Shashidhara Halady Column: ಬೆಲ್ಲ ಬೆರೆಸಿದ ಸಾಂಬಾರು ಗೊತ್ತೇ ನಿಮಗೆ ?
ನಮ್ಮ ದೇಶದ ಕುರಿತು ಇನ್ನೊಂದು ವಿಶೇಷ ಪ್ರಚಾರವಿದೆ, ಅದನ್ನು ಸುಳ್ಳು ಎಂದು ಹೇಳುವ ಧೈರ್ಯ ವಿಲ್ಲ. ಏಕೆಂದರೆ, ವೈದ್ಯಕೀಯ ವಲಯದಲ್ಲೇ ಈ ವಿಚಾರವನ್ನು ಹೇಳಲಾಗಿದೆ. ಅದೇನೆಂದರೆ, ಭಾರತವು ಜಗತ್ತಿನ ‘ಡಯಾಬಿಟಿಸ್ ಕ್ಯಾಪಿಟಲ್’ ಆಗಿದೆ ಅಥವಾ ಆಗುವ ದಾರಿಯನ್ನು ಹಿಡಿದಿದೆ; ಅಂದರೆ, ಮಧು ಮೇಹ ಸಮಸ್ಯೆ ಇರುವವರ ರಾಜಧಾನಿಯಾಗಿ ನಮ್ಮ ದೇಶ ರೂಪು ಗೊಂಡಿದೆ ಅಥವಾ ರೂಪುಗೊಳ್ಳು ತ್ತಿದೆ ಎಂಬ ವಿಚಾರ.


ಶಶಾಂಕಣ
ಇಪ್ಪತ್ತೊಂದನೆಯ ಶತಮಾನವನ್ನು ‘ಮಧುಮೇಹಿಗಳ ಯುಗ’ ಎಂದೇ ಕರೆಯಬಹುದೇನೊ! ಸ್ವಲ್ಪ ಗಮನಿಸಿ ನೋಡಿ: ನಮ್ಮ ಸುತ್ತಲಿನ ಹಳ್ಳಿ, ಪಟ್ಟಣ, ನಗರ ಮತ್ತು ಮಹಾನಗರಗಳಲ್ಲಿ ಇಂದು ಎಲ್ಲಿ ಕಂಡರೂ ತಮಗೆ ‘ಶುಗರ್ ಪ್ರಾಬ್ಲಮ್’ ಎಂದು ಹೇಳಿಕೊಳ್ಳುವವರು ಸಿಗುತ್ತಾರೆ!
ನಗರೀಕರಣದ ಪ್ರಭಾವವೋ ಎಂಬಂತೆ, ಸದಾಕಾಲ ಕುಳಿತು ಕೆಲಸ ಮಾಡುವವರಿಗೆ ಇಂಥ ಒಂದು ಸ್ಥಿತಿ ತೀರಾ ಸಾಮಾನ್ಯ. ಕಚೇರಿ, ಬ್ಯಾಂಕು ಮೊದಲಾದ ಕಡೆ, ದಿನವಿಡೀ ಕುಳಿತು ಒತ್ತಡದಿಂದ ಕೆಲಸ ಮಾಡುತ್ತಾ, ಆಗಾಗ ಕಾಫಿಯನ್ನೋ, ಚಹಾವನ್ನೋ ಹೀರುವವರಿಗೆ ‘ಸಕ್ಕರೆ ಸಮಸ್ಯೆ’ ಅಕ್ಕರೆಯಿಂದ ಒಕ್ಕರಿಸುತ್ತದೆ!
ಆದರೆ, ಸಮಾಜದ ಎಲ್ಲಾ ಸ್ತರಗಳ ಜನರಲ್ಲೂ ‘ಸಕ್ಕರೆ ಕಾಯಿಲೆ’ ಕಾಣಿಸಿಕೊಂಡಿರುವ ದಿನಮಾನ ಗಳಿವು! ವಿಶೇಷವೆಂದರೆ (ಇದು ಸಣ್ಣ ದುರಂತವೂ ಹೌದು), ಸಾಕಷ್ಟು ಕೆಲಸ ಮಾಡುವ, ಹೊಲ ಗದ್ದೆಗಳಲ್ಲಿ ಓಡಾಡುತ್ತಾ ಚಟುವಟಿಕೆಯಿಂದ ಇರುವ ಕೃಷಿಕರನ್ನೂ, ಹಳ್ಳಿಗಳ ನಿವಾಸಿಗಳನ್ನೂ ಇಂದು ‘ಸಕ್ಕರೆ ಕಾಯಿಲೆ’ ಅಪ್ಪಿಕೊಂಡಿದೆ. ಅಂಥ ಬಹುಪಾಲು ಜನರು ಗುಳಿಗೆ ನುಂಗುತ್ತಾ ಆ ‘ಕಾಯಿಲೆ’ಯನ್ನು ಒಪ್ಪಿಕೊಂಡಿದ್ದಾರೆ!
ನಮ್ಮ ದೇಶದ ಕುರಿತು ಇನ್ನೊಂದು ವಿಶೇಷ ಪ್ರಚಾರವಿದೆ, ಅದನ್ನು ಸುಳ್ಳು ಎಂದು ಹೇಳುವ ಧೈರ್ಯವಿಲ್ಲ. ಏಕೆಂದರೆ, ವೈದ್ಯಕೀಯ ವಲಯದಲ್ಲೇ ಈ ವಿಚಾರವನ್ನು ಹೇಳಲಾಗಿದೆ. ಅದೇ ನೆಂದರೆ, ಭಾರತವು ಜಗತ್ತಿನ ‘ಡಯಾಬಿಟಿಸ್ ಕ್ಯಾಪಿಟಲ್’ ಆಗಿದೆ ಅಥವಾ ಆಗುವ ದಾರಿಯನ್ನು ಹಿಡಿದಿದೆ; ಅಂದರೆ, ಮಧುಮೇಹ ಸಮಸ್ಯೆ ಇರುವವರ ರಾಜಧಾನಿಯಾಗಿ ನಮ್ಮ ದೇಶ ರೂಪು ಗೊಂಡಿದೆ ಅಥವಾ ರೂಪುಗೊಳ್ಳುತ್ತಿದೆ ಎಂಬ ವಿಚಾರ.
ಇದನ್ನೂ ಓದಿ: Shashidhara Halady Column: ಸ್ಪೂರ್ತಿ ತುಂಬುವ ಬರಹಗಳು
ಭಾರತದ ಅಧಿಕ ಜನಸಂಖ್ಯೆಯ ಅನುಪಾತಕ್ಕೆ ಅನುಗುಣವಾಗಿ, ಡಯಾಬಿಟಿಸ್ ಇರುವವರ ಸಂಖ್ಯೆಯೂ ಜಾಸ್ತಿ. ಜತೆಗೆ, ದೈಹಿಕ ಸ್ಥಿತಿ, ಆನುವಂಶಿಕ ದೇಹ ರಚನೆ ಮೊದಲಾದವುಗಳೂ ನಮ್ಮ ದೇಶದವರಿಗೆ ಬಹುಬೇಗನೆ ಸಕ್ಕರೆ ಕಾಯಿಲೆ ಬರುವಂತೆ ಮಾಡಿವೆ ಎಂಬುದು ಸಹ ಪ್ರಚಾರದಲ್ಲಿದೆ ಮತ್ತು ಅಽಕೃತ ಸಂಸ್ಥೆಗಳು ಇದನ್ನು ಒಪ್ಪಿಕೊಂಡಿವೆ.
ಇರಲಿ, ಸಕ್ಕರೆ ಕಾಯಿಲೆ ಬರದಂತೆ ತಡೆಯುವುದು ಒಂದು ವಿಚಾರ. ಬಂದ ಮೇಲೆ, ಅದನ್ನು ಮ್ಯಾನೇಜ್ ಮಾಡುವುದು, ಅದರ ಜತೆ ಹೊಂದಾಣಿಕೆ ಮಾಡಿಕೊಂಡು ಜೀವನ ನಡೆಸುವುದು, ಅದನ್ನು ನಿಯಂತ್ರಿಸುವುದು ಇಂದಿನ ಬಹುಮುಖ್ಯ ವಿಚಾರ. ಏಕೆಂದರೆ, ಒಮ್ಮೆ ಸಕ್ಕರೆ ಕಾಯಿಲೆ ಬಂದರೆ, ಕ್ರಮೇಣ ಅದರ ಜತೆಯಲ್ಲೇ ಇತರ ಗಂಭೀರ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತವೆ ಎಂದು ಹಲವು ವೈದ್ಯರೇ ಹೇಳುತ್ತಾರೆ.
ಆದ್ದರಿಂದ, ರಕ್ತದಲ್ಲಿ ಸಕ್ಕರೆಯ ಅಂಶ ಅಧಿಕವಾದಾಗ, ಅದನ್ನು ಮಾತ್ರೆ ತಿನ್ನುವ ಮೂಲಕ ನಿಯಂತ್ರಿಸುವುದು ಅಗತ್ಯ; ಜತೆಗೆ, ಹಲವು ರೀತಿಯ ಆಹಾರ ಪದಾರ್ಥಗಳನ್ನು ದೂರವಿಟ್ಟು, ಆಯ್ದ ಆಹಾರವನ್ನು ತಿನ್ನುತ್ತಾ, ಹೆಚ್ಚು ನಾರಿನ ಅಂಶವನ್ನು ತಿನ್ನುವುದನ್ನು ರೂಢಿ ಮಾಡಿ ಕೊಂಡು, ದಿನಕ್ಕೆ ಅರ್ಧ ಗಂಟೆಯಿಂದ ಒಂದು ಗಂಟೆಯಾದರೂ ನಡೆದಾಡುವ ಚಟುವಟಿಕೆಯನ್ನು ಅಭ್ಯಾಸ ಮಾಡಿಕೊಂಡು, ಮಧುಮೇಹ ಸಮಸ್ಯೆಯನ್ನು ನಿಯಂತ್ರಣ ಮಾಡುವ ಸಲಹೆ ಇಂದು ಸಾಮಾನ್ಯ ಎನಿಸಿದೆ.
ಆಹಾರ ಸೇವನೆಯ ವಿಚಾರಕ್ಕೆ ಬಂದರೆ, ಡಯಾಬಿಟಿಸ್ ಇರುವವರು ಸಕ್ಕರೆ, ಬೆಲ್ಲ ತಿನ್ನಬಾರದು ಎಂಬುದು ಬಹುಮುಖ್ಯ ಪಥ್ಯ. ನಾವು ಸೇವಿಸಿದ ಆಹಾರವು ಹೊಟ್ಟೆಯಲ್ಲಿ ಜೀರ್ಣಗೊಂಡು, ಅದು ಗ್ಲೂಕೋಸ್ ಆಗಿ ಪರಿವರ್ತನೆಗೊಂಡು ದೇಹಕ್ಕೆ ಶಕ್ತಿ ನೀಡುವುದು ಸಹಜ ಕ್ರಿಯೆ; ಆದರೆ, ಸಕ್ಕರೆ ಮತ್ತು ಬೆಲ್ಲವನ್ನು ಕಾಫಿಗೆ ಬೆರೆಸಿಯೋ, ತಂಪು ಪಾನೀಯಗಳ ಮೂಲಕವೋ ನೇರವಾಗಿ ಸೇವಿಸಿ ದಾಗ, ಅದು ಬೇಗನೆ ಗ್ಲೂಕೋಸ್ (ಸಕ್ಕರೆಯ ಅಂಶ) ಆಗಿ ಪರಿವರ್ತನೆಗೊಂಡು, ರಕ್ತಕ್ಕೆ ಸೇರುವುದು ಅಸಹಜ ಕ್ರಿಯೆ.
ಈ ಚಯಾಪಚಯಗಳ ಪ್ರಕ್ರಿಯೆಯನ್ನು ವಿಶ್ಲೇಷಿಸುವುದು ಈ ಬರಹದ ಉದ್ದೇಶವಲ್ಲ. ನೇರವಾಗಿ ಸಕ್ಕರೆಯು ರಕ್ತಕ್ಕೆ ಬೇಗನೆ ಸೇರುವುದನ್ನು ತಪ್ಪಿಸಲು, ಮಧುಮೇಹಿಗಳಿಗೆ ‘ಸಕ್ಕರೆ ತಿನ್ನಬೇಡಿ’ ಎಂಬ ಸಲಹೆ ನೀಡುತ್ತಾರೆ. ಆದ್ದರಿಂದಲೇ ‘ಶುಗರ್‌ಲೆಸ್ ಕಾಫಿ’ ಇಂದು ಎಲ್ಲೆಡೆ ತೀರಾ ಸಾಮಾನ್ಯ. ಹಲವು ಹೋಟೆಲ್, ದರ್ಶಿನಿ, ರೆಸ್ಟೋರೆಂಟ್‌ಗಳಲ್ಲಿ ಶುಗರ್‌ಲೆಸ್ ಕಾಫಿ ಅಥವಾ ಚಹಾವನ್ನು ಮಾರುತ್ತಾರೆ, ಡಯಾಬಿಟಿಸ್ ಇರುವವರಿಗೆಂದೇ ಈ ವಿಶೇಷ ವ್ಯವಸ್ಥೆ.
ಆರೋಗ್ಯದ ಬಗ್ಗೆ ಕಾಳಜಿ ಇರುವವರೆಲ್ಲರೂ, ‘ಶುಗರ್‌ಲೆಸ್ ಕಾಫಿ’ಯನ್ನು ಕೇಳಿ ಪಡೆಯುವುದು ಇಂದಿನ ದಿನಗಳಲ್ಲಿ ಸಾಮಾನ್ಯ ಎನಿಸಿದೆ ಮತ್ತು ಇದೊಂದು ಉತ್ತಮ ಅಭ್ಯಾಸವೂ ಹೌದು. ಯಾರದ್ದಾದರೂ ಮನೆಗೆ ಹೋದಾಗ ‘ಸಕ್ಕರೆ ಹಾಕಿದ ಕಾಫಿ ನಿಮಗೆ ಪರವಾಗಿಲ್ವೆ?’ ಎಂದು ಸೌಜನ್ಯ ದಿಂದ ವಿಚಾರಿಸುತ್ತಾರೆ.
ಏಕೆಂದರೆ, ಈಚಿನ ಹತ್ತಿಪ್ಪತ್ತು ವರ್ಷಗಳಲ್ಲಿ ನಡುವಯಸ್ಸಿನವರಿಗೂ, ಎಳೆಯ ವಯಸ್ಸಿನವರಿಗೂ ಅಲ್ಲಲ್ಲಿ ‘ಸಕ್ಕರೆ ಸಮಸ್ಯೆ’ ಕಂಡುಬರುತ್ತಿದೆ. ಆದ್ದರಿಂದ, ಅತಿಥಿಗಳಿಗೂ ಸಕ್ಕರೆ ರಹಿತ ಕಾಫಿ ನೀಡುವ ಸೌಜನ್ಯವನ್ನು ಆತಿಥೇಯರು ತೋರಿಸುತ್ತಾರೆ. ಡಯಾಬಿಟಿಸ್ ಇರುವ ಬಹುಪಾಲು ಮಂದಿ, ಗಂಭೀರ ವ್ರತ ಹಿಡಿದವರಂತೆ, ಸಕ್ಕರೆ ರಹಿತ ಕಾಫಿ, ಚಹಾ ಕುಡಿಯುವುದು ಸಾಮಾನ್ಯ. ಆದರೆ, ಅಂಥ ಸಜ್ಜನರ ‘ಸಕ್ಕರೆ ರಹಿತ ವ್ರತ’ವನ್ನು ಭಂಗ ಮಾಡುವ ನಾನಾ ವಿದ್ಯಮಾನಗಳೂ ನಮ್ಮಲ್ಲಿ ಇಂದು ಸದ್ದಿಲ್ಲದೆ ನಡೆಯುತ್ತಿವೆ.
‘ಸಕ್ಕರೆ ರಹಿತ ವ್ರತ’ ಪಾಲಿಸುವವರಿಗೆ ಗೊತ್ತಿಲ್ಲದಂತೆ ಸಾಕಷ್ಟು ಸಕ್ಕರೆಯ (ಬೆಲ್ಲದ) ಅಂಶವು ಆಹಾರದ ಮೂಲಕ ಅವರ ದೇಹ ಸೇರಿರುತ್ತದೆ! ಹೇಗೆ ಎಂದಿರಾ? ಇಡ್ಲಿ-ವಡೆ-ಸಾಂಬಾರ್ ಸಾಕಷ್ಟು ಸುರಕ್ಷಿತ ಮತ್ತು ಆರೋಗ್ಯಕರ ಉಪಾಹಾರ ಎಂದೇ ಪ್ರಚಾರಗೊಂಡಿದೆ. ಅದರಲ್ಲೂ ಕರ್ನಾಟಕ ದವರು, ‘ನಮ್ಮ ನಾಡಿನ ಇಡ್ಲಿ-ಸಾಂಬಾರು, ವಿಶ್ವದರ್ಜೆಯ ಉತ್ತಮ ಮತ್ತು ಪೌಷ್ಠಿಕ ಉಪಾಹಾರ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವುದುಂಟು.
ಇದು ನಿಜವೂ ಆಗಿರಬಹುದು. ನಮ್ಮ ರಾಜ್ಯದ ಹೋಟೆಲ್, ರೆಸ್ಟೋರೆಂಟ್, ದರ್ಶಿನಿಗಳಲ್ಲಿ ಬೆಳಗಿನ ಉಪಾಹಾರವಾಗಿ ಇಡ್ಲಿ, ವಡೆ, ಸಾಂಬಾರ್ ಬಹು ಜನಪ್ರಿಯ. ಹಾಗೆಂದು, ಡಯಾಬಿಟಿಸ್ ಇರುವವರು ಇಡ್ಲಿ, ವಡೆ, ಸಾಂಬಾರನ್ನು ಪಟ್ಟಾಗಿ ಸೇವಿಸಿದಾಗ, ಅವರ ದೇಹದೊಳಗೆ ಬೆಲ್ಲದ ಅಂಶ ನೇರವಾಗಿ ಸೇರಿಕೊಳ್ಳುತ್ತದೆ! ಹೇಗೆ? ಸಾಂಬಾರಿನ ರುಚಿಗಾಗಿ ಉಂಡೆ ಉಂಡೆ ಬೆಲ್ಲವನ್ನು ಹೆಚ್ಚಿನ ಹೋಟೆಲಿನವರು, ದರ್ಶಿನಿಯವರು ಹಾಕುತ್ತಾರೆ!
ಉಪ್ಪಿಟ್ಟು, ಬಿಸಿಬೇಳೆ ಭಾತ್ ಮೊದಲಾದ ತಿನಿಸುಗಳಿಗೆ, ರುಚಿಗಾಗಿ ತುಸು ಸಕ್ಕರೆ ಅಥವಾ ಬೆಲ್ಲ ಹಾಕುತ್ತಾರೆ; ಸಾಂಬಾರು, ತಿಳಿಸಾರು ಮೊದಲಾದವುಗಳಿಗೆ ಸ್ವಲ್ಪ ಸಕ್ಕರೆ ಅಥವಾ ಬೆಲ್ಲ ಬೆರೆಸುವ ಪದ್ಧತಿ ಹೆಚ್ಚಿನ ಹೋಟೆಲ್‌ಗಳಲ್ಲಿ, ಮದುವೆಯ ವಿಶೇಷ ಊಟಗಳಲ್ಲಿ ತೀರಾ ಸಾಮಾನ್ಯ (ಅಂದರೆ, ಈ ಪದ್ಧತಿ ರಹಸ್ಯವೇನಲ್ಲ!). ರುಚಿಕರ ಮಸಾಲೆ ದೋಸೆ ತಯಾರಿಸುವಾಗ, ಅದು ಕೆಂಪಗೆ ಕಾಣಲಿ ಎಂದು ಕೆಲವು ರೆಸ್ಟೋರೆಂಟ್‌ನವರು, ಹಿಟ್ಟಿಗೆ ಸ್ವಲ್ಪ ಸಕ್ಕರೆ ಬೆರೆಸುತ್ತಾರೆ!
ಮದುವೆ ಮನೆಯ ಊಟವನ್ನು ಸೇವಿಸುವಾಗ, ಅಲ್ಲಿನ ಸಿಹಿ ತಿನಿಸುಗಳ ಜತೆಯಲ್ಲೇ, ಕಾಯಿರಸ, ಸಾಂಬಾರು, ಚಿತ್ರಾನ್ನ (ಹೌದು, ಕೆಲವು ಕಡೆ ಇದಕ್ಕೂ ಬೆಲ್ಲದ ಬೆರಕೆ ಇದೆ) ಮೊದಲಾದ ತಿನಿಸುಗಳ ಜತೆ ಸಾಕಷ್ಟು ಬೆಲ್ಲ ನಮ್ಮ ದೇಹದೊಳಗೆ ಸೇರುತ್ತದೆ. ಇದು ಸಾಮಾನ್ಯ ಜನರಿಗೆ ತೊಂದರೆ ನೀಡದೇ ಇದ್ದರೂ, ‘ಶುಗರ್‌ಲೆಸ್ ಕಾಫಿ’ಯನ್ನು ಕೇಳಿ ಪಡೆದು ಕುಡಿಯುವ ಸಜ್ಜನರಿಗೆ ಸಣ್ಣ ತೊಂದರೆಯನ್ನೇ ಉಂಟುಮಾಡಬಹುದು!
ಇನ್ನು ನಮ್ಮ ರಾಜ್ಯದ ಮಲೆನಾಡು, ಕರಾವಳಿಯ ಅಡುಗೆಯ ಶೈಲಿ ತುಸು ಭಿನ್ನ. ಅಲ್ಲಿ ಬೆಲ್ಲದ ಬಳಕೆ ಧಾರಾಳ. ಸಾಂಬಾರು, ಸಾರು, ಸಾಸಿವೆ, ಗೊಜ್ಜು, ಮುದ್ದುಳಿ, ಕಾಯಿರಸ ಮೊದಲಾದ, ಯಾವುದು ಸಕ್ಕರೆ ರಹಿತ ಎಂದು ಮೇಲ್ನೋಟಕ್ಕೆ ಕಾಣಿಸುತ್ತದೋ, ಅವೆಲ್ಲಕ್ಕೂ ಬೆಲ್ಲ, ಸಕ್ಕರೆ ಧಾರಾಳ ಉಪಯೋಗವಿದೆ!
ಅವರನ್ನು ಕೇಳಿದರೆ, ‘ನಮ್ಮ ಶೈಲಿಯ ಅಡುಗೆಯ ರುಚಿಗೆ ಮುಖ್ಯವಾಗಿ ಬೆಲ್ಲ ಬೇಕೇ ಬೇಕು!’ ಎಂದು ಹೆಮ್ಮೆಯಿಂದ ಹೇಳಿಕೊಂಡಾರು! ಸಾಂಬರಿನ ರುಚಿ ಹೆಚ್ಚಿಸಲು ಸ್ವಲ್ಪ ಬೆಲ್ಲ ಬಳಕೆ ಮಾಡುವ ಈ ಪದ್ಧತಿಯು, ಈಗ ನಿಧಾನವಾಗಿ ಹಾಸನ ದಾಟಿ, ಮೈಸೂರು ಕಡೆಗೂ (ಅಲ್ಲಲ್ಲಿ) ಹರಡಿದೆ!
ವೈದ್ಯರ ಸಲಹೆಯ ಮೇರೆಗೆ, ಸಕ್ಕರೆ ರಹಿತ ಕಾಫಿಯನ್ನೇ ಕುಡಿಯುತ್ತಾ, ನಾಲಗೆ ಚಪಲದಿಂದ ಕೇಳಿದರೂ, ನಿಷ್ಠೆಯಿಂದ ಸಿಹಿ ತಿನಿಸುಗಳನ್ನು ವರ್ಷಗಟ್ಟಲೆ ದೂರವಿರಿಸಿರುವ ‘ಮಧುಮೇಹಿ’ಗಳ ದೇಹದೊಳಗೆ, ಈ ರೀತಿ ಸಾಕಷ್ಟು ಗ್ರಾಂ ಸಕ್ಕರೆ ಅಂಶವು, ಅವರ ಅರಿವಿಗೇ ಬರದಂತೆ ಸೇರಿಕೊಳ್ಳು ತ್ತಿದೆ.
ಇಲ್ಲಿ ಒಂದು ಪ್ರಶ್ನೆಯನ್ನು ನೀವು ಕೇಳಬಹುದು: ಸಕ್ಕರೆಯನ್ನು ಬಿಡುತ್ತೇವೆ, ಬೆಲ್ಲವನ್ನು ಸ್ವಲ್ಪ ಸೇವಿಸಬಹುದು; ಏಕೆಂದರೆ, ಅದು ಹೆಚ್ಚು ಪರಿಷ್ಕರಣೆಗೆ ಒಳಪಟ್ಟಿಲ್ಲವಲ್ಲ ಎಂದು. ಮೊದಲನೆ ಯದಾಗಿ, ಸಕ್ಕರೆಯು ಹರಳಿನ ರೂಪ ತಾಳಲು ಸಾಕಷ್ಟು ರಾಸಾಯನಿಕ ಪರಿಷ್ಕರಣೆಗೆ ಒಳಪಟ್ಟಿರು ವುದು ನಿಜ. ಅದು ನೇರವಾಗಿ ದೇಹವನ್ನು ಸೇರುತ್ತದೆ. ಆದರೆ, ಈ ನಿಟ್ಟಿನಲ್ಲಿ ಬೆಲ್ಲವೂ ಬಹುಮಟ್ಟಿಗೆ ಸಕ್ಕರೆಯನ್ನೇ ಹೋಲುತ್ತದೆ ಎನ್ನುತ್ತಾರೆ, ಆಹಾರ ತಜ್ಞರು. ಉತ್ತಮ ರೀತಿಯಲ್ಲಿ, ಆಲೆಮನೆಗಳಲ್ಲಿ ತಯಾರಿಸಿದ ಗುಣಮಟ್ಟದ ಬೆಲ್ಲದಲ್ಲಿ ಹೆಚ್ಚು ರಾಸಾಯನಿಕಗಳ ಬೆರಕೆ ಇಲ್ಲದೇ ಇರಬಹುದು.
ಆದರೆ, ಸಕ್ಕರೆಯನ್ನು ದೂರವಿರಿಸಿ, ಧಾರಾಳವಾಗಿ ಬೆಲ್ಲ ಸೇವಿಸಿದರೆ, ಅದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು, ಅದರಲ್ಲೂ ಮುಖ್ಯವಾಗಿ ಡಯಾಬಿಟಿಸ್ ಸಮಸ್ಯೆ ಇರುವವರಿಗೆ. ಅಂಗಡಿಗಳಲ್ಲಿ ದೊರಕುವ ಬೆಲ್ಲದ ಕುರಿತು ಇನ್ನೊಂದು ವಿಚಾರವನ್ನು ಹಂಚಿಕೊಳ್ಳಲೇಬೇಕು. ಹಲವು ಕಡೆ, ವಾಣಿಜ್ಯಕವಾಗಿ ಬೆಲ್ಲ ತಯಾರಿಸುವವರು, ಸಕ್ಕರೆಯನ್ನು ಧಾರಾಳವಾಗಿ ಬಳಸಿ ಬೆಲ್ಲ ತಯಾರಿಸು ತ್ತಾರೆ!
ಏಕೆಂದರೆ, ಸಕ್ಕರೆಗೆ ಬೆಲೆ ಕಡಿಮೆ, ಬೆಲ್ಲಕ್ಕೆ ಬೆಲೆ ಜಾಸ್ತಿ! ಬೆಲ್ಲ ತಯಾರಿಸುವಾಗ ಸಕ್ಕರೆ ಬಳಸುತ್ತಾರೆ ಎಂದು ಹೇಳಿದರೆ, ಕೆಲವರಿಗೆ ನಿಜಕ್ಕೂ ಅಚ್ಚರಿ ಎನಿಸಬಹುದು. ಮೂಟೆ ಮೂಟೆ ಸಕ್ಕರೆಯನ್ನು ಬೆಲ್ಲ ತಯಾರಿಸುವ ಬೃಹತ್ ಪಾತ್ರೆಗೆ ಸುರಿಯುತ್ತಿದ್ದುದನ್ನು ಈ ಲೇಖಕ ಕಣ್ಣಾರೆ ನೋಡಿದ್ದಾನೆ!
ಆ ಬೆಲ್ಲಕ್ಕೆ ಆಕರ್ಷಕ ಬಣ್ಣ ಬರುವ ಉದ್ದೇಶಕ್ಕಾಗಿ, ಕೃತಕ ಮತ್ತು ರಾಸಾಯನಿಕ ಬಣ್ಣಗಳನ್ನು ಸಹ ಬೆರೆಸುತ್ತಾರೆ! ಆದರೆ, ಕೆಲವು ಕಡೆ ಯಾವುದೇ ರಾಸಾಯನಿಕ ಬಳಸದೇ, ಸಕ್ಕರೆಯನ್ನು ಮಿಶ್ರಣ ಮಾಡದೇ ಬೆಲ್ಲ ತಯಾರಿಸುತ್ತಾರೆ. ಈಚಿನ ದಿನಗಳಲ್ಲಿ ಸಾವಯವ ಬೆಲ್ಲ ತಯಾರಿಕೆ ಹೆಚ್ಚು ಜನಪ್ರಿಯಗೊಂಡಿದ್ದು, ಶುದ್ಧ ಕಬ್ಬಿನ ರಸದಿಂದ ಬೆಲ್ಲವನ್ನು ತಯಾರಿಸಿ, ಎಲ್ಲಾ ಕಡೆ ಮಾರಾಟಕ್ಕೆ ಒದಗಿಸುವ ಪದ್ಧತಿ ಜಾರಿಗೆ ಬಂದಿದೆ ಮತ್ತು ಅಷ್ಟರ ಮಟ್ಟಿಗೆ, ಅದನ್ನು ಸೇವಿಸುವ ಜನರ ಆರೋಗ್ಯಕ್ಕೆ ಧಕ್ಕೆಯಾಗಿಲ್ಲ.
ಆದರೆ, ಈ ರೀತಿಯ ಉತ್ತಮ ಬೆಲ್ಲಕ್ಕೆ ಬೆಲೆ ಜಾಸ್ತಿ. ಆದ್ದರಿಂದ, ಹಲವರು ಆಕರ್ಷಕ ಬಣ್ಣ ಹೊಂದಿರುವ, ತುಸು ಕಡಿಮೆ ಬೆಲೆಗೆ ದೊರಕುವ ಬಿಳಿ ಬೆಲ್ಲವನ್ನೇ ಖರೀದಿಸುತ್ತಾರೆ. ಸಾವಯವ ಬೆಲ್ಲವಾಗಲೀ, ಬಿಳಿ ಬೆಲ್ಲವಾಗಲೀ ಮಧುಮೇಹಿಗಳಿಗೆ ತೊಂದರೆಯೇ. ಅವರು, ಎಲ್ಲಾ ಬೆಲ್ಲಗಳಿಂದ ದೂರವಿರುವುದು ಕ್ಷೇಮ. ಈ ನಿಟ್ಟಿನಲ್ಲಿ ಕಂಡರೆ, ಮಧುಮೇಹದ ಸಮಸ್ಯೆ ಇರುವವರು ‘ಶುಗರ್ ಲೆಸ್ ಕಾಫಿ’ಯನ್ನು ಕೇಳಿ ಪಡೆಯುವುದು ಸೂಕ್ತ ಎಂದೆನ್ನಬಹುದು.
ಆದರೆ, ನಮ್ಮ ರಾಜ್ಯದಲ್ಲಿ ಇತ್ತೀಚೆಗೆ ರೂಢಿಗೆ ಬಂದಿರುವ ಆಹಾರ ತಯಾರಿಕಾ ಪದ್ಧತಿಯಲ್ಲಿ, ಮುಖ್ಯವಾಗಿ ಹೋಟೆಲ್‌ಗಳಲ್ಲಿ, ರುಚಿಗಾಗಿ ಕೆಲವು ಬಗೆಯ ಸಾಂಬಾರಿಗೆ ಬೆಲ್ಲ ಸೇರಿಸುವುದು ಸಾಮಾನ್ಯ ಎನಿಸಿದೆ. ಅದರಲ್ಲೂ ಮುಖ್ಯವಾಗಿ, ಇಡ್ಲಿ, ವಡೆಯ ಜತೆ ನೀಡುವ ಸಾಂಬಾರಿಗೆ ಹೆಚ್ಚಿನ ರೆಸ್ಟೋರೆಂಟ್ ಗಳಲ್ಲಿ ಬೆಲ್ಲ ಸೇರಿಸುವುದು ಸಾಮಾನ್ಯ ಎನಿಸಿದೆ. ಆದ್ದರಿಂದ, ‘ಸಕ್ಕರೆ ರಹಿತ ಕಾಫಿ’ ವ್ರತ ಹಿಡಿದಿರುವ ಸಜ್ಜನರೇ, ಗಮನಿಸಿ: ನೀವು ದರ್ಶಿನಿಗಳಲ್ಲಿ, ಹೆಚ್ಚಿನ ಹೋಟೆಲ್‌ಗಳಲ್ಲಿ, ಪದೇ ಪದೆ ಇಡ್ಲಿ-ಸಾಂಬಾರ್ ಸೇವಿಸುತ್ತಿದ್ದರೆ, ಅದರಿಂದ ಒಂದಷ್ಟು ಗ್ರಾಂ ಸಕ್ಕರೆ (ಬೆಲ್ಲ)ಯನ್ನು ಅರಿವಿಲ್ಲದೇ ಸೇವಿಸುತ್ತಿದ್ದೀರಿ!
ಕೆಲವರ ಮನೆಗಳಲ್ಲೂ ಸಾಂಬಾರು, ಸಾರಿಗೆ ಬೆಲ್ಲ ಸೇರಿಸುವ ಪದ್ಧತಿ ಇದ್ದು, ಅದು ಮಧಮೇಹಿಗಳ ‘ವ್ರತ’ವನ್ನು ಹಾಳು ಮಾಡುತ್ತಿದೆ! ‘ಸಕ್ಕರೆ ಕಾಯಿಲೆ’ ಇರುವವರು ಸಕ್ಕರೆ ಮತ್ತು ಬೆಲ್ಲ ರಹಿತ ಕಾಫಿ ಕುಡಿಯುತ್ತಿರುವುದರಿಂದ, ರೆಸ್ಟೋರೆಂಟ್‌ಗಳಲ್ಲಿ ಅಂಥ ವ್ಯವಸ್ಥೆ ಮಾಡಿದ್ದಾರೆ. ಅದೇ ರೀತಿ, ಶುಗರ್‌ಲೆಸ್ ಸಾಂಬಾರ್, ಶುಗರ್‌ಲೆಸ್ ತಿಳಿಸಾರನ್ನು ಸಹ ತಾವು ಒದಗಿಸುತ್ತಿದ್ದೇವೆ ಎಂದು ರೆಸ್ಟೋರೆಂಟಿನವರು, ದರ್ಶಿನಿಯವರು ಘೋಷಿಸಿ, ಅಂಥದೊಂದು ವ್ಯವಸ್ಥೆ ಮಾಡಿಕೊಡುವುದು ಇಂದಿನ ದಿನಗಳ ಅಗತ್ಯ ಎನಿಸಿದೆ.
ಇದರಿಂದ ಡಯಾಬಿಟಿಸ್ ಇರುವವರಿಗೆ ಅನುಕೂಲ. ಬೆಂಗಳೂರು, ಮೈಸೂರು ಮೊದಲಾದ ನಗರಗಳಲ್ಲಿ, ರಜಾದಿನಗಳಲ್ಲಿ, ಇತರ ದಿನಗಳಲ್ಲಿ ಸಾಕಷ್ಟು ಮಂದಿ ಹೋಟೆಲ್, ರೆಸ್ಟೋರೆಂಟ್ ಗಳಲ್ಲೇ ಆಹಾರ ಸೇವಿಸುವ ಪದ್ಧತಿ, ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ಆಹಾರವನ್ನು ಮನೆಗೆ ತರಿಸಿಕೊಳ್ಳುವ ಪದ್ಧತಿ ಸಾಮಾನ್ಯ ಎನಿಸಿದೆ.
ಅಂಥವರು, ಸಾಂಬಾರಿನ ಜತೆ, ತಮಗೇ ಗೊತ್ತಿಲ್ಲದೆ ಸಾಕಷ್ಟು ಬೆಲ್ಲವನ್ನು ಸೇವಿಸುತ್ತಿದ್ದಾರೆ. ಇದು ಮಧುಮೇಹಿಗಳಿಗೆ, ಡಯಾಬಿಟಿಸ್ ಬಾರ್ಡರ್ ಲೈನ್‌ನಲ್ಲಿರುವವರಿಗೆ ಆರೋಗ್ಯದ ಸಮಸ್ಯೆಯನ್ನು ಉಂಟುಮಾಡಬಹುದು. ಆದ್ದರಿಂದ, ಸಾಂಬಾರಿಗೆ ಬೆರೆಸುವ ಬೆಲ್ಲದ ಪ್ರಮಾಣವನ್ನು ಮಿತಗೊಳಿ ಸಲು ಎಲ್ಲಾ ರೆಸ್ಟೋರೆಂಟ್, ದರ್ಶಿನಿಗಳವರು ಮನಸ್ಸು ಮಾಡುವುದು ಉತ್ತಮ ಎಂದೇ ಹೇಳಬಹುದು.