ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Keshava Prasad B Column: ತೈಲದ ಮೇಲೆ ಯುದ್ಧದ ಪರಿಣಾಮ ತಡೆಯಲು ಸಾಧ್ಯವೇ ?!

‘ಇರಾನ್- ಅಮೆರಿಕ ಏನಾದರೂ ಮಾಡಿಕೊಂಡಿರಲಿ, ಆದ್ರೆ ನಮಗೆ ತೈಲ ದರ, ಎಲ್ಪಿಜಿ ಸಮಸ್ಯೆ ತಂದು ಹಾಕಿದ್ರ...’ ಎಂದು ಬೇಸರದ ನಿಟ್ಟುಸಿರು ಬಿಟ್ಟವರೆಷ್ಟೋ ಮಂದಿ. ಈ ಯುದ್ಧದ ಬಿಸಿನೆಸ್‌ ನಿಂದ ತೈಲದ ಆರ್ಥಿಕತೆಯನ್ನು ಸಂಪೂರ್ಣವಾಗಿ ಬೇರ್ಪಡಿಸಲು ಸಾಧ್ಯವೇ? ಎಂಬ ಪ್ರಶ್ನೆ ಈಗ ಕಾಡುತ್ತಿದೆ. ಆದರೆ ಅದು ಸಾಧ್ಯವಿಲ್ಲದಿದ್ದರೂ, ಹಲವಾರು ದೇಶಗಳು ಭಾಗಶಃ ಬೇರ್ಪಡಿಸಲು ನಿರಂತರ ಪ್ರಯತ್ನವನ್ನು ಮುಂದುವರಿಸಿವೆ!

ತೈಲದ ಮೇಲೆ ಯುದ್ಧದ ಪರಿಣಾಮ ತಡೆಯಲು ಸಾಧ್ಯವೇ ?!

-

ಮನಿ ಮೈಂಡೆಡ್

ಪಶ್ಚಿಮ ಏಷ್ಯಾದಲ್ಲಿ ಇರಾನ್ ಮತ್ತು ಅಮೆರಿಕ- ಇಸ್ರೇಲ್ ನಡುವಣ ಯುದ್ಧ ಆರಂಭವಾದ ಮೊದಲ ವಾರ ಜನ ಇಷ್ಟೆಲ್ಲಾ ಸಂಕೀರ್ಣವಾದ ಇಂಧನ ಸಮಸ್ಯೆಗಳ ಸರಣಿಯನ್ನೇ ಎದುರಿಸ ಬೇಕಾಗುತ್ತದೆ ಎಂಬುದನ್ನೇ ಯೋಚಿಸಿರಲಿಲ್ಲ!

ಈಗ ಯುದ್ಧ ಮೂರನೇ ತಿಂಗಳಿಗೆ ಕಾಲಿಟ್ಟಿದೆ. ದಿನಗಳು ಯುಗದಂತೆ ಭಾಸವಾಗುತ್ತಿವೆ. ‘ಇರಾನ್- ಅಮೆರಿಕ ಏನಾದರೂ ಮಾಡಿಕೊಂಡಿರಲಿ, ಆದ್ರೆ ನಮಗೆ ತೈಲ ದರ, ಎಲ್ಪಿಜಿ ಸಮಸ್ಯೆ ತಂದು ಹಾಕಿದ್ರ...’ ಎಂದು ಬೇಸರದ ನಿಟ್ಟುಸಿರು ಬಿಟ್ಟವರೆಷ್ಟೋ ಮಂದಿ. ಈ ಯುದ್ಧದ ಬಿಸಿನೆಸ್‌ʼನಿಂದ ತೈಲದ ಆರ್ಥಿಕತೆಯನ್ನು ಸಂಪೂರ್ಣವಾಗಿ ಬೇರ್ಪಡಿಸಲು ಸಾಧ್ಯವೇ? ಎಂಬ ಪ್ರಶ್ನೆ ಈಗ ಕಾಡುತ್ತಿದೆ. ಆದರೆ ಅದು ಸಾಧ್ಯವಿಲ್ಲದಿದ್ದರೂ, ಹಲವಾರು ದೇಶಗಳು ಭಾಗಶಃ ಬೇರ್ಪಡಿಸಲು ನಿರಂತರ ಪ್ರಯತ್ನವನ್ನು ಮುಂದುವರಿಸಿವೆ!

ಅಮೆರಿಕವು ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವುದಕ್ಕೆ ಹಾಕಿದ್ದ ತನ್ನ ಅಂತಾರಾಷ್ಟ್ರೀಯ ನಿರ್ಬಂಧಗಳನ್ನು ಸದ್ಯಕ್ಕೆ ತೆರವುಗೊಳಿಸಿದೆ. ಬೆಲೆ ಏರಿಕೆಯನ್ನು ತಡೆಯಲು ಹಲವು ರಾಷ್ಟ್ರಗಳು ತಮ್ಮ ಸ್ಟ್ರಾಟಜಿಕ್ ಪೆಟ್ರೋಲಿಯಂ ರಿಸರ್ವ್‌ಗಳಿಂದ ತೈಲವನ್ನು ಬಿಡುಗಡೆ ಗೊಳಿಸುತ್ತಿವೆ.

ಇರಾನ್ ಸಂಘರ್ಷ ತಾರಕಕ್ಕೇರಿದ್ದರೂ, ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾಕ್ಕೆ ಭೇಟಿ ಕೊಟ್ಟಿದ್ದಾರೆ. ಅಮೆರಿಕದ ಕಾವಲು, ನಿರ್ಬಂಧಗಳ ಹೊರತಾಗಿಯೂ ಇರಾನ್ ಮಾರುಕಟ್ಟೆಗೆ ತೈಲವನ್ನು ಪೂರೈಸುತ್ತಿದೆ. ಆದರೆ ಯುದ್ಧ ಹಾಗೂ ‘ಸ್ಟ್ರೇಟ್ ಆಫ್ ಹಾರ್ಮುಜ’ ಜಲಮಾರ್ಗದ ಬಿಕ್ಕಟ್ಟಿನಿಂದಾಗಿ ಇರಾನ್‌ನ ತೈಲ ರಫ್ತು ಪ್ರಮಾಣ ಕುಸಿದಿದೆ.

ಇದನ್ನೂ ಓದಿ: Keshava Prasad B Column: ಇಂಧನ ಭದ್ರತೆಗೆ ಭಾರತದ ದಿಟ್ಟ ಸಾಹಸಗಳ ಬಲ್ಲಿರಾ ?!

ಆದರೂ, ಒಂದಷ್ಟು ತೈಲವನ್ನು ಇರಾನ್ ಹೇಗೋ ಮಾರುಕಟ್ಟೆಗೆ ತಳ್ಳುತ್ತಲೇ ಇದೆ. ಹೀಗೆ ಸಾಗಿಸಲು ಹಳೆಯ ಹಡಗುಗಳ ಜಾಲವನ್ನು ಇರಾನ್ ಬಳಸುತ್ತದೆ. ಈ ಹಡಗುಗಳು ಸಮುದ್ರದಲ್ಲಿ ತಮ್ಮ ಜಿಪಿಎಸ್ ಆಫ್ ಮಾಡಿ, ಕತ್ತಲಿನಲ್ಲಿ ಒಂದು ಹಡಗಿನಿಂದ ಮತ್ತೊಂದಕ್ಕೆ ವರ್ಗಾಯಿಸಿ ತೈಲವನ್ನು ಸಾಗಿಸುತ್ತವೆ. ‌

ಜಾಗತಿಕ ಇಂಧನ ಮಾರುಕಟ್ಟೆಗಳಲ್ಲಿ ನಿಸ್ಸಂದೇಹವಾಗಿ ದೊಡ್ಡ ಅನಿಶ್ಚಿತತೆ ಆವರಿಸಿದೆ. ಹಾರ್ಮುಜ್ ಜಲಸಂಧಿಯ ದಿಗ್ಬಂಧನವು ವಿಶ್ವದ ಐದನೇ ಒಂದು ಭಾಗದಷ್ಟು ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲ ಪೂರೈಕೆಯನ್ನು ಸ್ಥಗಿತಗೊಳಿಸಿದೆ. ಇತಿಹಾಸದ ಅತಿದೊಡ್ಡ ಇಂಧನ ಅಡಚಣೆಗೆ ಇದು ಕಾರಣವಾಗಿದೆ. ಕೋಟಿಗಟ್ಟಲೆ ಬ್ಯಾರೆಲ್‌ಗಳಿಗೂ ಹೆಚ್ಚು ತೈಲ ಈಗಾಗಲೇ ನಷ್ಟವಾಗಿದೆ.

ಪೆಟ್ರೋಲ್- ಡೀಸೆಲ್ ಮತ್ತು ಜೆಟ್ ಇಂಧನದಂತಹ ಸಂಸ್ಕರಿಸಿದ ಉತ್ಪನ್ನಗಳ ದರಗಳೂ ಏರುಗತಿ ಯಲ್ಲಿವೆ. ಇರಾನ್ ಸಂಘರ್ಷದ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕೇವಲ ಕಚ್ಚಾ ತೈಲದ ಬೆಲೆ ಮಾತ್ರ ಏರಿಕೆಯಾಗಿಲ್ಲ, ಅದರ ಜೊತೆಗೆ ‘ಸಲ್ಫರ್’ (ಗಂಧಕ) ಪೂರೈಕೆಯಲ್ಲೂ ಭಾರಿ ವ್ಯತ್ಯಯ ಮತ್ತು ಕೊರತೆ ಎದುರಾಗಿದೆ. ‌

ಮೇಲ್ನೋಟಕ್ಕೆ ಕಚ್ಚಾ ತೈಲ ಮತ್ತು ಸಲ್ಫರ್ಗೆ ಏನು ಸಂಬಂಧ ಎಂದು ಅನ್ನಿಸಬಹುದು. ಆದರೆ ಇವೆರಡೂ ಒಂದಕ್ಕೊಂದು ಲಿಂಕ್ ಇದೆ. ಜಗತ್ತಿನಲ್ಲಿ ಬಳಸುವ ಎಲ್ಲ ಗಂಧಕವನ್ನು ಪ್ರತ್ಯೇಕವಾಗಿ ಗಣಿಗಳಿಂದ ತೆಗೆಯಲಾಗುತ್ತಿಲ್ಲ. ಬದಲಿಗೆ ರಿಫೈನರಿಗಳಲ್ಲಿ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ವನ್ನು ಸಂಸ್ಕರಿಸುವಾಗ ಉಪ ಉತ್ಪನ್ನವಾಗಿ ಗಂಧಕ ದೊರೆಯುತ್ತದೆ. ಹೀಗಾಗಿ ಇರಾನ್ ಮತ್ತು ಪಶ್ಚಿಮ ಏಷ್ಯಾದ ದೇಶಗಳಲ್ಲಿನ ಕಚ್ಚಾ ತೈಲ ಬೇಕು. ಅವುಗಳಲ್ಲಿ ಗಂಧಕದ ಪ್ರಮಾಣವೂ ಹೆಚ್ಚು.

Screenshot_3

ಆದರೆ ಹಾರ್ಮುಜ್ ಮೂಲಕ ಗಲ ತೈಲದ ಪೂರೈಕೆಯೂ ಕುಸಿದಿರುವುದರಿಂದ ಸಲ್ಫರ್ ಉತ್ಪಾದ ನೆಯೂ ಜಾಗತಿಕ ಮಟ್ಟದಲ್ಲಿ ಕುಸಿದಿದೆ. ವಿಶ್ವದ ಅತಿ ದೊಡ್ಡ ಸಲ್ಫರ್ ರಫ್ತುದಾರರು ಯಾರೆಂದರೆ, ಯುಎಇ, ಸೌದಿ ಅರೇಬಿಯಾ, ಇರಾನ್ ಮತ್ತು ಕತಾರ್. ಭಾರತಕ್ಕೆ ಸಲ್ಫರ್ ಅತ್ಯಂತ ಅಗತ್ಯವಾದ ಕಚ್ಚಾವಸ್ತುವಾಗಿದೆ. ಇದರ ಕೊರತೆ ಭಾರತದ ಎರಡು ಪ್ರಮುಖ ವಲಯಗಳ ಮೇಲೆ ನೇರ ಪರಿಣಾಮ ಬೀರುತ್ತಿದೆ.

ಒಂದು ರಸಗೊಬ್ಬರ ಉದ್ಯಮ, ಎರಡನೆಯದ್ದು ರಾಸಾಯನಿಕ ಮತ್ತು ಔಷಧ ವಲಯ. ಕೃಷಿಗೆ ಅತ್ಯಗತ್ಯವಾದ ಡಿಎಪಿ ಮತ್ತು ಎನ್‌ಪಿಕೆ ರಸಗೊಬ್ಬರಗಳನ್ನು ತಯಾರಿಸಲು ಸಲ್ಫ್ಯೂರಿಕ್ ಆಸಿಡ್ ಬೇಕು. ಇದೆಲ್ಲ ಯುದ್ಧದ ದುಷ್ಪರಿಣಾಮಗಳು. ನಂತರ ಏನಾಯಿತು? ತೈಲ ದರದ ಆಘಾತವನ್ನು ತಡೆಯಲು ಮತ್ತು ಮಾರುಕಟ್ಟೆಯನ್ನು ಸ್ಥಿರವಾಗಿಸಲು ಅಂತಾರಾಷ್ಟ್ರೀಯ ಇಂಧನ ಆಯೋಗದ ಸದಸ್ಯ ರಾಷ್ಟ್ರಗಳು ಸ್ಟ್ರಾಟಜಿಕ್ ರಿಸರ್ವ್‌ಗಳಿಂದ 164 ದಶಲಕ್ಷ ಬ್ಯಾರೆಲ್ ತೈಲ ಬಿಡುಗಡೆ ಗೊಳಿಸಿತು.

ಸೌದಿ ಅರೇಬಿಯಾದ ಸೌದಿ ಅರಾಮ್ಕೊ ಮತ್ತು ಅಬುಧಾಬಿ ನ್ಯಾಶನಲ್ ಆಯಿಲ್ ಕಂಪನಿಯು ಜಲ ಮಾರ್ಗಗಳ ಬದಲಿಗೆ ಭೂಮಾರ್ಗದಲ್ಲಿ ಪೈಪ್ ಲೈನ್ ಮೂಲಕ ತೈಲವನ್ನು ಪೂರೈಸುತ್ತಿವೆ. ಆದರೂ ಇದು ಬೇಡಿಕೆಯನ್ನು ಪೂರ್ಣವಾಗಿ ನೀಗಿಸುತ್ತಿಲ್ಲ. ಹೀಗಾಗಿ ದರ ಇಳಿಯುತ್ತಿಲ್ಲ. ಅಭಿವೃದ್ಧಿ ಹೊಂದಿರುವ ದೇಶಗಳು ಯುದ್ಧದ ಸಂದರ್ಭದಲ್ಲಿ ಇಂಧನ ಸುರಕ್ಷತೆಗೋಸ್ಕರ ಭೂಗತ ಪೆಟ್ರೋ ಲಿಯಂ ಸಂಗ್ರಹಾಗಾರಗಳನ್ನು ಈಗಾಗಲೇ ನಿರ್ಮಿಸಿವೆ.

ಜಪಾನ್ ಮತ್ತು ದಕ್ಷಿಣ ಕೊರಿಯಾ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಕಟ್ಟಿವೆ. ಖಾಸಗಿ ರಿಫೈನರೀಸ್‌ಗಳಿಗೆ ಇವುಗಳನ್ನು ಲೀಸ್‌ಗೆ ನೀಡಿವೆ. ಇರಾನ್ ವಾರ್ ನಡುವೆಯೇ ಒಪೆಕ್ ಒಕ್ಕೂಟ ದಿಂದ ಯುಎಇ ಹೊರಗೆ ಬಂದಿದೆ. ಒಕ್ಕೂಟದಲ್ಲಿ ನಾಲ್ಕನೇ ಅತಿ ದೊಡ್ಡ ತೈಲೋತ್ಪಾದಕ ರಾಷ್ಟ್ರ ಇದಾಗಿತ್ತು. ಇದರೊಂದಿಗೆ ತೈಲೋತ್ಪಾದನೆಗೆ ಒಪೆಕ್ ನಿರ್ಬಂಧಗಳ ರಗಳೆ ಇನ್ನು ಮುಂದೆ ಯುಎಇಗೆ ಇರುವುದಿಲ್ಲ.

ತೈಲೋತ್ಪಾದನೆಯನ್ನು ದಿನಕ್ಕೆ 50 ದಶಲಕ್ಷ ಬ್ಯಾರೆಲ್‌ಗೆ ವೃದ್ಧಿಸಲು ಯುಎಇ ನಿರ್ಧರಿಸಿದೆ. ಜತೆಗೆ ಹಾರ್ಮುಜ್ ಜಲಸಂಧಿಯನ್ನು ಬೈಪಾಸ್ ಮಾಡಿ ಭಾರತಕ್ಕೆ ಹೆಚ್ಚು ತೈಲವನ್ನು ಪೂರೈಸಲು ಈಗ ಹಾದಿ ಸುಗಮವಾದಂತಾಗಿದೆ. ಏಕೆಂದರೆ ಯುಎಇನ ಹಬ್ ಶಾನ್ ಮತ್ತು ಫ್ಯುಜರಾಹ್ ಬಂದರಿನ ನಡುವೆ ಈಗಾಗಲೇ ಪೈಪ್ ಲೈನ್ ನಿರ್ಮಾಣವಾಗಿದೆ.

ಫ್ಯುಜರಾಹ್ ಬಂದರು ಅರಬ್ಬಿ ಸಮುದ್ರಕ್ಕೆ ನೇರವಾಗಿ ಮುಖ ಮಾಡಿದೆ. ಇಲ್ಲಿಂದ ಹೊರಡುವ ತೈಲ ಟ್ಯಾಂಕರ್‌ಗಳು ಯಾವುದೇ ಯುದ್ಧದ ವಲಯಕ್ಕೆ ಸಿಲುಕದೆ, ಅತ್ಯಂತ ಸುರಕ್ಷಿತವಾಗಿ ಭಾರತದ ಗುಜರಾತ್ ಅಥವಾ ಮಂಗಳೂರು ಕರಾವಳಿಯನ್ನು ತಲುಪಬಹುದು.

ಈ ನಡುವೆ ಬ್ರೆಜಿಲ್ ಕೂಡ ಏಷ್ಯಾದ ರಾಷ್ಟ್ರಗಳಿಗೆ ಕಚ್ಚಾ ತೈಲದ ರಫ್ತನ್ನು ಹೆಚ್ಚಿಸಲು ಉದ್ದೇಶಿಸಿದೆ. ಭಾರತವೂ ಬ್ರೆಜಿಲ್ ತೈಲವನ್ನು ಖರೀದಿಸುತ್ತಿದೆ. ಆಫ್ರಿಕನ್ ರಾಷ್ಟ್ರಗಳಾದ ನೈಜೀರಿಯಾ, ಅಂಗೊಲಾ ಮತ್ತು ಲಿಬಿಯಾ ಕೂಡ ಯುರೋಪ್, ಏಷ್ಯಾಕ್ಕೆ ಒಂದಷ್ಟು ತೈಲವನ್ನು ರಫ್ತು ಮಾಡುತ್ತಿವೆ.

ಇತ್ತೀಚೆಗೆ ಚೀನಾಕ್ಕೆ ಭೇಟಿ ನೀಡಿದ್ದ ಟ್ರಂಪ್ ಅವರು, ಅಲ್ಲಿನ ಸ್ವತಂತ್ರ ‘ಟೀ ಪಾಟ್’ ರಿಫೈನರೀಸ್‌ಗಳ ಮೇಲಿನ ನಿರ್ಬಂಧಗಳನ್ನು ಸಡಿಲಗೊಳಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಚೀನಾವು ಇರಾನ್ ಬದಲಿಗೆ ಅಮೆರಿಕದ ತೈಲವನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿದರೆ, ಟೀ ಪಾಟ್ ರಿಫೈನರೀಸ್ ಮೇಲಿನ ನಿರ್ಬಂಧವನ್ನು ಟ್ರಂಪ್ ತೆರವುಗೊಳಿಸುವು ನಿರೀಕ್ಷೆ ಇದೆ.

ಈ ಟೀ ಪಾಟ್ ರಿಫೈನರೀಸ್ʼಗಳು ಇರಾನಿನಿಂದ ಬರುವ ತೈಲವನ್ನು ಸಂಸ್ಕರಿಸುತ್ತವೆ. ಹೀಗಾಗಿ ಅಮೆರಿಕವು ಇವುಗಳ ಮೇಲೆ ನಿರ್ಬಂಧವನ್ನು ಹೇರಿದೆ. ರಷ್ಯಾದ ಕಚ್ಚಾ ತೈಲ ರಫ್ತು ಕೂಡ ಅಮೆರಿಕ ದ ನಿರ್ಬಂಧಗಳ ರಗಳೆ ಇಲ್ಲದೆ ಮಾರುಕಟ್ಟೆಗೆ ಲಭಿಸುತ್ತಿದೆ.

ಚೀನಾ ಮತ್ತು ಭಾರತ ಇದನ್ನು ಹೆಚ್ಚು ಖರೀದಿಸುತ್ತಿವೆ. ಈ ಪರ್ಯಾಯ ವ್ಯವಸ್ಥೆಗಳು ಒಂದು ವೇಳೆ ಇರದಿದ್ದರೆ ಇಷ್ಟು ಹೊತ್ತಿಗೆ ತೈಲ ದರ ಇನ್ನೂ ಮೇಲಕ್ಕೇರುತ್ತಿತ್ತು ಎಂಬುದರಲ್ಲಿ ಅನುಮಾನವೇ ಬೇಡ. ಕೆಲ ವರದಿಗಳ ಪ್ರಕಾರ ಜೂನ್‌ನಲ್ಲಿ ಯುದ್ಧ ಸಮಾಪ್ತಿಯಾಗುವ ನಿರೀಕ್ಷೆ ಇದೆ. ಆದರೂ ಇಂಧನ ಮಾರುಕಟ್ಟೆ ಸ್ಥಿರತೆಗೆ ಬರಬೇಕಿದ್ದರೆ ಮತ್ತಷ್ಟು ಕಾಲಾವಕಾಶ ಬೇಕಾದೀತು.

ಯುದ್ಧ ಎನ್ನುವುದು ಜಾಗತಿಕ ಮಾರುಕಟ್ಟೆಗೆ ಜ್ವರದ ಹಾಗೆ ಪ್ರತಿಕೂಲ ಪ್ರಭಾವ ಬೀರುತ್ತದೆ. ಜ್ವರ ಬಂದಾಗ ಆರೋಗ್ಯ ಅಸ್ತವ್ಯಸ್ತವಾಗುವಂತೆ ತೈಲ ದರ ಹೆಚ್ಚಳವನ್ನು ಸಂಪೂರ್ಣವಾಗಿ ತಡೆಯು ವುದು ಅಸಾಧ್ಯ. ಅದರಲ್ಲೂ ಪಶ್ಚಿಮ ಏಷ್ಯಾದಲ್ಲಿ ನಡೆಯುವ ಬಿಕ್ಕಟ್ಟು, ಸಂಘರ್ಷಗಳು ಈ ಹಿಂದಿನಿಂದಲೂ ತೈಲ ದರದ ಮೇಲೆ ನೇರವಾಗಿ ಪ್ರಭಾವ ಬೀರಿರುವುದನ್ನು ಗಮನಿಸಬಹುದು.

ಹೀಗಾಗಿ ಪೆಟ್ರೋಲಿಯಂ ದಾಸ್ತಾನು ಕೇಂದ್ರಗಳ ಅಭಿವೃದ್ಧಿ, ಹಾರ್ಮುಜ್ ಹೊರತುಪಡಿಸಿ ಪರ್ಯಾಯ ಮಾರ್ಗಗಳು, ನವೀಕರಿಸಬಹುದಾದ ಇಂಧನ ಮೂಲಗಳ ಮೂಲಕ ಇಂಧನ ಸಮಸ್ಯೆ ಯನ್ನು ಬಗೆಹರಿಸಿಕೊಳ್ಳಬೇಕಾಗುತ್ತದೆ. ಭಾರತದಲ್ಲಿ ಈಗ ನಡೆಯುತ್ತಿರುವ ಗಮನಾರ್ಹ ಬೆಳವಣಿಗೆ ಯಲ್ಲಿ ರಿಲಯ ಇಂಡಸ್ಟ್ರೀಸ್, ಅದಾನಿ ಸಮೂಹ ಎರಡೂ ದಿಗ್ಗಜ ಕಾರ್ಪೊರೇಟ್ ಕಂಪನಿಗಳು ಪರಮಾಣು ಇಂಧನ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಭಾರಿ ಹೂಡಿಕೆಗೆ ನಿರ್ಧರಿಸಿವೆ. ರಿಲಯನ್ಸ್ ಇಂಡಸ್ಟ್ರೀಸ್ 7200 ಮೆಗಾವ್ಯಾಟ್ ಪರಮಾಣು ವಿದ್ಯುತ್ ಯೋಜನೆಗೆ 2 ಲಕ್ಷ ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಲಿದೆ.

ಅದಾನಿ ಪವರ್ 6000 ಮೆಗಾವ್ಯಾಟ್ ಪ್ರಾಜೆಕ್ಟ್‌ಗಳಿಗೆ 1.5 ಲಕ್ಷ ಕೋಟಿ ರುಪಾಯಿ ಹೂಡಿಕೆ ಮಾಡಲು ಉದ್ದೇಶಿಸಿದೆ. ಸಾರ್ವಜನಿಕ ವಲಯದ ಎನ್‌ಟಿಪಿಸಿ 5000 ಮೆಗಾವ್ಯಾಟ್ ಸಾಮರ್ಥ್ಯದ ಉತ್ಪಾದನೆಗೆ 2 ಲಕ್ಷ ಕೋಟಿ ರುಪಾಯಿ ಹೂಡಿಕೆ ಮಾಡಲಿದೆ.

ಭಾರತವು 2070ರ ವೇಳೆಗೆ ನೆಟ್-ಝೀರೋ (ಸಂಪೂರ್ಣ ಇಂಗಾಲ ಮುಕ್ತ) ದೇಶವಾಗುವ ಗುರಿ ಹೊಂದಿದೆ. ಕೇವಲ ಸೌರಶಕ್ತಿ ಅಥವಾ ಪವನ ಶಕ್ತಿಯಿಂದ 24 ಗಂಟೆಯೂ ನಿರಂತರ ವಿದ್ಯುತ್ ನೀಡಲು ಸಾಧ್ಯವಿಲ್ಲ. ಅದಕ್ಕೆ ಪರಮಾಣು ಶಕ್ತಿಯೇ ಅತ್ಯುತ್ತಮ ಪರ್ಯಾಯ. ಈ ನಿಟ್ಟಿನಲ್ಲಿ ಖಾಸಗಿ ಹೂಡಿಕೆಯ ಬೆಂಬಲ ಅವಶ್ಯವಾದ್ದರಿಂದ ರಿಲಯ ಮತ್ತು ಅದಾನಿಯಂತಹ ಕಾರ್ಪೊ‌ ರೇಟ್ ದಿಗ್ಗಜರ ಹೂಡಿಕೆಯನ್ನು ಮುಕ್ತವಾಗಿ ಸ್ವಾಗತಿಸಲಾಗುತ್ತಿದೆ.

2025ರ ಕೇಂದ್ರ ಬಜೆಟ್ʼನಲ್ಲೂ ಸಣ್ಣ ರಿಯಾಕ್ಟರ್‌ಗಳ ಅಭಿವೃದ್ಧಿ ಮತ್ತು ಸಂಶೋಧನೆಗೆ ಸಾವಿರಾರು ಕೋಟಿ ರುಪಾಯಿಗಳನ್ನು ಮೀಸಲಿಡಲಾಗಿದೆ. ಸ್ಮಾಲ್ ಮಾಡ್ಯುಲರ್ ರಿಯಾಕ್ಟರ್‌ಗಳು ಭಾರತದ ಇಂಧನ ಅಗತ್ಯವನ್ನು ಪೂರೈಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ. ಸಂಪ್ರದಾಯಿಕ ಪರಮಾಣು ಸ್ಥಾವರಗಳು ದೈತ್ಯ ಗಾತ್ರದಲ್ಲಿರುತ್ತವೆ. ಅವುಗಳನ್ನು ನಿರ್ಮಿಸಲು ಸಾವಿರಾರು ಎಕರೆ ಜಾಗ, ಕೋಟ್ಯಂತರ ರೂಪಾಯಿ ವೆಚ್ಚ ಮತ್ತು ಹಲವು ವರ್ಷಗಳ ಸಮಯ ಬೇಕಾಗುತ್ತದೆ. ಆದರೆ ಎಸ್‌ಎಂಆರ್ ಗಳು ಹಾಗಲ್ಲ, ಹೆಸರೇ ಸೂಚಿಸುವಂತೆ ಇದು ಸಣ್ಣ ಗಾತ್ರದ್ದು.

ಇಡೀ ರಿಯಾಕ್ಟರ್ ಅನ್ನು ಒಂದೇ ಕಡೆ ಕಟ್ಟುವ ಬದಲು, ಅದರ ಬಿಡಿಭಾಗಗಳನ್ನು ಕಾರ್ಖಾನೆಯ ತಯಾರಿಸಿ ನಂತರ ಅದನ್ನು ಬೇಕಾದ ಸ್ಥಳಕ್ಕೆ ಸಾಗಿಸಿ ತ್ವರಿತವಾಗಿ ಜೋಡಿಸಬಹುದು! ಇವೆಲ್ಲ ವನ್ನೂ ಮಾಡಿದಾಗ ಯುದ್ಧ ಎಲ್ಲಾ ನಡೆದರೂ, ಇಂಧನ ಬಿಕ್ಕಟ್ಟನ್ನು ಮತ್ತಷ್ಟು ಪರಿಣಾಮಕಾರಿ ಯಾಗಿ ಎದುರಿಸಬಹುದು.