ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr D C Nanjunda Column: ಫುಲ್‌ ಮತ್ತು ಡಲ್‌ʼಗಳ ನಡುವೆ ಕ್ರಿಕೆಟಿಗರ ಹೋಟೆಲ್‌ ಉದ್ಯಮ !

ಇಂದು ಕ್ರಿಕೆಟ್ ಕೇವಲ ಆಟವಲ್ಲ, ಇದು ಬೃಹತ್ ವ್ಯವಹಾರದ ಅವಕಾಶಗಳಿಗೂ ದಾರಿ ತೆರೆದಿದೆ. ಮೈದಾನದಲ್ಲಿ ಬೆವರು ಸುರಿಸುತ್ತಿದ್ದ ಆಟಗಾರರು ಇಂದು ನಿವೃತ್ತಿಯ ನಂತರ ಅಥವಾ ಸಮಕಾಲೀನ ಜೀವನದಲ್ಲೇ ಆತಿಥ್ಯ ಕ್ಷೇತ್ರದಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಲು ಮುಂದಾಗಿರುವುದು ಹೊಸ ವಿಷಯ ವಲ್ಲ

ಫುಲ್‌ ಮತ್ತು ಡಲ್‌ʼಗಳ ನಡುವೆ ಕ್ರಿಕೆಟಿಗೃ ಹೋಟೆಲ್‌ ಉದ್ಯಮ !

-

Ashok Nayak
Ashok Nayak Dec 7, 2025 3:17 PM

ಕುಡಿನೋಟ

ಡಾ.ಡಿ.ಸಿ.ನಂಜುಂಡ

ಇಂದು ಕ್ರಿಕೆಟ್ ಕೇವಲ ಆಟವಲ್ಲ, ಇದು ಬೃಹತ್ ವ್ಯವಹಾರದ ಅವಕಾಶಗಳಿಗೂ ದಾರಿ ತೆರೆದಿದೆ. ಮೈದಾನದಲ್ಲಿ ಬೆವರು ಸುರಿಸುತ್ತಿದ್ದ ಆಟಗಾರರು ಇಂದು ನಿವೃತ್ತಿಯ ನಂತರ ಅಥವಾ ಸಮಕಾ ಲೀನ ಜೀವನದಲ್ಲೇ ಆತಿಥ್ಯ ಕ್ಷೇತ್ರದಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಲು ಮುಂದಾಗಿರುವುದು ಹೊಸ ವಿಷಯವಲ್ಲ. ಕ್ರಿಕೆಟಿಗರು ತಮ್ಮ ಜನಪ್ರಿಯತೆ ಮತ್ತು ಬ್ರ್ಯಾಂಡ್ ಮೌಲ್ಯವನ್ನು ಉಪಯೋ ಗಿಸಿಕೊಂಡು ಹೋಟೆಲ್ ವ್ಯವಹಾರಕ್ಕೆ ಕಾಲಿಟ್ಟಿದ್ದಾರೆ.

ವರದಿಗಳ ಪ್ರಕಾರ ಕೆಲವರು ಯಶಸ್ವಿಯಾಗಿ ಈ ಕ್ಷೇತ್ರದಲ್ಲಿ ತಮ್ಮ ಸ್ಥಾನವನ್ನು ಕಟ್ಟಿಕೊಂಡಿದ್ದಾರೆ, ಕೆಲವರು ಆರಂಭದಲ್ಲಿ ಜನಪ್ರಿಯತೆ ಪಡೆದರೂ ಮುಂದೆ ಬಂದ್ ಮಾಡಬೇಕಾದ ಪರಿಸ್ಥಿತಿಯನ್ನು ಎದುರಿಸಿದ್ದಾರೆ. ಹೋಟೆಲ್ ಉದ್ಯಮ ಡಲ್ ಮತ್ತು ಫುಲ್‌ಗಳ ಮಧ್ಯೆ ಸಾಗುತ್ತಿದೆ.

ಭಾರತದ ಕ್ರಿಕೆಟ್ ದೇವರೆಂದೇ ಪ್ರಸಿದ್ಧರಾದ ಸಚಿನ್ ತೆಂಡೂಲ್ಕರ್ ತಮ್ಮ ಕ್ರಿಕೆಟ್ ಖ್ಯಾತಿಯನ್ನು ಬಳಸಿ ಮುಂಬೈನಲ್ಲಿರುವ ‘ತೆಂಡೂಲ್ಕರ್ಸ್’ ಎಂಬ ಫೈನ್ -ಡೈನಿಂಗ್ ರೆಸ್ಟೋರೆಂಟ್ ಅನ್ನು ಹೋಟೆಲ್ ಉದ್ಯಮಕ್ಕೆ ಪರಿಚಯಿಸಿದರು. ಇದನ್ನು ಅವರು ಪ್ರಸಿದ್ಧ ಉದ್ಯಮಿ ಸಂಜಯ್ ನಾರಂಗ್ ಅವರ ಜತೆಗೂಡಿ ಆರಂಭಿಸಿದರು.

ಅದರ ಜತೆಗೆ ಅವರು ಮುಂಬೈ ಮತ್ತು ಬೆಂಗಳೂರು ನಗರಗಳಲ್ಲಿ ‘ಸಚಿನ್ಸ್’ ಎಂಬ ಇನ್ನೊಂದು ಹೋಟೆಲ್ ಸರಣಿಯನ್ನು ಪ್ರಾರಂಭಿಸಿದ್ದರು. ಆರಂಭದಲ್ಲಿ ಕ್ರಿಕೆಟ್ ಅಭಿಮಾನಿಗಳು ಹರಿದು ಬಂದರೂ ನಿರಂತರ ನಿರ್ವಹಣಾ ವೆಚ್ಚದಿಂದ 2007ರಲ್ಲಿ ಕೊನೆಗೆ ಹೋಟೆಲ್ ಬಂದ್ ಮಾಡಬೇಕಾಯಿತು.

ಇದನ್ನೂ ಓದಿ: Dr D C Nanjunda Column: ನೊಬೆಲ್‌ ಪ್ರಶಸ್ತಿಗೆ ಪ್ರೇರಣೆ: ಶಿವನ ತಾಂಡವ ನೃತ್ಯ ಕಥಾನಕ !

ಭಾರತೀಯ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ 2004ರಲ್ಲಿ ಕೋಲ್ಕತ್ತಾದಲ್ಲಿ ‘ಸೌರವ್ಸ್’ ಎಂಬ ರೆಸ್ಟೋರೆಂಟ್ ಆರಂಭಿಸಿದರು. ಆರಂಭದಲ್ಲಿ ಇದು ಬಹಳ ಜನಪ್ರಿಯವಾಯಿತು. ಆದರೆ ಹಲವು ಸಮಸ್ಯೆಗಳಿಂದಗಿ ಅಂತಿಮವಾಗಿ ಹೋಟೆಲ್ ಅನ್ನು ಬಂದ್ ಮಾಡಬೇಕಾಯಿತು.

ಆಧುನಿಕ ಕ್ರಿಕೆಟ್‌ನ ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿ ತಮ್ಮ ಜರ್ಸಿ ಸಂಖ್ಯೆ ‘18’ ಅನ್ನು ಆಧರಿಸಿ ‘ಒನ್ 8 ಕಮ್ಯೂನ್’ ಎಂಬ ಹೋಟೆಲ್ ಸರಣಿಯನ್ನು ಪ್ರಾರಂಭಿಸಿದ್ದಾರೆ. ಈ ರೆಸ್ಟೋರೆಂಟ್‌ಗಳು ದೆಹಲಿ, ಮುಂಬೈ, ಪುಣೆ, ಬೆಂಗಳೂರು ಸೇರಿದಂತೆ ಅನೇಕ ನಗರಗಳಲ್ಲಿ ಯಶಸ್ವಿಯಾಗಿ ನಡೆಯು ತ್ತಿವೆ.

ಇದಲ್ಲದೆ ಕೊಹ್ಲಿ ದೆಹಲಿಯಲ್ಲಿ Nueva ಎಂಬ, ದಕ್ಷಿಣ ಅಮೆರಿಕನ್ ಖಾದ್ಯಗಳನ್ನು ಒದಗಿಸುವ ಫೈನ್-ಡೈನಿಂಗ್ ಹೋಟೆಲ್ ನಲ್ಲಿಯೂ ಹೂಡಿಕೆ ಮಾಡಿದ್ದಾರೆ. ಅವರ ಹೋಟೆಲ್ ಸರಣಿಗಳು ಇಂದಿಗೂ ಲಾಭದಾಯಕವಾಗಿ ಸಾಗುತ್ತಿವೆ. ಭಾರತಕ್ಕೆ ಮೊದಲ ವಿಶ್ವಕಪ್ ತಂದುಕೊಟ್ಟ ನಾಯಕ ಕಪಿಲ್ ದೇವ್ ಪಟನಾದಲ್ಲಿ ‘ಇಲವೆನ್’ ಎಂಬ ರೆಸ್ಟೋರೆಂಟ್ ಅನ್ನು ಮತ್ತು ಚಂಡೀಗಢದಲ್ಲಿ ‘ಕ್ಯಾಪ್ಟನ್ಸ್’ ಎಂಬ ಯಶಸ್ವಿ ಹೋಟೆಲ್ ಅನ್ನು ನಡೆಸುತ್ತಿದ್ದಾರೆ.

ಭಾರತದ ಮಾಜಿ ವೇಗದ ಬೌಲರ್ ಜಹೀರ್ ಖಾನ್ ಅವರ ‘ಜಹೀರ್’ ಎಂಬ ಫೈನ್-ಡೈನಿಂಗ್ ಹೋಟೆಲ್ ಮತ್ತು Toss Sports Lounge ಎಂಬ ಕ್ರೀಡಾ ಆಧಾರಿತ ರೆಸ್ಟೋರೆಂಟ್ ಪ್ರಸಿದ್ಧವಾಗಿವೆ. ಇವು ಒಂದು ಹಂತದವರೆಗೆ ಯಶಸ್ಸು ಕಂಡಿವೆ.

ಆಲ್‌ರೌಂಡರ್ ರವೀಂದ್ರ ಜಡೇಜಾ ತಮ್ಮ ಊರಾದ ರಾಜ್‌ಕೋಟ್‌ನಲ್ಲಿ ‘ಜದ್ದುಸ್ ಫುಡ್ ಫೀಲ್ಡ್’ ಎಂಬ ಯಶಸ್ವಿ ರೆಸ್ಟೋರೆಂಟ್ ಆರಂಭಿಸಿದ್ದಾರೆ. ಮಹೇಂದ್ರ ಸಿಂಗ್ ಧೋನಿ ತಾವೇ ಹೋಟೆಲ್ ಪ್ರಾರಂಭಿಸದಿದ್ದರೂ ಆತಿಥ್ಯ ಕ್ಷೇತ್ರದಲ್ಲಿ ಹೂಡಿಕೆ ಮಾಡಿದ್ದಾರೆ. ಅವರು ರಾಂಚಿಯಲ್ಲಿ ‘ಮಹಿ ರೆಸಿಡೆನ್ಸಿ’ ಎಂಬ ಹೋಟೆಲ್‌ನೊಂದಿಗೆ ವ್ಯಾವಹಾರಿಕ ಸಂಬಂಧ ಹೊಂದಿದ್ದಾರೆ. ಜತೆಗೆ ಅವರ ಹೆಸರಿನಲ್ಲಿ, ಫುಡ್ ಮತ್ತು ಬೆವರೇಜ್ ಸ್ಟಾರ್ಟ್-ಅಪ್‌ಗಳಲ್ಲಿಯೂ ಹೂಡಿಕೆ ಇದೆ.

ಭಾರತದ ದಿಗ್ಗಜ ಸ್ಪಿನ್ ಬೌಲರ್ ಅನಿಲ್ ಕುಂಬ್ಳೆ ಬೆಂಗಳೂರಿನಲ್ಲಿ Tenvic ಎಂಬ ಕ್ರೀಡಾ ಮ್ಯಾನೇ ಜ್ಮೆಂಟ್ ಕಂಪನಿಯ ಜತೆಗೆ ರೆಸ್ಟೋರೆಂಟ್ ಹೂಡಿಕೆಗಳಲ್ಲಿಯೂ ಕೈ ಹಾಕಿದ್ದಾರೆ. ಇವರು ಹೋಟೆಲ್ ಸಹ ನಡೆಸುತ್ತಿರುವ ಮಾತಿ ಇದೆ.

ಸುರೇಶ್ ರೈನಾ ಅವರು ಹಾಲೆಂಡ್‌ನಲ್ಲಿ ‘ಸರ್ನೇಮ್ ರೈನಾ’ ಎಂಬ ಹೆಸರಿನ ಭಾರತೀಯ ತಿಂಡಿಗಳ ಹೋಟೆಲ್ ಆರಂಭಿಸಿದ್ದಾರೆ. ಕೇರಳದ ಶ್ರೀಶಾಂತ್ ಸಹ ಹೋಟೆಲ್ ಉದ್ಯಮ ಆರಂಭಿಸಿ ಕೊನೆಗೆ ಎಲ್ಲವನ್ನು ಕಳೆದುಕೊಂಡಿದ್ದಾರೆ. ಅಜಯ್ ಜಡೇಜಾ ಮತ್ತು ಲಾಲ್ ಬಹಾದುರ್ ಶಾಸ್ತ್ರೀ ಅವರ ಮೊಮ್ಮಗ ದಿವಾಕರ್ ಸೇರಿಕೊಂಡು ದೆಹಲಿಯಲ್ಲಿ ‘ಸೆನ್ಸೋ’ ಎಂಬ ಹೋಟೆಲ್ ಆರಂಭಿಸಿ ಸಂಪೂರ್ಣ ನಷ್ಟ ಅನುಭವಿಸಿದ್ದಾರೆ.

ಕೇರಳದ ಮಾಜಿ ಕ್ರಿಕೆಟಿಗ ಜಿ.ಕೆ. ಮಹೇಂದ್ರ ಚೆನ್ನೈನಲ್ಲಿ ‘ಕ್ರಿಕೆಟ್ ಹಟ್’ ಎಂಬ ಹೋಮ್ ಸ್ಟೇ ಆರಂಭಿಸಿ ಲಾಭ ಕಂಡಿದ್ದಾರೆ ಎನ್ನುವ ವರದಿಗಳಿವೆ. ಯುವರಾಜ್ ಸಿಂಗ್ ತಮ್ಮ ಹೆಸರಿನಲ್ಲಿ ‘ಯು-ಕ್ಯಾನ್’ ಫೌಂಡೇಷನ್ ಮೂಲಕ ಆಹಾರ-ಪಾನೀಯ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ಉದ್ದೇಶದಿಂದ ಹಲವು ರೆಸ್ಟೋರೆಂಟ್ ಯೋಜನೆಗಳ ಜತೆಗೂಡಿದ್ದಾರೆ. ಸುನಿಲ್ ಗವಾಸ್ಕರ್ ಮುಂಬೈನಲ್ಲಿಯೂ ಕೆಲವು ಕಾಲ ಹೋಟೆಲ್ ಹೂಡಿಕೆಗಳಲ್ಲಿ ಕೈ ಹಾಕಿ ನಷ್ಟ ಅನುಭವಿಸಿದ್ದಾರೆ.

ರವಿ ಶಾಸ್ತ್ರೀ ಅವರು ದೆಹಲಿ ಮತ್ತು ಮುಂಬೈಯಲ್ಲಿ ಬಾರ್-ಲೌಂಜ್ ಗಳಲ್ಲಿ ಹೂಡಿಕೆ ಮಾಡಿರುವು ದಾಗಿ ವರದಿಗಳಿವೆ. ಲಾಭ ನಷ್ಟದ ಬಗ್ಗೆ ಮಾಹಿತಿ ಇಲ್ಲ. ರಾಬಿನ್ ಉತ್ತಪ್ಪ ಸಹ ಬೆಂಗಳೂರಿನಲ್ಲಿ ‘ಬ್ಯಾಟ್ ಆಂಡ್ ಬಾಲ್ ಇನ್’ ಎಂಬ ಹೋಟೆಲ್ ನಡೆಸಿ ಹಣ ಕಳೆದುಕೊಂಡಿದ್ದಾರೆ. ಆಸ್ಟ್ರೇಲಿಯಾ ದ ಶೇನ್ ವಾರ್ನ್ Club 23 ಎಂಬ ಪ್ರೀಮಿಯಂ ಬಾರ್-ಲೌಂಜ್‌ನ ಸಹ- ಪಾಲುದಾರರಾಗಿದ್ದರು. ಅವರ ವ್ಯವಹಾರ ಹೆಚ್ಚು ಸೆಲೆಬ್ರಿಟಿ ಬ್ರ್ಯಾಂಡಿಂಗ್ ಮೇಲೆ ನಿಂತಿತ್ತು. ಅದು ಕೆಲ ಕಾಲ ಯಶಸ್ಸು ಕಂಡರೂ ಮುಂದೆ ವಿಧಿ ಇಲ್ಲದೆ ಅದನ್ನು ಮುಚ್ಚಬೇಕಾಯಿತು.

ಇಂಗ್ಲೆಂಡ್ ಕ್ರಿಕೆಟಿಗರಾದ ಸ್ಟುವರ್ಟ್ ಬ್ರಾಡ್ ಮತ್ತು ಅವರ ಸಹ ಆಟಗಾರ ಹ್ಯಾರಿ ಗರ್ನಿ ನಾಟಿಂಗ್‌ ಹ್ಯಾಮ್ ಶೈರ್‌ನಲ್ಲಿ ‘ದ ಕ್ಯಾಟ್ ಆಂಡ್ ಕೆಟ್ಸ್’ ಎಂಬ ಗ್ಯಾಸ್ಟ್ರೋ ಪಬ್ ನಡೆಸುತ್ತಿದ್ದಾರೆ. ಇಲ್ಲಿ ಇಂಗ್ಲಿಷ್ ಪಬ್ ಸಂಸ್ಕೃತಿ ಮತ್ತು ಆಧುನಿಕ ಊಟದ ಮೆನುಗಳನ್ನು ಬೆರೆಸಿ ವಿಶಿಷ್ಟ ವಾತಾವರಣ ನಿರ್ಮಿಸಿದ್ದಾರೆ.

ಸದ್ಯ ಅವರ ಪಬ್ ಜನಪ್ರಿಯವಾಗಿದೆ ಎನ್ನುವ ಮಾಹಿತಿ ಇದೆ. 2022ರಲ್ಲಿ ಬೆಂಕಿ ಅವಘಡದಿಂದ ಈ ಪಬ್ ಹಾನಿಗೊಳಗಾದರೂ ಅದನ್ನು ಪುನಃ ಆರಂಭಿಸಿ ಇನ್ನೂ ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಕ್ರಿಕೆಟ್ ಮೈದಾನದಲ್ಲಿಯೂ ಹೊರಗಿನ ಜೀವನದಲ್ಲಿಯೂ ತಮ್ಮ ಸ್ಟೈಲ್‌ನಿಂದಾಗಿ ಪ್ರಸಿದ್ಧರಾದ ಕೇನ್ ಪೀಟರ್‌ಸನ್, ಆಹಾರ ಮತ್ತು ಆತಿಥ್ಯ ಕ್ಷೇತ್ರದಲ್ಲಿ ಹೂಡಿಕೆ ಮಾಡಿದ್ದಾರೆ. ಅವರು ಹಲವಾರು ಲಕ್ಸುರಿ ಫುಡ್ ಬ್ರ್ಯಾಂಡ್ಸ್ ಮತ್ತು ಹೋಟೆಲ್ ಯೋಜನೆಗಳಲ್ಲಿ ಪಾಲುದಾರರಾಗಿದ್ದಾರೆ.

ಜತೆಗೆ ವೈನ್ ಮತ್ತು ಲಕ್ಸುರಿ ಕಾಫಿ-ಬೆವರೇಜ್ ಬಿಸಿನೆಸ್‌ನಲ್ಲಿಯೂ ಹೂಡಿಕೆ ಮಾಡಿದ್ದಾರೆ. ಪೀಟರ್‌ ಸನ್ ಹೆಚ್ಚಾಗಿ ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಗುರಿಯಾಗಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್, ಕ್ರಿಕೆಟ್ ನಂತರ ವ್ಯವಹಾರ ಕ್ಷೇತ್ರದಲ್ಲಿ ಬುದ್ಧಿವಂತ ಹೂಡಿಕೆ ಮಾಡಿದ್ದಾರೆ. ಅವರು ತಮ್ಮ ಹೆಸರಿನಲ್ಲಿ ‘ಪಾಂಟಿಂಗ್ ವೈನ್ಸ್’ ಎಂಬ ವೈನ್ ಬ್ರ್ಯಾಂಡ್ ಆರಂಭಿಸಿ ದ್ದಾರೆ, ಇದು ಆಸ್ಟ್ರೇಲಿಯಾ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರಸಿದ್ಧವಾಗಿದೆ.

ಜತೆಗೆ ಫೈನ್-ಡೈನಿಂಗ್ ರೆಸ್ಟೋರೆಂಟ್ ಹೂಡಿಕೆಗಳಲ್ಲಿಯೂ ಪಾಲ್ಗೊಂಡಿದ್ದಾರೆ. ಪಾಕಿಸ್ತಾನದ ಶಾಹಿದ್ ಅಫ್ರಿದಿ ಮೈದಾನದಲ್ಲಿ ಸಿಕ್ಸ್‌ರ್ ಗಳನ್ನು ಬಾರಿಸಿದ್ದು ಸಾಲದೆಂಬಂತೆ, ಉದ್ದಿಮೆ ಕ್ಷೇತ್ರ ದಲ್ಲಿಯೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. 2022ರಲ್ಲಿ ಅವರು ದುಬೈನಲ್ಲಿ ‘ಲಾಲಾ ದರ್ಬಾರ್’ ಎಂಬ ದೇಸಿ ಫುಡ್ ರೆಸ್ಟೋರೆಂಟ್ ಪ್ರಾರಂಭಿಸಿದರು.

ಕ್ರಿಕೆಟ್‌ನ ಖ್ಯಾತಿ, ಏಷ್ಯಾ ಖಂಡದ ವಲಸಿಗ ಸಮುದಾಯದ ಭಾವನಾತ್ಮಕ ಬಾಂಧವ್ಯ ಮತ್ತು ಸಮುದ್ರ ಆಹಾರಕ್ಕಿರುವ ಪ್ರಾಮುಖ್ಯವನ್ನು ಬಳಸಿಕೊಂಡು ಇವರು ಜನರನ್ನು ಸೆಳೆಯುತ್ತಿದ್ದಾರೆ. ಅಫ್ರಿದಿಯ ರೆಸ್ಟೋರೆಂಟ್ ಖ್ಯಾತಿಯ ಆಧಾರದಲ್ಲಿ ಆರಂಭವಾದರೂ ದೇಸಿ ಮಾರುಕಟ್ಟೆಯಲ್ಲಿ ದೀರ್ಘಾವಧಿ ಸ್ಥಿರತೆ ಪಡೆಯುವ ಕುರಿತು ಶಂಕೆ ಇದೆ ಎನ್ನಲಾಗುತ್ತಿದೆ.

ಪಾಕಿಸ್ತಾನದ ಮತ್ತೊಬ್ಬ ಸ್ಟಾರ್ ಕ್ರಿಕೆಟಿಗ ಶೋಯೆಬ್ ಮಲಿಕ್ 2022ರ ಜನವರಿಯಲ್ಲಿ ಪಾಕಿಸ್ತಾನದ ಲಾಹೋರ್‌ನಲ್ಲಿ ‘ದ ಸೋಷಿಯಲ್ ಸ್ಪಾಟ್’ ಎಂಬ ರೆಸ್ಟೋರೆಂಟ್ ಆರಂಭಿಸಿದರು. ಉದ್ಘಾಟನಾ ದಿನ ಇಂಜಮಾಮ್-ಉಲ್-ಹಕ್, ವಕಾರ್ ಯುನಿಸ್, ಕಾಮ್ರಾನ್ ಅಕ್ಮಲ್, ಬಾಬರ್ ಅಜಮ್ ಹೀಗೆ ಅನೇಕ ಕ್ರಿಕೆಟಿಗರು ಹಾಜರಿದ್ದರು.

ಮಲಿಕ್ ಅವರು ಸ್ಥಳೀಯ ಆಹಾರಕ್ಕೆ ಒತ್ತುನೀಡಿ ಪಾಕ್‌ನ ಯುವಜನರನ್ನು ಸೆಳೆಯಲು ಪ್ರಯತ್ನಿಸಿ ದ್ದಾರೆ. ಲಾಹೋರ್‌ನಂಥ ದೊಡ್ಡ ನಗರದಲ್ಲಿ ಮಲಿಕ್ ತಮ್ಮ ಬ್ರ್ಯಾಂಡ್ ಇಮೇಜ್ ಮತ್ತು ಪಾಕಿಸ್ತಾನಿ ಯುವಜನರ ಬೆಂಬಲದ ಮೇಲೆ ಉದ್ಯಮವನ್ನು ಬೆಳೆಸಲು ಪ್ರಯತ್ನಿಸುತ್ತಿದ್ದಾರೆ. ಶ್ರೀಲಂಕಾ ಕ್ರಿಕೆಟ್ ಇತಿಹಾಸದ ದಿಗ್ಗಜರಾದ ಸಂಗಕ್ಕಾರ ಮತ್ತು ಜಯವರ್ಧನೆ ಅವರುಗಳು 2011ರ ಡಿಸೆಂಬರ್ ನಲ್ಲಿ ಕೊಲಂಬೋದಲ್ಲಿ ‘ಮಿನಿಸ್ಟರಿ ಆಫ್ ಕ್ರ್ಯಾಬ್’ ಸ್ಥಾಪಿಸಿದರು. ‌

ಇದು ರೆಸ್ಟೋರೆಂಟ್ ಮಾತ್ರವಲ್ಲದೆ, ಶ್ರೀಲಂಕಾದ ಸಮುದ್ರ ಆಹಾರದ ಪರಂಪರೆಯನ್ನು ಜಗತ್ತಿಗೆ ಪರಿಚಯಿಸುವ ಬ್ರ್ಯಾಂಡ್ ಆಗಿದೆ. ಈಗಾಗಲೇ ಇದು ಕೊಲಂಬೋ ಹೊರತುಪಡಿಸಿ ಮುಂಬೈ, ಶಾಂಘೈ, ಮನಿಲಾ ಮುಂತಾದ ಅಂತಾರಾಷ್ಟ್ರೀಯ ನಗರಗಳಲ್ಲಿಯೂ ವಿಸ್ತರಿಸಿದೆ.

ಫೋರ್ಬ್ಸ್ ಮತ್ತು ಏಷ್ಯಾ ಅವಾರ್ಡ್ಸ್ ಸೇರಿದಂತೆ ಅನೇಕ ಅಂತಾರಾಷ್ಟ್ರೀಯ ಮಾಧ್ಯಮಗಳ ಪಟ್ಟೀ ಕರಣದಲ್ಲಿ ಇದು ಉತ್ತಮ ಸ್ಥಾನದಲ್ಲಿ ಗುರುತಿಸಿಕೊಂಡಿದೆ ಮತ್ತು ಲಾಭದ ಹಾದಿಯಲ್ಲಿದೆ. ಇಲ್ಲಿ ಶ್ರೀಲಂಕಾದ ನೈಸರ್ಗಿಕ ಪ್ರವಾಸೋದ್ಯಮ ಮತ್ತು ಅಂತಾರಾಷ್ಟ್ರೀಯ ವಿಸ್ತರಣೆ ಎಲ್ಲವು ಗಳನ್ನೂ ಸಮನ್ವಯ ಗೊಳಿಸಲಾಗಿದೆ. ಶ್ರೀಲಂಕಾದ ಮತ್ತೊಬ್ಬ ಆಟಗಾರ ರೋಷನ್ ಮಹಾನಾಮಾ ತಂತ್ರಜ್ಞಾನ ಆಧಾರಿತ ಆಹಾರ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಅವರು ‘ಝೈರಾ’ ಎಂಬ ಸ್ಟಾಟ್ ಅಪ್ ಆರಂಭಿಸಿದ್ದು, ಈ ಪ್ರಯತ್ನ ಹೆಚ್ಚು ನವೀನತೆಯ ಹಾದಿಯಲ್ಲಿದೆ ಎನ್ನಬಹುದು.

ಶ್ರೀಲಂಕಾದಲ್ಲಿ ಡಿಜಿಟಲ್ ಆಹಾರ ಸೇವಾ ಮಾರುಕಟ್ಟೆಗೆ ಇದು ನೂತನ ಹೆಜ್ಜೆ. ಶ್ರೀಲಂಕಾದ ಅಸಂಗ ಸೆನೆವಿರತ್ನೆ ಅವರು ಕೂಡ ಹೋಟೆಲ್ ಮತ್ತು ರೆಸಾರ್ಟ್ ಸರಣಿಯನ್ನು ಸ್ಥಾಪಿಸಿದ್ದಾರೆ. ಇವರು ಶ್ರೀಲಂಕಾದ ಪ್ರವಾಸೋದ್ಯಮವನ್ನು ಗುರಿಯಾಗಿಸಿಕೊಂಡು ಈ ಐಷಾರಾಮಿ ರೆಸಾರ್ಟ್ ಮತ್ತು ಹೋಟೆಲ್ ಗಳನ್ನು ಅಭಿವೃದ್ಧಿಪಡಿಸಿದ್ದಾರೆ.

ಕ್ರಿಕೆಟ್ ಹೆಸರಿಗಿಂತ ಹೆಚ್ಚು ವೃತ್ತಿಪರ ನಿರ್ವಹಣಾ ಸಾಮರ್ಥ್ಯದಿಂದಲೇ ಸೆನೆವಿರತ್ನೆ ಯಶಸ್ಸು ಕಂಡಿದ್ದಾರೆ ಎನ್ನಬಹುದು. 2015ರಲ್ಲಿ ಬಾಂಗ್ಲಾದೇಶದ ಅಗ್ರ ಆಟಗಾರ ಶಕೀಬ್ ಅಲ್ ಹಸನ್ ಢಾಕಾದಲ್ಲಿ ಕ್ರಿಕೆಟ್-ಥೀಮ್ ಉಳ್ಳ ‘ಶಕಿಬ್-೭೫’ ಎಂಬ ಕ್ರೀಡಾ ಮತ್ತು ಆಹಾರ ಉದ್ಯಮವನ್ನು ಪ್ರಾರಂಭಿಸಿದ್ದಾರೆ. ಬಾಂಗ್ಲಾದ ಮೊಹಮ್ಮದ್ ಅಶ್ರ-ಲ್ ಅವರು ಢಾಕಾದಲ್ಲಿ ‘ಸಿಂಚೂಆನ್ ಗಾರ್ಡನ್ ಹೋಟೆಲ್’ ಅನ್ನು ಆರಂಭಿಸಿದ್ದಾರೆ.

ಒಟ್ಟಿನಲ್ಲಿ ಭಾರತೀಯ ಕ್ರಿಕೆಟಿಗರ ಹೋಟೆಲ್ ವ್ಯವಹಾರವು ‘ಖ್ಯಾತಿ ಮಾತ್ರ ಸಾಕಾಗುವುದಿಲ್ಲ, ಗುಣಮಟ್ಟ ಮತ್ತು ನಿರ್ವಹಣೆಯೇ ಯಶಸ್ಸಿನ ಕೀಲಿಕೈ’ ಎಂಬ ಸಂದೇಶವನ್ನು ನೀಡುತ್ತದೆ. ವಿರಾಟ್ ಕ್ಲೊಹ್ಲಿ, ಜಹೀರ್ ಖಾನ್ ತಮ್ಮ ಹೂಡಿಕೆಗಳಲ್ಲಿ ಯಶಸ್ಸು ಕಂಡಿದ್ದಾರೆ. ಇನ್ನು ಸಚಿನ್, ಸೌರವ್ ಇವರಿಗೆ ಅಭಿಮಾನಿಗಳು ಇದ್ದರೂ ದೀರ್ಘಕಾಲ ಹೋಟೆಲ್ ನಡೆಸಲು ಸಾಧ್ಯವಾಗಲಿಲ್ಲ.

ಹೋಟೆಲ್ ಉದ್ಯಮದಲ್ಲಿ ಕೇವಲ ಹೆಸರು ಸಾಕಾಗುವುದಿಲ್ಲ, ಬಲವಾದ ತಂತ್ರ, ನಿರ್ವಹಣೆ ಅಗತ್ಯ ವೆಂಬುದನ್ನು ಇದು ತೋರಿಸುತ್ತದೆ. ಆಟಕ್ಕೂ ಉದ್ಯಮಕ್ಕೂ ಬಹಳ ವ್ಯತ್ಯಾಸವಿದೆ. ಆಟಗಾರರಿಗೆ ಸೋಲು-ಗೆಲುವು ಹೊಸದಲ್ಲ, ಆದರೆ ಉದ್ಯಮದಲ್ಲಿ ಹಾಗಲ್ಲ. ಒಮ್ಮೆ ಸೋತರೆ, ಮೇಲೇಳುವುದು ಕೊಂಚ ಕಷ್ಟವೇ...

(ಲೇಖಕರು ಸಹ-ಪ್ರಾಧ್ಯಾಪಕರು)