M R Venkatesh Column: ಅಡ್ಡ ಮತದಾನಕ್ಕೆ ಮುಕ್ತ ಮತದಾನ ಪರಿಹಾರವೇ ?
ಗೌಪ್ಯ ಮತದಾನದ ಲಾಭ ಪಡೆದು ಶಾಸಕರು ತಮ್ಮ ಪಕ್ಷದ ಅಧಿಕೃತ ಅಭ್ಯರ್ಥಿಗಳಿಗೆ ಕೈಕೊಟ್ಟು, ಬೇರೆ ಪಕ್ಷದ ಅಥವಾ ಸ್ವತಂತ್ರ ಅಭ್ಯರ್ಥಿಗಳಿಗೆ ಮತ ಹಾಕಿರುವ ಘಟನೆಗಳು ರಾಜಕೀಯ ವಲಯ ದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ. ಈ ಹಿನ್ನೆಲೆಯಲ್ಲಿ, ವಿಧಾನ ಪರಿಷತ್ ಚುನಾವಣೆಗೂ ರಾಜ್ಯ ಸಭಾ ಮಾದರಿ ಯಂತೆ ‘ಮುಕ್ತ ಮತದಾನ’ (ಓಪನ್ ಬ್ಯಾಲೆಟ್) ವ್ಯವಸ್ಥೆಯನ್ನು ಏಕೆ ತರಬಾರದು ಎಂಬ ಕೂಗು ಮತ್ತೆ ಕೇಳಿಬರುತ್ತಿದೆ.
-
ಮತ- ಹಿತ
ಎಂ.ಆರ್.ವೆಂಕಟೇಶ್
ರಾಜ್ಯಸಭಾ ಚುನಾವಣೆಯಲ್ಲಿ ಶಾಸಕರು ತಮ್ಮ ಮತಪತ್ರವನ್ನು ಪಕ್ಷದ ಅಧಿಕೃತ ಏಜೆಂಟನಿಗೆ ಕಡ್ಡಾಯವಾಗಿ ತೋರಿಸಿಯೇ ಮತಪೆಟ್ಟಿಗೆಗೆ ಹಾಕಬೇಕು. ನಮ್ಮ ಜನಪ್ರತಿನಿಧಿಗಳ ಮೇಲೆ ನಮಗೆ ಎಷ್ಟೊಂದು ಅಪನಂಬಿಕೆ ಎಂದರೆ, ಅವರು ಭ್ರಷ್ಟರಾಗುತ್ತಾರೆ, ಹಣಕ್ಕೆ ಬಲಿಯಾಗುತ್ತಾರೆ ಎಂಬ ನಂಬಿಕೆ!
ಇತ್ತೀಚೆಗೆ ನಡೆದ ಕರ್ನಾಟಕ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ನಡೆದ ಅಡ್ಡಮತದಾನದ ಪ್ರಹಸನವು, ನಮ್ಮ ಚುನಾವಣಾ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ಆಳವಾದ ವಿಪರ್ಯಾಸ ವೊಂದನ್ನು ಮರಳಿ ಮುನ್ನೆಲೆಗೆ ತಂದಿದೆ.
ಗೌಪ್ಯ ಮತದಾನದ ಲಾಭ ಪಡೆದು ಶಾಸಕರು ತಮ್ಮ ಪಕ್ಷದ ಅಧಿಕೃತ ಅಭ್ಯರ್ಥಿಗಳಿಗೆ ಕೈಕೊಟ್ಟು, ಬೇರೆ ಪಕ್ಷದ ಅಥವಾ ಸ್ವತಂತ್ರ ಅಭ್ಯರ್ಥಿಗಳಿಗೆ ಮತ ಹಾಕಿರುವ ಘಟನೆಗಳು ರಾಜಕೀಯ ವಲಯ ದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ. ಈ ಹಿನ್ನೆಲೆಯಲ್ಲಿ, ವಿಧಾನ ಪರಿಷತ್ ಚುನಾವಣೆಗೂ ರಾಜ್ಯ ಸಭಾ ಮಾದರಿಯಂತೆ ‘ಮುಕ್ತ ಮತದಾನ’ (ಓಪನ್ ಬ್ಯಾಲೆಟ್) ವ್ಯವಸ್ಥೆಯನ್ನು ಏಕೆ ತರಬಾರದು ಎಂಬ ಕೂಗು ಮತ್ತೆ ಕೇಳಿಬರುತ್ತಿದೆ.
ಆದರೆ, ಈ ವಾದವನ್ನು ಮೇಲ್ನೋಟಕ್ಕೆ ಒಪ್ಪಿಕೊಳ್ಳುವ ಮುನ್ನ, ನಮ್ಮ ಸಾಂವಿಧಾನಿಕ ತತ್ವಗಳು ಹಾಗೂ ಪ್ರಜಾಪ್ರಭುತ್ವದ ಮೂಲಭೂತ ಆಶಯಗಳನ್ನು ನಾವು ಒರೆಗೆ ಹಚ್ಚಿ ನೋಡಬೇಕಿದೆ. ಸಾಮಾನ್ಯ ಪ್ರಜೆಯೊಬ್ಬ ಸಾರ್ವತ್ರಿಕ ಚುನಾವಣೆಯಲ್ಲಿ ಮತಗಟ್ಟೆಗೆ ಹೋದಾಗ, ಆತನ ಮತದಾನದ ಹಕ್ಕು ಸಂಪೂರ್ಣ ಗೌಪ್ಯವಾಗಿರುತ್ತದೆ.
ಇದನ್ನೂ ಓದಿ:Thimmanna Bhagwat Column: ನಮಸ್ತೇ ಸದಾ ವತ್ಸಲೇ ಎನ್ನಲು ನೋಂದಣಿಯಾಗಬೇಕೆ ?
ತಾನು ಯಾರಿಗೆ ಮತ ಹಾಕಿದ್ದೇನೆ ಎಂದು ಯಾರಿಗೂ ಹೇಳುವ ಅಥವಾ ತೋರಿಸುವ ಅನಿವಾರ್ಯತೆ ಅವನಿಗಿಲ್ಲ. ತನ್ನ ಇಚ್ಛೆಯಂತೆ ಅವನು ಹೇಳಿಕೊಳ್ಳಬಹುದೇ ಹೊರತು ಕಡ್ಡಾಯವಲ್ಲ. ಇದು ಪ್ರಜಾಪ್ರಭುತ್ವದ ಅತ್ಯಂತ ಪವಿತ್ರವಾದ ಹಕ್ಕು. ಹಾಗೆಯೇ, ಅದೇ ಜನಸಾಮಾನ್ಯರಿಂದ ಆಯ್ಕೆಯಾಗಿ ಬಂದ ಜನಪ್ರತಿನಿಧಿಯೊಬ್ಬ ಮೇಲ್ಮನೆಗೆ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸುವಾಗ, ಆತನಿಗೆ ತನ್ನ ಇಷ್ಟದಂತೆ ಮತ ಹಾಕುವ ಸ್ವಾತಂತ್ರ್ಯ ನೀಡಲಾಗಿದೆ.
ಆದರೆ ರಾಜ್ಯಸಭಾ ಚುನಾವಣೆಯಲ್ಲಿ ಶಾಸಕರು ತಮ್ಮ ಮತಪತ್ರವನ್ನು ಪಕ್ಷದ ಅಧಿಕೃತ ಏಜೆಂಟನಿಗೆ ಕಡ್ಡಾಯವಾಗಿ ತೋರಿಸಿಯೇ ಮತಪೆಟ್ಟಿಗೆಗೆ ಹಾಕಬೇಕು. ನಮ್ಮ ಜನಪ್ರತಿನಿಧಿಗಳ ಮೇಲೆ ನಮಗೆ ಎಷ್ಟೊಂದು ಅಪನಂಬಿಕೆ ಎಂದರೆ, ಅವರು ಭ್ರಷ್ಟರಾಗುತ್ತಾರೆ, ಹಣಕ್ಕೆ ಬಲಿಯಾಗುತ್ತಾರೆ ಎಂಬ ಏಕೈಕ ಕಾರಣಕ್ಕೆ ಅವರ ಗೌಪ್ಯ ಮತದಾನದ ಹಕ್ಕನ್ನೇ ಕಸಿದುಕೊಳ್ಳು ವಷ್ಟು ನಮ್ಮ ಪ್ರಜಾಸತ್ತಾತ್ಮಕ ವ್ಯವಸ್ಥೆ ಶೈಶವಾವಸ್ಥೆಯಲ್ಲಿದೆಯೇ ಎಂಬ ಪ್ರಶ್ನೆ ಏಳುತ್ತದೆ.
ಈ ಮುಕ್ತ ಮತದಾನದ ಹಿನ್ನೆಲೆಯನ್ನು ಗಮನಿಸಿದರೆ, 2003ರಲ್ಲಿ ಸಂಸತ್ತು ಜನಪ್ರತಿನಿಧಿ ಕಾಯ್ದೆ, 1951ಕ್ಕೆ ಮಹತ್ವದ ತಿದ್ದುಪಡಿಯೊಂದನ್ನು ತಂದಿತು. ಈ 2003ರ ತಿದ್ದುಪಡಿಯ ಮೂಲಕ ರಾಜ್ಯಸಭಾ ಚುನಾವಣೆಯಲ್ಲಿ ದಶಕಗಳಿಂದ ನಡೆದುಕೊಂಡು ಬಂದಿದ್ದ ಗೌಪ್ಯ ಮತದಾನದ ಪದ್ಧತಿಯನ್ನು ಬದಲಾಯಿಸಿ, ಮುಕ್ತ ಮತದಾನದ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಯಿತು. 2003ರಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಉದ್ವಾತದ್ವ ಅಡ್ಡಮತದಾನ ನಡೆದಿದ್ದೇ ಈ ಕಾನೂನು ತಿದ್ದುಪಡಿಗೆ ಮೂಲವಾಯಿತು. ರಾಜಕೀಯದಲ್ಲಿ ಹಣಬಲದ ಪ್ರಭಾವ ಮತ್ತು ಅಡ್ಡಮತದಾನವನ್ನು ನಿಯಂತ್ರಿಸುವುದೇ ಈ ಕಾನೂನಿನ ಮುಖ್ಯ ಉದ್ದೇಶವಾಗಿತ್ತು. ಈ ತಿದ್ದುಪಡಿಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಸುದೀರ್ಘ ಕಾನೂನು ಹೋರಾಟ ನಡೆಯಿತು. ತದನಂತರ, 2006ರ ಪ್ರಸಿದ್ಧ ‘ಕುಲದೀಪ್ ನಾಯರ್ ವರ್ಸಸ್ ಯೂನಿ ಯನ್ ಆಫ್ ಇಂಡಿಯಾ’ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಪಂಚಸದಸ್ಯರ ಸಾಂವಿಧಾನಿಕ ಪೀಠವು ಈ ತಿದ್ದುಪಡಿಯನ್ನು ಒಮ್ಮತದಿಂದ ಎತ್ತಿ ಹಿಡಿಯಿತು.
ರಾಜಕೀಯ ವ್ಯವಸ್ಥೆಯ ಪಾವಿತ್ರ್ಯತೆಯನ್ನು ಕಾಪಾಡಲು, ಭ್ರಷ್ಟಾಚಾರವನ್ನು ತಡೆಯಲು ಮತ್ತು ರಾಜಕೀಯ ಪಕ್ಷಗಳಲ್ಲಿ ಶಿಸ್ತು ಮೂಡಿಸಲು ಇಂತಹ ಪಾರದರ್ಶಕ ವ್ಯವಸ್ಥೆಯನ್ನು ಜಾರಿಗೆ ತರುವ ಸಂಪೂರ್ಣ ಅಧಿಕಾರ ಶಾಸಕಾಂಗಕ್ಕೆ ಇದೆ ಎಂದು ಮಾನ್ಯ ನ್ಯಾಯಾಲಯವು ಅತ್ಯಂತ ನಯವಾಗಿ ಹಾಗೂ ತಾರ್ಕಿಕವಾಗಿ ಸ್ಪಷ್ಟಪಡಿಸಿತು.
ಗೌಪ್ಯತೆಯು ಮುಕ್ತ ಚುನಾವಣೆಯ ಪ್ರಮುಖ ಅಂಗವಾಗಿದ್ದರೂ, ಅದು ದುರುಪಯೋಗಕ್ಕೆ ಮತ್ತು ಭ್ರಷ್ಟ ಆಚರಣೆಗಳಿಗೆ ಕವಚವಾಗಬಾರದು ಎಂಬ ಉನ್ನತ ಸಾಂವಿಧಾನಿಕ ಆಶಯವನ್ನು ಈ ತೀರ್ಪು ಒಳಗೊಂಡಿದೆ. ನ್ಯಾಯಾಲಯದ ತೀರ್ಪನ್ನು ಟೀಕಿಸುವ ಉದ್ದೇಶವಿಲ್ಲ ವಾದರೂ ಕೆಲವು ತಾತ್ವಿಕ ಅಂಶಗಳನ್ನು ಚರ್ಚಿಸಲೇಬೇಕಾಗಿದೆ. ಮೂಲತಃ ಚುನಾವಣೆಯ ಉದ್ದೇಶವೇ ತಮಗೆ ಸೂಕ್ತವೆನಿಸುವ, ಅರ್ಹನಾದ ಅಭ್ಯರ್ಥಿಯನ್ನು ಮುಕ್ತವಾಗಿ ಆಯ್ಕೆ ಮಾಡುವುದು.
ಒಂದು ವೇಳೆ ಶಾಸಕನೊಬ್ಬ ತನ್ನ ಪಕ್ಷದ ಅಭ್ಯರ್ಥಿಗಿಂತ ಮತ್ತೊಬ್ಬ ಅಭ್ಯರ್ಥಿ ಹೆಚ್ಚು ಸಮರ್ಥ ನೆಂದು ಭಾವಿಸಿದರೆ, ಆತನಿಗೆ ಮತ ಹಾಕುವ ಹಕ್ಕು ಸಾಂವಿಧಾನಿಕವಾಗಿ ಇರಬೇಕಲ್ಲವೇ? ಪಕ್ಷಗಳ ವಿಭಜನೆಯೇನಿದ್ದರೂ ಚುನಾವಣೆಯ ಕಾರಣಕ್ಕೇ ವಿನಃ ಸದನದಲ್ಲಿ ಎಲ್ಲ ಶಾಸಕರೂ ಸಮಾನ ರಲ್ಲವೇ? ಆದರೆ, ಏಜೆಂಟನಿಗೆ ಮತಪತ್ರವನ್ನು ತೋರಿಸಲೇಬೇಕು ಎಂಬ ನಿಯಮವು ಶಾಸಕನ ಆಯ್ಕೆಯ ಸ್ವಾತಂತ್ರ್ಯವನ್ನೇ ಹತ್ತಿಕ್ಕುತ್ತದೆ.
ರಾಜ್ಯಸಭೆಯ ಮಾದರಿಯ ಮುಕ್ತ ಮತದಾನ ವ್ಯವಸ್ಥೆಯು ಕೇವಲ ಪಕ್ಷದ ಸರ್ವಾಧಿಕಾರವನ್ನು ಗಟ್ಟಿಗೊಳಿಸುತ್ತದೆಯೇ ವಿನಃ, ಅದರಿಂದ ಬೇರೆ ಯಾವ ಮಹಾನ್ ಸಾಂವಿಧಾನಿಕ ಮೌಲ್ಯವೂ ಉದ್ದಾರವಾಗುವುದಿಲ್ಲ. ಶಾಸಕನೊಬ್ಬ ಏಜೆಂಟನಿಗೆ ತನ್ನ ಅಡ್ಡ ಮತದಾನವನ್ನು ಬಹಿರಂಗವಾಗಿ ತೋರಿಸಿದರೂ, ಆತನ ವಿರುದ್ಧ ತಕ್ಷಣವೇ ಯಾವುದೇ ಕಠಿಣ ಕಾನೂನಾತ್ಮಕ ಕ್ರಮ ಜರುಗಿಸಲು ನಮ್ಮ ಸಂವಿಧಾನದ ಹತ್ತನೇ ಶೆಡ್ಯೂಲ್ (ಪಕ್ಷಾಂತರ ನಿಷೇಧ ಕಾಯ್ದೆ) ಅಡಿಯಲ್ಲಿರುವ ಅವಕಾಶ ಗಳು ತೀರಾ ಸೀಮಿತ ಹಾಗೂ ಕ್ಲಿಷ್ಟಕರವಾಗಿವೆ.
ಹತ್ತನೇ ಶೆಡ್ಯೂಲ್‌ನ ಅನ್ವಯ ವಿಪ್ (ಸಚೇತಕನ ಆದೇಶ) ಜಾರಿಯಾಗುವುದು ಮೂಲತಃ ಸದನದ ಒಳಗೆ ನಡೆಯುವ ಕಲಾಪಗಳಿಗೆ, ಅಂದರೆ ವಿಶ್ವಾಸಮತ ಯಾಚನೆ ಅಥವಾ ಪ್ರಮುಖ ಹಣಕಾಸು ಮಸೂದೆಗಳ ಅಂಗೀಕಾರದಂತಹ ಸಂದರ್ಭಗಳಲ್ಲಿ ಮಾತ್ರ ಎಂಬ ಬಲವಾದ ಕಾನೂನು ವಾದವಿದೆ. ರಾಜ್ಯಸಭೆ ಅಥವಾ ವಿಧಾನ ಪರಿಷತ್ ಚುನಾವಣೆಗಳು ಸದನದ ಕಲಾಪಗಳಲ್ಲ; ಅವು ಕೇವಲ ಚುನಾವಣಾ ಆಯೋಗವು ಸದನದ ಹೊರಗೆ ನಡೆಸುವ ಪ್ರಕ್ರಿಯೆಗಳು.
ಹೀಗಾಗಿ, ಈ ಚುನಾವಣೆಗಳಲ್ಲಿ ವಿಪ್ ಉಲ್ಲಂಘನೆ ಮಾಡಿದರೆ ಶಾಸಕತ್ವ ತಾನಾಗಿಯೇ ಅನರ್ಹ ಗೊಳ್ಳುತ್ತದೆ ಎಂದು ಹೇಳಲಾಗುವುದಿಲ್ಲ. ಸುಪ್ರೀಂ ಕೋರ್ಟ್ ಮುಕ್ತ ಮತದಾನದ ಸಿಂಧುತ್ವವನ್ನು ಎತ್ತಿಹಿಡಿದಿದೆ ಯಾದರೂ, ಕೇವಲ ಅಡ್ಡಮತದಾನ ಮಾಡಿದ ಕಾರಣಕ್ಕೆ ಶಾಸಕನೊಬ್ಬನನ್ನು ಅನರ್ಹಗೊಳಿಸಲು ಅದು ಸರಳ ಹಾದಿಯನ್ನು ಸೃಷ್ಟಿಸಿಲ್ಲ.
ಒಂದು ವೇಳೆ, ಶಾಸಕನೊಬ್ಬ ಮುಕ್ತ ಮತದಾನದಲ್ಲಿ ಪಕ್ಷದ ವಿರುದ್ಧ ಮತ ಚಲಾಯಿಸಿ, ಅದರ ಆಧಾರದ ಮೇಲೆ ಪಕ್ಷವು ಸಭಾಧ್ಯಕ್ಷರಿಗೆ (ಸ್ಪೀಕರ್) ಅನರ್ಹತೆಯ ದೂರು ನೀಡಿದರೂ, ಅಂತಿಮ ನಿರ್ಧಾರ ಸಂಪೂರ್ಣವಾಗಿ ಸ್ಪೀಕರ್ ಅವರ ವಿವೇಚನಾಽಕಾರಕ್ಕೆ ಒಳಪಟ್ಟಿರುತ್ತದೆ. ಸ್ಪೀಕರ್ ಅವರು ಆಡಳಿತ ಪಕ್ಷದ ಒಲವಿನಂತೆ ವರ್ತಿಸುವುದು ನಮ್ಮ ದೇಶದ ರಾಜಕೀಯ ಇತಿಹಾಸದುದ್ದಕ್ಕೂ ಕಂಡುಬಂದಿರುವ ವಾಸ್ತವ. ತಮ್ಮ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಸ್ಪೀಕರ್ ಅವರು ಈ ಅನರ್ಹತೆಯ ಅರ್ಜಿಗಳನ್ನು ತಿಂಗಳುಗಟ್ಟಲೆ, ವರ್ಷಗಟ್ಟಲೆ ಇತ್ಯರ್ಥಪಡಿಸದೆ ಹಾಗೆಯೇ ಉಳಿಸಿಕೊಳ್ಳಬಹುದು. ಅಂದರೆ, ಮೇಲ್ನೋಟಕ್ಕೆ ಬಲಿಷ್ಠವಾಗಿ ಕಾಣುವ ಕಾನೂನು ಇಲ್ಲಿ ಸಂಪೂರ್ಣವಾಗಿ ನಿರ್ವೀರ್ಯವಾಗುತ್ತದೆ.
ಈ ಎಲ್ಲ ವಾಸ್ತವಗಳನ್ನು ವಿಶ್ಲೇಷಿಸಿದಾಗ, ಶಾಸಕರು ಅಡ್ಡಮತದಾನ ಮಾಡಿದಾಗ ಅವರ ವಿರುದ್ಧ ಕೈಗೊಳ್ಳಬಹುದಾದ ಏಕೈಕ ನೈಜ ಕ್ರಮವೆಂದರೆ ಅದು ಕೇವಲ ರಾಜಕೀಯ ಸ್ವರೂಪzಗಿರುತ್ತದೆ. ಪಕ್ಷದ ಶಿಸ್ತು ಉಲ್ಲಂಘಿಸಿದ ಕಾರಣಕ್ಕಾಗಿ ಆತನನ್ನು ಪಕ್ಷದಿಂದ ಉಚ್ಚಾಟನೆ ಮಾಡುವುದು ಅಥವಾ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಆತನಿಗೆ ಪಕ್ಷದ ಟಿಕೆಟ್ ನಿರಾಕರಿಸುವುದು ಬಿಟ್ಟರೆ ಬೇರೇನೂ ಮಾಡಲು ಸಾಧ್ಯವಿಲ್ಲ. ಈ ಕ್ರಮಗಳು ಸಂಪೂರ್ಣವಾಗಿ ರಾಜಕೀಯ ಪಕ್ಷದ ಆಂತರಿಕ ನಿರ್ಧಾರಗಳೇ ಹೊರತು, ಇದಕ್ಕೂ ಸಾಂವಿಧಾನಿಕ ಕಾನೂನುಗಳಿಗೂ ಯಾವುದೇ ಸಂಬಂಧವಿಲ್ಲ.
ಹೀಗಿರುವಾಗ, ಕೇವಲ ಪಕ್ಷದ ನಾಯಕರು ತಮ್ಮ ಶಾಸಕರನ್ನು ಹಿಡಿತದಲ್ಲಿಟ್ಟುಕೊಳ್ಳಲು, ಮುಕ್ತ ಮತದಾನದಂತಹ ನಿಯಮವನ್ನು ಪ್ರಜಾಪ್ರಭುತ್ವದ ರಕ್ಷಣೆಯ ಹೆಸರಿನಲ್ಲಿ ಬಳಸುವುದು ಸಾಂವಿಧಾನಿಕವಾಗಿ ತರ್ಕಬದ್ಧವಾಗಿ ಕಾಣುವುದಿಲ್ಲ.
ವಿಧಾನ ಪರಿಷತ್ ಚುನಾವಣೆಯಲ್ಲಿ ಪ್ರಸ್ತುತ ಇರುವ ಗೌಪ್ಯ ಮತದಾನದ ವ್ಯವಸ್ಥೆಯು ಶಾಸಕರಿಗೆ ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಹಾಕುವ ಕೊನೆಯ ಅವಕಾಶವನ್ನಾದರೂ ಉಳಿಸಿದೆ. ಒಬ್ಬ ರಾಜಕೀಯ ಕಾರ್ಯಕರ್ತನಾಗಿ ಇದು ಭಿನ್ನವಾಗಿ ಕಾಣುತ್ತದೆ. ಗೌಪ್ಯ ಮತದಾನದಲ್ಲಿ ಹಣಬಲ ಮತ್ತು ಕುದುರೆ ವ್ಯಾಪಾರದ ಪ್ರಭಾವಳಿ ಇರುವುದು ಸುಳ್ಳಲ್ಲ. ಆದರೆ, ಈ ಭ್ರಷ್ಟಾಚಾರ ವನ್ನು ತಡೆಯಬೇಕಿರುವುದು ರಾಜಕೀಯ ಪಕ್ಷಗಳು ತಮಗೆ ನಿಷ್ಠರಾದ ಹಾಗೂ ಮೌಲ್ಯಾಧಾರಿತ ವ್ಯಕ್ತಿಗಳನ್ನು ಶಾಸಕರನ್ನಾಗಿ ಬೆಳೆಸುವ ಮೂಲಕವೇ ಹೊರತು, ಕಾನೂನಿನ ಮೂಲಕ ಶಾಸಕರ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದರಿಂದಲ್ಲ.
ಮುಕ್ತ ಮತದಾನದಿಂದ ರಾಜಕೀಯದ ನೈತಿಕತೆಯೇನೂ ಶುದ್ಧೀಕರಣವಾಗುವುದಿಲ್ಲ. ಅಸಲಿ ಸಮಸ್ಯೆ ಇರುವುದು ಸೈದ್ಧಾಂತಿಕ ಬದ್ಧತೆಯ ಕೊರತೆಯಲ್ಲಿ, ನೈತಿಕತೆಯ ಅನುಪಸ್ಥಿತಿಯಲ್ಲಿ. ಎಲ್ಲ ಪಕ್ಷಗಳೂ ತನ್ನ ಶಾಸಕರಲ್ಲಿ ಈ ಭಾವನೆಯನ್ನು ಗಟ್ಟಿಗೊಳಿಸುತ್ತಾ ಹೋಗುವುದು ಪರಿಹಾರವೇ ವಿನಃ ಕೇವಲ ಕಾನೂನು ಮಾಡುತ್ತಾ ಹೋದರೆ ಅದು, ಕಾನೂನಿನ ಕೆಳಗೆ ತೂರುವ ಮತ್ತಷ್ಟು ಚಾಲಾಕಿ, ಕಿಲಾಡಿ, ಭ್ರಷ್ಟರನ್ನು ಸೃಷ್ಟಿಸುತ್ತದೆಯೇ ವಿನಃ ವ್ಯವಸ್ಥೆಯನ್ನು ಶುದ್ಧಗೊಳಿಸುವುದಿಲ್ಲ.