Dr Siddanna Utnal Column: ಸಮಾಜಕ್ಕೆ ಶಿಕ್ಷಣ ದೀಕ್ಷೆ ನೀಡಿದ ಲಿಂಗರಾಜರು
ಅರವತ್ನಾಲ್ಕನೆಯ ಪುರಾತನರೆಂದು ಸಮಕಾಲೀನರಿಂದ ಬಣ್ಣಿಸಿಕೊಂಡ ಲಿಂಗರಾಜರು ಅಹೋರಾತ್ರಿ ಸಾರ್ವಜನಿಕ ಹಿತಚಿಂತನೆಯಲ್ಲಿಯೇ ತಮ್ಮನ್ನು ತೊಡಗಿಸಿಕೊಂಡಿದ್ದರು. ಹೊಲ, ಮನೆ, ದನಕರು
Ashok Nayak
January 10, 2025
ತನ್ನಿಮಿತ್ತ
ಡಾ.ಸಿದ್ದಣ್ಣ ಉತ್ನಾಳ
ಇಂದು ಸಿರಸಂಗಿ ಲಿಂಗರಾಜ ದೇಸಾಯಿಯವರ 164ನೇ ಜಯಂತಿ
ಸ್ವಾತಂತ್ರ್ಯಪೂರ್ವದ ಭಾರತೀಯ ಸಂಸ್ಥಾನಗಳಲ್ಲಿ ಚಿರಂತನವಾದ ಸ್ಥಾನ ಪಡೆದುದೆಂದರೆ ಸಿರಸಂಗಿ ಸಂಸ್ಥಾನಮಾತ್ರ. ಇದರ ಕೊನೆಯ ದೊರೆ ಮಹಾದಾಸೋಹಿ ಲಿಂಗರಾಜ ದೇಸಾಯಿ (1861-1906) ಅವರು ‘ಸರ್ ದೇಸಾಯಿ ನವಲಗುಂದ ದೇಸಾಯಿ ಚಾರಿಟಬಲ್ ಟ್ರಫಂಡ್’ ಸ್ಥಾಪಿಸಿ, ಅದರ ಮೂಲಕ ತಮ್ಮ ಸಂಸ್ಥಾನದ ಸಮಸ್ತ ಸಂಪತ್ತನ್ನೂ ಸಾರ್ವಜನಿಕ ಹಿತಾಸಕ್ತಿಗಾಗಿ ವಿನಿಯೋಗ ಮಾಡಿ ಮೃತ್ಯು ಪತ್ರವನ್ನು ಬರೆದರು. ಆ ಮೂಲಕ ಭಾರತೀಯ ಇತಿಹಾಸದಲ್ಲಿ ಸಿರಸಂಗಿ ಸಂಸ್ಥಾನವು ಶಾಶ್ವತವಾದ ಸ್ಥಾನ ಪಡೆಯಿತು ಎಂಬುದು ಎಲ್ಲರಿಗೂ ತಿಳಿದ ಸಂಗತಿ.
ಅರವತ್ನಾಲ್ಕನೆಯ ಪುರಾತನರೆಂದು ಸಮಕಾಲೀನರಿಂದ ಬಣ್ಣಿಸಿಕೊಂಡ ಲಿಂಗರಾಜರು ಅಹೋರಾತ್ರಿ ಸಾರ್ವಜನಿಕಹಿತಚಿಂತನೆಯಲ್ಲಿಯೇ ತಮ್ಮನ್ನು ತೊಡಗಿಸಿಕೊಂಡಿದ್ದರು. ಹೊಲ, ಮನೆ, ದನಕರು ಮುಂತಾದ ಪ್ರಪಂಚದಲ್ಲಿಯೇತಲ್ಲೀನರಾಗಿದ್ದ ಲಿಂಗಾಯತ ಸಮುದಾಯವು ಪುರೋಗಾಮಿ ದೃಷ್ಟಿಕೋನವನ್ನು ಸಂಪೂರ್ಣ ಹೊಂದದಿದ್ದರೆ ಕರ್ನಾಟಕದ ಏಳಿಗೆ ಸಾಧ್ಯವಿಲ್ಲವೆಂದು ನಂಬಿದ್ದ ಲಿಂಗರಾಜರು, ಉತ್ತರ ಕರ್ನಾಟಕದ ಬಹುಸಂಖ್ಯಾತ ಸಮಾಜವಾದ ಲಿಂಗಾಯತರನ್ನು ವೈಚಾರಿಕ ಸಂಸ್ಕಾರಕ್ಕೆ ಒಳಪಡಿಸಬೇಕೆಂಬ ಅಂತಿಮ ನಿರ್ಧಾರಕ್ಕೆ ಬಂದರು. ಶಿಕ್ಷಣದ ಮೂಲಕವೇ ಹೊಸ ವಿಚಾರಗಳ ಸೆಳೆತ ಸಾಧ್ಯ ಎಂಬ ನಿತ್ಯಸತ್ಯವನ್ನು ಕಂಡುಕೊಂಡ ಲಿಂಗರಾಜರು ಲಿಂಗಾಯತ ಸಮಾಜಕ್ಕೆ ಶಿಕ್ಷಣದ ದೀಕ್ಷೆಯನ್ನು ನೀಡಿ, ಆ ಮೂಲಕ ಸಮಗ್ರ ಕರ್ನಾಟಕದ ಏಳಿಗೆಯ ಕನಸನ್ನು ಕಂಡರು. ಶಿಕ್ಷಣದ ಗಂಧ ಗಾಳಿಯೂ ಇಲ್ಲದ, ಹೊಸದರಿಂದ ವಿಮುಖವಾಗಿದ್ದ ಲಿಂಗಾಯತ ಸಮಾಜವುಶಿಕ್ಷಣದ ಕಡೆಗೆ ಹೊರಳುವಂತೆ ಮಾಡಿದ ಕೀರ್ತಿ ಲಿಂಗರಾಜರಿಗೆ ಸಲ್ಲುತ್ತದೆ.
ಹರಿದು ಹಂಚಿಹೋಗಿದ್ದ, ಹಲವಾರು ವೃತ್ತಿಗಳಲ್ಲಿ ತೊಡಗಿಸಿಕೊಂಡಿದ್ದ ಲಿಂಗಾಯತರು ಒಂದುಗೂಡಿದಾಗಮಾತ್ರ ಹೊಸ ಶಕ್ತಿಯನ್ನು ಕ್ರೋಡೀಕರಿಸಿ ಸಮಾಜದ ಏಳಿಗೆಗೆ ಅದನ್ನು ಬಳಸಲು ಸಾಧ್ಯವೆಂದು ಕಂಡುಕೊಂಡು ಲಿಂಗರಾಜರು ಸಾಮಾಜಿಕ ಸಂಘಟನೆಗೆ ಮುಂದಾದರು. ಅರಟಾಳ ರುದ್ರಗೌಡರು, ವಾರದ ಮಲ್ಲಪ್ಪನವರು, ಪುಟ್ಟಣ್ಣಶೆಟ್ಟರು ಮುಂತಾದ ಆ ಕಾಲದ ಹಿರಿಯರ ಜತೆಗೆ ಸಮಾಲೋಚಿಸಿ ಸಮಸ್ತ ಸಮಾಜದ ಸಂಘಟನೆಗೆ ಮುಂದಾದರು. ಇವರ ಪ್ರಯತ್ನ, ಆಸಕ್ತಿ ಮತ್ತು ವೈeನಿಕ ಮನೋಧರ್ಮವನ್ನು ಗಮನಿಸಿದ ಶ್ರೀ ಹಾನಗಲ್ ಕುಮಾರಸ್ವಾಮಿಗಳು ಇವರನ್ನು ಮುಂದಿಟ್ಟುಕೊಂಡು ಅಖಿಲ ಭಾರತ ವೀರಶೈವ ಮಹಾಸಭೆಯನ್ನು ಹುಟ್ಟು ಹಾಕಿದರು.
ಲಿಂಗರಾಜರು ‘ಸರ್ ದೇಸಾಯಿ ನವಲಗುಂದ ಸಿರಸಂಗಿ ಚಾರಿಟಬಲ್ ಟ್ರಸ್ಟ್ ಫಂಡ್’ ಸ್ಥಾಪಿಸುವ ಮೂಲಕ, ಕಲಿಯುವ ಆಸಕ್ತಿ ಇರುವ ಲಿಂಗಾಯತ ಮಕ್ಕಳಿಗೆ ಧನಸಹಾಯ ಮಾಡುತ್ತ, ಸಮಸ್ತ ಲಿಂಗಾಯತ ಸಮಾಜವು ಶಿಕ್ಷಣದ ಕಡೆಗೆ ಮುಖ ಮಾಡುವಂತೆ ಮಾಡಿದರು. ವಿಜಯಪುರದಲ್ಲಿ ಲಿಂಗರಾಜ ಲಿಂಗಾಯತ ಹಾಸ್ಟೆಲ್, ಧಾರವಾಡದಲ್ಲಿ ಉಮಾ ಭಾಯಿ ವಸತಿ ನಿಲಯವನ್ನು ಸ್ಥಾಪಿಸಿ ಗ್ರಾಮೀಣ ಪ್ರದೇಶದ ಬಡ ಲಿಂಗಾಯತ ಮಕ್ಕಳಿಗೆ ಶಿಕ್ಷಣದ ಸಂಸ್ಕಾರ ದೊರೆಯುವಂತೆ ಅನುವು ಮಾಡಿಕೊಟ್ಟರು. “ಎಲ್ಲ ಲಿಂಗಾಯತರ ಮಕ್ಕಳು ಶಿಕ್ಷಣ ಹೊಂದಿ ವಿಚಾರವಂತರಾದಾಗ ಮಾತ್ರ ನಮ್ಮ ಲಿಂಗಾಯತ ಸಮಾಜದ ಸುಧಾರಣೆ ಸಾಧ್ಯ" ಎಂದು ಒತ್ತಿ ಹೇಳುತ್ತಿದ್ದರು.
“ನನ್ನಿಂದ ನಮ್ಮ ಸಮಾಜಕ್ಕೆ ಕಲ್ಯಾಣವಾಗುವುದಾದರೆ ನನ್ನ ಪ್ರಾಣ ಅದಕ್ಕೆ ಮೀಸಲು" ಎಂದು ಘೋಷಿಸಿ ತಮ್ಮ ಧೀಃಶಕ್ತಿಯನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡರು. ಧರ್ಮವು ವ್ಯವಹಾರ ಧರ್ಮಕ್ಕೆ ಪೂರಕವಾಗಿರಬೇಕೆಂದು ನಂಬಿದ್ದ ಅವರು ಕಾಶಿಯ ಜಂಗಮವಾಡಿ ಮಠಕ್ಕೆ ಅನೇಕ ದತ್ತಿಗಳನ್ನು ಕೊಡಮಾಡಿದರು. ನಿತ್ಯ ಕಾಶಿಗೆ ಬರುವ ಭಕ್ತರಿಗೆ ಸೌಲಭ್ಯಗಳನ್ನು ಒದಗಿಸಬೇಕೆಂಬ ಸತ್ ಸಂಕಲ್ಪ ಕಾರಣವಾಗಿ ಆ ಮಠಕ್ಕೆ 150 ಎಕರೆ ಭೂಮಿಯನ್ನು ದಾನವಾಗಿ ನೀಡಿದರು.
ವ್ಯಾಪಾರ ವ್ಯವಹಾರಗಳನ್ನು ಆಧುನಿಕ ದೃಷ್ಟಿಯಿಂದ ಮಾಡಬೇಕೆಂದು ಒತ್ತಿ ಹೇಳುತ್ತಿದ್ದ ಅವರು ವಿಜಯಪುರ ದಲ್ಲಿ ಸಹಕಾರ ತತ್ವದಡಿಯಲ್ಲಿ ಏಳೂರು ಗೌಡರ ದಳಿ ಮಂಡಳಿಯನ್ನು ಸ್ಥಾಪಿಸಿ ಲಿಂಗಾಯತ ಸಮಾಜದ ರೈತರಿಗೆ ಅನುಕೂಲ ಕಲ್ಪಿಸಿದರು. ಒಕ್ಕಲುತನವನ್ನೇ ಮುಖ್ಯ ಕಾಯಕವೆಂದು ನಂಬಿದ್ದ ಲಿಂಗಾಯತ ಜನರ ಬದುಕಿಗೆ ಬೆಳಕು ಸಿಗಬೇಕಾದರೆ ಈ ಕ್ಷೇತ್ರದಲ್ಲಿ ಉಂಟಾದ ಆಧುನಿಕ ವೈಜ್ಞಾನಿಕ ಆವಿಷ್ಕಾರಗಳನ್ನು ನಮ್ಮ ರೈತರು ಅಳವಡಿಸಿಕೊಳ್ಳ ಬೇಕು ಎಂದು ಲಿಂಗರಾಜರು ನಂಬಿದ್ದರು.
ಆದ್ದರಿಂದ ಈ ತತ್ವವನ್ನು ಸಾಬೀತುಪಡಿಸಲು ಅವರು ಹಾವೇರಿ ಹತ್ತಿರದ ದೇವಿ ಹೊಸೂರ ಗ್ರಾಮದಲ್ಲಿ 180 ಎಕರೆ ಭೂಮಿ ಖರೀದಿಸಿ ಕೃಷಿ ಪದ್ಧತಿಯ ಸೂತ್ರಗಳನ್ನು ಸಮಾಜದ ರೈತರಿಗೆ ಹೇಳುವ ವ್ಯವಸ್ಥೆ ಮಾಡಿದರು. ನಮ್ಮ ಕೃಷಿಯು ಮಳೆ ನೀರನ್ನೇ ಅವಲಂಬಿಸಿದೆ. ಆದರೆ ಮಳೆಯು ಸಕಾಲಕ್ಕೆ ಒದಗದೆ ರೈತರು ಸಂಕಷ್ಟಗಳನ್ನು ಅನು ಭವಿಸುತ್ತಾರೆ. ಅದಕ್ಕಾಗಿ ವೈಜ್ಞಾನಿಕ ಕೃಷಿ ಶಾಖೆಯನ್ನು ಪ್ರಾರಂಭಿಸಿ ಆಧುನಿಕ ತಂತ್ರಜ್ಞಾನವನ್ನು ಅಂದೇ ಮನಗಂಡ ಲಿಂಗರಾಜರು ನವಲಗುಂದ, ಸಿರಸಂಗಿ, ಸವದತ್ತಿಗಳಲ್ಲಿ ಬೃಹತ್ ಕೆರೆಗಳನ್ನು ನಿರ್ಮಿಸಿ ಆ ಮೂಲಕ ರೈತರ ಹೊಲಗಳಿಗೆ ನೀರುಣಿಸುವ ತಂತ್ರಜ್ಞಾನವನ್ನು ರೂಢಿಗೆ ತಂದರು. ಪರಂಪರಾಗತ ಒಕ್ಕುಲತನವನ್ನು ಮೈಗೂಡಿಸಿಕೊಂಡ ಅಂದಿನ ರೈತರು ಈ ಹೊಸ ತಂತ್ರಜ್ಞಾನವನ್ನು ಅನುಸರಿಸುವುದು ಸ್ವಲ್ಪಕಷ್ಟದಾಯಕ ವಾಗಿತ್ತು.
ತಾವೇ ಸ್ವತಃ ರೈತರನ್ನು ಕಂಡು ಬದಲಾವಣೆ ಜೀವನದ ಅನಿವಾರ್ಯ ಅಂಗ ಎಂಬುದನ್ನು ತಿಳಿಹೇಳಿ, ಕೃಷಿಯಲ್ಲಿ ಆಧುನಿಕ ಪದ್ಧತಿ ಜಾರಿಗೆ ತರುವ ಮೂಲಕ ರೈತರಿಗೆ ತಮ್ಮ ಬದುಕನ್ನು ಸುಧಾರಿಸಿಕೊಳ್ಳಲು ಮಾರ್ಗೋಪಾಯ ಗಳನ್ನು ಹೇಳಿದರು. ಸಂಪ್ರದಾಯದ ಕಪಿಮುಷ್ಟಿಯಲ್ಲಿ ನಮ್ಮ ಸಮಾಜ ಕೊರಗುತ್ತಿದೆಯೆಂಬ ಚಿಂತೆ ಮನವರಿಕೆ ಆಗಿದ್ದ ಲಿಂಗರಾಜರು ಅನೇಕ ಸಾಮಾಜಿಕ ಬದಲಾವಣೆಗಳ ಕುರಿತು ಜನರಿಗೆ ಮನವರಿಕೆ ಮಾಡಿಕೊಡುತ್ತಿದ್ದರು. ವಿಧವಾ ವಿವಾಹದ ಪರಿಕಲ್ಪನೆಯನ್ನು ಪುರಸ್ಕರಿಸಿ ತಮ್ಮ ಪ್ರಗತಿಪರ ಚಿಂತನೆಯನ್ನು, ಸಮಾಜಮುಖಿ ಧೋರಣೆ ಯನ್ನು ಸಾರ್ವತ್ರಿಕಗೊಳಿಸಲು ಅಹೋರಾತ್ರಿ ಶ್ರಮಿಸಿದರು. ಒಟ್ಟಿನಲ್ಲಿ ನಮ್ಮ ಸಮಸ್ತ ಸಮಾಜದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಅಹರ್ನಿಶಿ ಚಿಂತನೆ ಮಾಡಿದರು.
ಸಮಾಜದ ಒಟ್ಟು ಬೆಳವಣಿಗೆಗಾಗಿ ತಮ್ಮ ಸರ್ವಸ್ವವನ್ನು ದಾನ ಮಾಡುವ ಮೂಲಕ ಇಂದು ಲಿಂಗರಾಜದೇಸಾಯಿ ಯವರು ‘ದಾನವೀರಕ್ಕಿಂತಲೂ ದಾಸೋಹಿ ವೀರ ಲಿಂಗರಾಜ ದೇಸಾಯಿ’ ಎಂದು ಇತಿಹಾಸ ಪುಟಗಳಲ್ಲಿ ಸೂರ್ಯ ಚಂದ್ರರು ಇರುವವರೆಗೆ ಶಾಶ್ವತ ಸ್ಥಾನ ಪಡೆದಿದ್ದಾರೆ. ಲಿಂಗರಾಜರು ಕುಡು ಒಕ್ಕಲಿಗರಾದರೂ ಸಮಸ್ತಲಿಂಗಾಯತ ಸಮಾಜದ ಅಭಿವೃದ್ಧಿಯೊಂದನ್ನೇ ಗುರಿಯಾಗಿಟ್ಟುಕೊಂಡು ಅಹೋರಾತ್ರಿ ದುಡಿದರು.
ಲಿಂಗರಾಜರು ಕ್ಷಯರೋಗಕ್ಕೆ ತುತ್ತಾದಾಗ ಅರಟಾಳ ರುದ್ರಗೌಡರನ್ನು ತಂತಿ ಮೂಲಕ ಕರೆಯಿಸಿಕೊಂಡು ತಾವುಬರೆದ ಮೃತ್ಯುಪತ್ರವನ್ನು ಓದಿ ಹೇಳಿದರು. ಆಗ ರುದ್ರಗೌಡರು ಗಳಗಳನೇ ಅಳುತ್ತಾ, “ರಾಜರೇ ಅರ್ಧ ಆಸ್ತಿ ಸಮಾಜಕ್ಕೆ ಒಪ್ಪಿಸಿ, ಇನ್ನರ್ಧ ಸಂಸ್ಥಾನದಲ್ಲಿ ಮುಂದುವರಿಯಲಿ" ಎಂದು ಹೇಳಿದರು. ಅದಕ್ಕೆ ಲಿಂಗರಾಜರು, “ಗೌಡರೇ ನಾನೊಬ್ಬ ಸತ್ತರೆ ಸಮಾಜ ಸಾಯುವುದಿಲ್ಲ. ಆದರೆ ಇದಕ್ಕೆ ತಗುಲಿದ ಅeನವೆಂಬ ಕ್ಷಯರೋಗದ ಕುರಿತುಚಿಂತಿಸಿರಿ" ಎಂದು ಹೇಳುತ್ತಾ ರುದ್ರಗೌಡರ ಕೈಯನ್ನು ಗಟ್ಟಿಯಾಗಿ ಹಿಡಿದು ಆ ಮೃತ್ಯುಪತ್ರವನ್ನು ಬೆಳಗಾವಿಗೆಹೋಗಿ ಕಲೆಕ್ಟರ್ ಪರದೆಯಲ್ಲಿ ಇಡಲು ಸೂಚಿಸಿದರು. ಆಗ ರುದ್ರಗೌಡರು ದುಃಖತಪ್ತರಾಗಿ ನಿಂತಾಗ “ರುದ್ರಗೌಡರೇ,ನೀವೊಬ್ಬರು ಶರಣರು ತಾನೇ? ಆದ್ದರಿಂದ, ತಾವು ‘ಮರಣವೇ ಮಹಾನವಮಿ’ ಎಂಬ ಶರಣವಾಕ್ಯವನ್ನು ನೆನಪಿಸಿ ಕೊಳ್ಳಿರಿ" ಎಂದು ಧೈರ್ಯ ತುಂಬಿದರು. ಅಂಥ ಮಹನೀಯರಾದ ಸಿರಸಂಗಿ ಲಿಂಗರಾಜ ದೇಸಾಯಿಯವರ164ನೇ ಜಯಂತಿಯಾದ ಇಂದು ಅವರನ್ನು ನೆನೆದು ಧನ್ಯರಾಗೋಣ, ಸುಶಿಕ್ಷಿತರಾಗೋಣ,
(ಲೇಖಕರು ನಿವೃತ್ತ ಪ್ರಾಚಾರ್ಯರು ಮತ್ತು ಸಾಹಿತಿ)
ಇದನ್ನೂ ಓದಿ : Raghu Kotian Column: ಮರೆಯಲಾಗದ ದುರ್ಘಟನೆ