R T Vittalmurthy Column: ಮೋದಿಯವರಿಗೆ ತಲುಪಿದೆಯಾ ಸೀಕ್ರೆಟ್ ರಿಪೋರ್ಟು ?
ಪ್ರಲ್ಹಾದ್ ಜೋಷಿ ಮತ್ತು ಡಿ.ವಿ.ಸದಾನಂದ ಗೌಡರು ಕರ್ನಾಟಕದ ರಾಜಕೀಯ ವಿದ್ಯಮಾನಗಳ ಬಗ್ಗೆ ಒಂದು ಕೂಲಂಕಷ ವರದಿ ತಯಾರಿಸಿದ್ದಾರೆ. ಮೂಲಗಳ ಪ್ರಕಾರ, ‘ಅಧಿಕಾರ ಹಸ್ತಾಂತರದ ಗೊಂದಲ ದಿಂದ ಒಂದು ಬಣ ಕಾಂಗ್ರೆಸ್ ತೊರೆದು ಬಿಜೆಪಿ ಕಡೆ ಬರಲು ಸಿದ್ಧವಾದರೂ, ನಾವು ಆಸರೆ ನೀಡದಿರು ವುದು ಒಳ್ಳೆಯದು. ಯಾಕೆಂದರೆ ಸಿದ್ದರಾಮಯ್ಯ ಅಧಿಕಾರ ಹಸ್ತಾಂತರಿಸಲಿಲ್ಲ ಎಂಬ ಕಾರಣಕ್ಕೆ ಮುನಿಸಿಕೊಂಡು ಬರುವ ಗುಂಪಿಗೆ ನಾವು ಆಸರೆ ನೀಡಿದರೆ ಈಗಾಗಲೇ ನಮ್ಮ ಜತೆ ಮೈತ್ರಿ ಸಾಧಿಸಿರುವ ಜೆಡಿಎಸ್ ಪಕ್ಷ ನಮ್ಮಿಂದ ದೂರ ಸರಿಯಬಹುದು


ಮೂರ್ತಿಪೂಜೆ
ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ಬಿಜೆಪಿಯ ಇಬ್ಬರು ನಾಯಕರಿಗೆ ಕೆಲ ದಿನಗಳ ಹಿಂದೆ ಒಂದು ಟಾಸ್ಟ್ ಕೊಟ್ಟಿದ್ದಾರೆ. ಹೀಗೆ ಮೋದಿ ಅವರಿಂದ ಟಾಸ್ಕ್ ಪಡೆದ ನಾಯಕರ ಪೈಕಿ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಒಬ್ಬರಾದರೆ, ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಮತ್ತೊಬ್ಬರು.
ಅಂದ ಹಾಗೆ, ಈ ಇಬ್ಬರು ನಾಯಕರಿಗೆ ಮೋದಿಯವರು ಟಾಸ್ಟ್ ಕೊಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರಣ. “ಈ ವರ್ಷದ ಕೊನೆಯ ವೇಳೆಗೆ ಕರ್ನಾಟಕದಲ್ಲಿ ರಾಜಕೀಯ ಸಂಘರ್ಷ ತಾರಕಕ್ಕೇರಲಿದೆ. ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆಯ ಸಮರ ವಿಕೋಪಕ್ಕೆ ಹೋಗುವುದರಿಂದ ಕೈ ಪಾಳಯ ಅಕ್ಷರಶಃ ಒಡೆದು ಹೋಗಲಿದೆ.
ನಮಗಿರುವ ಮಾಹಿತಿಯ ಪ್ರಕಾರ ಸಿಎಂ ಸಿದ್ದರಾಮಯ್ಯ ಅವರು ಯಾವ ಕಾರಣಕ್ಕೂ ಅಧಿಕಾರ ಬಿಟ್ಟುಕೊಡುವುದಿಲ್ಲ. ಹಾಗಾದಾಗ ಸಿದ್ದರಾಮಯ್ಯ ಅವರ ವಿರುದ್ಧ ಒಂದು ಬಣ ತಿರುಗಿ ಬಿದ್ದು ಬಿಜೆಪಿಯ ಕಡೆ ನೋಡಲಿದೆ. ಹೀಗಾಗಿ ಈ ಸನ್ನಿವೇಶವನ್ನು ಎನ್‌ಕ್ಯಾಶ್ ಮಾಡಿಕೊಳ್ಳಲು ಬಿಜೆಪಿಗೆ ಸಾಧ್ಯವಿದೆ. ಆದರೆ ಈ ಬಗ್ಗೆ ರಾಜ್ಯದ ಬಿಜೆಪಿ ನಾಯಕರಿಂದಲೇ ವಸ್ತುಸ್ಥಿತಿಯ ವರದಿ ಪಡೆಯಬೇಕು" ಎಂದು ಅಮಿತ್ ಶಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಳಿದ್ದರಂತೆ.
ಹೀಗೆ ಅಮಿತ್ ಶಾ ಅವರು ಹೇಳಿದ ವಿಷಯವನ್ನು ಮನಸ್ಸಿನಲ್ಲಿಟ್ಟುಕೊಂಡ ನರೇಂದ್ರ ಮೋದಿ ಯವರು ಇಂಥ ವರದಿ ನೀಡಲು ಸೂಕ್ತ ನಾಯಕರು ಯಾರು ಅಂತ ಗಮನಿಸಿದ್ದಾರೆ. ಅಂತಿಮವಾಗಿ ಈ ಕಾರ್ಯಕ್ಕೆ, ತಮ್ಮ ಸಂಪುಟ ಸಹೋದ್ಯೋಗಿಯಾಗಿರುವ ಪ್ರಲ್ಹಾದ್ ಜೋಷಿ ಮತ್ತು ಮಾಜಿ ಸಿಎಂ ಡಿ.ವಿ.ಸದಾನಂದಗೌಡರನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: R T Vittalmurthy Column: ಬರಲಿದ್ದಾರೆಯೇ ಸಿದ್ದು ಸಂಪುಟಕ್ಕೆ ಹೊಸ ಸೇನಾನಿ ?
ಅಂದ ಹಾಗೆ, ಪ್ರಲ್ಹಾದ್ ಜೋಷಿ ಮತ್ತು ಡಿ.ವಿ.ಸದಾನಂದಗೌಡ ಅವರು ರಾಜ್ಯ ಬಿಜೆಪಿಯ ತಟಸ್ಥ ಬಣದಲ್ಲಿರುವವರು. ಅರ್ಥಾತ್, ಕರ್ನಾಟಕ ಬಿಜೆಪಿಯಲ್ಲಿ ನಡೆಯುತ್ತಿರುವ ಸಂಘರ್ಷಗಳಿಂದ ದೂರ ಇರುವವರು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಅವರ ವಿರೋಧಿ ಬಣದ ನಡುವೆ ಸಂಘರ್ಷ ವಿಕೋಪಕ್ಕೆ ಹೋದಾಗಲೆಲ್ಲ “ಇದರಲ್ಲಿ ಪ್ರಲ್ಹಾದ್ ಜೋಷಿ ಅವರ ಆಟ ಇದೆ ಕಣ್ರೀ. ವಿಜಯೇಂದ್ರ ವಿರೋಧಿ ಪಡೆಯ ನಾಯಕರಿಗೆ ತೆರೆಯ ಹಿಂದೆ ಶಕ್ತಿ ತುಂಬುತ್ತಿರುವವರೇ ಅವರು" ಅಂತ ಯಡಿಯೂರಪ್ಪ ಕ್ಯಾಂಪಿನ ಕೆಲ ನಾಯಕರು ಅಲ್ಲಲ್ಲಿ ಪಿಸುಗುಡುವುದು ಇದೆಯಾದರೂ ಅದಕ್ಕೆ ಫೋರ್ಸು ಇಲ್ಲ.
ಇನ್ನು, ಡಿ.ವಿ.ಸದಾನಂದಗೌಡರಾದರೂ ಅಷ್ಟೇ. ಪಕ್ಷದಲ್ಲಿ ಆಂತರಿಕ ಕಚ್ಚಾಟ ಉಲ್ಬಣವಾದಾಗ ಲೆಲ್ಲ ಇದಕ್ಕೇನು ಕಾರಣ? ಅಂತ ವರಿಷ್ಠರಿಗೆ ಸ್ಪಷ್ಟ ವರದಿಗಳನ್ನು ಕೊಡುತ್ತಾ ಬಂದಿದ್ದಾರೆ. ಇದೆಲ್ಲದರಷ್ಟೇ ಮುಖ್ಯವಾಗಿ ಪ್ರಲ್ಹಾದ್ ಜೋಷಿ ಮತ್ತು ಡಿ.ವಿ.ಸದಾನಂದಗೌಡರಿಗೆ ಹಿರಿತನವಿದೆ. ಕರ್ನಾಟಕದ ರಾಜಕಾರಣವನ್ನು ಅಳೆದು-ತೂಗಿ, ಅದರ ದಿಕ್ಕು ಯಾವ ಕಡೆ ಸಾಗುತ್ತಿದೆ ಅಂತ ಹೇಳುವ ಜಾಣ್ಮೆ ಇದೆ.
ಹೀಗಾಗಿ ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು ಈ ಇಬ್ಬರು ನಾಯಕರಿಗೆ ಆ ಜವಾಬ್ದಾರಿ ವಹಿಸಲು ನಿರ್ಧರಿಸಿದ್ದಾರೆ. ಅರ್ಥಾತ್, ಈ ವರ್ಷಾಂತ್ಯದ ಹೊತ್ತಿಗೆ ಕರ್ನಾಟಕದ ರಾಜಕಾರಣದಲ್ಲಿ ಸಂಭವಿಸಲಿರುವ ವಿಪ್ಲವ ಮತ್ತು ಈ ಸನ್ನಿವೇಶವನ್ನು ಬಿಜೆಪಿ ಎನ್‌ಕ್ಯಾಶ್ ಮಾಡಿಕೊಳ್ಳುವ ಸಾಧ್ಯತೆ ಹಾಗೂ ಪರಿಣಾಮಗಳ ಬಗ್ಗೆ ವಿವರ ಕೇಳಲು ಸೂಚಿಸಿದ್ದಾರೆ.
ಯಾವಾಗ ಪ್ರಧಾನಿ ಮೋದಿಯವರಿಂದ ಈ ಸೂಚನೆ ಸಿಕ್ಕಿತೋ, ಪ್ರಲ್ಹಾದ್ ಜೋಷಿ ಮತ್ತು ಡಿ.ವಿ.ಸದಾನಂದ ಗೌಡರು ಕರ್ನಾಟಕದ ರಾಜಕೀಯ ವಿದ್ಯಮಾನಗಳ ಬಗ್ಗೆ ಒಂದು ಕೂಲಂಕಷ ವರದಿ ತಯಾರಿಸಿದ್ದಾರೆ. ಮೂಲಗಳ ಪ್ರಕಾರ, ‘ಅಧಿಕಾರ ಹಸ್ತಾಂತರದ ಗೊಂದಲದಿಂದ ಒಂದು ಬಣ ಕಾಂಗ್ರೆಸ್ ತೊರೆದು ಬಿಜೆಪಿ ಕಡೆ ಬರಲು ಸಿದ್ಧವಾದರೂ, ನಾವು ಆಸರೆ ನೀಡದಿರುವುದು ಒಳ್ಳೆಯದು. ಯಾಕೆಂದರೆ ಸಿದ್ದರಾಮಯ್ಯ ಅಧಿಕಾರ ಹಸ್ತಾಂತರಿಸಲಿಲ್ಲ ಎಂಬ ಕಾರಣಕ್ಕೆ ಮುನಿಸಿಕೊಂಡು ಬರುವ ಗುಂಪಿಗೆ ನಾವು ಆಸರೆ ನೀಡಿದರೆ ಈಗಾಗಲೇ ನಮ್ಮ ಜತೆ ಮೈತ್ರಿ ಸಾಧಿಸಿ ರುವ ಜೆಡಿಎಸ್ ಪಕ್ಷ ನಮ್ಮಿಂದ ದೂರ ಸರಿಯಬಹುದು.
ಇವತ್ತು ಕರ್ನಾಟಕದಲ್ಲಿ ಒಕ್ಕಲಿಗ ಮತಬ್ಯಾಂಕಿನ ಮೇಲೆ ಬಲವಾದ ಹಿಡಿತ ಹೊಂದಿರುವ ಜೆಡಿಎಸ್ ನಮ್ಮಿಂದ ದೂರ ಸರಿದರೆ ಅಗುವ ನಷ್ಟವನ್ನು ತುಂಬಿಕೊಡಲು ಕಾಂಗ್ರೆಸ್‌ನಿಂದ ಹೊರ ಬರುವ ಬಣಕ್ಕೆ ಸಾಧ್ಯವಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಇವತ್ತು ಚುನಾವಣೆಗೆ ಹೋದರೂ ನೂರೈವತ್ತು ಸೀಟು ಗೆಲ್ಲುವುದು ಗ್ಯಾರಂಟಿ.
ಹೀಗಾಗಿ ಸಿದ್ದರಾಮಯ್ಯ ಅಧಿಕಾರ ಹಸ್ತಾಂತರ ಮಾಡುವುದಿಲ್ಲ ಎಂಬ ಕಾರಣಕ್ಕಾಗಿ ಕಾಂಗ್ರೆಸ್‌ನಲ್ಲಿ ಸಂಘರ್ಷ ಶುರುವಾದರೆ ನಾವು ಮಧ್ಯೆ ಪ್ರವೇಶಿಸದೆ ಸುಮ್ಮನಿದ್ದರೆ ಸಾಕು’ ಎಂಬುದು ಪ್ರಲ್ಹಾದ್ ಜೋಷಿ ಮತ್ತು ಡಿ.ವಿ.ಸದಾನಂದಗೌಡರು ನೀಡಿರುವ ವರದಿ. ಹೀಗೆ ಈ ಇಬ್ಬರು ನಾಯಕರು ಕಳಿಸಿದ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಮೋದಿ ಮತ್ತು ಅಮಿತ್ ಶಾ ಜೋಡಿ, ಸದ್ಯಕ್ಕೆ ಕರ್ನಾಟಕ ಬಿಜೆಪಿಯ ಗೊಂದಲವನ್ನು ಪರಿಹರಿಸಿಕೊಳ್ಳೋಣ. ಮುಂದೇನಾಗುತ್ತದೋ ನೋಡೋ ಣ ಎಂಬ ತೀರ್ಮಾನಕ್ಕೆ ಬಂದಿದೆಯಲ್ಲದೆ, ಬಿಜೆಪಿ ಬಣಗಳ ಮಧ್ಯೆ ಸಾಮರಸ್ಯ ಮೂಡಿಸುವ ಜವಾಬ್ದಾರಿಯನ್ನೂ ಪ್ರಲ್ಹಾದ್ ಜೋಷಿ ಮತ್ತು ಡಿ.ವಿ.ಸದಾನಂದಗೌಡರ ಹೆಗಲಿಗೇರಿಸಿದೆ.
ರಾಹುಲ್ ಕಿವಿಗೆ ಸಿದ್ದು ಸಂದೇಶ?
ಇನ್ನು, ಪಕ್ಷದ ವರಿಷ್ಠರು ತಮಗೆ ಪದೇ ಪದೆ ಅಡ್ಡಗಾಲು ಹಾಕುತ್ತಿರುವ ಬೆಳವಣಿಗೆಯಿಂದ ಕ್ರುದ್ಧರಾದ ಸಿಎಂ ಸಿದ್ದರಾಮಯ್ಯ ದಿಲ್ಲಿಗೆ ಹೋಗಿ ಬಂದರಲ್ಲ? ಇದಾದ ನಂತರ ‘ರಫ್ ಆಂಡ್ ಟಫ್’ ಆಗಿರುವ ಅವರು ಕರ್ನಾಟಕದಲ್ಲಿ ನಾಯಕತ್ವದ ಪ್ರಶ್ನೆ ಪದೇ ಪದೆ ಮೇಲೇಳಬಾರದು ಅಂತ ವರಿಷ್ಠರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರಂತೆ. ಮೂಲಗಳ ಪ್ರಕಾರ, ಸಿದ್ದರಾಮಯ್ಯ ದಿಲ್ಲಿಗೆ ಹೋಗುವ ಮುನ್ನ ಪಕ್ಷದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಅಧಿಕಾರ ಹಸ್ತಾಂತರದ ಬಗ್ಗೆ ಸಿದ್ದರಾಮಯ್ಯ ಅವರ ಬಳಿ ಪ್ರಸ್ತಾಪಿಸಿದ್ದಾರೆ.
ವರಿಷ್ಠರ ಯೋಚನೆಯ ಬಗ್ಗೆ ವಿವರಿಸಿದ್ದಾರೆ. ಅದರೆ ಸುರ್ಜೇವಾಲ ಮಾತಿಗೆ ತಪ್ಪಿಯೂ ಪ್ರತಿಕ್ರಿಯಿಸದ ಸಿದ್ದರಾಮಯ್ಯ ಅವರು ತದನಂತರ ರಾಹುಲ್ ಗಾಂಧಿ ಅವರ ಬಳಿ ಮಾತನಾಡಿ ದ್ದಾರೆ. ಐದು ವರ್ಷದ ಅಧಿಕಾರಾವಧಿಯನ್ನು ಪೂರೈಸಲು ಬಿಡಿ. ಅಲ್ಲಿಯವರೆಗೆ ನಾಯಕತ್ವದ ಬಗ್ಗೆ ಚರ್ಚೆ ಮಾಡುವುದು ಬೇಡ ಅಂತ ಅವರು ಹೇಳಿದ ಮೇಲೆ ಎಐಸಿಸಿ ಮಟ್ಟದಲ್ಲೀಗ ಮೌನ ನೆಲೆಸಿದೆ ಎಂಬುದು ದಿಲ್ಲಿ ಮೂಲಗಳ ಹೇಳಿಕೆ.
ಹೀಗೆ ಒಂದು ಕಡೆ ದಿಲ್ಲಿಯ ಕಾಂಗ್ರೆಸ್ ಪಾಳಯದಲ್ಲಿ ಮೌನ ನೆಲೆಸಿದ ಕಾಲಕ್ಕೆ ಸರಿಯಾಗಿ ಸಿದ್ದರಾಮಯ್ಯ ಇಲ್ಲಿ ಟಫ್ ಆಗಿ ಮಾತನಾಡತೊಡಗಿದ್ದಾರೆ. ಕಳೆದ ವಾರ ನಂದಿ ಬೆಟ್ಟದಲ್ಲಿ ನಡೆದ ಸಂಪುಟ ಸಭೆಗೂ ಮುನ್ನ, ‘ನಾನೇ ಐದು ವರ್ಷ ಸಿಎಂ’ ಅಂತ ಅವರು ಗುಡುಗಿದ್ದೇ ಇದಕ್ಕೆ ಸಾಕ್ಷಿ. ಅವರ ಆಪ್ತರ ಪ್ರಕಾರ, ನಾಯಕತ್ವದ ವಿಷಯದಲ್ಲಿ ಇನ್ನು ಚರ್ಚೆಗೆ ಅವಕಾಶ ನೀಡಲು ಸಿದ್ದರಾಮಯ್ಯ ಸಿದ್ಧರಿಲ್ಲ. ಹೀಗಾಗಿ ಅಧಿಕಾರ ಹಸ್ತಾಂತರದ ಮಾತು ರಿಪೀಟ್ ಆದರೆ ನಿರ್ಣಾಯಕ ಸಂಘರ್ಷಕ್ಕಿಳಿಯಲು ಅವರು ಸಜ್ಜಾಗಿ ನಿಂತಿದ್ದಾರೆ.
ರೆಡಿ ಆಗುತ್ತಿದೆಯಾ ಸುರ್ಜೇವಾಲ ರಿಪೋರ್ಟು?
ಈ ಮಧ್ಯೆ ಪಕ್ಷದ ಶಾಸಕರ ಅಹವಾಲನ್ನು ಕೇಳಲು ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ಪುನಃ ಕರ್ನಾಟಕಕ್ಕೆ ಬರುತ್ತಿದ್ದಾರಲ್ಲ? ಈ ಬೆಳವಣಿಗೆ ಸಿಎಂ ಸಿದ್ದರಾಮಯ್ಯ ಅವರ ಪಾಳಯದಲ್ಲಿ ಅನುಮಾನ ಮೂಡಿಸಿದೆ. ಕಾರಣ? ಶಾಸಕರ ಕುಂದು-ಕೊರತೆಗಳ ಬಗ್ಗೆ ಮಾತನಾಡುವ ನೆಪದಲ್ಲಿ, ಇವರೆಲ್ಲ ನಾಯಕತ್ವದ ಬಗ್ಗೆ ಅಸಮಾಧಾನಿತರು ಎಂದು ಪ್ರತಿಬಿಂಬಿಸುವ ಸುರ್ಜೇವಾಲರ ತಂತ್ರವಿದು ಎಂಬುದು ಸಿದ್ದರಾಮಯ್ಯ ಬಣದ ಶಂಕೆ.
ಅಂದ ಹಾಗೆ, ಹೀಗೆ ಸುರ್ಜೇವಾಲ ಸಭೆ ನಡೆಸುವಾಗ ‘ಒನ್-ಟು-ಒನ್’ ಮಾತನಾಡುವ ಬಹುತೇಕ ಶಾಸಕರು ಸಹಜವಾಗಿಯೇ ತಮಗೆ ಹೆಚ್ಚಿನ ಅನುದಾನ ಸಿಗುತ್ತಿಲ್ಲ ಎಂದು ಹೇಳಿಯೇ ಹೇಳುತ್ತಾರೆ. ಅದೇ ಕಾಲಕ್ಕೆ ನಿಗದಿ ಮಾಡಿದ ಶಾಸಕರು ಹೋಗಿ ಸಿಎಂ ಬದಲಾವಣೆ ಆಗಬೇಕು ಅಂತ ಬೇಡಿಕೆ ಮಂಡಿಸುತ್ತಾರೆ. ಅಂದ ಹಾಗೆ, ಇದು ನಾಯಕತ್ವದ ಬಗ್ಗೆ ಅಭಿಪ್ರಾಯ ಸಂಗ್ರಹಿಸುವ ಸಭೆಯೇನೂ ಅಲ್ಲ. ಹೀಗಾಗಿ ಸುರ್ಜೇವಾಲರನ್ನು ಭೇಟಿ ಮಾಡುವ ಬಹುತೇಕರು ತಮ್ಮ ಕೊರತೆಯನ್ನು ಹೇಳಲು ಮಾತ್ರ ಲಿಮಿಟ್ ಅಗುತ್ತಾರೆ. ಅದರೆ ನಾಳೆ ಇದನ್ನೇ, ಶಾಸಕರು ಅಸಮಾಧಾನಗೊಂಡಿದ್ದಾರೆ. ನಾಯಕತ್ವ ಬದಲಾವಣೆಯನ್ನು ಬಯಸಿದ್ದಾರೆ ಅಂತ ಸುರ್ಜೇವಾಲ ಪ್ರತಿಬಿಂಬಿಸಿದರೆ? ಎಂಬುದು ಈ ಕ್ಯಾಂಪಿನ ಅನುಮಾನ.
ಹೀಗಾಗಿಯೇ ಈ ಕ್ಯಾಂಪಿನ ಕೆಲ ಶಾಸಕರು ಹಿರಿಯ ಸಚಿವರೊಬ್ಬರ ಬಳಿ ತಮ್ಮ ಅನುಮಾನ ವ್ಯಕ್ತಪಡಿಸಿದಾಗ, “ಅಯ್ಯೋ ಅವೆಲ್ಲ ನಡಿಯಲ್ಲ ಬಿಡ್ರೀ. ಇವತ್ತು ಸರಕಾರದ ಆರ್ಥಿಕ ಪರಿಸ್ಥಿತಿ ಹೇಗಿದೆ? ಹಿಂದಿದ್ದ ಬಿಜೆಪಿ ಸರಕಾರ ನಮ್ಮ ಮೇಲೆ ಹೊರೆ ಹೇರಿ ಹೋಗಿದೆ. ಇನ್ನು ಕುಮಾರಸ್ವಾಮಿ ಮಾಡಿದ ರೈತರ ಸಾಲ ಮನ್ನಾದ ಬಾಬ್ತು ಎಂಟು ಸಾವಿರ ಕೋಟಿ ರುಪಾಯಿ ಬಾಕಿ ಇದೆ. ಅದೇ ರೀತಿ ಗ್ಯಾರಂಟಿ ಯೋಜನೆಗಳಿಗೆ ಎಷ್ಟು ಹಣ ಕೊಡಬೇಕು? ಹೀಗೆ ಎಲ್ಲ ಕಡೆಯಿಂದ ಸರಕಾರದ ಮೇಲಿರುವ ಹೊರೆಯ ಬಗ್ಗೆ ವರಿಷ್ಠರಿಗೇ ಗೊತ್ತಿದೆ. ಇದರ ಮಧ್ಯೆಯೇ ಶಾಸಕರಿಗೆ ಸಾಧ್ಯವಾದಷ್ಟು ಅನುದಾನ ಕೊಡಲಾಗುತ್ತಿದೆ. ಇಷ್ಟಾದ ಮೇಲೂ ಶಾಸಕರಿಗೆ ಅಸಮಾಧಾನವಿದೆ ಅಂತಲೋ, ನಾಯಕತ್ವ ಬದಲಾವಣೆ ಅಗಬೇಕು ಅಂತಲೋ ವರದಿ ಕೊಟ್ಟರೆ ವರಿಷ್ಠರಿಗೆ ಗೊತ್ತಾಗಲ್ವಾ? ಎಲ್ಲರಿಗಿಂತ ಮುಖ್ಯವಾಗಿ ಖರ್ಗೆಯವರಿಗೇ ಇಲ್ಲಿನ ವಿಷಯ ಗೊತ್ತಿರುವಾಗ ಸುರ್ಜೇವಾಲ ರಿಪೋರ್ಟು ತಗೊಂಡು ಏನು ಮಾಡ್ತಾರೆ?" ಅಂತ ಕೇಳಿದರಂತೆ.
ಹೀಗೆ ಸುರ್ಜೇವಾಲ ಅವರ ಬಗ್ಗೆ ಸಿದ್ದರಾಮಯ್ಯ ಪಡೆಯ ಹಿರಿಯ ಸಚಿವರು ನಿರಾತಂಕವಾಗಿ ದ್ದರೂ ಉಳಿದವರು ಮಾತ್ರ ಸುರ್ಜೇವಾಲ ಹೆಜ್ಜೆಗಳ ಮೇಲೆ ಹದ್ದುಗಣ್ಣಿಟ್ಟೇ ಕುಳಿತುಕೊಂಡಿದ್ದಾರೆ. ಹೀಗಾಗಿ ಈ ವಾರ ಶಾಸಕರ ಕುಂದುಕೊರತೆ ಆಲಿಸಲು ಅಂತ ರಾಜ್ಯಕ್ಕೆ ಬರುತ್ತಿರುವ ಸುರ್ಜೇವಾಲ ಉಲ್ಟಾ ವರದಿಯ ಸುಳಿವೇನಾದರೂ ಕೊಟ್ಟರೋ? ಆಗ ರಪ್ಪಂತ ತಿರುಗಿ ಬೀಳಲು ನಿರ್ಧರಿಸಿದ್ದಾರೆ.
ಕೆಪಿಸಿಸಿ ಪಟ್ಟಕ್ಕೆ ಜಾರಕಿ ಏಕೆ ಬೇಕು?
ಇನ್ನು, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ತರಬೇಕು ಅಂತ ಸಿಎಂ ಸಿದ್ದರಾಮಯ್ಯ ಪಕ್ಷದ ವರಿಷ್ಠರಿಗೆ ಹೇಳಿ ಬಂದಿದ್ದರಲ್ಲ? ಅದಕ್ಕೆ ಪೂರಕವಾಗಿ ಜಾರಕಿಹೊಳಿ ‘ಮಾಸ್ ಲೀಡರ್’ ಅಂತ ಪ್ರತಿಬಿಂಬಿಸಲು ಅವರ ಟೀಮು ಸಜ್ಜಾಗಿದೆ. ಅರ್ಥಾತ್, ಕರ್ನಾಟಕದ ವಾಲ್ಮೀಕಿ ಮತಬ್ಯಾಂಕಿಗೆ ಸತೀಶ್ ಜಾರಕಿಹೊಳಿ ‘ಟಾಪೆಸ್ಟ್ ಲೀಡರು’ ಅಂತ ತೋರಿಸುವುದು ಅದರ ಲೆಕ್ಕಾಚಾರ.
ಇವತ್ತು ರಾಯಚೂರು, ಕೊಪ್ಪಳ, ಬಳ್ಳಾರಿ, ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಪ್ರಭಾವಿಯಾಗಿರುವ ವಾಲ್ಮೀಕಿ ಮತಬ್ಯಾಂಕು, ಹಳೆ ಮೈಸೂರಿನ ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಸಾಲಿಡ್ಡು ಶಕ್ತಿ ಹೊಂದಿದೆ. ಇದೇ ರೀತಿ ಚಿತ್ರದುರ್ಗ, ತುಮಕೂರು, ಕೋಲಾರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ತಕ್ಕಮಟ್ಟಿಗೆ ಪವರ್ ಹೊಂದಿರುವ ವಾಲ್ಮೀಕಿ ಸಮುದಾಯ ಇನ್ನು ಸತೀಶ್ ಸಿಗ್ನಲ್ಲಿಗೆ ಕಾದು ರಾಜಕೀಯ ಹೆಜ್ಜೆ ಇಡಲಿದೆ ಎಂಬ ವಾತಾವರಣ ನಿರ್ಮಿಸುವುದು ಸಿದ್ದು ಗ್ಯಾಂಗಿನ ಬಯಕೆ.
ಹೀಗೆ ಒಂದು ಸಲ ಅವರು ಸಮುದಾಯದ ನಿರ್ವಿವಾದ ನಾಯಕರಾಗಿ ಹೊರಹೊಮ್ಮಿದರೆ ಒಂದು ಡೆಡ್ಲಿ ಕಾಂಬಿನೇಷನ್ ಬಗ್ಗೆ ವರಿಷ್ಠರು ಕನ್ವಿನ್ಸ್ ಅಗುವಂತೆ ಮಾಡಬಹುದು. ಅದೆಂದರೆ ಕುರುಬ ಪ್ಲಸ್ ನಾಯಕ ಕಾಂಬಿನೇಶನ್. ಇವತ್ತು ಕರ್ನಾಟಕದಲ್ಲಿ ಕುರುಬ ಸಮುದಾಯದಷ್ಟೇ ಜನಸಂಖ್ಯೆ ಇರುವ ನಾಯಕ ಸಮುದಾಯದಲ್ಲಿ ರಾಜಕೀಯ ಪ್ರಜ್ಞೆ ತೀವ್ರವಾಗಿ ಬೆಳೆಯುತ್ತಿದೆ. ಹೀಗಾಗಿ ಈ ಎರಡು ಮತ ಬ್ಯಾಂಕುಗಳು ಸಾಲಿಡ್ಡಾಗಿ ಸೇರಿದರೆ ನೂರಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಭುಜ ಬಲಿಷ್ಠ ವಾಗಲಿದೆ ಅಂತ ವರಿಷ್ಠರಿಗೆ ಕನ್ವಿನ್ಸ್ ಮಾಡುವುದು ಸಿದ್ದು ಟೀಮಿನ ಲೆಕ್ಕಾಚಾರ.