ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gururaj Gantihole Column: ಸೆಮಿ ಕಂಡಕ್ಟರ್‌ ಚಿಪ್:‌ ಮಾಡದಿರಲಿ ಕರ್ನಾಟಕ ತಪ್ಪು

ಸೆಮಿಕಂಡಕ್ಟರ್ ಚಿಪ್ಟ್ ಎಂದರೆ ಸರಳವಾಗಿ ಹೇಳಬೇಕೆಂದರೆ, ನಮ್ಮ ಸ್ಮಾರ್ಟ್ʼಫೋನ್‌ಗಳು, ಕಂಪ್ಯೂ ಟರ್‌ಗಳು ಮತ್ತು ಕಾರುಗಳಂತಹ ಆಧುನಿಕ ಎಲೆಕ್ಟ್ರಾನಿಕ್ ಸಾಧನಗಳ ಮೆದುಳು. ನಮ್ಮ ತಲೆಗೂದಲಿನ ಎಳೆಯಷ್ಟೇ ಸೂಕ್ಷ ವಾಗಿರುವ ಈ ಸಿಲಿಕಾನ್ ತುಣುಕುಗಳು ವಿದ್ಯುತ್ ಪ್ರವಾಹವನ್ನು ನಿಯಂತ್ರಿಸುವ ಮೂಲಕ ಸಾಧನಗಳು ಹೇಗೆ ಕೆಲಸ ಮಾಡಬೇಕೆಂದು ನಿರ್ಧರಿಸುತ್ತವೆ.

ಸೆಮಿ ಕಂಡಕ್ಟರ್‌ ಚಿಪ್:‌ ಮಾಡದಿರಲಿ ಕರ್ನಾಟಕ ತಪ್ಪು

-

ಗಂಟಾಘೋಷ

ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್'ಫೋನ್ʼಗಳಿಂದ ಹಿಡಿದು ಕೃತಕ ಬುದ್ಧಿಮತ್ತೆ, ಬ್ಯಾಟರಿ ಚಾಲಿತ ವಾಹನಗಳು (ಇವಿ), ರಕ್ಷಣೆ ಮತ್ತು ಆಟೋಮೊಬೈಲ್ ವಲಯದವರೆಗೆ ಪ್ರತಿಯೊಂದು ಆಧುನಿಕ ತಂತ್ರಜ್ಞಾನಕ್ಕೂ ಅತ್ಯಗತ್ಯವಾಗಿ ಬೇಕಿರುವುದು ಸೆಮಿಕಂಡಕ್ಟರ್ ಚಿಪ್‌ಗಳು. ಜಾಗತಿಕ ರಾಜಕೀಯ ಮತ್ತು ಆರ್ಥಿಕತೆಯ ಗತಿಯನ್ನೇ ನಿರ್ಧರಿಸುವ ಶಕ್ತಿ ಹೊಂದಿರುವ ಈ ಸೂಕ್ಷ ಚಿಪ್ʼಗಳ ತಯಾರಿಕೆಯಲ್ಲಿ ಸ್ವಾವಲಂಬನೆ ಸಾಧಿಸಲು ಭಾರತ ಸರಕಾರವು ‘ಇಂಡಿಯಾ ಸೆಮಿಕಂಡಕ್ಟರ್ ಮಿಷನ್’ ಅಡಿಯಲ್ಲಿ ಭಾರಿ ಸಬ್ಸಿಡಿ ಮತ್ತು ಪ್ರೋತ್ಸಾಹಕಗಳನ್ನು ಘೋಷಿಸಿದೆ.

ದೇಶವನ್ನು ಜಾಗತಿಕ ಚಿಪ್ ಉತ್ಪಾದನಾ ಹಬ್ ಆಗಿ ಪರಿವರ್ತಿಸಲು ಹಲವು ರಾಜ್ಯಗಳು ತೀವ್ರ ಪೈಪೋಟಿಗೆ ಇಳಿದಿದ್ದು, ಕೋಟ್ಯಂತರ ರೂಪಾಯಿಗಳ ಬಂಡವಾಳವನ್ನು ಆಕರ್ಷಿಸುತ್ತಿವೆ.

ಸೆಮಿಕಂಡಕ್ಟರ್ ಚಿಪ್ಸ್ ಎಂದರೆ ಸರಳವಾಗಿ ಹೇಳಬೇಕೆಂದರೆ, ನಮ್ಮ ಸ್ಮಾರ್ಟ್ʼಫೋನ್‌ಗಳು, ಕಂಪ್ಯೂಟರ್‌ಗಳು ಮತ್ತು ಕಾರುಗಳಂತಹ ಆಧುನಿಕ ಎಲೆಕ್ಟ್ರಾನಿಕ್ ಸಾಧನಗಳ ಮೆದುಳು. ನಮ್ಮ ತಲೆಗೂದಲಿನ ಎಳೆಯಷ್ಟೇ ಸೂಕ್ಷ ವಾಗಿರುವ ಈ ಸಿಲಿಕಾನ್ ತುಣುಕುಗಳು ವಿದ್ಯುತ್ ಪ್ರವಾಹವನ್ನು ನಿಯಂತ್ರಿಸುವ ಮೂಲಕ ಸಾಧನಗಳು ಹೇಗೆ ಕೆಲಸ ಮಾಡಬೇಕೆಂದು ನಿರ್ಧರಿಸುತ್ತವೆ.

ಭಾರತದಲ್ಲಿ ತಯಾರಾಗಲಿರುವ ಈ ಚಿಪ್‌ಗಳು ಕೇವಲ ಸಾಧಾರಣ ಬಿಡಿಭಾಗಗಳಲ್ಲ, ಇವು ನಿಮ್ಮ ಫೋನಿನಲ್ಲಿ ಫೋಟೋ ಪ್ರೊಸೆಸ್ ಮಾಡುವುದರಿಂದ ಹಿಡಿದು, ಕಾರುಗಳಲ್ಲಿ ಬ್ರೇಕ್ ಹಾಕುವುದು ಹಾಗೂ ಎಟಿಎಂ ಯಂತ್ರಗಳು ಕಾರ್ಯನಿರ್ವಹಿಸುವವರೆಗೆ ಪ್ರತಿಯೊಂದು ಡಿಜಿಟಲ್ ಚಟುವಟಿಕೆ ಯನ್ನೂ ನಿಯಂತ್ರಿಸುವ ಅತ್ಯಂತ ಶಕ್ತಿಶಾಲಿ ಇಂಜಿನ್‌ಗಳಾಗಿವೆ.

ಈ ಚಿಪ್‌ಗಳನ್ನು ತಯಾರಿಸುವ ಪ್ರಕ್ರಿಯೆಯನ್ನು ಫ್ಯಾಬ್ರಿಕೇಷನ್ ಅಥವಾ ಫ್ಯಾಬ್ ಎನ್ನಲಾಗುತ್ತದೆ. ಇದು ಜಗತ್ತಿನ ಅತ್ಯಂತ ಸಂಕೀರ್ಣವಾದ ಮತ್ತು ಕರಾರುವಕ್ಕಾದ ಉತ್ಪಾದನಾ ವ್ಯವಸ್ಥೆಯಾಗಿದೆ. ಮರಳಿನಿಂದ ಸಂಸ್ಕರಿಸಿದ ‘ಸಿಲಿಕಾನ್ ವೆಫರ್’ ಎಂಬ ದುಂಡಗಿನ ಹೊಳಪಿನ ತಟ್ಟೆಯ ಮೇಲೆ ಅತ್ಯಾಧುನಿಕ ಲೇಸರ್ ಕಿರಣಗಳನ್ನು ಬಳಸಿ ಕೋಟ್ಯಂತರ ಟ್ರಾನ್ಸಿಸ್ಟರ್‌ಗಳನ್ನು ಅತ್ಯಂತ ನಿಖರ‌ ವಾಗಿ ಮುದ್ರಿಸಲಾಗುತ್ತದೆ. ಈ ಇಡೀ ಪ್ರಕ್ರಿಯೆಯು ಧೂಳಿನ ಒಂದು ಕಣವೂ ಇಲ್ಲದ ಹೈ-ಟೆಕ್ ಕ್ಲೀನ್ ರೂಮ್ಸ್ ಎಂಬ ಪ್ರಯೋಗಾಲಯಗಳಲ್ಲಿ ನಡೆಯುತ್ತದೆ. ‌

ಇದನ್ನೂ ಓದಿ: Gururaj Gantihole Column: ಆಯುಷ್‌ ಕ್ರಾಂತಿ: ಆಯುರ್ವೇದಕ್ಕೂ ಇದೆ ಆರೋಗ್ಯವಿಮೆ

ಮುದ್ರಣ ಮುಗಿದ ನಂತರ, ಈ ದುಂಡಗಿನ ತಟ್ಟೆಯನ್ನು ಸಣ್ಣ ಸಣ್ಣ ಚೌಕಾಕಾರದ ಕಣಗಳಾಗಿ ಕತ್ತರಿಸಿ, ಅವುಗಳಿಗೆ ರಕ್ಷಣಾತ್ಮಕ ಕವಚವನ್ನು ಹಾಕಿ ಅಂತಿಮವಾಗಿ ಬಳಸಬಹುದಾದ ಚಿಪ್‌ ಗಳನ್ನಾಗಿ ಪರಿವರ್ತಿಸಲಾಗುತ್ತದೆ. ಭಾರತದ ಗುಜರಾತ್‌ನಂತಹ ರಾಜ್ಯಗಳಲ್ಲಿ ಈಗ ಆರಂಭ ವಾಗುತ್ತಿರುವುದು ಇದೇ ದೈತ್ಯ ಪ್ರಕ್ರಿಯೆಯಾಗಿದೆ.

ಇಂಡಿಯಾ ಸೆಮಿಕಂಡಕ್ಟರ್ ಮಿಷನ್

ಭಾರತವನ್ನು ಜಾಗತಿಕ ಎಲೆಕ್ಟ್ರಾನಿಕ್ಸ್ ಮತ್ತು ಚಿಪ್ ಉತ್ಪಾದನಾ ಹಬ್ ಆಗಿ ಪರಿವರ್ತಿಸಲು ಕೇಂದ್ರ ಸರಕಾರವು ರೂ.76000 ಕೋಟಿ ಮೊತ್ತದ ಬೃಹತ್ ಪ್ರೋತ್ಸಾಹಕ ನಿಧಿಯೊಂದಿಗೆ ‘ಇಂಡಿಯಾ ಸೆಮಿ‌ ಕಂಡಕ್ಟರ್ ಮಿಷನ್’ ಯೋಜನೆಯನ್ನು ಜಾರಿಗೆ ತಂದಿದೆ. ಜಾಗತಿಕ ಹೂಡಿಕೆದಾರರನ್ನು ಭಾರತ ದತ್ತ ಸೆಳೆಯಲು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಈ ಕೆಳಗಿನ 4 ಪ್ರಮುಖ ಪ್ರೋತ್ಸಾಹಕ ಯೋಜನೆಗಳನ್ನು ರೂಪಿಸಿದೆ:

ಸೆಮಿಕಂಡಕ್ಟರ್ ಉತ್ಪಾದನಾ ಘಟಕಗಳ ಸ್ಥಾಪನೆ: ಈ ಮಿಷನ್ ದೇಶದಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಘಟಕಗಳ ಸ್ಥಾಪನೆಗೆ ಹೆಚ್ಚಿನ ಉತ್ತೇಜನ ನೀಡುತ್ತದೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಯೆಂದರೆ, ಮಹಾರಾಷ್ಟ್ರದಲ್ಲಿ ಪ್ರಸ್ತಾವಿಸಲಾಗಿರುವ ಬರೋಬ್ಬರಿ 10 ಬಿಲಿಯ ಡಾಲರ್ ವೆಚ್ಚದ ಬೃಹತ್ ಯೋಜನೆ. ಈ ಅತ್ಯಾಧುನಿಕ ಘಟಕವು ಮಾಸಿಕ 80,000 ವೆಫರ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಸೆಮಿಕಂಡಕ್ಟರ್ ವಲಯದಲ್ಲಿ ಸಾವಿರಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.

ಸಂಶೋಧನೆ ಮತ್ತು ಅಭಿವೃದ್ಧಿಗೆ ವಿಶೇಷ ಒತ್ತು: ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ಸಂಬಂಧಿಸಿದ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಭಾರಿ ಹೂಡಿಕೆಗಳನ್ನು ಉತ್ತೇಜಿಸುವ ಮೂಲಕ ಹೊಸ ಅವಿಷ್ಕಾರ ಮಾಡುವುದು ಈ ಉಪಕ್ರಮದ ಮುಖ್ಯ ಗುರಿಯಾಗಿದೆ.

Chip

ಉದಾಹರಣೆಗೆ, ಎನ್‌ಎಕ್ಸ್‌ಪಿ ಸೆಮಿಕಂಡಕ್ಟರ್ಸ್‌ನಂತಹ ಜಾಗತಿಕ ಕಂಪನಿಗಳು ಆಟೋಮೋಟಿವ್ ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಶನ್‌ನಂತಹ ಪ್ರಮುಖ ಕ್ಷೇತ್ರಗಳ ಮೇಲೆ ಗಮನ ಹರಿಸಲು ಭಾರತದಲ್ಲಿ 1 ಬಿಲಿಯನ್ ಡಾಲರ್‌ಗೂ ಹೆಚ್ಚು ಬಂಡವಾಳವನ್ನು ಹೂಡಿಕೆ ಮಾಡುತ್ತಿವೆ.

ವಿನ್ಯಾಸ ಸಾಮರ್ಥ್ಯಗಳ ವೃದ್ಧಿ: ಚಿಪ್ ವಿನ್ಯಾಸದಲ್ಲಿ ತಾಂತ್ರಿಕ ನಾವೀನ್ಯತೆಯನ್ನು ಹೆಚ್ಚಿಸಲು ಈ ಮಿಷನ್ ಸೆಮಿಕಂಡಕ್ಟರ್ ಡಿಸೈನ್ ಸೆಂಟರ್‌ಗಳ (ವಿನ್ಯಾಸ ಕೇಂದ್ರಗಳು) ಸ್ಥಾಪನೆಗೆ ಸಂಪೂರ್ಣ ಬೆಂಬಲ ನೀಡುತ್ತದೆ. ಜಾಗತಿಕ ಮಟ್ಟದ ಮುಂಚೂಣಿಯ ಸಂಸ್ಥೆಗಳಾದ ಅನಲಾಗ್ ಡಿವೈಸಸ್ ಮತ್ತು ಟಾಟಾ ಸಮೂಹವು ಈಗಾಗಲೇ ಭಾರತದಲ್ಲಿ ತಮ್ಮ ಉತ್ಪಾದನಾ ಸಾಮರ್ಥ್ಯಗಳನ್ನು ವಿಸ್ತರಿಸಲು ಇರುವ ವಿವಿಧ ಮುಖದ ಅವಕಾಶಗಳನ್ನು ಸಕ್ರಿಯವಾಗಿ ಅನ್ವೇಷಿಸುತ್ತಿವೆ.

ಅಂತರರಾಷ್ಟ್ರೀಯ ಸಹಯೋಗಗಳು: ರಾಷ್ಟ್ರೀಯ ಭದ್ರತಾ ಅಳವಡಿಕೆಗಳನ್ನು ಗಮನ ದಲ್ಲಿಟ್ಟುಕೊಂಡು ಭಾರತದಲ್ಲಿ ಅತ್ಯಾಧುನಿಕ ಸೆಮಿಕಂಡಕ್ಟರ್ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸಲು ಈ ಮಿಷನ್ ಶ್ರಮಿಸುತ್ತಿದೆ. ಇದಕ್ಕಾಗಿ ಯು.ಎಸ್. ಸ್ಪೇಸ್ ಫೋಸ್ʼನಂತಹ ಜಾಗತಿಕ ಸಂಸ್ಥೆಗಳೊಂದಿಗೆ ಕಾರ್ಯತಂತ್ರದ ಪಾಲುದಾರಿಕೆಯನ್ನು ನಿರ್ಮಿಸಲು ಮುಂದಾಗಿದೆ. ಇದು ಸೆಮಿಕಂಡಕ್ಟರ್ ಉತ್ಪಾದನೆಯ ಜಾಗತಿಕ ಪೂರೈಕೆ ಜಾಲದಲ್ಲಿ ಭಾರತವನ್ನು ಅತ್ಯಂತ ಪ್ರಮುಖ ಕೇಂದ್ರವನ್ನಾಗಿ ಸಂಯೋಜಿಸಲಿದೆ.

ವಿವಿಧ ರಾಜ್ಯಗಳ ದಾಪುಗಾಲು

ಭಾರತದ ಸೆಮಿಕಂಡಕ್ಟರ್ ಕ್ರಾಂತಿಯಲ್ಲಿ ಗುಜರಾತ್ ಸಿಂಹಪಾಲು ಪಡೆದುಕೊಂಡಿದ್ದು, ಜಾಗತಿಕ ಚಿಪ್ ತಯಾರಿಕಾ ನಕ್ಷೆಯಲ್ಲಿ ಮುಂಚೂಣಿಗೆ ಬಂದಿದೆ. ಭಾರತದ ಇತಿಹಾಸದ ಮೊದಲ ಬಾರಿಗೆ ವಾಣಿಜ್ಯ ಮಟ್ಟದ ಬೃಹತ್ ಫ್ರಂಟ್-ಎಂಡ್ ಸೆಮಿಕಂಡಕ್ಟರ್ ಫ್ಯಾಬ್ರಿಕೇಷನ್ ಪ್ಲಾಂಟ್ ಅನ್ನು ಟಾಟಾ ಸಮೂಹವು ತೈವಾನ್‌ನ ಪಿಎಸ್‌ಎಂಸಿ ಸಹಯೋಗದೊಂದಿಗೆ ಧೋಲೇರಾದಲ್ಲಿ ಸ್ಥಾಪಿಸು ತ್ತಿದೆ. ಅಮೆರಿಕ ಮೂಲದ ಮೈಕ್ರಾನ್ ಸಂಸ್ಥೆಯು ಸುಮಾರು ರೂ.22500 ಕೋಟಿ (2.75 ಬಿಲಿಯ) ವೆಚ್ಚದ ತನ್ನ ಭಾರಿ ಚಿಪ್ ಅಸೆಂಬ್ಲಿ ಮತ್ತು ಟೆಸ್ಟಿಂಗ್ ಘಟಕದಲ್ಲಿ ಪೈಲಟ್ ಮುಗಿಸಿ ವಾಣಿಜ್ಯ ಉತ್ಪಾದನೆಯನ್ನು ಆರಂಭಿಸಿದೆ.

ಇದರ ಬೆನ್ನ ಭಾರತೀಯ ಮೂಲದ ಪ್ರಮುಖ ಇಎಂಎಸ್ ಸಂಸ್ಥೆಯಾದ ಕೇ ಸೆಮಿಕಾನ್ ತನ್ನ ರೂ.3300 ಕೋಟಿ ವೆಚ್ಚದ ಅತ್ಯಾಧುನಿಕ ಓಸ್ಯಾಟ್ ಘಟಕವನ್ನು ಸಾನಂದ್‌ನಲ್ಲಿ ಉದ್ಘಾಟಿಸಿದ್ದು, ಪ್ರತಿದಿನ ಲಕ್ಷಾಂತರ ಇಂಟೆಲಿಜೆಂಟ್ ಪವರ್ ಮಾಡ್ಯೂಲ್ ಚಿಪ್‌ಗಳನ್ನು ಜಾಗತಿಕ ಮಾರುಕಟ್ಟೆಗೆ ರಫ್ತು ಮಾಡುತ್ತಿದೆ.

ಇತ್ತೀಚೆಗಷ್ಟೇ ಕೇಂದ್ರ ಕ್ಯಾಬಿನೆಟ್ ಅನುಮೋದನೆ ನೀಡಿರುವ ಧೋಲೇರಾದಲ್ಲಿನ ‘ಕ್ರಿಸ್ಟಲ್ ಮ್ಯಾಟ್ರಿಕ್ಸ್’ (ಕಂಪೌಂಡ್ ಸೆಮಿಕಂಡಕ್ಟರ್ ಫ್ಯಾಬ್) ಮತ್ತು ಸೂರತ್‌ನಲ್ಲಿನ ‘ಸುಚಿ ಸೆಮಿಕಾನ್’ (ಓಸ್ಯಾಟ್ ಘಟಕ) ಯೋಜನೆಗಳು ಗುಜರಾತ್‌ನ ಚಿಪ್ ಸಾಮ್ರಾಜ್ಯವನ್ನು ಮತ್ತಷ್ಟು ವಿಸ್ತರಿಸಿವೆ.

ಒಡಿಶಾ ಹಾಗೂ ಉತ್ತರ ಪ್ರದೇಶ ಐಟಿ ವಲಯದಲ್ಲಿ ತಡವಾಗಿ ರೇಸ್ ಆರಂಭಿಸಿದರೂ, ಸೆಮಿ ಕಂಡಕ್ಟರ್ ಉತ್ಪಾದನೆಯಲ್ಲಿ ಈ ಎರಡು ರಾಜ್ಯಗಳು ದೈತ್ಯ ಹೆಜ್ಜೆ ಇಟ್ಟಿವೆ. ತಾಂತ್ರಿಕವಾಗಿ ಅತ್ಯಂತ ಕಠಿಣ ಎನ್ನಲಾಗುವ ಸುಧಾರಿತ 3ಡಿ ಸೆಮಿಕಂಡಕ್ಟರ್ ಪ್ಯಾಕೇಜಿಂಗ್ ಘಟಕಕ್ಕೆ ಭುವನೇಶ್ವರದಲ್ಲಿ ಭೂಮಿಪೂಜೆ ನೆರವೇರಿದೆ. ಉತ್ತರ ಪ್ರದೇಶದ ಯಮುನಾ ಎಕ್ಸ್‌ಪ್ರೆಸ್‌ವೇ ಕೈಗಾರಿಕಾ ಪ್ರದೇಶದಲ್ಲಿ ತೈವಾನ್ ಮತ್ತು ಭಾರತದ ಎಚ್‌ಸಿಎಲ್ ಗ್ರೂಪ್ ಜಂಟಿಯಾಗಿ ‘ಇಂಡಿಯಾ ಚಿಪ್ ಪ್ರೈವೇಟ್ ಲಿಮಿಟೆಡ್’ ಅಡಿಯಲ್ಲಿ ರೂ.3700 ಕೋಟಿ ವೆಚ್ಚದ ಬೃಹತ್ ಓಸ್ಯಾಟ್ ಘಟಕದ ಕಾಮಗಾರಿಯನ್ನು ಆರಂಭಿಸಿವೆ.

ಎಲ್ಲಿ ಎಡವಿತು ಕರ್ನಾಟಕ ರಾಜ್ಯ?

ಒಂದು ಕಾಲದಲ್ಲಿ ಇಡೀ ದೇಶದ ಐಟಿ-ಬಿಟಿ ರಾಜಧಾನಿಯಾಗಿ, ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಡಿಸೈನ್ ( ESDM) ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದ ಕರ್ನಾಟಕವು ಸೆಮಿಕಂಡಕ್ಟರ್ ಚಿಪ್ ಉತ್ಪಾದನೆಯ ಅಸಲಿ ರೇಸ್‌ನಲ್ಲಿ ಮುಂಚೂಣಿಯ ಅವಕಾಶವನ್ನು ಕೈಚೆಲ್ಲಿರುವುದು ಕಟು ವಾಸ್ತವ. ರಾಜ್ಯವು ಈ ಬೃಹತ್ ಕೈಗಾರಿಕಾ ಕ್ರಾಂತಿಯ ಬಸ್ ತಪ್ಪಿಸಿಕೊಳ್ಳಲು ಪ್ರಮುಖ ಕಾರಣಗಳು ಇಲ್ಲಿವೆ: ಕಳೆದ ಕೆಲವು ವರ್ಷಗಳ ಹಿಂದೆ ಇಸ್ರೇಲ್ ಮೂಲದ ಐಎಸ್‌ಎಂಸಿ ಅನಾಲಾಗ್ ಫ್ಯಾಬ್ ಸಂಸ್ಥೆಯು ಮೈಸೂರಿನ ಕೋಚನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸುಮಾರು ರೂ.22900 ಕೋಟಿ (3 ಬಿಲಿಯ) ಹೂಡಿಕೆಯಲ್ಲಿ ಭಾರತದ ಮೊದಲ ಚಿಪ್ ಉತ್ಪಾದನಾ ಘಟಕವನ್ನು ಸ್ಥಾಪಿಸಲು ರಾಜ್ಯ ಸರಕಾರದೊಂದಿಗೆ ಒಪ್ಪಂದ (MoU) ಮಾಡಿಕೊಂಡಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ರಾಜ್ಯದಲ್ಲಿ ಉಂಟಾದ ಆಡಳಿತಾತ್ಮಕ ವಿಳಂಬ ನೀತಿ, ಸೂಕ್ತ ಭೂಸ್ವಾಧೀನ ಪ್ರಕ್ರಿಯೆಯ ಕೊರತೆ ಮತ್ತು ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಈ ಪ್ರಮುಖ ಯೋಜನೆ ಹಳ್ಳ ಹಿಡಿಯುವಂತಾಯಿತು.

ತಾಂತ್ರಿಕ ಪಾಲುದಾರರ ಬದಲಾವಣೆ ಮತ್ತು ಕೇಂದ್ರದ ಅನುಮೋದನೆಗಳ ಪ್ರಕ್ರಿಯೆಯನ್ನು ವೇಗವಾಗಿ ಬೆಂಬಲಿಸುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಯಿತು. ರಾಜ್ಯ ಸರಕಾರವು ಇತ್ತೀಚಿನ ವರ್ಷಗಳಲ್ಲಿ ಮೂಲಸೌಕರ್ಯ ಮತ್ತು ಬಂಡವಾಳ ವೆಚ್ಚದ ಬಜೆಟ್‌ಗೆ ಭಾರಿ ಕತ್ತರಿ ಹಾಕಿದೆ.

ಸೆಮಿಕಂಡಕ್ಟರ್ ಫ್ಯಾಬ್‌ಗಳಿಗೆ ಬೇಕಾಗುವ ಅತಿ ಹೆಚ್ಚು ವೆಚ್ಚದ ತಾಂತ್ರಿಕ ಕ್ಲೀನ್ ರೂಮ್‌ಗಳು ನಿರಂತರ ಹೈ-ವೋಲ್ಟೇಜ್ ವಿದ್ಯುತ್ ಮತ್ತು ಬೃಹತ್ ನೀರು ಸರಬರಾಜು ಜಾಲವನ್ನು ಸೃಷ್ಟಿಸಲು ಸರಕಾರದ ಖಜಾನೆಯಲ್ಲಿ ಹಣವಿಲ್ಲದಂತಾಗಿದೆ. ಮೈಸೂರು ಮತ್ತು ಹುಬ್ಬಳ್ಳಿ-ಧಾರವಾಡದಲ್ಲಿ ಎಲೆಕ್ಟ್ರಾನಿಕ್ಸ್ ಕ್ಲಸ್ಟರ್‌ಗಳನ್ನು ಘೋಷಿಸಲಾಗಿದ್ದರೂ, ಅವುಗಳಿಗೆ ಬೇಕಾದ ಹಣಕಾಸು ನೆರವು ಸಿಗದೆ ಯೋಜನೆಗಳು ಆಮೆಗತಿಯಲ್ಲಿ ಸಾಗುತ್ತಿವೆ.

ಎಲ್ಲಕ್ಕಿಂತ ಮಿಗಿಲಾಗಿ ಬೇರೆ ರಾಜ್ಯಗಳು ಹೂಡಿಕೆ ಸೆಳೆಯಲು ವಿವಿಧ ಕಾರ್ಯಯೋಜನೆ ತಂದರೆ ಕರ್ನಾಟಕ ಸರಕಾರವು ಕೇವಲ ಕಾಲಹರಣ ಮಾಡುತ್ತಿತ್ತು. ಕೇಂದ್ರದ ಸೆಮಿಕಂಡಕ್ಟರ್ ಯೋಜನೆ ಪ್ರಕಟವಾದ ಕೆಲವೇ ತಿಂಗಳುಗಳಲ್ಲಿ ದೇಶದ ಮೊದಲ ಬಾರಿಗೆ ಸೆಮಿಕಂಡಕ್ಟರ್‌ಗಾಗಿಯೇ ಮುಡಿಪಾದ ಪ್ರತ್ಯೇಕ ನೀತಿಯನ್ನು (2022-27) ಗುಜರಾತ್ ಜಾರಿಗೊಳಿಸಿತು. ಕೇಂದ್ರದ ಸಬ್ಸಿಡಿಯ ಜೊತೆಗೆ ಹೆಚ್ಚುವರಿ ಶೇ.40ರಷ್ಟು ರಾಜ್ಯ ಕ್ಯಾಪೆಕ್ಸ್ ನೆರವು ಮತ್ತು ಭೂಮಿಯ ಮೇಲೆ ಶೇ. ‌75ರಷ್ಟು ಭಾರಿ ರಿಯಾಯಿತಿಯನ್ನು ಇಲ್ಲಿಂದಲೇ ಆರಂಭಿಸಲಾಯಿತು.

ಕೌಶಲ್ಯಾಧಾರಿತ ಉದ್ಯಮಗಳನ್ನು ಆಕರ್ಷಿಸಲು ಒಡಿಶಾ ಸರಕಾರವು ತನ್ನದೇ ಆದ ವಿಶೇಷ ಸೆಮಿಕಂಡಕ್ಟರ್ ನೀತಿಯನ್ನು ಮಾರ್ಚ್ 2023ರಂದು ಅನುಮೋದಿಸಿತು. ಜಾಗತಿಕ ಕಂಪನಿಗಳಿಗೆ ಶೇ.25ರಷ್ಟು ಹೆಚ್ಚುವರಿ ಬಂಡವಾಳ ಸಬ್ಸಿಡಿ ಮತ್ತು ಕ್ಲೀನ್ ರೂಮ್ ನಿರ್ಮಾಣಕ್ಕೆ ಭಾರಿ ಧನ ಸಹಾಯದ ಕೊಡುಗೆಯನ್ನು ಈ ಅವಧಿಯಲ್ಲಿ ಅಧಿಕೃತಗೊಳಿಸಲಾಯಿತು.

ಟಾಟಾ ಮತ್ತು ಮೈಕ್ರಾನ್‌ನಂತಹ ದೈತ್ಯ ಸಂಸ್ಥೆಗಳನ್ನು ಸೆಳೆಯಲು ಅಸ್ಸಾಂ (ಫೆಬ್ರವರಿ 2024) ವಿಶೇಷ ಕ್ಯಾಬಿನೆಟ್ ಅನುಮೋದನೆಯ ಮೂಲಕ ಶೇ. 20ರಷ್ಟು ನೇರ ಸಬ್ಸಿಡಿ ನೀಡಿತು. ಇದರ ಬೆನ್ನ ಮಹಾರಾಷ್ಟ್ರ ಸರಕಾರವು ತಮಿಳುನಾಡು ಮತ್ತು ಗುಜರಾತ್‌ಗೆ ಪೈಪೋಟಿ ನೀಡಲು ಬರೋಬ್ಬರಿ 10 ಬಿಲಿಯ ಮೌಲ್ಯದ ಬೃಹತ್ ಫ್ಯಾಬ್ ಯೋಜನೆಗೆ ವಿಶೇಷ ಪ್ರೋತ್ಸಾಹಕ ಪ್ಯಾಕೇಜ್ ಅನ್ನು ಪ್ರಕಟಿಸಿತು.

ಭೂಸ್ವಾಧೀನದ ಅಡೆತಡೆಗಳಿಂದಾಗಿ ಬೃಹತ್ ಹೂಡಿಕೆಗಳನ್ನು ಕಳೆದುಕೊಂಡ ನಂತರ ಎಚ್ಚೆತ್ತು ಕೊಂಡ ಕರ್ನಾಟಕ ಸರಕಾರವು ತನ್ನ ಕಟ್ಟುನಿಟ್ಟಾದ ಲೀಸ್ ನಿಯಮವನ್ನು ಸಡಿಲಗೊಳಿಸಿ ‘ಲೀಸ್ -ಕಮ್-ಸೇಲ್’ (ಬಾಡಿಗೆ ಆಧಾರಿತ ಮಾರಾಟ) ಮಾದರಿಗೆ ತಿದ್ದುಪಡಿ ತಂದಿತು (ಇದರ ಫಲವಾಗಿಯೇ ಅಪ್ಲೈಡ್ ಮೆಟೀರಿಯಲ್ಸ್ ಸಂಸ್ಥೆ ಬೆಂಗಳೂರಿಗೆ ಬಂದಿತು). ಆದರೆ ಯಾರೇ ಪ್ರಶ್ನೆ ಕೇಳಿದರೂ ಕೇಂದ್ರದ ಕಡೆಗೆ ಬೆಟ್ಟು ಮಾಡಿ ತೋರಿಸುವ ರಾಜ್ಯ ಸರಕಾರ ತನ್ನ ತಪ್ಪನ್ನು ಮಾತ್ರ ಒಪ್ಪಿಕೊಳ್ಳು ತ್ತಿಲ್ಲ.

ಡಿಸೈನ್‌ಗೆ ಸೀಮಿತವಾಯಿತೇ ರಾಜ್ಯ?

ಇಂದು ಕರ್ನಾಟಕದಲ್ಲಿ 85ಕ್ಕೂ ಹೆಚ್ಚು ಜಾಗತಿಕ ಚಿಪ್ ವಿನ್ಯಾಸ ಕಂಪನಿಗಳಿದ್ದು, ದೇಶದ ಶೇ. 10ರಷ್ಟು ಎಲೆಕ್ಟ್ರಾನಿಕ್ಸ್ ಔಟ್‌ಪುಟ್‌ʼಗೆ ರಾಜ್ಯವೇ ಕಾರಣವಾಗಿರುವುದು ನಿಜ. ಆದರೆ, ಕೇವಲ ಸಾಫ್ಟ್‌ʼವೇರ್ ಮತ್ತು ಡಿಸೈನ್‌ಗೆ ಸೀಮಿತವಾದರೆ ಸಾಲದು, ಆರ್ಥಿಕ ಲಾಭ ಮತ್ತು ಲಕ್ಷಾಂತರ ಉದ್ಯೋಗ ಸೃಷ್ಟಿಯಾಗುವುದು ನೈಜ ಚಿಪ್ ಉತ್ಪಾದನೆ ಆರಂಭವಾದಾಗ ಮಾತ್ರ. ಸದ್ಯಕ್ಕೆ ತಡವಾಗಿ ಎಚ್ಚೆತ್ತಂತಿರುವ ರಾಜ್ಯ ಸರಕಾರವು ಹೊಸದಾಗಿ ಯೋಜನೆಗಳನ್ನು ರೂಪಿಸುತ್ತಿದೆ. ಆದರೆ ಅವುಗಳನ್ನು ಕೇವಲ ಬೆಂಗಳೂರಿನ ಸುತ್ತಮುತ್ತ ಕೇಂದ್ರೀಕರಿಸುತ್ತಿರುವುದರಿಂದ ಮತ್ತೆ ವಿಳಂಬ ವಾಗುವ ಸಾಧ್ಯತೆ ದಟ್ಟವಾಗಿದೆ. ಬೆಂಗಳೂರು ಸುತ್ತಮುತ್ತ ಬಿಟ್ಟು ರಾಜ್ಯದ ಇತರೆ ಜಿಗಳ ಮೇಲೆ ರಾಜ್ಯ ಸರಕಾರ ಗಮನಹರಿಸುವುದು ಒಳ್ಳೆಯ ಬೆಳವಣಿಗೆಗೆ ಕಾರಣವಾಗುತ್ತದೆ. ಆಗ ಬೇರೆ ಜಿಲ್ಲೆಗಳಲ್ಲಿ ಉದ್ಯೋಗಾವಕಾಶ ಹಾಗೂ ಅಭಿವೃದ್ಧಿ ಹೆಚ್ಚಾಗಿ ಕರ್ನಾಟಕದ ಒಟ್ಟಾರೆ ಬೆಳವಣಿಗೆಗೆ ಕಾರಣವಾಗುತ್ತದೆ. ಅಷ್ಟೇ ಅಲ್ಲದೆ ಸಮಯಕ್ಕೆ ಸರಿಯಾಗಿ ಈ ಯೋಜನೆಗಳು ಕಾರ್ಯಗತಗೊಳ್ಳು ತ್ತವೆ.