ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Prof Uma RamRao Column: ಅಮರ ಸಾಹಿತಿಯ ಒಡನಾಟದಲ್ಲಿ ನಾನು ವಿನಮ್ರಳಾದೆ

ಅಂದಿನಿಂದ ಪ್ರಾರಂಭವಾದ ನಮ್ಮ ಒಡನಾಟವು ಕ್ರಮೇಣ ಗಟ್ಟಿಯಾಗುತ್ತಾ ಬಂದು ನಂತರದಲ್ಲಿ ಅವರು ಮುಂಬಯಿಗೆ ಬಂದರೆ ನಮ್ಮಲ್ಲಿಯೇ ಉಳಿಯುವುದು ಎಂಬ ಆತ್ಮೀಯ ಮಟ್ಟವನ್ನು ತಲುಪಿತು. ಪಿತೃವಾತ್ಸಲ್ಯದಿಂದ ಅವರು ನನ್ನನ್ನು ಕಾಣುತ್ತಿದ್ದರು. ಇದೊಂದು ನನ್ನ ಭಾಗ್ಯವೆಂದೇ ನಾನು ನಂಬಿ ದ್ದೇನೆ. ಅವರ ಕಾದಂಬರಿಗಳ ಆಂಗ್ಲಾನುವಾದವನ್ನು ಓದಿರುವ ನನ್ನ ಪತಿ ರಾಮರಾವ್‌ರವರೂ ಸಹ ಭೈರಪ್ಪನವರ ಉತ್ಕಟ ಅಭಿಮಾನಿ.

ಅಮರ ಸಾಹಿತಿಯ ಒಡನಾಟದಲ್ಲಿ ನಾನು ವಿನಮ್ರಳಾದೆ

-

Ashok Nayak Ashok Nayak Sep 29, 2025 10:34 AM

ನಮನ

ಪ್ರೊ.ಉಮಾ ರಾಮರಾವ್‌, ಮುಂಬೈ

ಮುಂಬೈನಲ್ಲಿ ನೆಲೆಸಿರುವ ಲೇಖಕಿ ಪ್ರೊ.ಉಮಾ ರಾವ್ ಎಸ್.ಎಲ್.ಭೈರಪ್ಪನವರ ಆಪ್ತ ರಲ್ಲೊಬ್ಬರು. ಭೈರಪ್ಪನವರ ಸಮಗ್ರ ಸಾಹಿತ್ಯದ ಕುರಿತು ಪಿಎಚ್‌ಡಿ ಮಾಡಿದ್ದಾರೆ. ಅವರು ಭೈರಪ್ಪನವರೊಂದಿಗಿನ ತಮ್ಮ ಒಡನಾಟವನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ನನ್ನ ಶಾಲಾ ದಿನಗಳಿಂದಲೂ ಭೈರಪ್ಪನವರ ಕಾದಂಬರಿಗಳನ್ನು ಓದಿ ಅವರ ಕಾದಂಬರಿ ಪ್ರಿಯರಲ್ಲಿ ಒಬ್ಬಳನ್ನಾಗಿ ನನ್ನನ್ನು ಗುರುತಿಸಿಕೊಂಡಿದ್ದೆ. ಅವರ ಹೊಸ ಕಾದಂಬರಿಗಳು ಪ್ರಕಟ ವಾದ ಕೂಡಲೇ ನನ್ನ ಮನೆಯಲ್ಲಿ ನನ್ನ ತಾಯ್ತಂದೆಯರು ಅದನ್ನು ಓದಿ, ನನ್ನಿಂದಲೂ ಓದಿಸಿ ಚರ್ಚಿಸುತ್ತಿದ್ದರು.

ನಾವಿದ್ದ ಗುಲ್ಬರ್ಗದಲ್ಲಿ ಸರಕಾರಿ ಪಾಲಿಟೆಕ್ನಿಕ್ ಸಂಸ್ಥೆಯವರು ಭೈರಪ್ಪನವರನ್ನು ಭಾಷಣಕ್ಕಾಗಿ ಆಹ್ವಾನಿಸಿದ್ದಾಗ ಅವರನ್ನು ಮೊದಲ ಬಾರಿಗೆ ನೋಡಿ ಅವರ ಮಾತುಗಳನ್ನು ಕೇಳಿ ಮಹದಾನಂದ ಗೊಂಡಿದ್ದೆ. ಇದು 1972ರಲ್ಲಿ ಎಂದು ನನ್ನ ನೆನಪು. ನಂತರದಲ್ಲಿ ನಾನು ನೆಲೆಸಿದ್ದು ಮುಂಬಯಿ ಯಲ್ಲಿ. ಮುಂಬಯಿಯ ಹೆಸರಾಂತ ಕಾದಂಬರೀಕಾರರಾಗಿದ್ದ ವ್ಯಾಸರಾಯ ಬಳರು ಬೆಂಗಳೂರಿ ನಲ್ಲಿ ನೆಲೆಸುವ ನಿರ್ಧಾರದಿಂದ ಮುಂಬಯಿಯಿಂದ ಹೊರಟಾಗ ಇಲ್ಲಿನ ಕರ್ನಾಟಕ ಸಂಘವು ಅವರಿಗೆ ಅತ್ಯಂತ ಹೃದ್ಯವಾದ ಬೀಳ್ಕೊಡುಗೆಯ ಸಮಾರಂಭವನ್ನು ಏರ್ಪಡಿಸಿತ್ತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳನ್ನಾಗಿ ಭೈರಪ್ಪನವರನ್ನು ಆಹ್ವಾನಿಸಲಾಗಿತ್ತು. 1996ರಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಾನೂ ಪಾಲ್ಗೊಂಡಿದ್ದೆ. ಭೈರಪ್ಪನವರಂತೂ ಆ ದಿನ ಅಭಿಮಾನಿ ಗಳಿಂದ ಸುತ್ತುವರಿಯಲ್ಪಟ್ಟಿದ್ದರು. ತುಂಬ ಅಳುಕಿನಿಂದಲೇ ಅವರನ್ನು ಮಾತನಾಡಿಸಿ ನಮ್ಮ ಮನೆಗೆ ಅವರು ಬರಬಹುದೇ ಎಂಬ ಹಿಂಜರಿಕೆಯ ಪ್ರಶ್ನೆಯನ್ನು ಕೇಳಿದೆ. ಅವರು ತೀರಾ ಸರಳವಾಗಿ ನನ್ನೊಡನೆ ಮಾತನಾಡಿದರು. ಈ ಸಲದ ಮುಂಬಯಿಯ ವಾಸ್ತವ್ಯ ಸ್ವಲ್ಪ ಕಾಲದ್ದಾಗಿರುವುದರಿಂದ ಬರಲಾಗದೆಂದು ಹೇಳಿದರು. ಆದರೆ ಅವರ ವಿದೇಶ ಪ್ರಯಾಣಗಳು ಮುಂಬಯಿಯ ಮಾರ್ಗ ವಾಗಿಯೇ ಆಗುವುದರಿಂದ ನಂತರ ಯಾವಾಗಲಾದರೂ ಬರುವುದಾಗಿ ತಿಳಿಸಿ ಕಾಗದವನ್ನು ಬರೆಯುವಂತೆ ಮನೆಯ ವಿಳಾಸವನ್ನು ಕೊಟ್ಟರು. ಆ ಸಮಯದಲ್ಲಿ ಅವರು ಮುಂಬಯಿಯ ಕತೆಗಾರ್ತಿ ಶ್ರೀಮತಿ ಮಿತ್ರಾ ವೆಂಕಟ್ ರಾಜ್ ಅವರ ಬಾಂದ್ರಾದ ಮನೆಯಲ್ಲಿ ಇಳಿದುಕೊಂಡಿದ್ದರು.

ಅವರ ಅನುಮತಿಯನ್ನು ಪಡೆದು ನಾನು ಮಿತ್ರಾ ಅವರ ಮನೆಯಲ್ಲಿ ಮರುದಿನ ಬೆಳಗ್ಗೆ ಭೈರಪ್ಪ ನವರನ್ನು ಭೇಟಿಯಾದೆ. ಆಗಿನ್ನೂ ನಾನು ಅವರ ಆತ್ಮವೃತ್ತಾಂತವಾದ ಭಿತ್ತಿಯನ್ನು ಓದಿರಲಿಲ್ಲ. ಹೀಗಾಗಿ ಜಲಪಾತ ಕಾದಂಬರಿಯಲ್ಲಿ ಅವರು ಮುಂಬಯಿಯ ಬದುಕನ್ನು ಅಷ್ಟೊಂದು ಸಹಜ ವಾಗಿ ಹೇಗೆ ಚಿತ್ರಿಸಲು ಸಾಧ್ಯವಾಯಿತೆಂಬ ಮುಗ್ಧ ಪ್ರಶ್ನೆಯನ್ನು ಕೇಳಿದೆ, ಅವರು ಸುಮ್ಮನೇ ಮುಗುಳ್ನಕ್ಕರು.

ಇದನ್ನೂ ಓದಿ: Raghava Sharma Nidle Column: ಸುಪ್ರೀಂಕೋರ್ಟಿನಲ್ಲಿ ವಜಾಗೊಂಡದ್ದು ಸರಕಾರದ ಕಣ್ತಪ್ಪಿದ್ದು ಹೇಗೆ ?

ನಂತರದಲ್ಲಿ ನಾನು ಅವರಿಗೆ ಪತ್ರವೊಂದನ್ನು ಬರೆದು ಮುಂದಿನ ವಿದೇಶ ಪ್ರಯಾಣದಲ್ಲಿ ನಮ್ಮೊ ಡನೆ ಒಂದು ದಿನವನ್ನು ಕಳೆಯಬೇಕೆಂದು ವಿನಂತಿಸಿಕೊಂಡೆ. ಅದೇ ವರುಷದ ಆಗಸ್ಟ್ ತಿಂಗಳಿನಲ್ಲಿ ಅವರು ಮುಂಬಯಿ ಮಾರ್ಗವಾಗಿ ವಿದೇಶಕ್ಕೆ ತೆರಳುವವರಿದ್ದರು. ಅವರ ಪ್ರಯಾಣದ ಕಾರ್ಯಕ್ರಮದಲ್ಲಿ ಒಂದು ದಿನದ ಹೆಚ್ಚುವರಿಯನ್ನು ಮಾಡಿ ಅಣುಶಕ್ತಿನಗರದ ನಮ್ಮ ಮನೆಗೆ ಬಂದು ನಮ್ಮೊಡನಿದ್ದರು.

ಅಂದಿನಿಂದ ಪ್ರಾರಂಭವಾದ ನಮ್ಮ ಒಡನಾಟವು ಕ್ರಮೇಣ ಗಟ್ಟಿಯಾಗುತ್ತಾ ಬಂದು ನಂತರದಲ್ಲಿ ಅವರು ಮುಂಬಯಿಗೆ ಬಂದರೆ ನಮ್ಮಲ್ಲಿಯೇ ಉಳಿಯುವುದು ಎಂಬ ಆತ್ಮೀಯ ಮಟ್ಟವನ್ನು ತಲುಪಿತು. ಪಿತೃವಾತ್ಸಲ್ಯದಿಂದ ಅವರು ನನ್ನನ್ನು ಕಾಣುತ್ತಿದ್ದರು. ಇದೊಂದು ನನ್ನ ಭಾಗ್ಯವೆಂದೇ ನಾನು ನಂಬಿದ್ದೇನೆ. ಅವರ ಕಾದಂಬರಿಗಳ ಆಂಗ್ಲಾನುವಾದವನ್ನು ಓದಿರುವ ನನ್ನ ಪತಿ ರಾಮರಾವ್‌ರವರೂ ಸಹ ಭೈರಪ್ಪನವರ ಉತ್ಕಟ ಅಭಿಮಾನಿ.

ಪ್ರತಿ ಬಾರಿಯೂ ಭೈರಪ್ಪನವರು ನಮ್ಮಲ್ಲಿ ಉಳಿದುಕೊಂಡಾಗ ಅವರ ಕಾದಂಬರಿಗಳ ಬಗ್ಗೆ ನಾನವರನ್ನು ಪ್ರಶ್ನಿಸುತ್ತಿದ್ದೆ. ಅವರು ಉತ್ತರಿಸುತ್ತಿದ್ದರಲ್ಲದೇ, ಅನೇಕ ಹೊಸ ವಿಷಯಗಳನ್ನು ಹೇಳುತ್ತಿದ್ದರು. ಹಾ.ಮಾ.ನಾಯಕರು ಹೇಳಿರುವಂತೆ ಅವರಷ್ಟು ದೇಶ ಸುತ್ತಿ ಕೋಶ ಓದಿದವರು ಇನ್ನೊಬ್ಬರಿಲ್ಲ. ತುಂಬು ಅನುಭವದ ಅವರ ಮಾತುಗಳನ್ನು ಮತ್ತೆ ಮತ್ತೆ ಕೇಳಬೇಕೆನಿಸುತ್ತಿತ್ತು. ಭೈರಪ್ಪನವರ ಅಧ್ಯಯನಶೀಲ ಪ್ರವೃತ್ತಿ ಅವರ ಬರವಣಿಗೆಗೆ ತೂಕವನ್ನೂ ಅಧಿಕೃತತೆಯನ್ನೂ ಇತ್ತಿದೆ.

ಭಾರತದ ಸಾಹಿತ್ಯವಲಯಗಳಲ್ಲಿ ಅವರಷ್ಟು ಜನಪ್ರಿಯರಾದ ಇನ್ನೊಬ್ಬ ಕಾದಂಬರಿಕಾರನಿಲ್ಲ. ಇಷ್ಟು ಜನಪ್ರಿಯತೆಯನ್ನು ಪಡೆದ ನಂತರವೂ ಅವರಲ್ಲಿ ಸ್ವಲ್ಪವೂ ಹಮ್ಮು ಬಿಮ್ಮುಗಳಿರಲಿಲ್ಲ. ಬಾಲ್ಯದ ಕಷ್ಟಗಳನ್ನು ಎದುರಿಸಿ ಉಂಡ ನಿರ್ಮಮದಿಂದಲೇ ಮುಂದಿನ ಯಶಸ್ಸು ಕೀರ್ತಿಗಳನ್ನೂ ಅವರು ಸ್ವೀಕರಿಸಿದರು. ಆದರೆ ಕೆಲವು ವಿಮರ್ಶಕರು ಅವರನ್ನು ಕುರಿತು ಈ ವಿಷಯವನ್ನು ಹೇಳು ವಾಗ ಜನಪ್ರಿಯತೆಯೆನ್ನುವುದು ಲೇಖಕನ ಒಂದು ದೋಷವೇನೋ ಎಂಬಂತೆ ಬಿಂಬಿಸು ತ್ತಾರೆ.

ಅಗ್ಗದ ಕೃತಿಗಳು ತರುವ ಜನಪ್ರಿಯತೆ ಓದುಗರ ರುಚಿಯನ್ನು ಅಡ್ಡದಾರಿಗೆಳೆಯುವ ಅಪಾಯ ವನ್ನು ಹೊಂದಿರುವುದು ನಿಜವೇ. ಆದರೆ ಭೈರಪ್ಪನವರ ಜನಪ್ರಿಯತೆ ಅಂತಹುದಲ್ಲ. ಅವರ ವಾಚಕವೃಂದದಲ್ಲಿ ಸಾಹಿತಿಗಳಿದ್ದಾರೆ, ವಿಜ್ಞಾನಿಗಳಿದ್ದಾರೆ, ವೈದ್ಯರಿದ್ದಾರೆ, ಕಾನೂನು ತಜ್ಞರಿದ್ದಾರೆ, ಗೃಹಿಣಿಯರಿದ್ದಾರೆ, ಯುವಜನತೆಯೂ ಇದೆ, ವೃದ್ಧರೂ ಇದ್ದಾರೆ.

ಇಂತಹ ವೈವಿಧ್ಯಮಯವಾದ ವಾಚಕವೃಂದವನ್ನು ತೃಪ್ತಿಪಡಿಸುವುದು ಸುಲಭದ ಮಾತಲ್ಲ. ಮುಂಬಯಿಯ ಮರಾಠಿ ಸಮಾರಂಭಗಳಿಗೆ ಅವರು ಮುಖ್ಯ ಅತಿಥಿಗಳಾಗಿ ಬರುತ್ತಿದ್ದಾಗ ಮಹಾ ರಾಷ್ಟ್ರದ ಕಾವ್ಯಾಸಕ್ತರು ಅವರನ್ನು ಬರಮಾಡಿಕೊಳ್ಳುತ್ತಿದ್ದ ಪರಿಯನ್ನು ಹೇಳಬೇಕು. ಅವರೊಂದಿಗೆ ಒಂದೆರಡು ಮಾತುಗಳನ್ನಾಡಿದರೆ ಸಾಕೆಂದು ಹಂಬಲಿಸುವ ಹಿರಿಯ ಸಾಹಿತಿಗಳು, ಅವರ ಹಸ್ತಾಕ್ಷರಕ್ಕೆ ಮುಗಿಬೀಳುವ ಯುವವೃಂದ, ಸ್ವಲ್ಪ ಹತ್ತಿರದಿಂದ ಅವರನ್ನು ನೋಡ ಬೇಕೆಂದು ಗುಂಪಿನಲ್ಲಿ ಮುನ್ನುಗ್ಗುವ ಅವರ ಅಭಿಮಾನಿಗಳು ಇವರನ್ನೆಲ್ಲ ನೋಡಿದಾಗ ಅನುವಾದಿತ ಕೃತಿಗಳನ್ನು ಓದಿಯೇ ಅವರ ಬಗ್ಗೆ ಇಷ್ಟೊಂದು ಪ್ರೀತಿಯನ್ನು ಈ ಜನ ಬೆಳೆಸಿಕೊಂಡಿ ದ್ದಾರೆ; ನಾವು ಅವರ ಕೃತಿಗಳನ್ನು ಮೂಲದಲ್ಲಿಯೇ ಓದುತ್ತೇವಲ್ಲ ಎನ್ನುವ ಕೋಡು ತಲೆಯ ಮೇಲೆ ಮೂಡಿಯೇ ಬಿಡುತ್ತಿತ್ತು.

ಹೊರನಾಡಿನಲ್ಲಿಯೂ ಈ ಮಟ್ಟದ ಮನ್ನಣೆಗೆ ಪಾತ್ರರಾಗುವುದು ಸಮಾನ್ಯ ಸಾಧನೆಯಲ್ಲ. ಮರಾಠಿ ಸಾಹಿತ್ಯ ಪ್ರೇಮಿ ಶ್ರೀ. ಪರ್ವಾ ಅವರು ವಿಮಾನ ನಿಲ್ದಾಣದಲ್ಲಿ ಭೈರಪ್ಪನವರನ್ನು ಬರಮಾಡಿ ಕೊಂಡು ಗೃಹಭಂಗ, ಪರ್ವದಂತಹ ಕೃತಿಗಳನ್ನು ಬರೆದ ಮಹಾನ್ ವ್ಯಕ್ತಿ ಈಗ ನನ್ನ ಕಣ್ಣ ಮುಂದೆ ನಿಂತಿದ್ದಾರೆನ್ನುವುದನ್ನು ನಾನು ನಂಬಲೇ ಆಗುತ್ತಿಲ್ಲ ಎಂದು ಭಾವುಕರಾಗಿ ಉದ್ಗರಿಸಿದ್ದರು.

ಪುಣೆಯ ವಿಶ್ವವಿದ್ಯಾಲಯವು 2003ರಲ್ಲಿ ಭೈರಪ್ಪನವರ ಅನುವಾದಿತ ಕೃತಿಗಳನ್ನು ಕುರಿತಾಗಿಯೇ ಮೂರು ದಿನಗಳ ಕಮ್ಮಟವನ್ನು ಏರ್ಪಡಿಸಿತ್ತು. ಮರಾಠಿಯ ಪ್ರಸಿದ್ಧ ಪತ್ರಿಕೆ ಲೋಕಸತ್ತಾ 2016 ರಲ್ಲಿ ಲೋಕಸತ್ತಾ ಗಪ್ಪಾ ಎನ್ನುವ ವಿಶಿಷ್ಟ ಹರಟೆಯ ಕಾರ್ಯಕ್ರಮವನ್ನು ಪ್ರಾರಂಭಿಸಿತು. ಪ್ರಸಿದ್ಧ ಸಾಹಿತಿಗಳನ್ನು ಹಲವಾರು ಆಮಂತ್ರಿತ ಓದುಗರೊಡನೆ ಮುಖಾಮುಖಿಯಾಗಿಸುವ ಕಾರ್ಯಕ್ರಮ ವಿದು.

ಮರಾಠಿಗರ ಮಹತ್ತ್ವಾಕಾಂಕ್ಷೆಯ ಈ ಕಾರ್ಯಕ್ರಮವನ್ನು 2016, ಏಪ್ರಿಲ್ 2ರ ಶನಿವಾರದಂದು ಉದ್ಘಾಟಿಸಿ ಮೊದಲ ಕಂತನ್ನು ನಡೆಸಿಕೊಡುವ ಮರ್ಯಾದೆಯನ್ನು ಮರಾಠಿಯ ಜನ ತಮ್ಮವರಿಗೆ ನೀಡದೆ ಭೈರಪ್ಪನವರಿಗೆ ನೀಡಿದರೆಂದರೆ ಆ ಭಾಷೆಯ ಓದುಗರನ್ನು ಭೈರಪ್ಪನವರು ಯಾವ ಮಟ್ಟದಲ್ಲಿ ಆಕರ್ಷಿಸಿದ್ದರೆಂಬುದು ವೇದ್ಯವಾಗುತ್ತದೆ.

ಭೈರಪ್ಪನವರ ಕಾದಂಬರಿಗಳನ್ನು ಮರಾಠಿಗೆ ಅನುವಾದಿಸಿರುವ ಶ್ರೀಮತಿ ಉಮಾ ಕುಲಕರ್ಣಿ ಯವರು ನನಗೊಂದು ಪ್ರಸಂಗವನ್ನು ಹೇಳಿದರು. ಒಮ್ಮೆ ಪಂಢರಪುರದಲ್ಲಿ ನಡೆದ ಸಾಹಿತ್ಯಕ ಕಾರ್ಯಕ್ರಮವೊಂದರಲ್ಲಿ ಊಟದ ಬಿಡುವಿನಲ್ಲಿ ಮರಾಠಿ ಮಹಿಳೆಯೊಬ್ಬರು ಬಂದು ಪಕ್ಕ ದಲ್ಲಿಯೇ ನಿಂತಿದ್ದ ಉಮಾ ಅವರನ್ನು ಮಾತನಾಡಿಸದೇ ಭೈರಪ್ಪನವರನ್ನು ಮಾತನಾಡಿಸಿದರಂತೆ.

ಅಂದರೆ ಭೈರಪ್ಪನವರನ್ನು ಕನ್ನಡವಲ್ಲದ ಬೇರೆ ಭಾಷೆಯ ಓದುಗರು ಎಷ್ಟರಮಟ್ಟಿಗೆ ತಮ್ಮವ ರನ್ನಾಗಿ ಮಾಡಿಕೊಂಡು ಬಿಟ್ಟಿದ್ದಾರೆ ಎನ್ನುವುದಕ್ಕೆ ಇದೇ ಸಾಕ್ಷಿ ಎಂದು ಉಮಾ ಹೆಮ್ಮೆಯಿಂದ ಹೇಳಿದ್ದರು. 2016ರ ಜನವರಿಯಲ್ಲಿ ಬೆಂಗಳೂರಿನಲ್ಲಿ ನಡೆದ ಭೈರಪ್ಪನವರ ಕೃತಿಗಳ ಕುರಿತಾದ ಅವಧಾನವು ಬಲು ಅಪರೂಪದ ಕಾರ್ಯಕ್ರಮ.

ಭೈರಪ್ಪನವರ ಕಾದಂಬರಿಪ್ರಿಯರ ಕೂಟದ ಉತ್ಸಾಹಿಗಳು ಏರ್ಪಡಿಸಿ, ಶತಾವಧಾನಿ, ಡಾ.ಆರ್.ಗಣೇಶ್ ಅವರು ನಡೆಸಿಕೊಟ್ಟ ಈ ಕಾರ್ಯಕ್ರಮ ಕಣ್ಣು ಕಿವಿಗಳಿಗೊಂದು ಹಬ್ಬವಾಗಿತ್ತು. ನಮ್ಮ ಹಿಂದಿನ ಪ್ರಮುಖ ಕವಿಗಳನ್ನು ಮತ್ತು ಅವರ ಕಾವ್ಯಗಳನ್ನು ಕುರಿತಾಗಿ ಅವಧಾನವನ್ನು ನಡೆಸುವುದು ರೂಢಿಯಲ್ಲಿರುವ ಸಾಹಿತ್ಯಾಮೋದ. ಆದರೆ ಸಮಕಾಲೀನ ಸಾಹಿತಿಯೊಬ್ಬರ ಕೃತಿಗಳನ್ನು ಕುರಿತಾಗಿ ಅವರ ಸಮ್ಮುಖದ ನಡೆಸಿದ ಈ ಅವಧಾನವು ‘ನ ಭೂತೋ ನ ಭವಿಷ್ಯತಿ’ ಎನ್ನುವಂತಹ ಸಂಗತಿ.

ಇದನ್ನು ವೀಕ್ಷಿಸಲು ಸಭಾಂಗಣ ಕಿಕ್ಕಿರಿದದ್ದೇ ಅಲ್ಲದೆ, ದೂರದ ಅಮೆರಿಕೆಯಿಂದಲೂ ಭೈರಪ್ಪ ನವರ ಅಭಿಮಾನಿಗಳು ಇದಕ್ಕಾಗಿಯೇ ಬಂದಿದ್ದರೆನ್ನುವುದೊಂದು ವಿಶೇಷ. ಮೂಲ ದ್ರವ್ಯವಿಲ್ಲದ ಯಾವ ವ್ಯಕ್ತಿತ್ವಕ್ಕೆ ಇಂತಹ ಮನ್ನಣೆ ದೊರೆಯುವುದು ಸಾಧ್ಯ? ಇಷ್ಟಾಗಿಯೂ ಅವರು ಅತ್ಯಂತ ಸರಳಜೀವಿಯಾಗಿದ್ದರು.

ರಾಜ್ಯ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಸರಸ್ವತಿ ಸಮ್ಮಾನ, ಪದ್ಮಶ್ರೀ, ಪದ್ಮಭೂಷಣ, ಹಲವಾರು ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್‌ಗಳು ಇಂತಹ ಸಾಕಷ್ಟು ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದರೂ ಅವರದು ತುಂಬಿದ ವಿನಯ. ನಮ್ಮ ಮನೆಗೆ ಅವರು ಬಂದಿರುವಾಗ ಅಡುಗೆಯ ಕೆಲಸದಲ್ಲಿ ನಾನು ನಿರತಳಾಗಬೇಕಾಗಿ ಅವರೊಡನೆ ಮಾತನಾಡಲು ಆಗುವುದಿಲ್ಲವಲ್ಲ ಎಂದು ಅಲವತ್ತುಗೊಂಡರೆ ಅದಕ್ಕೇನು? ಇಲ್ಲಿಯೇ ಕೂತ್ಕೋತೀನಿ, ನೀನು ಅಡುಗೆ ಮಾಡುತ್ತಾ, ಮಾತಾಡು’ ಎಂದು ಅಡುಗೆಮನೆಯಲ್ಲಿಯೇ ಒಂದು ಕುರ್ಚಿಯನ್ನು ಎಳೆದು ಕೊಳ್ಳುವ ಸರಳತೆ.

ಮಿಕ್ಸಿಯ ಮುಚ್ಚಳ ತೆಗೆಯುವಾಗ ಎರಡೂ ಸ್ವಿಚ್ಚುಗಳನ್ನೂ ಆರಿಸಿರುವಿ ತಾನೇ? ಕೈ ಜೋಪಾನ’ ಎಂದು ನನ್ನನ್ನು ಎಚ್ಚರಿಸುವ ವಾತ್ಸಲ್ಯ. ನೀನು ಗೊಜ್ಜವಲಕ್ಕಿಯನ್ನು ಮಾಡಿಕೊಟ್ಟರೆ ನಾನು ಏರ್‌ಪೋರ್ಟ್‌ನಲ್ಲಿಯೇ ಕೂತು ಅದನ್ನು ತಿಂದು ಆಮೇಲೆ ವಿಮಾನವನ್ನು ಹತ್ತುತ್ತೇನೆ’ ಎಂದು ಹೇಳುವ ಶಿಶು ಸಹಜವಾದ ಮುಗ್ಧತೆ.

ಮಂದ್ರವನ್ನು ಬರೆದು ಅದು ಮುದ್ರಿತವಾದ ನಂತರ ನಮ್ಮ ಮನೆಗೆ ಬಂದಾಗ ಅವರು ಮೊದಲು ವಿಮಾನ ನಿಲ್ದಾಣದಿಂದ ನೇರವಾಗಿ ರೂಯಾ ಕಾಲೇಜಿನ ಸಭಾಂಗಣಕ್ಕೆ ಕರೆದೊಯ್ಯುವಂತೆ ನನ್ನವರನ್ನು ಕೇಳಿದ್ದರು. ಕಾರಣವನ್ನು ಕೇಳಿದಾಗ ಮಂದ್ರದಲ್ಲಿ ರೂಯಾ ಕಾಲೇಜಿನ ಸಭಾಂಗಣ ದಲ್ಲಿ ಇನ್ನೂರಕ್ಕೂ ಮಿಕ್ಕಿದ ಶ್ರೋತೃಗಳು ನೆರೆದಿದ್ದರು ಎಂದು ಬರೆದು ಬಿಟ್ಟಿದ್ದೇನೆ. ಆದರೆ ಆ ಸಭಾಂಗಣವು ಅಷ್ಟು ದೊಡ್ಡದೋ ಅಲ್ಲವೋ ಎಂದು ಅನುಮಾನವಾಗುತ್ತಿದೆ. ಅದನ್ನು ನೋಡ ಬೇಕು ಎಂದಿದ್ದರು.

ಸಭಾಂಗಣದ ವೈಶಾಲ್ಯವನ್ನು ನೋಡಿದ ನಂತರವೇ ಅವರಿಗೆ ಸಮಾಧಾನವಾದದ್ದು. ಒಂದು ವೇಳೆ ಅದು ಸಣ್ಣದಾಗಿದ್ದರೆ ಏನು ಮಾಡುತ್ತಿದ್ದಿರಿ?’ ಎಂದು ಕೇಳಿದಾಗ ಮುಂದಿನ ಮುದ್ರಣದಲ್ಲಿ ಆ ತಪ್ಪನ್ನು ಸರಿಪಡಿಸುತ್ತಿz ಎಂದು ತಕ್ಷಣವೇ ಉತ್ತರಿಸಿದ್ದರು. ಅಷ್ಟು ಖಚಿತವಾಗಿರುತ್ತದೆ ಅವರ ಬರವಣಿಗೆ. ಕೆಲವು ವರ್ಷಗಳ ಹಿಂದೆ ಅವರಿಗೆ ಹೃದಯದಲ್ಲಿ ಪೇಸ್ ಮೇಕರ್ ಅಳವಡಿಸಬೇಕಾಗಿ ಬಂದಿತ್ತು. ಇಂಗ್ಲೆಂಡಿನಲ್ಲಿ ಈ ಚಿಕಿತ್ಸೆಯಾದ ನಂತರ ಮೈಸೂರಿಗೆ ಹೋಗುವ ಮೊದಲು ನಮ್ಮಲ್ಲಿಗೆ ಬಂದಿದ್ದರು.

ಅಡುಗೆಮನೆಯಲ್ಲಿ ಕುಳಿತಾಗ ಮೈಕ್ರೋವೇವ್ ಒಲೆಯನ್ನು ಶುರು ಮಾಡಬೇಡ. ನನಗೆ ಪೇಸ್ ಮೇಕರ್ ಹಾಕಿದ್ದಾರೆ ಎಂದು ಅದೊಂದು ತೀರಾ ಸಾಮಾನ್ಯ ವಿಷಯವೇನೋ ಎಂಬಂತೆ ಹೇಳಿದರು. ಅಯ್ಯೋ ಹೌದೇ? ಎಂಬ ಉದ್ಗಾರ ನನಗರಿವಿಲ್ಲದಂತೆಯೇ ನನ್ನ ಮುಖದಿಂದ ಹೊರ ಬಿತ್ತು. ಅದಕ್ಕೆ ಯಾಕೆ ಯೋಚನೆ? ಪಾಪ, ಎಪ್ಪತ್ತು ವರ್ಷದಿಂದ ಬಿಡುವಿಲ್ಲದೇ ಸತತವಾಗಿ ಈ ಹೃದಯ ದುಡಿಯುತ್ತಲೇ ಇದೆ. ಈಗ ಸ್ವಲ್ಪ ಸಹಾಯ ಕೇಳಿದೆ, ಅಷ್ಟೆ ಎಂದು ನಸುನಕ್ಕಿದ್ದರು.

ತತ್ತ್ವಶಾಸ್ತ್ರ ಅವರಿಗೆ ಬರಿಯ ಅಧ್ಯಯನದ ವಿಷಯವಲ್ಲ ಅವರು ಅದನ್ನೇ ಉಸಿರಾಡುತ್ತಿದ್ದಾರೆ ಎಂಬ ಸತ್ಯವನ್ನು ನಾನು ಅಂದು ಕಂಡುಕೊಂಡೆ. ಕಪಿಲೆಗೆ ನೆರೆ ಬಂದು ಆದ ಹಾನಿಗೆ ಊರಿನವರೆ ನದಿಯನ್ನು ಬೈಯುತ್ತಿzಗ ಸ್ವಲ್ಪವೂ ಸಿಟ್ಟಾಗದೆ ಇಷ್ಟು ವರ್ಷ ನಮ್ಮನ್ನು ಕಾಪಾಡಿದ ತಾಯಿ ಈಗ ಸ್ವಲ್ಪ ಉಗ್ರರೂಪದಲ್ಲಿ ಕಾಣಿಸಿಕೊಂಡಿದಾಳೆ ಅಂತ ಓಡಿಹೋಗಿ ಬಿಡೋದೆ? ಎಂದು ವಂಶವೃಕ್ಷದ ಶ್ರೋತ್ರಿಯರ ಬಾಯಲ್ಲಿ ಹೇಳಿಸಿದವರಲ್ಲವೇ ಭೈರಪ್ಪನವರು ಎಂದುಕೊಂಡೆ.

ಬೆಂಗಳೂರಿನಲ್ಲಿ 2015ರ ಡಿಸೆಂಬರ್ 20ರಂದು ನಡೆದ ನನ್ನ ಎರಡನೆಯ ಮಗಳ ಮದುವೆಗೆ ಬರಲಾದೀತೇ ಎಂದು ಅವರನ್ನು ಹಿಂಜರಿಕೆಯಿಂದಲೇ ಕೇಳಿದ್ದೆ. ಆ ಸಮಯದಲ್ಲಿ ಪ್ರಾಯಶಃ ತಾವು ಬರವಣಿಗೆಯಲ್ಲಿ ವ್ಯಸ್ತರಾಗುವುದರಿಂದ ಮೇ 1ರಂದು ನಡೆಯುವ ನಿಶ್ಚಿತಾರ್ಥದ ಕಾರ್ಯಕ್ರಮಕ್ಕೆ ಬರುವುದಾಗಿ ಹೇಳಿದ್ದರು. ಅಂದೇ ಅವರಿಗೆ ಬೇರಾವುದಾದರೂ ಕಾರ್ಯಕ್ರಮಕ್ಕೆ ಕರೆ ಬಂದರೆ ಬರಲಾಗದಲ್ಲವೇ ಎಂದು ನಾನು ಕೇಳಿದಾಗ ನಿನಗೆ ಹೇಳಿದ ಮೇಲೆ ಆಯ್ತು. ನಾನು ಇನ್ನಾವ ಕಾರ್ಯಕ್ರಮವನ್ನೂ ಒಪ್ಪಿಕೊಳ್ಳುವುದೇ ಇಲ್ಲ ಎಂದರು. ನಿಶ್ಚಿತಾರ್ಥದ ದಿನ ಬೆಳಗ್ಗೆಯೇ ಮೈಸೂರಿ ನಿಂದ ಹೊರಟು ಬೆಂಗಳೂರಿನ ಛತ್ರಕ್ಕೆ ಬಂದರು. ನನ್ನ ಮನೆ ಜನರಿಗೆ ಎಷ್ಟು ಸಂಭ್ರಮವೋ!

ಭೈರಪ್ಪನವರ ಅಭಿಮಾನಿಗಳೇ ಆಗಿದ್ದ ನಮ್ಮ ಬೀಗರಿಗೂ ಮಹದಾನಂದವಾಗಿ ಹೋಯ್ತು. ಅವರ ಉಪಸ್ಥಿತಿಯಿಂದ ಆ ಕಾರ್ಯಕ್ರಮಕ್ಕೇ ಒಂದು ಮೆರುಗು ಬಂದುದಲ್ಲದೇ ಅವರ ಆಶೀರ್ವಾದ ಮದುಮಕ್ಕಳಿಗೆ ದೊರೆತದ್ದರಿಂದ ನನಗೆ ಬಹಳ ಸಮಾಧಾನವಾಯ್ತು.

ನನ್ನ ಮೊಮ್ಮಗನಿಗೆ ಭೈರಪ್ಪನವರಿಂದಲೇ ಅಕ್ಷರಾಭ್ಯಾಸವನ್ನು ಮಾಡಿಸಬೇಕೆಂದು ನನ್ನ ಹಂಬಲ ವಾಗಿತ್ತು. ಅವನು ಪ್ಲೇಸ್ಕೂಲಿನಲ್ಲಿ ಎ,ಬಿ,ಸಿ,ಡಿ ಬರೆಯುವ ಮೊದಲು ಭೈರಪ್ಪನವರು ಅವನ ಕೈಹಿಡಿದು ಅ, ಆ, ಇ, ಈ ಬರೆಸುವಂತಾಗಲಿ ಎಂಬ ಹಾರೈಕೆ. 2018ರ ಜನವರಿಯಲ್ಲಿ ಮುಂಬಯಿ ಯಲ್ಲಿ ನಡೆದ ಹೊರನಾಡ ಕನ್ನಡಿಗರ ಸಾಹಿತ್ಯ ಸಮ್ಮೇಳನಕ್ಕೆ ಅವರು ಮುಖ್ಯ ಅತಿಥಿಯಾಗಿ ಆಹ್ವಾನಿತರಾಗಿದ್ದರು.

ಅದಕ್ಕಾಗಿ ಇಲ್ಲಿಗೆ ಬಂದಿzಗ ನನ್ನ ಕೋರಿಕೆಯ ಮೇರೆಗೆ ಏಳು ತಿಂಗಳಿನ ಮಗುವನ್ನು ತೊಡೆಯ ಮೇಲೆ ಕೂಡಿಸಿಕೊಂಡು ಶ್ರೀಗಣೇಶಾಯ ನಮಃ ಎಂದು ತಿದ್ದಿಸಿದರು. ಅವರೊಂದಿಗಿನ ಎರಡು ದಶಕಗಳಿಗೂ ಮೀರಿದ ಒಡನಾಟದಲ್ಲಿ ಇಂತಹ ಅನೇಕ ಕ್ಷಣಗಳು ವಾತ್ಸಲ್ಯದ ಊಟೆಗಳಾಗಿ ನನ್ನ ಭಾವವನ್ನು ಪೋಷಿಸುತ್ತಲಿವೆ. ಅವನ್ನು ನೆನೆದಾಗಲೆ ಎಷ್ಟು ಭಾಗ್ಯವಪ್ಪಾ ನನ್ನದು ಎಂದು ನನ್ನ ಮನಸ್ಸು ವಿನಮ್ರವಾಗಿ ಹೋಗುತ್ತದೆ.

ಭೈರಪ್ಪನವರು ನಿರ್ವಿವಾದವಾಗಿ ಕನ್ನಡದ ಮತ್ತು ಭಾರತದ ಅತ್ಯಂತ ಜನಪ್ರಿಯ ಕಾದಂಬರಿ ಕಾರರು. ನಿಜವಾದ ಅರ್ಥದಲ್ಲಿ ಅವರು ಕನ್ನಡದ ಮತ್ತು ಕನ್ನಡಿಗರೆಲ್ಲರ ಕಣ್ಮಣಿ. ಪಂಡಿತ ಪಾಮರರಿಬ್ಬರನ್ನೂ ಒಂದೇ ಹದದಲ್ಲಿ ತಟ್ಟಿ ರಸವುಣ್ಣಿಸುವ ಶಕ್ತಿ ಅವರ ಸಾಹಿತ್ಯಕ್ಕಿದೆ. ಸೃಜನ ಶೀಲತೆಯೆನ್ನುವುದು ಅವರ ಮೂಲಭೂತ ಸಾಮರ್ಥ್ಯ.

ಒಟ್ಟಿನಲ್ಲಿ ಭೈರಪ್ಪನವರು ಈ ಯುಗವು ಕಂಡ ಅತ್ಯಂತ ಶ್ರೇಷ್ಠ ಕಾದಂಬರೀಕಾರರೆನ್ನುವುದು ನಿರ್ವಿವಾದ. ಸಾಮಾಜಿಕ, ಐತಿಹಾಸಿಕ, ಪೌರಾಣಿಕ, ವೈಜ್ಞಾನಿಕ, ತಾಂತ್ರಿಕ, ರಾಜನೈತಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಮೊದಲಾಗಿ ಹಲವು ಹತ್ತು ಲೋಕಗಳಲ್ಲಿ ಅವರ ಲೇಖನಿ ವಿಹರಿಸಿ ಬಂದಿದೆ. ಓದುಗರನ್ನು ಇನ್ನಿಲ್ಲದ ತಾದಾತ್ಮ್ಯದಿಂದ ವಿಹರಿಸಿಸಿದೆ.

ಬರಹದಿಂದ ಬರುವ ಆದಾಯವನ್ನೆಲ್ಲ ಮತ್ತೆ ಪ್ರವಾಸ, ಅಧ್ಯಯನಗಳಿಗೇ ವಿನಿಯೋಗಿಸಿ ಅವರು ಕೆರೆಯ ನೀರನ್ನು ಕೆರೆಗೇ ಚೆಲ್ಲಿ ಬಿಡುತ್ತಿದ್ದರು. ಅವರ ಸನ್ಮಾನಾರ್ಥವಾಗಿ ನೀಡಿದ ಹಣವನ್ನು ಅಲ್ಲಿಯೇ ಯಾವುದಾದರೂ ಸಮಾಜಸೇವೆಗೆ ವಿನಿಯೋಗಿಸಿ ಬಿಡುತ್ತಿದ್ದರು. ನಿರ್ಮಮವೆನ್ನುವುದು ಅವರ ಸಹಜ ಗುಣ. ಅವರ ಕಾದಂಬರಿಗಳು ಅವರನ್ನು ಚಿರಂಜೀವಿಯನ್ನಾಗಿ ಮಾಡಿವೆ. ಅವರು ಅಮರರು.