ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Prakash Hegde Column: ಮುಕ್ತ ವ್ಯಾಪಾರ ಒಪ್ಪಂದ: ಅವಕಾಶಗಳ ಮಹಾಸೇತು

ಇತ್ತೀಚಿನ ಜಾಗತಿಕ ಭೌಗೋಳಿಕ-ಆರ್ಥಿಕ ಬದಲಾವಣೆಗಳ ಹಿನ್ನೆಲೆಯಲ್ಲಿ, ಚೀನಾ ಮೇಲಿನ ಅವಲಂಬನೆಯನ್ನು ಕಡಿಮೆಯಾಗಿಸುವ ಉದ್ದೇಶದ ಐರೋಪ್ಯ ಒಕ್ಕೂಟ ಮತ್ತು ರಫ್ತು ವಿಸ್ತರಣೆಯ ಅಗತ್ಯದ ಭಾರತ ಈ ಒಪ್ಪಂದವನ್ನು ಪುನಶ್ಚೇತನಗೊಳಿಸಲು ಆಸಕ್ತಿ ತೋರಿದ್ದರಿಂದ ಸಂಬಂಧಿತ ಪ್ರಕ್ರಿಯೆಯು ‘ಫಾಸ್ಟ್ ಟ್ರ್ಯಾಕ್’ನಲ್ಲಿ ಪೂರ್ಣಗೊಂಡಿದೆ.

Prakash Hegde Column: ಮುಕ್ತ ವ್ಯಾಪಾರ ಒಪ್ಪಂದ: ಅವಕಾಶಗಳ ಮಹಾಸೇತು

-

Ashok Nayak
Ashok Nayak Feb 1, 2026 9:28 AM

ವಾಣಿಜ್ಯ ವಿಭಾಗ

ಪ್ರಕಾಶ ಹೆಗಡೆ

ಇಪ್ಪತ್ತೇಳು ದೇಶಗಳ ಐರೋಪ್ಯ ಒಕ್ಕೂಟದ (ಯುರೋಪಿಯನ್ ಕಮಿಷನ್) ಅಧ್ಯಕ್ಷೆ ಉರ್ಸುಲಾ ಲೆಯೆನ್ ಅವರು ಈ ಬಾರಿಯ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿದ್ದರು. ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವಿನ ಇತ್ತೀಚಿನ ‘ಮುಕ್ತ ವ್ಯಾಪಾರ ಒಪ್ಪಂದ’ವನ್ನು (ಎಫ್ಟಿಎ) ಇವರು ‘ಐತಿಹಾಸಿಕ ದಾಖಲೆಯ ಸರ್ವ ಒಪ್ಪಂದಗಳ ಮಾತೆ’ ಎಂದಿದ್ದುಂಟು. ‌

ಈ ಒಪ್ಪಂದಕ್ಕೆ, ಗೋವಾ ಮೂಲದವರಾದ ಐರೋಪ್ಯ ಸಮಿತಿ ಅಧ್ಯಕ್ಷ ಆಂಟೋನಿಯೋ ಕೋಸ್ಟಾ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಜನವರಿ 27ರಂದು ಸಹಿ ಹಾಕಿದ್ದಾರೆ. ಇದರ ಫಲವಾಗಿ, ‘ಮ್ಯಾಗ್ನಾ ಕಾರ್ಟಾ’ ಎನ್ನಬಹುದಾದ, 18 ವರ್ಷಗಳಿಂದಲೂ ಭಿನ್ನಾಭಿಪ್ರಾಯಗಳ ಕಾರಣದಿಂದ ಹಲವು ಬಾರಿ ಸ್ಥಗಿತಗೊಂಡಿದ್ದ ಮಹತ್ವದ ಚಾರ್ಟರ್ ಜಾರಿಯಾಗುವ ಮಜಲಿಗೆ ತಲುಪಿದೆ.

ಇತ್ತೀಚಿನ ಜಾಗತಿಕ ಭೌಗೋಳಿಕ-ಆರ್ಥಿಕ ಬದಲಾವಣೆಗಳ ಹಿನ್ನೆಲೆಯಲ್ಲಿ, ಚೀನಾ ಮೇಲಿನ ಅವಲಂಬನೆಯನ್ನು ಕಡಿಮೆಯಾಗಿಸುವ ಉದ್ದೇಶದ ಐರೋಪ್ಯ ಒಕ್ಕೂಟ ಮತ್ತು ರಫ್ತು ವಿಸ್ತರಣೆ ಯ ಅಗತ್ಯದ ಭಾರತ ಈ ಒಪ್ಪಂದವನ್ನು ಪುನಶ್ಚೇತನಗೊಳಿಸಲು ಆಸಕ್ತಿ ತೋರಿದ್ದರಿಂದ ಸಂಬಂ ಧಿತ ಪ್ರಕ್ರಿಯೆಯು ‘ಫಾಸ್ಟ್ ಟ್ರ್ಯಾಕ್’ನಲ್ಲಿ ಪೂರ್ಣಗೊಂಡಿದೆ. ಹಾಗೆಯೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಒತ್ತಡ ಮತ್ತು ಪರಸ್ಪರ ಪ್ರತೀಕಾರಾತ್ಮಕ ಸುಂಕಗಳಿಂದ ಹುಟ್ಟಿದ ಒಪ್ಪಂದವಿದು ಎನ್ನಲೂಬಹುದು. ಧನ್ಯವಾದ ‘ಟ್ರಂಪೇರಿಕಾ’!

ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವಿನ ವ್ಯಾಪಾರ ಸಂಬಂಧವು ಬಹಳ ಮಹತ್ವದ್ದು ಆಗಿರುವುದರ ಜತೆಗೆ, ವೇಗವಾಗಿ ಬೆಳೆಯುತ್ತಿರುವ ಸಹಕಾರದ ಉದಾಹರಣೆಯೂ ಆಗಿದೆ. 2024-25ರಲ್ಲಿ ದ್ವಿಪಕ್ಷೀಯ ವ್ಯಾಪಾರದ ಒಟ್ಟು ಮೌಲ್ಯವು ಸುಮಾರು 190 ಬಿಲಿಯನ್ ಡಾಲರ್‌ಗಳಿಗಿಂತ ಅಧಿಕವಾಗಿದೆ.

ಇದನ್ನೂ ಓದಿ: Prakash Hegde Column: ಬೋರ್ಡ್‌ ಆಫ್‌ ಪೀಸ್:‌ ವಿಶ್ವಸಂಸ್ಥೆಗೆ ಪರ್ಯಾಯವೇ ?

ಐರೋಪ್ಯ ಒಕ್ಕೂಟದ 27 ರಾಷ್ಟ್ರಗಳ ಬ್ಲಾಕ್‌ಗೆ ಸುಮಾರು 108 ಬಿಲಿಯನ್ ಡಾಲರ್ ಮೌಲ್ಯದ ವಸ್ತುಗಳು ಮತ್ತು ಸೇವೆಗಳನ್ನು ಭಾರತವು ರಫ್ತು ಮಾಡಿದೆ. ಇದು ಜಾಗತಿಕ ನೆಲೆಯಲ್ಲಿ ಮೂರನೇ ಒಂದು ಭಾಗದಷ್ಟು ಪ್ರದೇಶದ ವ್ಯಾಪಾರವಾಗಿರುವುದರಿಂದ, ಅತಿ ಮಹತ್ವದ್ದೂ ಹಾಗೂ ಇದುವರೆ ಗಿನ ಅತಿ ದೊಡ್ಡದೂ ಎನಿಸಿರುವ ವ್ಯಾಪಾರ ಒಪ್ಪಂದವಾಗಿದೆ.

ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವಿನ ಈ ಮುಕ್ತ ವ್ಯಾಪಾರ ಒಪ್ಪಂದವು, ಜಗತ್ತಿನ ಅತಿದೊಡ್ಡ ಜನಸಂಖ್ಯೆ ಮತ್ತು ಗಣನೀಯ ಆರ್ಥಿಕ ಶಕ್ತಿಯಂಥ ಎರಡು ಘಟಕಗಳನ್ನು ಸಂಪರ್ಕಿ ಸುವ ಮಹತ್ವದ ಒಪ್ಪಂದವಾಗಿದೆ. ಇದು ಸುಮಾರು 200 ಕೋಟಿ ಜನರ (ಜಾಗತಿಕ ಜನಸಂಖ್ಯೆಯ ಸುಮಾರು ಶೇ.23ರಷ್ಟು) ಜೀವನ ಮತ್ತು ಜೀವನೋಪಾಯದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಯನ್ನು ಹೊಂದಿದೆ.

ಆರ್ಥಿಕವಾಗಿ ನೋಡಿದರೆ, ಭಾರತದ ಜಿಡಿಪಿ ಸುಮಾರು 4 ಟ್ರಿಲಿಯನ್ ಮತ್ತು ಐರೋಪ್ಯ ಒಕ್ಕೂಟದ ಒಟ್ಟು ಜಿಡಿಪಿ ಸುಮಾರು 18 ಟ್ರಿಲಿಯನ್ ಆಗಿದ್ದು, ಒಟ್ಟಿನಲ್ಲಿ ಈ ಒಪ್ಪಂದವು ಸುಮಾರು ಶೇ.25ರಷ್ಟು ಸಂಯುಕ್ತ ಜಿಡಿಪಿಯನ್ನು ಪ್ರತಿನಿಧಿಸುತ್ತದೆ.

ಭಾರತವು ಇದುವರೆಗೆ ಹಲವಾರು ದೇಶಗಳು ಮತ್ತು ಪ್ರಾದೇಶಿಕ ಗುಂಪುಗಳೊಂದಿಗೆ ಮುಕ್ತ ವ್ಯಾಪಾರ ಹಾಗೂ ಸಮಗ್ರ ಆರ್ಥಿಕ ಸಹಕಾರ ಒಪ್ಪಂದಗಳನ್ನು ಮಾಡಿಕೊಂಡಿದೆ. ಇದು ಕಳೆದ 4 ವರ್ಷಗಳಲ್ಲಿ ಭಾರತದ 9ನೇ ವ್ಯಾಪಾರ ಒಪ್ಪಂದವಾಗಿದೆ ಮತ್ತು ಒಟ್ಟು 19ನೇ ಮುಕ್ತ ವ್ಯಾಪಾರ ಒಪ್ಪಂದವಾಗಿದೆ.

Screenshot_3 R

ಇದರ ಜತೆಗೆ ಭಾರತವು ಸೀಮಿತ ವ್ಯಾಪ್ತಿಯ 6 ‘ಪ್ರಿ-ರೆನ್ಷಿಯಲ್ ಟ್ರೇಡ್ ಅಗ್ರಿಮೆಂಟ್’ಗಳನ್ನೂ ಹೊಂದಿದೆ. ಈ ಒಪ್ಪಂದವು ಎರಡೂ ಗುಂಪಿಗೂ ಲಾಭಕರವಾಗುತ್ತದೆ. ಏಕೆಂದರೆ, ಭಾರತ ಮತ್ತು ಐರೋಪ್ಯ ಒಕ್ಕೂಟದ ದೇಶಗಳು ವಿಭಿನ್ನ ವಸ್ತುಗಳನ್ನು ಮಾರಾಟ ಮಾಡುತ್ತವೆ. ಅಲ್ಪ ಪ್ರಮಾಣದ ಕೆಲವೇ ಉತ್ಪನ್ನಗಳನ್ನು ಹೊರತುಪಡಿಸಿ ಬಹುತೇಕ ವ್ಯಾಪಾರ ವಿಭಾಗಗಳಲ್ಲಿ ಪರಸ್ಪರ ಸ್ಪರ್ಧೆ ಯಿಲ್ಲ.

ಭಾರತವು ಮುಖ್ಯವಾಗಿ ‘ಕಾರ್ಮಿಕಾಧಾರಿತ’ ವಸ್ತುಗಳನ್ನು ರಫ್ತು ಮಾಡಿದರೆ, ಇದಕ್ಕೆ ಪ್ರತಿಯಾಗಿ ಐರೋಪ್ಯ ಒಕ್ಕೂಟವು ಬಂಡವಾಳ ಮತ್ತು ತಂತ್ರಜ್ಞಾನಾಧಾರಿತ ಉತ್ಪನ್ನಗಳನ್ನು ಪೂರೈಸುತ್ತದೆ. ಎರಡೂ ಬದಿಗಳು ಮೌಲ್ಯ ಸರಪಳಿಯ ವಿಭಿನ್ನ ಹಂತಗಳಲ್ಲಿ ಕಾರ್ಯನಿರ್ವಹಿಸುವುದರಿಂದ, ಸುಂಕ ಕಡಿತಗಳು ಉತ್ಪಾದನಾ ವೆಚ್ಚಗಳನ್ನು ಇಳಿಸಿ, ದೇಶೀಯ ಕೈಗಾರಿಕೆಗಳಿಗೆ ಹಾನಿಯಾಗದೆ ವ್ಯಾಪಾರವನ್ನು ವಿಸ್ತರಿಸಲು ಸಹಕಾರಿಯಾಗುತ್ತವೆ.

ಭಾರತದಿಂದ ರಫ್ತಾಗುವ ಸುಮಾರು ಶೇ.98ರಷ್ಟು ಸರಕುಗಳ ಮೇಲಿನ ಸುಂಕಗಳನ್ನು ಐರೋಪ್ಯ ಒಕ್ಕೂಟವು ಕಡಿತಗೊಳಿಸಲಿದೆ ಅಥವಾ ಸಂಪೂರ್ಣವಾಗಿ ರದ್ದುಪಡಿಸಲಿದೆ. ಈ ಸುಂಕ ಕಡಿತ ದಿಂದಾಗಿ ವಸ್ತ್ರಗಳು, ಉಡುಪುಗಳು, ಪಾದರಕ್ಷೆಗಳು, ಸಾಗರೋತ್ಪನ್ನಗಳು, ರತ್ನಾಭರಣಗಳು, ತೋಟ ಗಾರಿಕಾ ಉತ್ಪನ್ನಗಳು, ರಾಸಾಯನಿಕಗಳು ಮತ್ತು ಯಂತ್ರೋಪಕರಣಗಳಿಗೆ ಹೆಚ್ಚಿನ ಲಾಭವಾಗ ಲಿದೆ. ಇದರ ಮೂಲಕ ಏಷ್ಯಾದ ಅನೇಕ ದೇಶಗಳಿಗಿಂತ ಭಾರತೀಯ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಮುನ್ನಡೆ ದೊರೆಯಲಿದೆ.

ಇದಕ್ಕೆ ಪ್ರತಿಯಾಗಿ ಭಾರತವು ಐರೋಪ್ಯ ಒಕ್ಕೂಟದಿಂದ ಶೇ.97ರಷ್ಟು ರಫ್ತುಗಳ ಮೇಲೆ ಸುಂಕ ವನ್ನು ಕಡಿತಗೊಳಿಸಲಿದ್ದು, ಇವುಗಳಲ್ಲಿ ಮದ್ಯಗಳು, ಕಾರುಗಳು, ಸಂಸ್ಕರಿತ ಕೃಷಿ ಉತ್ಪನ್ನಗಳು ಮತ್ತು ಸಾಗರ ಆಹಾರೋತ್ಪನ್ನಗಳು, ರಾಸಾಯನಿಕಗಳು, ಯಂತ್ರೋಪಕರಣಗಳು ಮತ್ತು ಇಲೆಕ್ಟ್ರಾ ನಿಕ್ಸ್ ಸೇರಿವೆ.

ಉದಾಹರಣೆಗೆ, ಕಾರುಗಳ ಮೇಲಿನ 110 ಪರ್ಸೆಂಟ್ ಶುಲ್ಕವನ್ನು 10 ಪರ್ಸೆಂಟ್‌ಗೆ ಕಡಿತಗೊಳಿಸ ಲಾಗುತ್ತದೆ. ಕಾರುಗಳ ಮೇಲಿನ ಸುಂಕ ರಿಯಾಯಿತಿಯನ್ನು ವರ್ಷಕ್ಕೆ, 15000 ಯುರೋಕ್ಕಿಂತ ಹೆಚ್ಚಿನ ಮೌಲ್ಯದ ಎರಡೂವರೆ ಲಕ್ಷ ಕಾರುಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಇದಲ್ಲದೆ, ಮಾಹಿತಿ ತಂತ್ರಜ್ಞಾನ ಮತ್ತದರ ಪೂರಕ ಸೇವೆಗಳು, ವೃತ್ತಿಪರ ಸೇವೆಗಳು, ಶಿಕ್ಷಣ, ಹಣಕಾಸು, ಪ್ರವಾಸೋದ್ಯಮ ಮತ್ತು ನಿರ್ಮಾಣ ಕ್ಷೇತ್ರಗಳಿಗೆ ದೊಡ್ಡ ಉತ್ತೇಜನ ನೀಡಲಾಗಿದೆ.

ಕುಶಲಕರ್ಮಿಗಳು ಮತ್ತು ವಿದ್ಯಾರ್ಥಿಗಳ ಚಲನೆಗೆ ಐರೋಪ್ಯ ಒಕ್ಕೂಟವು ಅವಕಾಶವನ್ನು ಕಲ್ಪಿಸಿದ್ದು, ಅಧ್ಯಯನ ಮತ್ತು ಉದ್ಯೋಗಾವಕಾಶಗಳಿಗೆ ಮಹತ್ವದ ದ್ವಾರ ತೆರೆಯಲಾಗಿದೆ. ಅವಕಾಶಗಳ ಸಾಗರವನ್ನೇ ಸೃಷ್ಟಿಸುವ ಈ ಒಪ್ಪಂದದಿಂದಾಗಿ ಐದು ವರ್ಷಗಳಲ್ಲಿ ಭಾರತದ ರಫ್ತು ದ್ವಿಗುಣಗೊಂಡು ಅದರ ಮೌಲ್ಯವು ಸುಮಾರು 200 ಬಿಲಿಯನ್ ಡಾಲರ್‌ನಷ್ಟಾಗುವ ನಿರೀಕ್ಷೆಯಿದೆ.

ಲಕ್ಷಾಂತರ ಭಾರತೀಯರಿಗೆ ಭಾರತದಲ್ಲಿ ಉದ್ಯೋಗಾವಕಾಶಗಳು ದೊರೆತರೆ, ಭಾರತದ ಹತ್ತು ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳು, ಕುಶಲಕರ್ಮಿಗಳು ಮತ್ತು ವೃತ್ತಿಪರ ಪದವೀಧರರಿಗೆ ಐರೋಪ್ಯ ದೇಶಗಳಲ್ಲಿ ಅವಕಾಶಗಳು ಲಭ್ಯವಾಗಲಿವೆ. ಒಟ್ಟಾರೆ, ಈ ಸುಂಕ ಕಡಿತದಿಂದಾಗಿ ಐರೋಪ್ಯ ಉತ್ಪನ್ನಗಳ ಮೇಲೆ ವಿಧಿಸಲಾಗುತ್ತಿದ್ದ ಶುಲ್ಕಗಳಲ್ಲಿ ಸುಮಾರು ಐದು ಬಿಲಿಯನ್ ಉಳಿತಾಯವಾಗ ಲಿದೆ.

ಜತೆಗೆ, ಭದ್ರತೆ ಮತ್ತು ರಕ್ಷಣಾ ಸಹಭಾಗಿತ್ವದ ಒಡಂಬಡಿಕೆಗೆ ಸಹಿಹಾಕುವಿಕೆಯು ಈ ಸಂದರ್ಭಕ್ಕೆ ಮೆರುಗು ನೀಡಿತು. ಈ ರಕ್ಷಣಾ ಒಪ್ಪಂದವು ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವಿನ ವ್ಯೂಹಾತ್ಮಕ ಕಾರ್ಯತಂತ್ರದ ಸಂಬಂಧಗಳನ್ನು ಹೊಸ ಹಂತಕ್ಕೆ ಕೊಂಡೊಯ್ಯುವ ಮಹತ್ವದ ಹೆಜ್ಜೆಯಾಗಿದೆ.

ಇದರ ಅಡಿಯಲ್ಲಿ ರಕ್ಷಣಾ ತಂತ್ರಜ್ಞಾನ, ಸಂಯುಕ್ತ ಸಂಶೋಧನೆ ಮತ್ತು ಅಭಿವೃದ್ಧಿ, ರಕ್ಷಣಾ ಉಪಕರಣಗಳ ಉತ್ಪಾದನೆ, ಸೈಬರ್ ಭದ್ರತೆ, ಬಾಹ್ಯಾಕಾಶ ಮತ್ತು ಸಾಗರ ವಲಯದ ಭದ್ರತಾ ಕ್ಷೇತ್ರಗಳಲ್ಲಿನ ಸಹಕಾರವನ್ನು ಹೆಚ್ಚಿಸಲಾಗುತ್ತದೆ. ‘ಮೇಕ್ ಇನ್ ಇಂಡಿಯಾ’ ಮತ್ತು ‘ಆತ್ಮನಿರ್ಭರ ಭಾರತ’ ಅಭಿಯಾನಗಳಿಗೆ ಬೆಂಬಲವಾಗಿ ಐರೋಪ್ಯ ಒಕ್ಕೂಟದ ಕಂಪನಿಗಳ ಹೂಡಿಕೆ ಹಾಗೂ ತಂತ್ರಜ್ಞಾನ ವರ್ಗಾವಣೆಗೂ ಇದು ದಾರಿ ತೆರೆದಿದೆ.

ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸ್ಥಿರತೆ, ಭಯೋತ್ಪಾದನಾ ಕೃತ್ಯಗಳಿಗೆ ವಿರೋಧ ಮತ್ತು ಜಾಗತಿಕ ಭದ್ರತಾ ಸವಾಲುಗಳನ್ನು ಎದುರಿಸುವಲ್ಲಿ ಭಾರತ ಹಾಗೂ ಐರೋಪ್ಯ ಒಕ್ಕೂಟವು ಒಟ್ಟಾಗಿ ಕೆಲಸ ಮಾಡುವ ಬದ್ಧತೆಯನ್ನು ಈ ಒಪ್ಪಂದವು ಖಾತ್ರಿಪಡಿಸುತ್ತದೆ. ಐರೋಪ್ಯ ಒಕ್ಕೂಟದ 150 ಬಿಲಿಯನ್ ಯುರೋನಷ್ಟು ಬಂಡವಾಳದ ಮೂಲಕ ಭಾರತದ ಕಂಪನಿಗಳಿಗೆ ರಕ್ಷಣಾ ಸಾಮರ್ಥ್ಯ ಗಳು ಮತ್ತು ಹೂಡಿಕೆಗಳ ಸಹಾಯ ದೊರಕುವ ಸಾಧ್ಯತೆಯಿದೆ.

ಆದರೆ ಈ ಒಪ್ಪಂದದ ಅತಿದೊಡ್ಡ ಸವಾಲು ಸುಂಕಗಳ ಕುರಿತಾದುದಲ್ಲ, ಬದಲಿಗೆ ಯುರೋಪಿನ ಅನೇಕ ನಿಯಂತ್ರಣಾತ್ಮಕ ಅಡಚಣೆಗಳ ಕುರಿತಾದುದು. ಭಾರತದ ವೈದ್ಯಕೀಯ ಮತ್ತು ರಾಸಾಯ ನಿಕ ಉತ್ಪನ್ನಗಳಿಗೆ ಯುರೋಪಿನಲ್ಲಿ ಅತಿ ಹೆಚ್ಚಿನ ನೋಂದಣಿ ವೆಚ್ಚದ ಶುಲ್ಕಗಳಿವೆ. ಬಾಸ್ಮತಿ ಅಕ್ಕಿ, ಮಸಾಲೆಗಳು ಮತ್ತು ಚಹಾಗಳನ್ನು, ಅತಿಯಾಗಿ ಕಡಿಮೆ ನಿಗದಿಪಡಿಸಿದ ಕೀಟನಾಶಕ ಅಂಶಗಳ ಮಿತಿಯನ್ನು ಉಲ್ಲೇಖಿಸಿ ಆಗಾಗ ತಿರಸ್ಕರಿಸಲಾಗುತ್ತದೆ.

ಸಾಗರೋತ್ಪನ್ನಗಳಿಗೆ ಹೆಚ್ಚುವರಿ ಪರೀಕ್ಷೆಗಳ ಒತ್ತಡವೂ ಇದೆ. ಇದಲ್ಲದೆ, ‘ಕಾರ್ಬನ್ ಬಾರ್ಡರ್ ಅಡ್ಜಸ್ʼಮೆಂಟ್’ ತಾಂತ್ರಿಕತೆ ಮುಂತಾದ ಯೋಜನೆಗಳು, ಐರೋಪ್ಯ ಮಾನ್ಯತೆಯ ಆಡಿಟರ್‌ಗಳ ಪ್ರಮಾಣಪತ್ರ ಮತ್ತು ವ್ಯಾಪಕ ಮಾಹಿತಿಯ ವರದಿಯನ್ನು ಕಡ್ಡಾಯಗೊಳಿಸುತ್ತಿದ್ದು, ಇವು ವೆಚ್ಚವನ್ನು ಹೆಚ್ಚಿಸಿ ಸಾಗಣೆಯನ್ನು ವಿಳಂಬಗೊಳಿಸುತ್ತವೆ.

ಇವ್ಯಾವುವೂ ವ್ಯಾಪಾರ ಒಪ್ಪಂದದ ಪರಿಧಿಯಲ್ಲಿಲ್ಲ. ಇದರ ಪರಿಣಾಮವಾಗಿ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು ಹೆಚ್ಚು ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆಯಿದೆ. ಒಪ್ಪಂದವು ಕೃಷಿ ಕ್ಷೇತ್ರವನ್ನು ಬಹುಪಾಲು ತಪ್ಪಿಸಿಕೊಂಡಿದ್ದರೂ, ಹೊಸ ವಿರೋಧಗಳು ಎದುರಾಗುವ ಸಾಧ್ಯತೆ ಯಿದೆ.

ಅತ್ಯುತ್ತಮ ಪರಿಸ್ಥಿತಿಯಲ್ಲಿಯೂ, ಐರೋಪ್ಯ ಒಕ್ಕೂಟದ ಎಲ್ಲ 27 ಸದಸ್ಯ ರಾಷ್ಟ್ರಗಳಿಂದ ಅನು ಮೋದನೆ ದೊರಕಲು ಒಂದು ವರ್ಷದಷ್ಟು ಸಮಯ ಬೇಕಾಗಬಹುದು. ಅಂದರೆ, ಮುಕ್ತ ವ್ಯಾಪಾರ ಚಟುವಟಿಕೆಗಳಿಗೆ ಚಾಲನೆ ಸಿಗಲು 2026ರ ಅಂತ್ಯದವರೆಗೆ ಕಾಯಬೇಕಾಗಬಹುದು.

ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿಯವರು ದಾವೋಸ್‌ನಲ್ಲಿ ಮಾಡಿದ ಶ್ರೇಷ್ಠ ಭಾಷಣವು ಎಲ್ಲರ ಗಮನ ಸೆಳೆದಿದ್ದು, ಅದು ದೇಶಗಳ ಜಾಗತಿಕ ವ್ಯಾಪಾರದ ದೃಷ್ಟಿಕೋನವನ್ನು ಬದಲಿಸುವ ಸಲಹೆ ಯಾಗಿದೆ. ಅವರು ಮಾತನಾಡುತ್ತಾ, “ದೊಡ್ಡ ಶಕ್ತಿಶಾಲಿ ದೇಶಗಳು ತಮ್ಮ ಲಾಭಕ್ಕಾಗಿ ವ್ಯಾಪಾರ ಮತ್ತು ಆರ್ಥಿಕ ಒತ್ತಡಗಳನ್ನು ಬಳಸುತ್ತಿರುವ ಇಂಥ ಸಂದರ್ಭದಲ್ಲಿ, ಮಧ್ಯಮ ಮತ್ತು ಸಣ್ಣ ರಾಷ್ಟ್ರಗಳು ಒಟ್ಟಾಗಿ ತಮ್ಮ ಸ್ವಾತಂತ್ರ್ಯ, ಮೌಲ್ಯಗಳು ಮತ್ತು ಅಭಿವೃದ್ಧಿಯನ್ನು ರಕ್ಷಿಸಿಕೊಳ್ಳಬೇಕು; ಜಗತ್ತಿನ ಮಹತ್ವದ ಚರ್ಚೆಗಳಲ್ಲಿ ಭಾಗವಹಿಸದಿದ್ದರೆ, ನಮ್ಮ ಭವಿಷ್ಯವನ್ನು ಇತರರು ನಿರ್ಧರಿಸು ತ್ತಾರೆ" ಎಂಬ ಸಂದೇಶವನ್ನು ಸರಳವಾಗಿ ತಿಳಿಸಿದರು.

ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವಿನ ಒಪ್ಪಂದದ ಪ್ರಸಕ್ತ ಪರಿಸ್ಥಿತಿಯಲ್ಲಿ ಇದು ಸಮಯೋಚಿತ ಸಲಹೆ ಎನಿಸುತ್ತದೆ. ಭಾರತ ಮತ್ತು ಅಮೆರಿಕದ ನಡುವೆ ಸ್ಥಗಿತಗೊಂಡಿರುವ ಮುಕ್ತ ವ್ಯಾಪಾರ ಒಪ್ಪಂದವನ್ನು ಮುಂದಕ್ಕೆ ಸಾಗಿಸುವಂತಾಗುವ ನಿಟ್ಟಿನಲ್ಲಿ ಈ ಒಪ್ಪಂದವು ಅಮೆರಿಕ ವನ್ನು ಪ್ರೇರೇಪಿಸಬಹುದು.

ಗರಿಷ್ಠ ಲಾಭವನ್ನು ಹಿಂಡುವ ‘ವ್ಯವಹಾರಾಧಾರಿತ ರಾಜತಾಂತ್ರಿಕತೆ’ ಹಾಗೂ ಒತ್ತಡದ ನೀತಿಗಳು ನಿಧಾನವಾಗಿ ಮೃದುವಾಗಿ, ಹೆಚ್ಚು ಅರ್ಥಪೂರ್ಣ ಮತ್ತು ಸಮತೋಲಿತ ಸಂವಾದಗಳತ್ತ ಮರಳುವ ಸಾಧ್ಯತೆಯ ನಿರೀಕ್ಷೆಯಿರುವುದು ಉತ್ಪ್ರೇಕ್ಷೆಯಲ್ಲ.

(ಲೇಖಕರು ಚಾರ್ಟರ್ಡ್ ಅಕೌಂಟೆಂಟ್ ಮತ್ತು ಪ್ರಚಲಿತ

ವಿದ್ಯಮಾನಗಳ ವಿಶ್ಲೇಷಕರು)