Jitendra Kundeshwara Column: ರಾಮಮಂದಿರ ಹೆಸರಲ್ಲಿ ಬಡವರಿಗೆ ನೂರಾರು ಸೂರು!
ಶ್ರೀಗಳ ಈ ದಿವ್ಯ ಆಶಯವನ್ನು ಶಿರಸಾವಹಿಸಿ ಪಾಲಿಸಿದ ಹೆಗ್ಗುಂಜೆ ಚಾರಿಟೇಬಲ್ ಟ್ರಸ್ಟ್‌ನ ಎಚ್.ಎಸ್. ಶೆಟ್ಟಿ ಅವರು ನೂರು ಮನೆಗಳನ್ನು ಕಟ್ಟಿಕೊಡುವ ಮಹಾ ತೀರ್ಮಾನ ಕೈಗೊಂಡರು. ದೇವರ ಹೆಸರಿನಲ್ಲಿ ಸಮಾಜ ಸೇವೆಗೆ ಮುಂದಾಗಿ ನಶಿಸುವ ಹಂತದಲ್ಲಿರುವ ಕೊರಗ ಸಮುದಾಯದ ಕಣ್ಣೀರು ತೊಳೆಯಲು ಈಗಾಗಲೇ ಎರಡು ಹಂತಗಳಲ್ಲಿ ಯಶಸ್ವಿಯಾಗಿ 28 ಮನೆಗಳನ್ನು ನಿರ್ಮಿಸಿದ್ದಾರೆ.
-
ಜಿತೇಂದ್ರ ಕುಂದೇಶ್ವರ
ರಾಮ ಮಂದಿರ, ಬದರಿನಾಥ ಮೊದಲಾದ ಪುಣ್ಯಕ್ಷೇತ್ರಗಳ ಕಾಣಿಕೆ ಹಗರಣದ ಸುತ್ತ ಕೇಳಿ ಬರು ತ್ತಿರುವ ಕಹಿ ಸುದ್ದಿಗಳು ಕೋಟ್ಯಂತರ ಭಕ್ತರ ಮನಸ್ಸಿನಲ್ಲಿ ಆಳವಾದ ನೋವು ಮತ್ತು ಸಂಶಯದ ಕಹಿಯಾದ ಬೀಜ ಗಳನ್ನು ಬಿತ್ತಿವೆ. ನಾವು ಶ್ರದ್ಧೆ, ಭಕ್ತಿಯಿಂದ ಸಮರ್ಪಿಸಿದ ಹಣ ನಿಜಕ್ಕೂ ಎಲ್ಲಿಗೆ ತಲುಪುತ್ತಿದೆ? ಎಂಬ ಯಕ್ಷಪ್ರಶ್ನೆ ಕೇವಲ ರಾಮಭಕ್ತರನ್ನಷ್ಟೇ ಅಲ್ಲ, ಇಡೀ ಆಸ್ತಿಕ ಲೋಕವನ್ನು ತೀವ್ರವಾಗಿ ಕಾಡಲಾರಂಭಿಸಿದೆ. ಭಕ್ತರು ತಮ್ಮ ಕಷ್ಟಾರ್ಜಿತ ಕಾಸನ್ನು ದೇವರಿಗೆಂದು ನೀಡಿದಾಗ, ಅದು ಭ್ರಷ್ಟರ ಪಾಲಾಗುತ್ತಿರುವುದನ್ನು ಕಂಡು ಸಮಾಜ ಕಳವಳಗೊಂಡಿದೆ.
ಆದರೆ, ಇಂತಹ ಗೊಂದಲದ ಕಾರ್ಮೋಡ ಕವಿದಾಗಲೆಲ್ಲ ಸತ್ಪುರುಷರ ನುಡಿಗಳು ಬೆಳಕಿನ ಕಿರಣ ದಂತೆ ಧರ್ಮದ ಹಾದಿಗೆ ನೈಜ ಮಾರ್ಗದರ್ಶನ ನೀಡುತ್ತವೆ. ಅಯೋಧ್ಯೆ ರಾಮನ ಹೆಸರಿನಲ್ಲಿ ಬಡವರಿಗೊಂದು ಸಣ್ಣ ಮನೆ ಕಟ್ಟಿಸಿಕೊಡಿ, ಅದುವೇ ಆ ದೇವರಿಗೆ ನೀವು ಸಲ್ಲಿಸುವ ನಿಜವಾದ ಕಾಣಿಕೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಹಿಂದೆ ನೀಡಿದ್ದ ಕರೆಯನ್ನು ಕರಾವಳಿಯ ಜನತೆ ಕೇವಲ ಪ್ರವಚನ ಎಂದು ಭಾವಿಸಿ ಸುಮ್ಮನಾಗಲಿಲ್ಲ. ಬದಲಿಗೆ ಅದನ್ನೊಂದು ಮಹಾ ಸಂಕಲ್ಪವಾಗಿ, ಧರ್ಮದ ಆದೇಶವಾಗಿ ಸ್ವೀಕರಿಸಿತು. ಹಿಂದೂ ಧರ್ಮದ ಅತ್ಯುನ್ನತ ಪೀಠವೊಂದರ ಘನತೆಗೆ ತಕ್ಕಂತೆ ಶ್ರೀಗಳು ಮೂಡಿಸಿದ ಈ ಜಾಗೃತಿಯ ಅಭಿಯಾನ ಇಂದು ನೂರಾರು ಕಡುಬಡವ ಕುಟುಂಬಗಳ ಕಣ್ಣೀರು ಒರೆಸುವ ಸಂಜೀವಿನಿಯಾಗಿದೆ.
ಶ್ರೀಗಳ ಈ ದಿವ್ಯ ಆಶಯವನ್ನು ಶಿರಸಾವಹಿಸಿ ಪಾಲಿಸಿದ ಹೆಗ್ಗುಂಜೆ ಚಾರಿಟೇಬಲ್ ಟ್ರಸ್ಟ್‌ನ ಎಚ್.ಎಸ್. ಶೆಟ್ಟಿ ಅವರು ನೂರು ಮನೆಗಳನ್ನು ಕಟ್ಟಿಕೊಡುವ ಮಹಾ ತೀರ್ಮಾನ ಕೈಗೊಂಡರು. ದೇವರ ಹೆಸರಿನಲ್ಲಿ ಸಮಾಜ ಸೇವೆಗೆ ಮುಂದಾಗಿ ನಶಿಸುವ ಹಂತದಲ್ಲಿರುವ ಕೊರಗ ಸಮುದಾಯದ ಕಣ್ಣೀರು ತೊಳೆಯಲು ಈಗಾಗಲೇ ಎರಡು ಹಂತಗಳಲ್ಲಿ ಯಶಸ್ವಿಯಾಗಿ 28 ಮನೆಗಳನ್ನು ನಿರ್ಮಿಸಿ ದ್ದಾರೆ. ನೊಂದವರ ಕೈಗೆ ಕೀಲಿ ಕೈ ಒಪ್ಪಿಸಿದಾಗ ಆ ಬಡವರ ಕಣ್ಣಲ್ಲಿ ಮೂಡಿದ ಆನಂದದ ಅಶ್ರುಬಿಂದುಗಳು ಧರ್ಮದ ನಿಜವಾದ ಅರ್ಥವನ್ನು ಜಗತ್ತಿಗೆ ಸಾರಿದ್ದವು.
ಇದನ್ನೂ ಓದಿ: Jithendra Kundeshwara Column: ತಾಳಮದ್ದಳೆ ಅರ್ಥಧಾರಿಗಳ ತಪ್ಪಿದ ತಾಳದ ಸುತ್ತಮುತ್ತ !
ಈ ಮಾನವೀಯ ಕಳಕಳಿಯ ಸರಣಿ ಅಲ್ಲಿಗೇ ನಿಲ್ಲಲಿಲ್ಲ. ಉದ್ಯಮಿ ಮಹೇಶ್ ಠಾಕೂರ್ ಅವರು ಅಯೋಧ್ಯೆ ಯ ಶ್ರೀರಾಮನ ಹೆಸರಿನಲ್ಲಿಯೇ ಬಡವರಿಗೊಂದು ಸೂರು ಕೊಡುವ ಸತ್ಕಾರ್ಯಕ್ಕೆ ಹೆಗಲು ಕೊಟ್ಟರು. ಈಗಾಗಲೇ ನಾಲ್ಕು ಮಂದಿಗೆ ಮನೆಯನ್ನು ಕಟ್ಟಿಕೊಟ್ಟಿದ್ದಾರೆ. ಬಿಪಿಎಲ್ ಕಾರ್ಡು ಇಲ್ಲದ ಅತ್ಯಂತ ಕಡುಬಡತನದವರಿಗೆ ಮಾತ್ರ ಮನೆ ನಿರ್ಮಿಸಿ ಕೊಡುತ್ತಾರೆ. ಭಕ್ತಿಯನ್ನು ಇಟ್ಟಿಗೆಯಾಗಿಸಿ, ಕರುಣೆಯನ್ನು ಸಿಮೆಂಟ್ ಆಗಿಸಿ ಅವರು ಕಟ್ಟುತ್ತಿರುವ ಮನೆಗಳು ಕೇವಲ ಇಟ್ಟಿಗೆ-ಕಲ್ಲಿನ ಜಡ ಕಟ್ಟಡಗಳಲ್ಲ; ಅವು ಕರಾವಳಿಯ ರಾಮಭಕ್ತರ ಶ್ರದ್ಧೆಯ ಜೀವಂತ ಸ್ಮಾರಕಗಳು.
ಇಂದು ತುಳುನಾಡಿನಲ್ಲಿ 10 ರಿಂದ 15 ಲಕ್ಷ ರೂಪಾಯಿ ವೆಚ್ಚದಲ್ಲಿ ಬಡವರಿಗಾಗಿ ಉಚಿತ ಮನೆ ಗಳನ್ನು ನಿರ್ಮಿಸಿ ಕೊಡುವ ಒಂದು ಅದ್ಭುತವಾದ ‘ಟ್ರೆಂಡ್’ ಶುರುವಾಗಿದೆ. ಕಾಣಿಕೆ ಹುಂಡಿ ಸೇರಿ ದುರುಪಯೋಗ ವಾಗುವ ಭೀತಿಯ ನಡುವೆ, ಇಂತಹ ಪ್ರತ್ಯಕ್ಷ ಮಾನವೀಯ ಸೇವೆಗಳು ಸಮಾಜ ದಲ್ಲಿ ಹೊಸ ಭರವಸೆ ಮೂಡಿಸಿವೆ. ಮೂಕ ಜಡವಾದ ಹುಂಡಿಗೆ ಹಣ ಸುರಿಯುವುದಕ್ಕಿಂತ, ಚೇತನವಿರುವ ಜೀವಿಯ ಕಣ್ಣೀರು ಒರೆಸುವ ಈ ರಾಮಭಕ್ತರ ಕಾಣಿಕೆಗಳು ನಿಜಕ್ಕೂ ಇಡೀ ದೇಶಕ್ಕೇ ಆದರ್ಶಪ್ರಾಯ.
ವಾಸ್ತವವಾಗಿ, ಪೇಜಾವರ ಶ್ರೀಗಳ ಕರೆ ಕರಾವಳಿಯಲ್ಲಿ ತೀವ್ರಗೊಳ್ಳುವ ಮುನ್ನವೇ, ಈ ಪುಣ್ಯ ಮಣ್ಣಿನ ಸಾಂಸ್ಕೃತಿಕ ಸಂಸ್ಥೆಗಳು ಇಂತಹದ್ದೇ ಜನಪರ ಯಜ್ಞಕ್ಕೆ ಮುನ್ನುಡಿ ಬರೆದಿದ್ದವು. ಉದಾರ ಗುಣ ಮತ್ತು ಸಮಾಜ ಕಳಕಳಿ ಈ ಮಣ್ಣಿನ ಜನರ ಸಂಸ್ಕಾರದ ಭಾಗವಾಗಿ ರಕ್ತಗತವಾಗಿ ಹರಿದು ಬಂದಿದೆ. ಇದಕ್ಕೆ ಕರಾವಳಿಯ ಇತಿಹಾಸದಲ್ಲಿ ಜೀವಂತ ಸಾಕ್ಷ್ಯಗಳಿವೆ. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಹರಿಕೃಷ್ಣ ಪುನರೂರು ಅವರು ಬಹಳ ಹಿಂದೆಯೇ ಸದ್ದಿಲ್ಲದೆ ಬಡ ಕುಟುಂಬ ಗಳಿಗಾಗಿ ‘ಪುನರೂರು ಗ್ರಾಮ’ವನ್ನೇ ನಿರ್ಮಿಸಿ, ಉಚಿತವಾಗಿ ಮನೆಗಳನ್ನು ಹಸ್ತಾಂತರಿಸಿ ಈ ಜನಪರ ಆಂದೋಲನಕ್ಕೆ ನಾಂದಿ ಹಾಡಿದ್ದರು.
ಇದೇ ರೀತಿ ಉಡುಪಿಯ ಯಕ್ಷಗಾನ ಕಲಾರಂಗ ಸಂಸ್ಥೆಯು ತನ್ನ ‘ವಿದ್ಯಾಪೋಷಕ್’ ಯೋಜನೆಯಡಿ ಕಡುಬಡವ ವಿದ್ಯಾರ್ಥಿ ಹಾಗೂ ಕಲಾವಿದರಿಗಾಗಿ 100 ಮನೆಗಳನ್ನು ನಿರ್ಮಿಸಿಕೊಟ್ಟಿದೆ. ಮೊನ್ನೆ ಯಷ್ಟೇ ತನ್ನ 100ನೇ ಉಚಿತ ಮನೆ ‘ಶತಸ್ಮೃತಿ’ಯನ್ನು ಹಸ್ತಾಂತರಿಸಿ ಇತಿಹಾಸ ಬರೆದಿದೆ.
ರಂಗಸ್ಥಳದ ಬಡ ಕಲಾವಿದರ ಕಣ್ಣೀರು ಒರೆಸಲು ಕಂಕಣಬದ್ಧವಾಗಿರುವ ಪಟ್ಲ ಸತೀಶ್ ಶೆಟ್ಟಿ ಅವರ ಸಾರಥ್ಯದ ಯಕ್ಷಧ್ರುವ ಪಟ್ಲ ಫೌಂಡೇಶನ್ ‘ಯಕ್ಷಾಶ್ರಯ’ ಯೋಜನೆಯಡಿ ಇಡೀ ಬದುಕನ್ನೇ ರಂಗಸ್ಥಳಕ್ಕೆ ಸವೆಸಿ, ವೈಯಕ್ತಿಕ ಬದುಕಿನಲ್ಲಿ ಸ್ವಂತ ಮನೆ ಇಲ್ಲದೆ ಜರ್ಝರಿತರಾದ ಮೇಳಗಳ ಬಡ ಕಲಾವಿದರಿಗಾಗಿ ಒಟ್ಟು 100 ಮನೆಗಳನ್ನು ನಿರ್ಮಿಸುವ ಮಹಾ ಸಂಕಲ್ಪ ತೊಟ್ಟಿದ್ದು, ಈಗಾಗಲೇ 36 ಮನೆಗಳ ನಿರ್ಮಾಣವಾಗಿದೆ. 26 ಮನೆಗಳ ನಿರ್ಮಾಣ ಕಾರ್ಯ ಅಂತಿಮ ಹಂತ ತಲುಪಿದೆ. ಹಿರಿಯ ವಿದ್ವಾಂಸರಾದ ಪ್ರೊ.ಎಂ.ಎಲ್. ಸಾಮಗ ಅವರು ದಾನವಾಗಿ ನೀಡಿದ ಜಾಗದಲ್ಲಿ ಇತ್ತೀಚೆಗೆ ಶೃಂಗೇರಿ ಶ್ರೀಗಳ ಆಶೀರ್ವಾದದೊಂದಿಗೆ ಹೊಸದಾಗಿ 20 ಮನೆಗಳ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿದೆ. ಇದು ಕೇವಲ ದಾನವಲ್ಲ; ಸನಾತನ ಧರ್ಮದ ಘನತೆಯನ್ನು ಎತ್ತಿಹಿಡಿಯುವ ಹೆಮ್ಮೆಯ ಇತಿಹಾಸ.
ಶ್ರೀಮಂತರು ಮಾತ್ರ ಬಡವರಿಗೆ ಮನೆ ನಿರ್ಮಾಣ ಮಾಡಿ ಕೊಡಲು ಸಾಧ್ಯ ಎಂಬುದು ಸತ್ಯವಲ್ಲ. ಮನಸ್ಸಿ ನಲ್ಲಿ ಶ್ರೀಮಂತಿಕೆ ಇದ್ದ ಅನೇಕ ಮಂದಿ ಬಡವರೂ ಟ್ರಸ್ಟ್ ಮೂಲಕ ಬಡವರಿಗೆ ಮನೆ ನಿರ್ಮಿಸಿ ಕೊಡುವಂತ ಕಾಯಕದಲ್ಲಿ ತೊಡಗಿದ್ದಾರೆ. ಬಡವರ ಪಾಲಿನ ಆಶಾಕಿರಣವಾದ ಬೆಳ್ತಂಗಡಿಯ ದೀಪಕ್ ಜಿ., ಬಡವರಿಗೆ 34 ಮನೆಗಳನ್ನು ಕಟ್ಟಿಕೊಟ್ಟಿದ್ದಾರೆ. ಇವರ ಸೇವಾ ಕಾರ್ಯ ಕಂಡು ಪ್ರೆಸ್ ಕ್ಲಬ್ ವಾರ್ಷಿಕ ಪುರಸ್ಕಾರವನ್ನು ಕೂಡ ನೀಡಿದೆ.
ನಾವಿಲ್ಲಿ ರಾಮಭಕ್ತ ಹನುಮಂತನ ಉದಾಹರಣೆಯನ್ನೇ ನೆನಪಿಸಿಕೊಳ್ಳಬೇಕು. ಲಂಕಾ ವಿಜಯದ ನಂತರ, ಸೀತಾದೇವಿ ಹನುಮನಿಗೆ ಅಮೂಲ್ಯವಾದ ಮುತ್ತಿನ ಹಾರವನ್ನು ಉಡುಗೊರೆಯಾಗಿ ನೀಡಿದಳು. ಆದರೆ ಆಂಜನೇಯನು ಪ್ರತಿಯೊಂದು ಮುತ್ತನ್ನೂ ಕಚ್ಚಿ ಕಚ್ಚಿ ನೋಡಿ ಬಿಸಾಡಿದನು. ಸಭೆಯಲ್ಲಿದ್ದವರು ಆಶ್ಚರ್ಯದಿಂದ ಕಾರಣ ಕೇಳಿದಾಗ, ಯಾವ ಮುತ್ತಿನಲ್ಲಿ ನನ್ನ ರಾಮನ ನಾಮವಿಲ್ಲವೋ, ರಾಮನ ರೂಪವಿಲ್ಲವೋ, ಅದು ನನಗೆ ಕೇವಲ ಕಲ್ಲು ಎಂದನು. ಇಂದಿನ ವ್ಯವಸ್ಥೆಯಲ್ಲಿ ಹುಂಡಿಗೆ ಹಾಕುವ ಹಣ ದುರುಪಯೋಗ ಆಗುವ ಭೀತಿ ಇರುವಾಗ, ನಾವು ಹನುಮಂತನಂತೆ ಜಾಗೃತರಾಗಬೇಕಿದೆ. ದೇವರ ಹೆಸರಿನಲ್ಲಿ ನಡೆಯುವ ವಂಚನೆಗಳನ್ನು ತಡೆಯಲು ಭಕ್ತರೇ ವಿವೇಚನೆ ಬಳಸಬೇಕಿದೆ. ಅಯೋಧ್ಯಾ ಅಽಪತಿ ಶ್ರೀರಾಮಚಂದ್ರನ ದೇವಸ್ಥಾನ ನಮ್ಮ ಅಸ್ಮಿತೆ. ಅದನ್ನು ಭಕ್ತಿಯಿಂದ ಆರಾಧಿಸೋಣ. ರಾಮ ರಾಜ್ಯವಾಗಬೇಕಾದರೆ ನಾವು ನಮ್ಮ ಊರಿನಲ್ಲಿ ಇಂತಹ ಮಾನವೀಯ ಕಳಕಳಿಯ ಸೇವೆಯ ಮೂಲಕ ಚೇತನವಿರುವ ಜೀವಿಗಳ ಭಗವಂತನನ್ನು ಕಾಣಬಹುದಲ್ಲವೇ.
ತಲೆಯ ಮೇಲೆ ಸೂರಿಲ್ಲದ ಬಡ ಕುಟುಂಬಕ್ಕೆ ಸಣ್ಣದೊಂದು ಮನೆ ನಿರ್ಮಿಸಿಕೊಡುವುದು ಅಥವಾ ಹಸಿದ ನೊಂದ ಜೀವಕ್ಕೆ ಅನ್ನ ನೀಡುವುದು ಕೋಟಿ ರೂಪಾಯಿ ಕಾಣಿಕೆಗಿಂತ ಮಿಗಿಲು. ವಸತಿ ಹೀನರ ಮುಖದ ಮುಗುಳ್ನಗೆಯಲ್ಲಿ ರಾಮನ ದರ್ಶನವಾಗುತ್ತದೆ.
ಆರ್ಥಿಕವಾಗಿ ಹಿಂದುಳಿದ, ಪ್ರತಿಭಾವಂತ ಮಗುವಿನ ಶಿಕ್ಷಣದ ಜವಾಬ್ದಾರಿ ಹೊರುವುದು ದೇಶದ ಭವಿಷ್ಯ ವನ್ನು ಉಜ್ವಲಗೊಳಿಸುವ ಮಹಾ ಕಾಣಿಕೆ. ಮಗುವಿಗೆ ಅಕ್ಷರ ಕಲಿಸುವುದು ದೇವಸ್ಥಾನದ ಗೋಪುರ ಕಟ್ಟುವುದಕ್ಕಿಂತ ಶ್ರೇಷ್ಠ. ಈ ಭಾಗದಲ್ಲಿ ಸರಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸಿ ಉಚಿತವಾದ ಶಿಕ್ಷಣ ಮತ್ತು ಶಿಕ್ಷಕರ ವೇತನವನ್ನು ಕೂಡ ಇಲ್ಲಿಯ ಉದಾರ ದಾನಿಗಳು ಬರಿಸುವುದು ಜೀವನದ ಒಂದು ಅವಿಭಾಜ್ಯ ಅಂಗವಾಗಿ ಪರಿಣಮಿಸಿದೆ. ಆಸ್ಪತ್ರೆಯಲ್ಲಿ ಹಣವಿಲ್ಲದೆ ತಡಕಾಡು ತ್ತಿರುವ ಬಡ ರೋಗಿಗೆ ಔಷಧ ಕೊಡಿಸುವುದು, ರಕ್ತದಾನ ಮಾಡುವುದು ಅಥವಾ ಅನಾಥಾಶ್ರಮ ಗಳಿಗೆ ಆಸರೆಯಾಗುವುದು ಸಾಕ್ಷಾತ್ ಧನ್ವಂತರಿಗೇ ಮಾಡುವ ಪೂಜೆಯಾಗಿದೆ.
ಇದಕ್ಕೆ ನೂರಾರು ಉದಾಹರಣೆಗಳಿವೆ. ಕಾರ್ಕಳದ ಅವಿನಾಶ್ ಜಿ ಶೆಟ್ಟಿ ಎನ್ನುವ ಯುವಕ ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ ಮಾಡಿ ನೂರಾರು ಮಂದಿ ವಿದ್ಯಾರ್ಥಿಗಳಿಗೆ ನೆರವು ಮತ್ತು ಬಡ ರೋಗಿಗಳಿಗೆ ಆರ್ಥಿಕ ನೆರವು ನೀಡುವ ಕೆಲಸವನ್ನು ಮಾಡುತ್ತಿದ್ದಾರೆ. ಮಂದಿರಗಳ ಸುತ್ತಮುತ್ತ ಹಸಿರು ಬೆಳೆಸುವುದು, ಬತ್ತಿ ಹೋಗುತ್ತಿರುವ ಕೆರೆ-ಕಟ್ಟೆಗಳನ್ನು ಪುನಶ್ಚೇತನಗೊಳಿಸುವುದು ಮತ್ತು ಅನಾಥ ಹಸುಗಳ ಸಂರಕ್ಷಣೆ ಮಾಡುವುದು ಪ್ರಕೃತಿ ಪುರುಷನಾದ ಭಗವಂತನಿಗೆ ಸಲ್ಲುವ ಶ್ರೇಷ್ಠ ಸೇವೆ.
ತುಳುನಾಡಿನಲ್ಲಿ ಗೋ ರಕ್ಷಣೆಯ ಜೊತೆ ಗೋ ಸಾಕಣೆಯು ಕೂಡ ಅಭಿಯಾನದ ರೂಪದಲ್ಲಿ ಸಾಗುತ್ತಿದೆ. ಅನಾಥ ಬಡಕಲು ಗೋವುಗಳನ್ನು ಸಂರಕ್ಷಿಸಿ ಪೋಷಿಸುವ ಪೇಜಾವರ ಶ್ರೀಗಳ ನಡೆ ಮಾದರಿ. ಅವರು ಗೋ ಶಾಲೆ ನಿರ್ಮಿಸಿ 2000 ಗೋವುಗಳ ಸಂರಕ್ಷಣೆ ಮಾಡುತ್ತಾ ಬರುತ್ತಿದ್ದಾರೆ.
ಭಕ್ತರು ಗೋಗ್ರಾಸ ಸೇವೆಯ ಮೂಲಕ ಅನ್ನದಾನದ ಜೊತೆಯಲ್ಲಿ ಗೋವುಗಳನ್ನು ಸಾಕುವ ಪರಂಪರೆ ಬೆಳೆಯುತ್ತಾ ಬಂದಿದೆ. ತುಳುನಾಡಿನಲ್ಲಿ ಗೋ ಆಶ್ರಮಗಳು ತಲೆ ಎತ್ತಿವೆ. ಇದು ರಾಜಕೀಯಕ್ಕೆ ಹೊರತಾಗಿದೆ. ಕಾರ್ಕಳ ಕಾಂಗ್ರೆಸ್ ಮುಖಂಡ ಉದಯಕುಮಾರ್ ಶೆಟ್ಟಿ ಅವರು ಗೋಶಾಲೆಯನ್ನ ನಿರ್ಮಿಸಿ ಗೋವುಗಳನ್ನು ಪಾಲಿಸುತ್ತಿದ್ದಾರೆ. ಉದ್ಯಮಿ ಎಸ್‌ಕೆಎಸ್ ಸುಜಯ್ ಕುಮಾರ್ ಶೆಟ್ಟಿ ಅವರು ಕೂಡ ತಮ್ಮ ಮನೆಯಲ್ಲಿ ಹತ್ತಾರು ಗೋವುಗಳನ್ನು ಸಾಕುತ್ತಿದ್ದಾರೆ. ಇಂತಹ ಅನೇಕ ಉದಾಹರಣೆಗಳು ತುಳುನಾಡಿನಲ್ಲಿ ಸಿಗುತ್ತದೆ.
ಮಂದಿರದ ಹುಂಡಿ ತುಂಬಿಸುವ ಮುನ್ನ, ಪಕ್ಕದ ಮನೆಯ ಬಡವನ ಹೊಟ್ಟೆ ತುಂಬಿದೆಯೇ ಎಂದು ನೋಡುವುದು ಸನಾತನ ಧರ್ಮದ ಅತಿ ದೊಡ್ಡ ಸತ್ಯ. ಮಾನವ ಸೇವೆಯೇ ಮಾಧವ ಸೇವೆ ಎಂಬ ತತ್ವ ಕೇವಲ ಮಾತಾಗದೆ ಇಂದಿನ ವ್ಯವಸ್ಥೆಯಲ್ಲಿ ಕೃತಿಯಾಗಿ ಜಾರಿಗೆ ಬರಬೇಕಿದೆ.