Dr N Someshwara Column: ಮಗುವಿನ ಜೀವನ ಚರಿತ್ರೆಯನ್ನು ಬರೆದ ಪ್ರಾತಃಸ್ಮರಣೀಯರು
ಚಾರ್ಲ್ಸ್ ಡಾರ್ವಿನ್ (1809-1882) ಈ ವಿಷಯದಲ್ಲಿ ಆಸಕ್ತಿಯನ್ನು ವಹಿಸಿದ. ಒಂದು ಮಗುವು ಹುಟ್ಟಿದ ಕ್ಷಣದಿಂದ ಹಿಡಿದು ಸ್ವತಂತ್ರವಾಗಿ ಬದುಕನ್ನು ನಡೆಸುವವರೆಗೆ ಅದನ್ನು ಅತ್ಯಂತ ನಿಕಟವಾಗಿ ಅಧ್ಯಯನ ಮಾಡಿ, ಅದನ್ನೆಲ್ಲ ಬರಹದಲ್ಲಿ ದಾಖಲಿಸಿ, ಅದಕ್ಕೆ ‘ಬೇಬಿ ಬಯಾ ಗ್ರಫೀಸ್’ ಎಂಬ ಹೆಸರನ್ನು ನೀಡಿ ಪ್ರಕಟಿಸಿದ.


ಹಿಂದಿರುಗಿ ನೋಡಿದಾಗ
ಚಾರ್ಲ್ಸ್ ಡಾರ್ವಿನ್ ಮಾಡಿದ ಮೊದಲ ಅಧ್ಯಯನದ ಬಹು ದೊಡ್ಡ ಲಾಭವೆಂದರೆ, ಮುಂದೆ ಅನೇಕ ವಿಜ್ಞಾನಿಗಳು ಮಕ್ಕಳ ಬೆಳವಣಿಗೆಯ ಮೇಲೆ ಆಸಕ್ತಿಯನ್ನು ತಳೆ ದರು. ವೈಜ್ಞಾನಿಕ ಅಧ್ಯಯನಗಳನ್ನು ನಡೆಸಿದರು ಹಾಗೂ ಮಕ್ಕಳ ರಮ್ಯ ಜಗತ್ತಿನ ಅನಾವರಣ ವನ್ನು ಮಾಡಿದರು. ಜರ್ಮನಿಯ ಫಿಸಿಯಾಲಜಿಸ್ಟ್ ವಿಲ್ಹೆಲ್ಮ್ ಪ್ರೇಯರ್ ಡಾರ್ವಿನ್ ಅಧ್ಯಯನದಿಂದ ಪ್ರೇರಿತನಾಗಿದ್ದು ಇದಕ್ಕೆ ಸಾಕ್ಷಿ. ಸಮುದ್ರದಲ್ಲಿ ಅಮ್ಮ ಡಾಲಿನ್ ಮಗುವಿಗೆ ಜನ್ಮವನ್ನು ನೀಡಿದ ಕೂಡಲೇ ಮರಿ ಡಾಲಿನ್ ಈಜಬೇಕು. ಈಜಲಿಲ್ಲ ವೆಂದರೆ ಅದು ಆ ಕ್ಷಣದಲ್ಲಿಯೇ ಮುಳುಗಿ ಸಾಯುತ್ತದೆ. ಒಂಟೆಯು ಮರಿಯನ್ನು ಹಾಕಿ ದಾಗ, ಆ ಮರಿಯು 30 ನಿಮಿಷಗಳ ಒಳಗೆ ಎದ್ದು ನಡೆಯಬೇಕು. ಕುದುರೆಯ ಹಾಗೂ ಜ಼ೀಬ್ರಾದ ಮರಿಗಳು ಹುಟ್ಟಿದ ಸುಮಾರು 45 ನಿಮಿಷಗಳಲ್ಲಿ ಎದ್ದು ನಿಂತು ಅಡ್ಡಾದಿಡ್ಡಿ ಹೆಜ್ಜೆಯನ್ನಿಡುತ್ತಾ ನಡೆಯುವುದನ್ನು ಕಲಿಯಬೇಕು.
ಜಿರಾಫೆಯು ಮರಿಯನ್ನು ಹಾಕಿದ 60 ನಿಮಿಷಗಳಲ್ಲಿ ಅದು ಎದ್ದು ನಡೆಯಲಿಲ್ಲವೆಂದರೆ, ಅಮ್ಮ ಜಿರಾಫೆಯು ಅದನ್ನು ಒದ್ದು ಏಳಿಸುತ್ತದೆ. ಎದ್ದು ನಿಂತು ನಡೆಯುವಂತೆ ಪ್ರೋತ್ಸಾ ಹಿಸುತ್ತದೆ. ಏಕೆಂದರೆ ಎಳೆಯ ಜಿರಾ- ಮರಿಯನ್ನು ತಿನ್ನಲು ಸಿಂಹವೇ ಮುಂತಾದ ಮಾಂಸಾಹಾರಿ ಪ್ರಾಣಿಗಳು ಹೊಂಚುಹಾಕಿಕೊಂಡಿರುತ್ತವೆ.
ಇದನ್ನೂ ಓದಿ: Dr N Someshwara Column: ಜಿಬಿ ಸಿಂಡ್ರೋಮ್ ಮುನ್ನೆಚ್ಚರಿಕೆಯ ಮಂತ್ರ
ಆದರೆ ಮನುಷ್ಯನ ಮಗುವು ಮಾತ್ರ ಎದ್ದು ನಿಲ್ಲಲು ಸರಿ ಸುಮಾರು ಒಂದು ವರ್ಷವನ್ನು ತೆಗೆದುಕೊಳ್ಳುತ್ತದಲ್ಲ ಏಕೆ? ಡಾಲಿನ್ ಮರಿ ಹುಟ್ಟಿದ ಕೂಡಲೇ ಈಜಬೇಕು ಎನ್ನುವುದನ್ನು ಯಾರು ಹೇಳಿಕೊಟ್ಟರು? ಈಜುವಿಕೆಯು ಆನುವಂಶಿಕವಾಗಿ ಅಮ್ಮ ಮತ್ತು ಅಪ್ಪ ಡಾಲಿನ್ ಗಳಿಂದ ಮರಿಗಳಿಗೆ ರಿದು ಬಂದಿದೆ ಎನ್ನುವುದಾದರೆ, ನಮ್ಮ ಕಲಿಕೆಯಲ್ಲಿ ಆನುವಂಶಿಕ ತೆಯ ಪಾಲೆಷ್ಟು ಹಾಗೂ ಪರಿಸರದ ಪಾಲೆಷ್ಟು? ಇದು ತುಂಬಾ ಕುತೂಹಲಕರವಾದ ಪ್ರಶ್ನೆಯಾಗಿದೆ.
ಚಾರ್ಲ್ಸ್ ಡಾರ್ವಿನ್ (1809-1882) ಈ ವಿಷಯದಲ್ಲಿ ಆಸಕ್ತಿಯನ್ನು ವಹಿಸಿದ. ಒಂದು ಮಗುವು ಹುಟ್ಟಿದ ಕ್ಷಣದಿಂದ ಹಿಡಿದು ಸ್ವತಂತ್ರವಾಗಿ ಬದುಕನ್ನು ನಡೆಸುವವರೆಗೆ ಅದನ್ನು ಅತ್ಯಂತ ನಿಕಟವಾಗಿ ಅಧ್ಯಯನ ಮಾಡಿ, ಅದನ್ನೆಲ್ಲ ಬರಹದಲ್ಲಿ ದಾಖಲಿಸಿ, ಅದಕ್ಕೆ ‘ಬೇಬಿ ಬಯಾಗ್ರಫೀಸ್’ ಎಂಬ ಹೆಸರನ್ನು ನೀಡಿ ಪ್ರಕಟಿಸಿದ.

ಇವನ ನಂತರ ವಿಲ್ಹೆಲ್ಮ್ ಪ್ರೇಯರ್, ವಿಲಿಯಂ ಸ್ಟೆರ್ನ್, ಜೀನ್ ಪಿಯಾಜೆ, ಜೇಮ್ಸ್ ಮಾರ್ಕ್ ಬಾಲ್ಡ್‌ವಿನ್, ಸ್ಟಾನ್ಲೆ ಹಾಲ್ ಮುಂತಾದವರು ತಮ್ಮದೇ ಆದ ಅಧ್ಯಯನಗಳನ್ನು ನಡೆಸಿ, ಮಗುವಿನ ಜೀವನಚರಿತ್ರೆಯ ವಿವಿಧ ಆಯಾಮಗಳ ಪರಿಚಯವನ್ನು ನಮಗೆ ಮಾಡಿ ಕೊಟ್ಟರು. ಇವರ ಅಧ್ಯಯನಗಳನ್ನು ‘ವೈಜ್ಞಾನಿಕವಲ್ಲ’ ಎಂದು ಕೆಲವರು ದೂರಿದ್ದೂ ಉಂಟು.
ಈ ವಿಜ್ಞಾನಿಗಳು ಮಗುವಿನ ಬೆಳವಣಿಗೆಯ ಅವಲೋಕನದ ನೆರವಿನಿಂದ ತಮ್ಮ ಅನಿಸಿಕೆ ಗಳನ್ನು ದಾಖಲಿಸಿದ್ದಾರಷ್ಟೆ. ಹಾಗಿರುವಾಗ ಇದು ಮಗುವಿನ ‘ಜೀವನಚರಿತ್ರೆ’ ಯಾಗಲು ಸಾಧ್ಯವಿಲ್ಲ ಎಂದು ತಕರಾರನ್ನು ತೆಗೆದರು. ಅವರ ಆಕ್ಷೇಪಣೆಯಲ್ಲಿ ಹುರುಳಿರಬಹು ದೇನೋ... ಆದರೆ ಈ ಒಂದು ಕ್ಷೇತ್ರದಲ್ಲಿ ಒಂದು ಹೊಚ್ಚ ಹೊಸ ಅಧ್ಯಯನವನ್ನು ಮಾಡಿದ ಈ ವಿಜ್ಞಾನಿಗಳ ಶ್ರಮವನ್ನು ಸಾರಾಸಗಟಾಗಿ ತಿರಸ್ಕರಿಸಲು ಸಾಧ್ಯವಿಲ್ಲ.
ಇದರಿಂದ ಮಗುವಿನ ಕಲಿಕೆ, ವರ್ತನೆ, ಬೆಳವಣಿಗೆ ಇತ್ಯಾದಿ ಅನೇಕ ವಿಷಯಗಳ ಕುರಿತು ನಮ್ಮ ತಿಳಿವಳಿಕೆ ಹೆಚ್ಚಿದೆ ಎನ್ನುವುದರಲ್ಲಿ ಯಾವುದೇ ಅನುಮಾನವು ಉಳಿದಿಲ್ಲ. ಹಾಗಾಗಿ ಇವರ ಅಧ್ಯಯನವನ್ನು ಕುರಿತು ಒಂದು ಪಕ್ಷಿನೋಟವನ್ನು ಹರಿಸುವುದು ಸೂಕ್ತ.
ನಮಗೆಲ್ಲ ಗೊತ್ತಿರುವ ಹಾಗೆ ಚಾರ್ಲ್ಸ್ ಡಾರ್ವಿನ್ ಜೀವಿಗಳ ವಿಕಾಸವಾದದ ಬಗ್ಗೆ ಸುದೀ ರ್ಘವಾದ ಅಧ್ಯಯನವನ್ನು ಮಾಡಿ ‘ಅರಿಜಿನ್ ಆಫ್ ಸ್ಪೀಸೀಸ್’ (ಪ್ರಭೇದಗಳ ಉಗಮ) ಎಂಬ ಗ್ರಂಥವನ್ನು ರಚಿಸಿದ. ಇದು ಮನುಕುಲದ ತಿಳಿವಿಗೆ ಒಂದು ಮಹಾ ತಿರುವನ್ನೇ ನೀಡಿತು. ಅಂಥ ಡಾರ್ವಿನ್ ‘ಡೆವಲಪ್ಮೆಂಟಲ್ ಸೈಕಾಲಜಿ’ (ಅಭಿವರ್ಧನಾ ಮನೋ ವಿಜ್ಞಾನ) ಎನ್ನುವ ವಿಷಯದಲ್ಲೂ ಸಾಕಷ್ಟು ಕೆಲಸವನ್ನು ಮಾಡಿದ್ದಾನೆ ಎನ್ನುವ ವಿಚಾರವು ಹೆಚ್ಚಿನ ಜನರಿಗೆ ತಿಳಿದಿರಲಾರದು.
ಡಾರ್ವಿನ್ ಅವರಿಗೆ ಮೊದಲ ಮಗ ಹುಟ್ಟಿದ- ವಿಲಿಯಂ ಎರಾಸ್ಮಸ್ ಡಾರ್ವಿನ್. ಈತ ತನ್ನ ಮಗುವನ್ನೇ ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡ. ತನ್ನ ಮಗುವಿನ ಬೆಳವಣಿಗೆಯ ಪ್ರತಿಯೊಂದು ಅಂಶವನ್ನು ಸೂಕ್ಷ್ಮವಾಗಿ ಗಮನಿಸಿ ಅದನ್ನೆಲ್ಲ ದಾಖಲಿಸಿದ. 1839ರಿಂದ 1841ರವರೆಗೆ ತಾನು ಅವಲೋಕಿಸಿದ ಎಲ್ಲ ವಿಚಾರಗಳಿಗೆ ಒಂದು ಸ್ಥಿರ ರೂಪವನ್ನು ನೀಡಿ ‘ಎ ಬಯಾಗ್ರಫಿಕಲ್ ಸ್ಕೆಚ್ ಆಫ್ ಆನ್ ಇನ್ ಫೆಂಟ್’ (ಹಸುಗೂಸಿನ ಜೀವನ ಚರಿತ್ರೆಯ ಸಂಕ್ಷಿಪ್ತ ರೂಪರೇಖೆ) ಎಂಬ ಪುಸ್ತಕವನ್ನು 1877ರಲ್ಲಿ ಪ್ರಕಟಿಸಿದ.
ಡಾರ್ವಿನ್ ತನ್ನ ಪುಸ್ತಕದಲ್ಲಿ ಹಸುಗೂಸಿನ ಆರಂಭಿಕ ಮರುವರ್ತಿಕಗಳು (ಬೇಬಿ ರಿಫ್ಲೆ ಕ್ಸಸ್), ಸಂವೇದನೆಗಳ ಬೆಳವಣಿಗೆ (ಸೆನ್ಸರಿ ಡೆವಲಪ್ಮೆಂಟ್), ಭಾವನೆಗಳು (ಇಮೋಶನ್ಸ್) ಮತ್ತು ಭಾಷಾ ಕಲಿಕೆಗಳ ಬಗ್ಗೆ ಆದ್ಯತೆಯನ್ನು ನೀಡಿದ್ದ. ‘ಮಂಗನಿಂದ ಮಾನವ’ ಎಂಬ ಹೇಳಿಕೆ ಯಲ್ಲಿ ವಿಶ್ವಾಸವನ್ನಿಟ್ಟಿದ್ದ ಡಾರ್ವಿನ್, ತನ್ನ ಮಗುವಿನ ಎಲ್ಲ ವರ್ತನೆ, ಕಲಿಕೆ ಗಳನ್ನು ಪ್ರಾಣಿಗಳ ಜತೆಯಲ್ಲಿ ಹೋಲಿಸಿ ತನ್ನ ಅನಿಸಿಕೆಗಳನ್ನು ಬರೆಯುತ್ತಿದ್ದ.
ಹಾಗೆ ದಾಖಲಿಸುವಾಗ ಯಾವ್ಯಾವುದು ಆನುವಂಶಿಕವಾಗಿ ಬಂದಿರಬಹುದು, ಯಾವು ದನ್ನು ಕಂದಮ್ಮ ಸ್ವತಃ ಕಲಿತಿರಬಹುದು ಎನ್ನುವ ಅಂಶವನ್ನು ಪರಿಗಣಿಸಿದ್ದ. ಜೀವ ವಿಕಾಸದ ಹಿನ್ನೆಲೆಯಲ್ಲಿ ಇದು ಗಮನೀಯವಾಗಿತ್ತು. ಹಸುಗೂಸಿನ ನಗು, ಅಳು, ಭಯ ಹಾಗೂ ಕೆಲವು ಮುಖಭಾವಗಳು ಜನ್ಮದತ್ತವಾಗಿಯೇ ಬಂದಿರುತ್ತವೆ ಎಂಬ ತೀರ್ಮಾನಕ್ಕೆ ಬಂದಿದ್ದ. ಡಾರ್ವಿನ್ ನಡೆಸಿದ ಅಧ್ಯಯನವು ಅನೇಕ ಹೊಸ ಹೊಸ ವಿಚಾರಗಳ ಬಗ್ಗೆ ಬೆಳಕನ್ನು ಚೆಲ್ಲಿತು.
ಅವೆಂದರೆ: ಮಕ್ಕಳ ಬೆಳವಣಿಗೆಯ ಬಗ್ಗೆ ಕ್ರಮಬದ್ಧವಾದ ಅಧ್ಯಯನದ ಅಗತ್ಯವನ್ನು ಎತ್ತಿ ತೋರಿತು. ಸುದೀರ್ಘ ಕಾಲ ಮಕ್ಕಳ ಅಧ್ಯಯನವನ್ನು ಮಾಡಬೇಕೆಂದಿತು. ಹುಟ್ಟಿನಿಂದ ಹಿಡಿದು ಆ ಮಗುವು ಭಾಷೆಯನ್ನು ಒಳಗೊಂಡಂತೆ, ಎಲ್ಲ ರೀತಿಯ ದೈಹಿಕ ಚಟುವಟಿಕೆ ಗಳನ್ನು ಕಲಿತು, ಸ್ವತಂತ್ರ ಬದುಕನ್ನು ನಡೆಸುವ ಕ್ಷಮತೆಯನ್ನು ಗಳಿಸುವವರೆಗೂ ಅಧ್ಯಯನವನ್ನು ನಡೆಸಬೇಕಾದ ಅಗತ್ಯವನ್ನು ವಿವರಿಸಿತು.
ಪ್ರಾಣಿಗಳಲ್ಲಿ ಕಂಡುಬರುವ ಮೂಲಭೂತ ವರ್ತನೆಗಳೇ ಮನುಷ್ಯರಲ್ಲೂ ಮುಂದುವರಿ ಯುತ್ತವೆ ಎಂಬ ಅಂಶ ವನ್ನು ಪ್ರಸ್ತಾಪಿಸಿ, ಹೆಚ್ಚಿನ ಅಧ್ಯಯನಕ್ಕೆ ಪ್ರಚೋದನೆಯನ್ನು ನೀಡಿತು. ಡಾರ್ವಿನ್ ಪ್ರಸ್ತಾಪಿಸಿದ ನೈಸರ್ಗಿಕ ಆಯ್ಕೆ (ನ್ಯಾಚುರಲ್ ಸೆಲೆಕ್ಷನ್) ಮತ್ತು ವಿಕಾಸವು (ಎವಲ್ಯೂಶನ್) ಮಗುವಿನ ಬಾಲ್ಯದಲ್ಲಿ ಕಂಡುಬರುತ್ತದೆ ಎನ್ನುವುದಕ್ಕೆ ಪುರಾವೆಯನ್ನು ನೀಡಿತು.
ಚಾರ್ಲ್ಸ್ ಡಾರ್ವಿನ್ ಮಾಡಿದ ಮೊದಲ ಅಧ್ಯಯನದ ಬಹು ದೊಡ್ಡ ಲಾಭವೆಂದರೆ, ಮುಂದೆ ಅನೇಕ ವಿಜ್ಞಾನಿಗಳು ಮಕ್ಕಳ ಬೆಳವಣಿಗೆಯ ಮೇಲೆ ಆಸಕ್ತಿಯನ್ನು ತಳೆದರು. ವೈಜ್ಞಾನಿಕ ಅಧ್ಯಯನಗಳನ್ನು ನಡೆಸಿದರು ಹಾಗೂ ಮಕ್ಕಳ ರಮ್ಯ ಜಗತ್ತಿನ ಅನಾವರಣ ವನ್ನು ಮಾಡಿದರು.
ವಿಲ್ಹೆಲ್ಮ್ ಪ್ರೇಯರ್ (1841-1897) ಜರ್ಮನ್ ದೇಶದ ಅಂಗಕ್ರಿಯಾ ವಿಜ್ಞಾನಿ (ಫಿಸಿಯಾ ಲಜಿಸ್ಟ್). ಇವನು ಡಾರ್ವಿನ್ ಅಧ್ಯಯನದಿಂದ ಪ್ರೇರಿತನಾದ. ಡಾರ್ವಿನ್ ಕೇವಲ ತನ್ನ ನಿಖರ ಅಧ್ಯಯನಕ್ಕೆ ಮಾತ್ರ ಆದ್ಯತೆಯನ್ನು ನೀಡಿದ್ದ. ಆದರೆ ಪ್ರೇಯರ್ ತನ್ನ ಅಧ್ಯಯನ ದಲ್ಲಿ ‘ರಿಗರಸ್ ಎಕ್ಸ್‌ಪೆರಿಮೆಂಟಲ್ ಅಪ್ರೋಚ್’ (ನಿಯಾಮಾನುಷ್ಟಿತ ಪ್ರಯೋಗ ವಿಧಾನ) ಅನ್ನು ಅಳವಡಿಸಿಕೊಂಡ.
ಮಗುವಿನ ದೈಹಿಕ, ಮಾನಸಿಕ, ಭಾವನಾತ್ಮಕ ಬೆಳವಣಿಗೆಗಳ ಅಧ್ಯಯನ ಮಾಡಿದ. ‘ದಿ ಮೈಂಡ್ ಆಫ್ ದಿ ಚೈಲ್ಡ್’ ಎನ್ನುವ ಮಗುವಿನ ಜೀವನಚರಿತ್ರೆಯನ್ನು 1882ರಲ್ಲಿ ಪ್ರಕಟಿಸಿದ. ಇದು ಮಕ್ಕಳ ಅಭಿವರ್ಧನಾ ಮನೋವಿಜ್ಞಾನ ಕ್ಷೇತ್ರದಲ್ಲಿ ಒಂದು ಮೈಲಿ ಗಲ್ಲಾಯಿತು. ಪ್ರೇಯರ್ ನಡೆಸಿದ ಅಧ್ಯಯನಗಳ ಮುಖ್ಯಾಂಶಗಳನ್ನು ಮುಂದೆ ಉಲ್ಲೇಖಿ ಸಿರುವಂತೆ ಸಂಗ್ರಹಿಸಬಹುದು:
ಅವಲೋಕನಗಳ ಪ್ರಮಾಣಬದ್ಧತೆ (ಸ್ಟಾಂಡರ್ಡೈಜ಼ೇಶನ್ ಆಫ್ ಅಬ್ಸರ್ವೇಶನ್ಸ್)- ಡಾರ್ವಿ ನ್ ತನ್ನ ಅನಿಸಿಕೆಗಳನ್ನು ಮಾತ್ರ ದಾಖಲಿಸಿದ್ದ. ಆದರೆ ಪ್ರೇಯರ್ ವೈಜ್ಞಾನಿಕ ತಳಹದಿಯ ಮೇಲೆ, ಒಂದು ಪ್ರಮಾಣಬದ್ಧ ವಿಧಾನವನ್ನು ಅನುಸರಿಸಿ ತನ್ನ ಆಧ್ಯಯನ ಗಳನ್ನು ದಾಖಲಿಸಿದ್ದ.
ಪ್ರೇಯರ್ ಮಗುವಿನ ಮಾನಸಿಕ ಬೆಳವಣಿಗೆಯ ಘಟ್ಟಗಳ ಅಧ್ಯಯನಕ್ಕೆ ಆದ್ಯತೆ ನೀಡಿದ್ದ. ಮಗುವಿನ ಗ್ರಹಿಕೆ (ಪರ್ಸೆಪ್ಷನ್), ಗಮನ (ಅಟೆನ್ಷನ್), ನೆನಪು (ಮೆಮೊರಿ), ಭಾವನೆಗಳು (ಎಮೋಶನ್ಸ್) ಮತ್ತು ಇಚ್ಛಾ ಚಲನವನಗಳಿಗೆ (ವಾಲಂಟರಿ ಮೂವ್‌ಮೆಂಟ್ಸ್) ಅದ್ಯತೆ ನೀಡಿದ. ಪ್ರಭೇದಗಳ ತುಲನಾತ್ಮಕ ಅಧ್ಯಯನ (ಕ್ರಾಸ್ ಸ್ಪೀಸೀಸ್ ಕಂಪ್ಯಾರಿಸನ್)- ಜೀವ ಜಗತ್ತಿನ ವರ್ತನೆಗಳ ಸುಧಾರಿತ ರೂಪವು ಮನುಷ್ಯರಲ್ಲಿ ಕಂಡುಬರುತ್ತವೆ ಎಂಬ ಡಾರ್ವಿ ನ್ನನ ವಾದಕ್ಕೆ ತನ್ನ ಅಧ್ಯಯನದಲ್ಲಿ ಮಾನ್ಯತೆಯನ್ನು ನೀಡಿದ.
ಆದರೆ ಇಲ್ಲಿಯೂ ತನ್ನ ನಿಯಂತ್ರಿತ ಅವಲೋಕನವನ್ನು (ಕಂಟ್ರೋಲ್ಡ್ ಅಬ್ಸರ್ವೇಶನ್ಸ್) ಮುಂದುವರಿಸಿದ. ಪ್ರೇಯರ್ ಸಹ, ತನ್ನ ಅಧ್ಯಯನಕ್ಕಾಗಿ ತನ್ನದೇ ಮಗುವನ್ನು ಆಯ್ಕೆ ಮಾಡಿಕೊಂಡ. ತನ್ನ ಅಧ್ಯಯನದಲ್ಲಿ ಮಗುವಿನ ಅಂಗಚಲನೆಯ ಬೆಳವಣಿಗೆ (ಮೋಟಾರ್ ಡೆವಲಪ್ಮೆಂಟ್), ಸಂವೇದನಾ ಅನುಭವಗಳ ಕಲಿಕೆಯನ್ನು (ಸೆನ್ಸರಿ ಎಕ್ಸ್‌ಪೀರಿ ಯನ್ಸಸ್) ಹಾಗೂ ಅರಿವಿನ ಬದಲಾವಣೆಗಳನ್ನು (ಕಾಗ್ನಿಟಿವ್ ಚೇಂಜಸ್) ನಿಖರವಾಗಿ ದಾಖಲಿಸಿದ.
ಅಲ್ಲಿಯವರೆಗೆ ಯುರೋಪಿಯನ್ ಸಮಾಜದಲ್ಲಿ ಮಗುವು ‘ಹುಟ್ಟಿನಿಂದ ಜಡಜೀವಿಗಳು’ ಆಗಿರುತ್ತವೆ ಎಂಬ ಭಾವನೆಯಿತ್ತು. ಅದನ್ನು ಸುಳ್ಳು ಎಂದು ಸಾಧಿಸಿದ. ಮಗುವು ತನ್ನ ‘ಸುತ್ತಮುತ್ತಲಿನ ಪರಿಸರವು ನೀಡುವ ಪ್ರಚೋದನೆಗಳಿಗೆ ಅನುಗುಣವಾಗಿ ಹೊಸ ಹೊಸ ವಿಷಯಗಳನ್ನು ಕಲಿಯುತ್ತದೆ’ ಎಂದ. ಪ್ರೇಯರ್ ನಡೆಸಿದ ಈ ಅನುಭವಸಿದ್ಧ (ಎಂಪೆರಿ ಕಲ್) ಅಧ್ಯಯನಗಳು ಮುಂದೆ ಗಂಭೀರ ಸ್ವರೂಪದ ಅಧ್ಯಯನಗಳಿಗೆ ಭದ್ರವಾದ ತಳಪಾಯವನ್ನು ಹಾಕಿದವು.
ಅಭಿವರ್ಧನಾ ಮನೋವಿಜ್ಞಾನವು ಸಶಕ್ತವಾಗಿ ಬೆಳೆಯಲು ಪ್ರೇಯರ್ ನೀಡಿದ ಕಾಣಿಕೆಯು ಗಣನೀಯವಾದದ್ದು. ಲೂಯಿಸ್ ವಿಲಿಯಂ ಸ್ಟೆರ್ನ್ (1871-1938) ಜರ್ಮನ್ ದೇಶದ ಮನೋವಿಜ್ಞಾನಿಯಾಗಿದ್ದ. ಮಕ್ಕಳ ಮನೋವಿಜ್ಞಾನದ ಬೆಳವಣಿಗೆಗೆ ಕಾರಣರಾದ ಆದ್ಯ ರಲ್ಲಿ ಇವನೂ ಒಬ್ಬನಾಗಿದ್ದ. ಮಕ್ಕಳ ಬುದ್ಧಿವಂತಿಕೆಯ ಮೌಲ್ಯಮಾಪನವನ್ನು ಮಾಡುವ ಕ್ಷೇತ್ರದಲ್ಲಿ ಇವನ ಕಾಣಿಕೆಯು ಗಣನೀಯವಾದದ್ದು.
ಇವನು ಯಾವುದೇ ಮಗುವಿನ ಜೀವನಚರಿತ್ರೆಯನ್ನು ಬರೆಯದಿದ್ದರೂ, ಡಾರ್ವಿನ್ ಹಾಗೂ ಪ್ರೇಯರ್ ನಡೆಸಿದ ಸಂಶೋಧನೆಯ ತಳಹದಿಯ ಮೇಲೆ ಮಕ್ಕಳ ಬುದ್ಧಿವಂತಿಕೆಯನ್ನು ಪರೀಕ್ಷಿಸುವ (ಇಂಟೆಲಿಜೆನ್ಸ್ ಟೆಸ್ಟಿಂಗ್) ವಿಧಾನವನ್ನು ರೂಪಿಸಿದ. ಬುದ್ಧಿಮತ್ತೆಯ ಸೂಚ್ಯಂಕ (ಇಂಟೆಲಿಜೆನ್ಸ್ ಕೋಶಂಟ್= ಐಕ್ಯು) ಎಂಬ ಪದಪುಂಜವನ್ನು ಈತನೇ ಮೊದಲ ಬಾರಿಗೆ ಬಳಸಿದ.
ಇವನು ತನ್ನ ಅಧ್ಯಯನಕ್ಕೆ ಪರಿಗಣಿಸಿದ ಮುಖ್ಯಾಂಶಗಳನ್ನು ಹೀಗೆ ಸಂಗ್ರಹಿಸಬಹುದು: ಮಕ್ಕಳ ಅರಿವಿನ ಬೆಳವಣಿಗೆಯಲ್ಲಿ (ಕಾಗ್ನಿಟಿವ್ ಡೆವಲಪ್ಮೆಂಟ್) ಕಂಡುಬರುವ ವೈಯುಕ್ತಿಕ ವ್ಯತ್ಯಾಸಗಳು. ಮಕ್ಕಳ ಬುದ್ಧಿವಂತಿಕೆಯ ಬೆಳವಣಿಗೆಯ ಪಥವನ್ನು ನಿರ್ಧರಿಸಲು ಸುದೀರ್ಘ ಅಧ್ಯಯನಗಳ ಅಗತ್ಯ.
ಮಗುವಿನ ಶೈಶವ ಹಾಗೂ ಬಾಲ್ಯದ ಅನುಭವಗಳು, ಮಗುವಿನ ನಂತರದ ಬುದ್ಧಿವಂತಿಕೆ ಯ ಮೇಲೆ ಬೀರುವ ಪ್ರಭಾವಗಳು ಹಾಗೂ ಸಂಬಂಧಗಳು. ಸ್ಟೆರ್ನ್ ಮತ್ತು ಆತನ ಮಡದಿ ಕ್ಲಾರಾ ಸ್ಟೆರ್ನ್, ತಮ್ಮ ಅಧ್ಯಯನಕ್ಕಾಗಿ ತಮ್ಮದೇ ಮೂವರು ಮಕ್ಕಳನ್ನು ಆಯ್ಕೆ ಮಾಡಿ ಕೊಂಡರು. ಅವರ ಭಾಷಾ ಕಲಿಕೆ ಹಾಗೂ ಅರಿವಿನ ಬೆಳವಣಿಗೆಯನ್ನು ತಮ್ಮ ಡೈರಿಯಲ್ಲಿ ದಾಖಲಿಸಿದರು.
ಇವರು ನಡೆಸಿದ ಅಧ್ಯಯನವು ‘ಆಧುನಿಕ ಭಾಷಾ ಮತ್ತು ಅರಿವಿನ ವಿಜ್ಞಾನ’ಕ್ಕೆ ಅಂದರೆ ‘ಮಾಡರ್ನ್ ಲಿಂಗ್ವಿಸ್ಟಿಕ್ ಆಂಡ್ ಕಾಗ್ನಿಟಿವ್ ಸೈಕಾಲಜಿ’ಗೆ ಜನ್ಮವನ್ನು ನೀಡಿತು. ಜೀನ್ ಪಿಯಾಜೆ (1896-1980) ಯಾವುದೇ ಮಗುವಿನ ಜೀವನಚರಿತ್ರೆಯನ್ನು ಬರೆಯಲಿಲ್ಲ. ಆದರೆ ಡಾರ್ವಿನ್ ಮತ್ತು ಪ್ರೇಯರ್‌ರ ವಿಧಾನಗಳನ್ನು ತನ್ನ ಮಕ್ಕಳ ಮೇಲೆ ಪ್ರಯೋಗಿಸಿದ. ‘ಥಿಯರಿ ಆಫ್ ಕಾಗ್ನೆಟಿವ್ ಡೆವಲಪ್ಮೆಂಟ್’ (ಅರಿವಿನ ಬೆಳವಣಿಗೆಯ ಸಿದ್ಧಾಂತ) ಅನ್ನು ಮಂಡಿಸಿದ.
ಮಕ್ಕಳ ಅರಿವಿನ ಬೆಳವಣಿಗೆಯಲ್ಲಿ ನಿರ್ದಿಷ್ಟ ಹಂತಗಳು (ಡೆವಲಪ್ಮೆಂಟಲ್ ಸ್ಟೇಜಸ್) ಇರುತ್ತವೆ ಎನ್ನುವುದನ್ನು ತೋರಿಸಿದ. ಜೇಮ್ಸ್ ಮಾರ್ಕ್ ಬಾಲ್ಡ್‌ವಿನ್ (1861-1934) ಮಗುವಿನ ಬೆಳವಣಿಗೆಯಲ್ಲಿ ಸಾಮಾಜಿಕ ಪಾರಸ್ಪರಿಕ ಕ್ರಿಯೆಗಳ ಪಾತ್ರದ (ರೋಲ್ ಆ- ಸೋಶಿಯಲ್ ಇಂಟರಾಕ್ಷನ್) ಮಹತ್ವವನ್ನು ವಿವರಿಸಿದ. ಗ್ರಾನ್ವಿಲ್ಲೆ ಸ್ಟಾನ್ಲೆ ಹಾಲ್ (1846-1924) ಅಮೆರಿಕದ ಮನೋವಿಜ್ಞಾನಿ ಹಾಗೂ ಶಿಕ್ಷಣ ತಜ್ಞನಾಗಿದ್ದ. ಇವನನ್ನು ‘ಅಭಿವ ರ್ಧನಾ ಮನೋವಿಜ್ಞಾನದ ಪಿತಾಮಹ’ ಎಂದು ಕರೆಯುವುದುಂಟು.
ಏಕೆಂದರೆ ಇದುವರೆಗೆ ಈ ಕ್ಷೇತ್ರದಲ್ಲಿ ಕೆಲಸ ಮಾಡಿದವರು ತಮ್ಮ ಸ್ವಂತ ಮಕ್ಕಳನ್ನು ಮಾತ್ರ ಅಧ್ಯಯನ ಮಾಡಿದ್ದರು. ಆದರೆ ಹಾಲ್ ಮೊದಲ ಬಾರಿಗೆ ತನ್ನ ಅಧ್ಯಯನದಲ್ಲಿ ಅಸಂಖ್ಯ ಮಕ್ಕಳನ್ನು ಸೇರಿಸಿಕೊಂಡ. ಹಾಗಾಗಿ ಈತನ ಅಧ್ಯಯನ ಸಾರಾಂಶಗಳು ನಂಬಿ ಕೆಗೆ ಹೆಚ್ಚು ಅರ್ಹವಾದವು. ಬೇಬಿ ಬಯಾಗ್ರಫಿಗಳು ಅವೈಜ್ಞಾನಿಕ ಎನ್ನುವವರಿಗೆ ಉತ್ತರ ವನ್ನು ಕೊಡುವುದು ವ್ಯರ್ಥ. ಆದರೆ ಈ ಬೇಬಿ ಬಯಾಗ್ರಫಿಗಳು ಮನೋವಿಜ್ಞಾನದಲ್ಲಿ ವಿಕಸನೀಯ ಮನೋವಿಜ್ಞಾನ (ಎವಲ್ಯೂಶನರಿ ಸೈಕಾಲಜಿ), ಮಕ್ಕಳ ಪ್ರಾಯೋಗಿಕ ಮನೋವಿಜ್ಞಾನ (ಎಕ್ಸ್ ಪರಿಮೆಂಟಲ್ ಚೈಲ್ಡ್ ಸೈಕಾಲಜಿ), ಅರಿವಿನ ಹಾಗೂ ಭಾಷಾ ಬೆಳ ವಣಿಗೆ (ಕಾಗ್ನಿಟಿವ್ ಆಂಡ್ ಲಾಂಗ್ವೇಜ್ ಡೆವಲಪ್ಮೆಂಟ್), ಬೆಳವಣಿಗೆ ಹಂತಗಳ ಮನೋ ವಿಜ್ಞಾನ (ಸ್ಟೇಜ್ ಥಿಯರಿ ಇನ್ ಸೈಕಾಲಜಿ) ಇತ್ಯಾದಿ ಹೊಸ ಹೊಸ ವಿಜ್ಞಾನ ಶಾಖೆಗಳ ಹುಟ್ಟಿಗೆ ಕಾರಣವಾಗಿದೆ ಎಂದರೆ ಬೇಬಿ ಬಯಾಗ್ರಫಿಗಳನ್ನು ಬರೆದವರ ಬದುಕು ಸಾರ್ಥಕ ವಾಯಿತು ಎನ್ನಬಹುದು.