Dr Narendra K Shetty Column: ಕ್ಯಾನ್ಸರ್ ಎದುರು ಜೀವನಶೈಲಿಯ ತತ್ವಶಕ್ತಿ
ಆಧುನಿಕ ವೈದ್ಯಕೀಯ ಔಷಧಿಗಳನ್ನು ಬಳಸಿಕೊಳ್ಳದೇ ನೈಸರ್ಗಿಕವಾಗಿಯೇ ತಮ್ಮ ದೇಹ ಚೈತನ್ಯ ವನ್ನು ಮರಳಿ ಪಡೆಯುವ ಉದ್ದೇಶದಿಂದ ಇಂದು ವಿಶ್ವಾದ್ಯಂತ ಲಕ್ಷಾಂತರ ಮಂದಿ ಪ್ರಕೃತಿ ಚಿಕಿತ್ಸೆಯತ್ತ ಮರಳುತ್ತಿದ್ದಾರೆ. ಆರೋಗ್ಯವನ್ನು ಕೇವಲ ರೋಗದ ಅಭಾವವೆಂದು ವ್ಯಾಖ್ಯಾನಿಸು ವುದು ಮಾನವ ಚಿಂತನೆಯ ಒಂದು ಸೀಮಿತ ರೂಪ.
-
ಆರೋಗ್ಯ ಭಾಗ್ಯ
ಡಾ.ನರೇದ್ರ ಕೆ.ಶೆಟ್ಟಿ
ದೇಹ ಶುದ್ಧೀಕರಣವು ನೈಸರ್ಗಿಕ ಚಿಕಿತ್ಸೆಯ ಪ್ರಮುಖ ಆಯಾಮ. ಆಧುನಿಕ ಜೀವನ ಶೈಲಿಯಲ್ಲಿ ದೇಹವು ನಿರಂತರವಾಗಿ ರಾಸಾಯನಿಕಗಳು, ಪರಿಸರ ಮಾಲಿನ್ಯ ಮತ್ತು ಆಹಾರ ವಿಷಾಂಶಗಳಿಗೆ ಒಳಗಾಗುತ್ತದೆ. ಉಪವಾಸ, ಜಲಚಿಕಿತ್ಸೆ, ಮಣ್ಣು ಚಿಕಿತ್ಸೆ ಹೀಗೆ ಹಲವು ನೈಸರ್ಗಿಕ ಚಿಕಿತ್ಸಾ ವಿಧಾನಗಳು ದೇಹದೊಳಗಿನ ವಿಷಾಂಶಗಳನ್ನು ಹೊರಹಾಕಿ ಕೋಶಗಳ ಆರೋಗ್ಯಕರ ವಾತಾವರಣವನ್ನು ಪುನಃ ನಿರ್ಮಿಸುತ್ತವೆ. ವಿಷಭರಿತ ಒಳಪರಿಸರದಲ್ಲಿ ಆರೋಗ್ಯಕರ ಕೋಶವೃದ್ಧಿ ಸಾಧ್ಯವಿಲ್ಲ ಎಂಬುದು ನೈಸರ್ಗಿಕ ಚಿಕಿತ್ಸೆಯ ನಿಲುವು.
ಆಧುನಿಕ ಜೀವನ ಪದ್ಧತಿಯಿಂದಾಗಿ ನಮ್ಮ ದೇಹದಲ್ಲಿರುವ ರೋಗ ನಿರೋಧಕ ಶಕ್ತಿ ಕಡಿಮೆ ಯಾಗುತ್ತಿದೆ. ಆಹಾರಕ್ರಮ, ದೈನಂದಿನ ಚಟುವಟಿಕೆಗಳಲ್ಲಿ ಬದಲಾವಣೆ, ವೈಯಕ್ತಿಕ ಮತ್ತು ವೃತ್ತಿ ಜೀವನದಲ್ಲಿ ಎದುರಿಸುತ್ತಿರುವ ಅತಿಯಾದ ಒತ್ತಡಗಳ ಕಾರಣ ಆರೋಗ್ಯ ಸಮಸ್ಯೆಗಳು ಎಲ್ಲರಲ್ಲಿಯೂ ಅತಿ ಸಾಮಾನ್ಯ. ಆರೋಗ್ಯ ಹಾಳಾಗುತ್ತಿದೆ ಎಂದು ಅರಿವಿಗೆ ಬರುತ್ತಿದೆ ಯಾದರೂ ಬದುಕಿನ ಬಂಡಿ ಸಾಗಿಸುವ ಆವೇಗದಲ್ಲಿ ಸ್ವಯಂ ಕಾಳಜಿ ಮಾಡಿಕೊಳ್ಳ ಲಾಗುತ್ತಿಲ್ಲ.
ಹೀಗೇ ಮುಂದುವರಿದು ರೋಗಗಳು ಉಲ್ಬಣವಾದಾಗ ಹೆಚ್ಚಿನ ಚಿಕಿತ್ಸೆ ಪಡೆದುಕೊಳ್ಳುವುದು ಅನಿವಾರ್ಯವಾಗುತ್ತದೆ. ಹಿಂದೆ ಮಾನವನ ಬದುಕು ಪ್ರಕೃತಿಯೊಂದಿಗೆ ಅಂತರ್ಗತವಾಗಿತ್ತು. ತನ್ನೆಲ್ಲ ಪ್ರಶ್ನೆಗಳಿಗೆ, ಸಮಸ್ಯೆಗಳಿಗೆ ಮಾನವ ಪ್ರಕೃತಿಯಲ್ಲಿ ಉತ್ತರ ಹುಡುಕುತ್ತಿದ್ದ.
ಆಧುನಿಕತೆಗೆ ತೆರೆದುಕೊಂಡಂತೆ ಜೀವನಶೈಲಿ ನಿಸರ್ಗದ ಸಹಜತೆಯಿಂದ ವಿಮುಖವಾಗ ತೊಡಗಿತು. ಅದರ ಪರಿಣಾಮ ನಮ್ಮ ಆರೋಗ್ಯದ ಮೇಲೆ ಕಾಣಿಸಿಕೊಳ್ಳಲು ಆರಂಭಿಸಿದೆ. ಈ ಬದಲಾವಣೆಗಳನ್ನು ಮನಗಂಡು ಪ್ರಕೃತಿಯೊಡಗಿನ ಅನುಸಂಧಾನದಿಂದ ಪುನಶ್ವೇತನ ಗೊಳ್ಳಲು ಬಯಸುವವರಿಗೆ ಸಹಾಯವಾಗುವುದು ಪರಂಪರೆಯಿಂದ ಬೆಳೆದು ಬಂದಿರುವ ಪ್ರಕೃತಿ ಚಿಕಿತ್ಸಾ ಪದ್ಧತಿಗಳು.
ಆಧುನಿಕ ವೈದ್ಯಕೀಯ ಔಷಧಿಗಳನ್ನು ಬಳಸಿಕೊಳ್ಳದೇ ನೈಸರ್ಗಿಕವಾಗಿಯೇ ತಮ್ಮ ದೇಹ ಚೈತನ್ಯವನ್ನು ಮರಳಿ ಪಡೆಯುವ ಉದ್ದೇಶದಿಂದ ಇಂದು ವಿಶ್ವಾದ್ಯಂತ ಲಕ್ಷಾಂತರ ಮಂದಿ ಪ್ರಕೃತಿ ಚಿಕಿತ್ಸೆಯತ್ತ ಮರಳುತ್ತಿದ್ದಾರೆ. ಆರೋಗ್ಯವನ್ನು ಕೇವಲ ರೋಗದ ಅಭಾವವೆಂದು ವ್ಯಾಖ್ಯಾನಿಸುವುದು ಮಾನವ ಚಿಂತನೆಯ ಒಂದು ಸೀಮಿತ ರೂಪ.
ನಿಜವಾದ ಆರೋಗ್ಯವು ದೇಹ, ಮನಸ್ಸು ಮತ್ತು ಜೀವನಶೈಲಿಯ ನಡುವಿನ ಸೂಕ್ಷ್ಮ ಸಮತೋಲನದ ಫಲವಾಗಿದೆ. ಈ ಸಮತೋಲನದಲ್ಲಿ ದೀರ್ಘಕಾಲ ಉಂಟಾಗುವ ವ್ಯತ್ಯಯ ಗಳು ಗಂಭೀರ ದೀರ್ಘಕಾಲೀನ ರೋಗಗಳ ರೂಪದಲ್ಲಿ ವ್ಯಕ್ತವಾಗುತ್ತವೆ.
ಆಧುನಿಕ ಯುಗದಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್‌ನಂಥ ದೀರ್ಘಕಾಲೀನ ರೋಗಗಳು, ನಮ್ಮ ಜೀವನಶೈಲಿಯ ಆಯ್ಕೆಗಳ ಪ್ರತಿಬಿಂಬಗಳಾಗಿವೆ ಎಂಬ ಸತ್ಯವನ್ನು ಈಗ ವೈದ್ಯಕೀಯ ವಿಜ್ಞಾನವೂ ಕ್ರಮೇಣ ಒಪ್ಪಿಕೊಳ್ಳುತ್ತಿದೆ. ಪ್ರಕೃತಿ ಚಿಕಿತ್ಸೆ ಈ ಜ್ಞಾನಾಧಾರಿತ ದೃಷ್ಟಿಕೋನ ವನ್ನು ಪ್ರತಿನಿಧಿಸುವ ಸಮಗ್ರ ಚಿಕಿತ್ಸಾ ಪದ್ಧತಿ.
ಇದರ ಮೂಲತತ್ವವು ಸರಳವಾಗಿದ್ದರೂ ಆಳವಾಗಿದೆ- ಪ್ರಕೃತಿಯೇ ಪರಮ ಚಿಕಿತ್ಸಕ; ವೈದ್ಯ ಮತ್ತು ಚಿಕಿತ್ಸಾ ವಿಧಾನಗಳು ಸಹಾಯಕ ಮಾತ್ರ. ಮಾನವ ದೇಹವು ಸಹಜವಾಗಿ ಗುಣಮುಖ ವಾಗುವ ಶಕ್ತಿಯನ್ನು ಹೊಂದಿದೆ. ಆದರೆ ಅಸ್ವಾಭಾವಿಕ ಆಹಾರ ಪದ್ಧತಿ, ಅಸಮತೋಲನ ಯುಕ್ತ ಜೀವನಶೈಲಿ, ನಿರಂತರ ಮಾನಸಿಕ ಒತ್ತಡ ಮತ್ತು ಚಲನೆಯ ಕೊರತೆ ಈ ಸಹಜ ಶಕ್ತಿ ಯನ್ನು ನಿಧಾನವಾಗಿ ಕುಗ್ಗಿಸುತ್ತವೆ.
ಇಂಥ ಪರಿಸ್ಥಿತಿಯಲ್ಲಿ ದೇಹದ ಕೋಶೀಯ ನಿಯಂತ್ರಣ ವ್ಯವಸ್ಥೆಗಳು ದುರ್ಬಲಗೊಂಡು, ಅಸಾಮಾನ್ಯ ಕೋಶವೃದ್ಧಿಗೆ ಅವಕಾಶ ಸೃಷ್ಟಿಯಾಗುತ್ತದೆ. ಆಹಾರವು ಪ್ರಕೃತಿ ಚಿಕಿತ್ಸೆಯಲ್ಲಿ ಕೇವಲ ಪೋಷಕಾಂಶಗಳ ಸಂಗ್ರಹವಲ್ಲ, ಅದು ಕೋಶಗಳೊಂದಿಗೆ ನಡೆಯುವ ನಿರಂತರ ಸಂವಾದ. ಅತಿಯಾಗಿ ಸಂಸ್ಕರಿಸಲಾದ ಆಹಾರಗಳು, ಕೃತಕ ಸಂರಕ್ಷಕಗಳು, ಅತಿಸಕ್ಕರೆ ಮತ್ತು ಅತಿಕೊಬ್ಬಿನ ಸೇವನೆಯು ದೇಹದ ಒಳಪರಿಸರವನ್ನು ಉರಿಯೂತಮಯವಾಗಿಸುತ್ತವೆ.
ಈ ದೀರ್ಘಕಾಲೀನ ಉರಿಯೂತ ಸ್ಥಿತಿಯು ಕ್ಯಾನ್ಸರ್ ನಂಥ ರೋಗಗಳಿಗೆ ಅನುಕೂಲಕರ ನೆಲೆಯಾಗುತ್ತದೆ. ಇದಕ್ಕೆ ವಿರುದ್ಧವಾಗಿ, ತಾಜಾ ಹಣ್ಣುಗಳು, ಸೊಪ್ಪು-ತರಕಾರಿಗಳು, ಸಂಪೂರ್ಣ ಧಾನ್ಯಗಳು ಮತ್ತು ನೈಸರ್ಗಿಕ ಆಂಟಿ-ಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಆಹಾರಗಳು ಕೋಶಗಳ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತವೆ.
ಇದನ್ನೂ ಓದಿ: Lung Cancer: ಚಳಿಗಾಲದ ದಟ್ಟ ಹೊಗೆ ಶ್ವಾಸಕೋಶದ ಕ್ಯಾನ್ಸರ್ ಅಪಾಯವನ್ನು ಹೇಗೆ ಹೆಚ್ಚಿಸುತ್ತದೆ?
ಆಹಾರದ ಗುಣಮಟ್ಟವು ದೇಹದ ಭವಿಷ್ಯವನ್ನು ನಿರ್ಧರಿಸುತ್ತದೆ ಎಂಬುದು ನೈಸರ್ಗಿಕ ಚಿಕಿತ್ಸೆಯ ಮೂಲಸಿದ್ಧಾಂತ. ದೇಹ ಶುದ್ಧೀಕರಣವು ನೈಸರ್ಗಿಕ ಚಿಕಿತ್ಸೆಯ ಪ್ರಮುಖ ಆಯಾಮ. ಆಧುನಿಕ ಜೀವನಶೈಲಿಯಲ್ಲಿ ದೇಹವು ನಿರಂತರವಾಗಿ ರಾಸಾಯನಿಕಗಳು, ಪರಿಸರ ಮಾಲಿನ್ಯ ಮತ್ತು ಆಹಾರ ವಿಷಾಂಶಗಳಿಗೆ ಒಳಗಾಗುತ್ತದೆ.
ಉಪವಾಸ, ಜಲಚಿಕಿತ್ಸೆ, ಮಣ್ಣು ಚಿಕಿತ್ಸೆ ಹೀಗೆ ಹಲವು ನೈಸರ್ಗಿಕ ಚಿಕಿತ್ಸಾ ವಿಧಾನಗಳು ದೇಹದೊಳಗಿನ ವಿಷಾಂಶಗಳನ್ನು ಹೊರ ಹಾಕಿ ಕೋಶಗಳ ಆರೋಗ್ಯಕರ ವಾತಾವರಣ ವನ್ನು ಪುನಃ ನಿರ್ಮಿಸುತ್ತವೆ. ವಿಷಭರಿತ ಒಳಪರಿಸರದಲ್ಲಿ ಆರೋಗ್ಯಕರ ಕೋಶವೃದ್ಧಿ ಸಾಧ್ಯವಿಲ್ಲ ಎಂಬುದು ನೈಸರ್ಗಿಕ ಚಿಕಿತ್ಸೆಯ ನಿಲುವು.
ಜೀವನಶೈಲಿಯ ಮತ್ತೊಂದು ಪ್ರಮುಖ ಅಂಶವೆಂದರೆ ದೈಹಿಕ ಚಲನೆ ಮತ್ತು ಯೋಗ. ದೀರ್ಘ ಕಾಲ ಕುಳಿತಿರುವ ಜೀವನಶೈಲಿ, ನಿದ್ರಾಹೀನತೆ ಮತ್ತು ಅನಿಯಮಿತ ದಿನಚರಿ ದೇಹದ ಚಯಾಪಚಯ ಕ್ರಿಯೆಗಳನ್ನು ಅಸ್ತವ್ಯಸ್ತಗೊಳಿಸುತ್ತವೆ. ಯೋಗಾಸನಗಳು ದೇಹದ ಅಂಗಾಂಗ ಗಳಿಗೆ ಚೈತನ್ಯ ನೀಡುತ್ತವೆ, ಹಾರ್ಮೋನಲ್ ಸಮತೋಲನವನ್ನು ಸುಧಾರಿಸುತ್ತವೆ ಮತ್ತು ರಕ್ತಸಂಚಾರವನ್ನು ಉತ್ತೇಜಿಸುತ್ತವೆ.
ಪ್ರಾಣಾಯಾಮವು ಆಮ್ಲಜನಕದ ಸರಿಯಾದ ಪೂರೈಕೆಯ ಮೂಲಕ ಕೋಶಗಳ ಶುದ್ಧತೆ ಯನ್ನು ಕಾಪಾಡುತ್ತದೆ. ಇದು ಕ್ಯಾನ್ಸರ್ ತಡೆಗಟ್ಟುವಿಕೆಯಲ್ಲಿ ಅತ್ಯಂತ ಸೂಕ್ಷ್ಮವಾದ ಆದರೆ ಶಕ್ತಿಯುತವಾದ ಅಂಶವಾಗಿದೆ.
ಪ್ರಾಚೀನ ಕಾಲದಿಂದಲೂ ಯೋಗ ಮತ್ತು ಧ್ಯಾನ, ಭಾರತದಲ್ಲಿ ಮಹತ್ವದ ಸ್ಥಾನವನ್ನು ಹೊಂದಿವೆ. ದೇಹ ಮತ್ತು ಮನಸ್ಸಿನ ಪ್ರಫುಲ್ಲತೆಗೆ ಕಾರಣವಾಗಿರುವ ಯೋಗ ಹಾಗೂ ಧ್ಯಾನ, ದೈಹಿಕ ಸುಸ್ಥಿತಿಗೆ ಮಹತ್ವದ ಕೊಡುಗೆಯನ್ನು ನೀಡಿವೆ. ಪ್ರಸ್ತುತ ಪ್ರಕೃತಿಯ ಸಹಜ ಚಿಕಿತ್ಸೆ ಯಾದ ಯೋಗ ಹಾಗೂ ಧ್ಯಾನಕ್ಕೆ ಹೆಚ್ಚಿನ ಪ್ರಾಮುಖ್ಯವನ್ನು ನಾವು ನೀಡಬೇಕಿದೆ.
ಪ್ರಾಕೃತಿಕವಾಗಿ, ಸುಲಭವಾಗಿ, ಶ್ರದ್ಧೆಯಿಂದ ಜೀವನಕ್ರಮದಲ್ಲಿ ಯೋಗಾಭ್ಯಾಸವನ್ನು ಅಳವಡಿಸಿಕೊಳ್ಳಬೇಕಿದೆ. ಕ್ಷೇಮವಾದ ಜೀವನಕ್ಕೆ ದೃಢತೆ, ಶ್ರದ್ಧೆ, ಆರೋಗ್ಯ ಇವು ಮುಖ್ಯ ವಾಗಿವೆ. ಮನಸ್ಸಿನ ಸ್ಥಿತಿಯೂ ಕ್ಯಾನ್ಸರ್‌ನೊಂದಿಗೆ ನೇರವಾಗಿ ಸಂಬಂಧ ಹೊಂದಿದೆ. ದೀರ್ಘ ಕಾಲದ ಒತ್ತಡ, ಭಯ, ದಮನಿತ ಭಾವನೆಗಳು ಮತ್ತು ಆಂತರಿಕ ಅಶಾಂತಿ ಇವು ದೇಹದ ರೋಗನಿರೋಧಕ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತವೆ.
ಧ್ಯಾನ, ಯೋಗನಿದ್ರೆ ಮತ್ತು ಪ್ರಕೃತಿಯ ಸಾನ್ನಿಧ್ಯ ಮನಸ್ಸನ್ನು ಶಾಂತಗೊಳಿಸಿ, ದೇಹದ ಸಹಜ ರಕ್ಷಣಾ ಶಕ್ತಿಯನ್ನು ಜಾಗೃತಗೊಳಿಸುತ್ತವೆ. ಪ್ರಕೃತಿ ಚಿಕಿತ್ಸೆಯ ದೃಷ್ಟಿಯಲ್ಲಿ ದೇಹ ಮತ್ತು ಮನಸ್ಸು ವಿಭಿನ್ನವಲ್ಲ, ಅವು ಒಂದೇ ಜೀವಶಕ್ತಿಯ ವಿಭಿನ್ನ ಅಭಿವ್ಯಕ್ತಿಗಳಾಗಿವೆ.
ಪ್ರಕೃತಿ ಚಿಕಿತ್ಸೆಯು ಕ್ಯಾನ್ಸರ್‌ಗೆ ಜೀವನಶೈಲಿ ಮಟ್ಟದಲ್ಲಿ ಅತ್ಯಂತ ಪರಿಣಾಮಕಾರಿ ತಡೆ ಗಟ್ಟುವ ಹಾಗೂ ಪೂರಕ ಚಿಕಿತ್ಸೆಯಾಗಿದೆ. ಇದು ರೋಗದ ವಿರುದ್ಧದ ಹೋರಾಟಕ್ಕಿಂತ, ಆರೋಗ್ಯದ ಪರವಾಗಿ ಬದುಕುವ ಬುದ್ಧಿವಂತಿಕೆಯನ್ನು ಬೆಳೆಸುತ್ತದೆ. ಪ್ರಕೃತಿಯೊಂದಿಗೆ ಹೊಂದಾಣಿಕೆಯಿಂದ ಬದುಕುವಾಗ, ದೇಹ ತನ್ನ ಸಹಜ ಬುದ್ಧಿಮತ್ತೆಯನ್ನು ಮರು ಪಡೆಯು ತ್ತದೆ.
ಆರೋಗ್ಯವು ಹೊರಗಿನಿಂದ ನೀಡಲ್ಪಡುವ ಸೇವೆಯಲ್ಲ, ಅದು ದಿನನಿತ್ಯದ ಆಯ್ಕೆಗಳಿಂದ ನಿರ್ಮಾಣವಾಗುವ ಸ್ಥಿತಿ. ನೈಸರ್ಗಿಕ ಚಿಕಿತ್ಸೆ, ಯೋಗ ಮತ್ತು ಶುದ್ಧ ಜೀವನಶೈಲಿಯ ಸಂಯೋ ಜಿತ ಜ್ಞಾನವು ಮಾನವನನ್ನು ತನ್ನ ದೇಹದೊಂದಿಗೆ, ತನ್ನ ಮನಸ್ಸಿನೊಂದಿಗೆ ಮತ್ತು ಪ್ರಕೃತಿ ಯೊಂದಿಗೆ ಪುನಃ ಸಂವಾದಕ್ಕೆ ತರುತ್ತದೆ. ಈ ಸಂವಾದ ಪುನಃ ಸ್ಥಾಪನೆಯಾದಾಗ, ಕ್ಯಾನ್ಸರ್ ಸೇರಿದಂತೆ ಅನೇಕ ದೀರ್ಘಕಾಲೀನ ರೋಗಗಳು ತಮ್ಮ ಹಿಡಿತವನ್ನು ನಿಧಾನವಾಗಿ ಕಳೆದು ಕೊಳ್ಳುತ್ತವೆ.
ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕೇವಲ ಸಾಂದರ್ಭಿಕ ಅಗತ್ಯವಾಗಿರದೇ, ಅನುದಿನದ ಅಭ್ಯಾಸವಾಗಿ ಬದಲಾದರೆ ಉತ್ತಮ ಮತ್ತು ಸದೃಢವಾದ ಆರೋಗ್ಯವನ್ನು ಕಾಯ್ದುಕೊಳ್ಳ ಬಹುದು. ಇಂಥ ಆರೋಗ್ಯ ಪೂರಕ ಅಭ್ಯಾಸಗಳು ಪ್ರಕೃತಿಯಿಂದ ಪ್ರೇರೇಪಿತವಾದರೆ ಸುದೀರ್ಘಕಾಲದ ಆರೋಗ್ಯಪೂರ್ಣ ಜೀವನ ನಮ್ಮದಾಗುತ್ತದೆ.
(ಲೇಖಕರು, ಮುಖ್ಯ ಕ್ಷೇಮಪಾಲನಾ ಅಧಿಕಾರಿ, ಕ್ಷೇಮವನ)