Vishweshwar Bhat Column: ಲಂಕೇಶ್ ಮತ್ತು ರವಿ ಬೆಳಗೆರೆ ಈಗ ಇರಬೇಕಿತ್ತು !
ಅಂದು ಇಂದಿರಾ ಗಾಂಧಿಯವರು, ತಮ್ಮ ಸುತ್ತ ಪತ್ರಕರ್ತರನ್ನು ಕುಳ್ಳಿರಿಸಿಕೊಂಡು ಸುಮಾರು ಒಂದೂವರೆ ಗಂಟೆ ಕಾಲ ಅವರ ಪ್ರಶ್ನೆಗಳಿಗೆ ಸಮಾಧಾನದಿಂದ ಉತ್ತರಿಸಿದರು. ಅವರ ಜತೆ ಲೋಕಾಭಿರಾಮ ಚರ್ಚೆ ನಡೆಸಿದರು. ಪತ್ರಕರ್ತರ ಜತೆ ಅನೇಕ ಸ್ವಾರಸ್ಯಕರ ಪ್ರಸಂಗಗಳನ್ನು ‘ಆಫ್ ದಿ ರೆಕಾರ್ಡ್’ ಆಗಿ ಹಂಚಿಕೊಂಡರು. ಈ ಪ್ರಸಂಗವನ್ನು ‘ದಿ ಹಿಂದು’ ಪತ್ರಿಕೆಯ ಹುಬ್ಬಳ್ಳಿ ಮತ್ತು ಗೋವಾ ವಿಶೇಷ ವರದಿಗಾರರಾಗಿದ್ದ ಮತ್ತಿಹಳ್ಳಿ ಮದನಗೋಪಾಲ ನೆನಪಿಸಿಕೊಂಡಿದ್ದರು.
-
ನೂರೆಂಟು ವಿಶ್ವ
ಒಮ್ಮೆ ಪ್ರಧಾನಿ ಇಂದಿರಾ ಗಾಂಧಿಯವರು ಗೋವಾದಿಂದ ವಿಮಾನದಲ್ಲಿ ದಿಲ್ಲಿಗೆ ಹೋಗು ವವರಿದ್ದರು. ತಾಂತ್ರಿಕ ಕಾರಣದಿಂದ ಅವರ ವಿಮಾನ ಹಾರಾಟ ವಿಳಂಬವಾಯಿತು. ವಿಮಾನ ವನ್ನು ಸರಿಪಡಿಸಲು ಸುಮಾರು ಎರಡೂ ಗಂಟೆ ಹಿಡಿಯಬಹುದೆಂದು ಅವರಿಗೆ ಅಧಿಕಾರಿಗಳು ತಿಳಿಸಿದರು.
ಇಂದಿರಾ ಗಾಂಧಿಯವರನ್ನು ಭೇಟಿ ಮಾಡಲು ವಿಮಾನ ನಿಲ್ದಾಣದಲ್ಲಿ ಪತ್ರಕರ್ತರು ಕಾಯುತ್ತಿದ್ದರು. ಆದರೆ ಅವರು ವಿಮಾನವೇರುವ ಧಾವಂತದಲ್ಲಿದ್ದರು. ಯಾವಾಗ ವಿಮಾನ ಹಾರಾಟ ಎರಡು ಗಂಟೆ ವಿಳಂಬವಾಗುವುದೆಂದು ತಿಳಿದಾಗ ಇಂದಿರಾ ಗಾಂಧಿ, ‘ಪತ್ರಕರ್ತರನ್ನು ಕರೆಯಿರಿ, ನಾನು ಅವರ ಜತೆ ಮಾತಾಡ ಬಯಸುತ್ತೇನೆ’ ಎಂದು ಹೇಳಿದರು.
ಪ್ರಧಾನಿಯವರ ಜತೆ ಮಾತುಕತೆ ಸಾಧ್ಯವಾಗದ್ದಕ್ಕೆ ಬೇಸರಗೊಂಡು ಇನ್ನೇನು ಹೊರಡಲು ಸಿದ್ಧರಾಗಿದ್ದ ಪತ್ರಕರ್ತರಿಗೆ, ಅಧಿಕಾರಿಗಳು ಬಂದು, ‘ಪ್ರಧಾನಿಯವರು ನಿಮ್ಮ ಜತೆ ಮಾತಾಡಲು ಉತ್ಸುಕರಾಗಿದ್ದರೆ’ ಎಂದು ತಿಳಿಸಿದಾಗ, ಅವರು ವಿಮಾನ ನಿಲ್ದಾಣದ ಲೌಂಜ್ ಗೆ ಧಾವಿಸಿದರು.
ಅಂದು ಇಂದಿರಾ ಗಾಂಧಿಯವರು, ತಮ್ಮ ಸುತ್ತ ಪತ್ರಕರ್ತರನ್ನು ಕುಳ್ಳಿರಿಸಿಕೊಂಡು ಸುಮಾರು ಒಂದೂವರೆ ಗಂಟೆ ಕಾಲ ಅವರ ಪ್ರಶ್ನೆಗಳಿಗೆ ಸಮಾಧಾನದಿಂದ ಉತ್ತರಿಸಿದರು. ಅವರ ಜತೆ ಲೋಕಾಭಿರಾಮ ಚರ್ಚೆ ನಡೆಸಿದರು. ಪತ್ರಕರ್ತರ ಜತೆ ಅನೇಕ ಸ್ವಾರಸ್ಯಕರ ಪ್ರಸಂಗಗಳನ್ನು ‘ಆಫ್ ದಿ ರೆಕಾರ್ಡ್’ ಆಗಿ ಹಂಚಿಕೊಂಡರು. ಈ ಪ್ರಸಂಗವನ್ನು ‘ದಿ ಹಿಂದು’ ಪತ್ರಿಕೆಯ ಹುಬ್ಬಳ್ಳಿ ಮತ್ತು ಗೋವಾ ವಿಶೇಷ ವರದಿಗಾರರಾಗಿದ್ದ ಮತ್ತಿಹಳ್ಳಿ ಮದನಗೋಪಾಲ ನೆನಪಿಸಿಕೊಂಡಿದ್ದರು.
ಒಂದು ಕಾಲವಿತ್ತು, ರಾಜಕಾರಣಿಗಳು, ಸಚಿವರು, ಮುಖ್ಯಮಂತ್ರಿಗಳು ಪ್ರೆಸ್ ಮೀಟ್ ಆರಂಭಿಸುವ ಮೊದಲು ಹಿರಿಯ ಮತ್ತು ಪ್ರಮುಖ ಪತ್ರಿಕೆಗಳ ವರದಿಗಾರರಿಗೆ ಕಾಯುತ್ತಿದ್ದರು. ‘ಇವರು ಬಂದಿದ್ದಾರಾ, ಅವರು ಬಂದಿದ್ದಾರಾ’, ಎಂದು ಪತ್ರಕರ್ತರ ಬಗ್ಗೆ ವಿಚಾರಿಸಿಕೊಳ್ಳುತ್ತಿದ್ದರು. ಅದರಲ್ಲೂ ಪ್ರಸಾರ ಹೆಚ್ಚಿರುವ ಪತ್ರಿಕೆಗಳ ವರದಿಗಾರರು ಬಂದಿರುವುದನ್ನು ಖಾತ್ರಿಪಡಿಸಿಕೊಂಡ ನಂತರವೇ ಪತ್ರಿಕಾಗೋಷ್ಠಿಯನ್ನು ಆರಂಭಿಸುತ್ತಿದ್ದರು.
ಇದನ್ನೂ ಓದಿ: Vishweshwar Bhat Column: ನಡೆಯುವಾಗ ನಮ್ಮ ಶೂಲೇಸ್ ತನ್ನಷ್ಟಕ್ಕೆ ಬಿಚ್ಚಿಕೊಳ್ಳುತ್ತದಲ್ಲ, ಏಕೆ ?
ಒಂದು ವೇಳೆ ಪ್ರಮುಖ ಪತ್ರಿಕೆಯ ಮುಖ್ಯ ವರದಿಗಾರರು ಬರದಿದ್ದರೆ, ಪತ್ರಿಕಾಗೋಷ್ಠಿಯನ್ನು ಮುಂದಕ್ಕೆ ಹಾಕಿದ ನಿದರ್ಶನಗಳಿದ್ದವು. ಪತ್ರಿಕಾಗೋಷ್ಠಿ ಎಂದರೆ ಅದು ಕೇವಲ ಮಾಹಿತಿ ಹಂಚಿಕೆಯ ವೇದಿಕೆಯಾಗಿರಲಿಲ್ಲ, ಅದೊಂದು ಜವಾಬ್ದಾರಿಯುತ ಸಂವಾದವಾಗಿತ್ತು.
ಪತ್ರಿಕಾಗೋಷ್ಠಿ ಯನ್ನುದ್ದೇಶಿಸಿ ಮಾತಾಡುವವರು, ಮರುದಿನ ತಮ್ಮ ಹೇಳಿಕೆ ಪತ್ರಿಕೆಗಳಲ್ಲಿ ಪ್ರಧಾನವಾಗಿ ವರದಿಯಾಗುವುದನ್ನೇ ಎದುರು ನೋಡುತ್ತಿದ್ದರು. ತಮ್ಮ ಹೇಳಿಕೆಗೆ ಪ್ರಾಧಾನ್ಯ ಕೊಡದಿದ್ದರೆ ಅಥವಾ ಉಪೇಕ್ಷಿಸಿದರೆ, ರಾಜಕಾರಣಿಗಳು ಮತ್ತು ಸಚಿವರು ಸಂಪಾದಕರಿಗೆ ಫೋನ್ ಮಾಡಿ ವಿಚಾರಿಸುತ್ತಿದ್ದರು. ಮರುದಿನವಾದರೂ ತಮ್ಮ ಹೇಳಿಕೆಗೆ ಪ್ರಾಧಾನ್ಯ ನೀಡಿ ಪ್ರಕಟಿಸುವಂತೆ ಕೋರುತ್ತಿದ್ದರು.
ಆ ದಿನಗಳಲ್ಲಿ ಪತ್ರಿಕೆಯೊಂದೇ ಸುದ್ದಿಯ ಮೂಲವಾಗಿತ್ತು. ಪತ್ರಕರ್ತರೇ ಸುದ್ದಿಯ ‘ಗೇಟ್ ಕೀಪರ್’ ಆಗಿದ್ದರು. ಯಾವ ಸುದ್ದಿಯನ್ನು ಎಷ್ಟು ನೀಡಬೇಕು, ಹೇಗೆ ನೀಡಬೇಕು ಎಂಬುದನ್ನು ಅವರೇ ನಿರ್ಧರಿಸುತ್ತಿದ್ದರು. ಅವರೇ ಸುದ್ದಿಯ ಕಸ್ಟೋಡಿಯನ್ ಆಗಿದ್ದರು. ಅವರು ಸುದ್ದಿಯನ್ನು ಪ್ರಕಟಿಸ ದಿದ್ದರೆ, ಅದು ಓದುಗರ ಗಮನಕ್ಕೆ ಬರುತ್ತಿರಲಿಲ್ಲ.
ಇಂದಿರಾ ಗಾಂಧಿಯವರ ಕಾಲದಲ್ಲಿ ಜನರನ್ನು ತಲುಪಲು ಪತ್ರಿಕೆಗಳು ಮತ್ತು ರೇಡಿಯೋ ಬಿಟ್ಟರೆ ಬೇರೆ ದಾರಿಯೇ ಇರಲಿಲ್ಲ. ಪತ್ರಕರ್ತರು ಪ್ರಕಟಿಸಿದ್ದಷ್ಟೇ ಸುದ್ದಿ. ಪತ್ರಿಕೆಗಳಲ್ಲಿ ಪ್ರಕಟವಾಗಿದ್ದಷ್ಟೇ ಸುದ್ದಿ. ರಾಜಕಾರಣಿಗಳು ಜನರಿಗೆ ಏನನ್ನಾದರೂ ಹೇಳಬೇಕೆಂದರೆ, ಅದು ಪತ್ರಕರ್ತರ ಮೂಲಕವೇ ಹೋಗಬೇಕಿತ್ತು. ಬೆಂಗಳೂರಿನಲ್ಲಿ ರಾತ್ರಿ ಎಂಟೂವರೆಗೆ ಪ್ರಕಟವಾದ ‘ಪ್ರಜಾವಾಣಿ’ ಅಥವಾ ‘ಕನ್ನಡಪ್ರಭ’ ಬೀದರ್ ತಲುಪಲು ಮೂವತ್ತಾರು ಗಂಟೆ ಬೇಕಾಗುತ್ತಿತ್ತು.
ಅಲ್ಲಿಂದ ಮುಂದಿನ ಊರುಗಳಿಗೆ, ಗಡಿಭಾಗದ ಗ್ರಾಮಗಳಿಗೆ ತಲುಪಲು ಮತ್ತೆ ಎಂಟು ತಾಸು ಹಿಡಿಯುತ್ತಿತ್ತು. ಅಂದರೆ ಬೆಂಗಳೂರಿನಿಂದ ಹೊರಟ ಪತ್ರಿಕೆ ಕಟ್ಟಕಡೆಯ ಹಳ್ಳಿಗಳಿಗೆ ತಲುಪಲು ನಲವತ್ತು-ನಲವತ್ತೆರಡು ಗಂಟೆಗಳು ಹಿಡಿಯುತ್ತಿದ್ದವು. ಆದರೂ ಜನ ಪತ್ರಿಕೆಗಳನ್ನು ಓದಲು ಕಾತರ, ಕುತೂಹಲದಿಂದ ಕಾದಿರುತ್ತಿದ್ದರು. ಪತ್ರಿಕೆ ತಡವಾಗಿ ಬರುವ ಬಗ್ಗೆ ಅವರ ತಕರಾರಿರಲಿಲ್ಲ.
ಆದರೆ ಈಗ?
ಪರಿಸ್ಥಿತಿ ಊಹೆಗೂ ಮೀರಿ ಬದಲಾಗಿಬಿಟ್ಟಿದೆ. ಇಂದು ರಾಜಕಾರಣಿಗಳಾಗಲಿ, ಸಚಿವರಾಗಲಿ, ಪತ್ರಿಕಾಗೋಷ್ಠಿಯನ್ನೇ ಮಾಡುತ್ತಿಲ್ಲ. ಅವರಿಗೆ ಅದರ ಅಗತ್ಯವೇ ಇಲ್ಲ. ಜಿಲ್ಲಾ ಕೇಂದ್ರಗಳಲ್ಲೂ ಪತ್ರಿಕಾಗೋಷ್ಠಿಗಳು ನಡೆಯುವುದು ಅಪರೂಪ. ಯಾರಾದರೂ ಟಿವಿ ಕೆಮರಾಮನ್‌ಗಳು ಮೈಕ್ ಹಿಡಿದರೆ ಮಾತ್ರ ಮಾತಾಡುತ್ತಾರೆ. ‘ಸುದ್ದಿ ಕಳಿಸಿದ್ದೇವೆ, ಪ್ರಕಟಿಸಿ’ ಎಂದು ಸಹ ಹೇಳುವುದಿಲ್ಲ. ಕಾರ್ಯಕ್ರಮ ಇದೆ ಎಂದು ಆಹ್ವಾನ ಪತ್ರಿಕೆಯನ್ನು ಸಹ ಕಳಿಸುವುದಿಲ್ಲ.
ಪತ್ರಿಕೆಯಲ್ಲಿ ಉಲ್ಟಾ ಬರೆದರೆ ತಲೆ ಕೆಡಿಸಿಕೊಳ್ಳಬಹುದು. ಇಲ್ಲದಿದ್ದರೆ ಯಾರೂ ವರದಿಗಳ ಬಗ್ಗೆ ಹೆಚ್ಚು ಆಸ್ಥೆ ವಹಿಸುವುದಿಲ್ಲ. ತಾವು ಹೇಳಬೇಕಿರುವುದನ್ನು ಫೇಸ್‌ಬುಕ್, ಎಕ್ಸ್, ಇನ್ಸ್ಟಾ ಮೂಲಕ ಹೇಳುತ್ತಾರೆ. ಫೇಸ್ ಬುಕ್ ಲೈವ್‌ನಲ್ಲಿ ವಿವರವಾಗಿ ಹೇಳುತ್ತಾರೆ. ಇಲ್ಲವೇ ಯೂಟ್ಯೂಬ್ ಮೂಲಕ ಬಿತ್ತರಿಸುತ್ತಾರೆ. ಇವುಗಳ ಲಿಂಕ್ ನ್ನು ವಾಟ್ಸಪ್ ಮೂಲಕ ಷೇರ್ ಮಾಡುತ್ತಾರೆ.
ಇದು ಕ್ಷಣಾರ್ಧದಲ್ಲಿ ಎಡೆ ಬಿತ್ತರವಾಗುತ್ತದೆ. ಒಂದು ಸುದ್ದಿಯನ್ನು ನಾವು ನೋಡುವ ಹೊತ್ತಿಗೇ, ಅಮೆರಿಕದ ಅಧ್ಯಕ್ಷನೂ ನೋಡುವಂತಾಗಿದೆ. ಇಂದು ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್ ಫೋನ್ ಇದೆ, ಅದು ಇರುವವರೆಲ್ಲ ಫೇಸ್ ಬುಕ್, ಎಕ್ಸ್, ಇನ್ಸ್ಟಾ ಖಾತೆಗಳನ್ನು ಹೊಂದಿದ್ದಾರೆ. ಅವರೆಲ್ಲ ರಿಗೂ ಫಾಲೋವರುಗಳಿದ್ದಾರೆ. ತಮಗೆ ಸಂಬಂಧಿಸಿದ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳ ತಮ್ಮ ತಮ್ಮ ಖಾತೆಗಳಲ್ಲಿ ಹಂಚಿಕೊಳ್ಳುತ್ತಾರೆ. ಅವರಿಗೆ ಪತ್ರಿಕೆಯಲ್ಲಿ ಪ್ರಕಟವಾಗಬೇಕು ಎಂಬ ದರ್ದು ಇಲ್ಲ.
ಸಾಮಾಜಿಕ ಜಾಲತಾಣಗಳ ಮೂಲಕ ಯಾರಿಗೆ ಹೋಗಬೇಕೋ, ಅವರಿಗೆ ಹೋದರೆ ಸಾಕು. ಹೀಗಾಗಿ ಅವರಿಗೆ ಪತ್ರಿಕೆಯಲ್ಲಿ ಪ್ರಕಟವಾಗಬೇಕು ಮತ್ತು ಟಿವಿಯಲ್ಲಿ ಕಾಣಿಸಿಕೊಳ್ಳಬೇಕು ಎಂಬ ಜರೂರು ಇಲ್ಲ. ಮೊದಲಾಗಿದ್ದರೆ ಏನೇ ಘಟನೆ ಜರುಗಲಿ, ಪತ್ರಿಕೆಯ ವರದಿಗಾರರಿಗೆ ತಿಳಿಸಿ ಎನ್ನುತ್ತಿದ್ದರು. ಅಪಘಾತವಾದರೆ, ಬೆಂಕಿ ಅಪಘಾತವಾದರೆ, ಯಾರಾದರೂ ಸತ್ತರೆ, ಹುಲಿ ಬಂದರೆ, ಕಾಡಾನೆ ನುಗ್ಗಿದರೆ, ಯಾರಾದರೂ ಲಂಚ ಕೇಳಿದರೆ, ಅನ್ಯಾಯ - ಅಕ್ರಮ ಕಂಡರೆ ಪತ್ರಿಕೆಗಳಿಗೆ ತಿಳಿಸಿ, ಟಿವಿ ನೈನ್‌ಗೆ ಫೋನ್ ಮಾಡಿ ಎಂದು ಹೇಳುತ್ತಿದ್ದರು. ಈಗ ಯಾರೂ ಹಾಗೆ ಹೇಳುವುದಿಲ್ಲ. ತಮ್ಮ ಕೈಯಲ್ಲಿರುವ ಮೊಬೈಲ್ ಮೂಲಕ ಫೋಟೋ ತೆಗೆಯುತ್ತಾರೆ, ವಿಡಿಯೋ ಮಾಡಿಕೊಳ್ಳುತ್ತಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. ಇಂದು ಸ್ಮಾರ್ಟ್ ಫೋನ್ ಅಥವಾ ಮೊಬೈಲ್ ಇರುವವರೆಲ್ಲ ವರದಿಗಾರರೇ. ಇವರು ಯಾವ ಪತ್ರಕರ್ತರಿಗೇನೂ ಕಮ್ಮಿಯಿಲ್ಲ. ಇಂದು ಎಲ್ಲರಿಗೂ ಯೂಟ್ಯೂಬ್ ಮಹತ್ವ ಮತ್ತು * reach ಗೊತ್ತು. ಹೀಗಾಗಿ ಎಲ್ಲರೂ ಯೂಟ್ಯೂಬ್ ಖಾತೆ ಹೊಂದಿ ದ್ದಾರೆ. ಹಾಗೆ ನೋಡಿದರೆ, ಇಂದು ಪ್ರತಿಯೊಬ್ಬರೂ ಯೂಟ್ಯೂಬ್ ಚಾನೆಲ್ ಮಾಲೀಕರು !
ಇವರಿಗೆ ನ್ಯೂಸ್ ಚಾನೆಲ್ ಹಂಗಿಲ್ಲ. ಮೀನು ಮಾರಾಟ ಮಾಡುವ ಹೆಂಗಸು, ತರಕಾರಿ ಬೆಳೆಯುವ ರೈತ, ಕೋಳಿ ಸಾಕಾಣಿಕೆ ಮಾಡುವವ, ಬೂಟು ಪಾಲಿಶ್ ಮಾಡುವವ, ನಶ್ಯ ಮಾರಾಟಗಾರ, ಹೂವಿನ ಅಂಗಡಿಯವ ಎಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮದೇ ಆದ ವೇದಿಕೆಗಳನ್ನು ಹೊಂದಿದ್ದಾರೆ.
ತಮಗೆ ಬೇಕಾದ ಜನರನ್ನು ತಲುಪಲು ಇವರೆಲ್ಲ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಅಷ್ಟೇ ಅಲ್ಲ, ಇವರೆಲ್ಲರಿಗೂ ಅವರವರ ಸಾಮರ್ಥ್ಯಕ್ಕನುಗುಣವಾಗಿ ಫಾಲೋವರುಗಳಿದ್ದಾರೆ. ಇವರಿಗೆ ಮುಖ್ಯವಾಹಿನಿ ಮಾಧ್ಯಮಗಳೇ ಬೇಕಾಗಿಲ್ಲ. ದಿನದಲ್ಲಿ ತಾನು ಹಿಡಿದ ಮೀನುಗಳನ್ನು ತನ್ನ ಯೂಟ್ಯೂಬ್ ನಲ್ಲಿ ಪ್ರಸಾರ ಮಾಡಿ, ಅರ್ಧ ಗಂಟೆಯಲ್ಲಿ ಮಾರಾಟ ಮಾಡುವ, ಉಡುಪಿಯ ಅಕ್ಕಯಮ್ಮನಿಗೂ ಲಕ್ಷಾಂತರ ಫಾಲೋವರುಗಳಿದ್ದಾರೆ.
ಕುಣಿಗಲ್ ಸನಿಹ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಪ್ರತಿದಿನ ತಾಜಾ ತರಕಾರಿ ಮಾರಾಟ ಮಾಡುವ ಶಂಕರೇಗೌಡ ಪ್ರತಿದಿನ ಹತ್ತು ನಿಮಿಷ ಲೈವ್ ಬಂದು ತರಕಾರಿ ಮಾರಾಟ ಮಾಡುತ್ತಾನೆ. ಅದನ್ನು ಹತ್ತಾರು ಸಾವಿರ ಮಂದಿ ನೋಡುತ್ತಾರೆ. ಆತನಿಗೆ ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ.
ಕಳೆದ ಹತ್ತು-ಹದಿನೈದು ವರ್ಷಗಳಲ್ಲಿ ಮಾಧ್ಯಮ ಪರಿಸರ (ecosystem) ಸಂಪೂರ್ಣವಾಗಿ ಬದಲಾಗಿಬಿಟ್ಟಿದೆ. ಇಂದಿನ ಡಿಜಿಟಲ್ ಯುಗದಲ್ಲಿ ‘ಮಾಧ್ಯಮ’ ಎನ್ನುವ ಪದದ ವ್ಯಾಖ್ಯಾನವೇ ಮಗ್ಗುಲು ಬದಲಿಸಿದೆ. ಒಂದು ಕಾಲದಲ್ಲಿ ಸಾಮಾನ್ಯ ಜನರ ಧ್ವನಿ ಜನಪ್ರಿಯವಾಗಬೇಕಾದರೆ ಪತ್ರಿಕೆ ಅಥವಾ ಟಿವಿ ಚಾನಲ್‌ಗಳ ಕೃಪಾಕಟಾಕ್ಷ ಬೇಕಿತ್ತು. ಆದರೆ ಇಂದು ಪರಿಸ್ಥಿತಿ ಹಾಗಿಲ್ಲ.
ಸ್ಮಾರ್ಟ್ ಫೋನ್ ಮತ್ತು ಅಗ್ಗದ ಅಂತರ್ಜಾಲದ ಕ್ರಾಂತಿಯಿಂದಾಗಿ, ಸಮಾಜದ ಕಟ್ಟಕಡೆಯ ವ್ಯಕ್ತಿ ಯೂ ಕೂಡ ತನ್ನದೇ ಆದ ಪ್ರಭಾವಲಯವನ್ನು ಸೃಷ್ಟಿಸಿಕೊಂಡಿದ್ದಾನೆ. ಹಿಂದೆ ಸುದ್ದಿಯೆಂದರೆ ಅದು ಕೇವಲ ರಾಜಕೀಯ ಅಥವಾ ಅಪರಾಧ ವಿಚಾರಗಳಾಗಿದ್ದವು. ಆದರೆ ಇಂದು ಶ್ರಮಜೀವಿಗಳ ಬದುಕು ಕೂಡ ಸುದ್ದಿಯಾಗುತ್ತಿದೆ. ಮುಖ್ಯವಾಹಿನಿ ಮಾಧ್ಯಮಗಳು ಟಿಆರ್‌ಪಿ ಬೆನ್ನತ್ತಿ ಸತ್ಯಕ್ಕಿಂತ ಹೆಚ್ಚು ಮನರಂಜನೆಗೆ ಪ್ರಾಮುಖ್ಯ ನೀಡುತ್ತಿರುವಾಗ, ಜನರು ಸಹಜತೆಗಾಗಿ (Authenticity) ಹುಡುಕಾಡುತ್ತಿದ್ದಾರೆ.
ಇಂದಿನ ಸೋಷಿಯಲ್ ಮೀಡಿಯಾ ಕ್ರಾಂತಿಯು ಸಾಮಾನ್ಯ ಜನರನ್ನು ಅಸಾಮಾನ್ಯರನ್ನಾಗಿ ಮಾಡಿದೆ. ಇವರು ಕೇವಲ ಫಾಲೋವರ್ಸ್‌ಗಳನ್ನು ಹೊಂದಿಲ್ಲ, ಬದಲಾಗಿ ಒಂದು ನಿಷ್ಠಾವಂತ ಗ್ರಾಹಕ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ಯಾರು ಸುದ್ದಿಯಾಗಬೇಕು?’ ಎಂಬುದನ್ನು ನಿರ್ಧರಿ ಸುವ ಅಧಿಕಾರ ಈಗ ಎಡಿಟರ್‌ಗಳ ಕೈಯಿಂದ ಜನಸಾಮಾನ್ಯರ ಕೈಗೆ ಬಂದಿದೆ.
ಕಳೆದ ಹದಿಮೂರು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಒಂದೇ ಒಂದು ಪತ್ರಿಕಾ ಗೋಷ್ಠಿ ಕರೆದಿಲ್ಲ. ಪತ್ರಕರ್ತನ್ನುದ್ದೇಶಿಸಿ ಮಾತಾಡಿಲ್ಲ. ಅಸಲಿಗೆ ಅವರಿಗೆ ಮಾಧ್ಯಮ ಸಲಹೆಗಾರ ರಾಗಲಿ, ಮಾಧ್ಯಮ ಕಾರ್ಯದರ್ಶಿಯಾಗಲಿ ಇಲ್ಲವೇ ಇಲ್ಲ. ಅವರಿಗಿಂತ ಮುನ್ನ ಪ್ರಧಾನಿಯಾದವ ರೆಲ್ಲ ಆ ಹುದ್ದೆಯನ್ನು ಇಟ್ಟುಕೊಂಡಿದ್ದರು.
ಗಣ್ಯ ಪತ್ರಕರ್ತರನ್ನು ಆ ಹುದ್ದೆಯಲ್ಲಿ ಕುಳ್ಳಿರಿಸಿದ್ದರು. ಪತ್ರಿಕಾಗೋಷ್ಠಿ ಕರೆಯದ ಬಗ್ಗೆ ಅವರ ಸನಿಹವರ್ತಿಗಳು ನೀಡುವ ಸಮರ್ಥನೆ ಅಂದ್ರೆ ಪ್ರಧಾನಿಯವರು ಸಾರ್ವಜನಿಕವಾಗಿ ಏನು ಹೇಳಬೇಕೋ, ಅದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹೇಳುತ್ತಾರೆ. ಪತ್ರಕರ್ತರ ಮೂಲಕವೇ ಹೇಳಬೇಕು ಎಂದೇನಿಲ್ಲವಲ್ಲ? ಮೋದಿ ಅವರು ‘ಮಧ್ಯವರ್ತಿ ರಹಿತ ಸಂವಹನ’ವನ್ನು (Disintermediated Communication) ಬಲವಾಗಿ ನಂಬುತ್ತಾರೆ.
ಸಾಂಪ್ರದಾಯಿಕ ಪತ್ರಿಕಾಗೋಷ್ಠಿಗಳಲ್ಲಿ ಪತ್ರಕರ್ತರು ಕೇಳುವ ಪ್ರಶ್ನೆಗಳು ಮತ್ತು ಅದಕ್ಕೆ ನೀಡುವ ಉತ್ತರಗಳು ಮಾಧ್ಯಮಗಳ ‘ಎಡಿಟಿಂಗ್’ಗೆ ಒಳಪಡುತ್ತವೆ ಎಂಬುದು ಅವರ ಅಭಿಪ್ರಾಯ ವಿರಬಹುದು. ಪ್ರಧಾನಿಯವರ ‘ಮನ್ ಕಿ ಬಾತ್’ ಕಾರ್ಯಕ್ರಮವು ಇದಕ್ಕೆ ಅತ್ಯುತ್ತಮ ಉದಾಹರಣೆ. ರೇಡಿಯೋ ಮತ್ತು ಸೋಶಿಯಲ್ ಮೀಡಿಯಾ ಮೂಲಕ ಅವರು ಕೋಟ್ಯಂತರ ಜನರೊಂದಿಗೆ ನೇರವಾಗಿ ಮಾತನಾಡುತ್ತಾರೆ, ಇಲ್ಲಿ ಪ್ರಶ್ನೆ ಕೇಳುವ ಪತ್ರಕರ್ತರ ಅಗತ್ಯ ಅವರಿಗೆ ಕಂಡುಬಂದಿಲ್ಲ.
ಸರಕಾರದ ಬೆಂಬಲಿಗರು ಇದನ್ನು ‘ತಂತ್ರಜ್ಞಾನದ ಸಮರ್ಥ ಬಳಕೆ’ ಎಂದು ಕರೆದರೆ, ಟೀಕಾಕಾರರು ಇದನ್ನು ‘ಜವಾಬ್ದಾರಿಯಿಂದ ನುಣುಚಿಕೊಳ್ಳುವ ತಂತ್ರ’ ಎನ್ನುತ್ತಾರೆ. ಆದರೂ, ಜನರೊಂದಿಗೆ ನೇರವಾಗಿ ಸಂಪರ್ಕ ಸಾಧಿಸುವ ಅವರ ಈ ವಿಶಿಷ್ಟ ಕಲೆ ಅವರನ್ನು ಇತರ ನಾಯಕರಿಗಿಂತ ಭಿನ್ನವಾಗಿ ನಿಲ್ಲಿಸಿರುವುದು ಸುಳ್ಳಲ್ಲ.
ಮಾಧ್ಯಮ ಲೋಕದ ಇತಿಹಾಸದಲ್ಲಿ ಇಂದು ನಾವು ಅತ್ಯಂತ ಕುತೂಹಲಕಾರಿ ಘಟ್ಟದಲ್ಲಿದ್ದೇವೆ. ಒಂದು ಕಾಲದಲ್ಲಿ ‘ಅಭಿಪ್ರಾಯ’ ಎನ್ನುವುದು ಕೇವಲ ಸಂಪಾದಕೀಯ ಪುಟಗಳಿಗೆ ಅಥವಾ ರಾತ್ರಿಯ ಪ್ರೈಮ್ ಟೈಮ್ ಚರ್ಚೆಗಳಿಗೆ ಸೀಮಿತವಾಗಿತ್ತು. ಆದರೆ ಇಂದು ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಯಾರಲ್ಲಿ ವಿಷಯವಿದೆಯೋ, ಯಾರಲ್ಲಿ ಆಕರ್ಷಕವಾಗಿ ಮಾತನಾಡುವ ಕಲೆಯಿ ದೆಯೋ, ಅವರು ಇಡೀ ಮಾಧ್ಯಮ ಸಾಮ್ರಾಜ್ಯವನ್ನೇ ಸೃಷ್ಟಿಸಬಲ್ಲರು ಎಂಬುದು ಸಾಬೀತಾಗಿದೆ.
ಇಂದು ಯಾರಲ್ಲಿ ಅಭಿಪ್ರಾಯವಿದೆಯೋ, ಅವನಿಗೆ ಅವನದೇ ಆದ ಸ್ವಂತ ವೇದಿಕೆಯಿದೆ. ಆತ ಮಾಧ್ಯಮದ ಮರ್ಜಿಗೆ ಒಳಗಾಗಬೇಕಿಲ್ಲ. ಆತ ಏಕಾಏಕಿ ತನ್ನದೇ ಆದ ಯೂಟ್ಯೂಬ್ ಚಾನೆಲ್ ಆರಂಭಿಸಿ, ತನ್ನ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಈ ರೀತಿಯ ಯೂಟ್ಯೂಬ್ ಚಾನೆಲ್ ಹೊಂದಿರುವವರ ಪೈಕಿ ಹೆಚ್ಚಿನವರು ಪತ್ರಕರ್ತರಲ್ಲ. ಸೋಜಿಗದ ಸಂಗತಿಯೆಂದರೆ, ಭಾರತದಲ್ಲಿ ‘ಟಾಪ್ ಟೆನ್’ ಯೂಟ್ಯೂಬ್ ಚಾನೆಲ್, ಪಾಡ್ ಕಾಸ್ಟ್ ಚಾನೆಲ್ ಹೊಂದಿರುವವರು ಪತ್ರಕರ್ತರಲ್ಲ.
ಫೇಸ್ ಬುಕ್ ಮತ್ತು ಟ್ವಿಟರ್ ನಲ್ಲಿ ಪತ್ರಕರ್ತರಿಗಿಂತ ಹೆಚ್ಚು ಫಾಲೋವರ್ಸ್ ಹೊಂದಿರುವವರಿzರೆ. ಅಲ್ಲಿ ಪತ್ರಕರ್ತರಿಗಿಂತ ಹೆಚ್ಚಾಗಿ ಸಾಮಾನ್ಯ ಹಿನ್ನೆಲೆಯ ಅಥವಾ ಬೇರೆ ವೃತ್ತಿಯವರೇ ಕಾಣ ಸಿಗುತ್ತಾರೆ. ಇದಕ್ಕೆ ಮುಖ್ಯ ಕಾರಣಗಳು ಸರಳ ಭಾಷೆ ಮತ್ತು ಶೈಲಿ ಹಾಗೂ ವೈವಿಧ್ಯಮಯ ವಿಷಯ ಗಳು.
ಜನರು ಸ್ಕ್ರಿಪ್ಟೆಡ್ ಸುದ್ದಿಗಳಿಗಿಂತ ಹೆಚ್ಚಾಗಿ, ಎಡಿಟಿಂಗ್ ಇಲ್ಲದ ನೇರ ಮಾತುಗಳನ್ನು ಇಷ್ಟಪಡು ತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಪಾಡ್‌ಕಾಸ್ಟ್‌ಗಳು ಭಾರತದಲ್ಲಿ ಭಾರಿ ಜನಪ್ರಿಯತೆ ಗಳಿಸಿವೆ. ಉದಾಹರಣೆಗೆ, ರಣವೀರ್ ಅಲ್ಲಾಬಾಡಿಯಾ (BeerBiceps) ಅವರಂಥ ಪಾಡ್‌ಕಾಸ್ಟರ್‌ಗಳು ಪತ್ರಕರ್ತರಲ್ಲ. ಆದರೂ ಅವರು ವಿಜ್ಞಾನಿಗಳು, ಉದ್ಯಮಿಗಳು ಮತ್ತು ಆಧ್ಯಾತ್ಮಿಕ ಗುರುಗಳನ್ನು ಸಂದರ್ಶಿಸಿ ಕೋಟ್ಯಂತರ ಜನರನ್ನು ತಲುಪುತ್ತಿದ್ದಾರೆ.
ಇವರಿಗೆ ಟಿವಿ ಚಾನಲ್‌ಗಳಲ್ಲಿ ಹತ್ತು ಸೆಕೆಂಡ್‌ನ ‘ಸೌಂಡ್ ಬೈಟ್’ ಸಿಗುತ್ತದೆ. ಆದರೆ ಇಲ್ಲಿ ಗಂಟೆಗಟ್ಟಲೆ ಆಳವಾದ ಚರ್ಚೆ ನಡೆಯುತ್ತದೆ. ಇದು ಜ್ಞಾನದಾಹಿಗಳಿಗೆ ದೊಡ್ಡ ವರದಾನವಾಗಿದೆ. ಹಿಂದೆ ಒಬ್ಬ ವಿಚಾರವಂತ ಬರೆಯಬೇಕೆಂದರೆ ಸಂಭಾವನೆಗಾಗಿ ಪತ್ರಿಕೆಗಳನ್ನು ನೆಚ್ಚಿಕೊಳ್ಳಬೇಕಿತ್ತು. ಈಗ ಯೂಟ್ಯೂಬ್‌ನ ‘ಆಡ್ ರೆವೆನ್ಯೂ’, ಸ್ಪಾನ್ಸರ್‌ಶಿಪ್ ಮತ್ತು ಮೆಂಬರ್‌ಶಿಪ್‌ಗಳ ಮೂಲಕ ಒಬ್ಬ ಸ್ವತಂತ್ರ ಕ್ರಿಯೇಟರ್ ಲಕ್ಷಾಂತರ ರುಪಾಯಿ ಗಳಿಸಬಹುದು. ಈ ಆರ್ಥಿಕ ಸ್ವಾತಂತ್ರ್ಯವು ಅವರ ಅಭಿಪ್ರಾಯಗಳಿಗೆ ಬಲ ನೀಡಿದೆ.
ಅವರು ಯಾವುದೇ ಮಾಲೀಕರ ಅಥವಾ ರಾಜಕೀಯ ಪಕ್ಷದ ಅಜೆಂಡಾಗಳಿಗೆ ಬಲಿಯಾಗಬೇಕಿಲ್ಲ. ಇಂದು ಯೂಟ್ಯೂಬ್ ಕೇವಲ ವಿಡಿಯೋ ಪ್ಲಾಟ್ ಫಾರ್ಮ್ ಆಗಿ ಉಳಿದಿಲ್ಲ, ಅದೊಂದು ‘ಪರ್ಯಾಯ ವಿಶ್ವವಿದ್ಯಾಲಯ’ವಾಗಿದೆ. ಧ್ರುವ್ ರಾಠೀ ಅಥವಾ ಅಭಿ ಅಂಡ್ ನಿಯು ಅವರಂಥ ವರು ಸುದ್ದಿಗಳ ವಿಶ್ಲೇಷಣೆ ಮಾಡುತ್ತಾರೆ. ಇವರು ಸಾಂಪ್ರದಾಯಿಕ ಪತ್ರಕರ್ತರಲ್ಲದಿದ್ದರೂ, ಇವರ ವಿಡಿಯೋಗಳು ಮುಖ್ಯವಾಹಿನಿ ಮಾಧ್ಯಮಗಳಿಗಿಂತ ಹೆಚ್ಚು ವೀಕ್ಷಣೆ ಪಡೆಯುತ್ತವೆ.
ಜನರು ಸತ್ಯದ ವಿಭಿನ್ನ ಆಯಾಮಗಳನ್ನು ತಿಳಿಯಲು ಈ ಸ್ವತಂತ್ರ ವೇದಿಕೆಗಳ ಮೊರೆ ಹೋಗು ತ್ತಿದ್ದಾರೆ. ಈ ಬದಲಾವಣೆಯಲ್ಲಿ ಒಂದು ಅಪಾಯವೂ ಇದೆ. ಪತ್ರಕರ್ತರಿಗೆ ಕೆಲವು ವೃತ್ತಿಪರ ನೈತಿಕತೆ (Ethics) ಮತ್ತು ಜವಾಬ್ದಾರಿಗಳಿರುತ್ತವೆ. ಆದರೆ ಸ್ವತಂತ್ರ ಯುಟ್ಯೂಬರ್ ಗಳಿಗೆ ಅಂಥ ಕಟ್ಟುಪಾಡುಗಳಿಲ್ಲ. ಇದು ಕೆಲವೊಮ್ಮೆ ತಪ್ಪು ಮಾಹಿತಿ ( Misinformation) ಹರಡಲು ದಾರಿಯಾಗಬಹುದು.
ಆದರೂ, ಜನರೇ ಬುದ್ಧಿವಂತರಾಗಿರುವುದರಿಂದ ಸತ್ಯ ಮತ್ತು ಸುಳ್ಳಿನ ನಡುವಿನ ವ್ಯತ್ಯಾಸವನ್ನು ಕಾಲಕ್ರಮೇಣ ಗುರುತಿಸುತ್ತಿದ್ದಾರೆ. ಹಿಂದೆ ‘ಮಾಧ್ಯಮದ ಮಸಲತ್ತು’ ಎಂಬುದಿತ್ತು. ಸಂಪಾದಕೀಯ ಪುಟಕ್ಕೆ ಮಾತ್ರ ಸೀಮಿತವಾದ ಸಂಪಾದಕರಿದ್ದರು. ಅವರೇ ಎಲ್ಲವನ್ನೂ ನಿಯಂತ್ರಿಸುತ್ತಿದ್ದರು.
ಈಗ ಆ ‘ಪ್ರಭೃತಿ’ಗಳೇ ಇಲ್ಲವಾಗಿದ್ದಾರೆ. ಈಗ ಅವರು ತಮ್ಮ ಗತವೈಭವವನ್ನು ಮೆಲುಕು ಹಾಕು ವಂತಾಗಿದೆ. ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಈಗ ಡಿಗ್ರಿ ಅಥವಾ ದೊಡ್ಡ ಕಚೇರಿಯ ಅಗತ್ಯ ವಿಲ್ಲ. ಕೇವಲ ಒಂದು ಸ್ಮಾರ್ಟ್ʼಫೋನ್ ಮತ್ತು ವಿಷಯದ ಸ್ಪಷ್ಟತೆ ಇದ್ದರೆ ಸಾಕು. ಭಾರತದ ಟಾಪ್ ಹತ್ತು ಚಾನೆಲ್‌ಗಳಲ್ಲಿ ಪತ್ರಕರ್ತರಲ್ಲದವರು ಇರುವುದು ಬದಲಾಗುತ್ತಿರುವ ಜನರ ಆಸಕ್ತಿ ಮತ್ತು ಮಾಧ್ಯಮದ ಹೊಸ ಮನ್ವಂತರಕ್ಕೆ ಸಾಕ್ಷಿಯಾಗಿದೆ.
ಇವೆಲ್ಲಕ್ಕಿಂತ ಮುಖ್ಯವಾಗಿ, ಇಂದಿನ ಪತ್ರಿಕಾ ಓದುಗ, ಪತ್ರಕರ್ತನಿಗಿಂತ ಮುಂದಿದ್ದಾನೆ. ಟಿವಿ ವೀಕ್ಷಕ, ಆಂಕರ್‌ಗಿಂತ ಚೆನ್ನಾಗಿ ತಿಳಿದುಕೊಂಡಿzನೆ. ಸಾಹಿತಿಗಿಂತ ಓದುಗನೇ ವಿಷಯವನ್ನು ಚೆನ್ನಾಗಿ ಮಂಡಿಸಬಲ್ಲ. ನುರಿತ ವಿಮರ್ಶಕನಿಗಿಂತ ಒಂದು ಕೈ ಮೇಲಾಗಿ ಪುಸ್ತಕವನ್ನಾಗಲಿ, ಸಿನಿಮಾ ವನ್ನಾಗಲಿ, ವಿಮರ್ಶೆ ಮಾಡಬಲ್ಲ.
ಪತ್ರಕರ್ತನ ಬರಹದಲ್ಲಿರುವ ತಪ್ಪುಗಳನ್ನು ಪಟ್ಟಿ ಮಾಡಿ, ಎಲ್ಲರ ಎದುರು ಬೆತ್ತಲೆಯಾಗಿಸಬಲ್ಲ. ಹಿಂದೆ ಒಬ್ಬ ಪತ್ರಕರ್ತ ಅಥವಾ ಸಾಹಿತಿ ಹೇಳಿದ್ದೇ ಅಂತಿಮ ಸತ್ಯವಾಗಿತ್ತು. ಏಕೆಂದರೆ ಮಾಹಿತಿ ಅವರ ಬಳಿ ಮಾತ್ರ ಇರುತ್ತಿತ್ತು. ಆದರೆ ಇಂದು ಅಂತರಜಾಲದ (ಗೂಗಲ್, ವಿಕಿಪೀಡಿಯ) ಕಾರಣದಿಂದಾಗಿ ಓದುಗನ ಬಳಿಯೂ ಅದೇ ಮಾಹಿತಿಯಿದೆ.
ಪತ್ರಕರ್ತ ಲೇಖನದಲ್ಲಿ ತಪ್ಪು ಅಂಕಿ-ಅಂಶ ನೀಡಿದರೆ, ಹತ್ತು ಸೆಕೆಂಡ್‌ನಲ್ಲಿ ಓದುಗ ಅದನ್ನು ಪತ್ತೆಹಚ್ಚಿ ಕಾಮೆಂಟ್ ಬಾಕ್ಸ್‌ನಲ್ಲಿ ಸರಿಪಡಿಸುತ್ತಾನೆ. ತಾಕತ್ತಿದ್ದರೆ ಲಂಕೇಶ್ ಮತ್ತು ರವಿ ಬೆಳಗೆರೆ ಈಗ ಪತ್ರಿಕೋದ್ಯಮ ಮಾಡಬೇಕಿತ್ತು. ಅವರ ಕಾಲದಲ್ಲಿ ಸಂವಹನವು ಏಕಮುಖವಾಗಿತ್ತು. ಅವರು ಬರೆದಿದ್ದನ್ನು ಓದಿ ಜನ ಮೆಚ್ಚಿಕೊಳ್ಳಬೇಕಿತ್ತೇ ಹೊರತು, ಪ್ರಶ್ನೆ ಮಾಡುವ ವೇದಿಕೆಗಳು ಇರಲಿಲ್ಲ. ಪ್ರಶ್ನೆ ಮಾಡುವವರ ಮೇಲೆ ಅವರು ಪ್ರಹಾರ ಮಾಡಿ ಬಾಯಿ ಮುಚ್ಚಿಸುತ್ತಿದ್ದರು. ಈಗ ಆ ತಂತ್ರಗಳು ನಡೆಯುವುದಿಲ್ಲ. ಈಗ ಓದುಗರು ಹಿಡಿಯುವ ಭೂತಗನ್ನಡಿ ಶಾಖಕ್ಕೆ ಅವರಿಬ್ಬರೂ ಸುಟ್ಟು ಹೋಗುತಿದ್ದರು.
ಹಳದಿ ಪತ್ರಿಕೋದ್ಯಮ ಅಥವಾ ಊಹಾಪೋಹದ ವರದಿಗಾರಿಕೆ ಇಂದು ನಡೆಯುವುದಿಲ್ಲ. ಅಂದು ಲಂಕೇಶ್-ಬೆಳಗೆರೆ ಪ್ರಕಟಿಸುತ್ತಿದ್ದ ಅವೆಷ್ಟೋ ವೈಯಕ್ತಿಕ ದಾಳಿಗಳು ಅಥವಾ ಆಧಾರ ರಹಿತ ಸುದ್ದಿ ಗಳು ಇಂದಿನ ಕಾಲದಗಿದ್ದರೆ ‘ಡಿಜಿಟಲ್ ಲಿಂಚಿಂಗ್’ಗೆ ಒಳಗಾಗುತ್ತಿದ್ದವು. ಈಗ ಊಹಾಪೋಹದ ಟ್ಯಾಬ್ಲಾಯಿಡ್ ಪತ್ರಿಕೋದ್ಯಮ ಮಾಡಲು ಸಾಧ್ಯವೇ ಇರಲಿಲ್ಲ.
ಆಗ ಕಟ್ಟುಕತೆಗಳನ್ನು ಬರೆದು ತಪ್ಪಿಸಿಕೊಳ್ಳಬಹುದಿತ್ತು. ಆದರೆ ಇಂದು ಸುಳ್ಳು ಸುದ್ದಿ ಹರಡಿದರೆ ಅಥವಾ ತಪ್ಪು ಮಾಹಿತಿ ನೀಡಿದರೆ ‘ಎಕ್ಸ್’ ಮತ್ತು ‘ಫೇಸ್‌ಬುಕ್’ನಲ್ಲಿ ಜನ ಆ ಪತ್ರಕರ್ತನನ್ನು ಸಾರ್ವಜನಿಕವಾಗಿ ಬೆತ್ತಲೆ ಮಾಡುತ್ತಾರೆ. ಬರಹಗಾರನೊಬ್ಬ ತನ್ನ ಲೇಖನದಲ್ಲಿ ಪಕ್ಷಪಾತ ಮಾಡಿ ದರೆ, ಓದುಗರು ಕೂಡಲೇ ಅದನ್ನು ಪತ್ತೆಹಚ್ಚಿ ಆತನ ಹಳೆಯ ಬರಹಗಳ ಜತೆ ಹೋಲಿಸಿ ಆತನ ಅಜೆಂಡಾವನ್ನು ಬಯಲಿಗೆಳೆಯುತ್ತಾರೆ.
ಮಾಹಿತಿ ತಂತ್ರಜ್ಞಾನದ ಪ್ರಭಾವದಿಂದಾಗಿ ಜ್ಞಾನವು ಈಗ ಕೇವಲ ಒಂದು ವರ್ಗದ ಅಥವಾ ಒಂದು ವೃತ್ತಿಯ ಜನರ ಸ್ವತ್ತಾಗಿ ಉಳಿದಿಲ್ಲ. ಇಂದಿನ ಓದುಗ ಕೇವಲ ‘ಗ್ರಾಹಕ’ನಾಗಿ ಉಳಿಯದೇ, ವಿಮರ್ಶಕನಾಗಿ, ಸಂಶೋಧಕನಾಗಿ ಮತ್ತು ತಿದ್ದುವ ಗುರುವಾಗಿಯೂ ಬದಲಾಗಿದ್ದಾನೆ. ಟಿವಿ ಚರ್ಚೆಗಳಲ್ಲಿ ಆಂಕರ್‌ಗಳು ತಪ್ಪು ಮಾಹಿತಿ ನೀಡಿದಾಗ ಅಥವಾ ಪೂರ್ವಗ್ರಹ ತೋರಿದಾಗ, ವೀಕ್ಷಕರು ಆ ಕ್ಲಿಪ್‌ಗಳನ್ನು ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟು ಅವರ ಮುಖವಾಡ ಕಳಚುತ್ತಿದ್ದಾರೆ.
ಇಂದು ಆಂಕರ್‌ಗಿಂತ ವೀಕ್ಷಕನೇ ಹೆಚ್ಚು ಜಾಗರೂಕನಾಗಿದ್ದಾನೆ. ಇಂದಿನ ಕಾಲದಲ್ಲಿ ‘ಮಾಹಿತಿಯ ಸರ್ವಾಧಿಕಾರ’ ಕೊನೆಗೊಂಡಿದೆ. ಯಾರೂ ಕೂಡ ತಾವು ದೊಡ್ಡ ತಜ್ಞರು ಎಂದು ಭ್ರಮೆಯಲ್ಲಿರು ವಂತಿಲ್ಲ. ಓದುಗ ಅಥವಾ ವೀಕ್ಷಕ ಇಂದು ಕೇವಲ ಮೂಕಪ್ರೇಕ್ಷಕನಲ್ಲ. ಆತ ಸಂಶೋಧಕನೂ ಹೌದು, ತೀರ್ಪುಗಾರನೂ ಹೌದು.
ಇದು ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಉತ್ತರದಾಯಿತ್ವವನ್ನು ( Accountability) ತಂದಿದೆ. ಜ್ಞಾನದ ಪ್ರಜಾಪ್ರಭುತ್ವೀಕರಣವೇ ಈ ಹೊಸ ಯುಗದ ಯಶಸ್ಸು. ಇಂದಿನ ಓದುಗನ ಭೂತಗನ್ನಡಿಗೆ ಬೆದರದೇ ಕೆಲಸ ಮಾಡುವುದು ಪ್ರತಿಯೊಬ್ಬ ಪತ್ರಕರ್ತನ ಮುಂದಿರುವ ದೊಡ್ಡ ಸವಾಲು. ಪತ್ರಿಕೆಗಳು ಅಳಿಯುವುದಿಲ್ಲ,
ಪತ್ರಕರ್ತ ಅಳಿವಿನ ಅಂಚಿನಲ್ಲಿರುವ ಪ್ರಾಣಿಯೂ ಅಲ್ಲ. ಆದರೆ ಪತ್ರಕರ್ತ ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಹಿಂದೆಂದಿಗಿಂತಲೂ ಹೆಚ್ಚು update ಆಗಬೇಕಾದ, ವಿಶ್ವಾಸಾರ್ಹನಾಗಬೇಕಾದ ಅಗತ್ಯವಿದೆ, ಮತ್ತಷ್ಟು ವೃತ್ತಿಪರ ಆಗಬೇಕಾಗಿದೆ. ಇವೆಲ್ಲ ಹೊಯ್ದಾಟಗಳ ಮಧ್ಯೆ, ಓದುಗರ - ಕೇಳುಗರ ಸಂತತಿ ಹತ್ತಾರು ಪಟ್ಟು ಹೆಚ್ಚಿರುವುದು, ಪತ್ರಕರ್ತರನ್ನು ಒರೆಗೆ ಹಚ್ಚುತ್ತಿರುವುದು, ವೈಯಕ್ತಿಕವಾಗಿ ನನಗೆ ಹೆಚ್ಚು ಸಂತಸ ನೀಡಿದ ಸಂಗತಿ.
ಹೀಗೆಂದು ಮೊನ್ನೆ ಬೀದರಿನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (KUWJ ) ಏರ್ಪಡಿಸಿದ ‘ನಲವತ್ತನೇ ಪತ್ರಕರ್ತರ ಸಮ್ಮೇಳನ’ದ ಪ್ರಧಾನ ಭಾಷಣದಲ್ಲಿ ಹೇಳಿ ಕುಳಿತುಕೊಂಡೆ. ಲಂಕೇಶ್ - ರವಿ ಬೆಳಗೆರೆ ಈ ಕಾಲದಲ್ಲಿ ಇರಬೇಕಿತ್ತು !