Keshav Prasad B Column: ಭಾರತದ ರಕ್ಷಣೆಗೆ ದೇವರು ಕಳಿಸಿದ ತೆರಿಗೆ ಜಿಎಸ್‌ಟಿ !
ಈಗ ಬಹುಶಃ ಯಾರೊಬ್ಬರೂ ಜಿಎಸ್‌ಟಿಯನ್ನು ‘ಗಬ್ಬರ್ ಸಿಂಗ್ ಟ್ಯಾಕ್ಸ್’ ಎಂದು ಕರೆಯುವ ಧೈರ್ಯ ಮಾಡಲಾರರು. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಂತೂ ಜಿಎಸ್ ಟಿಯನ್ನು “ಇದು ದೇವರು ಕಳಿಸಿದ ತೆರಿಗೆ ( God-SentTax). ರಫೆಲ್ ಜೆಟ್ ಯುದ್ಧ ವಿಮಾನಗಳು ಮತ್ತು ಎಸ್-400 ಕ್ಷಿಪಣಿ ವ್ಯವಸ್ಥೆಗಳನ್ನು ಸೇನೆಗೆ ಒದಗಿಸಲು ಸಾಧ್ಯವಾಗಿದ್ದೇ ಜಿಎಸ್‌ಟಿಯ ಸಂಪನ್ಮೂಲದಿಂದ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ


ಮನಿ ಮೈಂಡೆಡ್
ಈಗ ಬಹುಶಃ ಯಾರೊಬ್ಬರೂ ಜಿಎಸ್‌ಟಿಯನ್ನು ‘ಗಬ್ಬರ್ ಸಿಂಗ್ ಟ್ಯಾಕ್ಸ್’ ಎಂದು ಕರೆಯುವ ಧೈರ್ಯ ಮಾಡಲಾರರು. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಂತೂ ಜಿಎಸ್ ಟಿಯನ್ನು “ಇದು ದೇವರು ಕಳಿಸಿದ ತೆರಿಗೆ ( God-SentTax). ರಫೆಲ್ ಜೆಟ್ ಯುದ್ಧ ವಿಮಾನಗಳು ಮತ್ತು ಎಸ್-400 ಕ್ಷಿಪಣಿ ವ್ಯವಸ್ಥೆಗಳನ್ನು ಸೇನೆಗೆ ಒದಗಿಸಲು ಸಾಧ್ಯವಾಗಿದ್ದೇ ಜಿಎಸ್‌ಟಿಯ ಸಂಪನ್ಮೂಲದಿಂದ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜಿಎಸ್‌ಟಿಯಿಂದ ನೇರವಾಗಿ ಮಿಲಿಟರಿ ಶಸ್ತ್ರಾಸ್ತ್ರಗಳ ಖರೀದಿಗೆ ಫಂಡ್ ಕೊಡುವುದಿಲ್ಲ. ಮಿಲಿಟರಿ ಶಸ್ತ್ರಾಸ್ತ್ರಗಳ ಖರೀದಿಗೆ ಅವಶ್ಯವಿರುವ ಹಣವನ್ನು ರಕ್ಷಣಾ ಬಜೆಟ್ ಮೂಲಕ ನೀಡಲಾಗುತ್ತದೆ. ಜತೆಗೆ ರಕ್ಷಣಾ ಬಜೆಟ್ ಕೇವಲ ಜಿಎಸ್‌ಟಿ ಆದಾಯವೊಂದನ್ನೇ ಅವಲಂಬಿಸಿಲ್ಲ. ಆದರೆ ಸರಕಾರದ ಒಟ್ಟಾರೆ ಬಜೆಟ್‌ಗೆ ನಿರ್ಣಾಯಕ ಕೊಡುಗೆಯನ್ನು ಜಿಎಸ್‌ಟಿ ಸಲ್ಲಿಸಿದೆ. ಎರಡನೆಯದಾಗಿ ಜಿಎಸ್‌ಟಿ ಯಲ್ಲಿ ಮಿಲಿಟರಿ ಉಪಕರಣಗಳ ಆಮದು ಮೇಲೆ ನಿರ್ದಿಷ್ಟ ವಿನಾಯಿತಿಯನ್ನು ನೀಡಲಾಗಿದೆ.
2022ರಲ್ಲಿ ಜಿಎಸ್‌ಟಿ ಜಾರಿಯಾಗಿ 5 ವರ್ಷಗಳು ಭರ್ತಿಯಾದಾಗ, ರಾಹುಲ್ ಗಾಂಧಿಯವರು ಅದನ್ನು ‘ಗಬ್ಬರ್ ಸಿಂಗ್ ಟ್ಯಾಕ್ಸ್’ ಎಂದು ಟೀಕಿಸಿದ್ದರು. “1826 ದಿನಗಳಲ್ಲಿ 1000ಕ್ಕೂ ಹೆಚ್ಚು ಬದಲಾವಣೆಗಳು, 6 ತೆರಿಗೆಯ ಸ್ಲ್ಯಾಬ್‌ಗಳು. ಸಣ್ಣ ಉದ್ದಿಮೆದಾರರಿಗೆ ದುಃಸ್ವಪ್ನವಾಗಿ ಕಾಡುತ್ತಿವೆ" ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿ, ‘ಜೆನ್ಯೂನ್ ಸಿಂಪಲ್ ಟ್ಯಾಕ್ಸ್’ ಎಂದು ತಿರುಗೇಟು ಕೊಟ್ಟಿತ್ತು.

ಆದರೆ ಪಹಲ್ಗಾಮ್‌ನಲ್ಲಿ ಪಾಕಿಸ್ತಾನದ ಪ್ರಾಯೋಜಕತ್ವದಲ್ಲಿ ಭಯೋತ್ಪಾದಕರು ದಾಳಿ ನಡೆಸಿ 26 ಮಂದಿ ಹಿಂದೂಗಳ ನರಮೇಧ ಮಾಡಿದ ಬಳಿಕ ಚಿತ್ರಣ ಬದಲಾಗಿದೆ. ಇದೇ ಮೊದಲ ಬಾರಿಗೆ ಜಿಎಸ್‌ಟಿಯ ಪ್ರಾಮುಖ್ಯವನ್ನು ಜನ ಅರ್ಥ ಮಾಡಿಕೊಳ್ಳುತ್ತಿದ್ದಾರೆ. ದೇಶದ ಮಿಲಿಟರಿಯ ಶಸ್ತ್ರಾಸ್ತ್ರಗಳು, ಯುದ್ಧ ವಿಮಾನಗಳು, ಡ್ರೋನ್‌ಗಳು, ಕ್ಷಿಪಣಿಗಳ ಮಹತ್ವವನ್ನು ‘ಆಪರೇಷನ್ ಸಿಂದೂರ್’ ಪ್ರತಿಯೊಬ್ಬರಿಗೂ ಮನವರಿಕೆ ಮಾಡಿಕೊಟ್ಟಿವೆ.
ಪಾಕಿಸ್ತಾನದ ಕಡೆಯಿಂದ ರಾತ್ರಿ ನೂರಾರು ಡ್ರೋನ್‌ಗಳ ಸುರಿಮಳೆಯಾಗುತ್ತಿದ್ದರೆ, ಇತ್ತ ಭಾರತದ ಕ್ಷಿಪಣಿಗಳು ಮಿಂಚಿನಂತೆ ಕಾರ್ಯನಿರ್ವಹಿಸಿ ಆಕಾಶಮಾರ್ಗದ ಆ ಡ್ರೋನ್, ಕ್ಷಿಪಣಿಗಳನ್ನು ಚಿಂದಿ ಉಡಾಯಿಸುತ್ತಿತ್ತು. ಜತೆಗೆ ಪಾಕಿಸ್ತಾನದ ನೆಲದಲ್ಲಿದ್ದ 9 ಭಯೋತ್ಪಾದಕ ಶಿಬಿರಗಳನ್ನು, ವೈಮಾನಿಕ ನೆಲೆಗಳನ್ನು ಭಾರತದ ಕ್ಷಿಪಣಿಗಳು ಮತ್ತು ಡ್ರೋನ್‌ಗಳು ಧ್ವಂಸಗೊಳಿಸಿದ ದೃಶ್ಯವನ್ನು ಕಂಡು ಜಗತ್ತೇ ಚಕಿತವಾಗಿದೆ. ಪಾಕಿಸ್ತಾನವಂತೂ ವಿಲವಿಲ ಒದ್ದಾಡಿದೆ.
ಪ್ರಧಾನಿ ಮೋದಿಯವರು ಪಾಕಿಸ್ತಾನಕ್ಕೆ ರವಾನಿಸಿದ ಕಠಿಣ ಸಂದೇಶದಲ್ಲಿ “ಪಾಕಿಸ್ತಾನ ನಮ್ಮನ್ನು ಹೊಡೆಯಲು ಯತ್ನಿಸಿತು, ನಾವು ಅವರ ಹೃದಯಕ್ಕೇ ಹೊಡೆದಿದ್ದೇವೆ" ಎಂದು ಹೇಳಿದ್ದಾರೆ. ಈ ಮೊದಲು ಹಮಾಸ್ ಉಗ್ರರ ದಾಳಿಯನ್ನು ತಡೆಯಲು ಇಸ್ರೇಲ್ ಅಳವಡಿಸಿಕೊಂಡಿದ್ದ ‘ಐರೊನ್ ಡೋಮ್’ ವ್ಯವಸ್ಥೆಯ ದೃಶ್ಯ ವೈಭವವನ್ನು ಕಂಡಿದ್ದ ಭಾರತೀಯರು, ನಮಗೂ ಇಂಥದ್ದೊಂದು ಬೇಕು ಎಂದು ಭಾವಿಸಿದ್ದರು. ಆದರೆ ನಮ್ಮಲ್ಲೂ ಬಲಾಢ್ಯ ‘ಎಸ್-400’ ಮತ್ತು ‘ಆಕಾಶ್’ ಕ್ಷಿಪಣಿ ವ್ಯವಸ್ಥೆಗಳು ಕಟ್ಟಿಕೊಟ್ಟಿರುವ ರಕ್ಷಣಾ ವ್ಯವಸ್ಥೆಯ ಅದ್ಭುತ ಕಾರ್ಯವೈಖರಿಯನ್ನು ಕಂಡು ರೋಮಾಂಚನಗೊಂಡಿದ್ದಾರೆ.
ಇದನ್ನೂ ಓದಿ: Keshav Prasad B Column: ಸ್ವಂತ ಮಕ್ಕಳಿಗೆ ಉತ್ತರಾಧಿಕಾರ ಏಕೆ ನೀಡಲಿಲ್ಲ ?!
ಹೀಗಾಗಿಯೇ ಭಾರತೀಯರು ಜಿಎಸ್‌ಟಿ ಕಟ್ಟಿದ್ದು ಸಾರ್ಥಕವಾಯಿತು ಎಂದು ಹೆಮ್ಮೆಯಿಂದ, ಗರ್ವ ದಿಂದ ಹೇಳುತ್ತಿದ್ದಾರೆ. ಕೋಟಿ ಕೋಟಿ ಜನರ ಭಾವನೆಗಳನ್ನು ಅಸ್ಸಾಂ ಮುಖ್ಯಮಂತ್ರಿ ಗುರುತಿಸಿ ಹೇಳಿದ್ದಾರೆ. ಜತೆಗೆ ತೆರಿಗೆದಾರರನ್ನು ದೇವರು ಎಂದು ಕರೆದು ಗೌರವಿಸಿದ್ದಾರೆ. ಸ್ವತಂತ್ರ ಭಾರತದ ಅತಿ ದೊಡ್ಡ ಪರೋಕ್ಷ ಸುಧಾರಣೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಜಿಎಸ್‌ಟಿ ಬಗ್ಗೆ ಪರ-ವಿರೋಧ ಚರ್ಚೆಗಳೂ ಸದಾ ನಡೆಯುತ್ತಿವೆ.
ದೇಶದ ಆರ್ಥಿಕ ಚರಿತೆಯಲ್ಲಿ ಕೆಲವೇ ಕೆಲವು ಕ್ರಾಂತಿಕಾರಕ ಸುಧಾರಣೆಗಳು ಜರುಗಿವೆ. ಅವುಗಳ ಪೈಕಿ ಜಿಎಸ್‌ಟಿಯೂ ಒಂದು. ನಿಜವಾದ ‘ಗಬ್ಬರ್ ಸಿಂಗ್ ಟ್ಯಾಕ್ಸ್’ ಎನ್ನುವುದು ಜಿಎಸ್‌ಟಿ ಬರುವು ದಕ್ಕಿಂತ ಮೊದಲು ಇತ್ತು. ತರಹೇವಾರಿ ಪರೋಕ್ಷ ತೆರಿಗೆಗಳು ಜನರನ್ನು ಗೊತ್ತಾಗದಂತೆಯೇ ಹಿಂಡಿ ದ್ದವು. ರಾಜ್ಯಗಳ ವ್ಯಾಟ್, ಸೆಂಟ್ರಲ್ ಸೇಲ್ಸ್ ಟ್ಯಾಕ್ಸ್, ಲಕ್ಸುರಿ ಟ್ಯಾಕ್ಸ್, ಎಂಟ್ರಿ ಟ್ಯಾಕ್ಸ್, ಪರ್ಚೇಸ್ ಟ್ಯಾಕ್ಸ್, ಬೆಟ್ಟಿಂಗ್ ಟ್ಯಾಕ್ಸ್, ಜಾಹೀರಾತು ತೆರಿಗೆ ಹೀಗೆ ಹತ್ತಾರು ಪರೋಕ್ಷ ತೆರಿಗೆಗಳು ಇದ್ದವು.
ಟ್ರಕ್ಕುಗಳು ಚೆಕ್‌ಪೋಸ್ಟ್‌ಗಳ ಬಳಿ ಗಂಟೆಗಟ್ಟಲೆ ನಿಲ್ಲುತ್ತಿದ್ದವು. ಇದರಿಂದಾಗಿ ಒಂದು ಕಡೆ ಲಾರಿ ಮಾಲೀಕರಿಗೂ ಹೆಚ್ಚು ನಷ್ಟವಾಗುತ್ತಿತ್ತು. ಮತ್ತೊಂದು ಕಡೆ ಗ್ರಾಹಕರಿಗೂ ವಸ್ತುಗಳ ಬೆಲೆ ಏರಿಕೆಯ ಅನವಶ್ಯಕ/ ಹೆಚ್ಚುವರಿ ಹೊಡೆತ ಬೀಳುತ್ತಿತ್ತು. ಲಂಚ ಮತ್ತು ಬ್ಯೂರೊಕ್ರಸಿಯ ಹಾವಳಿಗೆ ಬಿಸಿನೆಸ್ ನಲುಗಿತ್ತು. ಜಿಎಸ್‌ಟಿ ಬಳಿಕ ದೇಶದಲ್ಲಿ ಲಾಜಿಸ್ಟಿಕ್ಸ್ ವೆಚ್ಚದಲ್ಲಿ ಶೇ.30ರಷ್ಟು ಇಳಿಕೆಯಾಗಿದೆ.
ಈಗ ಲಾರಿಗಳು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹೋಗುವಾಗ ಚೆಕ್‌ಪೋ ಬಳಿ ಗಂಟೆ ಗಟ್ಟಲೆ ಕಾಯುವ ಪರಿಸ್ಥಿತಿ ಇಲ್ಲ. ಈಗಲೂ ಇದು ಪರಿಪೂರ್ಣ ಎಂದೇನಲ್ಲ. ಜಿಎಸ್‌ಟಿ ಟ್ಯಾಕ್ಸ್ ಶ್ರೇಣಿ ಮತ್ತು ಕೆಲ ಉತ್ಪನ್ನಗಳಿಗೆ ತೆರಿಗೆ ಇಳಿಕೆ ಆಗಬೇಕಿದೆ. ಉದಾಹರಣೆಗೆ ಸಿಮೆಂಟ್‌ಗೆ 28 ಪರ್ಸೆಂಟ್ ಜಿಎಸ್‌ಟಿ ಸಮಂಜಸವಲ್ಲ.
ಕಬ್ಬಿಣ, ಉಕ್ಕಿಗೂ ಶೇ.18ರ ತೆರಿಗೆ ಇಳಿದರೆ ಒಳ್ಳೆಯದು. ಜಿಎಸ್‌ಟಿ ಬಗ್ಗೆ ಒಂದು ಮಿಥ್ಯೆ ಇದೆ. ಇದರಿಂದಾಗಿ ಪ್ರತಿ ವ್ಯಕ್ತಿಯ ಮೇಲೆ ಸರಾಸರಿ ತೆರಿಗೆ ಹೊರೆ ಹೆಚ್ಚಾಗಿದೆ ಎಂಬುದು. ವಾಸ್ತವವಾಗಿ ಭಾರತದ ಇತಿಹಾಸದ ಮೊದಲ ಬಾರಿಗೆ ನಿತ್ಯಬಳಕೆಯ ಹಲವು ವಸ್ತುಗಳ ಮೇಲಿನ ಪರೋಕ್ಷ ತೆರಿಗೆಯನ್ನು ರದ್ದುಪಡಿಸಲಾಗಿದೆ. ಹಲವು ವಸ್ತುಗಳ ತೆರಿಗೆ ಶೇ. 5ಕ್ಕಿಂತ ಕೆಳಗಿದೆ. ಸಂಬಾರ ಪದಾರ್ಥಗಳಿಗೆ ಈ ಹಿಂದೆ ಇದ್ದ ತೆರಿಗೆ ಶೇ. 6ರಿಂದ 5ಕ್ಕೆ ಇಳಿದಿದೆ. ಜಿಎಸ್‌ಟಿಗೆ ಮೊದಲು ಅಕ್ಕಿಗೆ 2.75 ಮತ್ತು ಗೋಧಿಗೆ 2.5 ಪರ್ಸೆಂಟ್ ಟ್ಯಾಕ್ಸ್ ಇತ್ತು,
ಈಗ ಎರಡನ್ನೂ ತೆರಿಗೆ ಮುಕ್ತಗೊಳಿಸಲಾಗಿದೆ. ಚಹಾ, ಹಾಲಿನ ಪುಡಿ, ಸಕ್ಕರೆ, ಖಾದ್ಯ ತೈಲಕ್ಕೀಗ ಕೇವಲ ಶೇ. 5ರ ತೆರಿಗೆ ಇದೆ. ದಿನ ಬಳಕೆಯ ಹೇರ್ ಆಯಿಲ, ಟೂತ್ ಪೌಡರ್ ಮೇಲೆ ತೆರಿಗೆ ಕಡಿಮೆ. ಗೃಹೋಪಕರಣಗಳ ಮೇಲಿನ ತೆರಿಗೆ ಶೇ. 30ರಿಂದ 18ಕ್ಕೆ ಇಳಿದಿದೆ. 32 ಇಂಚು ಮೇಲ್ಪಟ್ಟ ಟಿವಿ, ರೆಫ್ರಿಜರೇಟರ್, ವಾಷಿಂಗ್ ಮಷೀನ್‌ಗೆ ತಲಾ 31.3 ಪರ್ಸೆಂಟ್ ತೆರಿಗೆ ಇತ್ತು.
ಈಗ 18 ಪರ್ಸೆಂಟ್‌ಗೆ ತಗ್ಗಿದೆ. ಕೃಷಿ ಉತ್ಪನ್ನಗಳು, ಕಲ್ಲಿದ್ದಲು, ರಸಗೊಬ್ಬರ, ಟ್ರ್ಯಾಕ್ಟರ್‌ಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸಲಾಗಿದೆ. 1200 ಸಿಸಿಗಿಂತ ಕಡಿಮೆ ಸಾಮರ್ಥ್ಯದ ಸಣ್ಣ ಕಾರುಗಳಿಗೆ ತೆರಿಗೆಯನ್ನು 28ರಿಂದ 18 ಪರ್ಸೆಂಟ್ಗೆ ಕಡಿತಗೊಳಿಸಲಾಗಿದೆ. ಜಿಎಸ್‌ಟಿಯು ಹಲವಾರು ವಲಯಗಳ ಮೇಲೆ ಸಕಾರಾತ್ಮಕ ಪ್ರಭಾವ ಬೀರಿದೆ. ಉದಾಹರಣೆಗೆ ಇಲೆಕ್ಟ್ರಿಕ್ ವಾಹನಗಳು ಮತ್ತು ಸೋಲಾರ್ ಪ್ಯಾನೆಲ್‌ಗಳ ಮೇಲಿನ ಜಿಎಸ್‌ಟಿಯನ್ನು ಶೇ.5ಕ್ಕೆ ಇಳಿಸಲಾಗಿದೆ. ಇದರಿಂದ ನವೀಕರಿಸಬಹುದಾದ ಇಂಧನ ವಲಯಕ್ಕೆ ಉತ್ತೇಜನ ನೀಡಿದಂತಾಗಿದೆ.
2024ರಲ್ಲಿ 21 ಲಕ್ಷದ 336 ಸಾವಿರ ಕೋಟಿ ಜಿಎಸ್‌ಟಿ ಸಂಗ್ರಹವಾಗಿದೆ. 2017ರಿಂದೀಚೆಗಿನ ಗರಿಷ್ಠ ವಾರ್ಷಿಕ ಕಲೆಕ್ಷನ್ ಇದಾಗಿದೆ. ದೇಶದ ಆರ್ಥಿಕ ಬೆಳವಣಿಗೆ, ತೆರಿಗೆ ನೆಲೆಯ ವಿಸ್ತರಣೆ, ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ್ ಭಾರತ್ ಅಭಿಯಾನ, ದೇಶೀಯ ಹಣಕಾಸು ವರ್ಗಾವಣೆಗಳ ಹೆಚ್ಚಳ, ಇ-ಕಾಮರ್ಸ್, ಡಿಜಿಟಲ್ ಸೇವೆಗಳ ವ್ಯಾಪಕ ಬಳಕೆಯಿಂದ ತೆರಿಗೆ ಸಂಗ್ರಹದಲ್ಲಿ ಹೆಚ್ಚಳವಾಗಿದೆ.
ನಿಮಗೆ ನೆನಪಿರಬಹುದು- 1962ರ ಚೀನಾ-ಭಾರತ ಯುದ್ಧದ ಸಂದರ್ಭ ಭಾರತೀಯ ಸೇನೆಗೆ ಶಸ್ತ್ರಾಸ್ತ್ರಗಳ ತೀವ್ರ ಕೊರತೆ ಉಂಟಾಗಿತ್ತು. ಹಿಮಾಲಯದಲ್ಲಿ ಭಾರಿ ಚಳಿಯನ್ನು ಎದುರಿಸಲು ಸೈನಿಕರಿಗೆ ಅವಶ್ಯವಿರುವ ಬಟ್ಟೆಬರೆಗಳು, ಶೂಗಳನ್ನು ಖರೀದಿಸಲು ಕೂಡ ಸಾಧ್ಯವಾಗಿರಲಿಲ್ಲ ಎಂಬುದು ದುರ್ದೈವದ ಸಂಗತಿ. ಇದಕ್ಕೆ ಕಾರಣವೇನು? ಕೆಲವರ ಪ್ರಕಾರ ನೆಹರು ನಾಯಕತ್ವದಲ್ಲಿ ಪೂರ್ವ ಸಿದ್ಧತೆಯ ಕೊರತೆ, ಮತ್ತೆ ಕೆಲವರ ಪ್ರಕಾರ ಸಂಪನ್ಮೂಲದ ಅಭಾವ ಮತ್ತು ವ್ಯೂಹಾತ್ಮಕ ಕಾರ್ಯತಂತ್ರ ಇಲ್ಲದಿದ್ದುದು. ಆದರೆ ನೇರ ಮತ್ತು ಪರೋಕ್ಷ ತೆರಿಗೆ ಸಂಗ್ರಹದ ಏರಿಕೆಯಿಂದ ರಕ್ಷಣಾ ಬಜೆಟ್ ಅನ್ನು ಹೆಚ್ಚಿಸಲು ಅನುಕೂಲ ಆಗಿರುವುದು ವಾಸ್ತವ.
ಮತ್ತೊಂದು ಕಡೆ ಕೇಂದ್ರ ನಾಯಕತ್ವವೂ ರಕ್ಷಣಾ ಬಜೆಟ್‌ಗೆ ಯಾವುದೇ ಕೊರತೆ ಆಗದಂತೆ ನೋಡಿ ಕೊಳ್ಳುತ್ತಿದೆ. 2014ರಲ್ಲಿ 2.53 ಲಕ್ಷ ಕೋಟಿ ರುಪಾಯಿಯಷ್ಟಿದ್ದ ರಕ್ಷಣಾ ಆಯವ್ಯಯ 2024ರ ವೇಳೆಗೆ 6.81ಲಕ್ಷ ಕೋಟಿ ರುಪಾಯಿಗೆ ವೃದ್ಧಿಸಿದೆ. ಕೇಂದ್ರ ಬಜೆಟ್‌ನಲ್ಲಿ ಶೇ.13.45ರಷ್ಟು ರಕ್ಷಣಾ ಆಯವ್ಯಯ ಇದೆ. ಈ ಸಲದ ಮಂಜೂರಾತಿಯು ಅಂದಾಜಿಗಿಂತ ಶೇ. 9.53ರಷ್ಟು ಹೆಚ್ಚು. ಎಲ್ಲ ಇಲಾಖೆಗಿಂತ ಅಧಿಕ ಮೊತ್ತವನ್ನು ರಕ್ಷಣಾ ಇಲಾಖೆಗೆ ನೀಡಲಾಗಿದೆ.
ಭಾರತದ ರಕ್ಷಣಾ ಉತ್ಪಾದನೆ 2023-24ರಲ್ಲಿ 1 ಲಕ್ಷದ 27 ಸಾವಿರ ಕೋಟಿ ರುಪಾಯಿಗೆ ಏರಿಕೆ ಯಾಗಿದೆ. 2014-15ರಿಂದ ಶೇ.174ರಷ್ಟು ವೃದ್ಧಿಸಿದೆ. ರಕ್ಷಣಾ ಸಚಿವಾಲಯವು ದಾಖಲೆಯ 193 ಗುತ್ತಿಗೆಗಳಿಗೆ ಸಹಿ ಹಾಕಿದ್ದು, ಇದರ ಮೌಲ್ಯ ೨ ಲಕ್ಷ ಕೋಟಿ ರುಪಾಯಿಗೂ ಹೆಚ್ಚು. ವಿಶೇಷವೇ ನೆಂದರೆ 2023-24ರಲ್ಲಿ ಭಾರತವು 21083 ಕೋಟಿ ರುಪಾಯಿ ಬೆಲೆ ಬಾಳುವ ಶಸ್ತ್ರಾಸ್ತ್ರಗಳನ್ನು 100ಕ್ಕೂ ಹೆಚ್ಚು ರಾಷ್ಟ್ರಗಳಿಗೆ ರಫ್ತು ಮಾಡಿದೆ.
ಇದು ಕಳೆದ ಹತ್ತು ವರ್ಷಗಳಲ್ಲಿ 30 ಪಟ್ಟು ಹೆಚ್ಚು. 2029ರ ವೇಳೆಗೆ ಉತ್ಪಾದನೆಯನ್ನು 3 ಲಕ್ಷ ಕೋಟಿಗೂ, ರಫ್ತನ್ನು 50000 ಕೋಟಿಗೂ ಹೆಚ್ಚಿಸುವ ಗುರಿಯನ್ನು ಭಾರತ ಹೊಂದಿದೆ! ಇದೇ ಕಾರಣ ಕ್ಕಾಗಿ ಇವತ್ತು ಬೆಂಗಳೂರಿನ ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್), ಬಿಇಎಲ್ ಮುಂತಾದ ರಕ್ಷಣಾ ವಲಯದ ಸಾರ್ವಜನಿಕ ಕಂಪನಿಗಳ ಷೇರು ದರಗಳು ಗಣನೀಯ ಏರಿಕೆ ದಾಖ ಲಿಸಿ ಹೂಡಿಕೆದಾರರಿಗೆ ಲಾಭದಾಯಕವಾಗಿದೆ. ಜಿಎಸ್‌ಟಿಯಂಥ ಪರೋಕ್ಷ ತೆರಿಗೆ ಪದ್ಧತಿಯ ಸುಧಾ ರಣಾ ಕ್ರಮ ಇವತ್ತು ಇಡೀ ದೇಶದ ಭದ್ರತೆ, ಆರ್ಥಿಕ ಬೆಳವಣಿಗೆಗೆ ಹೇಗೆ ನೆರವಾಗಿದೆ ಎಂಬುದು ಅಧ್ಯಯನ ಯೋಗ್ಯ ಮತ್ತು ಸಕಾಲಿಕ.