Cyber Crime: ಕಾಲ್ ಗರ್ಲ್ ಎಂದು ಬೆಂಗಳೂರಿನ ಟಿಕ್ಕಿಗೆ ಆಮಿಷ; ಲಕ್ಷಾಂತರ ರೂ. ಪಂಗನಾಮ ಹಾಕಿ ಮಾಯ
ಆನ್‌ಲೈನ್ ಮೂಲಕ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಬೆಂಗಳೂರಿನಲ್ಲಿ ಟೆಕ್ಕಿಯೊಬ್ಬ ಕಾಲ್ ಗರ್ಲ್ ಮೋಹಕ್ಕೆ ಬಲಿಯಾಗಿ ಲಕ್ಷಾಂತರ ರೂ. ಕಳೆದು ಕೊಂಡಿದ್ದಾರೆ. ಮತ್ತೊಬ್ಬ ಟೆಕ್ಕಿ ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ವಂಚನೆಗೆ ಬಲಿಯಾಗಿದ್ದಾರೆ. ಸದ್ಯ ಈ ಕುರಿತು ಪ್ರಕರಣ ದಾಖಲಾಗಿದೆ.


ಬೆಂಗಳೂರು: ಸೈಬರ್ ಕ್ರೈಂ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಗುತ್ತಿರುವ ಬೆನ್ನಲ್ಲೇ ಇದೀಗ ಆನ್‌ಲೈನ್ ವಂಚನೆಯೊಂದು ಬೆಳಕಿಗೆ ಬಂದಿದೆ. ಬೆಂಗಳೂರಿನ ಇಬ್ಬರು ಟೆಕ್ಕಿಗಳು ಸೈಬರ್ ವಂಚಕರಿಗೆ ಬಲಿಯಾಗಿದ್ದಾರೆ. ಒಬ್ಬರು ಕಾಲ್ ಗರ್ಲ್ ಸೇವೆಯ ಆಮಿಷಕ್ಕೆ 1.49 ಲಕ್ಷ ರೂ. ಕಳೆದುಕೊಂಡರೆ, ಇನ್ನೊಬ್ಬರು ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ವಧುವಿನಂತೆ ಬಿಂಬಿಸಿದ ವಂಚಕರಿಗೆ 55.64 ಲಕ್ಷ ರೂ.ಗೂ ಅಧಿಕ ಮೊತ್ತವನ್ನು ಕಳೆದುಕೊಂಡಿದ್ದಾರೆ. ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. 24 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್, ಕಾಲ್ ಗರ್ಲ್ ಸೇವೆ ಬೇಕೆಂದು ಮೆಸೇಜಿಂಗ್ ಆ್ಯಪ್ ಟೆಲಿಗ್ರಾಮ್‌ನಲ್ಲಿ ಬಂದಿದ್ದ ಲಿಂಕ್ ಕ್ಲಿಕ್ ಮಾಡಿದ್ದರು.
ಅಲ್ಲಿ ಅವರಿಗೆ ಇಶಾನಿ ರೆಡ್ಡಿ ಎಂಬುವವರ ಪರಿಚಯವಾಗಿತ್ತು. ಆಕೆ ಕಾಲ್ ಗರ್ಲ್ ಮತ್ತು ಸ್ಪಾ ಸೇವೆಗಳನ್ನು ಒದಗಿಸುವುದಾಗಿ ಹೇಳಿದ್ದಳು. ಮೊದಲು 299 ರೂ. ಪಾವತಿಗೆ ಸೂಚಿಸಿದ್ದ ಆಕೆ, ನಂತರ ವಿವಿಧ ಸೇವಾ ಶುಲ್ಕಗಳ ಹೆಸರಿನಲ್ಲಿ ಹೆಚ್ಚಿನ ಹಣವನ್ನು ಪೀಕಿದ್ದಳು. ಟೆಕ್ಕಿ ಒಟ್ಟು 1,49,052 ರೂ.ಗಳನ್ನು ಆಕೆಗೆ ವರ್ಗಾಯಿಸಿದ್ದಾರೆ. ಆ ಬಳಿಕ ಹೆಚ್ಚಿನ ಮೊತ್ತವಾಯಿತೆಂದು ಟೆಕ್ಕಿ ಸೇವೆಯನ್ನು ಕ್ಯಾನ್ಸ್‌ಲ್ ಮಾಡಿ ಹಣ ವಾಪಾಸ್ ಹಾಕುವಂತೆ ಹೇಳಿದ್ದಾರೆ. ಪಾವತಿ ಮಾಡಿದ್ದ ಮೊತ್ತವನ್ನು ರಿಫಂಡ್ ಮಾಡುವಂತೆ ಕೇಳಿದ್ದಾರೆ. ಆದರೆ, ಆ ಕಡೆಯಿಂದ ಉತ್ತರವೇ ಬಂದಿಲ್ಲ. ಹೀಗಾಗಿ ಟೆಕ್ಕಿ ರಾಷ್ಟ್ರೀಯ ಸೈಬರ್ ಅಪರಾಧ ಪೋರ್ಟಲ್‌ನಲ್ಲಿ ಈ ವಿಷಯದ ಬಗ್ಗೆ ವರದಿ ಮಾಡಿ ಹೈಗ್ರೌಂಡ್ಸ್ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಾಗಿದೆ.
ಈ ಸುದ್ದಿಯನ್ನೂ ಓದಿ: Cyber Crime: ದೇಶದಲ್ಲಿ ಹೆಚ್ಚುತ್ತಿದೆ ಸೈಬರ್ ಕ್ರೈಂ ಪ್ರಕರಣ; 2024 ರಲ್ಲಿ 23,000 ಕೋಟಿ ರೂ ಕಳೆದುಕೊಂಡ ಭಾರತೀಯರು!
ಮ್ಯಾಟ್ರಿಮೋನಿಯಲ್ ಸೈಟ್ ವಂಚನೆ
ಉಲ್ಲಾಳ ಉಪನಗರದ 32 ವರ್ಷದ ಟೆಕ್ಕಿಯೊಬ್ಬರು ಒಕ್ಕಲಿಗ ವೈವಾಹಿಕ ವೇದಿಕೆಯಲ್ಲಿ ನಿಹಾರಿಕಾ ಗೌಡ ಎಂಬ ಪ್ರೊಪೈಲ್ ಮ್ಯಾಚ್ ಮಾಡಿದ್ದರು. ಬ್ಬರೂ ಚಾಟ್ ಮೂಲಕ ಸಂಬಂಧ ಬೆಳೆಸಿದ್ದು, ಆಕೆ ಮದುವೆಯ ಭರವಸೆ ನೀಡಿದ್ದಳು. ನಂತರ, ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಲು ಒತ್ತಾಯಿಸಿ, ಲಾಭದಾಯಕತೆಯ ಬಗ್ಗೆ ವಿವರಿಸಿದ್ದಳು. ನಕಲಿ ವೆಬ್‌ಸೈಟ್‌ನ ಲಿಂಕ್ ಕಳುಹಿಸಿ, ವ್ಯಾಲೆಟ್ ರಚಿಸಲು ಮಾರ್ಗದರ್ಶನ ನೀಡಿದ್ದಳು. ಆಕೆಯ ಮಾತನ್ನು ನಂಬಿ ಟೆಕ್ಕಿ ಮೊದಲು 1 ಲಕ್ಷ ರೂ. ಹೂಡಿಕೆ ಮಾಡಿದ್ದರು. ನಂತರ ಹೆಚ್ಚಿನ ಆಸೆಗೆ 55.64 ಲಕ್ಷ ರೂ.ಗಳನ್ನು ವರ್ಗಾಯಿಸಿದ್ದಾರೆ. ಆದರೆ ಹಣ ವಾಪಾಸ್ ಬಂದಿಲ್ಲ. ನಂತರ ಅವರು ಸೈಬರ್ ಪೊಲೀಸರಿಗೆ ದೂರು ನೀಡಿದ್ದು ತನಿಖೆ ನಡೆಯುತ್ತಿದೆ.