Dr N Someshwara Column: ಆ ದೆವ್ವ‌ ಗೊತ್ತಿಲ್ಲ ! ಈ ದೆವ್ವ ಇರುವುದಂತೂ ನಿಜ !

ಇಂಥ ಸಂದರ್ಭದಲ್ಲಿ ಈ ಪ್ರಚೋದಕಗಳಿಗೆ ಮೊದಲು ಚಿಕಿತ್ಸೆಯನ್ನು ಕೊಡಬೇಕಾಗುತ್ತದೆ. ವೇದನೆಯು ನಿದ್ರೆಯಲ್ಲೂ ಕಾಡಲಾರಂಭಿಸಿದರೆ ಬದುಕು ಬಹಳ ಕಷ್ಟವಾಗುತ್ತದೆ. ನಿದ್ರೆಯಿಲ್ಲದಿದ್ದರೆ ಹಗಲಿನಲ್ಲಿ ದೈನಂದಿನ ಕೆಲಸಗಳನ್ನು ಮಾಡಲು ಕಷ್ಟವಾಗಿ ಸಮಸ್ಯೆಯು ಮತ್ತಷ್ಟು ತೀವ್ರ

image-1600e269-0948-4929-8e10-6127344063a3.jpg
Profile Vishwavani News January 8, 2025
ಹಿಂದಿರುಗಿ ನೋಡಿದಾಗ
ಡಾ.ನಾ.ಸೋಮೇಶ್ವರ
ದೆವ್ವ-ಭೂತಗಳು ಇಲ್ಲ’ ಎಂದು ನಾನು ಹೇಳಿದರೆ ನೀವು ನಂಬುತ್ತೀರಿ, ‘ಇವೆ’ ಎಂದರೆ ನೀವು ನಂಬಲಾರಿರಿ. ಆದರೆ ಈಗ ನಾವು ತಿಳಿಯ ಹೊರಟಿರುವ ಭೂತದ ಕಥೆಯು ಸುಳ್ಳಲ್ಲ, ಕಲ್ಪನೆಯಲ್ಲ, ಕಟುವಾಸ್ತವ!
ನಮ್ಮ ಅವಯವಗಳು ಅಪಘಾತಕ್ಕೆ ತುತ್ತಾದಾಗ, ಕ್ಯಾನ್ಸರ್ ಮುಂತಾದ ಕಾಯಿಲೆಗಳು ಬಂದಾಗ ಇಲ್ಲವೇ ಯುದ್ಧದಲ್ಲಿ ಗಾಯಗೊಂಡಾಗ ಕೈಕಾಲುಗಳನ್ನು ಛೇದಿಸಬೇಕಾದ ಪ್ರಸಂಗ ಗಳು ಬರಬಹುದು. ಒಂದು ಸಲ ಕಾಲನ್ನು ಛೇದಿಸಿದ ಮೇಲೆ, ಆತ ತನ್ನ ಆ ಅಂಗವನ್ನು ಸದಾ ಕಾಲಕ್ಕೂ ಕಳೆದುಕೊಳ್ಳುತ್ತಾನೆ. ಆದರೆ ಆತನಿಗೆ ತನ್ನ ಕಾಲು ಇನ್ನೂ ಇದೆ, ಅದು ನೋಯುತ್ತಿದೆ, ನವೆಯಾಗುತ್ತಿದೆ, ಅದನ್ನು ಕೆರೆಯಬೇಕೆನ್ನಿಸುತ್ತದೆ ಎಂದರೆ ಅದನ್ನು ನಿಜ ಎಂದು ಭಾವಿಸುವಿರಾ? ಈ ಇಲ್ಲದ ಕಾಲು ನವೆಯಾಗುವುದನ್ನು ಹಾಗೂ ನೋಯುವುದನ್ನು ನಂಬಲೇ ಬೇಕು ಇದನ್ನು ‘ಫ್ಯಾಂಟಮ್ ಲಿಂಬ್ ಪೇಯ್ನ್’ ಎಂದು ಕರೆಯುತ್ತಾರೆ.
ಫ್ಯಾಂಟಮ್ ಎಂದರೆ ಇಲ್ಲದಿರುವ ಭೂತವನ್ನು ಇರುವಂತೆ ತೋರಿಸುವ ಸ್ಥಿತಿ ಎಂದರ್ಥ. ಹಾಗಾಗಿ ಕನ್ನಡದಲ್ಲಿ ಇದನ್ನು ‘ಭ್ರಮಾಜನಿತಅಂಗವೇದನೆ’ ಎಂದು ಅನುವಾದಿಸಬಹುದು. ಭ್ರಮಾಜನಿತ ಅಂಗವೇದನೆಯ ಬಗ್ಗೆ ಮೊದಲ ಬಾರಿಗೆ ಫ್ರೆಂಚ್ ಶಸ್ತ್ರವೈದ್ಯ ಆಂಬ್ರೋಸ್ ಪ್ಯಾರೆ (1510-1590) ವರ್ಣಿಸಿದ. ಅವಯವ ಛೇದನಕ್ಕೆ ಒಳಗಾದ ಅವನ ರೋಗಿಗಳು, ಛೇದಿಸಲ್ಪಟ್ಟ ಅಂಗವು ವಿಪರೀತ ನೋಯುತ್ತಿರುವುದಾಗಿ ಪ್ಯಾರೆಗೆ ದೂರಿದರು. ಕತ್ತರಿಸಿ ಎಸೆದ ಅಂಗವು ನೋಯುತ್ತಿದೆ ಎಂದರೆ ಅದನ್ನು ಹೇಗೆ ತಾನೆ ನಂಬಲು ಸಾಧ್ಯ? ಬಹುಶಃ ಈ ನೋವು ಮನೋಜನ್ಯವಾಗಿರಬೇಕೆಂದು ಪ್ಯಾರೆ ನಿರ್ಲಕ್ಷಿಸಿದ. ಅಮೆರಿಕದ ಅಂತರ್ಯುದ್ಧವು (ಅಮೆರಿಕನ್ ಸಿವಿಲ್ ವಾರ್) 1861ರಿಂದ 1865ರವರೆಗೆ ನಡೆಯಿತು.
ಈ ಯುದ್ಧದಲ್ಲಿ ಅಮೆರಿಕದ ಶೇ.2ರಷ್ಟು ಜನರು, ಅಂದರೆ ಸರಿಸುಮಾರು 8 ಲಕ್ಷ ಜನರು ಮರಣಿಸಿದರು. ಹಾಗೆಯೇ ಸುಮಾರು 475000 ಜನರು ನಾನಾ ರೀತಿಯ ಗಾಯಗಳ ಕಾರಣ ಅಂಗವಿಕಲರಾದರು. ಈ ಅವಧಿಯಲ್ಲಿ ಅಂಗಛೇದನಕ್ಕೆ ಒಳಗಾಗಿದ್ದ ಸೈನಿಕರು, ದೊಡ್ಡ ಪ್ರಮಾಣದಲ್ಲಿ ಭ್ರಮಾಜನಿತ ಅಂಗವೇದನೆಯ ಬಗ್ಗೆ ದೂರಲಾರಂಭಿಸಿದರು. ಆಗ ಸೈಲಾಸ್ ವೀರ್ ಮಿಚೆಲ್ ಎಂಬ ವೈದ್ಯನು ಈ ಸ್ಥಿತಿಗೆ ‘ಫ್ಯಾಂಟಮ್ ಲಿಂಬ್ ಪೇಯ್ನ್’ ಎಂದು ಮೊದಲ ಬಾರಿಗೆ ನಾಮಕರಣ ಮಾಡಿದ. ಆಗಲೂ, ಸಮಕಾಲೀನ ವೈದ್ಯರು ಈ ನೋವನ್ನು ಮನೋಜನ್ಯವೆಂದೇ ಭಾವಿಸಿದರು. ವಿಶ್ವದ ಎರಡನೆಯ ಮಹಾಯುದ್ಧದಲ್ಲಿ ಅಮೆರಿಕದ 15000 ಸೈನಿಕರು ತಮ್ಮ ಅಂಗಾಂಗಗಳನ್ನು ಕಳೆದುಕೊಂಡರು. ಜನವರಿ 1, 2018ರ ವೇಳೆಗೆ, ಇರಾಕ್ ಮತ್ತು ಅಫ್ಘಾನಿಸ್ತಾನದ ಯುದ್ಧದಲ್ಲಿ 1718 ಸೈನಿಕರು ತಮ್ಮ ಕೈಕಾಲುಗಳನ್ನು ಕಳೆದುಕೊಂಡರು.
ಇವರಲ್ಲಿ ಅಂಗಛೇದನಕ್ಕೊಳಗಾದ ಶೇ.80ರಿಂದ 100ರವರೆಗಿನ ಜನರು ಒಂದಲ್ಲ ಒಂದು ರೀತಿಯ ಭ್ರಮಾಜನಿತ ಅಂಗವೇದನೆಯನ್ನು ಅನುಭವಿಸಲಾರಂಭಿಸಿದರು. ಹಾಗಾಗಿ ಈ ನೋವು ಮನೋಜನ್ಯವಾದುದಲ್ಲ, ದೇಹದಲ್ಲಿಯೇ ಹುಟ್ಟುತ್ತಿರಬೇಕು ಎಂಬ ತೀರ್ಮಾನಕ್ಕೆ ವೈದ್ಯರುಬಂದರು, ತಮ್ಮ ಅಧ್ಯಯನ ಮತ್ತು ಸಂಶೋಧನೆಯನ್ನು ತೀವ್ರಗೊಳಿಸಿದರು. ಡೆಡ್ಲೊ ಕಥೆ: 1866. ಅಮೆರಿಕದ ‘ಅಟ್ಲಾಂಟಿಕ್ ಮಂಥ್ಲಿ’ಪತ್ರಿಕೆಯಲ್ಲಿ ಜಾರ್ಜ್ ಡೆಡ್ಲೋ ಎಂಬುವವನು ಬರೆದ ಕಥೆಯೊಂದು ಪ್ರಕಟವಾಯಿತು. ಕಥಾನಾಯಕ ಜಾರ್ಜ್ ಡೆಡ್ಲೋ ಎಂಬ ಯುವವೈದ್ಯ. ಈತ ತನ್ನ ವೈದ್ಯಕೀಯ ಶಿಕ್ಷಣ ವನ್ನು ಪೂರ್ಣಗೊಳಿಸಿದ ನಂತರ ಅಮೆರಿಕದ ಸೈನ್ಯವನ್ನು ಸೇರಿದ. ಸೈನ್ಯವು ಅವನನ್ನು ಸಮರಾಂಗಣದ ಮುಂಚೂಣಿಗೆ ಕಳುಹಿಸಿತು. ಅವನು ಯುದ್ಧದ ತೀವ್ರತಯನ್ನು ಕಣ್ಣಾರೆ ಕಂಡ. ಶತ್ರುಗಳು ಗುಂಡಿನ ಮಳೆಗರೆದರು.
ಡೆಡ್ಲೋ ತೀವ್ರವಾಗಿ ಗಾಯಗೊಂಡ. ವೈದ್ಯರು ಅವನ ಎರಡೂ ಕೈಗಳನ್ನು ಹಾಗೂ ಎರಡೂ ಕಾಲುಗಳನ್ನು ಛೇದಿಸಿದರು. ಈಗ ಡೆಡ್ಲೋಒಂದು ಮರದ ದಿಮ್ಮಿಗೆ ಸಮನಾದ! ಕುಳಿತೆಡೆಯಿಂದ ಒಂದು ಇಂಚೂ ಅಲುಗಾಡಲಾರ, ಮತ್ತೊಬ್ಬರ ನೆರವಿಲ್ಲದೆ ಊಟ, ತಿಂಡಿ, ಸ್ನಾನವನ್ನು ಮಾಡಲಾರ. ಉಡುಗೆ, ತೊಡುಗೆಗಳನ್ನು ಧರಿಸಲಾರ. ಮಲಮೂತ್ರಗಳನ್ನೂ ಮತ್ತೊಬ್ಬರ ನೆರವಿನಿಂದಲೇ ವಿಸರ್ಜಿಸಬೇಕು. ಇಂಥ ದುಃಸ್ಥಿತಿಯಲ್ಲಿ ಅವನನ್ನು ಭ್ರಮಾಜನಿತ ಅಂಗವೇದನೆಯು ತೀವ್ರ ಸ್ವರೂಪದಲ್ಲಿ ಕಾಡಲಾರಂಭಿಸಿತು. ಇಲ್ಲದ ಕೈಕಾಲುಗಳಲ್ಲಿ ಉಗ್ರ ಸ್ವರೂಪದನೋವು ಕಾಣಿಸಿಕೊಂಡಿತು. ಈ ನೋವನ್ನು ಶಮನ ಮಾಡುವಂಥ ಔಷಧವೇ ಇಲ್ಲ! ಕಾಲಿನಲ್ಲಿ ಕಂಡುಬರುವ ವಿಪರೀತ ನವೆಯನ್ನು ಕೆರೆದು ಕಡಿಮೆ ಮಾಡೋಣ ಎಂದರೆ ಕಾಲೇ ಇಲ್ಲ! ತಾನು ಪ್ರತ್ಯಕ್ಷ ನರಕದಲ್ಲಿದ್ದೇನೆ, ತನಗೆ ಇಲ್ಲಿಂದ ಬಿಡುಗಡೆ ಇಲ್ಲವೇ ಎಂಬ ಅಳಲನ್ನು ಡೆಡ್ಲೋ ತನ್ನ ಕಥೆಯಲ್ಲಿ ತೋಡಿಕೊಂಡ.
ಡೆಡ್ಲೋ ಕಥೆಯನ್ನು ಓದುತ್ತಿರುವಂತೆಯೇ ಅಮೆರಿಕನ್ನರು ವಿಚಲಿತರಾದರು. ನಾಲ್ಕೂ ಅವಯವಗಳಿಲ್ಲದ ಅಸಹಾಯಕನಿಗೆ ಭ್ರಮಾಜನಿತ ಅಂಗವೇದನೆಯು ಕಾಡುತ್ತಿರುವ ಬಗ್ಗೆ ತೀವ್ರ ಕಳವಳಗೊಂಡರು. ಮಮ್ಮಲ ಮರುಗಿದರು. ಒಂದು ಕಥೆಯು ಇಡೀ ಅಮೆರಿಕನ್ನರಿಗೆ ಭ್ರಮಾಜನಿತ ನೋವಿನ ಉಗ್ರ ಸ್ವರೂಪವನ್ನು ಪರಿಚಯ ಮಾಡಿಕೊಟ್ಟಿತು. ನಂತರದ ದಿನಗಳಲ್ಲಿ ‘ಜಾರ್ಜ್ ಡೆಡ್ಲೋ ಕಥೆ’ಯು ಕೇವಲ ಕಥೆ ಎನ್ನುವುದು ತಿಳಿಯಿತು. ಈ ಕಥೆಯನ್ನು ಬರೆದವನು ಸೈಲಾಸ್ ವೀರ್ ಮಿಚೆಲ್! ಭ್ರಮಾಜನಿತ ಅಂಗವೇದನೆಯು ಎಷ್ಟು ತೀವ್ರವಾಗಿರಬಹುದು ಎಂಬ ಕಲ್ಪನೆಯು ಅಮೆರಿಕನ್ನರಿಗೆ ದೊರೆಯಲೆಂದೇ ಈ ಕಾಲ್ಪನಿಕ ಕಥೆಯನ್ನು ಬರೆದ. ಹಾಗಾಗಿ ಅಮೆರಿಕನ್ನರು, ಅಂಗಛೇದನಕ್ಕೆ ಒಳಗಾದವರನ್ನು ನಿಜವಾದ ಸಹಾನುಭೂತಿಯಿಂದ ನೋಡಲಾರಂಭಿಸಿದರು.
ವೈವಿಧ್ಯ: ಈಗ ವೈದ್ಯಲೋಕಕ್ಕೆ ಈ ಭ್ರಮಾಜನಿತ ಅಂಗವೇದನೆಯ ಪರಿಚಯ ಸಾಕಷ್ಟು ಆಗಿದೆ. ಇದು ಅಂಗಛೇದನಕ್ಕೆ ಒಳಗಾದ ಶೇ.80ರಿಂದ 100 ಮಂದಿಯಲ್ಲಿ ಕಂಡುಬರುತ್ತದೆ. ಆದರೆ ಎಲ್ಲರಲ್ಲೂ ಈ ವೇದನೆಯು ಏಕರೂಪವಾಗಿರುವುದಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಲೇ ಇರುತ್ತದೆ. ಹಾಗಾಗಿ ವೈದ್ಯರು ಈ ವೇದನೆಯ ಬಗ್ಗೆ ಅಧ್ಯಯನ ಮಾಡಿ, ಅಂಗಛೇದಿತರ ಅನುಭವವನ್ನು ವರ್ಗೀಕರಿಸಿದ್ದಾರೆ.1. ಭ್ರಮಾಜನಿತ ನೋವು: ಛೇದನೆಗೆ ಒಳಗಾಗಿ, ಛೇದಿತ ಅಂಗವಿದ್ದ ಸ್ಥಳದಲ್ಲಿ ವಿವಿಧ ಪ್ರಮಾಣದ ನೋವು ಕಂಡುಬರುತ್ತದೆ.
2. ಭ್ರಮಾಜನಿತ ಸಂವೇದನೆ: ಅಂಗವನ್ನು ಛೇದಿಸಿದ್ದರೂ, ಆ ಅಂಗವಿನ್ನೂ ಅಲ್ಲೇ ಇದೆ ಎಂಬ ಭಾವನೆ. ನೋವು ಇರುವುದಿಲ್ಲ. ಆದರೆ ಅಲ್ಲಿದ್ದ ಅಂಗವು, ಈ ಹಿಂದೆ ಯಾವ ಯಾವ ಸ್ಪರ್ಶಸಂವೇದನೆಗಳನ್ನು ಅನುಭವಿಸುತ್ತಿತ್ತೋ, ಅವೆಲ್ಲವನ್ನು ಈಗಲೂ ಅನುಭವಿಸುತ್ತದೆ. (ಉದಾ: ನವೆ,ಉರಿ, ಜೋಮು, ಚಿವುಟುವ ಅನುಭವ, ಜುಮುಗುಟ್ಟುವುದು, ಚುಚ್ಚುವುದು, ತಿರುಚುವುದು, ಬಿಸಿಯಾಗುವುದು, ತಣ್ಣಗಾಗುವುದು, ತುಡಿಯುವುದು ಇತ್ಯಾದಿ). ಈ ಅನುಭವವು ಎಷ್ಟು ಸಹಜವಾಗಿರುತ್ತದೆ ಎಂದರೆ, ‘ತನಗೆ ಒಂದು ಕಾಲು ಇಲ್ಲ’ ಎಂಬ ಭಾವನೆಯೇ ಬರುವುದಿಲ್ಲ. ಕುರ್ಚಿಯಲ್ಲಿ ಕುಳಿತವರು ಎರಡೂ ಕಾಲು ಇದ್ದವರು ಹೇಗೆ ಎದ್ದು ನಡೆಯಲಾರಂಭಿಸುತ್ತಾರೋ, ಹಾಗೆಯೇ ನಡೆಯಲು ಹೋಗಿ ಬೀಳುತ್ತಾರೆ.
೩. ಭ್ರಮಾಜನಿತ ಅಂಗವೇದನಾ ಲಕ್ಷಣಾವಳಿ (ಫ್ಯಾಂಟಮ್ ಯ್ನ್ ಸಿಂಡ್ರೋಮ್): ಈ ವರ್ಗೀಕರಣದಲ್ಲಿ ನೋವಿನ ಜತೆಯಲ್ಲಿ ಎಲ್ಲ ರೀತಿಯ ಸಂವೇದನೆಗಳು ಕಂಡುಬರುತ್ತವೆ.
೪. ಶೇಷ ಅಂಗವೇದನೆ (ರೆಸಿಡ್ಯೂಯಲ್ ಲಿಂಬ್ ಪೇಯ್ನ್): ಛೇದನಕ್ಕೆ ಒಳಗಾದ ಮೊಂಡು (ಸ್ಟಂಪ್) ಭಾಗದಲ್ಲಿ ನೋವು ಹಾಗೂ ಇತರ ಲಕ್ಷಣಗಳು ಕಂಡುಬರುತ್ತವೆ. ಸಾಮಾನ್ಯವಾಗಿ ಮೊಂಡಿನಲ್ಲಿ ಯಾವುದೇ ರೀತಿಯ ಸೋಂಕು ಅಥವಾ ಅಳಿದುಳಿದಿರುವ ನರಕ್ಕೆ ಆದ ಹಾನಿಯು ಈ ರೀತಿಯ ವೇದನೆಗೆ ಕಾರಣವಾಗಬಹುದು. ಇಂಥ ವೇದನೆಗೆ ಚಿಕಿತ್ಸೆಯನ್ನು ನೀಡಬಹುದು.
ಕಾಲ ವ್ಯಾಪ್ತಿ: ಭ್ರಮಾಜನಿತ ಅಂಗವೇದನೆಯು ಎಲ್ಲಿಯವರೆಗೆ ಇರುತ್ತದೆ? ಸಂವೇದನೆಗಳು ಯಾವಾಗಲೂ ಒಂದೇ ಸ್ವರೂಪದಲ್ಲಿ ಇರುತ್ತವೆಯೆ? ಇವುಗಳನ್ನು ಕೆರಳಿಸುವ ಅಂಶಗಳು ಯಾವುವು ಎನ್ನುವ ಪ್ರಶ್ನೆಯು ನಮ್ಮ ಮನಸ್ಸಿನಲ್ಲಿ ಮೂಡುತ್ತದೆ. ಅಂಗಛೇದನೆಯಾದ ದಿನದಿಂದ ಸಾಮಾನ್ಯವಾಗಿ ಸರಾಸರಿ 6 ತಿಂಗಳಿನವರೆಗೆ ನೋವು ಕಾಡುವುದುಂಟು. ಅದಾದ ನಂತರ ಸಂವೇದನೆಯ ತೀವ್ರತೆಯು ಹಾಗೂಕಂಡುಬರುವ ಅವಧಿಯು ಕಡಿಮೆಯಾಗುತ್ತಾ ಹೋಗುತ್ತದೆ. ಕೆಲವರಲ್ಲಿ ಮಾತ್ರ ಈ ಸಂವೇದನಾ ಹಿಂಸೆಯು ಎರಡು ವರ್ಷಗಳಾದರೂ ಕಡಿಮೆಯಾಗುವುದಿಲ್ಲ. ಮಧುಮೇಹ, ರಕ್ತದ ಒತ್ತಡ, ಮೊಂಡುಭಾಗಕ್ಕೆ ಬೀಳುವ ಪೆಟ್ಟು, ನರಗಳಿಗೆ ಹಾನಿ, ಉರಿಯೂತ, ನರಗಂಟುಗಳು, ರಕ್ತಪ್ರವಾಹದಲ್ಲಿ ಏರುಪೇರು, ಚರ್ಮದಲ್ಲಿ ಒತ್ತಡ ಗಾಯಗಳು ವೇದನೆ ಯನ್ನು ಕೆರಳಿಸಬಹುದು.
ಭ್ರಮಾಜನಿತ ಅಂಗವೇದನೆಯನ್ನು ಸಹಿಸಿಕೊಂಡು ಬದುಕುವುದು ಹೇಳಿದಷ್ಟು ಸುಲಭವಲ್ಲ. ಮನೆಯಲ್ಲಿ ಬಂಧುಗಳು, ಗೆಳೆಯರು ಭಾವನಾತ್ಮಕ ಆಸರೆಯನ್ನು ನೀಡುವುದು ಬಹಳ ಮುಖ್ಯ. ಏನಾದರೂ ಒಂದು ಕೆಲಸದಲ್ಲಿ ತೊಡಗಿದ್ದರೆ, ಅಂಗವೈಕಲ್ಯದ ಚಿಂತೆಯು ಹೆಚ್ಚು ಕಾಡದು. ಇಲ್ಲದಿದ್ದರೆಮಾನಸಿಕ ಸಮತೋಲನವು ತಪ್ಪಿ ಆತಂಕ, ಖಿನ್ನತೆ, ಸುಸ್ತು, ಸೋಂಕು, ರಕ್ತಪರಿಚಲನಾ ತೊಂದರೆ, ಮೂಳೆಯ ತೊಂದರೆ ಇತ್ಯಾದಿಗಳು ಸಮಸ್ಯೆಯನ್ನು ಉಲ್ಬಣಿಸಿ, ವೇದನೆಯು ಕಡಿಮೆಯಾಗುವುದಕ್ಕೆ ಅವಕಾಶವೇ ದೊರೆಯದಿರಬಹುದು.
ಇಂಥ ಸಂದರ್ಭದಲ್ಲಿ ಈ ಪ್ರಚೋದಕಗಳಿಗೆ ಮೊದಲು ಚಿಕಿತ್ಸೆಯನ್ನು ಕೊಡಬೇಕಾಗುತ್ತದೆ. ವೇದನೆಯು ನಿದ್ರೆಯಲ್ಲೂ ಕಾಡಲಾರಂಭಿಸಿದರೆ ಬದುಕು ಬಹಳ ಕಷ್ಟವಾಗುತ್ತದೆ. ನಿದ್ರೆಯಿಲ್ಲದಿದ್ದರೆ ಹಗಲಿನಲ್ಲಿ ದೈನಂದಿನ ಕೆಲಸಗಳನ್ನು ಮಾಡಲು ಕಷ್ಟವಾಗಿ ಸಮಸ್ಯೆಯು ಮತ್ತಷ್ಟು ತೀವ್ರ ವಾಗುತ್ತದೆ. ಇಂದಿನ ದಿನಗಳಲ್ಲಿ ಕೃತಕ ಕೈ ಕಾಲುಗಳು ದೊರೆಯುತ್ತಿವೆ. ಹಾಗಾಗಿ ಎಲ್ಲಿಯವರೆಗೆ ಅವರು ಕೃತಕ ಅಂಗಗಳನ್ನು ಧರಿಸಿರುತ್ತಾರೋ, ಅಲ್ಲಿಯವರೆಗೆ ಈ ಸಂವೇದನಾ ಹಿಂಸೆಗಳು ಕಡಿಮೆ ಇರುತ್ತವೆ ಅಥವಾ ಪೂರ್ಣ ಮಾಯವಾಗಬಹುದು. ಕೃತಕ ಅಂಗವನ್ನು ಕಳಚಿದ ಕೂಡಲೇ ಸಂವೇದನೆಗಳು ಹಿಂದಿರುಗಬಹುದು.
ಕಾರಣ: ಭ್ರಮಾಜನಿತ ಅಂಗವೇದನೆಯು ಏಕೆ ಕಂಡುಬರುತ್ತದೆ ಎನ್ನುವುದಕ್ಕೆ ನಿಖರ ಉತ್ತರವು ನಮಗೆ ತಿಳಿಯದು. ಆದರೆ ತಾರ್ಕಿಕವಾಗಿ ಒಪ್ಪಬಹುದಾದ ಒಂದು ವಿವರಣೆಯಿದೆ. ನಮ್ಮ ದೇಹದ ಪ್ರತಿಯೊಂದು ಅಂಗದಿಂದ ವಿವಿಧ ಸಂವೇದನೆಗಳನ್ನು ಹೊತ್ತ ನರಗಳು ಮಿದುಳನ್ನು ತಲುಪುತ್ತವೆ. ಹಾಗೆಯೇ ಮಿದುಳು ನಮ್ಮ ಪ್ರತಿಯೊಂದು ಅಂಗಕ್ಕೂ ನರಗಳನ್ನು ಪೂರೈಸುತ್ತದೆ. ಇವು ಮಿದುಳಿನ ಆಜ್ಞೆಗಳನ್ನು ಹೊತ್ತು ತಂದು ಅಂಗಾಂಗಗಳ ಕೆಲಸ ಕಾರ್ಯಗಳಿಗೆ ನೆರವಾಗುವ ಕಾರ್ಯಚಾಲನಾ ನರಗಳು. ಒಂದು ಕಾಲನ್ನು ಮೊಣಕಾಲಿನ ಬಳಿ ಛೇದಿಸಿದಾಗ, ಕಾಲಬೆರಳುಗಳಲ್ಲಿರುವ ಸಂವೇದನಾ ನರಗಳು ಛೇದನೆಯಾದ ಸ್ಥಳದಲ್ಲಿ ತಾವೂ ಛೇದನೆಯಾಗಿರುತ್ತವೆ. ಉಳಿದ ನರಭಾಗವು ಮೊಂಡುಅಂಗದಿಂದ ಮಿದುಳಿನವರೆಗೆ ಸಮಗ್ರವಾಗಿಯೇ ಇರುತ್ತದೆ. ಮಿದುಳಿನಲ್ಲಿ ಕಾಲುಬೆರಳಗಳಿಂದ ಬರುವ ನರಸಂವೇದನೆಗಳನ್ನು ಸ್ವೀಕರಿಸುವ ನರಕೋಶಗಳು ನರಸಂಜ್ಞೆಗಳಿಗಾಗಿ ಕಾಯುತ್ತಿರುತ್ತವೆ. ಅವು ಈ ನೋವಿನ ಸಂವೇದನೆಗಳಿಗೆ ಕಾರಣ ಎನ್ನಲಾಗಿದೆ. ಕಾಲಕ್ರಮೇಣ ಕಾಲುಬೆರಳುಗಳ ನರಸಂವೇದನೆಯನ್ನು ಸ್ವೀಕರಿಸುವ ಮಿದುಳು ನರಕೋಶಗಳು ತಮ್ಮ ತಪ್ಪನ್ನು ತಿದ್ದಿಕೊಂಡು ಇತರ ಕೆಲಸಗಳಲ್ಲಿ ಪಾಲ್ಗೊಳ್ಳುತ್ತವೆ. ಇದನ್ನು ‘ನರಸುರೂಪಿಕೆ’ ಅಥವಾ ‘ನ್ಯೂರೋಪ್ಲಾಸ್ಟಿ’ ಎನ್ನುವರು.
ಚಿಕಿತ್ಸೆ: ವೇದನೆಯನ್ನು ತಾತ್ಕಾಲಿಕವಾಗಿ ತಗ್ಗಿಸಲು ನೋವು ನಿವಾರಕಗಳನ್ನು ಬಳಸುವರು. ಖಿನ್ನತೆ ರೋಧಕ ಔಷಧಗಳು, ಪ್ರೊಪ್ರನೋಲಾಲ್, ಗಾಬಾಪೆಂಟಿನ್, ಪ್ರಿಗ್ಯಾಬಲಿನ್, ನಿ-ಡಿಪಿನ್, ಬಾಟ್ಯುಲಿನಮ್ ಟಾಕ್ಸಿನ್, ಲಿಡೋಕೇನ್ ಮುಂತಾದ ಔಷಧಗಳನ್ನು ಬಳಸಬಹುದು. ವೇದನೆಯನ್ನುಕಡಿಮೆ ಮಾಡಲು ಭಾರತೀಯ ನರರೋಗಗಳ ತಜ್ಞ ಡಾ.ರಾಮಚಂದ್ರನ್ ಅವರು ‘ಕನ್ನಡಿ ಚಿಕಿತ್ಸೆ’ ಅಥವಾ ‘ಮಿರರ್ ಥೆರಪಿ’ಯನ್ನು ಸೂಚಿಸಿ ದ್ದಾರೆ. ಕನ್ನಡಿ ಚಿಕಿತ್ಸೆಯಲ್ಲಿ ನಾವು ಮಿದುಳಿಗೆ ಒಂದು ರೀತಿಯ ‘ಮೋಸ’ವನ್ನು ಮಾಡುತ್ತೇವೆ.
ಇಲ್ಲದ್ದನ್ನು ಇರುವಂತೆ ತೋರಿಸುತ್ತೇವೆ (ಚಿತ್ರವನ್ನು ನೋಡಿ). ಒಬ್ಬ ವ್ಯಕ್ತಿಯ ಎಡಗೈ ಛೇದನೆಯಾಗಿದೆ. ಆದರೆ ಬಲಗೈ ಆರೋಗ್ಯವಾಗಿದೆ. ಛೇದಿಸಲ್ಪಟ್ಟ ಕೈ ಬಳಿ ಒಂದು ಕನ್ನಡಿಯನ್ನು ಇಟ್ಟಿದ್ದಾರೆ. ಆ ಕನ್ನಡಿಯಲ್ಲಿ ವ್ಯಕ್ತಿಯ ಬಲಗೈ ಕಾಣುತ್ತಿದೆ. ಬಲಗೈಯನ್ನು ಆಡಿಸಿದಾಗಲೆಲ್ಲ, ಆ ಬಿಂಬಕನ್ನಡಿಯಲ್ಲಿ ಕಾಣುವ ಕಾರಣ, ಮಿದುಳು ತನ್ನ ಎಡಗೈ ಸಕ್ರಿಯವಾಗಿರುವ ಹಾಗೆ ಭಾವಿಸುತ್ತದೆ. ದಿನಕ್ಕೆ 20 ನಿಮಿಷಗಳ ಕಾಲ ಹೀಗೆ, ಮಿದುಳಿಗೆ ಇಲ್ಲದ ಕೈಯನ್ನು ಇದೇ ಎನ್ನುವ ಭಾವವನ್ನು ಬರಿಸುವ ಕಾರಣ, ಅದು ಎಡಗೈ ಇದೆ ಎಂದೇ ಭಾವಿಸಿ ವೇದನೆಯನ್ನು ಮಂದಗೊಳಿಸುತ್ತದೆ.
ಇದನ್ನೂ ಓದಿ: Dr N Someshwara Column: ಕ್ಯಾಲಾಬಾರ್‌ ಅವರೆಯ ವಿಷದಿವ್ಯ !
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ