ಅಭಿವೃದ್ಧಿ ಮತ್ತು ಆರ್ಥಿಕ ಕೊರತೆಗಳ ನಡುವೆ ಜಟಾಪಟಿ !
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಯೋಜನೆಗಳಿಗೆ ಹಣವಿಲ್ಲದಂತಾಗಿದೆ. ಅಭಿವೃದ್ಧಿ ಬೇಕಾದರೆ ಗ್ಯಾರಂಟಿ ಯೋಜನೆಗಳನ್ನು ಕೈ ಬಿಡಬೇಕು ಎನ್ನುವ ಚರ್ಚೆ ಸರಕಾರ ಮತ್ತು ಕಾಂಗ್ರೆಸ್‌ನಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ಅಂದರೆ ಈ ಚರ್ಚೆಗಳು ಈಗ ಅಭಿವೃದ್ಧಿ ಬೇಕಾ ಅಥವಾ ಗ್ಯಾರಂಟಿ ಬೇಕಾ ಎನ್ನುವ ಹಂತಕ್ಕೆ ಬಂದಿವೆ.
-
ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಗ್ಯಾರಂಟಿಗಳಿಗೆ ಅನುದಾನ ಒದಗಿಸಲು ಸರಕಾರಕ್ಕೆ ತೆರಿಗೆ ಹೆಚ್ಚಳದ ಅನಿವಾರ್ಯತೆ
17ನೇ ಬಾರಿ ಬಜೆಟ್ ಮಂಡಿಸುವ ಮೂಲಕ ದಾಖಲೆ ಬರೆದಿರುವ ಮುಖ್ಯಮಂತ್ರಿ ಸಿದ್ದರಾ ಮಯ್ಯ 2026-27ರ ಸಾಲಿನ ತಮ್ಮ ಬಜೆಟ್‌ನಲ್ಲಿ ಆರ್ಥಿಕ ಅಪಾಯಗಳ ನಡುವೆಯೂ ಅಭಿವೃದ್ಧಿಯ ಪ್ರಸ್ತಾಪ ಮುಂದಿಟ್ಟಿರುವುದು ಅಚ್ಚರಿ ತಂದಿದೆ.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಯೋಜನೆಗಳಿಗೆ ಹಣವಿಲ್ಲದಂತಾಗಿದೆ. ಅಭಿವೃದ್ಧಿ ಬೇಕಾದರೆ ಗ್ಯಾರಂಟಿ ಯೋಜನೆಗಳನ್ನು ಕೈ ಬಿಡಬೇಕು ಎನ್ನುವ ಚರ್ಚೆ ಸರಕಾರ ಮತ್ತು ಕಾಂಗ್ರೆಸ್‌ನಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ಅಂದರೆ ಈ ಚರ್ಚೆಗಳು ಈಗ ಅಭಿವೃದ್ಧಿ ಬೇಕಾ ಅಥವಾ ಗ್ಯಾರಂಟಿ ಬೇಕಾ ಎನ್ನುವ ಹಂತಕ್ಕೆ ಬಂದಿವೆ.
ಇಂಥ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಮಾರು 4,87,004 ಕೋಟಿ ರು. ಗಾತ್ರದ ಬಜೆಟ್ ಮಂಡಿಸಿದ್ದಾರೆ. ಇದರ ಮೂಲಕ ರಾಜ್ಯದಲ್ಲಿ ಆರೋಗ್ಯ, ಶಿಕ್ಷಣ, ಸಮಾಜ ಸೇವೆ ಸೇರಿದಂತೆ ಅನೇಕ ಸೇವೆಗಳಿಗೂ ಹಣ ಹೊಂದಿಸಿ ಅಭಿವೃದ್ಧಿ ಯನ್ನೂ ಸಾಧಿಸಲಾಗುತ್ತದೆ ಎಂದಿದ್ದಾರೆ. ಹಾಗೆಯೇ ಹೆಚ್ಚು ಟೀಕೆ ಮತ್ತು ಚರ್ಚೆಗೆ ಕಾರಣವಾಗಿರುವ ಗ್ಯಾರಂಟಿ ಯೋಜನೆಯನ್ನೂ ಮುಂದುವರಿಸುವುದಾಗಿ ಪ್ರಕಟಿಸಿದ್ದಾರೆ.
ಈ ಗ್ಯಾರಂಟಿಗಾಗಿ ಈಗಾಗಲೇ ಸುಮಾರು 1.21ಲಕ್ಷ ಕೋಟಿ ರು.ಗಳನ್ನು ವೆಚ್ಚ ಮಾಡಲಾ ಗಿದ್ದು ಇದನ್ನು ಮುಂದಿನ ವರ್ಷಗಳಲ್ಲಿ ಹೆಚ್ಚಿಸುವ ಸಾಧ್ಯತೆ ಇದೆ. ಆದರೆ ಬಜೆಟ್ ಪ್ರಕಾರ ಅಭಿವೃದ್ಧಿ ಮತ್ತು ಗ್ಯಾರಂಟಿ ಎರಡೂ ತೊಂದರೆ ಇಲ್ಲದೆ ನಡೆಯಲಿದ್ದು, ಇದೆಲ್ಲದಕ್ಕೂ ಎಲ್ಲಿಂದ ಸಂಪನ್ಮೂಲ ಹೊಂದಿಸುವುದು ಎನ್ನುವ ಅಚ್ಚರಿಯ ಪ್ರಶ್ನೆ ಹುಟ್ಟು ಹಾಕಿದೆ.
ವಾಸ್ತವದಲ್ಲಿ ಎಲ್ಲಾ ಆರ್ಥಿಕ ಮೂಲಗಳು ಸಮೃದ್ಧವಾಗಿದ್ದಾಗಲೇ ಅಭಿವೃದ್ಧಿ ಯೋಜನೆ ಗಳಿಗೆ ಅನುದಾನ ಕೊರತೆ ಉಂಟಾಗಿತ್ತು. ಇನ್ನು ರಾಜ್ಯದ ತೆರಿಗೆ ಮೂಲಗಳು ಕೈ ಕೊಟ್ಟಾಗ, ಕೇಂದ್ರದ ಅನುದಾನ ನೆರವಿನ ಮೂಲಗಳು ಬತ್ತಿದಾಗ ಮತ್ತು ಸಾಲದ ಹೊರೆ ಹೆಚ್ಚಾಗಿ ಆರ್ಥಿಕ ಶಿಸ್ತು ದಿಕ್ಕು ತಪ್ಪುವ ಸೂಚನೆ ಸಿಕ್ಕಿರುವ ನಡುವೆ ಗ್ಯಾರಂಟಿ ಮತ್ತು ಅಭಿವೃದ್ದಿ ಎರಡನ್ನೂ ನಿಭಾಯಿಸುವುದು ಹೇಗೆ ಎನ್ನುವುದು ಅಚ್ಚರಿ ಮೂಡಿಸಿದೆ.
ಅಷ್ಟೇ ಅಲ್ಲ. ಬಜೆಟ್ ನಲ್ಲಿ ಪ್ರಸ್ತಾಪಿಸಿರುವ ಆರ್ಥಿಕ ಸ್ಥಿತಿ ಇದೇ ರೀತಿ ಮುಂದುವರಿಸಿದರೆ ಗ್ಯಾರಂಟಿ ಅಥವಾ ಅಭಿವೃದ್ಧಿ ಯೋಜನೆಗಳ ಮೇಲೆ ಆರ್ಥಿಕ ಅಪಾಯಗಳು ಪರಿಣಾಮ ಬೀರಬಹುದು ಎಂದು ಹೇಳಲಾಗಿದೆ.
ಬಜೆಟ್ ನಲ್ಲಿ ಹೆಚ್ಚು ಪ್ರಸ್ತಾಪಿಸಿರುವಂತೆ ಕೇಂದ್ರ ಸರಕಾರ ಮಧ್ಯಂತರ ಆರ್ಥಿಕ ವರ್ಷ ದಲ್ಲಿ ಜಿಎಸ್‌ಟಿಯಲ್ಲಿ ಕೆಲವು ಬದಲಾವಣೆ ತಂದಿದ್ದರಿಂದ ರಾಜ್ಯದ ಆದಾಯ ಕೋಟಿ ಸಂಗ್ರಹದಲ್ಲಿ ಮುಂದಿನ ವರ್ಷದ ವೇಳೆಗೆ 15000 ಕೋಟಿ ರು. ವರೆಗೂ ಕೊರತೆಯಾಗುವ ಸೂಚನೆ ಇದೆ. 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ನೀಡಬೇಕಿದ್ದ 5495 ರು.ಗಳ ವಿಶೇಷ ಅನುದಾನವು ಇಲ್ಲದಂತಾಗಿದೆ.
ಹಾಗೊಂದು ವೇಳೆ ಇದನ್ನು ಸರಕಾರ ಸಾಧಿಸಬೇಕಾದರೆ ಆರ್ಥಿಕ ವರ್ಷದ ಮಧ್ಯಂತರ ದಲ್ಲಿ ರಾಜ್ಯ ವ್ಯಾಪ್ತಿಯ ಅಬಕಾರಿ, ಮೋಟಾರ್ ವಾಹನ, ಆಸ್ತಿ ನೋಂದಣಿ ಸೇರಿದಂತೆ ವಿವಿಧ ತೆರಿಗೆಗಳನ್ನು ಹೆಚ್ಚಿಸಬೇಕಾಗುತ್ತದೆ. ಈ ಸಾಧ್ಯತೆಯನ್ನು ಸರಕಾರ ಎಲ್ಲಿಯೂ ತಳ್ಳಿ ಹಾಕಿಲ್ಲ. ಹಾಗೆಯೇ ಗ್ಯಾರಂಟಿಗೆ ಕಡಿವಾಣ ಹಾಕಿ ಅದರಿಂದಾಗುತ್ತಿರುವ ಹೊರೆಯನ್ನೂ ಕಡಿಮೆ ಮಾಡಿಕೊಳ್ಳಬೇಕಾಗುತ್ತದೆ. ಇದನ್ನು ಕೂಡ ಸರಕಾರ ನಿರಾಕರಿಸುತ್ತಿಲ್ಲ.
ಹೀಗಾಗಿ ರಾಜ್ಯದಲ್ಲಿ ಮುಂದಿನ ಆರ್ಥಿಕ ವರ್ಷದಲ್ಲಿ ಅಭಿವೃದ್ದಿ ಮತ್ತು ಗ್ಯಾರಂಟಿ ಎರಡೂ ಅನೇಕ ಸಮಸ್ಯೆ ಮತ್ತುಸವಾಲುಗಳೊಂದಿಗೆ ಮುಂದುವರಿಯುವ ಸಾಧ್ಯತೆ ಇದೆ ಎನ್ನುವುದನ್ನು ಬಜೆಟ್ʼನಲ್ಲಿ ವ್ಯಕ್ತವಾಗಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.
ವಿತ್ತೀಯ ಕೊರತೆ ಗೆದ್ದ ಸಿಎಂ
ಮುಂದಿನ ಆರ್ಥಿಕ ವರ್ಷದಲ್ಲಿ ಸುಮಾರು 22,957 ಕೋಟಿ ರು.ಗಳ ಆದಾಯ ಕೊರತೆ ಉಂಟಾಗುವುದರಿಂದ ವಿತ್ತೀಯ ಕೊರತೆ ಸುಮಾರು 97,449 ಕೋಟಿ ವರೆಗೂ ಏರಿಕೆ ಯಾಗಬಹುದು ಎಂದು ಬಜೆಟ್ʼನಲ್ಲಿ ಅಂದಾಜಿಸಲಾಗಿದೆ.
ಇದು ಜಿಎಸ್‌ಡಿಪಿಯ ಶೇ.2.95 ರಷ್ಟಿದೆ. ಇದರೊಂದಿಗೆ ರಾಜ್ಯ ಆರ್ಥಿಕ ಹೊಣೆಗಾರಿಕೆ ಕಾಯ್ದೆಯ ನಿಯಮವನ್ನು ಪಾಲಿಸಿದಂತಾಗಿದೆ ಎಂದು ಸಮಾಧಾನ ಮಾಡಿಕೊಳ್ಳಬಹುದು. ಆದರೆ ವಿತ್ತೀಯ ಕೊರತೆಯ ನಿಯಮ ಮೀರುವ ತುತ್ತ ತುದಿಯ ಹಂತಕ್ಕೆ ಬಂದಿರುವ ಕಾರಣ ಮುಂದಿನ ಆರ್ಥಿಕ ಪರಿಸ್ಥಿತಿಗಳು ಅಷ್ಟ ಕಠಿಣವಾಗಲಿದ್ದು, ಇದನ್ನು ನಿಭಾಯಿಸು ವುದು ತೀರಾ ಕಷ್ಟಾಗಲಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.
ಸಾಲ ತೋರಿದ ಸುಲಭ ಮಾರ್ಗ
ಕಳೆದ ವರ್ಷ ಎಲ್ಲಾ ಮೂಲಗಳಿಂದ ಸರಕಾರ ಸುಮಾರು 3.93 ಲಕ್ಷ ಕೋಟಿ ರು.ಗಳ ಆದಾಯ ನಿರೀಕ್ಷಿಸಿ ಅದರಲ್ಲೂ ಆದರೆ ಅದರಲ್ಲಿ 2.77 ಲಕ್ಷ ಕೋಟಿ ರು.ಗಳು ಮಾತ್ರ ಸಂಗ್ರಹವಾಗಿದೆ. ಇದರಲ್ಲಿ 1.32 ಲಕ್ಷ ಕೋಟಿ ರು. ಗಳನ್ನು ಸಾಲದಿಂದಲೇ ಸಂಗ್ರಹಿಸ ಲಾಗುತ್ತಿದ್ದು, ಕೇವಲ 190 ಕೋಟಿ ರು.ಗಳನ್ನು ಸಾಲವಲ್ಲದ ಮೂಲಗಳಿಂದ ಕ್ರೋಢೀ ಕರಿಸುವ ಲೆಕ್ಕಾಚಾರ ಮಾಡಲಾಗಿದೆ. ಹೀಗಾದ್ದರೂ ಮುಂದಿನ ಆರ್ಥಿಕ ವರ್ಷ ದಲ್ಲಿ ಎಲ್ಲಾ ಮೂಲಗಳಿಂದ ಸುಮಾರು 4.47 ಲಕ್ಷ ಕೋಟಿ ರು. ಆದಾಯ ಸಂಗ್ರಹಿಸಿ ವಿವಿಧ ಸೇವಾ ಯೋಜನೆಗಳೂ ಸೇರಿದಂತೆ ಅಭಿವೃದ್ಧಿಗೆ 4.87ಲಕ್ಷ ಕೋಟಿ ರು. ವೆಚ್ಚ ಮಾಡುವು ದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಕಟಿಸಿದ್ದಾರೆ.
ಇದರ ಮಧ್ಯೆ ಯೂ ಮುಂದಿನ ಆರ್ಥಿಕ ವರ್ಷದಲ್ಲಿ 3.15 ಲಕ್ಷ ಕೋಟಿ ರು.ಗಳ ಗುರಿ ಹೊಂದಲಾಗಿದೆ. ಇದರಿಂದ ವಿವಿಧ ಸೇವೆಗಳಿಗೆಂದೇ ಸುಮಾರು 33.80 ಲಕ್ಷ ಕೋಟಿ ರು.ಗಳನ್ನು ವೆಚ್ಚ ಮಾಡಲು ನಿಶ್ಚಯಿಸಲಾಗಿದೆ. ಆದರೆ ಈ ವೆಚ್ಚದಿಂದ ಮುಂದಿನ ಆರ್ಥಿಕ ವರ್ಷ ದಲ್ಲಿ ಸುಮಾರು 22,957 ಕೋಟಿ ರು. ಕೊರತೆ ಉಂಟಾಗಲಿದೆ. ಹೀಗಾಗಿ ಸರಕಾರ ಸಾಲಗಳ ಮರುಪಾವತಿಗೂ ಸುಮಾರು 1,09,998 ಕೋಟಿ ರು. ಗಳನ್ನು ಕ್ರೋಢೀಕರಿಸ ಬೇಕಾಗಿದೆ. ಅಂದರೆ ಮುಂದೆ ಎದುರಾಗಬಹುದಾದ ಆರ್ಥಿಕ ಸಂಕಷ್ಟಗಳನ್ನು ಸಾಲದ ಮೂಲಕವೇ ಸರಿದೂಗಿಸಬೇಕಾದ ದೊಡ್ಡ ಸವಾಲು ಸರಕಾರದ್ದಾಗಿದೆ.