರೆಯ ರಕ್ಷಣೆ ಹಾಗೂ ವಿಶ್ವಕಲ್ಯಾಣವೇ ಈ ಪಾರಾಯಣದ ಉದ್ದೇಶವಾಗಿತ್ತು. ಈ ಮುಖವಾಗಿ ನನ್ನದು ಒಂದು ಸಣ್ಣ ಅಂಬೆಗಾಲಷ್ಟೇ, ಈ ಕ್ಷೇತ್ರದಲ್ಲಿ ನಾನು ಸಾಧಿಸಬೇಕಾದುದು ಬಹಳವಿದೆ" ಎನ್ನುತ್ತಾರೆ ವಿನಯವಂತ ದೇವವ್ರತ ಮಹೇಶ ರೇಖೆ.
ತುಂಬಿದ ಕೊಡ ಹೇಗೆ ತುಳುಕುವುದಿಲ್ಲವೋ, ಹಾಗೆ ವೇದವಿದ್ಯೆ ಯಾರ ತಲೆಯನ್ನೇರುತ್ತದೋ, ಆತನ ಶಿರ ವಿನಯದಿಂದ ಬಾಗಿಯೇ ಬಾಗುತ್ತದೆ. ಅಹಂಕಾರಕ್ಕೆ ಅಲ್ಲಿ ಆಸ್ಪದವಿರುವುದಿಲ್ಲ. ವೇದ ವಿದ್ಯೆಯ ಭಾರ-ಘನತೆ ಅಂಥದ್ದು. ಅದು ವಿನಯದಿಂದಲೇ ಶೋಭಿಸುವಂಥದ್ದು. ಅಂತೂ, ನಮ್ಮ ಜ್ಞಾನ ಪರಂಪರೆಯ ಮೂಲ ಸ್ರೋತವಾದ ವೇದವ್ಮಾಯಯಗಳು ಎಲ್ಲಿ ನಶಿಸಿ ಹೋಗು ತ್ತವೆಯೋ? ಎಂದು ಆತಂಕಿತರಾದ ಸನಾತನಾಭಿಮಾನಿಗಳಿಗೆ ಈ ಮೇಧಾವಿ ಯುವಕ ಭರವಸೆಯ ಬೆಳಕಾಗಿದ್ದಾನೆ...