Keshava Prasad B Column: ಭಾರತದ ಜಿಡಿಪಿ ಸತ್ಯವೇ, ಮಿಥ್ಯವೇ? ಏನಿದು ಜಟಾಪಟಿ?!
2026-27ರ ಮೊದಲ ತ್ರೈಮಾಸಿಕದ ಜಿಡಿಪಿಯನ್ನು ಈ ಹೊಸ ಮೂಲ ವರ್ಷವನ್ನು ಅಧರಿಸಿ ಲೆಕ್ಕ ಹಾಕಲಾಗಿದೆ. ಇದರ ಪ್ರಕಾರ 2025-26ರ ಮೊದಲ ತ್ರೈಮಾಸಿಕದ ಜಿಡಿಪಿಯ ಮೌಲ್ಯವನ್ನು 86.05 ಲಕ್ಷ ಕೋಟಿ ರುಪಾಯಿಗಳಿಂದ 80 ಲಕ್ಷ ಕೋಟಿ ರುಪಾಯಿಗೆ ಇಳಿಸಲಾಗಿದೆ. ಆದ್ದರಿಂದ ಹಳೆಯ ಸರಣಿಯ ಅಂಕಿ ಅಂಶಗಳನ್ನು ಹೊಸ ಸರಣಿಯ ಅಂಕಿ ಅಂಶಗಳ ಜತೆಗೆ ಹೋಲಿಸುವುದು ತಪ್ಪು. ಹೋಲಿಸಿದರೆ ಆಪಲ್ ಮತ್ತು ಕಿತ್ತಳೆ ಹಣ್ಣನ್ನು ಒಂದೇ ಎಂದು ಹೋಲಿಸಿದಂತೆ ತಪ್ಪಾಗುತ್ತದೆ ಎಂದು ಸರಕಾರ ಹೇಳಿದೆ.
-
ಮನಿಮೈಂಡೆಡ್
ರಾಜಕೀಯ ಪ್ರೇರಿತ ಅಥವಾ ಯಾವುದೋ ಪೂರ್ವಾಗ್ರಹ ಪೀಡಿತರಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಶತಾಯ ಗತಾಯ ಟೀಕಿಸುವ ಚಾಳಿ ಇರುವವರನ್ನು ಗಮನಿಸಿ. ಉದಾಹರಣೆಗೆ ಅವರು ಭಾರತದ ಜಿಡಿಪಿ ಏರಿದಾಗ, ಇದರ ಲೆಕ್ಕಾಚಾರ ವಿಧಾನವೇ ಸರಿ ಇಲ್ಲ ಎನ್ನುತ್ತಾರೆ. ಒಂದು ವೇಳೆ ಜಿಡಿಪಿ ಇಳಿದರೆ, ‘ಮನಮೋಹನ್ ಸಿಂಗ್ ಕಾಲದಲ್ಲಿ ಡಬಲ್ ಡಿಜಿಟ್ ಗ್ರೋತ್ ರೇಟ್ ಇತ್ತು. ಮೋದಿಯವರ ಇಕನಾಮಿಕ್ಸ್ ಪಾಲಿಸಿಗಳು ಸರಿ ಇಲ್ಲ, ಡಿಮಾನಿಟೈಸೇಶನ್ ಅಟ್ಟರ್ ಫೆಲ್ಯೂರ್, ನಿರ್ಮಲಾ ಸೀತಾರಾಮನ್‌ಗೆ ಫೈನಾನ್ಸ್ ಬರಲ್ಲ’ ಎಂದೆಲ್ಲ ಷರಾ ಬರೆಯುತ್ತಾರೆ. ಹೀಗೆ ಮೋದಿಯ ವರನ್ನು, ಲಾಜಿಕ್ಕೂ ಇಲ್ಲದೆ ವಿರೋಧಿಸುವವರ ಸಾಲಿಗೆ ಮಾಜಿ ಹಣಕಾಸು ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ಹೊಸ ಸೇರ್ಪಡೆಯಾಗಿದ್ದಾರೆ.
ದೇಶ ನಾನಾ ಜಾಗತಿಕ ಸವಾಲುಗಳ ನಡುವೆಯೂ 2026-27ರ ಮೊದಲ ತ್ರೈಮಾಸಿಕ, ಅಂದರೆ 2026ರ ಏಪ್ರಿಲ-ಜೂನ್ ಅವಧಿಯಲ್ಲಿ ಶೇಕಡಾ 7.8ರಷ್ಟು ಜಿಡಿಪಿ (ಒಟ್ಟಾರೆ ದೇಶೀಯ ಉತ್ಪನ್ನ) ಬೆಳವಣಿಗೆಯನ್ನು ದಾಖಲಿಸಿರುವುದಕ್ಕೆ ಕೇಂದ್ರ ಸರಕಾರ ಅಧಿಕೃತ ಅಂಕಿ ಅಂಶಗಳನ್ನು ಬಿಡುಗಡೆ ಗೊಳಿಸಿದ್ದರೆ, ಸುಭಾಷ್ ಚಂದ್ರ ಗರ್ಗ್ ತಮ್ಮ ಸಂದೇಹವನ್ನು ವ್ಯಕ್ತಪಡಿಸುತ್ತಾ ‘ನಿಜವಾದ ಜಿಡಿಪಿ ಶೇಕಡಾ 2.6’ ಎಂದು ವ್ಯರ್ಥ ಪ್ರಲಾಪ ಆರಂಭಿಸಿದ್ದಾರೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗು ತ್ತಿದ್ದಂತೆಯೇ ಗೇರ್ ಬದಲಿಸಿರುವ ಗರ್ಗ್, ‘ಒಟ್ಟಾರೆಯಾಗಿ 5 ಪರ್ಸೆಂಟ್ ಬೆಳವಣಿಗೆ ಇದೆ ಎಂದು ನಾನು ಈ ಹಿಂದೆಯೇ ಹೇಳಿದ್ದೆ. ಆದರೆ ಅದಕ್ಕಿಂತ ಹೆಚ್ಚು ಬಂದಿರುವುದು ಅನುಮಾನ ಹುಟ್ಟಿಸಿದೆ. ಐದರ ತನಕ ಬೆಳವಣಿಗೆ ಖಂಡಿತ ಇದೆ’ ಎಂದು ಆಲಾಪಿಸಿದ್ದಾರೆ. ಯಾಕೋ ರಾತ್ರೋರಾತ್ರಿ 2.6 ಪರ್ಸೆಂಟ್‌ನಿಂದ 5 ಪರ್ಸೆಂಟ್‌ಗೆ ಹೈಜಂಪ್ ಮಾಡಿದ್ದಾರೆ!
ಹಾಗಾದರೆ ಆಗಿದ್ದೇನು? ಕೇಂದ್ರ ಸರಕಾರ ಹೇಳಿದ್ದೇನು? ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ದತ್ತಾಂಶದ ಪ್ರಕಾರ, 2026-27ರ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಶೇಕಡಾ 7.8ರಷ್ಟು ಪ್ರಗತಿ ಸಾಧಿಸಿದೆ. ಸರಕಾರವು ಜಿಡಿಪಿ ಲೆಕ್ಕಾಚಾರವನ್ನು ಸುಧಾರಿಸುವ ಪ್ರಕ್ರಿಯೆಯ ಭಾಗವಾಗಿ ಇತ್ತೀಚೆಗೆ ಮೂಲ ವರ್ಷವನ್ನು (ಬೇಸ್ ಇಯರ್) 2011-12ರಿಂದ 2022-23ಕ್ಕೆ ಬದಲಿಸಿತ್ತು.
ಇದನ್ನೂ ಓದಿ: Keshava Prasad B Column: ಮ್ಯೂಚುಯಲ್ ಫಂಡ್ ಹೂಡಿಕೆದಾರರ ಹೊಸ ದಾರಿ
2026-27ರ ಮೊದಲ ತ್ರೈಮಾಸಿಕದ ಜಿಡಿಪಿಯನ್ನು ಈ ಹೊಸ ಮೂಲ ವರ್ಷವನ್ನು ಅಧರಿಸಿ ಲೆಕ್ಕ ಹಾಕಲಾಗಿದೆ. ಇದರ ಪ್ರಕಾರ 2025-26ರ ಮೊದಲ ತ್ರೈಮಾಸಿಕದ ಜಿಡಿಪಿಯ ಮೌಲ್ಯವನ್ನು 86.05 ಲಕ್ಷ ಕೋಟಿ ರುಪಾಯಿಗಳಿಂದ 80 ಲಕ್ಷ ಕೋಟಿ ರುಪಾಯಿಗೆ ಇಳಿಸಲಾಗಿದೆ. ಆದ್ದರಿಂದ ಹಳೆಯ ಸರಣಿಯ ಅಂಕಿ ಅಂಶಗಳನ್ನು ಹೊಸ ಸರಣಿಯ ಅಂಕಿ ಅಂಶಗಳ ಜತೆಗೆ ಹೋಲಿಸುವುದು ತಪ್ಪು. ಹೋಲಿಸಿದರೆ ಆಪಲ್ ಮತ್ತು ಕಿತ್ತಳೆ ಹಣ್ಣನ್ನು ಒಂದೇ ಎಂದು ಹೋಲಿಸಿದಂತೆ ತಪ್ಪಾಗುತ್ತದೆ ಎಂದು ಸರಕಾರ ಹೇಳಿದೆ.
ಈ ಸುಭಾಷ್ ಚಂದ್ರ ಗರ್ಗ್ ಅವರ ಆರೋಪವೇನೆಂದರೆ, 2025-26ರ ಮೊದಲ ತ್ರೈಮಾಸಿಕದ ಜಿಡಿಪಿಯನ್ನು 86.05 ಲಕ್ಷ ಕೋಟಿ ರುಪಾಯಿಗಳಿಂದ 80 ಲಕ್ಷ ಕೋಟಿ ರುಪಾಯಿಗೆ ಇಳಿಸಿರುವು ದರಿಂದಲೇ 2026-27ರ ಮೊದಲ ತ್ರೈಮಾಸಿಕದ ಜಿಡಿಪಿ ಬೆಳವಣಿಗೆಯು ಕೃತಕವಾಗಿ 7.8 ಪರ್ಸೆಂಟ್‌ಗೆ ಏರಿದಂತಾಗಿದೆ. 86.05 ಲಕ್ಷ ಕೋಟಿಗೆ ಹೋಲಿಸಿದರೆ ಈಗ ಕೇವಲ 2.5 ಪರ್ಸೆಂಟ್ ಮಾತ್ರ ಹೆಚ್ಚಳವಾದಂತಾಗಿದೆ ಎಂದು ಗರ್ಗ್ ವಾದಿಸಿzರೆ. ಕಾಂಗ್ರೆಸ್ ಇದೇ ವಾದವನ್ನು ಬಳಸಿಕೊಳ್ಳುತ್ತಿದೆ.
ಆರ್‌ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು, ಮತ್ತೊಂದು ಪ್ರಶ್ನೆ ಎತ್ತಿದ್ದಾರೆ. ದೇಶದ ಆರ್ಥಿಕತೆ ಇಷ್ಟು ವೇಗವಾಗಿ ಬೆಳೆಯುತ್ತಿದ್ದರೆ, ಯುವಕರಿಗೆ ಬೇಕಾದಷ್ಟು ಉದ್ಯೋಗಗಳು ಯಾಕೆ ಸೃಷ್ಟಿಯಾಗುತ್ತಿಲ್ಲ? ಈ ಜಿಡಿಪಿ ಅಂಕಿಅಂಶಗಳ ಬಗ್ಗೆ ನನಗೂ ಅನುಮಾನವಿದೆ ಎಂದು ಪ್ರಶ್ನಿಸಿzರೆ. ಇದು ಕೂಡ ಪೂರ್ವಾಗ್ರಹ ಪೀಡಿತವೇ. ನೀವು ಇಪಿಎ-ಒದ ಅಂಕಿ ಅಂಶಗಳನ್ನು ನೋಡಿದರೆ, ಕಳೆದ ದಶಕದಿಂದೀಚೆಗೆ ಪ್ರತಿ ವರ್ಷ ಸಂಘಟಿತ ವಲಯದಲ್ಲಿ (ಪ್ರೈವೇಟ್ ಸೆಕ್ಟರ್) ಉದ್ಯೋಗಗಳ ಸಂಖ್ಯೆ ಹೆಚ್ಚಳವಾಗಿರುವುದನ್ನು ನೋಡಬಹುದು. ಸಂಬಳದ ಬಗ್ಗೆ ತಕರಾರು ಇರಬಹುದು. ಆದರೆ ಪಿಎಫ್ ಪಡೆಯುವ ನೌಕರರ ಸಂಖ್ಯೆ ಗಣನೀಯವಾಗಿ ವೃದ್ಧಿಸಿದೆ. ಎರಡನೆಯದಾಗಿ ಅನೌಪಚಾರಿಕ ವಲಯದಲ್ಲಿ ಇದಕ್ಕಿಂತ ದೊಡ್ಡ ಸಂಖ್ಯೆಯಲ್ಲಿ ಜನ ಕೆಲಸ ಮಾಡುತ್ತಿದ್ದಾರೆ. ಆದರೆ ಅದು ಜಿಡಿಪಿ ಲೆಕ್ಕಕ್ಕೆ ಸಿಗುವುದಿಲ್ಲ.
ಮೊದಲನೆಯದಾಗಿ, ಜಿಡಿಪಿ ಲೆಕ್ಕಾಚಾರದಲ್ಲಿ ಮೂಲ ವರ್ಷವನ್ನು 2011-12ರಿಂದ 2022-23ಕ್ಕೆ ಬದಲಿಸಿದ್ದೇಕೆ? ಏಕೆಂದರೆ ಲೆಕ್ಕಾಚಾರ ಮಾಡಲು ಒಂದು ಆಧಾರ ವರ್ಷ ಅಥವಾ ಬೇಸ್ ಇಯರ್ ಬೇಕೇಬೇಕು. ಮತ್ತು ಅದನ್ನು ಕಾಲಕಾಲಕ್ಕೆ ಬದಲಾಯಿಸುವುದು ಪದ್ಧತಿ. ಏಕೆಂದರೆ ಆರ್ಥಿಕ ವ್ಯವಸ್ಥೆಯಲ್ಲಿ ಉಂಟಾಗುವ ಬದಲಾವಣೆಗಳು, ಹೊಸ ಉದ್ದಿಮೆಗಳು, ತಂತ್ರಜ್ಞಾನ, ಬೆಲೆ ಏರಿಳಿತ ಗಳನ್ನು ಗಮನಿಸಿಕೊಂಡು ಆಧಾರ ವರ್ಷವನ್ನು ಬದಲಾಯಿಸಿದರೆ ಲೆಕ್ಕಾಚಾರ ಹೆಚ್ಚು ಪಕ್ವವಾ ಗುತ್ತದೆ.
ಹೀಗಾಗಿ ಈ ಪರಿಷ್ಕರಣೆ ನಡೆದಿದೆ. ಹೊಸ ಸರಣಿಯಲ್ಲಿ, ಸರಕಾರವು ಕೈಗಾರಿಕಾ ಉತ್ಪಾದನಾ ಸೂಚ್ಯಂಕ ( IIP ) ಮತ್ತು ಹೊಸದಾಗಿ ಪರಿಚಯಿಸಲಾದ ಉತ್ಪಾದಕ ಬೆಲೆ ಸೂಚ್ಯಂಕ ( PPI ) ಸೇರಿದಂತೆ ಹಲವು ಹೊಸ ದತ್ತಾಂಶ ಮೂಲಗಳನ್ನು ಸೇರಿಸಿದೆ. ಹೀಗಾಗಿ ಸುಧಾರಿತ ನೂತನ ವಿಧಾನದಲ್ಲಿ ಜಿಡಿಪಿಯ ಈಗಿನ ಮೌಲ್ಯ 80 ಲಕ್ಷ ಕೋಟಿ ರುಪಾಯಿಗಳಾಗುತ್ತದೆ. ಆದ್ದರಿಂದ 2011-12ರ ಹಳೆಯ ಮೂಲ ವರ್ಷವನ್ನು ಒಳಗೊಂಡಿರುವ ಜಿಡಿಪಿಯನ್ನು 2022-23ರ ಪರಿಷ್ಕೃತ ಮೂಲವರ್ಷವಿರುವ ಪದ್ಧತಿಗೆ ನೇರವಾಗಿ ಹೋಲಿಕೆ ಮಾಡುವುದೇ ತಪ್ಪು ಎಂದು ಸರಕಾರ ತಿಳಿಸಿದೆ.
ಭಾರತದ ಆರ್ಥಿಕತೆ 7.8 ಪರ್ಸೆಂಟ್ ವೇಗದಲ್ಲಿ ಬೆಳೆಯುತ್ತಿದ್ದರೆ ಪ್ರಧಾನಿಗಳು ವಿದೇಶ ಪ್ರಯಾಣ, ವಿದೇಶದಲ್ಲಿ ಮದುವೆಯನ್ನು ಕಡಿಮೆ ಮಾಡಲು, ಬಂಗಾರ ಖರೀದಿಯನ್ನು ಸಾಧ್ಯವಾದಷ್ಟು ತಗ್ಗಿಸಲು ಮನವಿ ಮಾಡಿರುವುದೇಕೆ? ಎಂಬ ಪ್ರಶ್ನೆ ಇದೆ. ಅದಕ್ಕೆ ಟೆಕ್ ಉದ್ಯಮಿ ಶ್ರೀಧರ್ ವೆಂಬು ಸೊಗಸಾಗಿ ‘ಎಕ್ಸ್’ನಲ್ಲಿ ವಿವರಿಸಿದ್ದಾರೆ. ‘ಪೂರ್ವ ಏಷ್ಯಾದ ಜಪಾನ್, ತೈವಾನ್, ದಕ್ಷಿಣ ಕೊರಿಯಾ, ಚೀನಾ ರಾಷ್ಟ್ರಗಳೆಲ್ಲ ತ್ವರಿತ ಜಿಡಿಪಿ ಬೆಳವಣಿಗೆಯ ಹಂತವನ್ನು ದಾಟಿವೆ. ಈ ಸಂದರ್ಭದಲ್ಲಿ ವಿದೇಶಿ ವಿನಿಮಯ ಸಂಗ್ರಹವನ್ನು ಉಳಿಸಲೂ ಆದ್ಯತೆ ನೀಡಿತ್ತು ಎಂಬುದನ್ನು ಮರೆಯುವಂತಿಲ್ಲ.
ನಮ್ಮ ದೇಶ ಉತ್ತಮ ದರದಲ್ಲಿ ಬೆಳೆಯುತ್ತಿದ್ದರೂ, ಈಗಲೂ ಇಂಧನ ಮತ್ತು ತಂತ್ರಜ್ಞಾನಕ್ಕಾಗಿ ಆಮದನ್ನು ಅವಲಂಬಿಸಿದ್ದೇವೆ. ನಾವು ಆಮದು ಅವಲಂಬನೆಯಲ್ಲಿ ಸಮತೋಲನ ಕಂಡುಕೊಳ್ಳ ಬೇಕಿದ್ದರೆ ರಫ್ತನ್ನು ಹೆಚ್ಚಿಸಲೇಬೇಕು. ಹಾಗೂ ಇದಕ್ಕೆ ಬೇಕಾದ ಅಮೂಲ್ಯ ಯಂತ್ರೋಪಕರಣಗಳು, ಸಿಪಿಯು, ಜಿಪಿಯು, ಸಾಫ್ಟ್ʼವೇರ್‌ಗಳನ್ನು ಆಮದು ಮಾಡಿಕೊಳ್ಳಬೇಕು. ಒಂದು ಸಲ ಎಲ್ಲ ಆಧುನಿಕ ತಂತ್ರಜ್ಞಾನಗಳಲ್ಲಿ ಸಮೃದ್ಧಿ ಉಂಟಾದ ಬಳಿಕ ವಿದೇಶಿ ವಿನಿಮಯ ಸಂಗ್ರಹವನ್ನು ಈಗಿನಂತೆ ಉಳಿಸಬೇಕಾದ ಅಗತ್ಯ ಇಲ್ಲ. ಆದ್ದರಿಂದ ಸದ್ಯಕ್ಕೆ ಅನಗತ್ಯವಾಗಿ ಬಂಗಾರದ ಖರೀದಿ ಬೇಡ, ವಿದೇಶಗಳಲ್ಲಿ ಐಷಾರಾಮಿ ಖರ್ಚುವೆಚ್ಚಗಳನ್ನು ದೂರವಿಡಿ ಎಂದು ಪ್ರಧಾನಿ ಹೇಳು ತ್ತಿದ್ದಾರೆ.’
ಸುಭಾಷ್ ಚಂದ್ರ ಗರ್ಗ್, ರಘುರಾಮ್ ರಾಜನ್ ಮೊದಲಾದವರ ಪೂರ್ವಾಗ್ರಹಪೀಡಿತ ಟೀಕೆಗಳಿಗೆ ಕರಾರುವಕ್ಕಾಗಿ ತಿರುಗೇಟು ಕೊಟ್ಟಿರುವ ಭಾರತದ ಮುಖ್ಯ ಆರ್ಥಿಕ ಸಲಹೆಗಾರರಾದ ವಿ. ಅನಂತ ನಾಗೇಶ್ವರನ್ ಮಾತುಗಳನ್ನೊಮ್ಮೆ ಕೇಳಿ. ‘ನಿಮಗೆ ಬೇಕಾದ ಸಂಖ್ಯೆಯನ್ನು ಮಾತ್ರ ಆರಿಸಿಕೊಂಡರೆ ಹೇಗೆ? ನೀವು ನಿಜಕ್ಕೂ ಹೋಲಿಕೆ ಮಾಡುವುದಿದ್ದರೆ 2011-12ರ ಮೂಲ ವರ್ಷದ ಅಧಾರದಲ್ಲಿರುವ ಲೆಕ್ಕವನ್ನು 2022-23ರ ಆಧಾರದಲ್ಲಿರುವ ಲೆಕ್ಕಕ್ಕೆ ಹೋಲಿಸುತ್ತಿರಲಿಲ್ಲ. ನೀವು 86 ಲಕ್ಷ ಕೋಟಿಯ ಜತೆಗೆ ಹೋಲಿಸುವುದಿದ್ದರೆ 2026-27ರ ಮೊದಲ ತ್ರೈಮಾಸಿಕಕ್ಕೂ ಮೂಲ ವರ್ಷವಾಗಿ 2011-12 ರನ್ನೇ ಬಳಸಿಕೊಳ್ಳಿ. ಆಗ ಸಿಗುವ ಜಿಡಿಪಿ ಬೆಳವಣಿಗೆಯ ದರವನ್ನು ಹೇಳಿ. ಆಗ ಅದಕ್ಕೊಂದು ಸಮರ್ಥಿಸಿಕೊಳ್ಳಬಹುದಾದ ಯೋಗ್ಯತೆ ಇರುತ್ತದೆ.’
ರಘುರಾಮ್ ರಾಜನ್ ಅವರ ಹತಾಶೆಯ ಹೇಳಿಕೆಗಳನ್ನು ಕೇಳಿದರೆ, ಇವರ ಪೂರ್ವಾಗ್ರಹ ಎಷ್ಟರ ಮಟ್ಟಿಗೆ ಇದೆ ಎಂಬುದು ಮನವರಿಕೆಯಾಗುತ್ತದೆ. ‘ಜಿಡಿಪಿ ಅಂಕಿ ಅಂಶಗಳು ಅನುಮಾನ ಹುಟ್ಟಿಸು ತ್ತಿದೆ. ಆರ್ಥಿಕತೆ ವೇಗವಾಗಿ ಪ್ರಗತಿಯಾಗುತ್ತಿದ್ದರೆ ಏಕೆ ಒಳ್ಳೆಯ ಉದ್ಯೋಗಗಳು ಹುಟ್ಟಿಕೊಳ್ಳುತ್ತಿಲ್ಲ? ಹೂಡಿಕೆಗಳು ಏಕೆ ಬರುತ್ತಿಲ್ಲ? ವಿದೇಶಿ ನೇರ ಹೂಡಿಕೆ ಏಕೆ ಆಗುತ್ತಿಲ್ಲ? ಜಿಡಿಪಿ ನಂಬರ್‌ಗಳಿಗೆ ಯಾರು ಕೇರ್ ಮಾಡುತ್ತಾರೆ? ಅದು ಬಿಡಿ, ನಾವು ಒಳ್ಳೆಯ ಉದ್ಯೋಗ ಸೃಷ್ಟಿಸಲು ಆದ್ಯತೆ ಕೊಡು ತ್ತಿದ್ದೇವೆಯೇ? ಇದಕ್ಕೆ ಉತ್ತರ ಇಲ್ಲ ಎಂದರೆ ನಾವು ಭಾರಿ ತೊಂದರೆಯಲ್ಲಿ ಇದ್ದೇವೆ ಎಂದರ್ಥ’ ಎಂದು ರಘುರಾಮ್ ರಾಜನ್ ಯಾವುದೇ ಅಂಕಿ ಅಂಶಗಳಿಲ್ಲದೆ ಲೂಸ್ ಟಾಕ್ ಆಡುತ್ತಾರೆ!
ರಾಜನ್ ಗರ್ಗ್ ಅವರೇ, ನಿಮ್ಮ ಪ್ರಕಾರ ಭಾರತದ ಆರ್ಥಿಕತೆ ಹದಗೆಟ್ಟಿದ್ದರೆ, ಸರಕುಗಳ ರಫ್ತು 19 ಶತಕೋಟಿ ಡಾಲರ್‌ಗೆ ಏರಿದ್ದು ಹೇಗೆ? ಒಟ್ಟು ರಫ್ತು 80 ಶತಕೋಟಿ ಡಾಲರ್‌ಗೆ ಹೆಚ್ಚಳವಾಗಿದ್ದು ಹೇಗೆ? ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್ʼಡಿಐ) ಕಳೆದ 15 ವರ್ಷಗಳಲ್ಲಿ 94 ಶತಕೋಟಿ ಡಾಲರ್‌ಗೆ ಹೆಚ್ಚಳವಾಗಿದ್ದು (17 ಪರ್ಸೆಂಟ್) ವೃದ್ಧಿಸಿದ್ದು ಹೇಗೆ? ವಿದೇಶಿ ವಿನಿಮಯ ಸಂಗ್ರಹ (ಫಾರೆಕ್ಸ್) ದಾಖಲೆಯ 729 ಶತಕೋಟಿ ಡಾಲರ್‌ಗೆ ಹೆಚ್ಚಳವಾಗಿದ್ದು ಹೇಗೆ? 2026ರ ಜುಲೈನಲ್ಲಿ 4.58 ಲಕ್ಷ ಪ್ಯಾಸೆಂಜರ್ ವೆಹಿಕಲ್ಸ್ ಮಾರಾಟ ಆಗಿದ್ದು ಹೇಗೆ? ಒಟ್ಟು 25 ಲಕ್ಷಕ್ಕೂ ಹೆಚ್ಚು ವಾಹನಗಳು ಒಂದೇ ತಿಂಗಳಿನಲ್ಲಿ ನೋಂದಣಿಯಾಗಿದ್ದು ಹೇಗೆ? 2026ರ ಮಾಸಿಕ ಜಿಎಸ್‌ಟಿ ಸರಾಸರಿ ಸಂಗ್ರಹ 2 ಲಕ್ಷ ಕೋಟಿ ರುಪಾಯಿಗಳ ಆಸುಪಾಸಿಗೆ ಏರಿಕೆಯಾಗಿರುವುದು ಹೇಗೆ?! ವಿವರಿಸಬಲ್ಲಿರಾ?
ಕಳೆದ ಹತ್ತು ವರ್ಷಗಳಲ್ಲಿ (ಅಂದರೆ ಸುಮಾರು 2016-17ರಿಂದ 2026-27ರ ಅವಧಿಯಲ್ಲಿ) ಭಾರತ ಸರಕಾರದ ಬಜೆಟ್‌ನಲ್ಲಿ ಕ್ಯಾಪೆಕ್ಸ್ ಅಥವಾ ಸಾರ್ವಜನಿಕ ಬಂಡವಾಳ ವೆಚ್ಚ (Capital Expenditure- Capex) ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಮೂಲಸೌಕರ್ಯ ಅಭಿವೃದ್ಧಿಗೆ (ರಸ್ತೆಗಳು, ರೈಲ್ವೆ, ಬಂದರುಗಳು, ಇತ್ಯಾದಿ) ಒತ್ತು ನೀಡಿರುವ ಕಾರಣ ಸರಕಾರವು ಈ ವೆಚ್ಚವನ್ನು ಗಣನೀಯವಾಗಿ ಏರಿಸಿದೆ.
ಸುಮಾರು 10 ವರ್ಷಗಳ ಹಿಂದೆ (2017-18ರಲ್ಲಿ) ಕೇಂದ್ರ ಸರಕಾರದ ಕ್ಯಾಪೆಕ್ಸ್ ಮೊತ್ತವು ಸರಿ ಸುಮಾರು ರೂ.2.63 ಲಕ್ಷ ಕೋಟಿ ಇತ್ತು. 2026-27ರ ಕೇಂದ್ರ ಬಜೆಟ್‌ನಲ್ಲಿ ಸಾರ್ವಜನಿಕ ಬಂಡವಾಳ ವೆಚ್ಚವನ್ನು ಅಂದಾಜು ರೂ.12.22 ಲಕ್ಷ ಕೋಟಿಗಳಿಗೆ ಹೆಚ್ಚಿಸಲಾಗಿದೆ. ಕಳೆದ ಒಂದು ದಶಕದಲ್ಲಿ ಬಜೆಟ್ ಕ್ಯಾಪೆಕ್ಸ್ ವೆಚ್ಚವು ಶೇಕಡಾ 360%ಕ್ಕಿಂತ ಹೆಚ್ಚು (360%+ ಗ್ರೋತ್) ಅಂದರೆ ಸುಮಾರು ನಾಲ್ಕರಷ್ಟು ಹೆಚ್ಚಳ ಕಂಡಿದೆ.
ಸರಕಾರವು ಕೇವಲ ನೇರ ಕ್ಯಾಪೆಕ್ಸ್ ಅಷ್ಟೇ ಅಲ್ಲದೆ, ರಾಜ್ಯ ಸರಕಾರಗಳಿಗೆ ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ಬಂಡವಾಳ ಆಸ್ತಿಗಳ ಸೃಷ್ಟಿಗಾಗಿ ನೀಡುವ ಅನುದಾನವನ್ನು ( Effective Capital Expenditure ) ಕೂಡ ಈ ಅವಧಿಯಲ್ಲಿ ಭಾರೀ ಪ್ರಮಾಣದಲ್ಲಿ ವಿಸ್ತರಿಸಿದೆ. ಇದು ದೇಶದ ದೀರ್ಘಕಾಲೀನ ಆರ್ಥಿಕ ಬೆಳವಣಿಗೆಗೆ ಮತ್ತು ಮೂಲಸೌಕರ್ಯ ಕಲ್ಪಿಸಲು ಪ್ರಮುಖ ಕಾರಣ ವಾಗಿದೆ.
ಭಾರತ ಸರಕಾರ ಜಾರಿಗೆ ತಂದಿರುವ ಪಿಎಲ್ಐ ( PLI & Production Linked Incentive / ಉತ್ಪಾದನಾ ಆಧಾರಿತೋತ್ಸಾಹಕ) ಯೋಜನೆಯಿಂದ ದೇಶದ ಉತ್ಪಾದನಾ ವಲಯದಲ್ಲಿ ಗಮನಾರ್ಹವಾದ ಪ್ರಯೋಜನಗಳು ಕಂಡುಬಂದಿವೆ. ಮೊಬೈಲ್ ಮತ್ತು ಎಲೆಕ್ಟ್ರಾನಿಕ್ಸ್, ಔಷಧ ತಯಾರಿಕೆ, ಆಟೋಮೊಬೈಲ್, ಆಹಾರ ಪದಾರ್ಥಗಳು ಇತ್ಯಾದಿ 14 ವಲಯಗಳಲ್ಲಿ ಉತ್ಪಾದನೆ ಹೆಚ್ಚಳವಾಗಿದೆ. ಹೀಗೆ ಹಲವಾರು ಸುಧಾರಣೆಗಳಿಂದ ಆರ್ಥಿಕ ಪ್ರಗತಿ ಸಂಭವಿಸಿದೆ. ಜನರ ಅನುಭವಕ್ಕೆ ಅದು ಬರುತ್ತಿದೆ.