Dr K S Chaithra Column: ವೈದ್ಯ ವಿದ್ಯಾರ್ಥಿಗಳ ಸೈಲೆಂಟ್ ಟೀಚರ್ !
ವೈಯಕ್ತಿಕ ಅನುಭವಕ್ಕೆ ಬಂದರೆ ಮೂರು ತಲೆಮಾರು ವೈದ್ಯರನ್ನು ಹೊಂದಿರುವ ಕುಟುಂಬ ನಮ್ಮದು. ಕುಟುಂಬದ ಪ್ರಥಮ ವೈದ್ಯರಾದ ಅಪ್ಪ ಸಾಗರದ ಸಂಪ್ರದಾಯಸ್ಥ ಮನೆತನಕ್ಕೆ ಸೇರಿದವರು. ಅಂಥವರು ಬೆಂಗಳೂರಿನಲ್ಲಿ ಮೆಡಿಕಲ್ ಸೇರಿದಾಗ ‘ಅಡಿಕೆ ತೋಟ, ಪೂಜೆ-ಪುನಸ್ಕಾರ ಮಾಡೋದು ಬಿಟ್ಟು ಹೆಣ ಕುಯ್ಯೋ ಕೆಲಸ ಯಾಕೆ?’ ಎಂಬ ಪ್ರಶ್ನೆಯನ್ನು ಅರವತ್ತರ ದಶಕದಲ್ಲಿ ಎದುರಿಸಿದ್ದರು.
-
ಸಕಾಲಿಕ
ಡಾ.ಕೆ.ಎಸ್.ಚೈತ್ರ
ಇತ್ತೀಚೆಗಷ್ಟೇ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಪುರುಷ ಕಳೇಬರದ ಬಗ್ಗೆ ಕಾಮಿಡಿ ಷೋನಲ್ಲಿ ತುಚ್ಛವಾಗಿ ಮಾತನಾಡಿದ್ದು ನಿಜಕ್ಕೂ ಖಂಡನಾರ್ಹ. ಅದರೊಂದಿಗೆ ಅದನ್ನು ನಗುತ್ತಾ ಆನಂದಿಸಿ ದವರು ಪ್ರೋತ್ಸಾಹಿಸಿದವರದ್ದೂ ತಪ್ಪು! ಅಲ್ಲಿದ್ದವರಿಗೆ ಈ ವಿಷಯದ ಬಗ್ಗೆ ಗೊತ್ತಿಲ್ಲ, ಕಾಮೆಡಿ ಎಂದರೆ ಹೀಗೆಯೇ ಎಂಬ ನೆಪಗಳು ಸರ್ವಥಾ ಸರಿಯಲ್ಲ.
ಆದರೆ ಸ್ವತಃ ವೈದ್ಯ ವಿದ್ಯಾರ್ಥಿನಿ ಹೀಗೆಂದಿರುವುದು ಖೇದಕರ. ಮೊದಲ ವರ್ಷದ ವೈದ್ಯಕೀಯ ವ್ಯಾಸಂಗದಲ್ಲಿ ಅನಾಟಮಿ ಅಂದರೆ ಅಂಗರಚನಾಶಾಸ ಮುಖ್ಯ ವಿಷಯ. ಅದನ್ನು ಕಲಿಯಲು ಕಳೇಬರ/ ಕೆಡಾವರ್ ಅತ್ಯಗತ್ಯ. ಹೀಗಾಗಿಯೇ ‘ಕೆಡಾವರಿಕ್ ಓತ್’ ಎನ್ನುವ ಪ್ರತಿಜ್ಞಾವಿಧಿಯನ್ನು ಪ್ರಥಮ ವರ್ಷದಲ್ಲಿ ಎಲ್ಲರಿಗೂ ಬೋಧಿಸಲಾಗುತ್ತದೆ. ಅದರ ಪ್ರಕಾರ ಕೆಡಾವರ್ ಅಥವಾ ಕಳೇಬರ ಎಂದರೆ ಸೈಲೆಂಟ್ ಟೀಚರ್ ಮಾತ್ರವಲ್ಲ ಮೋಸ್ಟ್ ರೆಸ್ಪೆಕ್ಟೆಡ್ ಕೂಡ!
ವೈಯಕ್ತಿಕ ಅನುಭವಕ್ಕೆ ಬಂದರೆ ಮೂರು ತಲೆಮಾರು ವೈದ್ಯರನ್ನು ಹೊಂದಿರುವ ಕುಟುಂಬ ನಮ್ಮದು. ಕುಟುಂಬದ ಪ್ರಥಮ ವೈದ್ಯರಾದ ಅಪ್ಪ ಸಾಗರದ ಸಂಪ್ರದಾಯಸ್ಥ ಮನೆತನಕ್ಕೆ ಸೇರಿದವರು. ಅಂಥವರು ಬೆಂಗಳೂರಿನಲ್ಲಿ ಮೆಡಿಕಲ್ ಸೇರಿದಾಗ ‘ಅಡಿಕೆ ತೋಟ, ಪೂಜೆ-ಪುನಸ್ಕಾರ ಮಾಡೋದು ಬಿಟ್ಟು ಹೆಣ ಕುಯ್ಯೋ ಕೆಲಸ ಯಾಕೆ?’ ಎಂಬ ಪ್ರಶ್ನೆಯನ್ನು ಅರವತ್ತರ ದಶಕದಲ್ಲಿ ಎದುರಿಸಿದ್ದರು.
ಅವೆಲ್ಲವನ್ನೂ ಮೀರಿ ಶ್ರದ್ಧೆಯಿಂದ ಕಲಿತು ಯಶಸ್ವಿ ವೈದ್ಯರಾದ ಅಪ್ಪ ಯಾವಾಗಲೂ ಕೇಳುವ ಮಾತು ‘ಮೊದಲ ವರ್ಷದಲ್ಲಿ ಕೆಡಾವರ್ ನೋಡಿ ಕಲಿತದ್ದು ಇಂದಿಗೂ ನೆನಪಿದೆ. ಅನಾಟಮಿ ತುಂಬಾ ಮುಖ್ಯ. ದೇಹದ ಮೇಲಿರುವುದನ್ನು ಸುಲಭವಾಗಿ ನೋಡಬಹುದು. ಒಳಗಿದನ್ನು ನೋಡಬೇಕು, ತಿಳಿಯಬೇಕು, ಹೇಗೆ ಕೆಲಸ ಮಾಡುತ್ತೆ ಕಲಿಯಬೇಕು. ಆಗ ಮಾತ್ರ ಉತ್ತಮ ವೈದ್ಯರಾಗಲು ಸಾಧ್ಯ.’
ಇದನ್ನೂ ಓದಿ: Dr K S Chaithra Column: ಶಿಲಾಸಮಾಧಿಯೇ ವಿಶ್ವದ ಅದ್ಭುತ
ನಮ್ಮ ದೇಹ ಅನ್ನುವುದು ಪ್ರಕೃತಿಯ ಅದ್ಭುತ ಸೃಷ್ಟಿ. ಸಾವಿರಾರು ಸಣ್ಣ ಪುಟ್ಟ ಭಾಗಗಳು ಪರಸ್ಪರ ಹೊಂದಿಕೊಂಡು ಏಕಕಾಲಕ್ಕೆ ಕೆಲಸ ಮಾಡುವುದು ನಿಜಕ್ಕೂ ವಿಸ್ಮಯ. ಅವುಗಳ ಬಗ್ಗೆ ಕೂಲಂಕಷ ವಾಗಿ ತಿಳಿಯುವುದು ಅಗತ್ಯ. ಕಾರು ಚೆನ್ನಾಗಿ ಓಡುತ್ತೆ ನಿಜ. ಆದರೆ ಕೆಟ್ಟು ನಿಂತಾಗ ನೂರು ಕಾರಣಗಳಿರಬಹುದು. ಕಾರಣ ಯಾವುದು ಎಂದು ತಿಳಿದು ಅದನ್ನು ಸರಿಪಡಿಸಬೇಕು ಎಂದರೆ ಕಾರಿನ ಪ್ರತಿ ಬಿಡಿ ಭಾಗದ ಬಗ್ಗೆ ಜ್ಞಾನವಿರಬೇಕು. ಹಾಗೆಯೇ ಇದು! ಹೆಣ ಕೊಯ್ಯುವ ಕೆಲಸ ಎಂದು ವ್ಯಂಗ್ಯವಾಡುವುದಲ್ಲ ; ಕಣ್ಣಿಗೊತ್ತಿಕೊಂಡು ಆ ಕೆಲಸವನ್ನು ಮಾಡುತ್ತಿದ್ದೆವು; ಮಾಡಬೇಕು.
ನಂತರ ನಾವು ಮೂರೂ ಮಕ್ಕಳು ವೈದ್ಯರಾದೆವು. ಪ್ರೊಫೆಸರ್‌ಗಳು ಮತ್ತು ಅಪ್ಪನ ಮಾತನ್ನು ಪಾಲಿಸಿದೆವು. ಈಗ ನಮ್ಮ ಮಕ್ಕಳು ಅದೇ ಕ್ಷೇತ್ರದಲ್ಲಿ ಮುಂದುವರೆಯುತ್ತಿದ್ದಾರೆ. ಅವರಿಂದ ಮೊದಲ ಬಾರಿ ಅನಾಟಮಿ ಕ್ಲಾಸಿನ ಡಿಸೆಕ್ಷನ್ ಹಾಲಿಗೆ ಹೋದಾಗ ಘಾಟು ವಾಸನೆ, ಅಸ್ಥಿಪಂಜರ , ಕೆಲವು ವಿದ್ಯಾರ್ಥಿಗಳು ತಲೆ ತಿರುಗಿ ಬಿದ್ದದ್ದು ಇಂಥ ನಿರೀಕ್ಷಿತ ಘಟನೆಗಳನ್ನು ಕೇಳಿದ್ದೆವು. ಅದರೊಂದಿಗೇ ‘ನಿಮ್ಮ ಕಾಲದಲ್ಲಿ ಹೇಗಿತ್ತು ಗೊತ್ತಿಲ್ಲ. ಈಗ ಒಂದು ಕೆಡಾವರ್ ಸಿಗುವುದು ಬಹಳ ಕಷ್ಟ.
ವಿದೇಶಗಳೆಲ್ಲ ಕೃತಕ ಮಾಡೆಲ್ ಅನ್ನು ಇಡುತ್ತಾರಂತೆ. ಆದರೆ ಎಷ್ಟೇ ನೈಜವೆನಿಸಿದರೂ ಅದು ಸಹಜವಲ್ಲ. ಈಗಂತೂ 30-40 ಜನ ಒಂದು ಕೆಡಾವರ್‌ನ ಸುತ್ತ ನಿಂತು ಅಭ್ಯಾಸ ಮಾಡಿ ಕಲಿಯ ಬೇಕು. ನಮ್ಮಂತ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಎಷ್ಟೋ ಜನ ಬಾಡಿ ಡೊನೇಟ್ ಮಾಡುತ್ತಾರೆ. ಆ ರೀತಿ ಡಿಸೈಡ್ ಮಾಡೋದು ಕಷ್ಟ. ಅದರ ಜತೆ ಅವರು ಸತ್ತ ಬಳಿಕ ಕುಟುಂಬ ದವರಿಗೆ ಬಹಳ ಕಷ್ಟ. ಕಳೆದುಕೊಂಡ ದುಃಖದ ಜೊತೆಗೆ ಈ ರೀತಿ ಡಿಸೈಡ್ ಮಾಡಬೇಕು. ವೆರಿ ಟಫ್’ ಎಂದು ಆಗಾಗ್ಗೆ ಹೇಳುತ್ತಿದ್ದರು. ಇದು ಯುವ ತಲೆಮಾರಿನ, ಭಾವೀ ವೈದ್ಯರ ಮನೋ ಗತ, ಮನದಾಳದ ಮಾತು.
ಅದೊಂದು ದಿನ ಕಾಲೇಜಿನಿಂದ ಬರುವಾಗಲೇ ಮಗಳ ಮುಖ ಸಣ್ಣದಾಗಿತ್ತು. ಕಾರಣ ಹಾಸ್ಪಿಟಲ್ʼ ನಲ್ಲಿ ಅಡ್ಮಿಟ್ ಆಗಿದ್ದ ಇಪ್ಪತ್ತರ ಯುವಕನ ಮರಣವಾಗಿತ್ತು. ಕೆಳ ಮಧ್ಯಮ ವರ್ಗದ ಆ ತಂದೆ- ತಾಯಿ ಮಗನ ಸಲುವಾಗಿ ಪಟ್ಟ ಕಷ್ಟ, ತಿಂಗಳ ಕಾಲ ಇವರೆಲ್ಲಾ ಸೇರಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ ಹತ್ತಿರದಿಂದ ಕಂಡ ಸಾವಿನಿಂದಾಗಿ ಮನಸ್ಸು ಮುದುಡಿದ್ದು ಸಹಜವೇ. ನಾನು ಸಮಾಧಾನ ಹೇಳಿದೆ. ಸ್ವಲ್ಪ ಸುಧಾರಿಸಿಕೊಂಡು ಮಗಳು ಹೇಳಿದಳು: ‘ಆ ಅಪ್ಪ-ಅಮ್ಮ ತುಂಬಾ ಗ್ರೇಟ್, ಯಾಕೆ ಗೊತ್ತಾ? ಮೊದಲೇ ನಿರ್ಧರಿಸಿದಂತೆ ಮಗನ ದೇಹ ದಾನ ಮಾಡಿದ್ರು. ಜತೆಗೇ ತಮ್ಮಿಬ್ಬರ ದೇಹವನ್ನೂ ದಾನ ಮಾಡುವುದಾಗಿ ವಾಗ್ದಾನ ಮಾಡಿದ್ದಾರೆ. ಕೇಳಿದ್ದಕ್ಕೆ ಮಗನಿಗಿದ್ದ ಕಾಯಿಲೆ ಕುಟುಂಬದಲ್ಲೇ ಬರುವಂಥದ್ದು (ಜೆನೆಟಿಕ್) ಅಂತ ದೊಡ್ ಡಾಕ್ಟಟ್ರು ಹೇಳಿದ್ರು. ನಾವೂ ಮಾಡೋವಷ್ಟು ಮಾಡಿದ್ವಿ, ನೀವೆಲ್ಲಾ ಪ್ರಯತ್ನ ಮಾಡಿದ್ರಿ ಉಳೀಲಿಲ್ಲ. ಅದ್ರ ಜತೆ ಮತ್ತೂ ಏನೇನೋ ಸಾಕಷ್ಟು ಕಾಯಿಲೆ-ಕಸಾಲೆ ನಮಗಿವೆ.. ಸತ್ತನಂತರ ಮಣ್ಣಾಗುವುದರ ಬದಲು ನಿಮ್ಮಂಥ ಸ್ಟುಡೆಂಟ್ಸ್ ಕಲಿಯಲು ಉಪಯೋಗ ಆಗ್ಲಿ. ದುಡ್ಡು ಕಾಸು
ಕೊಡುವ ಶಕ್ತಿ ನಮಗಿಲ್ಲ. ಹೀಗೆ ಮಾಡಿದ್ರೆ ಮುಂದೆ ಯಾವಾಗಲಾದ್ರೂ ಏನಾದ್ರೂ ಔಷಧ ಕಂಡು ಹಿಡಿಯೋಕೆ ಸಹಾಯ ಆಗ್ಲಿ. ನಮ್ಮ ಸಂಬಂಧಿಕರು ಕೆಲವರು ಹೇಳುತ್ತಾರೆ; ಹೀಗೆಲ್ಲ ದೇಹ ದಾನ ಮಾಡಿದರೆ ಮುಕ್ತಿ ಸಿಗದೆ ಭೂತ, ಪ್ರೇತ, ಪಿಶಾಚಿಗಳಾಗಿ ತಿರುಗುತ್ತವಂತೆ. ಅದಕ್ಕೆ ನಾವು ಹಾಗಾದರೂ ಪರವಾಗಿಲ್ಲ; ಈ ಬಾಡಿ ಸತ್ ಮೇಲಾದ್ರೂ ಯೂಸ್ ಆಗ್ಲಿ ಅಂದ್ರು. ನಮಗೆಲ್ಲಾ ಮನಸ್ಸಿಗೆ ಒಂಥರಾ ಆಯ್ತು.
ನಮ್ಮ ಪ್ರೊಫೆಸರ್, ಈಗ ಇಲ್ಲಿರುವುದು ಒಂದು ಕಾಲದಲ್ಲಿ ನಮ್ಮ ಹಾಗೆಯೇ ಬದುಕಿ ಬಾಳಿದ್ದ ಜೀವ.. ಒಂದು ಕೆಡಾವರ್ ಹಿಂದೆ ಅದೆಷ್ಟು ಜನರ ತ್ಯಾಗ, ಯೋಚನೆ ಇದೆ ಅನ್ನೋದನ್ನು ನೀವು ನೆನಪಿಡಬೇಕು. ಅವರು ಮಾಡಿದ ದಾನ ವೇಸ್ಟ್ ಆಗಬಾರದು. ಸೋ, ಟ್ರೀಟ್ ಇಟ್ ವಿತ್ ಅಟ್ ಮೋಸ್ಟ್ ರೆಸ್ಪೆಕ್ಟ್ ಎಂದು ವಾನಿಂಗ್ ಕೊಟ್ಟಿದ್ದಾರೆ’ ಎಂದು ವಿವರಿಸಿದ್ದಳು. ಬಹುದಿನಗಳವರೆಗೆ ಆ ಘಟನೆ ನನ್ನನ್ನೂ ಕಾಡಿತ್ತು.
ನಿಜ, ದೇಹದಾನ ಸುಲಭದ ಕೆಲಸವಲ್ಲ. ಮಾಡುವ ವ್ಯಕ್ತಿಯ ಜತೆಗೆ ಕುಟುಂಬದವರಿಗೂ ಅತ್ಯಂತ ಕಠಿಣ ನಿರ್ಧಾರವದು. ಹೀಗಿರುವಾಗ ಈ ರೀತಿಯ ಮಾತು, ಅದರ ಪ್ರಚಾರ, ಮತ್ತು ನೀಡುವ ಪ್ರೋತ್ಸಾಹ ಎಲ್ಲವನ್ನೂ ಖಂಡಿಸುವುದು ಮತ್ತು ದೇಹದಾನವನ್ನು ಗೌರವಿಸುವುದು ನಮ್ಮೆಲ್ಲರ ಹೊಣೆ ಮತ್ತು ಕರ್ತವ್ಯ.