Vishweshwar Bhat Column: ಮರುಭೂಮಿಯಲ್ಲೂ ಮೀನುಗಾರಿಕೆ: ಇದು ಇಸ್ರೇಲ್ ಮಾದರಿ
ಇಸ್ರೇಲ್‌ನಲ್ಲಿ ಮಳೆ ಕಡಿಮೆ, ನದಿಗಳೂ ಕಡಿಮೆ. ಹೀಗಿರುವಾಗ ಮೀನು ಸಾಕಾಣಿಕೆ ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡುವುದು ಸಹಜ. ಅಲ್ಲಿನ ವಿಜ್ಞಾನಿಗಳು ‘ಪ್ರತಿ ಹನಿ ನೀರಿಗೂ ಗರಿಷ್ಠ ಲಾಭ’ ಎಂಬ ಮಂತ್ರ ವನ್ನು ಪಾಲಿಸುತ್ತಾರೆ. ಸಮುದ್ರದ ನೀರನ್ನು ಉಪ್ಪುಮುಕ್ತಗೊಳಿಸುವುದು ( Desalination) ಮತ್ತು ಬಳಸಿದ ನೀರನ್ನು ಪುನಃ ಸಂಸ್ಕರಿಸಿ ಮೀನು ಸಾಕಾಣಿಕೆಗೆ ಬಳಸುವುದು ಅಲ್ಲಿನ ತಂತ್ರಜ್ಞಾನದ ವೈಶಿಷ್ಟ್ಯ.ಇಸ್ರೇಲ್ ಅಭಿವೃದ್ಧಿಪಡಿಸಿದ ಈ ತಂತ್ರಜ್ಞಾನವು ಪ್ರಪಂಚಕ್ಕೆ ಮಾದರಿ.
-
ಇದೇ ಅಂತರಂಗ ಸುದ್ದಿ
ಇಸ್ರೇಲ್ ಹೇಳಿ-ಕೇಳಿ ಮರುಭೂಮಿ. ಅಲ್ಲಿ ಮೀನುಗಾರಿಕೆ ಮಾಡೋದು ಸಾಧ್ಯವೇ ಇಲ್ಲ. ಆದರೆ ಆ ದೇಶದ ಮೀನುಗಾರಿಕೆ ಮತ್ತು ಮೀನು ಸಾಕಾಣಿಕೆ ಚಟುವಟಿಕೆ ಜಗತ್ತಿಗೆ ಒಂದು ದೊಡ್ಡ ಸೋಜಿಗ. ಭೂಮಿಯ ಬಹುಪಾಲು ಭಾಗ ಮರುಭೂಮಿಯಿಂದ ಕೂಡಿದ್ದರೂ, ನೀರಿನ ತೀವ್ರ ಅಭಾವ ವಿದ್ದರೂ ಇಸ್ರೇಲ್ ಮೀನು ಸಾಕಾಣಿಕೆಯಲ್ಲಿ ಸಾಧಿಸಿರುವ ಪ್ರಗತಿ ಅದ್ಭುತ.
ಇಸ್ರೇಲ್‌ನಲ್ಲಿ ಮಳೆ ಕಡಿಮೆ, ನದಿಗಳೂ ಕಡಿಮೆ. ಹೀಗಿರುವಾಗ ಮೀನು ಸಾಕಾಣಿಕೆ ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡುವುದು ಸಹಜ. ಅಲ್ಲಿನ ವಿಜ್ಞಾನಿಗಳು ‘ಪ್ರತಿ ಹನಿ ನೀರಿಗೂ ಗರಿಷ್ಠ ಲಾಭ’ ಎಂಬ ಮಂತ್ರವನ್ನು ಪಾಲಿಸುತ್ತಾರೆ. ಸಮುದ್ರದ ನೀರನ್ನು ಉಪ್ಪುಮುಕ್ತಗೊಳಿಸುವುದು ( Desalination) ಮತ್ತು ಬಳಸಿದ ನೀರನ್ನು ಪುನಃ ಸಂಸ್ಕರಿಸಿ ಮೀನು ಸಾಕಾಣಿಕೆಗೆ ಬಳಸುವುದು ಅಲ್ಲಿನ ತಂತ್ರಜ್ಞಾನದ ವೈಶಿಷ್ಟ್ಯ.ಇಸ್ರೇಲ್ ಅಭಿವೃದ್ಧಿಪಡಿಸಿದ ಈ ತಂತ್ರಜ್ಞಾನವು ಪ್ರಪಂಚಕ್ಕೆ ಮಾದರಿ.
ಇಲ್ಲಿ ಮೀನುಗಳನ್ನು ದೊಡ್ಡ ಟ್ಯಾಂಕ್‌ಗಳಲ್ಲಿ ಸಾಕಲಾಗುತ್ತದೆ. ಮೀನಿನ ತ್ಯಾಜ್ಯದಿಂದ ಕಲುಷಿತ ಗೊಂಡ ನೀರನ್ನು ವಿಶೇಷ ಫಿಲ್ಟರ್‌ಗಳ ಮೂಲಕ ಶುದ್ಧೀಕರಿಸಿ, ಮತ್ತೆ ಅದೇ ಟ್ಯಾಂಕ್‌ಗೆ ಬಿಡಲಾಗುತ್ತದೆ. ಇದರಿಂದ ಕೇವಲ ಶೇ.1ರಷ್ಟು ನೀರು ಪೋಲಾಗುತ್ತದೆ. ಇಸ್ರೇಲ್‌ನ ‘ನೆಗೆವ್’ ಎಂಬ ಮರುಭೂಮಿಯ ಕೆಳಭಾಗದಲ್ಲಿ ಉಪ್ಪುನೀರಿನ ಸೆಲೆಗಳಿವೆ.
ಈ ನೀರನ್ನು ಬಳಸಿ ಅಲ್ಲಿನ ರೈತರು ಅಟ್ಲಾಂಟಿಕ್ ಸಾಲ್ಮನ್ ಮತ್ತು ತಿಲಾಪಿಯಾ ಜಾತಿಯ ಮೀನುಗಳನ್ನು ಬೆಳೆಸುತ್ತಿದ್ದಾರೆ. ಮರುಭೂಮಿಯ ಸುಡುವ ಬಿಸಿಲಿನಲ್ಲಿ ಮೀನುಗಳನ್ನು ಬೆಳೆಸು ವುದು ಜಗತ್ತಿಗೇ ಒಂದು ಸೋಜಿಗ!
ಇಸ್ರೇಲ್ ಬಯೋ-ಫ್ಲೋಕ್ ( Bio-floc) ತಂತ್ರಜ್ಞಾನ ಪದ್ಧತಿಯನ್ನು ವ್ಯಾಪಕವಾಗಿ ಬಳಸುತ್ತಿದೆ. ಇದರಲ್ಲಿ ಮೀನಿನ ತ್ಯಾಜ್ಯವನ್ನೇ (ಅಮೋನಿಯಾ) ಉಪಯುಕ್ತ ಬ್ಯಾಕ್ಟೀರಿಯಾಗಳ ಸಹಾಯದಿಂದ ಪ್ರೋಟೀನ್ ಆಗಿ ಪರಿವರ್ತಿಸಲಾಗುತ್ತದೆ. ಆ ಪ್ರೋಟೀನ್ ಅನ್ನು ಮೀನುಗಳೇ ಆಹಾರವಾಗಿ ಸೇವಿಸು ತ್ತವೆ. ಇದರಿಂದ ಆಹಾರದ ವೆಚ್ಚ ಕಡಿಮೆಯಾಗುವುದಲ್ಲದೇ, ನೀರು ಸ್ವಚ್ಛವಾಗಿಯೇ ಇರುತ್ತದೆ.
ಇಸ್ರೇಲ್ ಕೇವಲ ಕೆರೆ ಅಥವಾ ಟ್ಯಾಂಕ್‌ಗಳಿಗೆ ಸೀಮಿತವಾಗಿಲ್ಲ. ಮೆಡಿಟರೇನಿಯನ್ ಸಮುದ್ರದಲ್ಲಿ ಆಧುನಿಕ ಪಂಜರಗಳನ್ನು ಬಳಸಿ ಮೀನು ಹಿಡಿಯುತ್ತಾರೆ. ಜತೆಗೆ, ‘ತಿಲಾಪಿಯಾ’ ಮೀನಿನ ತಳಿಯಲ್ಲಿ ಇಸ್ರೇಲ್ ಮಾಡಿರುವ ಸಂಶೋಧನೆ ಅಪಾರ. ಇಂದು ಪ್ರಪಂಚದಾದ್ಯಂತ ತಿಲಾಪಿಯಾ ಮೀನನ್ನು ‘ಇಸ್ರೇಲ್ ಕಾರ್ಪ್’ ಎನ್ನುವಷ್ಟು ಜನಪ್ರಿಯಗೊಳಿಸಿದ್ದಾರೆ.
ಇದನ್ನೂ ಓದಿ: Vishweshwar Bhat Column: ಶೂನ್ಯದಿಂದಲೂ ಒಂದು ಬಲಿಷ್ಠ ರಾಷ್ಟ್ರ ಕಟ್ಟಬಹುದೆಂಬುದಕ್ಕೆ ಇಸ್ರೇಲ್ ನಿದರ್ಶನ
ಇಸ್ರೇಲ್‌ನ ಮೀನು ಸಾಕಾಣಿಕೆ ಕೇಂದ್ರಗಳಲ್ಲಿ ಮೀನುಗಳಿಗೆ ಆಹಾರ ಹಾಕುವುದರಿಂದ ಹಿಡಿದು, ನೀರಿನ ಆಮ್ಲಜನಕದ ಮಟ್ಟ ತಪಾಸಣೆ ಮಾಡುವವರೆಗೆ ಎಲ್ಲವೂ ಕಂಪ್ಯೂಟರ್‌ಗಳ ಮೂಲಕ ನಡೆಯುತ್ತದೆ. ಸಂವೇದಕಗಳು (ಸೆನ್ಸರ್ಸ್) ನೀರಿನಲ್ಲಿ ಅಲ್ಪ ಬದಲಾವಣೆಯಾದರೂ ತಕ್ಷಣವೇ ಮಾಲೀಕರಿಗೆ ಅಲರ್ಟ್ ಕಳುಹಿಸುತ್ತವೆ. ಇದರಿಂದ ಮೀನುಗಳು ಸಾಯುವ ಸಾಧ್ಯತೆ ಕಮ್ಮಿ.
ಮೀನಿನ ಟ್ಯಾಂಕ್‌ನಿಂದ ಬಂದ ನೈಟ್ರೋಜನ್‌ಯುಕ್ತ ನೀರನ್ನು ಹಸಿರುಮನೆಗಳಲ್ಲಿ ಗಿಡಗಳಿಗೆ (ತರಕಾರಿಗಳಿಗೆ) ಬಳಸಲಾಗುತ್ತದೆ. ಗಿಡಗಳು ನೀರಿನಲ್ಲಿರುವ ಪೋಷಕಾಂಶಗಳನ್ನು ಹೀರಿಕೊಂಡು ನೀರನ್ನು ಶುದ್ಧೀಕರಿಸುತ್ತವೆ. ಆ ಶುದ್ಧ ನೀರು ಮತ್ತೆ ಮೀನಿನ ಟ್ಯಾಂಕ್‌ಗೆ ಹೋಗುತ್ತದೆ. ಇದು ಪ್ರಕೃತಿ ಮತ್ತು ತಂತ್ರಜ್ಞಾನದ ಸುಂದರ ಸಮನ್ವಯ.
ಇಸ್ರೇಲ್ ತಾನು ಬೆಳೆಸಿದ ಮೀನುಗಳನ್ನು ಅಮೆರಿಕ ಮತ್ತು ಯುರೋಪ್‌ಗೆ ರಫ್ತು ಮಾಡುತ್ತದೆ. ಸಮುದ್ರ ಮಟ್ಟಕ್ಕಿಂತ ಕೆಳಗಿರುವ ‘ಡೆಡ್ ಸೀ’ ಸಮೀಪವೂ ಅವರು ಮೀನು ಬೆಳೆಸಿ ತೋರಿಸಿದ್ದಾರೆ. ಅಲಂಕಾರಿಕ ಮೀನುಗಳ ಮಾರುಕಟ್ಟೆಯಲ್ಲೂ ಇಸ್ರೇಲ್ ದೊಡ್ಡ ಪಾಲು ಹೊಂದಿದೆ. ಇಸ್ರೇಲ್‌ನ ಮೀನುಗಾರಿಕೆ ನಮಗೆ ಒಂದು ಪಾಠ.
‘ಸಂಪನ್ಮೂಲಗಳಿಲ್ಲದಿದ್ದರೂ ಬುದ್ಧಿವಂತಿಕೆಯಿಂದ ಏನನ್ನು ಬೇಕಾದರೂ ಸಾಧಿಸಬಹುದು’ ಎಂಬುದಕ್ಕೆ ಇದು ಸಾಕ್ಷಿ. ನೀರಿನ ಸಂರಕ್ಷಣೆ ಮತ್ತು ತಂತ್ರeನದ ಬಳಕೆ ಹೇಗೆ ಒಂದು ದೇಶದ ಆರ್ಥಿಕತೆಯನ್ನು ಬದಲಿಸಬಹುದು ಎಂಬುದನ್ನು ಇಸ್ರೇಲ್ ತೋರಿಸಿಕೊಟ್ಟಿದೆ.
ಭೂಗತ ರಕ್ತನಾಳ
ಇಸ್ರೇಲ್ ದೇಶದ ನೀರಾವರಿ ಪದ್ಧತಿಯು ಕೇವಲ ಒಂದು ಎಂಜಿನಿಯರಿಂಗ್ ಸಾಧನೆಯಲ್ಲ, ಅದು ಮನುಷ್ಯನ ಅಪ್ರತಿಮ ಬುದ್ಧಿಶಕ್ತಿಯ ಸಂಕೇತ. ಮರುಭೂಮಿಯ ನಡುವೆ ಇರುವ ಒಂದು ಪುಟ್ಟ ರಾಷ್ಟ್ರವು ಇಡೀ ದೇಶಕ್ಕೆ ನೀರುಣಿಸಲು ಹರಡಿರುವ ಭೂಗತ ಜಾಲವು ನಿಜಕ್ಕೂ ವಿಸ್ಮಯಕಾರಿ. ಈ ವ್ಯವಸ್ಥೆಯನ್ನು ‘ನ್ಯಾಷನಲ್ ವಾಟರ್ ಕ್ಯಾರಿಯರ್’ (National Water Carrier) ಎಂದು ಕರೆಯ ಲಾಗುತ್ತದೆ.
ರಕ್ತನಾಳಗಳು ನಮ್ಮ ಇಡೀ ದೇಹಕ್ಕೆ ರಕ್ತವನ್ನು ಹರಿಸುವಂತೆ, ಈ ಕೊಳವೆಜಾಲವು ಇಸ್ರೇಲ್‌ನ ಪ್ರತಿಯೊಂದು ಹಳ್ಳಿ ಮತ್ತು ಕೃಷಿ ಭೂಮಿಗೆ ಜೀವಜಲವನ್ನು ಹರಿಸುತ್ತದೆ. ಇಸ್ರೇಲ್‌ನ ಉತ್ತರ ಭಾಗದಲ್ಲಿರುವ ’ಗಲಿಲೀ ಸಮುದ್ರ’ ಅಥವಾ ಕಿನ್ನರೆಟ್ ಸರೋವರದಿಂದ ದಕ್ಷಿಣದ ಮರುಭೂಮಿ ಪ್ರದೇಶವಾದ ನೆಗೆವ್‌ವರೆಗೆ ಈ ಬೃಹತ್ ಜಾಲ ಹರಡಿದೆ. ಸುಮಾರು 130 ಕಿ.ಮೀ.ಗಳಿಗೂ ಹೆಚ್ಚು ಉದ್ದದ ಮುಖ್ಯ ಕೊಳವೆಮಾರ್ಗವಿದ್ದು, ಇದರೊಂದಿಗೆ ಸಾವಿರಾರು ಕಿ.ಮೀ. ಉದ್ದದ ಸಣ್ಣ ಕವಲು ಕೊಳವೆಗಳು ಕವಲೊಡೆದಿವೆ. ಇದು ಮಳೆ ಹೆಚ್ಚಿರುವ ಉತ್ತರದ ನೀರನ್ನು ಬಿಸಿಲಿನಿಂದ ಕೂಡಿದ ದಕ್ಷಿಣಕ್ಕೆ ಸಾಗಿಸುತ್ತದೆ.
ಇಸ್ರೇಲ್‌ನ ಈ ನೀರಾವರಿ ವ್ಯವಸ್ಥೆಯು ಕಣ್ಣು ಮಿಟುಕಿಸುವಷ್ಟರಲ್ಲಿ ಕೆಲಸ ಮಾಡುತ್ತದೆ. ಇದಕ್ಕೆ ಕಾರಣ SCADA (Supervisory Control and Data Acquisition) ಎಂಬ ಅತ್ಯಾಧುನಿಕ ಕಂಪ್ಯೂಟರ್ ತಂತ್ರಜ್ಞಾನ. ಟೆಲ್ ಅವಿವ್ ನಲ್ಲಿರುವ ಕೇಂದ್ರ ಕಚೇರಿಯಿಂದಲೇ ದೇಶದ ಯಾವುದೋ ಒಂದು ಮೂಲೆಯ ಹಳ್ಳಿಯ ನೀರಿನ ವಾಲ್ವ್ ಅನ್ನು ತೆರೆಯಬಹುದು ಅಥವಾ ಮುಚ್ಚಬಹುದು.
ಯಾವ ಬೆಳೆಗೆ ಎಷ್ಟು ನೀರು ಬೇಕು, ಯಾವ ಹೊತ್ತಿಗೆ ಬೇಕು ಎಂಬುದನ್ನು ಮೊದಲೇ ಕಂಪ್ಯೂಟರ್ ನಲ್ಲಿ ಪ್ರೋಗ್ರಾಂ ಮಾಡಲಾಗುತ್ತದೆ. ನಿಗದಿತ ಸಮಯಕ್ಕೆ ಸರಿಯಾಗಿ ನೀರು ಸರಬರಾಜು ಆರಂಭ ವಾಗುತ್ತದೆ ಮತ್ತು ಬೇಕಾದಷ್ಟು ನೀರು ಪೂರೈಕೆಯಾದ ತಕ್ಷಣ ತಾನಾಗಿಯೇ ಸ್ಥಗಿತಗೊಳ್ಳುತ್ತದೆ.
ಕೊಳವೆಗಳಲ್ಲಿ ಎಲ್ಲಿಯಾದರೂ ಸಣ್ಣ ರಂಧ್ರವಾಗಿ ನೀರು ಸೋರುತ್ತಿದ್ದರೆ, ಒತ್ತಡದಲ್ಲಿನ ವ್ಯತ್ಯಾಸ ವನ್ನು ಕಂಪ್ಯೂಟರ್ ತಕ್ಷಣ ಪತ್ತೆಹಚ್ಚಿ ಎಂಜಿನಿಯರ್‌ಗಳಿಗೆ ಅಲರ್ಟ್ ಕಳುಹಿಸುತ್ತದೆ. ಇದರಿಂದ ಹನಿ ನೀರೂ ವ್ಯರ್ಥವಾಗುವುದಿಲ್ಲ. ಇಸ್ರೇಲ್ ನೈಸರ್ಗಿಕ ನೀರನ್ನು ಮಾತ್ರ ಅವಲಂಬಿಸಿಲ್ಲ. ಈ ಭೂಗತ ಜಾಲಕ್ಕೆ ಮೂರು ಪ್ರಮುಖ ಮೂಲಗಳಿಂದ ನೀರು ಬರುತ್ತದೆ.
ಮೊದಲನೆಯದು, ಸಮುದ್ರದ ನೀರು. ಸಮುದ್ರದ ಉಪ್ಪುನೀರನ್ನು ಕುಡಿಯುವ ನೀರಾಗಿ ಪರಿವರ್ತಿ ಸುವ (Desalination) ಬೃಹತ್ ಘಟಕಗಳು ಈ ಜಾಲಕ್ಕೆ ನೀರನ್ನು ಸೇರಿಸುತ್ತವೆ. ಎರಡನೆ ಯದು, ಸಂಸ್ಕರಿಸಿದ ನೀರು. ಬಳಸಿ ಬಿಟ್ಟ ಕೊಳಚೆ ನೀರನ್ನು ಶೇ.90ರಷ್ಟು ಶುದ್ಧೀಕರಿಸಿ ಕೃಷಿಗೆ ಬಳಸಲಾಗುತ್ತದೆ. ಇಸ್ರೇಲ್ ಜಗತ್ತಿನ ಅತಿ ಹೆಚ್ಚು ನೀರು ಮರುಬಳಕೆ ಮಾಡುವ ದೇಶ. ಮೂರನೆ ಯದು, ಮಳೆ ನೀರು ಮತ್ತು ಸರೋವರದ ನೀರು ಅರ್ಥಾತ್ ಲಭ್ಯವಿರುವ ನೈಸರ್ಗಿಕ ಸಿಹಿನೀರು.
ಈ ಕೊಳವೆಜಾಲವು ನೇರವಾಗಿ ಹೊಲಗಳ ಬುಡದಲ್ಲಿರುವ ‘ಹನಿ ನೀರಾವರಿ’ ವ್ಯವಸ್ಥೆಗೆ ಸಂಪರ್ಕ ಹೊಂದಿದೆ. ಇಲ್ಲಿ ನೀರು ಹರಿಯುವುದಿಲ್ಲ, ಬದಲಿಗೆ ಸಸ್ಯದ ಬೇರುಗಳಿಗೆ ಹನಿಯಾಗಿ ತೊಟ್ಟಿಕ್ಕುತ್ತದೆ. ಕಂಪ್ಯೂಟರ್ ಸಿಸ್ಟಮ್ ಮಣ್ಣಿನಲ್ಲಿರುವ ತೇವಾಂಶವನ್ನು ಅಳೆದು, ಗಿಡಕ್ಕೆ ಬಾಯಾರಿಕೆಯಾದಾಗ ಮಾತ್ರ ನೀರನ್ನು ಹರಿಸುತ್ತದೆ.
ಈ ತಂತ್ರಜ್ಞಾನದ ಕಾರಣದಿಂದಲೇ ಇಸ್ರೇಲ್‌ನ ಮರುಭೂಮಿಯಲ್ಲಿ ಇಂದು ಹಸಿರುಮನೆಗಳು (ಗ್ರೀನ್ ಹೌಸ್) ತಲೆ ಎತ್ತಿವೆ. ಅಲ್ಲಿನ ಕೃಷಿಕರು ತಮ್ಮ ಸ್ಮಾರ್ಟ್ ಫೋನ್ ಮೂಲಕವೇ, ತಮ್ಮ ಹೊಲ ಕ್ಕೆ ಎಷ್ಟು ನೀರು ಹೋಗುತ್ತಿದೆ ಎಂಬುದನ್ನು ಗಮನಿಸಬಹುದು. ಒಂದು ಊರಿಗೆ ರಾತ್ರಿ ಎರಡು ಗಂಟೆಗೆ ನೀರು ಬೇಕೆಂದರೆ, ಅಲ್ಲಿನ ರೈತ ಎದ್ದು ಹೋಗಿ ವಾಲ್ವ ತಿರುಗಿಸಬೇಕಿಲ್ಲ.
ಕಂಪ್ಯೂಟರ್ ಅದನ್ನು ಮಾಡುತ್ತದೆ. ಇಸ್ರೇಲ್ ತನ್ನ ನೀರಿನ ಒಟ್ಟು ಬೇಡಿಕೆಯ ಶೇ.50ಕ್ಕಿಂತ ಹೆಚ್ಚು ನೀರನ್ನು ಸಮುದ್ರ ಮತ್ತು ಸಂಸ್ಕರಿಸಿದ ಮೂಲಗಳಿಂದಲೇ ಪಡೆಯುತ್ತದೆ. ಅಲ್ಲಿನ ಪೈಪ್‌ಲೈನ್ ಮಾರ್ಗಗಳು ಕೇವಲ ನೀರನ್ನಷ್ಟೇ ಅಲ್ಲ, ದತ್ತಾಂಶವನ್ನೂ (Data) ಸಾಗಿಸುತ್ತವೆ. ನೀರಿನ ಪ್ರತಿ ಹನಿಗೂ ಬೆಲೆ ನಿಗದಿಪಡಿಸಲಾಗಿದ್ದು, ವ್ಯರ್ಥ ಮಾಡುವಂತೆಯೇ ಇಲ್ಲ. ಇಸ್ರೇಲ್ ತೋರಿಸಿ ಕೊಟ್ಟಿರುವ ಈ ಮಾದರಿಯು ಭಾರತದಂಥ ಕೃಷಿ ಪ್ರಧಾನ ದೇಶಗಳಿಗೆ ಅತ್ಯಂತ ಅವಶ್ಯಕವಾಗಿದೆ. ಕಡಿಮೆ ನೀರನ್ನು ಬಳಸಿ ಅತಿ ಹೆಚ್ಚು ಇಳುವರಿ ಪಡೆಯುವುದು ಹೇಗೆ ಎಂಬುದಕ್ಕೆ ಈ ‘ಭೂಗತ ರಕ್ತನಾಳಗಳ’ ಜಾಲವೇ ಸಾಕ್ಷಿ.
ಮರುಬಳಕೆಯ ಅಮೂಲ್ಯ ಸಂಪನ್ಮೂಲ
ಇಸ್ರೇಲ್ ದೇಶದ ನೀರಾವರಿ ಪವಾಡದ ಹಿಂದೆ ಇರುವ ಅತ್ಯಂತ ಪ್ರಮುಖ ಮಿದುಳು ಎಂದರೆ ಅದು ‘ಜುಕರ್‌ಬರ್ಗ್ ಜಲ ಸಂಶೋಧನಾ ಸಂಸ್ಥೆ’. ಇದು ನೆಗೇವ್ ಮರುಭೂಮಿಯ ಬೆನ್-ಗುರಿಯನ್ ವಿಶ್ವವಿದ್ಯಾಲಯದ ಭಾಗವಾಗಿದ್ದು, ಎಸ್‌ಡೆ ಬೋಕರ್ ಎಂಬ ಪುಟ್ಟ ಪ್ರದೇಶದಲ್ಲಿದೆ. ಕಲುಷಿತ ನೀರು ಅಥವಾ ಕೊಳಚೆ ನೀರನ್ನು ಅಮೃತದಂಥ ಕೃಷಿ ಜಲವಾಗಿ ಪರಿವರ್ತಿಸುವ ಇವರ ಸಾಹಸ ಗಾಥೆ ನಿಜಕ್ಕೂ ರೋಚಕ.
ಸಾಮಾನ್ಯವಾಗಿ ಕೊಳಚೆ ನೀರಿನಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳು, ರಾಸಾಯನಿಕಗಳು ಮತ್ತು ಲವಣಗಳಿರುತ್ತವೆ. ಇವುಗಳನ್ನು ನೇರವಾಗಿ ಕೃಷಿಗೆ ಬಳಸಿದರೆ ಮಣ್ಣು ಹಾಳಾಗುವುದಲ್ಲದೇ, ಬೆಳೆದ ಆಹಾರವೂ ವಿಷಕಾರಿಯಾಗಬಹುದು. ಜುಕರ್ ಬರ್ಗ್ ಸಂಸ್ಥೆಯ ವಿಜ್ಞಾನಿಗಳು ಈ ನೀರನ್ನು ’ಅಪಾಯರಹಿತ’ ವನ್ನಾಗಿ ಮಾಡಲು ಹೊಸ ಹಾದಿಗಳನ್ನು ಕಂಡುಕೊಂಡಿದ್ದಾರೆ.
ಇಸ್ರೇಲ್ ತನ್ನ ದೇಶದ ಶೇ.90ರಷ್ಟು ಕೊಳಚೆ ನೀರನ್ನು ಸಂಸ್ಕರಿಸಿ ಮರುಬಳಕೆ ಮಾಡುತ್ತದೆ (ಜಗತ್ತಿನ ಎರಡನೇ ರಾಷ್ಟ್ರ ಸ್ಪೇನ್ ಕೇವಲ ಶೇ.20ರಷ್ಟು ಮಾಡುತ್ತದೆ). ಈ ಅಗಾಧ ಯಶಸ್ಸಿನ ಹಿಂದೆ ಜುಕರ್‌ಬರ್ಗ್ ಸಂಸ್ಥೆಯ ನಿರಂತರ ಸಂಶೋಧನೆಯಿದೆ. ಅತ್ಯಂತ ಸೂಕ್ಷ್ಮವಾದ ಪೊರೆಗಳನ್ನು ( Membranes) ಬಳಸಿ ನೀರಿನಲ್ಲಿರುವ ಕಲ್ಮಶಗಳನ್ನು ಬೇರ್ಪಡಿಸುವ ತಂತ್ರಜ್ಞಾನವನ್ನು ಇವರು ಅಭಿವೃದ್ಧಿಪಡಿಸಿದ್ದಾರೆ.
ಹಾನಿಕಾರಕ ರಾಸಾಯನಿಕಗಳನ್ನು ತಿಂದು ಜೀರ್ಣಿಸಿಕೊಳ್ಳುವ ವಿಶೇಷ ಬ್ಯಾಕ್ಟೀರಿಯಾಗಳನ್ನು ನೀರಿನಲ್ಲಿ ಬಿಟ್ಟು, ನೀರನ್ನು ನೈಸರ್ಗಿಕವಾಗಿ ಶುದ್ಧೀಕರಿಸುವ ವಿಧಾನವನ್ನು ಇವರು ರೂಪಿಸಿದ್ದಾರೆ. ಎಸ್‌ಡೆ ಬೋಕರ್‌ನಲ್ಲಿರುವ ಈ ಸಂಸ್ಥೆಯಲ್ಲಿ ಸಂಶೋಧನೆ ಎಂದೂ ನಿಲ್ಲುವುದಿಲ್ಲ. ಮಳೆ ಕಡಿಮೆ ಯಾದಾಗ ಅಥವಾ ತಾಪಮಾನ ಹೆಚ್ಚಾದಾಗ ನೀರಿನ ಗುಣಮಟ್ಟ ಹೇಗೆ ಬದಲಾಗುತ್ತದೆ ಮತ್ತು ಅದನ್ನು ಹೇಗೆ ಸರಿಪಡಿಸಬೇಕು ಎಂಬುದರ ಮೇಲೆ ಇಲ್ಲಿನ ವಿಜ್ಞಾನಿಗಳು ಹಗಲಿರುಳೂ ಕೆಲಸ ಮಾಡುತ್ತಾರೆ.
ಸಂಸ್ಕರಿಸಿದ ನೀರಿನಲ್ಲಿ ಲವಣಾಂಶ (Salt content) ಹೆಚ್ಚಿದ್ದರೆ ಗಿಡಗಳು ಸಾಯುತ್ತವೆ. ಈ ಲವಣಾಂಶವನ್ನು ಕಡಿಮೆ ಮಾಡಲು ‘ರಿವರ್ಸ್ ಆಸ್ಮೋಸಿಸ್’ (RO) ತಂತ್ರಜ್ಞಾನದಲ್ಲಿ ಕಡಿಮೆ ಖರ್ಚಿನ ಹೊಸ ವಿಧಾನಗಳನ್ನು ಇವರು ಸೃಷ್ಟಿಸುತ್ತಿದ್ದಾರೆ. ಇಸ್ರೇಲಿನಲ್ಲಿ ಸಂಸ್ಕರಿಸಿದ ನೀರನ್ನು ದೇಶದ ಬೃಹತ್ ಭೂಗತ ಪೈಪ್‌ಲೈನ್‌ಗಳ ಮೂಲಕ ಕೃಷಿ ಭೂಮಿಗೆ ಹರಿಸಲಾಗುತ್ತದೆ. ಈ ನೀರು ಎಷ್ಟು ಸುರಕ್ಷಿತವೆಂದರೆ, ಇಸ್ರೇಲ್ ಈ ನೀರನ್ನು ಬಳಸಿ ಬೆಳೆದ ತರಕಾರಿ ಮತ್ತು ಹಣ್ಣುಗಳನ್ನು ವಿಶ್ವದ ಅತ್ಯಂತ ಕಟ್ಟುನಿಟ್ಟಿನ ಗುಣಮಟ್ಟದ ಮಾನದಂಡಗಳಿರುವ ಯುರೋಪ್ ಮಾರುಕಟ್ಟೆಗೆ ರಫ್ತು ಮಾಡುತ್ತದೆ.
ಜುಕರ್‌ಬರ್ಗ್ ಸಂಸ್ಥೆಯು ಪ್ರತಿ ಹನಿ ನೀರಿನ ಗುಣಮಟ್ಟವನ್ನು ಪ್ರಮಾಣೀಕರಿಸುತ್ತದೆ. ಈ ಸಂಸ್ಥೆ ಯು ಇಸ್ರೇಲ್‌ಗಾಗಿ ಮಾತ್ರವಲ್ಲ, ಇಡೀ ಜಗತ್ತಿನ ನೀರಿನ ಸಮಸ್ಯೆಗೆ ಪರಿಹಾರ ಹುಡುಕುತ್ತಿದೆ. ಆಫ್ರಿಕಾ ದ ಹಳ್ಳಿಗಳಲ್ಲಿ ಕುಡಿಯುವ ನೀರಿನ ಶುದ್ಧೀಕರಣದಿಂದ ಹಿಡಿದು ಭಾರತದ ಗಂಗಾ ನದಿಯ ಸ್ವಚ್ಛತೆ ಯವರೆಗೆ ಇವರ ತಂತ್ರಜ್ಞಾನದ ಸಲಹೆಗಳನ್ನು ಪಡೆಯಲಾಗುತ್ತಿದೆ. ಎಸ್‌ಡೆ ಬೋಕರ್ ಎಂಬುದು ಒಂದು ಕಡು ಮರುಭೂಮಿ. ಅಂಥ ಸ್ಥಳದಲ್ಲಿ ಕುಳಿತು ಇಡೀ ದೇಶದ ನೀರಿನ ಭವಿಷ್ಯವನ್ನು ಬರೆಯುತ್ತಿರುವುದು ಜುಕರ್ ಬರ್ಗ್ ಸಂಸ್ಥೆಯ ವಿeನಿಗಳ ಬದ್ಧತೆಗೆ ಸಾಕ್ಷಿ.
ಇಲ್ಲಿ ‘ತ್ಯಾಜ್ಯ ನೀರು’ ಎಂಬ ಪದವೇ ಇಲ್ಲ, ಬದಲಿಗೆ ಅದನ್ನು ‘ಮರುಬಳಕೆಯ ಅಮೂಲ್ಯ ಸಂಪನ್ಮೂಲ’ ಎಂದು ಪರಿಗಣಿಸಲಾಗುತ್ತದೆ. ರಕ್ತನಾಳಗಳಲ್ಲಿ ರಕ್ತ ಹರಿಯುವಂತೆ ದೇಶದ ಉದ್ದಗಲಕ್ಕೂ ಹರಿಯುವ ನೀರು ಶುದ್ಧವಾಗಿರಲು ಜುಕರ್‌ಬರ್ಗ್ ಜಲ ಸಂಶೋಧನಾ ಸಂಸ್ಥೆಯು ’ಕಿಡ್ನಿ’ಯಂತೆ ಕೆಲಸ ಮಾಡುತ್ತದೆ. ಕಲುಷಿತಗೊಂಡಿದ್ದನ್ನು ಶುದ್ಧೀಕರಿಸಿ ಮರುಜೀವ ನೀಡುವ ಇವರ ಕೆಲಸ ಮಾನವಕುಲಕ್ಕೆ ಮಾದರಿ.
ನಮ್ಮ ದೇಶ, ನಮ್ಮ ನೀರು
ಇಸ್ರೇಲ್ ದೇಶದಲ್ಲಿ ನೀರು ಎನ್ನುವುದು ಕೇವಲ ಒಂದು ನೈಸರ್ಗಿಕ ಮೂಲವಲ್ಲ, ಅದು ಆ ದೇಶದ ಅತ್ಯಂತ ಪವಿತ್ರವಾದ ‘ರಾಷ್ಟ್ರೀಯ ಆಸ್ತಿ’. ಅಲ್ಲಿನ ಪ್ರತಿಯೊಂದು ಹನಿ ನೀರಿನ ಮೇಲೆ ಸರಕಾರದ ಸರ್ವೋಚ್ಚ ಅಧಿಕಾರವಿದೆ. ‘ನೀರು ನಮ್ಮೆಲ್ಲರ ಆಸ್ತಿ, ಅದನ್ನು ಪೋಲು ಮಾಡುವ ಹಕ್ಕು ಯಾರಿಗೂ ಇಲ್ಲ’ ಎಂಬ ತತ್ವದ ಮೇಲೆ ಇಸ್ರೇಲ್‌ನ ಜಲನೀತಿ ರೂಪಿತವಾಗಿದೆ. ಈ ವ್ಯವಸ್ಥೆಯು ಹೇಗೆ ಕಾರ್ಯ ನಿರ್ವಹಿಸುತ್ತದೆ ಮತ್ತು ರೈತರು ಸರಕಾರದೊಂದಿಗೆ ಮಾಡಿಕೊಳ್ಳುವ ಒಪ್ಪಂದಗಳ ಸ್ವರೂಪವೇನು? ಇಸ್ರೇಲ್‌ನ 1956ರ ‘ಜಲ ಕಾಯ್ದೆ’ ಅಡಿಯಲ್ಲಿ ದೇಶದ ಎಲ್ಲ ನೀರಿನ ಮೂಲಗಳು- ಅದು ಮಳೆನೀರು ಇರಲಿ, ಅಂತರ್ಜಲವಿರಲಿ ಅಥವಾ ಸಮುದ್ರದ ನೀರಿರಲಿ- ಸಾರ್ವಜನಿಕ ಆಸ್ತಿಯೆಂದು ಘೋಷಿಸ ಲಾಯಿತು.
ಭಾರತದಂತೆ ತನ್ನ ಜಮೀನಿನಲ್ಲಿ ಬೋರ್ʼವೆಲ್ ಕೊರೆಸಿ ತನಗೆ ಬೇಕಾದಷ್ಟು ನೀರು ಎತ್ತಿಕೊಳ್ಳುವ ಸ್ವಾತಂತ್ರ್ಯ ಇಸ್ರೇಲ್ ರೈತನಿಗಿಲ್ಲ. ಈ ಸಂಪತ್ತನ್ನು ನಿರ್ವಹಿಸಲು ‘ಮೆಕೊರೊಟ್’ ಎಂಬ ರಾಷ್ಟ್ರೀಯ ಜಲ ಕಂಪನಿಯಿದೆ. ಇದು ನೀರನ್ನು ಹೊರತೆಗೆದು, ಶುದ್ಧೀಕರಿಸಿ, ದೇಶದ ಉದ್ದಗಲಕ್ಕೂ ಇರುವ ಕೊಳವೆಜಾಲದ ಮೂಲಕ ವಿತರಿಸುತ್ತದೆ.
ನೀರು ಹಂಚಿಕೆಯ ಸಂಪೂರ್ಣ ಜವಾಬ್ದಾರಿಯನ್ನು ‘ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಸಚಿವಾ ಲಯ’ ಹೊತ್ತುಕೊಂಡಿದೆ. ಯಾವ ಪ್ರದೇಶಕ್ಕೆ ಎಷ್ಟು ನೀರು ಬೇಕು, ಯಾವ ಬೆಳೆಗೆ ಆದ್ಯತೆ ನೀಡ ಬೇಕು ಎಂಬುದನ್ನು ಈ ಸಚಿವಾಲಯವು ನಿರ್ಧರಿಸುತ್ತದೆ. ನೀರನ್ನು ಹಂಚುವ ಮುನ್ನ ಸಚಿವಾಲ ಯವು ಆ ವರ್ಷದ ಮಳೆ, ಜಲಾಶಯಗಳ ಮಟ್ಟ ಮತ್ತು ಮಣ್ಣಿನ ತೇವಾಂಶವನ್ನು ಕಂಪ್ಯೂಟರ್ ಮೂಲಕ ವಿಶ್ಲೇಷಿಸುತ್ತದೆ. ಪ್ರತಿಯೊಬ್ಬ ರೈತನಿಗೂ ಇಂತಿಷ್ಟು ಗ್ಯಾಲನ್ ನೀರು ಎಂದು ಕೋಟಾ ವನ್ನು ನಿಗದಿಪಡಿಸಲಾಗುತ್ತದೆ.
ಇಸ್ರೇಲ್‌ನಲ್ಲಿ ಕೃಷಿ ಮಾಡುವುದು ಒಂದು ದೊಡ್ಡ ಜವಾಬ್ದಾರಿ. ಒಬ್ಬ ರೈತ ಬೇಸಾಯ ಆರಂಭಿಸ ಬೇಕೆಂದರೆ ಸರಕಾರದೊಂದಿಗೆ ಹತ್ತು ವರ್ಷಗಳ ದೀರ್ಘಾವಽಯ ಒಪ್ಪಂದವನ್ನು ಮಾಡಿಕೊಳ್ಳ ಬೇಕು. ಸರಕಾರವು ಮುಂದಿನ ಹತ್ತು ವರ್ಷಗಳ ಕಾಲ ರೈತನಿಗೆ ದೊರೆಯುವ ನೀರಿನ ಪ್ರಮಾಣ ವನ್ನು ನಿಗದಿಪಡಿಸುತ್ತದೆ.
ರೈತ ತನಗೆ ಇಷ್ಟ ಬಂದ ಬೆಳೆಯನ್ನು ಬೆಳೆಯುವಂತಿಲ್ಲ. ನೀರಿನ ಲಭ್ಯತೆ ಮತ್ತು ಮಣ್ಣಿನ ಗುಣಕ್ಕೆ ಅನುಗುಣವಾಗಿ ಸರಕಾರ ಸೂಚಿಸುವ ಅಥವಾ ಅನುಮೋದಿಸುವ ಬೆಳೆಗಳನ್ನೇ ಬೆಳೆಯಬೇಕು. ರೈತನು ಹನಿ ನೀರಾವರಿ ಮತ್ತು ಸ್ಮಾರ್ಟ್ ಸೆನ್ಸರ್ʼಗಳನ್ನು ಬಳಸುವುದಾಗಿ ಒಪ್ಪಂದದಲ್ಲಿ ಸಹಿ ಹಾಕಬೇಕು. ನೀರನ್ನು ವ್ಯರ್ಥ ಮಾಡಿದರೆ ಭಾರಿ ದಂಡ ತೆರಬೇಕಾಗುತ್ತದೆ.
ಇಸ್ರೇಲ್‌ನಲ್ಲಿ ನೀರು ಉಚಿತವಲ್ಲ. ರೈತರು ತಾವು ಬಳಸುವ ಪ್ರತಿಯೊಂದು ಹನಿ ನೀರಿಗೂ ಹಣ ನೀಡಬೇಕು. ನಿಗದಿತ ಕೋಟಾದೊಳಗೆ ಬಳಸುವ ನೀರಿಗೆ ಒಂದು ದರವಿದ್ದರೆ, ಕೋಟಾ ಮೀರಿ ಬಳಸುವ ನೀರಿಗೆ ಅತ್ಯಂತ ಹೆಚ್ಚಿನ ದರ ವಿಧಿಸಲಾಗುತ್ತದೆ. ಇದು ರೈತರು ನೀರನ್ನು ಮಿತವಾಗಿ ಬಳಸುವಂತೆ ಮಾಡುತ್ತದೆ. ಕುಡಿಯುವ ನೀರಿಗಿಂತ ಸಂಸ್ಕರಿಸಿದ ಕೊಳಚೆ ನೀರಿಗೆ ಕಡಿಮೆ ದರ ನಿಗದಿಪಡಿಸಲಾಗಿದೆ. ಹೀಗಾಗಿ ರೈತರು ಸಂಸ್ಕರಿಸಿದ ನೀರನ್ನೇ ಹೆಚ್ಚು ಬಳಸುತ್ತಾರೆ.
ರೈತರ ಒಪ್ಪಂದದಂತೆ ಅವರಿಗೆ ಬೇಕಾದ ನೀರನ್ನು ಕಂಪ್ಯೂಟರ್ ಪ್ರೋಗ್ರಾಂ ಮೂಲಕ ಅವರ ಹೊಲದ ಪೈಪ್‌ಗಳಿಗೆ ಬಿಡಲಾಗುತ್ತದೆ. ಪ್ರತಿಯೊಂದು ಹೊಲಕ್ಕೂ ಸ್ಮಾರ್ಟ್ ಮೀಟರ್ ಅಳವಡಿಸ ಲಾಗಿರುತ್ತದೆ. ರೈತ ತನ್ನ ಮೊಬೈಲ್ ಮೂಲಕವೇ ತನಗೆ ಸಿಕ್ಕ ನೀರಿನ ಪ್ರಮಾಣವನ್ನು ನೋಡಬಹುದು.
ಪೈಪ್‌ಲೈನ್‌ನಲ್ಲಿ ಎಲ್ಲಿಯಾದರೂ ನೀರು ಪೋಲಾಗುತ್ತಿದ್ದರೆ ಕೇಂದ್ರ ಕಚೇರಿಗೆ ತಕ್ಷಣ ಮಾಹಿತಿ ಹೋಗುತ್ತದೆ. ಇದರಿಂದ ರಾಷ್ಟ್ರೀಯ ಸಂಪತ್ತಾದ ನೀರು ಪೋಲಾಗುವುದು ತಪ್ಪುತ್ತದೆ. ‘ನನ್ನ ಜಮೀನು, ನನ್ನ ನೀರು’ ಎಂಬ ಸ್ವಾರ್ಥವನ್ನು ಬದಿಗಿಟ್ಟು ‘ನಮ್ಮ ದೇಶ, ನಮ್ಮ ನೀರು’ ಎಂಬ ಭಾವನೆಯನ್ನು ಇಸ್ರೇಲ್ ಬೆಳೆಸಿದೆ. ಸರಕಾರದ ಕಟ್ಟುನಿಟ್ಟಿನ ನಿಯಮಗಳು ಮತ್ತು ರೈತರ ಹತ್ತು ವರ್ಷಗಳ ಶಿಸ್ತಿನ ಒಪ್ಪಂದದಿಂದಾಗಿಯೇ ಇಂದು ಇಸ್ರೇಲ್ ಮರುಭೂಮಿಯಲ್ಲೂ ಹಣ್ಣು-ತರಕಾರಿಗಳನ್ನು ಬೆಳೆದು ಜಗತ್ತಿಗೆ ರಫ್ತು ಮಾಡಲು ಸಾಧ್ಯವಾಗಿದೆ.
ನೀರಿನ ನಿರ್ವಹಣೆಯಲ್ಲಿ ಭಾರತದಂಥ ದೇಶಗಳು ಇಸ್ರೇಲ್‌ನ ಈ ‘ಶಿಸ್ತು ಮತ್ತು ತಂತ್ರಜ್ಞಾನ’ದ ಮಾದರಿಯನ್ನು ಅಳವಡಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ.
ಜಲ ಸಂರಕ್ಷಣೆಯ ಹೊಸ ಕ್ರಾಂತಿ
ಇಸ್ರೇಲ್‌ನ ಜಲ ನಿರ್ವಹಣಾ ವ್ಯವಸ್ಥೆಯಲ್ಲಿ ‘ಸ್ಮಾರ್ಟ್ ಮೀಟರ್ ’ಗಳು ಕೇವಲ ನೀರನ್ನು ಅಳೆಯುವ ಸಾಧನಗಳಲ್ಲ, ಅವು ಇಡೀ ವ್ಯವಸ್ಥೆಯ ’ಕಣ್ಣು ಮತ್ತು ಕಿವಿ’ಗಳಂತೆ ಕೆಲಸ ಮಾಡುತ್ತವೆ. ಇವುಗಳ ತಾಂತ್ರಿಕ ಕಾರ್ಯವೈಖರಿಯು ಅತ್ಯಂತ ನಿಖರ. ಹಳೆಯ ಕಾಲದ ಮೀಟರ್‌ಗಳಲ್ಲಿ ನೀರು ಹರಿಯುವಾಗ ಒಳಗಿನ ಚಕ್ರ ತಿರುಗುತ್ತಿತ್ತು. ಆದರೆ ಇಸ್ರೇಲ್‌ನ ಸ್ಮಾರ್ಟ್ ಮೀಟರ್‌ಗಳು ಅಲ್ಟ್ರಾ ಸಾನಿಕ್ ತರಂಗಗಳನ್ನು ಬಳಸುತ್ತವೆ.
ಮೀಟರ್‌ನ ಒಳಗೆ ಶಬ್ದದ ತರಂಗಗಳನ್ನು ಕಳುಹಿಸಲಾಗುತ್ತದೆ. ನೀರಿನ ವೇಗಕ್ಕೆ ಅನುಗುಣವಾಗಿ ಈ ತರಂಗಗಳು ಚಲಿಸುವ ಸಮಯವನ್ನು ಲೆಕ್ಕ ಹಾಕಿ, ಹರಿಯುವ ನೀರಿನ ಪ್ರಮಾಣವನ್ನು ಮಿಲಿ-ಲೀಟರ್‌ಗಳಷ್ಟು ನಿಖರವಾಗಿ ಅಳೆಯಲಾಗುತ್ತದೆ. ಇದರಲ್ಲಿ ಚಲಿಸುವ ಭಾಗಗಳಿಲ್ಲದ ಕಾರಣ, ಸವೆತ ಉಂಟಾಗುವುದಿಲ್ಲ ಮತ್ತು ಹತ್ತು ವರ್ಷಗಳ ಕಾಲ ಯಾವುದೇ ತೊಂದರೆಯಿಲ್ಲದೆ ಕೆಲಸ ಮಾಡು ತ್ತದೆ.
ಪ್ರತಿಯೊಂದು ಸ್ಮಾರ್ಟ್ ಮೀಟರ್ ಒಂದು ಸಣ್ಣ ಟ್ರಾನ್ಸ್ʼಮಿಟರ್ ಅನ್ನು ಹೊಂದಿರುತ್ತದೆ. ಇದು ಸಂಗ್ರಹಿಸಿದ ದತ್ತಾಂಶವನ್ನು ಸೆಲ್ಯುಲಾರ್ ನೆಟ್‌ವರ್ಕ್ ಅಥವಾ ರೇಡಿಯೋ ಫ್ರೀಕ್ವೆನ್ಸಿ ಮೂಲಕ ಕೇಂದ್ರ ಸರ್ವರ್‌ಗೆ ಕಳುಹಿಸುತ್ತದೆ. ರೈತರು ಮತ್ತು ಜಲ ಪ್ರಾಧಿಕಾರದ ಅಧಿಕಾರಿಗಳು ತಮ್ಮ ಸ್ಮಾರ್ಟ್ ಫೋನ್ ಅಥವಾ ಕಂಪ್ಯೂಟರ್‌ನಲ್ಲಿ ಪ್ರತಿ ನಿಮಿಷ ಎಷ್ಟು ನೀರು ಬಳಕೆಯಾಗುತ್ತಿದೆ ಎಂಬುದನ್ನು ಲೈವ್ ಆಗಿ ನೋಡಬಹುದು.
ಸೋರಿಕೆ ಪತ್ತೆ ಹಚ್ಚುವುದು ಈ ಮೀಟರ್‌ಗಳ ವೈಶಿಷ್ಟ್ಯ. ನೀವು ನೀರನ್ನು ಬಳಸುತ್ತಿಲ್ಲದಿದ್ದರೂ ಮೀಟರ್‌ನಲ್ಲಿ ಸಣ್ಣ ಪ್ರಮಾಣದ ಚಲನೆ ಕಂಡುಬಂದರೆ, ಅದು ತಕ್ಷಣ ‘ಸೋರಿಕೆ ಇದೆ’ ಎಂಬ ಸಂದೇಶವನ್ನು ಕಳುಹಿಸುತ್ತದೆ. ಒಂದು ವೇಳೆ ಸಾಮಾನ್ಯಕ್ಕಿಂತ ಅತಿ ವೇಗವಾಗಿ ನೀರು ಹರಿಯು ತ್ತಿದ್ದರೆ (ಪೈಪ್ ಒಡೆದಿದ್ದರೆ), ಮೀಟರ್ ತಾನಾಗಿಯೇ ವಾಲ್ವ ಅನ್ನು ಮುಚ್ಚುವ ಸಾಮರ್ಥ್ಯವನ್ನೂ ಹೊಂದಿರುತ್ತದೆ.
ಈ ಮೀಟರ್‌ಗಳು ಕೇವಲ ಮಾಹಿತಿಯನ್ನು ನೀಡುವುದಿಲ್ಲ, ಬದಲಿಗೆ ಆದೇಶಗಳನ್ನೂ ಪಾಲಿಸುತ್ತವೆ. ರೈತನು ತನ್ನ ಒಪ್ಪಂದದ ಪ್ರಕಾರ ನಿಗದಿಪಡಿಸಿದ ನೀರಿನ ಕೋಟಾವನ್ನು ತಲುಪಿದ ತಕ್ಷಣ, ಕೇಂದ್ರ ಕಚೇರಿಯಿಂದಲೇ ಆ ಹೊಲದ ನೀರಿನ ಸಂಪರ್ಕವನ್ನು ಕಟ್ ಮಾಡಬಹುದು. ಇದರಿಂದ ಅಧಿಕಾರಿ ಗಳು ಪ್ರತಿ ಹೊಲಕ್ಕೂ ಹೋಗಿ ವಾಲ್ವ ತಿರುಗಿಸುವ ಅವಶ್ಯಕತೆ ಇರುವುದಿಲ್ಲ. ಈ ಮೀಟರ್‌ಗಳು ಅತ್ಯಂತ ಕಡಿಮೆ ವಿದ್ಯುತ್ ಬಳಸುತ್ತವೆ.
ಇವುಗಳಲ್ಲಿ ಅಳವಡಿಸಲಾದ ಲಿಥಿಯಂ ಬ್ಯಾಟರಿಗಳು ಹವಾಮಾನದ ಏರುಪೇರುಗಳ ನಡುವೆಯೂ 10-12 ವರ್ಷಗಳ ಕಾಲ ನಿರಂತರವಾಗಿ ಕೆಲಸ ಮಾಡುತ್ತವೆ.
ಇಸ್ರೇಲ್‌ನ ಸ್ಮಾರ್ಟ್ ಮೀಟರ್‌ಗಳು ನೀರಿನ ಬಳಕೆಯನ್ನು ಪಾರದರ್ಶಕಗೊಳಿಸಿವೆ. ಇದರಿಂದಾಗಿ ನೀರಿನ ಕಳ್ಳತನ ಸಂಪೂರ್ಣವಾಗಿ ನಿಂತಿದೆ ಮತ್ತು ಪ್ರತಿ ಹನಿ ನೀರಿಗೂ ಸರಿಯಾದ ಲೆಕ್ಕ ಸಿಗುತ್ತಿದೆ. ಇದು ಕೃಷಿ ಕ್ಷೇತ್ರದಲ್ಲಿ ಜಲ ಸಂರಕ್ಷಣೆಯ ಹೊಸ ಕ್ರಾಂತಿಯಾಗಿದೆ.