ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishweshwar Bhat Column: ಮನುಷ್ಯ-ನಾಯಿಯ ಸಂಬಂಧ

ಸುಮಾರು ಹತ್ತು ವರ್ಷಗಳ ಹಿಂದೆ, ನಾನು ‘ಲಸ್ಸಿ ಕಮ್ಸ್ ಹೋಮ್’ (Lassie Come Home) ಎಂಬ ಸಿನಿಮಾ ನೋಡಿದ್ದೆ. ಅದು ಪ್ರಾಣಿ ಮತ್ತು ಮನುಷ್ಯನ ನಡುವಿನ ಅವಿನಾಭಾವ ಸಂಬಂಧವನ್ನು ಸಾರುವ ಒಂದು ಅಪರೂಪದ ಸಿನಿಮಾ. ಬಡತನದಿಂದ ಯಾಕ್‌ಶೈರ್‌ನ ಒಂದು ಕುಟುಂಬವು ತಮ್ಮ ಪ್ರೀತಿಯ ನಾಯಿ ಲಸ್ಸಿಯನ್ನು ಒಬ್ಬ ಶ್ರೀಮಂತನಿಗೆ ಮಾರಾಟ ಮಾಡುತ್ತದೆ.

Vishweshwar Bhat Column: ಮನುಷ್ಯ-ನಾಯಿಯ ಸಂಬಂಧ

-

ಸಂಪಾದಕರ ಸದ್ಯಶೋಧನೆ

ಸುಮಾರು ಹತ್ತು ವರ್ಷಗಳ ಹಿಂದೆ, ನಾನು ‘ಲಸ್ಸಿ ಕಮ್ಸ್ ಹೋಮ್’ (Lassie Come Home) ಎಂಬ ಸಿನಿಮಾ ನೋಡಿದ್ದೆ. ಅದು ಪ್ರಾಣಿ ಮತ್ತು ಮನುಷ್ಯನ ನಡುವಿನ ಅವಿನಾಭಾವ ಸಂಬಂಧವನ್ನು ಸಾರುವ ಒಂದು ಅಪರೂಪದ ಸಿನಿಮಾ. ಬಡತನದಿಂದ ಯಾಕ್‌ಶೈರ್‌ನ ಒಂದು ಕುಟುಂಬವು ತಮ್ಮ ಪ್ರೀತಿಯ ನಾಯಿ ಲಸ್ಸಿಯನ್ನು ಒಬ್ಬ ಶ್ರೀಮಂತನಿಗೆ ಮಾರಾಟ ಮಾಡುತ್ತದೆ. ಆತ ಲಸ್ಸಿಯನ್ನು ನೂರಾರು ಮೈಲಿ ದೂರದ ಸ್ಕಾಟ್ಲೆಂಡ್‌ಗೆ ಕರೆದೊಯ್ಯು ತ್ತಾನೆ. ಆದರೆ ತನ್ನ ಯಜಮಾನನಾದ ಬಾಲಕ ಜೋಯನ್ನು ಅಗಲಿರಲಾರದ ಲಸ್ಸಿ, ಅಲ್ಲಿಂದ ತಪ್ಪಿಸಿಕೊಂಡು ಹಿಂತಿರುಗಲು ನಿರ್ಧರಿಸುತ್ತದೆ.

ದಾರಿಯುದ್ದಕ್ಕೂ ಹಸಿವು, ಸುರಿವ ಮಳೆ, ಕಡಿದಾದ ಪರ್ವತಗಳು ಮತ್ತು ನದಿಗಳನ್ನು ದಾಟುತ್ತಾ ಲಸ್ಸಿ ಸಾಹಸಮಯ ಪ್ರಯಾಣ ಬೆಳೆಸುತ್ತದೆ. ದಾರಿಯಲ್ಲಿ ಹಲವು ಕಷ್ಟಗಳನ್ನು ಎದುರಿಸಿದರೂ, ತನ್ನ ಅಚಲವಾದ ನಿಷ್ಠೆ ಮತ್ತು ಪ್ರೀತಿಯಿಂದಾಗಿ ಅಂತಿಮವಾಗಿ ತನ್ನ ಹಳೆಯ ಮನೆಗೆ ಮತ್ತು ಜೋಯ ಬಳಿಗೆ ಬಂದು ಸೇರುತ್ತದೆ.

ಪ್ರಾಣಿಗಳ ನಿಷ್ಠೆಗೆ ಈ ಸಿನಿಮಾ ಒಂದು ಅದ್ಭುತ ಉದಾಹರಣೆ. ಇದು ಸಿನಿಮಾ ಆಯಿತು. ನಿಜ ಜೀವನದಲ್ಲಿ ಇಂಥದೇ ಒಂದು ಪ್ರಸಂಗ ನಡೆದಿದೆ. ಕಳ್ಳರಿಂದ ಅಪಹರಣ ಕ್ಕೊಳಗಾಗಿದ್ದ ಏಳು ಸಾಕು ನಾಯಿಗಳು, ಸಾವು ಮತ್ತು ಸಂಕೋಲೆಗಳಿಂದ ತಪ್ಪಿಸಿಕೊಂಡು 17 ಕಿಮೀಗಳಷ್ಟು ದೂರ ಕ್ರಮಿಸಿ ತಮ್ಮ ಮನೆ ಸೇರಿದ ಘಟನೆ ಈಶಾನ್ಯ ಚೀನಾದ ಹಳ್ಳಿ ಯೊಂದರಲ್ಲಿ ನಡೆದಿದೆ.

ಇದನ್ನೂ ಓದಿ: V‌ishweshwar Bhat Column: ನಕಲಿ ಪೈಲಟ್

ಅಲ್ಲಿ ಸಾಕುಪ್ರಾಣಿಗಳ ಕಳ್ಳತನದ ಜಾಲವು ಸಕ್ರಿಯವಾಗಿತ್ತು. ಒಂದು ರಾತ್ರಿ, ಏಳು ನಾಯಿ ಗಳನ್ನು ಈ ಜಾಲವು ಅಪಹರಿಸಿತು. ಬಹುಶಃ ಇವುಗಳನ್ನು ಮಾಂಸದ ಮಾರುಕಟ್ಟೆ ಗೋ ಅಥವಾ ದೂರದ ನಗರಗಳಿಗೋ, ಮಾರಾಟ ಮಾಡುವ ಉದ್ದೇಶ ಕಳ್ಳರಿಗಿತ್ತು.

ಮನೆಯ ಸದಸ್ಯರಂತೆ ಬೆಳೆದಿದ್ದ ಆ ಮೂಕ ಪ್ರಾಣಿಗಳಿಗೆ ಅಂದು ಎದುರಾಗಿದ್ದು ಅತಿ ದೊಡ್ಡ ಅಪಾಯ. ಕಗ್ಗತ್ತಲಲ್ಲಿ ಅವುಗಳನ್ನು ಕಟ್ಟಿ ಹಾಕಿ, ವಾಹನವೊಂದರಲ್ಲಿ ತುಂಬಿಸಿ ದೂರದ ಪ್ರದೇಶಕ್ಕೆ ಸಾಗಿಸಲಾಯಿತು. ಯಾವ ಹಂತದಲ್ಲಿ ಈ ನಾಯಿಗಳು ಕಳ್ಳರಿಂದ ತಪ್ಪಿಸಿಕೊಂಡವು ಎಂಬುದು ನಿಖರವಾಗಿ ತಿಳಿಯದಿದ್ದರೂ, ಅವುಗಳ ಜಾಣ್ಮೆ ಮೆಚ್ಚು ವಂಥದ್ದು.

ಕಳ್ಳರ ಕಣ್ಣು ತಪ್ಪಿಸಿ ಈ ಏಳು ನಾಯಿಗಳು ಒಟ್ಟಾಗಿ ತಪ್ಪಿಸಿಕೊಂಡವು. ಇಲ್ಲಿ ಗಮನಿಸ ಬೇಕಾದ ಅಂಶವೆಂದರೆ, ಕೇವಲ ಒಂದು ನಾಯಿಯಲ್ಲ, ಏಳೂ ನಾಯಿಗಳು ಒಟ್ಟಾಗಿ ಸಂಘಟಿತವಾಗಿ ಈ ನಿರ್ಧಾರ ತೆಗೆದುಕೊಂಡಿದ್ದು. ಅಲ್ಲಿಂದ ಆರಂಭವಾಯಿತು ಅವುಗಳ 17 ಕಿಮೀಗಳ ಸುದೀರ್ಘ ಪಯಣ. ಈ ಹಾದಿ ಸುಲಭವಾಗಿರಲಿಲ್ಲ. ವೇಗವಾಗಿ ಚಲಿಸುವ ವಾಹನಗಳ ನಡುವೆ ಹೆzರಿಯನ್ನು ದಾಟುವುದು ಸಣ್ಣ ವಿಷಯವಲ್ಲ.

ಹುಲ್ಲುಗಾವಲು ಮತ್ತು ಕಾಡುಹಾದಿಯಲ್ಲಿ ಹಾಗೂ ದಾರಿ ತಿಳಿಯದ ಅಪರಿಚಿತ ಪ್ರದೇಶ ಗಳಲ್ಲಿ ವಾಸನೆಯನ್ನು ಹಿಡಿಯುತ್ತಾ ಅವು ಸಾಗಬೇಕಿತ್ತು. ಎರಡು ದಿನಗಳ ಕಾಲ ಹಸಿವು ಮತ್ತು ಬಾಯಾರಿಕೆಯನ್ನು ಸಹಿಸಿಕೊಂಡು ಸಾಗಬೇಕಿತ್ತು.

ಎರಡು ದಿನಗಳ ಸತತ ನಡಿಗೆಯ ನಂತರ, ದಣಿದಿದ್ದ ಆ ಏಳು ಜೀವಗಳು ತಮ್ಮ ಹಳ್ಳಿ ಯನ್ನು ತಲುಪಿದವು. ಅವುಗಳ ಮಾಲೀಕರು ತಮ್ಮ ಪ್ರೀತಿಯ ಸಾಕುಪ್ರಾಣಿಗಳು ಮತ್ತೆ ಸಿಗುತ್ತವೆ ಎಂಬ ಭರವಸೆಯನ್ನೇ ಕೈಬಿಟ್ಟಿದ್ದರು. ಆದರೆ, ದೂಳು ಹಿಡಿದ ಮೈಯೊಂದಿಗೆ, ಬಳಲಿದ ಕಾಲಿನೊಂದಿಗೆ ಆ ನಾಯಿಗಳು ತಮ್ಮ ಮನೆಯ ಬಾಗಿಲಲ್ಲಿ ನಿಂತಾಗ ಮಾಲೀಕರ ಸಂತೋಷಕ್ಕೆ ಪಾರವೇ ಇರಲಿಲ್ಲ.

ಪ್ರಾಣಿಗಳು ತಮ್ಮ ಮನೆಗೆ ಮರಳಲು ಬಳಸುವ ಹೋಮಿಂಗ್ ಇನ್‌ಸ್ಟಿಂಕ್ಟ್ ಎಂಬ ಸಹಜ ಪ್ರವೃತ್ತಿ ಈ ಘಟನೆಯಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ನಾಯಿಗಳು ಭೂಮಿಯ ಕಾಂತೀ ಯ ಕ್ಷೇತ್ರ ಮತ್ತು ವಾಸನೆಯ ಪ್ರಬಲ ಶಕ್ತಿಯನ್ನು ಬಳಸಿ ದಿಕ್ಕುಗಳನ್ನು ಗುರುತಿಸುತ್ತವೆ. ಈ ಏಳು ನಾಯಿಗಳ ನಡುವಿನ ಗುಂಪುಗಾರಿಕೆ ಅವುಗಳನ್ನು ಸುರಕ್ಷಿತ ವಾಗಿಡಲು ಸಹಾಯ ಮಾಡಿತು.

ಇಂದು ಜಗತ್ತು ಯುದ್ಧದ ಕಾರ್ಮೋಡ, ಆರ್ಥಿಕ ಮುಗ್ಗಟ್ಟು ಮತ್ತು ಮಾನವೀಯತೆಯ ಕೊರತೆಯಿಂದ ಬಳಲುತ್ತಿದೆ. ಇಂಥ ಸಮಯದಲ್ಲಿ, ಈ ಪ್ರಾಣಿಗಳು ಪ್ರದರ್ಶಿಸಿದ ನಿಷ್ಠೆ ಮತ್ತು ಜಿಗುಟುತನ ನಮಗೆ ಬದುಕಿನ ಮೇಲೆ ಭರವಸೆ ಮೂಡಿಸುತ್ತದೆ. ಚೀನಾದ ಈ ಏಳು ನಾಯಿಗಳ ಸಾಹಸಗಾಥೆ ಅಚಲ ಪ್ರೀತಿ, ವಿಶ್ವಾಸದ ಸಂಕೇತ.

ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಬಂಧ ಎಷ್ಟು ಆಳವಾದುದು ಎಂಬುದಕ್ಕೆ ಇದು ಸಾಕ್ಷಿ. ಆ ನಾಯಿಗಳು ಕೇವಲ 17 ಕಿಮೀ ದೂರವನ್ನಷ್ಟೇ ಕ್ರಮಿಸಲಿಲ್ಲ, ಬದಲಾಗಿ ಪ್ರೀತಿಯ ಶಕ್ತಿ ಎಂತಹುದು ಎಂಬುದನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟವು.