M J Akbar Column: ದೇವಪ್ರಭುತ್ವದ ವಿರುದ್ಧ ಭರ್ಜರಿ ಜನಾದೇಶ
1947ರಲ್ಲಿ ಒಂದು ದೇಶ ಎಂಬ ಪರಿಕಲ್ಪನೆಗಿಂತ ಹೆಚ್ಚಾಗಿ ಭಾರತ-ವಿರೋಧಿ ಧೋರಣೆ ಯೊಂದಿಗೆ ಬಂಗಾಳಿ ‘ಮಾಟಿಯ’ ಮೇಲೆ ಪೂರ್ವ ಪಾಕಿಸ್ತಾನ ಜನಿಸಿತ್ತು. ಅಲ್ಲಿದ್ದ ಬಂಗಾಳಿ ಗಳಿಗೆ ಬಹಳ ಬೇಗನೆ ತಾವು ಮೋಸಹೋಗಿದ್ದು ಅರ್ಥವಾಗಿತ್ತು. ಅವರು ನಾಗರಿಕತೆಯ ಕಳ್ಳತನದ ಸಂತ್ರಸ್ತರಾಗಿದ್ದರು. ಅವರ ಗುರುತಿನ ತಳಹದಿಯಾಗಿದ್ದ ಭಾಷೆಯನ್ನೇ ಅವರಿಂದ ಪಾಕಿಸ್ತಾನದ ಮುಖ್ಯಭೂಮಿಯು ಕಿತ್ತುಕೊಳ್ಳುತ್ತಿತ್ತು.
-
ಅಕ್ಬರ್ʼನಾಮಾ
ಎಂ.ಜೆ.ಅಕ್ಬರ್
ಫೆಬ್ರವರಿ 12ರ ಬೆಳಗ್ಗೆ ಬಾಂಗ್ಲಾದೇಶದ ಜನರು ಎರಡು ಚೂರಿನ ಕನ್ನಡಿ ನೋಡುತ್ತಾ ಕವಲುದಾರಿಯಲ್ಲಿ ನಿಂತಿದ್ದರು. ಒಂದು ಕನ್ನಡಿಯ ಚೂರಿನಲ್ಲಿ ದಾರಿ ತಪ್ಪಿದ ರಾಷ್ಟ್ರೀಯ ವಾದ ಕಾಣಿಸುತ್ತಿತ್ತು. ಹದಗೆಟ್ಟ ಸಂದರ್ಭಗಳಿಂದಾಗಿ ಏಕಾಏಕಿ ಪ್ರವರ್ಧಮಾನಕ್ಕೆ ಬಂದ ಹುಸಿ ಹೋರಾಟಗಾರರು ಆ ರಾಷ್ಟ್ರೀಯವಾದವನ್ನು ಹುಟ್ಟುಹಾಕಿದ್ದರು.
ಅವರು ಬಾಂಗ್ಲಾದೇಶವನ್ನು ಬಂಗಾಳಿ ಮತ್ತು ಬಾಂಗ್ಲಾದೇಶಿ ಎಂದು ಒಡೆಯಲು ಬಯಸಿ ದ್ದರು. ಸಂಸ್ಕೃತಿಯೇ ನಮ್ಮ ಗುರುತಿನ ವಂಶವಾಹಿ ಎಂಬ ನಂಬಿಕೆಯನ್ನು ಅವರು ತಿರುಚಿ ಹಾಕಲು ಯತ್ನಿಸುತ್ತಿದ್ದರು. ಅವರ ರಾಜಕೀಯ ಮುಖವಾಡವಾಗಿ ಮೇಣದ ರೆಕ್ಕೆಯೊಂದಿಗೆ ಸೂರ್ಯನ ಸಮೀಪಕ್ಕೆ ಹಾರುತ್ತಿರುವ ಸ್ವಯಂಘೋಷಿತ ದೇವರಕ್ಷಕ ರಿದ್ದರು.
ದೇಶದಲ್ಲಿ ಅಲ್ಪಸಂಖ್ಯಾತರನ್ನು ಕೂಡ ಸಮಾನವಾದ ಪ್ರಜೆಗಳಂತೆ ಕಾಣುವ ಸಂವಿಧಾನ ವನ್ನು ಬದಲಿಸಿ, ಅವರನ್ನು ಇತಿಹಾಸದ ಪಳೆಯುಳಿಕೆಗಳು ಎಂಬಂತೆ ಕಾಣುವ ಧರ್ಮಾ ಧಾರಿತ ಸಂವಿಧಾನವನ್ನು ಜಾರಿಗೆ ತರುವ ಕನಸನ್ನು ಅವರು ಕಾಣುತ್ತಿದ್ದರು. ಹೀಗಾಗಿ ಬಾಂಗ್ಲಾದೇಶದಲ್ಲಿ ನಡೆಯುತ್ತಿದ್ದ ಗಲಭೆಗಳನ್ನು ನಿಲ್ಲಿಸುವ ಸರಕಾರವನ್ನು ಮತದಾರರು ಆಯ್ಕೆ ಮಾಡಬೇಕಿತ್ತು. ಅವರ ಮುಂದೆ 1947 ಅಥವಾ 1971ರಲ್ಲಿ ಒಂದನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆಯಿತ್ತು.
1947ರಲ್ಲಿ ಒಂದು ದೇಶ ಎಂಬ ಪರಿಕಲ್ಪನೆಗಿಂತ ಹೆಚ್ಚಾಗಿ ಭಾರತ-ವಿರೋಧಿ ಧೋರಣೆ ಯೊಂದಿಗೆ ಬಂಗಾಳಿ ‘ಮಾಟಿಯ’ ಮೇಲೆ ಪೂರ್ವ ಪಾಕಿಸ್ತಾನ ಜನಿಸಿತ್ತು. ಅಲ್ಲಿದ್ದ ಬಂಗಾಳಿ ಗಳಿಗೆ ಬಹಳ ಬೇಗನೆ ತಾವು ಮೋಸಹೋಗಿದ್ದು ಅರ್ಥವಾಗಿತ್ತು. ಅವರು ನಾಗರಿಕತೆಯ ಕಳ್ಳತನದ ಸಂತ್ರಸ್ತರಾಗಿದ್ದರು. ಅವರ ಗುರುತಿನ ತಳಹದಿಯಾಗಿದ್ದ ಭಾಷೆಯನ್ನೇ ಅವರಿಂದ ಪಾಕಿಸ್ತಾನದ ಮುಖ್ಯಭೂಮಿಯು ಕಿತ್ತುಕೊಳ್ಳುತ್ತಿತ್ತು.
ಇದನ್ನೂ ಓದಿ: M J Akbar Column: ಜಗತ್ತಿನ ರೂಪವನ್ನೇ ಬದಲಿಸುತ್ತಿರುವ ಡೊನಾಲ್ಡ್ ಟ್ರಂಪ್
ಇತಿಹಾಸದ ತಂಪುಕಣ್ಣಿನಿಂದ ಈಗಲೂ ಪರೀಕ್ಷಿಸಬೇಕಾದ ಒಂದು ವ್ಯಂಗ್ಯ ಏನೆಂದರೆ, ಪಾಕಿಸ್ತಾನದ ಮುಸ್ಲಿಂ ಲೀಗ್ ನಿರ್ಮಾತೃಗಳು ಉರ್ದು ಒಂದೇ ತಮ್ಮ ದೇಶದ ಅಧಿಕೃತ ಭಾಷೆಯಾಗಬೇಕೆಂದು ಒತ್ತಾಯಿಸುತ್ತಿದ್ದರು. ದೇಶ ವಿಭಜನೆಯ ಬಳಿಕ ಹುಟ್ಟಿದ ಪಾಕಿ ಸ್ತಾನಕ್ಕೆ ಭಾರತದ ಬೇರೆ ಬೇರೆ ಭಾಷಿಕ ಭೌಗೋಳಿಕ ಪ್ರದೇಶಗಳ ಬೇರೆ ಬೇರೆ ಚೂರುಗಳು ಸೇರ್ಪಡೆಯಾಗಿದ್ದವು. ಆದರೆ, ಈ ಎಲ್ಲಾ ಪ್ರದೇಶಗಳಲ್ಲೂ ಉರ್ದು ಭಾಷೆಯೇ ಅಧಿಕೃತ ಭಾಷೆಯಾಗಬೇಕೆಂದು ಪಾಕಿಸ್ತಾನದ ನಿರ್ಮಾತೃಗಳು ಬಯಸುತ್ತಿದ್ದರು.
ಬಂಗಾಳದಲ್ಲಿ ಬಂಗಾಳಿ, ಪಂಜಾಬ್‌ನಲ್ಲಿ ಪಂಜಾಬಿ, ಸಿಂಧ್‌ನಲ್ಲಿ ಸಿಂಧಿ, ಬಲೂಚಿಸ್ತಾನ ದಲ್ಲಿ ಬಲೂಚಿ, ಫ್ರಂಟಿಯರ್‌ನಲ್ಲಿ ಪಶ್ತೋ ಭಾಷೆಗಳನ್ನು ಮಾತನಾಡುತ್ತಿದ್ದ ಜನರಿಗೆ ಏಕಾಏಕಿ ‘ನಿಮ್ಮ ಭಾಷೆ ಉರ್ದು’ ಎಂದು ಪಾಕಿಸ್ತಾನದ ಆಡಳಿತಗಾರರು ಫರ್ಮಾನು ಹೊರಡಿಸಿದರೆ ಏನಾಗಬೇಡ? ವಾಸ್ತವವಾಗಿ ಉರ್ದು ಎಂಬುದು ಮಧ್ಯ ಭಾರತದಲ್ಲಿ ಬಳಕೆಯಲ್ಲಿದ್ದ ಸಂಗೀತಮಯ ಭಾಷೆಯಾಗಿತ್ತು.
ಅದನ್ನು ಕೃತಕವಾಗಿ ಸೃಷ್ಟಿಸಿದ ದೇಶದಲ್ಲಿ ಬಂಧಿಸಲು ಸಾಧ್ಯವೇ ಇರಲಿಲ್ಲ. ಹೀಗಾಗಿ 1971ರಲ್ಲಿ ಬಂಗಾಳಿಗಳು ಕೃತಕವಾಗಿ ಸೃಷ್ಟಿಸಿದ ದೇಶದ ಬದಲು ನಾಗರಿಕತೆಯಿಂದ ಬಳುವಳಿ ಪಡೆದ ದೇಶವನ್ನು ಆಯ್ಕೆ ಮಾಡಿಕೊಂಡರು. ಬಾಂಗ್ಲಾದೇಶ ರಚನೆಯಾಯಿತು.
2020ರ ದಶಕದಲ್ಲಿ ಕೆಲ ವಿದೇಶಿ ಶಕ್ತಿಗಳ ಬೆಂಬಲದೊಂದಿಗೆ ಬಾಂಗ್ಲಾದೇಶದ ಪಟ್ಟಭದ್ರರು 1971ರ ವಿದ್ಯಮಾನವನ್ನು ಹಿಮ್ಮುಖಗೊಳಿಸಲು ಯತ್ನಿಸಿದರು. ಭೌಗೋಳಿಕವಾಗಿ ಅಲ್ಲದಿದ್ದರೂ ಸೈದ್ಧಾಂತಿಕವಾಗಿ ಹಿಂದೆ ನಡೆದಿದ್ದರ ದಾಖಲೆಗಳನ್ನು ಅಳಿಸಿ ಹಾಕುವುದು ಅವರ ಉದ್ದೇಶವಾಗಿತ್ತು.
ಅದಕ್ಕಾಗಿ ಚುನಾವಣೆಯ ಮಾರ್ಗವನ್ನು ಆಯ್ಕೆ ಮಾಡಿಕೊಂಡರು. ಮತದಾರರ ಮನ ದಲ್ಲಿ ಭಾರತದ ವಿರುದ್ಧ ದ್ವೇಷವನ್ನು ಬಿತ್ತಿದರು. ಚುನಾವಣಾ ಯಂತ್ರವನ್ನು ದುರ್ಬಳಕೆ ಮಾಡಿಕೊಂಡು ಪಟ್ಟಭದ್ರರು ತಮ್ಮ ಉದ್ದೇಶವನ್ನು ಈಡೇರಿಸಿಕೊಳ್ಳಲು ಯತ್ನಿಸಿದರು.
ಜನರನ್ನು ಶೋಷಿಸಿ, ಅವರನ್ನು ರೊಚ್ಚಿಗೆಬ್ಬಿಸಿ, ಭಾರತದ ವಿರುದ್ಧ ಎತ್ತಿಕಟ್ಟಿ ಲಾಭ ಮಾಡಿಕೊಳ್ಳುವುದು ಅವರ ಉದ್ದೇಶವಾಗಿತ್ತು. ಈ ಕುತಂತ್ರಕ್ಕೆ ಮೊದಲು ಕ್ರಿಕೆಟ್ ಬಲಿಯಾಯಿತು. ಟಿ-20 ವಿಶ್ವಕಪ್‌ನಿಂದ ಬಾಂಗ್ಲಾದೇಶ ಹೊರಗುಳಿಯಿತು. ಎದ್ದೆನೋ ಬಿದ್ದೆನೋ ಎಂಬಂತೆ ಪಾಕಿಸ್ತಾನ ಅಲ್ಲಿಗೆ ಓಡಿ ಹೋಗಿ ಬೆಂಕಿಗೆ ಗಾಳಿ ಹಾಕಿತು.
ಸೈದ್ಧಾಂತಿಕವಾದಿಗಳ ಹಣೆಬರಹ ಏನೆಂದರೆ ಅವರಿಗೆ ಯಾವಾಗಲೂ ಜನಸಾಮಾನ್ಯರ ಮನಸ್ಸನ್ನು ಅರ್ಥಮಾಡಿಕೊಳ್ಳುವ ಸಾಮಾನ್ಯ ಜ್ಞಾನ ಇರುವುದಿಲ್ಲ. ಹೀಗಾಗಿ ಬಾಂಗ್ಲಾ ದೇಶದ ಮತದಾರರು ಬಂಗಾಳಿ ರಾಷ್ಟ್ರೀಯವಾದವನ್ನು ಹೆಮ್ಮೆಯಿಂದ ಎತ್ತಿ ಮೆರೆಸುವ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ)ಯನ್ನು ಚುನಾವಣೆಯಲ್ಲಿ ಗೆಲ್ಲಿಸಿದರು.
ಬಿಎನ್‌ಪಿಯ ಸಂಸ್ಥಾಪಕ ಜಿಯಾವುರ್ ರೆಹಮಾನ್. ಅವರು ಸೇನೆಯಲ್ಲಿ ಮೇಜರ್ ಹುದ್ದೆಯಲ್ಲಿದ್ದವರು. ತಮ್ಮ ದೇಶವನ್ನು ಪಾಕಿಸ್ತಾನವು ಒಂದು ವಸಾಹತಾಗಿ ಮಾಡಿ ಕೊಳ್ಳುತ್ತಿರುವುದರ ವಿರುದ್ಧ ಸಿಡಿದೆದ್ದು ಬಾಂಗ್ಲಾ ವಿಮೋಚನೆಗಾಗಿ ಪಣ ತೊಟ್ಟಿದ್ದರು.
1971ರ ಮಾರ್ಚ್‌ನಲ್ಲಿ ಚಿತ್ತಗಾಂಗ್‌ನ ರೇಡಿಯೋ ಕೇಂದ್ರದಲ್ಲಿ ಕುಳಿತು ‘ಬಾಂಗ್ಲಾದೇಶ ಸ್ವತಂತ್ರವಾಗಿದೆ’ ಎಂದು ಘೋಷಿಸಿದವರೂ ಅವರೇ. ನಂತರ ಜನರಲ್ ಜಿಯಾವುರ್ ರೆಹಮಾನ್ ಆಗಿ 1977ರಲ್ಲಿ ಬಾಂಗ್ಲಾದೇಶದ ಅಧ್ಯಕ್ಷರಾದರು. 1981 ರಲ್ಲಿ ಹತ್ಯೆ ಯಾಗುವವರೆಗೂ ಅವರು ಅಧ್ಯಕ್ಷರಾಗಿದ್ದರು. ಅವರ ಹೆಂಡತಿಯೇ ಬೇಗಂ ಖಲೀದಾ ಜಿಯಾ. ಪತಿಯ ಮರಣಾನಂತರ ಆಕೆ ಬಿಎನ್‌ಪಿಯನ್ನು ಮುನ್ನಡೆಸಿದರು.
ತೀರಾ ಇತ್ತೀಚೆಗೆ ಅವರು ನಿಧನರಾದರು. ಈಗ ಹೊಸತಾಗಿ ಪ್ರಧಾನಿಯಾಗಿರುವ ತಾರೀಖ್ ರೆಹಮಾನ್ ಈ ದಂಪತಿಯ ಮಗ. ತಾರೀಖ್ ರೆಹಮಾನ್ ಹೆಚ್ಚುಕಮ್ಮಿ ಎರಡು ದಶಕದ ಕಾಲ ವಿದೇಶದಲ್ಲಿ ಅಜ್ಞಾತವಾಸ ಅನುಭವಿಸುತ್ತಿದ್ದರು.
ಬಾಂಗ್ಲಾದೇಶಕ್ಕೆ ಬಂದರೆ ಅವರು ಬಂಧಿತರಾಗುವ ಸಾಧ್ಯತೆಯಿತ್ತು. ಶೇಖ್ ಹಸೀನಾರ ಪದಚ್ಯುತಿಯ ಬಳಿಕವೇ ಅವರು ಎಲ್ಲಾ ಸಿದ್ಧತೆ ಮಾಡಿಕೊಂಡು ಸ್ವದೇಶಕ್ಕೆ ಮರಳಿದರು. ಬಾಂಗ್ಲಾದೇಶದ ರಾಜಕೀಯ ವಲಯದಲ್ಲಿರುವ ಬೇರೆಲ್ಲಾ ಹಿರಿಯ ರಾಜಕಾರಣಿಗಿಳಿಗಿಂತ ಈತ ಹೆಚ್ಚು ಚಾಣಾಕ್ಷ. ತನ್ನ ತಾಯಿಯ ಮರಣಾನಂತರ ಬಿಎನ್‌ಪಿಯ ಚುಕ್ಕಾಣಿ ಹಿಡಿದ ತಾರೀಖ್ ರೆಹಮಾನ್, ಚುನಾವಣಾ ಪ್ರಚಾರದ ಸಮಯದಲ್ಲಿ ನೀಡಿದ ‘ಕ್ರಿಕೆಟ್ ಎಂಬುದು ಸೇತುವೆಯಾಗಬೇಕೇ ಹೊರತು ರಣರಂಗವಾಗಬಾರದು’ ಎಂಬ ಹೇಳಿಕೆ ಎಲ್ಲರ ಗಮನ ಸೆಳೆದಿತ್ತು.
ಅವರ ರಾಜಕೀಯ ವಿರೋಽಗಳು ಜಮಾತ್-ಎ-ಇಸ್ಲಾಮಿ ನೇತೃತ್ವದಲ್ಲಿ ಬಾಂಗ್ಲಾದೇಶಕ್ಕೆ ಪಾಪದಿಂದ ವಿಮೋಚನೆ, ಸ್ವರ್ಗದಲ್ಲಿ ಮುಕ್ತಿ ಹಾಗೂ, ಒಂದು ವೇಳೆ ಇವೆರಡೂ ಸಾಲದೆ ಇದ್ದರೆ, 15000 ಟಾಕಾ (ಬಾಂಗ್ಲಾದೇಶಿ ಹಣ) ಕೊಡಿಸುವುದಾಗಿ ಭರವಸೆ ನೀಡಿದ್ದರು. ಇಂಥ ‘ಅದ್ಭುತವಾದ’ ಚುನಾವಣಾ ಪ್ರಣಾಳಿಕೆಯನ್ನು ಸಿದ್ಧಪಡಿಸಲು ಬೇರೆ ಯಾರಿಗೂ ಸಾಧ್ಯ ವಿಲ್ಲ ಬಿಡಿ!
ಆದರೆ, ಬಾಂಗ್ಲಾದೇಶದ ಮತದಾರರಿಗೆ ಇದೇ ಭೂಮಿಯ ಮೇಲೆ ಒಳ್ಳೆಯ ಬದುಕು ಬೇಕಿತ್ತು. ಸತ್ತ ನಂತರದ ಮುಕ್ತಿಗಾಗಿ ಅವರು ಮನೆಯಲ್ಲೋ, ಮಸೀದಿಯಲ್ಲೋ ಕುರಾನ್ ಓದಿಕೊಳ್ಳು ತ್ತಿದ್ದರು. ಸ್ವರ್ಗದ ಅಧಿಪತಿಗಳು ತಮ್ಮ ಕೆಲಸವನ್ನು ಭೂಮಿಯ ಮೇಲಿರುವ ಸ್ವಯಂ ಘೋಷಿತ ಧಾರ್ಮಿಕ ಗುರುಗಳಿಗೆ ಹಸ್ತಾಂತರ ಮಾಡಿಲ್ಲ ಎಂಬುದು ಮತದಾರರಿಗೆ ಗೊತ್ತಿತ್ತು. ಹೀಗಾಗಿ ಚುನಾವಣೆಯಲ್ಲಿ ಜಮಾತ್‌ಗೆ ಸೋಲಾಗಿ, ಬಿಎನ್‌ಪಿ ಭರ್ಜರಿ ಜಯ ಗಳಿಸಿತು.
ವಾಸ್ತವವಾಗಿ ಬಿಎನ್‌ಪಿಯ ಜಯಭೇರಿಯ ಹಿಂದೆ ಇರುವುದು ಮಹಿಳೆಯರು. ಏಕೆಂದರೆ ಧಾರ್ಮಿಕ ಆಮಿಷಗಳ ಹಿಂದೆ ಸೀದ್ವೇಷದ ರಹಸ್ಯ ಉದ್ದೇಶಗಳಿರುವುದು ಅವರಿಗೆ ತಿಳಿದಿತ್ತು. ವಿವರವಾದ ಅಂಕಿ-ಅಂಶಗಳು ಇನ್ನೂ ದೊರೆತಿಲ್ಲ. ಆದರೆ ಚುನಾವಣೆಯ ಫಲಿತಾಂಶವನ್ನು ಮೇಲ್ನೋಟಕ್ಕೆ ವಿಶ್ಲೇಷಿಸಿದರೆ ಪುರುಷ ಮತದಾರರಿಗಿಂತ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿರುವುದು ಕಾಣಿಸುತ್ತದೆ.
ಬಾಂಗ್ಲಾದೇಶದ ಮಹಿಳೆಯರ ಕಣ್ಣುಗಳಲ್ಲಿ ಮೌನ ನಿರ್ಧಾರವೊಂದನ್ನು ನೀವು ಮತದಾನಕ್ಕೂ ಮುನ್ನವೇ ಕಾಣಬಹುದಿತ್ತು. ಸಮಸ್ಯೆ ಏನೆಂದರೆ, ಮಾಧ್ಯಮದವರು ಮುಖ ನೋಡುತ್ತಾರೆ, ಆದರೆ ಕಣ್ಣುಗಳನ್ನು ಮರೆತುಬಿಡುತ್ತಾರೆ. ಹೀಗಾಗಿ ಈ ಒಳಸುಳಿ ಹೊರ ಜಗತ್ತಿಗೆ ಕಾಣಿಸಿರಲಿಲ್ಲ.
ಅತ್ಯಂತ ಅಚ್ಚರಿಯ ಫಲಿತಾಂಶ ಬಂದಿದ್ದು ಢಾಕಾದಲ್ಲಿ. ಜಮಾತ್‌ನವರು ಢಾಕಾ ಮೇಲೆ ಹೆಚ್ಚು ನಿರೀಕ್ಷೆ ಇರಿಸಿಕೊಂಡಿದ್ದರು. ರಾಜಧಾನಿಯಲ್ಲಿರುವ ಜಮಾತ್ ಕ್ಯಾಂಪಸ್‌ಗಳೇ ದೇಶದ ಚುನಾವಣಾ ಫಲಿತಾಂಶವನ್ನು ತಮ್ಮ ಪರವಾಗಿ ತಿರುಗಿಸುತ್ತವೆ ಎಂದು ಅವರು ನಂಬಿದ್ದರು. ಆದರೆ ಢಾಕಾವನ್ನು ಬಿಎನ್‌ಪಿ ‘ಕ್ಲೀನ್ ಸ್ವೀಪ್’ ಮಾಡಿತು.
ಜಮಾತ್‌ಗೆ ಹೆಚ್ಚು ಸೀಟುಗಳು ಬಂದಿದ್ದು ಪಶ್ಚಿಮ ಬಂಗಾಳದ ಗಡಿ ಪ್ರದೇಶದಲ್ಲಿ. ಅಲ್ಲೇಕೆ ಜಮಾತ್ ಪರ ಅಲೆ ಕಾಣಿಸಿಕೊಂಡಿದೆ ಮತ್ತು ಅದರ ಪರಿಣಾಮವೇನು ಎಂಬುದರ ಬಗ್ಗೆ ಅಧ್ಯಯನ ಮಾಡಬೇಕಿದೆ.
ಇಂದು ಅನೇಕ ಮುಸ್ಲಿಂ ದೇಶಗಳಲ್ಲಿ ಮತ್ತು ಮುಸ್ಲಿಂ ಸಮುದಾಯಗಳಲ್ಲಿ ದೊಡ್ಡ ಸಂಘರ್ಷ ನಡೆಯುತ್ತಿದೆ. ಸಾಂಪ್ರದಾಯಿಕ ರಾಜಕೀಯ ವ್ಯವಸ್ಥೆಯ ಬಗ್ಗೆ, ಅದರಲ್ಲಿನ ಸರ್ವಾಧಿಕಾರಿತನದ ಬಗ್ಗೆ, ದೇವಪ್ರಭುತ್ವದ ಬಗ್ಗೆ, ಆಡಳಿತ ವ್ಯವಸ್ಥೆಯ ಮೋಹದ ಬಗ್ಗೆ ಜನರಲ್ಲಿ ಅಸಮಾಧಾನ ಭುಗಿಲೇಳುತ್ತಿದೆ. ಅತ್ಯಂತ ಪ್ರಸಿದ್ಧ ಬಂಗಾಳಿ ನಾಯಕನಾಗಿದ್ದ ಹುಸೇನ್ ಶಹೀದ್ ಸುಹ್ರಾವರ್ದಿ 1940-1950ರ ದಶಕದಲ್ಲಿ ಪ್ರಕಟಿಸಿದ ಅವರ ಆತ್ಮಕತೆ ಯಲ್ಲಿರುವ ಒಂದು ಘಟನೆ ನನಗೆ ನೆನಪಾಗುತ್ತಿದೆ.
ಸುಹ್ರಾವರ್ದಿ ವಿಶಿಷ್ಟ ವ್ಯಕ್ತಿ. ಬೆಂಗಾಲ್ ಮುಸ್ಲಿಂ ಲೀಗ್‌ನ ನಾಯಕರಾಗಿ 1940ರ ದಶಕದಲ್ಲಿ ಅವರು ಪಾಕಿಸ್ತಾನಕ್ಕೂ ಗಾಡ್ ಫಾದರ್ ಆಗಿದ್ದರು ಮತ್ತು 1950ರ ದಶಕದಲ್ಲಿ ಅವಾಮಿ ಲೀಗ್ ನ ಮುಖ್ಯಸ್ಥರಾಗಿ ಬಾಂಗ್ಲಾದೇಶಕ್ಕೂ ಗಾಡ್ ಫಾದರ್ ಆಗಿದ್ದರು. ಕೆಲ ತಿಂಗಳ ಕಾಲ ಅವರು ಪಾಕಿಸ್ತಾನಕ್ಕೆ ಪ್ರಧಾನಿಯೂ ಆಗಿದ್ದರು. ನಂತರ ಆ ದೇಶ ಮತ್ತೆಂದೂ ಸುಧಾರಿಸದ ರೀತಿಯಲ್ಲಿ ಸೇನೆಯ ತೆಕ್ಕೆಗೆ ಹೋಯಿತು. ಅವರು ಪ್ರಧಾನಿಯಾಗಿದ್ದಾಗ ಕೆಲ ದೇಶಗಳ ಜತೆಗೆ ಪಾಕಿಸ್ತಾನ ಮೈತ್ರಿ ಮಾಡಿಕೊಳ್ಳಬೇಕು ಎಂಬ ಸಲಹೆ ಬಂದಿತ್ತು. ಅದಕ್ಕೆ ಸುಹ್ರಾವರ್ದಿ ತಮ್ಮ ಎಂದಿನ ತಮಾಷೆಯ ಶೈಲಿಯಲ್ಲಿ, ‘ಜೀರೋಕ್ಕೆ ಜೀರೋ ಸೇರಿಸಿದರೆ ನಿಮಗೆ ಜೀರೋವೇ ಸಿಗುತ್ತದೆ’ ಎಂದು ಹೇಳಿದ್ದರು.
ಈಗ ಬಾಂಗ್ಲಾದೇಶ ಆ ಶೂನ್ಯವನ್ನು ಹಿಂದೆ ಬಿಟ್ಟು ಮುಂದೆ ಬಂದಿದೆ. ಅಲ್ಲಿನ ನಾಯಕರು ಸರಿಯಾದ ಬುದ್ಧಿವಂತಿಕೆ ತೋರಿದರೆ ದೇಶ ಪ್ರಗತಿ ಸಾಧಿಸಲು ಸಾಧ್ಯವಿದೆ. ಬಂಗಾಳಿ ರಾಷ್ಟ್ರೀಯವಾದ, ಆರ್ಥಿಕ ಸುಧಾರಣಾವಾದ ಮತ್ತು ಸಾಂಸ್ಕೃತಿಕ ಸೌಹಾರ್ದವನ್ನು ಗಮನದಲ್ಲಿರಿಸಿಕೊಂಡು, ಈ ಮೂರನ್ನೂ ಹದವಾಗಿ ಬೆರೆಸಿ ಆಡಳಿತ ನಡೆಸಿದರೆ ಬಾಂಗ್ಲಾ ದೇಶ ಅದ್ಭುತವಾಗಿ ಬೆಳೆಯಬಹುದು. ಅಲ್ಲಿನ ಜನರು ತಾವು ಮಾಡಬೇಕಾದ್ದನ್ನು ಮಾಡಿದ್ದಾರೆ. ಈಗ ನಾಯಕರು ಅವರು ಮಾಡಬೇಕಾದ್ದನ್ನು ಮಾಡಬೇಕಿದೆ.
(ಲೇಖಕರು ಹಿರಿಯ ಪತ್ರಿಕೋದ್ಯಮಿ)