ಜೀವನ್ಮುಕ್ತ ಸ್ಥಿತಿ ಅರ್ಥಮಾಡಿಕೊಳ್ಳುವುದು
ನಿರಂತರ ಮಾನಸಿಕ ಗದ್ದಲ ನಿಂತು ಹೋಗಿ ಒಳಗೆ ಮೌನ ಇರುತ್ತದೆ. ಸಂಪೂರ್ಣವಾಗಿ ನಿಶ್ಚಲತೆ ಮನಸ್ಸನ್ನು ತುಂಬಿರುತ್ತದೆ. ಏನೇ ಕೆಲಸ ಮಾಡಿದರೂ ‘ನಾನು ಮಾಡುತ್ತಿದ್ದೇನೆ’ ಎಂಬ ಭಾವನೆ ಇರುವುದಿಲ್ಲ. ವಿಷಯಗಳು ‘ನಾನು’ ಎಂಬುದಿಲ್ಲದೆ ತಾನಾಗಿಯೇ ನಡೆಯುತ್ತವೆ. ಹೊರಗಡೆ ನಷ್ಟ, ಅವಮಾನ, ಅನಾರೋಗ್ಯ ಅಥವಾ ಹೊಗಳಿಕೆ ಏನೇ ಆಗಲಿ ಅವರ ನಿಶ್ಚಲತೆಯನ್ನು ಅವು ಕದಡುವುದಿಲ್ಲ
-
ಸತ್ ಶ್ರೀ ಸುಬ್ರಹ್ಮಣ್ಯ ಶಿವಬಾಲನ್
ಜೀವನ್ಮುಕ್ತ ಸ್ಥಿತಿ ಎಂದರೆ ಸಾಧಕನು ಸಾಮಾನ್ಯಅಹಂಕಾರದ ಜೀವನವನ್ನು ಮೀರಿ ಹೋಗಿರುವುದು. ಹಿಡಿದುಕೊಳ್ಳುವ, ಆಸೆಪಡುವ ಮತ್ತು ಭಯಪಡುವ ‘ನಾನು’ ಎಂಬುದು ಕರಗಿಹೋಗಿರುತ್ತದೆ, ಆದರೆ ಶರೀರ ಇನ್ನೂ ಬದುಕುತ್ತಿರುತ್ತದೆ. ಅಂದರೆ ವ್ಯಕ್ತಿಯ ಅಹಂಕಾರವು ಸತ್ತು, ಪ್ರಾಪಂಚಿಕ ಲೋಕದಲ್ಲಿ ಇನ್ನೂ ಬದುಕುತ್ತಿರುವ ಸ್ಥಿತಿಯಿದು.
ಜೀವನ್ಮುಕ್ತರ ಲಕ್ಷಣಗಳು
ನಿರಂತರ ಮಾನಸಿಕ ಗದ್ದಲ ನಿಂತು ಹೋಗಿ ಒಳಗೆ ಮೌನ ಇರುತ್ತದೆ. ಸಂಪೂರ್ಣವಾಗಿ ನಿಶ್ಚಲತೆ ಮನಸ್ಸನ್ನು ತುಂಬಿರುತ್ತದೆ. ಏನೇ ಕೆಲಸ ಮಾಡಿದರೂ ‘ನಾನು ಮಾಡುತ್ತಿದ್ದೇನೆ’ ಎಂಬ ಭಾವನೆ ಇರುವುದಿಲ್ಲ. ವಿಷಯಗಳು ‘ನಾನು’ ಎಂಬುದಿಲ್ಲದೆ ತಾನಾಗಿಯೇ ನಡೆಯುತ್ತವೆ. ಹೊರಗಡೆ ನಷ್ಟ, ಅವಮಾನ, ಅನಾರೋಗ್ಯ ಅಥವಾ ಹೊಗಳಿಕೆ ಏನೇ ಆಗಲಿ ಅವರ ನಿಶ್ಚಲತೆಯನ್ನು ಅವು ಕದಡುವುದಿಲ್ಲ. ಸಂತೋಷ ಮತ್ತು ದುಃಖಗಳು ಅವರ ಪಾಲಿಗೆ ಹಾದುಹೋಗುವ ಮೋಡಗಳಂತೆ; ಅವರು ಆಕಾಶದಂತೆ ಉಳಿದುಕೊಳ್ಳು ತ್ತಾರೆ. ಅವರು ಸಂಪೂರ್ಣವಾಗಿ ಈ ಕ್ಷಣದಲ್ಲಿ ಬದುಕುತ್ತಾರೆ; ಏಕೆಂದರೆ ಭೂತ ಮತ್ತು ಭವಿಷ್ಯದ ಹಿಡಿತ ಇಲ್ಲ.
ಇದನ್ನೂ ಓದಿ: Maya Balachandra Column: ಜೈಸಾ ಅನ್ನ್, ವೈಸಾ ಮನ್...: ರುಚಿಯ ರಾಜಕೀಯಕ್ಕೆ ಆರೋಗ್ಯದ ಬೆಲೆ ತೆರಬೇಕಾ ?
ದೈನಂದಿನ ಜೀವನದ ಚಟುವಟಿಕೆಗಳು ಮತ್ತು ಜಗತ್ತಿನೊಂದಿಗಿನ ಸಂಬಂಧ ಬಂಧನ ಇಲ್ಲದ ಶಾರೀರಿಕ ಅಗತ್ಯಗಳು ಅವರ ಲಕ್ಷಣ. ಶರೀರವನ್ನು ಇನ್ನೂ ನೋಡಿಕೊಳ್ಳಬೇಕು. ತಿನ್ನುವುದು, ಕುಡಿಯುವುದು, ಮಲಗುವುದು ಮೊದಲಿನಂತೆ ನಡೆಯುತ್ತವೆ. ಆದರೆ ಆಸಕ್ತಿ ಕಡಿಮೆ ಇರುವುದರಿಂದ ಆಹಾರ ಬಂದರೆ ತಿನ್ನುತ್ತಾರೆ; ಇಲ್ಲವಾದರೆ ಸುಮ್ಮನೆ ಇರುತ್ತಾರೆ.
ಹೊರಗಿನಿಂದ ನೋಡಿದರೆ, ಅವರು ಕುಟುಂಬ, ಗೆಳೆಯರು, ಸಮಾಜದವರೊಂದಿಗೆ ಸಹಬಾಳ್ವೆ ನಡೆಸುತ್ತಾರೆ. ಆದರೆ ಒಳಗಿನಿಂದ ನನ್ನವರು ಎಂಬ ಭಾವನೆ ಇರುವುದಿಲ್ಲ. ನನ್ನ ಮಗ, ನನ್ನ ಹೆಂಡತಿ, ನನ್ನ ಆಸ್ತಿ ಹೀಗೆ ‘ನನ್ನದು’ ಎಂಬ ವಿಚಾರಗಳು ಹೋಗಿರುತ್ತವೆ.
ಅಪೇಕ್ಷೆಗಳಿಲ್ಲದೆ ಪ್ರೀತಿ ತಾನಾಗಿಯೇ ಹರಿಯುತ್ತದೆ. ಆದರೆ ಬಂಧನ ಇಲ್ಲದೆ, ಕಳೆದು ಕೊಳ್ಳುವ ಭಯವಿಲ್ಲದೆ ಅವರು ಗಾಢವಾಗಿ ಕಾಳಜಿ ವಹಿಸುತ್ತಾರೆ. ಜೀವನ್ಮುಕ್ತರಾಗಿರು ವವರು ತೃಪ್ತಿಗಾಗಿ ಆಸ್ತಿ, ಸಾಧನೆ ಮತ್ತು ಸಂಬಂಧಗಳ ಹಿಂದೆ ಓಡುವುದಿಲ್ಲ.
ಅಗತ್ಯವಾದಾಗ ಸಮಾಜದೊಂದಿಗೆ ಬೆರೆಯುತ್ತಾರೆ. ಆದರೆ ಹೊಗಳಿಕೆ, ನಿಂದನೆ, ಯಶಸ್ಸು, ವಿಫಲತೆಯಿಂದ ಧೃತಿಗೆಡದೆ ಉಳಿಯುತ್ತಾರೆ ಹಾಗೂ ಯಾವುದೂ ಅವರನ್ನು ಬಂಧಿಸುವು ದಿಲ್ಲ. ವೈಯಕ್ತಿಕ ಉದ್ದೇಶವಿಲ್ಲದೆ ಅವರು ಸಹಜವಾಗಿ ಬಂದಿರುವುದನ್ನು ಮಾಡುತ್ತಾರೆ. ಆದರೆ ಯಾವುದೇ ಹೆಮ್ಮೆ, ಒತ್ತಡ ಅಥವಾ ಫಲಿತಾಂಶದ ಬಗ್ಗೆ ಚಿಂತೆ ಇಲ್ಲದೆ ಅವರ ಕೆಲಸ ನಡೆಯುತ್ತದೆ.
ನಿಶ್ಚಲತೆಯ ಉಕ್ಕಿ ಹರಿಯುವಿಕೆಯಿಂದಾಗಿ ಇಂಥ ವ್ಯಕ್ತಿಯು ಶಾಂತಿಯನ್ನು ಹರಡುತ್ತಾರೆ ಮತ್ತು ಇತರರಿಗೆ ಸಹಾಯ ಮಾಡುತ್ತಾರೆ, ಆದರೆ ಅಲ್ಲಿ ಪ್ರಯಾಸ ಕಂಡು ಬರುವುದಿಲ್ಲ. ಅವರು ತಮ್ಮ ಕುಟುಂಬ ಅಥವಾ ಸಮಾಜದಲ್ಲಿ ಇರುತ್ತಾರೆ, ಆದರೆ ಬಂಧನಗಳಿಂದ ಮುಕ್ತ ರಾಗಿರುತ್ತಾರೆ. ಕೇವಲ ಅವರ ಉಪಸ್ಥಿತಿಯೇ ಇತರರನ್ನು ಉನ್ನತಿಗೇರಿಸುತ್ತದೆ.
ಕೆಲವೊಮ್ಮೆ ಅವರು ನೇರವಾಗಿ ಮಾರ್ಗದರ್ಶನ ಮಾಡಬಹುದು, ಆದರೆ ಹೆಚ್ಚಾಗಿ ಅವರ ಮೌನ ಮತ್ತು ಇರುವಿಕೆಯೇ ಮಾರ್ಗದರ್ಶನವಾಗುತ್ತದೆ. ಅವರಿಗೆ ಮರಣವು ಒಂದು ಘಟನೆಯಲ್ಲ, ಏಕೆಂದರೆ ಸಾಯುವ ‘ನಾನು’ ಎಂಬುದು ಈಗಾಗಲೇ ಇಲ್ಲವಾಗಿರುತ್ತದೆ.
ಭೌತಿಕ ಶರೀರ ಹಳೆಯ ಬಟ್ಟೆಯಂತೆ ಬೀಳುತ್ತದೆ, ಆದರೆ ಅವರು ಜೀವಂತರಾಗಿರುವಾಗಲೇ ಮುಕ್ತರಾಗಿದ್ದರು. ಜೀವನ್ಮುಕ್ತ ವ್ಯಕ್ತಿಯು ಪ್ರಾಪಂಚಿಕ ಜಗತ್ತಿನಲ್ಲಿ ದೇಹದ ಮರಣದವರೆಗೆ ಇರುತ್ತಾರೆ. ಏಕೆಂದರೆ ದೇಹದಲ್ಲಿ ಇನ್ನೂ ಪ್ರಾಣವಿದೆ, ಆದರೆ ಒಳಗೆ ಅವರು ಮುಕ್ತರು-ಗಾಳಿಯಿಲ್ಲದ ಸ್ಥಳದಲ್ಲಿ ಇಡಲಾದ ದೀಪದಂತೆ, ಅಲುಗಾಡದೆ ಉರಿಯುತ್ತಿರುವಂತೆ...