ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Dr Jagadeesh Maane Column: ವಿಶ್ವದ ರಕ್ಷಣಾ ರಂಗದಲ್ಲಿ ಭಾರತದ ಸಿಂಹಗರ್ಜನೆ !

ಇಂದು ಸಾಮಾನ್ಯವಾಗಿ ಯಾವ ದೇಶ ಹೆಚ್ಚು ಪ್ರಮಾಣದಲ್ಲಿ ಆಯುಧಗಳನ್ನು ಖರೀದಿಸ ತ್ತದೆಯೋ, ಆ ದೇಶದ ಸುತ್ತ ಯುದ್ಧದ ಕಾರ್ಮೋಡಗಳು ಅಥವಾ ಭದ್ರತಾ ಆತಂಕಗಳು ದಟ್ಟ ವಾಗಿರುವುದನ್ನು ಕಾಣಬಹುದು. ಆ ರಾಷ್ಟ್ರದ ಸುತ್ತಲಿನ ಸಮಸ್ಯೆಗಳು, ಗಡಿ ವಿವಾದಗಳು ಮತ್ತು ಭದ್ರತಾ ಸವಾಲುಗಳು ಹೆಚ್ಚಾದಂತೆ ಅದರ ಆಯುಧ ಖರೀದಿಯೂ ಹೆಚ್ಚಾಗುತ್ತದೆ. ಹೀಗಾಗಿ ಸಮಸ್ಯೆಗಳು ಮತ್ತು ಆಯುಧ ಖರೀದಿ ಒಂದಕ್ಕೊಂದು ಪೂರಕವಾಗಿ ಸಾಗುವ ಸ್ಥಿತಿ ನಿರ್ಮಾಣ ವಾಗುತ್ತದೆ.

ವಿಶ್ವದ ರಕ್ಷಣಾ ರಂಗದಲ್ಲಿ ಭಾರತದ ಸಿಂಹಗರ್ಜನೆ !

-

Profile
Ashok Nayak Jun 13, 2026 8:58 AM

ರಕ್ಷಣಾಪಥ

ಡಾ.ಜಗದೀಶ ಮಾನೆ

ಒಂದು ಕಾಲದಲ್ಲಿ ರಾಷ್ಟ್ರಗಳು ಶತ್ರುಗಳಿಂದ ತಮ್ಮನ್ನು ರಕ್ಷಿಸಿಕೊಳ್ಳುವುದಕ್ಕಾಗಿಯೇ ಆಯುಧಗಳನ್ನು ತಯಾರಿಸುತ್ತಿದ್ದವು. ಆದರೆ ಈಗ ಕಾಲ ಬದಲಾಗಿದೆ. ಇಂದು ಅನೇಕ ಕಡೆ ಮೊದಲು ಆಯುಧಗಳು ತಯಾರಾಗುತ್ತವೆ; ನಂತರ ಅವುಗಳನ್ನು ಮಾರಾಟ ಮಾಡಲು ಅವಕಾಶಗಳು ಮತ್ತು ಪರಿಸ್ಥಿತಿಗಳು ಸೃಷ್ಟಿಯಾಗುತ್ತವೆ.

ಜಾಗತಿಕ ರಾಜಕೀಯದಲ್ಲಿ ಆಯುಧ ಉದ್ಯಮವು ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದಿರುವ ಕಾರಣ, ಆಯುಧಗಳನ್ನು ಉತ್ಪಾದಿಸುವ ರಾಷ್ಟ್ರಗಳು ತಮ್ಮ ಮಾರುಕಟ್ಟೆಯನ್ನು ವಿಸ್ತರಿಸಿ ಕೊಳ್ಳಲು ವಿವಿಧ ರೀತಿಯ ರಾಜತಾಂತ್ರಿಕ ಹಾಗೂ ಕಾರ್ಯತಂತ್ರದ ಲೆಕ್ಕಾಚಾರಗಳನ್ನು ನಡೆಸುತ್ತವೆ.

ಇಂದು ಸಾಮಾನ್ಯವಾಗಿ ಯಾವ ದೇಶ ಹೆಚ್ಚು ಪ್ರಮಾಣದಲ್ಲಿ ಆಯುಧಗಳನ್ನು ಖರೀದಿಸ ತ್ತದೆಯೋ, ಆ ದೇಶದ ಸುತ್ತ ಯುದ್ಧದ ಕಾರ್ಮೋಡಗಳು ಅಥವಾ ಭದ್ರತಾ ಆತಂಕಗಳು ದಟ್ಟವಾಗಿರುವುದನ್ನು ಕಾಣಬಹುದು. ಆ ರಾಷ್ಟ್ರದ ಸುತ್ತಲಿನ ಸಮಸ್ಯೆಗಳು, ಗಡಿ ವಿವಾದ ಗಳು ಮತ್ತು ಭದ್ರತಾ ಸವಾಲುಗಳು ಹೆಚ್ಚಾದಂತೆ ಅದರ ಆಯುಧ ಖರೀದಿಯೂ ಹೆಚ್ಚಾಗು ತ್ತದೆ. ಹೀಗಾಗಿ ಸಮಸ್ಯೆಗಳು ಮತ್ತು ಆಯುಧ ಖರೀದಿ ಒಂದಕ್ಕೊಂದು ಪೂರಕವಾಗಿ ಸಾಗುವ ಸ್ಥಿತಿ ನಿರ್ಮಾಣವಾಗುತ್ತದೆ.

ಆದರೆ ಈ ಕಾಲದಲ್ಲಿ ಆಯುಧಗಳನ್ನು ಕೇವಲ ಖರೀದಿಸುವ ರಾಷ್ಟ್ರಕ್ಕಿಂತ, ಅವುಗಳನ್ನು ತಯಾರಿಸಿ ಜಗತ್ತಿಗೆ ರಫ್ತು ಮಾಡುವ ರಾಷ್ಟ್ರಕ್ಕೇ ಹೆಚ್ಚಿನ ಬೆಲೆ, ಗೌರವ ಮತ್ತು ಪ್ರಭಾವ ದೊರೆಯುತ್ತದೆ. ಏಕೆಂದರೆ ಆಯುಧ ರಫ್ತು ಕೇವಲ ವ್ಯಾಪಾರವಲ್ಲ; ಅದು ತಾಂತ್ರಿಕ ಸಾಮರ್ಥ್ಯ, ಆರ್ಥಿಕ ಬಲ ಮತ್ತು ಜಾಗತಿಕ ನಾಯಕತ್ವದ ಪ್ರತೀಕವಾಗಿದೆ. ಆದ್ದರಿಂದ ಇಂದಿನ ಜಗತ್ತಿನಲ್ಲಿ ಆಯುಧ ಆಮದುದಾರನಾಗಿ ಇರುವುದಕ್ಕಿಂತ ಆಯುಧ ರಫ್ತುದಾರ ನಾಗಿರುವುದೇ ರಾಷ್ಟ್ರದ ಶಕ್ತಿ ಮತ್ತು ಪ್ರತಿಷ್ಠೆ ನಿರ್ಧರಿಸುವ ಪ್ರಮುಖ ಮಾನದಂಡವಾಗಿದೆ.

ಇದನ್ನೂ ಓದಿ: Dr Jagadeesh Maane Column: ಲೋಕ ಗೆದ್ದು ಮನಸ್ಸು ಸೋತರೆ, ಅದು ಯಾವ ಗೆಲುವು ?

ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಭಾರತವೂ ಈಗ ಕೇವಲ ಆಯುಧ ಆಮದುದಾರ ರಾಷ್ಟ್ರವಾಗಿ ಉಳಿಯದೆ, ಜಾಗತಿಕ ಮಟ್ಟದ ಆಯುಧ ರಫ್ತುದಾರ ರಾಷ್ಟ್ರ ವಾಗುವ ದಿಕ್ಕಿನಲ್ಲಿ ದಿಟ್ಟ ಹೆಜ್ಜೆಗಳನ್ನು ಇಡುತ್ತಿದೆ.

2047ರ ಹೊತ್ತಿಗೆ, ಸ್ವಾತಂತ್ರ್ಯದ ಶತಮಾನೋತ್ಸವದ ಸಂದರ್ಭದಲ್ಲಿ, ಭಾರತವನ್ನು ಜಗತ್ತಿನ ಪ್ರಮುಖ ರಕ್ಷಣಾ ಉತ್ಪಾದಕ ಮತ್ತು ರಫ್ತುದಾರ ರಾಷ್ಟ್ರಗಳಲ್ಲಿ ಒಂದನ್ನಾಗಿ ರೂಪಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಕೇಂದ್ರ ಸರಕಾರ ಹೊಂದಿದೆ. ಒಂದು ಕಾಲ ದಲ್ಲಿ ಭಾರತ ತನ್ನ ರಕ್ಷಣಾ ಅಗತ್ಯಗಳಿಗಾಗಿ ಮುಖ್ಯವಾಗಿ ರಷ್ಯಾವನ್ನು ಅವಲಂಬಿಸಿತ್ತು. ಆದರೆ ಇಂದು ರಷ್ಯಾದ ಜೊತೆಗೆ ಫ್ರಾನ್ಸ್, ಇಸ್ರೇಲ್ ಮತ್ತು ಅಮೆರಿಕಾದಂತಹ ರಾಷ್ಟ್ರ ಗಳೊಂದಿಗೆ ಸಹಕಾರವನ್ನು ವಿಸ್ತರಿಸಿಕೊಂಡು, ತಂತ್ರಜ್ಞಾನ ವರ್ಗಾವಣೆ ಮತ್ತು ಜಂಟಿ ಉತ್ಪಾದನೆಯತ್ತ ಗಮನ ಹರಿಸುತ್ತಿದೆ.

ಇದೀಗ ಭಾರತದ ಕ್ಷಿಪಣಿಗಳು, ರಾಕೆಟ್ ವ್ಯವಸ್ಥೆಗಳು, ವಾಯು ರಕ್ಷಣಾ ವ್ಯವಸ್ಥೆಗಳು, ಆರ್ಟಿಲರಿ ಗನ್‌ಗಳು, ಮಿಲಿಟರಿ ವಾಹನಗಳು ಮತ್ತು ವಿವಿಧ ರಕ್ಷಣಾ ಸಾಧನಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿದೆ. ಯುರೋಪಿನ ಹಲವು ರಾಷ್ಟ್ರಗಳು ಭಾರತದ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಖರೀದಿಸಲು ಆಸಕ್ತಿ ತೋರಿಸುತ್ತಿವೆ.

ಏಷ್ಯಾದ ಕೆಲವು ರಾಷ್ಟ್ರಗಳಿಗೆ ವಾಯು ರಕ್ಷಣಾ ವ್ಯವಸ್ಥೆಗಳನ್ನು ಹಾಗೂ ಆಫ್ರಿಕಾದ ರಾಷ್ಟ್ರ ಗಳಿಗೆ ಯುದ್ಧೋಪಕರಣಗಳನ್ನು ಭಾರತ ಪೂರೈಸುತ್ತಿದೆ. ಕಳೆದ ಹದಿನೈದು ವರ್ಷಗಳಲ್ಲಿ ಭಾರತದ ರಕ್ಷಣಾ ರಫ್ತು ಗಮನಾರ್ಹ ಪ್ರಮಾಣದಲ್ಲಿ ಏರಿಕೆಯಾಗಿದೆ.

71

2014-25ರಲ್ಲಿ ಕೇವಲ 1941 ಕೋಟಿ ರೂಪಾಯಿಗಳಷ್ಟಿದ್ದ ರಕ್ಷಣಾ ರಫ್ತು, 2025-26ರ ವೇಳೆಗೆ ಸುಮಾರು 38,424 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಇದು ಭಾರತದ ರಕ್ಷಣಾ ಕ್ಷೇತ್ರದಲ್ಲಿ ನಡೆದಿರುವ ಪರಿವರ್ತನೆಯ ಪ್ರತೀಕವಾಗಿದೆ. ಆದಾಗ್ಯೂ, ವಿಶ್ವದ ಟಾಪ್-10 ಅಥವಾ ಟಾಪ್-20 ರಕ್ಷಣಾ ರಫ್ತುದಾರ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತದ ಹೆಸರು ಇನ್ನೂ ಕಾಣಿಸುತ್ತಿಲ್ಲ. ಹೀಗಾಗಿ ಇನ್ನೂ ಸಾಕಷ್ಟು ದೂರ ಸಾಗಬೇಕಿದೆ.

ಇದೀಗ ಭಾರತದ ರಕ್ಷಣಾ ಬಜೆಟ್ ಸುಮಾರು 7.8 ಲಕ್ಷ ಕೋಟಿ ರೂಪಾಯಿಗಳಷ್ಟಿದೆ. ಈ ಮೊತ್ತದ ಬಹುಪಾಲು ಸೈನಿಕರ ವೇತನ ಮತ್ತು ಪಿಂಚಣಿಗೆ ವೆಚ್ಚವಾಗುತ್ತದೆ. ಅಗ್ನಿವೀರ ಯೋಜನೆಯ ಪರಿಣಾಮವಾಗಿ ಭವಿಷ್ಯದಲ್ಲಿ ಪಿಂಚಣಿ ಹೊರೆ ಸ್ವಲ್ಪ ಮಟ್ಟಿಗೆ ಕಡಿಮೆ ಯಾಗುವ ನಿರೀಕ್ಷೆ ಇದೆ. ಆದರೆ ಅದು ಮಾತ್ರ ಸಾಕಾಗುವುದಿಲ್ಲ.

ರಕ್ಷಣಾ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿ, ಸ್ವದೇಶಿ ಉತ್ಪಾದನೆಯ ಮೂಲಕ ಆಮದು ಅವಲಂಬನೆಯನ್ನು ಕಡಿಮೆ ಮಾಡುವುದು ಅತ್ಯಗತ್ಯವಾಗಿದೆ. ಇಂದು ಭಾರತ ರಷ್ಯಾ ಹಾಗೂ ಇಸ್ರೇಲ್ ಸೇರಿದಂತೆ ಹಲವು ರಾಷ್ಟ್ರಗಳೊಂದಿಗೆ ಜಂಟಿಯಾಗಿ ಆಯುಧ ಗಳನ್ನು ತಯಾರಿಸುತ್ತಿದೆ.

ಭಾರತದ ಉತ್ಪಾದನೆ ನಡೆಯುವುದರಿಂದ ವೆಚ್ಚ ಕಡಿಮೆಯಾಗುವುದರ ಜೊತೆಗೆ ರಫ್ತಿನ ಅವಕಾಶಗಳೂ ಹೆಚ್ಚುತ್ತವೆ. ಇದೇ ಮಾದರಿಯಲ್ಲಿ ಗ್ರೀಸ್ ಮತ್ತು ಸೈಪ್ರಸ್ ರಾಷ್ಟ್ರ ಗಳೊಂದಿಗೂ ರಕ್ಷಣಾ ಸಹಕಾರದ ಒಪ್ಪಂದಗಳು ನಡೆದಿವೆ.

ಯುರೋಪಿಯನ್ ರಾಷ್ಟ್ರಗಳು ಭಾರತದಲ್ಲಿ ರಕ್ಷಣಾ ಉತ್ಪಾದನಾ ಕ್ಷೇತ್ರಕ್ಕೆ ಹೆಚ್ಚಿನ ಹೂಡಿಕೆ ಮಾಡಿದರೆ, ಭಾರತದಲ್ಲಿ ತಯಾರಾಗುವ ಆಯುಧಗಳನ್ನು ನ್ಯಾಟೋ ರಾಷ್ಟ್ರ ಗಳಿಗೆ ಹಾಗೂ ಯುರೋಪಿನ ಮಾರುಕಟ್ಟೆಗೆ ರಫ್ತು ಮಾಡುವುದು ಸುಲಭವಾಗುತ್ತದೆ.

ಇದರಿಂದ ತಂತ್ರಜ್ಞಾನ, ಬಂಡವಾಳ ಮತ್ತು ಮಾರುಕಟ್ಟೆ, ಈ ಮೂರು ಕ್ಷೇತ್ರಗಳಲ್ಲಿಯೂ ಭಾರತಕ್ಕೆ ಮಹತ್ವದ ಲಾಭವಾಗಲಿದೆ. ಜೊತೆಗೆ ವಿದೇಶಿ ವಿನಿಮಯದ ಹರಿವೂ ಹೆಚ್ಚಾಗು‌ ತ್ತದೆ. ಆದರೆ ಕೇವಲ ಲೈಸೆನ್ಸ್ ಪಡೆದು ಉತ್ಪಾದನೆ ಮಾಡುವುದಷ್ಟೇ ಸಾಕಾಗುವುದಿಲ್ಲ. ಆಯುಧಗಳ ಪ್ರಮುಖ ಬಿಡಿಭಾಗಗಳು ಮತ್ತು ತಂತ್ರಜ್ಞಾನಗಳಲ್ಲಿಯೂ ಭಾರತ ಸ್ವಾವ ಲಂಬನೆ ಸಾಧಿಸಬೇಕಾಗಿದೆ. ಇದನ್ನು ಸಾಧಿಸುವ ಸಾಮರ್ಥ್ಯ ಭಾರತಕ್ಕಿದೆ.

ನಮ್ಮ ದೇಶದಲ್ಲಿ ಪ್ರತಿಭೆಗಳ ಕೊರತೆಯಿಲ್ಲ. ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ ಕ್ಷೇತ್ರಗಳಲ್ಲಿ ಭಾರತ ಜಾಗತಿಕವಾಗಿ 3ನೇ ಸ್ಥಾನದಲ್ಲಿದೆ. ವಿಶ್ವದ ಅನೇಕ ತಾಂತ್ರಿಕ ಸಂಸ್ಥೆಗಳಲ್ಲಿ ಭಾರತೀಯರೇ ನಾಯಕತ್ವ ವಹಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ.

ನಮ್ಮಲ್ಲಿರುವ ಪ್ರತಿಭೆಗಳಿಗೆ ಸರಿಯಾದ ಅವಕಾಶ, ಸಂಶೋಧನೆಗೆ ಪ್ರೋತ್ಸಾಹ ಮತ್ತು ಕೈಗಾರಿಕಾ ಬೆಂಬಲ ದೊರೆತರೆ ಭಾರತ ಈ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡ ಬಲ್ಲದು. ಈಗಾಗಲೇ ನಮ್ಮಲ್ಲಿ ಸಂಶೋಧನಾ ಕೇಂದ್ರಗಳು, ಉತ್ಪಾದನಾ ಘಟಕಗಳು ಮತ್ತು ಗುಣಮಟ್ಟ ನಿಯಂತ್ರಣ ಸಂಸ್ಥೆಗಳಿವೆ. ಆದರೆ ಅವುಗಳ ಸಂಖ್ಯೆಯನ್ನು ಮತ್ತು ಸಾಮರ್ಥ್ಯ ವನ್ನು ಇನ್ನಷ್ಟು ವಿಸ್ತರಿಸಬೇಕಾಗಿದೆ.

ಜೊತೆಗೆ ಕೃತಕ ಬುದ್ಧಿಮತ್ತೆ (ಎಐ), ರೋಬೋಟಿಕ್ಸ್, ಸೆಮಿಕಂಡಕ್ಟರ್‌ಗಳು ಮತ್ತು ಸ್ವಯಂ ಚಾಲಿತ ಯುದ್ಧ ವ್ಯವಸ್ಥೆಗಳಂತಹ ಆಧುನಿಕ ತಂತ್ರಜ್ಞಾನಗಳ ಬಳಕೆಯನ್ನು ಹೆಚ್ಚಿಸ ಬೇಕಾಗಿದೆ. ಇದಕ್ಕಾಗಿ ಖಾಸಗಿ ವಲಯದ ಪಾಲ್ಗೊಳ್ಳುವಿಕೆಯೂ ಅತ್ಯಗತ್ಯ.

ಪ್ರಸ್ತುತ ಭಾರತದ ರಕ್ಷಣಾ ಉತ್ಪಾದನೆಯ ಮೌಲ್ಯ ಸುಮಾರು 1.54 ಲಕ್ಷ ಕೋಟಿ ರೂಪಾಯಿಗಳಷ್ಟಿದೆ. ಇದರಲ್ಲಿ ರಫ್ತು ಪ್ರಮಾಣ ಸುಮಾರು 38,426 ಕೋಟಿ ರೂಪಾಯಿ ಗಳಷ್ಟಿದೆ. 2047ರ ಹೊತ್ತಿಗೆ ರಕ್ಷಣಾ ರಫ್ತನ್ನು 2.8 ಲಕ್ಷ ಕೋಟಿ ರೂಪಾಯಿಗಳಿಗೆ ಹೆಚ್ಚಿಸುವ ಗುರಿಯನ್ನು ಸರಕಾರ ಹೊಂದಿದೆ. ಈ ಗುರಿಯನ್ನು ಸಾಧಿಸಬೇಕಾದರೆ ಭಾರತದ ಒಟ್ಟು ರಕ್ಷಣಾ ಉತ್ಪಾದನೆಯನ್ನು ಸುಮಾರು 8.8 ಲಕ್ಷ ಕೋಟಿ ರೂಪಾಯಿಗಳ ಮಟ್ಟಕ್ಕೆ ಏರಿಸ ಬೇಕಾಗುತ್ತದೆ.

ಇದರ ಜೊತೆಗೆ ಆಫ್ರಿಕಾ, ದಕ್ಷಿಣ ಅಮೆರಿಕಾ, ಯುರೋಪ್ ಮತ್ತು ಏಷ್ಯಾದ ರಾಷ್ಟ್ರಗಳು ಸೇರಿದಂತೆ 80ಕ್ಕೂ ಹೆಚ್ಚು ದೇಶಗಳಿಗೆ ಭಾರತೀಯ ರಕ್ಷಣಾ ಉತ್ಪನ್ನಗಳನ್ನು ರಫ್ತು ಮಾಡುವ ಗುರಿಯನ್ನೂ ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ಸ್ವದೇಶಿ ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡುವ ಕಾರ್ಯಗಳು ವೇಗ ಪಡೆದುಕೊಂಡಿವೆ.

ಭಾರತದ ತೇಜಸ್ ಯುದ್ಧ ವಿಮಾನ ಈಗಾಗಲೇ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಆದರೆ ಅದರ ಎಂಜಿನ್‌ಗಾಗಿ ಇನ್ನೂ ವಿದೇಶಿ ತಂತ್ರಜ್ಞಾನವನ್ನು ಅವಲಂಬಿಸಬೇಕಾಗಿದೆ. ಇದೇ ರೀತಿಯಾಗಿ ಐದನೇ ತಲೆಮಾರಿನ ಯುದ್ಧ ವಿಮಾನ ಯೋಜನೆಯಾದ ಆಮ್ಕಾ ( Advanced Medium Combat Aircraft) ಅಭಿವೃದ್ಧಿ ಕಾರ್ಯವೂ ಆರಂಭವಾಗಿದೆ. ಇದರ ಜೊತೆಗೆ ಭಾರತ ಐಎನ್‌ಎಸ್ ವಿಶಾಲ್ ವಿಮಾನವಾಹಕ ನೌಕೆಯ ಯೋಜನೆ, ಪ್ರಾಜೆಕ್ಟ್-75 ಅಡಿಯಲ್ಲಿ ಜಲಾಂತರ್ಗಾಮಿ ನೌಕೆಗಳ ನಿರ್ಮಾಣ ಹಾಗೂ ಪ್ರಾಜೆಕ್ಟ್-77 ಅಡಿಯಲ್ಲಿ ಅಣು ಶಕ್ತಿ ಚಾಲಿತ ಅಟ್ಯಾಕ್ ಸಬ್ಮರೀನ್‌ಗಳ ಅಭಿವೃದ್ಧಿ ಯೋಜನೆಗಳತ್ತ ಗಮನ ಹರಿಸಿದೆ. ಈ ಎಲ್ಲ ಯೋಜನೆಗಳಲ್ಲೂ ಸ್ವದೇಶಿ ತಂತ್ರಜ್ಞಾನಕ್ಕೆ ಆದ್ಯತೆ ನೀಡಲಾಗುತ್ತಿದೆ.

ಅದೇ ರೀತಿ ಜೋರಾವರ್ ಲಘು ಟ್ಯಾಂಕ್‌ಗಳು, ಆಧುನಿಕ ಹೋವಿಟ್ಜರ್ ಗನ್‌ಗಳು, ಹೊಸ ತಲೆಮಾರಿನ ಕ್ಷಿಪಣಿಗಳು ಮತ್ತು ಹೈಪರ್ಸಾನಿಕ್ ಕ್ಷಿಪಣಿಗಳ ಅಭಿವೃದ್ಧಿಯಲ್ಲೂ ಭಾರತ ಮಹತ್ವದ ಹೆಜ್ಜೆಗಳನ್ನು ಇಡುತ್ತಿದೆ. ಈ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಸಾಧಿಸಲು ಸಾಧ್ಯ ವಾದರೆ 2047ರ ಗುರಿ ಅಸಾಧ್ಯವೇನಲ್ಲ. ಆದರೆ ಭಾರತದ ಮುಂದೆ ಇನ್ನೂ ಕೆಲವು ಸವಾಲು ಗಳಿವೆ.

ವಿಶೇಷವಾಗಿ ಯುದ್ಧ ವಿಮಾನ ಎಂಜಿನ್ ತಂತ್ರಜ್ಞಾನದಲ್ಲಿ ಸ್ವಾವಲಂಬನೆ ಸಾಧಿಸುವುದು ಅತ್ಯಂತ ಮಹತ್ವದ್ದಾಗಿದೆ. ರೋಲ್ಸ್-ರಾಯ್ಸ್, ಸಾಫ್ರಾನ್, ಜಿಇ ಸೇರಿದಂತೆ ಅನೇಕ ಕಂಪನಿ ಗಳು ಸಹಕಾರಕ್ಕೆ ಮುಂದಾಗಿದ್ದರೂ ಸಂಪೂರ್ಣ ತಂತ್ರಜ್ಞಾನ ವರ್ಗಾವಣೆಗೆ ಯಾರೂ ಸ್ಪಷ್ಟವಾಗಿ ಒಪ್ಪುತ್ತಿಲ್ಲ. ಹೀಗಾಗಿ ಈ ಕ್ಷೇತ್ರದಲ್ಲಿ ಭಾರತ ಇನ್ನೂ ಸ್ವತಂತ್ರ ಸಾಮರ್ಥ್ಯ ಬೆಳೆಸಿಕೊಳ್ಳಬೇಕಾಗಿದೆ.

ಈ ಹಿನ್ನೆಲೆಯಲ್ಲಿ ಕಾವೇರಿ ಎಂಜಿನ್ ಯೋಜನೆಗೆ ಹೊಸ ಚೈತನ್ಯ ದೊರೆತಿದೆ. ಕಾವೇರಿ ಎಂಜಿನ್ ಅನ್ನು ಮತ್ತಷ್ಟು ಅಭಿವೃದ್ಧಿಪಡಿಸಿ, ಭವಿಷ್ಯದಲ್ಲಿ ಯುದ್ಧ ವಿಮಾನಗಳಿಗೆ ಬಳಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಪ್ರಸ್ತುತ ಅದನ್ನು ಕೆಲವು ಡ್ರೋನ್ ಯೋಜನೆಗಳಲ್ಲಿ ಪರೀಕ್ಷಿಸಲಾಗುತ್ತಿದೆ. ಇದಕ್ಕಾಗಿ ಭಾರತದಲ್ಲಿ ಅತ್ಯಾಧುನಿಕ ಎಂಜಿನ್ ಟೆಸ್ಟ್ ಬೆಡ್ ನಿರ್ಮಾಣ ಕಾರ್ಯವೂ ನಡೆಯುತ್ತಿದೆ. ಈ ಹಿಂದೆ ಎಂಜಿನ್ ಪರೀಕ್ಷೆಗಳಿಗಾಗಿ ವಿದೇಶಗಳನ್ನು ಅವಲಂಬಿಸಬೇಕಾಗಿದ್ದ ಪರಿಸ್ಥಿತಿ ಈಗ ನಿಧಾನವಾಗಿ ಬದಲಾಗುತ್ತಿದೆ. ಇದರ ಜೊತೆಗೆ ಭಾರತ ಇಸ್ರೇಲ್ʼನೊಂದಿಗೆ ಜಂಟಿಯಾಗಿ ಡ್ರೋನ್ ತಯಾರಿಕೆಯನ್ನು ವಿಸ್ತರಿಸುತ್ತಿದೆ.

ಸ್ವದೇಶಿ ಗಸ್ತು ಡ್ರೋನ್‌ಗಳು, ದಾಳಿ ನಡೆಸುವ ಡ್ರೋನ್‌ಗಳು ಹಾಗೂ ಮಾನವರಹಿತ ವೈಮಾನಿಕ ವಾಹನಗಳ ಅಭಿವೃದ್ಧಿಯಲ್ಲೂ ಗಮನಾರ್ಹ ಪ್ರಗತಿ ಸಾಧಿಸುತ್ತಿದೆ. ಈ ಯೋಜನೆಗಳು ಯಶಸ್ವಿಯಾದರೆ ಭಾರತ ಜಾಗತಿಕ ಡ್ರೋನ್ ಮಾರುಕಟ್ಟೆಯಲ್ಲೂ ಪ್ರಮುಖ ಸ್ಥಾನ ಪಡೆಯುವ ಸಾಧ್ಯತೆಯಿದೆ.

ರಕ್ಷಣಾ ಉತ್ಪಾದನಾ ಕ್ಷೇತ್ರದ ಮತ್ತೊಂದು ದೊಡ್ಡ ಲಾಭವೆಂದರೆ ಉದ್ಯೋಗ ಸೃಷ್ಟಿ. ಒಂದು ಯುದ್ಧ ವಿಮಾನವನ್ನು ನಿರ್ಮಿಸಲು ಕೃತಕ ಬುದ್ಧಿಮತ್ತೆ, ಸಾಫ್ಟ್‌ʼವೇರ್ ಅಭಿವೃದ್ಧಿ, ಸೆಮಿಕಂಡಕ್ಟರ್‌ಗಳು, ಎಲೆಕ್ಟ್ರಾನಿಕ್ಸ್, ಲೋಹಶಾಸ್ತ್ರ, ಯಂತ್ರ ನಿರ್ಮಾಣ, ಗುಣಮಟ್ಟ ನಿಯಂತ್ರಣ ಸೇರಿದಂತೆ ನೂರಾರು ಕ್ಷೇತ್ರಗಳ ಸಹಕಾರ ಅಗತ್ಯವಿರುತ್ತದೆ. ಹೀಗಾಗಿ ಈ ಕ್ಷೇತ್ರದ ಬೆಳವಣಿಗೆ ವೈಟ್ ಕಾಲರ್ ಉದ್ಯೋಗಗಳಿಂದ ಹಿಡಿದು ಬ್ಲೂ ಕಾಲರ್ ಉದ್ಯೋಗ ಗಳವರೆಗೆ ಲಕ್ಷಾಂತರ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಬಲ್ಲದು. ಇದರ ಜೊತೆಗೆ ವಿದೇಶಗಳಿಂದ ಆಯುಧಗಳನ್ನು ಖರೀದಿಸುವ ಪ್ರಮಾಣ ಕಡಿಮೆಯಾದರೆ ಅಪಾರ ಪ್ರಮಾಣದ ವಿದೇಶಿ ವಿನಿಮಯ ಉಳಿತಾಯವಾಗುತ್ತದೆ.

ಮತ್ತೊಂದೆಡೆ, ಆಯುಧಗಳನ್ನು ರಫ್ತು ಮಾಡುವ ಮೂಲಕ ದೇಶಕ್ಕೆ ಹೊಸ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ. ಇದು ಕೇವಲ ಆರ್ಥಿಕ ಲಾಭವಲ್ಲ; ರಾಷ್ಟ್ರದ ಕಾರ್ಯ ತಂತ್ರದ ಸ್ವಾತಂತ್ರ್ಯವನ್ನೂ ಹೆಚ್ಚಿಸುತ್ತದೆ.

ಇಂದು ಭಾರತ ಮೆಡಿಟರೇನಿಯನ್ ಹಾಗೂ ಏಶಿಯನ್ ಸಮುದ್ರ ಪ್ರದೇಶಗಳಲ್ಲಿ ಗ್ರೀಸ್ ಮತ್ತು ಸೈಪ್ರಸ್ ರಾಷ್ಟ್ರಗಳೊಂದಿಗೆ ರಕ್ಷಣಾ ಸಹಕಾರವನ್ನು ವಿಸ್ತರಿಸುತ್ತಿರುವುದು, ಭಾರತದ ಜಾಗತಿಕ ಪ್ರಭಾವ ಎಷ್ಟರ ಮಟ್ಟಿಗೆ ವಿಸ್ತರಿಸುತ್ತಿದೆ ಎಂಬುದಕ್ಕೆ ಉದಾಹರಣೆಯಾಗಿದೆ. ಜಗತ್ತಿನ ಅನೇಕ ರಾಷ್ಟ್ರಗಳು ಭಾರತವನ್ನು ಕೇವಲ ಒಂದು ಮಾರುಕಟ್ಟೆಯಾಗಿ ಅಲ್ಲ, ಭವಿಷ್ಯದ ತಂತ್ರಜ್ಞಾನ ಮತ್ತು ರಕ್ಷಣಾ ಪಾಲುದಾರನಾಗಿ ನೋಡಲು ಆರಂಭಿಸಿವೆ. ಭಾರತದ ಯುವ ಪ್ರತಿಭೆ, ವೈಜ್ಞಾನಿಕ ಸಾಮರ್ಥ್ಯ, ಕೈಗಾರಿಕಾ ಶಕ್ತಿ ಮತ್ತು ರಾಷ್ಟ್ರೀಯ ಸಂಕಲ್ಪ - ಈ ನಾಲ್ಕು ಅಂಶಗಳು ಒಂದಾದರೆ 2047ರ ಗುರಿ ಕೇವಲ ಕನಸಾಗಿ ಉಳಿಯುವು ದಿಲ್ಲ. ಅದು ಭಾರತದ ಹೊಸ ಶಕ್ತಿಯ ಘೋಷಣೆಯಾಗುತ್ತದೆ.

ಈ ಹಿಂದೆ ಜಗತ್ತಿನ ಅತಿದೊಡ್ಡ ಆಯುಧ ಆಮದುದಾರ ರಾಷ್ಟ್ರಗಳಲ್ಲಿ ಒಂದಾಗಿದ್ದ ಭಾರತ, ಮುಂಬರುವ ದಶಕಗಳಲ್ಲಿ ಜಗತ್ತಿನ ಪ್ರಮುಖ ಆಯುಧ ರಫ್ತುದಾರ ರಾಷ್ಟ್ರವಾಗಿ ಹೊರಹೊಮ್ಮುವ ಸಾಮರ್ಥ್ಯವನ್ನು ಹೊಂದಿದೆ.