Dr Sadhanashree Column: ವೈದ್ಯನು ನಾರಾಯಣನಾಗುವ ಬಗೆ ಹೇಗೆ ?
ರೋಗಿಗಳ ಕಾಯಿಲೆಗಳನ್ನು ಮತ್ತು ನೋವನ್ನು ಶಮನ ಮಾಡುವವ ‘ವೈದ್ಯ’. ಅವನು ಲೋಕಕ್ಕೆ ನೀತಿಯನ್ನು ಬೋಧಿಸುತ್ತಾನೆ. ನಮ್ಮ ಸನಾತನ ಪರಂಪರೆಯು ಒಬ್ಬ ವೈದ್ಯ ಹೇಗಿರಬೇಕು ಎಂಬ ಪ್ರಶ್ನೆಗೆ ‘ಆದಿದೇವ ಧನ್ವಂತರಿ’ ಮತ್ತು ‘ಅಶ್ವಿನಿ ದೇವತೆ’ಗಳ ಆದರ್ಶವನ್ನು ನಮ್ಮ ಮುಂದಿಟ್ಟಿದೆ.


ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ
ನಮ್ಮದೊಂದು ಚಾರಿಟಬಲ್ ಸಂಸ್ಥೆ. ಈ ಸಂಸ್ಥೆಯ ನೇತೃತ್ವದಲ್ಲಿ ನಾವು ಕಣ್ವ ಜಲಾಶಯ ಸಮೀಪವಿರುವ ಕನ್ನಮಂಗಲ ಹಳ್ಳಿಯಲ್ಲಿ ‘ಸಾಧನ ವಿದ್ಯಾಲಯ’ ಎಂಬ ಶಾಲೆಯನ್ನು ಸ್ಥಾಪಿಸಿ ದ್ದೇವೆ. ಸುತ್ತಮುತ್ತಲಿನ ಗ್ರಾಮೀಣ ಮಕ್ಕಳಿಗೆ ಸಂಸ್ಕಾರಭರಿತವಾದ ಶಿಕ್ಷಣವನ್ನು ನೀಡುವ ಸದುದ್ದೇಶದೊಂದಿಗೆ ಈ ಶಾಲೆಯ ಪ್ರಾರಂಭವಾಯಿತು.
ಇದೇ ಶಾಲೆಯಲ್ಲಿ ನಾವು ಪ್ರತಿ ತಿಂಗಳು ಉಚಿತ ಆಯುರ್ವೇದ ಆರೋಗ್ಯ ಶಿಬಿರಗಳನ್ನು ಕಳೆದ ಎರಡು ವರ್ಷಗಳಿಂದ ಸತತವಾಗಿ ನಡೆಸಿಕೊಂಡು ಬಂದಿದ್ದೇವೆ. ನುರಿತ ತಜ್ಞರ ಉಪನ್ಯಾಸಗಳ ಮೂಲಕ ಅಲ್ಲಿನ ಹಳ್ಳಿ ಜನರಿಗೆ ಆರೋಗ್ಯ ಶಿಕ್ಷಣವನ್ನು ನೀಡಿ, ಉತ್ತಮ ವೈದ್ಯರ ತಪಾಸಣೆಯ ಸೌಲಭ್ಯವನ್ನು ಕಲ್ಪಿಸಿ, ಗುಣಮಟ್ಟದ ಆಯುರ್ವೇದ ಔಷಧಿಗಳನ್ನ ಬಡ ಜನರಿಗೆ ತಲುಪಿಸಲು ಈ ಕೈಂಕರ್ಯ.
ಕೆಲವು ತಿಂಗಳ ಹಿಂದಿನ ಈ ಆಯುರ್ವೇದ ಶಿಬಿರದಲ್ಲಿ ನಡೆದ ಒಂದು ಘಟನೆಯನ್ನು ನಿಮ್ಮ ಜತೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಓರ್ವ ಬೆನ್ನು ಬಾಗಿದ ಹಿರಿಯ ಹೆಂಗಸು ನಮ್ಮ ಕ್ಯಾಂಪಿಗೆ ಬಂದಿದ್ದರು. ಇಬ್ಬರು ವೈದ್ಯರನ್ನು ಭೇಟಿ ಮಾಡಿ ಅವರ ಸಲಹೆ ಪಡೆದು ಮತ್ತೆ ನನ್ನ ಬಳಿಯೂ ಬಂದರು. ಅವರದ್ದು ಚಿರಪರಿಚಿತ ಮುಖ.
ಇದನ್ನೂ ಓದಿ: Dr Sadhanashree Column: ನಿಮಗೆ ಸಂಧಿರೋಗ ಯಾಕೆ ಬಂತು ಗೊತ್ತೇ ?
ಕಾರಣ ಪ್ರತಿ ತಿಂಗಳು ಅವರು ಕ್ಯಾಂಪಿಗೆ ತಪ್ಪದೇ ಭೇಟಿ ನೀಡುತ್ತಿದ್ದರು. ಅವರು ನನ್ನ ಬಳಿ ಬಂದ ಕೂಡಲೇ ನನ್ನ ಸಹಜವಾದ ಪ್ರಶ್ನೆ- “ಹೇಗಿದ್ದೀರಾ?" ಎಂದಿತ್ತು. ಅದಕ್ಕೆ ಅವರು, “ನಾನು ಕಳೆದ ಎಂಟು ತಿಂಗಳಿಂದ ಇಲ್ಲಿಗೆ ಬರುತ್ತಿದ್ದೇನೆ, ಆದರೆ ನಾನು ಯಾವುದೇ ಔಷಧಿಗಳನ್ನು ತೆಗೆದು ಕೊಳ್ಳುತ್ತಿಲ್ಲ. ಆದರೂ ನನ್ನ ಆರೋಗ್ಯ ಬಹಳ ಸುಧಾರಿಸಿದೆ.
ಮನಸ್ಸು ಎಷ್ಟೋ ಶಾಂತವಾಗಿದೆ. ಈಗ ಸಂತೋಷವಾಗಿದ್ದೇನೆ" ಎಂದು ನುಡಿದರು. ನನಗೆ ಆಶ್ಚರ್ಯವಾಯಿತು. “ಯಾವ ಔಷಧಿಯೂ ಇಲ್ಲದೆ ಗುಣವಾಗಿಬಿಟ್ರಾ? ಅದು ಹೇಗೆ?" ಎಂದು ಅವರನ್ನು ಮರುಪ್ರಶ್ನಿಸಿದೆ. ಅದಕ್ಕೆ ಅವರು ಹೀಗೆ ಹೇಳಿದರು- “ಇಲ್ಲಿ ಬರುವ ಎಲ್ಲಾ ವೈದ್ಯರು, ರೋಗಿಗಳನ್ನ ತಮ್ಮ ಅತ್ಯಂತ ಪ್ರಿಯ ಬಂಧುಗಳ ರೀತಿ ನಡೆಸಿಕೊಳ್ಳುತ್ತಾರೆ.
ಸದಾ ನಗುಮುಖದೊಂದಿಗೆ ಮಾತನಾಡಿಸುತ್ತಾರೆ. ಬಹಳ ಪ್ರೀತಿಯಿಂದ ತಪಾಸಣೆ ಮಾಡಿ ನಮ್ಮನ್ನು ವಿಚಾರಿಸಿಕೊಳ್ಳುತ್ತಾರೆ. ನಮ್ಮಲ್ಲಿರುವ ಎಲ್ಲಾ ದುಃಖಗಳನ್ನು ಹಂಚಿಕೊಳ್ಳಲು ಸಮಯ ಕೊಡುತ್ತಾರೆ. ಇದೇ ನನಗೆ ಬೇಕಾಗಿದ್ದ ಅತಿ ದೊಡ್ಡ ಔಷಧಿ. ನಿಮ್ಮ ಪ್ರೀತಿಯ ಮಾತುಗಳೇ ನನ್ನ ಆರೋಗ್ಯವನ್ನು ಬಹಳಷ್ಟು ಸುಧಾರಿಸಿದೆ. ಮನಸ್ಸಿನ ದುಃಖವನ್ನು ಕಡಿಮೆ ಮಾಡಿದೆ.

ದೇವರು ನಿಮ್ಮನ್ನೆಲ್ಲ ಕಾಪಾಡಲಿ" ಎಂದು ಆಶೀರ್ವದಿಸಿ ಹೊರಟೇ ಬಿಟ್ಟರು. ಆ ಘಟನೆ ನನ್ನ ಹೃದಯವನ್ನು ಸ್ಪರ್ಶಿಸಿತು. ವೈದ್ಯತ್ವದ ಅತ್ಯಂತ ಗಂಭೀರವಾದ ಪಾಠವನ್ನು ಆ ತಾಯಿ ನನಗೆ ಉಪದೇಶಿಸಿ ಹೋಗಿದ್ದರು. ವೈದ್ಯರೆಂದರೆ ಹೀಗಿರಬೇಕಪ್ಪ ಎಂಬ ಮಾದರಿಯನ್ನು ನಾಲ್ಕು ಜನರ ಬಳಿ ಹಂಚಿಕೊಂಡು ಅವರು ಆನಂದ ಪಡುತ್ತಿದ್ದ ದೃಶ್ಯ ಮನಸ್ಸು ಮುಟ್ಟಿತು.
ಸ್ನೇಹಿತರೇ, ರೋಗಿಗಳ ಕಾಯಿಲೆಗಳನ್ನು ಮತ್ತು ನೋವನ್ನು ಶಮನ ಮಾಡುವವ ‘ವೈದ್ಯ’. ಅವನು ಲೋಕಕ್ಕೆ ನೀತಿಯನ್ನು ಬೋಧಿಸುತ್ತಾನೆ. ಅಂತೆಯೇ, ಸ್ವತಃ ತಾನು ವೈದ್ಯನಾಗಿ ಹೇಗಿರಬೇಕು ಎಂಬುದು ಮುಖ್ಯ ವಿಷಯ, ಅಲ್ಲವೇ? ನಮ್ಮ ಸನಾತನ ಪರಂಪರೆಯು ಒಬ್ಬ ವೈದ್ಯ ಹೇಗಿರಬೇಕು ಎಂಬ ಪ್ರಶ್ನೆಗೆ ‘ಆದಿದೇವ ಧನ್ವಂತರಿ’ ಮತ್ತು ‘ಅಶ್ವಿನಿ ದೇವತೆ’ಗಳ ಆದರ್ಶವನ್ನು ನಮ್ಮ ಮುಂದಿ ಟ್ಟಿದೆ.
ಧನ್ವಂತರಿಯು ವಿಷ್ಣು ಸ್ವರೂಪಿಯಾದರೆ, ಅಶ್ವಿನಿ ದೇವತೆಗಳು ದೇವ ವೈದ್ಯರು. ತ್ರಿಲೋಕದಲ್ಲೂ ಸಂಚರಿಸಿ ಚಿಕಿತ್ಸೆ ನೀಡುವ ಮಾದರಿ ವೈದ್ಯರು. ಇಂಥ ದೈವಿಕ ಪರಂಪರೆಯಿಂದ ಬಂದ ಒಬ್ಬ ವೈದ್ಯನ ನಡೆ-ನುಡಿ ಹೇಗಿರಬೇಕು? ಇದರ ಕುರಿತು ಆಯುರ್ವೇದದಲ್ಲಿ ಏನಿದೆ? ರೋಗಿ ಬಂದಾಗ ತಪಾಸಣೆ ಮಾಡಿ ಕೇವಲ ಔಷಧಿಗಳನ್ನ ನೀಡುವುದಷ್ಟೇ ಕರ್ತವ್ಯವೇ? ವೈದ್ಯನ ಗುಣ -ಧರ್ಮ ಗಳೇನು? ಎಂಬ ವಿಷಯವನ್ನು ಇಂದಿನ ಈ ಸಂಚಿಕೆಯಲ್ಲಿ ನೀವು ಕಾಣಬಹುದು.
ಈ ವಿಷಯವನ್ನು ಆಯ್ದುಕೊಳ್ಳಲು ಒಂದು ವಿಶೇಷ ಕಾರಣವಿದೆ- ಜುಲೈ 1 ವೈದ್ಯರ ದಿನಾಚರಣೆ. ಅಂದು ಹಲವಾರು ವೈದ್ಯರನ್ನು ಸನ್ಮಾನಿಸಿ ವಿವಿಧ ರೀತಿಯ ಪ್ರಶಸ್ತಿಗಳನ್ನು ನೀಡಿರುವುದನ್ನು ಕಂಡಿದ್ದೇವೆ. ಹಾಗಾಗಿ, ಯಾವ ರೀತಿಯ ವೈದ್ಯರು ನಮ್ಮ ಈ ಅಭಿಮಾನಕ್ಕೆ ಮತ್ತು ಗೌರವಕ್ಕೆ ಅರ್ಹರು ಎಂದು ತಿಳಿದುಕೊಳ್ಳಲೇಬೇಕು!
ಆಯುರ್ವೇದವೆಂದರೆ ಕೇವಲ ವೈದ್ಯಕೀಯ ಪದ್ಧತಿಯಲ್ಲ. ಇದು ಜೀವವಿಜ್ಞಾನ. ಅತ್ಯುತ್ತಮವಾದ ಬದುಕನ್ನು ನಡೆಸಲು ಕಲಿಸುವ ಒಂದು ಬೆಳಕು. ಈ ಆರ್ಷವಿಜ್ಞಾನದಲ್ಲಿ ಇಲ್ಲದ ವಿಷಯವೇ ಇಲ್ಲ ಎಂದರೆ ತಪ್ಪಾಗದು. ಅಂತೆಯೇ, ವೈದ್ಯರ ಗುಣ-ಧರ್ಮಗಳ ಬಗ್ಗೆಯೂ ಇದರಲ್ಲಿ ನಿರ್ದೇಶನವನ್ನು ಕಾಣಬಹುದು. ಚಿಕಿತ್ಸೆಯು ಗುಣಕಾರಿ ಆಗಬೇಕಾದರೆ ವೈದ್ಯ, ಔಷಧ, ಪರಿಚಾರಕ ಮತ್ತು ರೋಗಿ- ಈ ನಾಲ್ಕು ಅಂಶಗಳು ಮುಖ್ಯ. ಅದರಲ್ಲೂ ವೈದ್ಯನ ಪಾತ್ರ ಅಪಾರವಾದದ್ದು. ವೈದ್ಯ ಗ್ರಂಥಗಳಲ್ಲಿ ವಿವರಿಸಿರುವ ವೈದ್ಯನ ಕುರಿತಾದ ಹಲವಾರು ವಿಷಯಗಳಲ್ಲಿ ಕೆಲವು ಪ್ರಮುಖವಾದವುಗಳನ್ನು ಇಲ್ಲಿ ತಿಳಿಸುತ್ತಿದ್ದೇನೆ.
ಒಬ್ಬ ವೈದ್ಯ ಸದಾ ಉತ್ತಮ ನಡತೆ ಉಳ್ಳವನಾಗಿರಬೇಕು. ಅವನ ಶುಚಿತ್ವ ಮತ್ತು ಪಾವಿತ್ರ್ಯ ಬಹಳ ಮುಖ್ಯ. ಈ ಬಗ್ಗೆ ಆಯುರ್ವೇದದಲ್ಲಿ ಹೀಗೆ ಹೇಳಲಾಗಿದೆ: ಶಸ್ತ್ರ ಶಾಸ್ತ್ರಾಣಿ ಸಲಿಲಂ ಗುಣದೋಷ ಪ್ರವೃತ್ತಯೇ | ಪಾತ್ರಾಪೇಕ್ಷಿಣೀ ಅತಃ ಪ್ರಜ್ಞಾಂ ಚಿಕಿತ್ಸಾರ್ಥಂ ವಿಶೋಧಯೇತ್ || (ಚ-ಸೂ-9/20). ಅಂದರೆ, ಶಸ್ತ್ರ, ಶಾಸ್ತ್ರ ಹಾಗೂ ನೀರು- ಈ ಮೂರೂ ಪಾತ್ರವನ್ನು ಅನುಸರಿಸಿ ಗುಣ ಅಥವಾ ದೋಷಗಳಾಗಿ ಪರಿವರ್ತಿತವಾಗುತ್ತವೆ.
ಗಂಗೆಯಂಥ ಪವಿತ್ರವಾದ ನೀರನ್ನು ತಂದುಬಿಟ್ಟರೆ ಏನು? ತರುವ ಪಾತ್ರೆಯು ಕೊಳಕಾಗಿದ್ದರೆ ಆ ಶುದ್ಧವಾದ ನೀರೆಲ್ಲ ಅಶುದ್ಧವಾಗಿ ವ್ಯರ್ಥವಾಗುವುದು. ಹಾಗಾಗಿ, ವೈದ್ಯನು ತಾನು ನೀಡುವ ಚಿಕಿತ್ಸೆಯು ಉತ್ತಮ ಫಲಿತಾಂಶವನ್ನು ನೀಡಬೇಕೆಂದರೆ ತನ್ನ ನಡತೆಯನ್ನು ಸದಾ ಶುದ್ದಿ ಗೊಳಿಸಿ ಕೊಳ್ಳುವ ಪ್ರಯತ್ನವನ್ನು ಮಾಡಿ ಉತ್ತಮ ವೈದ್ಯನಾಗಲು ಯೋಗ್ಯತೆಯನ್ನು ಹೆಚ್ಚಿಸಿಕೊಳ್ಳಬೇಕು.
ಒಬ್ಬ ವೈದ್ಯನು ಕಾಯಾ, ವಾಚಾ, ಮನಸಾ ಶುಭ್ರವಾಗಿದ್ದು ಪವಿತ್ರ ಚಾರಿತ್ರ್ಯವುಳ್ಳ ವ್ಯಕ್ತಿ ಯಾಗಿರಬೇಕು. ಅತ್ಯುನ್ನತ ಮಟ್ಟದ ಶಾಸ್ತ್ರ ಅಧ್ಯಯನವನ್ನು ಮಾಡಿರಬೇಕು. ಉತ್ತಮ ವೈದ್ಯನು ಒಬ್ಬ ಉತ್ತಮ ಗುರುವಿನಿಂದಲೇ ಶಾಸ್ತ್ರದ ಶಿಕ್ಷಣವನ್ನು ಪಡೆದು ಕಲಿತ ಜ್ಞಾನವನ್ನು ಪುನಃ ಪುನಃ ಅಧ್ಯಯನ ಮಾಡಿ, ಶಾಸ್ತ್ರ ಅರ್ಥವನ್ನು ಆಳವಾಗಿ ತಿಳಿದಿರಬೇಕು.
ಕರ್ಮಾಭ್ಯಾಸ ಅತ್ಯವಶ್ಯಕ. ಅಡುಗೆ ಮಾಡುವ ಬಗ್ಗೆ ಎಷ್ಟು ಪುಸ್ತಕ ಜ್ಞಾನವಿದ್ದರೇನು? ಅಡುಗೆ ಮಾಡಲು ನಿಂತಾಗಲೇ ಅದರ ಅಡ್ಡಿ-ಆತಂಕಗಳನ್ನು ಪರಿಹರಿಸಿಕೊಳ್ಳುವ ಬಗ್ಗೆ ಪ್ರತ್ಯಕ್ಷ ಜ್ಞಾನ ಸಿಗುತ್ತದೆ. ಅಂತೆಯೇ, ಉನ್ನತ ಶಾಸ್ತ್ರ ಜ್ಞಾನವನ್ನು ಪಡೆದ ವೈದ್ಯನು ಗುರುವಿನ ಮಾರ್ಗದರ್ಶನ ದಲ್ಲಿ ಸತತವಾಗಿ ಅದನ್ನು ಅಭ್ಯಾಸ ಮಾಡಿ ಅದರ ಪ್ರಾಯೋಗಿಕ ನೈಪುಣ್ಯವನ್ನು ಗಳಿಸಿರಬೇಕು.
ಆಯುರ್ವೇದದಲ್ಲಿ ಹೀಗೆ ಹೇಳಿದ್ದಾರೆ- ‘ಹೇಗೆ ಕುರುಡನಾದ ವ್ಯಕ್ತಿಯು ಓಡಾಡುವಾಗ ದಾರಿ ಕಾಣದೆ ತನ್ನ ಕೋಲು ಮತ್ತು ಕೈಕಾಲುಗಳನ್ನು ಆಚೆ ಈಚೆ ಬೀಸುತ್ತಾ ಭಯಭೀತನಾಗಿರುತ್ತಾನೋ, ಹಾಗೆಯೇ ಪ್ರತ್ಯಕ್ಷ ಅನುಭವವಿಲ್ಲದ ವೈದ್ಯನು ಚಿಕಿತ್ಸೆ ಕೊಡಲು ಆತ್ಮವಿಶ್ವಾಸವಿಲ್ಲದೆ ಹೆದರುತ್ತಾನೆ’ ಅಂತ. ಒಬ್ಬ ವೈದ್ಯನು ಇತರ ವೈದ್ಯರೊಂದಿಗೆ ಸದಾ ಶಾಸದ ಚರ್ಚೆಯನ್ನು ಮಾಡಬೇಕು, ಇದು ಜ್ಞಾನಕಾರಕ ಹಾಗೂ ತನ್ನ ತಪ್ಪನ್ನು ತಿದ್ದಿಕೊಳ್ಳಲು ಸಹಾಯಕ.
ಕಾರ್ಯ ದಕ್ಷತೆ ಒಬ್ಬ ವೈದ್ಯನಿಗಿರಬೇಕಾದ ಪ್ರಮುಖ ಗುಣ. ಯಾವುದೇ ಕೆಲಸವನ್ನು ಶ್ರೇಷ್ಠ ರೀತಿ ಯಲ್ಲಿ, ಶಿಸ್ತುಬದ್ಧವಾಗಿ ಸಮಯಕ್ಕೆ ಸರಿಯಾಗಿ ಸೌಹಾರ್ದಯುತವಾಗಿ ಚತುರತೆಯಿಂದ ತನ್ಮಯ ನಾಗಿ ಮಾಡುವ ಗುಣವೇ ದಕ್ಷತೆ. ರೋಗಿಯ ಪರೀಕ್ಷೆಯನ್ನು ಸರಿಯಾದ ರೀತಿಯಲ್ಲಿ ಮಾಡಿ, ಸಾಧ್ಯಾಸಾಧ್ಯತೆಯನ್ನು ಚೆನ್ನಾಗಿ ಆರಿತು ಚಿಕಿತ್ಸೆ ಮಾಡಬೇಕು.
ಒಬ್ಬ ವೈದ್ಯನು ರೋಗಿಯ ದೇಹಬಲ, ಸತ್ವ, ಪ್ರಕೃತಿ, ದೋಷಗಳ ಅವಸ್ಥೆ, ಪ್ರಮಾಣ ಇತ್ಯಾದಿ ಗಳನ್ನು ಚೆನ್ನಾಗಿ ಅರಿತ ನಂತರ ಸಾಧ್ಯವೇ ಎಂದು ನಿರ್ಧರಿಸಿ ನಂತರವೇ ಚಿಕಿತ್ಸೆ ಮಾಡತಕ್ಕದ್ದು. ಶಾಸಗಳು ಹೇಳುವ ಪ್ರಕಾರ ಅಸಾಧ್ಯ ವ್ಯಾಧಿಗಳಿಗೆ ಚಿಕಿತ್ಸೆ ಮಾಡಬಾರದು. ಮಾಡಿದರೆ ಅರ್ಥ, ವಿದ್ಯಾ ಮತ್ತು ಯಶಸ್ಸುಗಳ ಹಾನಿ ಉಂಟಾಗಬಹುದು.
‘ನಾರ್ಥಾಥಂ ನಾಪಿ ಕಾಮಾಥಂ ಅಥ ಭೂತದಯಾಂ ಪ್ರತಿ’ ಅಂದರೆ ದಯೆಯೇ ಚಿಕಿತ್ಸೆಯಲ್ಲಿ ಪ್ರಧಾನವಾಗಿರಬೇಕು. ಒಬ್ಬ ವೈದ್ಯನು ಚಿಕಿತ್ಸೆಯನ್ನು ಯಾವುದೇ ಸ್ವಾರ್ಥ, ಪ್ರತಿಫಲಗಳ ಆಸೆ, ಅರ್ಥಕ್ಕಾಗಲಿ ಅಥವಾ ಕಾಮಕ್ಕಾಗಲಿ ಮಾಡಬಾರದು. ಬದಲಿಗೆ ಕೇವಲ ದಯೆಯಿಂದ ಸಮಸ್ತ ಜೀವಿಗಳ ಸುಖಕ್ಕಾಗಿಯೇ ಚಿಕಿತ್ಸೆಯನ್ನು ಮಾಡಬೇಕು.
ಇಂಥ ಚಿಕಿತ್ಸೆಯನ್ನು ನೀಡಿದಾಗ ತಾನಾಗಿಯೇ ಬಂದ ಫಲವನ್ನು ಪಡೆಯಬಹುದೇ ಹೊರತಾಗಿ, ಧನಕ್ಕಾಗಿಯೇ ವಿಶೇಷ ಪ್ರವೃತ್ತಿ-ಪ್ರಯತ್ನವನ್ನುಮಾಡಬಾರದು. ಬಡವ ಬಲ್ಲಿದರನ್ನು ಸಮಾನ ರೀತಿಯಿಂದ ಚಿಕಿತ್ಸೆ ಮಾಡಬೇಕು. ಇದನ್ನು ಗುಣ ಮಾಡಿಯೇ ಮಾಡುತ್ತೇನೆ ಎಂದು ಹೇಳಬಾರದು. ಚಿಕಿತ್ಸೆಯ ಫಲಕ್ಕೆ ಕಾರಣ ಅನೇಕ.
ನೀಡಿದ ಚಿಕಿತ್ಸೆಯು ಕೆಲವೊಮ್ಮೆ ಔಷಧಿಯ ದೋಷದಿಂದ, ಕೆಲವೊಮ್ಮೆ ರೋಗಿಯ ಅಜಾಗರೂಕತೆಯಿಂದ, ಕಾಲದೋಷದಿಂದ ವಿಫಲವಾಗಬಹುದು. ಆದ್ದರಿಂದ, ‘ನಾನು ಇದನ್ನು ಗುಣಪಡಿಸಿಯೇ ತೀರುತ್ತೇನೆ’ ಎಂಬ ಅಹಂಕಾರದ ಮಾತುಗಳು ಸಲ್ಲದು. ಮರಣಾಸನ್ನ ರೋಗಿಯ ಸೂಚನೆಯನ್ನು ಒಬ್ಬ ವೈದ್ಯನು ತಿಳಿದರೂ ಅದನ್ನು ಹೇಳಬಾರದು.
ಹೇಳಲೇಬೇಕಾದ ಪ್ರಸಂಗ ಬಂದಲ್ಲಿ ಅದು ದೈವೇಚ್ಛೆ ಇದ್ದರೆ ಬದಲಾಗಬಹುದು ಎಂದು ಹೇಳ ಬೇಕಾಗುತ್ತದೆ. ಒಂದು ರೋಗವನ್ನು ಕಡಿಮೆ ಮಾಡಿ ಇನ್ನೊಂದು ರೋಗವನ್ನು ಉಂಟು ಮಾಡು ವುದು ಚಿಕಿತ್ಸೆಯಲ್ಲ. ಶರೀರದ ಯಾವ ಅವಯವಕ್ಕೂ ಹಾನಿ ಮಾಡದೆ ರೋಗಕಾರಣ ವನ್ನು ಹೊರ ಹಾಕಿ ಗುಣ ಮಾಡುವುದೇ ಸರಿಯಾದ ಚಿಕಿತ್ಸೆ. ಚಿಕಿತ್ಸೆ ಮಾಡುವಾಗ ಬೇರೆ ರೀತಿಯ ತೊಂದರೆಗಳು ಉದ್ಭವಿಸಿದರೆ ಅದು ವೈದ್ಯನ ತಪ್ಪೇ ಆಗುತ್ತದೆ ಒಬ್ಬ ವೈದ್ಯನು ಪ್ರತಿನಿತ್ಯವೂ ತಾನು ಮಾಡಿದ ಚಿಕಿತ್ಸೆಯನ್ನು ಪುನರವಲೋಕನ ಮಾಡಬೇಕು.
ಪುನರವಲೋಕನವು ಜ್ಞಾನದ ಸ್ಥಿರತೆಗೆ ಕಾರಣ ವಾಗುತ್ತದೆ. ಪ್ರತಿನಿತ್ಯ ಆದ ಅನುಭವ, ಕಲಿತ ಹೊಸಪಾಠ, ಮಾಡಿದ ಚಿಕಿತ್ಸೆ, ತಪ್ಪು-ಒಪ್ಪುಗಳನ್ನು ಸ್ಮರಿಸಿ ತಿದ್ದಿಕೊಳ್ಳುವುದು ವೈದ್ಯನಿಗಿರಬೇಕಾದ ಅವಶ್ಯಕ ಗುಣ. ಎಲ್ಲ ಜೀವಿಗಳ ಮೇಲೆ ಸಹಜವಾದ ಕರುಣೆ, ಮೈತ್ರೀ, ತ್ಯಾಗ, ಇಂದ್ರಿಯನಿಗ್ರಹ, ವಾಕ್ ಶುದ್ಧಿ, ಶರೀರ ಸಾಮ್ಯತೆ, ಎಲ್ಲರನ್ನೂ ತನ್ನಂತೆಯೇ ಕಾಣುವುದು- ಇಂಥ ಸದ್ಗುಣಗಳ ಆಗರವಾಗಿರಬೇಕು ಒಬ್ಬ ವೈದ್ಯ. ಇದು ಒಬ್ಬ ವೈದ್ಯನ ಪ್ರಾರ್ಥನೆಯಾಗಿರಬೇಕು: ಅಯಂ ಮೇ ಹಸ್ತೋ ಭಗವಾನ್ ಅಯಂ ಮೇ ಭಗವತ್ತರಃ | ಅಯಂ ಮೇ ವಿಶ್ವಭೇಷಜೋಯಂ ಶಿವಾಭಿಮರ್ಶನಃ. ಅಂದರೆ- ಆ ನನ್ನ ಹಸ್ತ ಭಗವದನುಗ್ರಹದಿಂದ ಎಲ್ಲರಿಗೂ ಹಿತವನ್ನುಂಟು ಮಾಡುವ ವಿಶ್ವಭೇಷಜ ವಾಗಲಿ ಎಂಬ ಸವಿನಯ ಪ್ರಾರ್ಥನೆ ಅವಶ್ಯಕ. ಎಲ್ಲರನ್ನು ಗುಣಪಡಿಸುವಂಥ ಕಳಕಳಿಯುಳ್ಳ ಈ ನಿತ್ಯ ಪ್ರಾರ್ಥನೆಯೇ ಒಬ್ಬ ವೈದ್ಯನನ್ನು ದೇವವೈದ್ಯನನ್ನಾಗಿಸಲು ಸಾಧ್ಯ!
ಒಟ್ಟಾರೆ ಸ್ನೇಹಿತರೆ, ವೈದ್ಯವೃತ್ತಿಯು ಒಬ್ಬ ವೈದ್ಯನಿಗೆ ಚಿನ್ನವನ್ನು ಬೆಂಕಿಯಲ್ಲಿ ಶುದ್ಧಿ ಮಾಡುವ ತಪಸ್ಸಿನ ಹಾಗೆ. ನಿತ್ಯವೂ ಅವನ ಆಂತರ್ಯದ ವಿಕಸನ ಮತ್ತು ಶುದ್ಧಿಯೇ ಅವನ ಅನುಷ್ಠಾನ! ಒಬ್ಬ ವೈದ್ಯನ ನಡತೆ ಕೇವಲ ಔಷಧೋಪಚಾರಗಳನ್ನು ಬರೆಯಲಷ್ಟೇ ಸೀಮಿತವಾಗಬಾರದು.
ಬದಲಿಗೆ ಅವನ ಅಂತರಾಳವು ಮೇಲೆ ಹೇಳಿದ ಸದ್ಗುಣಗಳ ಸಮುದ್ರವಾಗಬೇಕು. ದಯೆ ಮತ್ತು ಸೇವೆಯೆಂಬ ರಜ್ಜುವಿನಿಂದ ಈ ಸಮುದ್ರವನ್ನು ಮಥಿಸಿದಾಗ ಮಾತ್ರ ಹೊರಹೊಮ್ಮುವುದು ನಿಜವಾದ ಅಮೃತ. ಆ ಅಮೃತದಿಂದ ಮಾತ್ರ ಸಾಧ್ಯ ವ್ಯಾಧಿನೋವುಗಳ ಸಂಪೂರ್ಣ ಶಮನ! ಹಾಗೆ ಮಾಡಿದ ವೈದ್ಯನಾಗುವನು ‘ವೈದ್ಯೋ ನಾರಾಯಣೋ ಹರಿಃ’...