ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Ganesh Hegde Column: ಎಥೆನಾಲ್‌ʼಗೆ ಸಮರ್ಪಕ ಪರ್ಯಾಯ ಬಯೋಬ್ಯುಟೆನಾಲ್‌: ಆದರೆ ಉತ್ಪಾದನೆ ಕಷ್ಟ !

ಹೊಸತಾಗಿ ತಯಾರಾದ ವಾಹನಗಳನ್ನು ಇ-20 ಹೊಂದಿಕೆ (ಕಂಪ್ಯಾಟಿಬಲ್) ಆಗಿ ತಯಾರಿಸಲಾಗುತ್ತಿದೆ. ಆದರೆ ಹಳೆಯ ವಾಹನಗಳು ಎಥೆನಾಲಿನ ಜಲಪ್ರೇಮದಿಂದಾಗಿ ಮತ್ತಷ್ಟು ಬೇಗ ಹಳೆಯದಾಗಿ, ಹಾಳಾಗುವ ಸಾಧ್ಯತೆ ಹೆಚ್ಚು! ಎಥೆನಾಲ್ ನಿರೋಧಕ ವಸ್ತುಗಳನ್ನು ಬಳಸಿ ತಯಾರಿಸಿದ ಎಂಜಿನ್‌ನಿಂದ ಈ ಸಮಸ್ಯೆಯನ್ನೇನೊ ಬಗೆಹರಿಸಬಹುದು, ಆದರೆ ಮೈಲೇಜನ್ನು ಮುಂಚಿನಷ್ಟಕ್ಕೆ ಹೆಚ್ಚಿಸಲು ಸಾಧ್ಯವೇ? ಎಥೆನಾಲ್ ಬೆರಕೆಯ ಪೆಟ್ರೋಲಿನಲ್ಲಿ ಇದು ಸಾಧ್ಯವಿಲ್ಲ.

ಎಥೆನಾಲ್‌ʼಗೆ ಸಮರ್ಪಕ ಪರ್ಯಾಯ ಬಯೋಬ್ಯುಟೆನಾಲ್‌: ಆದರೆ ಉತ್ಪಾದನೆ ಕಷ್ಟ !

-

Profile
Ashok Nayak Aug 12, 2026 7:21 AM

ಇಂಧನ ಲೋಕ (ಭಾಗ-2)

ಗಣೇಶ್‌ ಹೆಗಡೆ

ನಿನ್ನೆಯ ಲೇಖನದಲ್ಲಿ ಇ-20 ಇಂಧನದ ದಕ್ಷದಹನದ ಬಗ್ಗೆ ಚರ್ಚಿಸಿದೆವು. ಇ-20 ಇರುವ ಟ್ಯಾಂಕ್, ಎಂಜಿನ್, ಕೊಳವೆ ಅಥವಾ ಎಲ್ಲಿಯೇ ಆಗಲಿ, ಅದು ನೀರು ಅಥವಾ ನೀರಿನಂಶದ ಸಂಪರ್ಕಕ್ಕೆ ಬಂದರೆ ಅದನ್ನು ಬರಸೆಳೆಯದೆ ಬಿಡುವುದಿಲ್ಲ. ಅಂದರೆ ಇ-20 ನೀರನ್ನು ಆಕರ್ಷಿಸುತ್ತದೆ ( Hygroscopic). ಒಂದೊಮ್ಮೆ ಹೆಚ್ಚು ನೀರಿನಂಶ ಸೇರ್ಪಡೆಯಾದಲ್ಲಿ ಪೆಟ್ರೋಲಿನೊಂದಿಗೆ ಪ್ರಾವಸ್ಥಾ ವಿಂಗಡಣೆ (Phase Separation) ಆಗಿ ಬಿಡುತ್ತದೆ. ಅಂದರೆ ಹೇಗೆ ಎಣ್ಣೆ-ನೀರು ಬೆರೆಯದೆ ಬೇರೆ ಬೇರೆ ಪದರವಾಗಿ ಬೇರ್ಪಡುವುದೊ ಹಾಗೆ ಪೆಟ್ರೋಲು ಮತ್ತು ಎಥೆನಾಲ್ ಎರಡು ಪದರವಾಗಿ ಬೇರ್ಪಟ್ಟುಬಿಡುತ್ತದೆ. ಇನ್ನು ಮಳೆಗಾಲ ಅಥವಾ ತೀರಾ ತಂಪು ವಾತಾವರಣದಲ್ಲಿ ವಾಹನವನ್ನು ಚಾಲೂ ಮಾಡುವುದು ಕಷ್ಟಕರವಾದೀತು.

ಅದಕ್ಕಿಂತ ಹೆಚ್ಚಾಗಿ ಇದರ ಸಂಪರ್ಕಕ್ಕೆ ಬರುವ ಲೋಹದ ಭಾಗಗಳು ಬೇಗ ತುಕ್ಕು ಹಿಡಿಯುವ ಸಂಭವ ಹೆಚ್ಚು. ಆದ್ದರಿಂದ ಇ-20ಯನ್ನು ಲೋಹದ ಕೊಳವೆಗಳಲ್ಲಿ ಸಾಗಾಟ ಅಥವಾ ಲೋಹದ ಟ್ಯಾಂಕ್‌ಗಳಲ್ಲಿ ಸಂಗ್ರಹ ಮಾಡುವುದು ಕಷ್ಟಕರ. ಜೊತೆಗೆ ವಾಹನದಲ್ಲಿ ಇಂಧನದ ಸಂಪರ್ಕಕ್ಕೆ ಬರುವ ಮುಚ್ಚಳ, ಗ್ಯಾಸ್ಕೇಟು, ರಬ್ಬರ್ ಹಾಗೂ ವಿವಿಧ ಪ್ಲಾಸ್ಟಿಕ್‌ನ ಬಿಡಿಭಾಗಗಳು ನೀರಿನಂಶ ದಿಂದಾಗಿ ಬೇಗ ಹಾಳಾಗುವ ಸಾಧ್ಯತೆಯಿದೆ. ಆದ್ದರಿಂದ ಇಂಥ ಎಲ್ಲ ಭಾಗಗಳನ್ನೂ ಎಥೆನಾಲ್ ನಿರೋಧಕ ವಸ್ತುಗಳನ್ನು ಉಪಯೋಗಿಸಿ ಮರುನಿರ್ಮಿಸುವುದು ಅನಿವಾರ್ಯ!

ಹೊಸತಾಗಿ ತಯಾರಾದ ವಾಹನಗಳನ್ನು ಇ-20 ಹೊಂದಿಕೆ (ಕಂಪ್ಯಾಟಿಬಲ್) ಆಗಿ ತಯಾರಿಸ ಲಾಗುತ್ತಿದೆ. ಆದರೆ ಹಳೆಯ ವಾಹನಗಳು ಎಥೆನಾಲಿನ ಜಲಪ್ರೇಮದಿಂದಾಗಿ ಮತ್ತಷ್ಟು ಬೇಗ ಹಳೆಯದಾಗಿ, ಹಾಳಾಗುವ ಸಾಧ್ಯತೆ ಹೆಚ್ಚು! ಎಥೆನಾಲ್ ನಿರೋಧಕ ವಸ್ತುಗಳನ್ನು ಬಳಸಿ ತಯಾರಿಸಿದ ಎಂಜಿನ್‌ನಿಂದ ಈ ಸಮಸ್ಯೆಯನ್ನೇನೊ ಬಗೆಹರಿಸಬಹುದು, ಆದರೆ ಮೈಲೇಜನ್ನು ಮುಂಚಿನಷ್ಟಕ್ಕೆ ಹೆಚ್ಚಿಸಲು ಸಾಧ್ಯವೇ? ಎಥೆನಾಲ್ ಬೆರಕೆಯ ಪೆಟ್ರೋಲಿನಲ್ಲಿ ಇದು ಸಾಧ್ಯವಿಲ್ಲ.

Ethe

ಇನ್ನು ಇ-20ಯನ್ನು ಇ-85 ಅಥವಾ ಇ-ನೂರಕ್ಕೆ ನೂರು ಮಾಡಿದರಂತೂ ಮೈಲೇಜು ಮತ್ತಷ್ಟು ಕುಸಿಯುವುದು ಖಚಿತ. ಹಾಗಾದರೆ ಇದಕ್ಕೆ ಪರಿಹಾರವೆಂದರೆ- ಬದಲಿ ಇಂಧನ ಕುರಿತ ಸಂಶೋಧನೆ ಹಾಗೂ ಅಭಿವೃದ್ಧಿ! ಹೌದು, ಈಗಾಗಲೆ ಈ ಚಿಂತನೆಯೂ ತೀವ್ರವಾಗಿ ನಡೆದು ಈ ನಿಟ್ಟಿನಲ್ಲಿ ಸಾಕಷ್ಟು ಸಂಶೋಧನಾ ಪ್ರಗತಿಯೂ ಆಗಿದೆ. ಪೆಟ್ರೋಲಿಗೆ ಎಥೆನಾಲ್- ಮದಿರೆಯನ್ನು ಕುಡಿಸಿದ್ದರ ಪರಿಣಾಮಗಳನ್ನು ನೋಡಿದ್ದಾಯ್ತು. ಆದರೆ ಈ ಮದಿರೆಯ ದೊಡ್ಡಕ್ಕ- ಸಹೋದರಿ ಬ್ಯುಟೆನಾಲ್ ( Butanol) ಈಗಲೇ ವೇದಿಕೆಗೆ ಬಂದಿರದಿದ್ದರೂ, ಇನ್ನೂ ಸಂಶೋಧಕರ ಸೆರಗಿನಂಚಿನಲ್ಲಿ ಕಾಣಿಸಿ ಕೊಂಡು ನಸುನಗುತ್ತಿದ್ದಾಳೆ!

ಇದೇನಿದು ಈ ರಾಸಾಯನಿಕಗಳಿಗೆ ಅಕ್ಕ-ತಂಗಿ ಎಂಬ ಮನುಷ್ಯತ್ವವನ್ನು ಅರೋಪಿಸುವುದು ಉಚಿತವೇ? ಎಂಬ ಪ್ರಶ್ನೆ ಸಹಜ. ಆದರೆ ರಸಾಯನಶಾಸವೂ ಇವುಗಳನ್ನು ಒಂದೇ ಕುಟುಂಬಕ್ಕೆ ಸೇರಿದ ರಾಸಾಯನಿಕ ಗಳೆಂದೇ ಕರೆಯುವುದರಿಂದ ಉಪಮೆಯ ಕೊಂಚ ವಿಸ್ತಾರ ಅನುಚಿತವಾಗ ಲಾರದು!

ಆಲ್ಕೊಹಾಲ್ ವರ್ಗಕ್ಕೆ ಸೇರಿದ ಬ್ಯುಟೆನಾಲ್ (C4H9OH) ದಲ್ಲಿ ನಾಲ್ಕು ಕಾರ್ಬನ್ ಇರುವ ಹೈಡ್ರೋ ಕಾರ್ಬನ್ ಸರಪಳಿ ಇದೆ. ಈ ಅಲ್ಕೋಹಾಲ್ ಕುಟುಂಬ ಸರಣಿಯನ್ನು ಒಟ್ಟಿಗೆ ಇಡುವುದಾದರೆ: ಮಿಥೆನಾಲ್- CH3OH , ಎಥೆನಾಲ್- C2H5OH , ಪ್ರೊಪೆನಾಲ್ - C3H7OH , ಹಾಗೂ ಬ್ಯುಟೆನಾಲ್- C4H9OH (ಇದಕ್ಕೆ ನಾಲ್ಕು ಸಮಸ್ಥಾನಿಗಳು ಇವೆ). ಇವುಗಳಲ್ಲಿ ಒಂದರಿಂದ ಇನ್ನೊಂದಕ್ಕೆ ಒಂದು CH2 ಗುಂಪಿನ ಅಂತರವಿದೆ. ಆದ್ದರಿಂದ ಎಥೆನಾಲ್‌ಗಿಂತ ಬ್ಯುಟೆನಾಲ್‌ಗೆ ಎರಡು CH2 ಗುಂಪಿನ ಅಂತರವಿರುವುದರಿಂದ ಇದನ್ನು ದೊಡ್ಡಕ್ಕ ಎಂದರೆ ತಪ್ಪಿಲ್ಲ.

ಇದನ್ನೂ ಓದಿ: Ganesh S Hegde Column: ಮಿಶ್ರ ಇಂಧನ ಎಥೆನಾಲ್‌ʼಗೆ ಬದಲಿ ಆಶಾಕಿರಣದ ಹುಡುಕಾಟ

ಹಾಗಾದರೆ ಗುಣಲಕ್ಷಣದಲ್ಲೂ ದೊಡ್ಡಕ್ಕನೇ? ಎಂದರೆ, ಹೌದೆನ್ನಬೇಕು! ಕಾರಣ ಇದರ ಇಂಧನ ಶಕ್ತಿ ಎಥೆನಾಲಿಗಿಂತ ಜಾಸ್ತಿ. ಜೊತೆಗೆ ಯಾವುದೇ ಸಾವಯವ ರಾಸಾಯನಿಕ ಸಂಯುಕ್ತದಲ್ಲಿ ಹೈಡ್ರೋ ಕಾರ್ಬನ್ನಿನ ಗುಂಪು ಹೆಚ್ಚುತ್ತಾ ಹೋದಂತೆ ಆ ಸಂಯುಕ್ತಕ್ಕೆ ಜಲದ್ವೇಷಿ(ಹೈಡ್ರೋಫೋಬಿಕ್) ಗುಣದ ಪ್ರಭಾವ ಹೆಚ್ಚುತ್ತಾ ಹೋಗುತ್ತದೆ. ಆದ್ದರಿಂದ ಜಲಪ್ರೇಮಿ ಹೈಡ್ರೋಫಿಲಿಕ್ ಗುಂಪಾದ OH ಇದ್ದರೂ ಹೆಚ್ಚಿನ ಪ್ರಮಾಣದಲ್ಲಿರುವ ಜಲದ್ವೇಷಿ ಹೈಡ್ರೋಕಾರ್ಬನ್ನಿನ ಎದುರಲ್ಲಿ ಅದು ಗೌಣವಾಗಿಬಿಡುತ್ತದೆ. ಇದರಿಂದಾಗಿ ಎಥೆನಾಲಿನ ಜಲಪ್ರೇಮಿ ಸಮಸ್ಯೆ ಬ್ಯುಟೆನಾಲಿಗಿಲ್ಲ!

ಹಾಗಂತ ಬ್ಯುಟೆನಾಲ್ ಏನೂ ಈಗ ಹೊಸತಾಗಿ ಸಂಶೋಧಿಸಿದ ಸಂಯುಕ್ತವೇನಲ್ಲ, ಅದು ಮೊದಲಿನಿಂದಲೂ ಪರಿಚಿತವಾದದ್ದೇ. ಇದನ್ನೂ ಪೆಟ್ರೋಲಿಯಮ್ ಕಚ್ಚಾತೈಲದಿಂದ ಸಂಸ್ಕರಿಸಿ ಪಡೆಯುತ್ತಾರೆ. ಆದರೆ ಹೀಗೆ ಪಳೆಯುಳಿಕೆ ಇಂಧನದಿಂದ ಉತ್ಪಾದಿಸಿದ ಬ್ಯುಟೆನಾಲಿನ ದರ ಹೆಚ್ಚು. ಆದರೆ ಇದನ್ನೂ ಕೂಡ ನವೀಕರಿಸಬಲ್ಲ ಪಿಷ್ಟ (ಸ್ಟಾರ್ಚ್), ಲಿಗ್ನೋಸೆಲ್ಯುಲೋಸ್ ಹಾಗೂ ಶೈವಲ ಜೈವಿಕರಾಶಿ (Algal Biomass) ಮುಂತಾದ ಜೈವಿಕತ್ಯಾಜ್ಯಗಳ ಹುದುಗಿಸುವಿಕೆಯಿಂದಲೂ ಉತ್ಪಾದಿಸಲಾಗುತ್ತದೆ. ಇಂಥ ಬ್ಯುಟೆನಾಲನ್ನು ಬಯೋಬ್ಯುಟೆನಾಲ್ ಎನ್ನುತ್ತಾರೆ.

ಹಾಗಾದರೆ ಎಥೆನಾಲಿನ ಎರಡೂ ಸಮಸ್ಯೆಗಳಿಗೆ ಸೂಕ್ತ ಪರಿಹಾರವಾಗಿ ಬಯೋಬ್ಯುಟೆನಾಲ್ ಗೋಚರಿಸುತ್ತದೆ. ಇತರ ಸಾಮಾನ್ಯ ಜೈವಿಕ(ಬಯೋ) ಇಂಧನಗಳಿಗೆ (ಬಯೋಹೈಡ್ರೋಜನ್, ಬಯೋಎಥೆನಾಲ್ ಮತ್ತು ಬಯೋಡೀಸೆಲ್) ಹೋಲಿಸಿದರೆ, ಪೆಟ್ರೋಲ್‌ನೊಂದಿಗೆ ಅತ್ಯಧಿಕ ಸಾಮ್ಯತೆಯನ್ನು ಹೊಂದಿರುವ ಶ್ರೇಷ್ಠ ದ್ರವ ಜೈವಿಕ ಇಂಧನವಾದ ಈ ‘ಬಯೋಬ್ಯೂಟನಾಲ್’ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಗಳಿಸುತ್ತಿದೆ.

ಇದು ಹೆಚ್ಚಿನ ಶಕ್ತಿಯ ಸಾಂದ್ರತೆ (29.2 ಮೆಗಾ ಜೋಲ್ಸ್ ಪ್ರತಿ ಲೀಟರಿಗೆ) ಹಾಗೂ ಕಡಿಮೆ ಬಾಷ್ಪ ಶೀಲತೆಯನ್ನು (ಹೆಚ್ಚಿನ 117.2 ಡಿಗ್ರಿ ಸೆಂಟಿಗ್ರೇಡ್ ಕುದಿಯುವ ಬಿಂದು) ಹೊಂದಿದ್ದು, ಅತಿಕಡಿಮೆ ತುಕ್ಕುಕಾರಕ ಗುಣ ಹೊಂದಿದೆ. ಕಡಿಮೆ ಬಾಷ್ಪಶೀಲತೆ ಹೊಂದಿರುವುದರಿಂದ ಇದನ್ನು ಬಿಸಿ ಹವಾಮಾನದಲ್ಲಿ ನಿರ್ವಹಿಸುವುದು ಅಷ್ಟೇನು ಕಷ್ಟವಾಗದು. ಹಾಗೂ ತಂಪು ವಾತಾವರಣದಲ್ಲಿ ಇದು ಎಥೆನಾಲಿಗಿಂತ ಉತ್ತಮ ಕಾರ್ಯನಿರ್ವಹಣೆಯನ್ನು ತೋರುತ್ತದೆ.

ಈ ಎಲ್ಲಾ ಪ್ರಯೋಜನಗಳಿಂದಾಗಿ ಬಯೋಬ್ಯುಟೆನಾಲನ್ನು ವಾಹನಗಳ ಎಂಜಿನ್ ಹಾಗೂ ಇದರ ಸಾಗಾಟ, ಮತ್ತು ನಿರ್ವಹಣೆಯ ಇತರೆ ಮೂಲಸೌಕರ್ಯಗಳಲ್ಲಿ ಹೆಚ್ಚೇನನ್ನೂ ಬದಲಿಸದೆ ಅಥವಾ ಕನಿಷ್ಠ ಮಾರ್ಪಾಟುಗಳೊಂದಿಗೆ ಬಳಸಬಹುದಾಗಿದೆ. ಜೊತೆಗೆ ಎಥೆನಾಲಿಗಿಂತ ಹೆಚ್ಚು ಪ್ರತಿಶತ ಮಿಶ್ರಣವನ್ನು ಕೂಡ ಕಡಿಮೆ ಪ್ರಯಾಸದಲ್ಲಿ ಮಾಡಬಹುದು. ಇದನ್ನು ಕೇವಲ ಪೆಟ್ರೋಲ್ ಎಂಜಿನ್ ಒಂದೇ ಅಲ್ಲದೆ ಡೀಸೆಲ್ ಎಂಜಿನ್‌ದಲ್ಲೂ ಮಿಶ್ರಇಂಧನವಾಗಿ ಬಳಸುವ ಪ್ರಯೋಗ ಮಾಡಿದ್ದಾರೆ.

ಬಯೋಬ್ಯುಟನಾಲ್ ಅನ್ನು ಸಾಮಾನ್ಯವಾಗಿ ಸಸ್ಯತ್ಯಾಜ್ಯ ಹಾಗೂ ಪಾಚಿ ಜೈವಿಕವಸ್ತುಗಳಿಂದ ಪಡೆದ ಶರ್ಕರವನ್ನು ಕ್ಲೋಸ್ಟ್ರಿಡಿಯಮ್ ಜಾತಿಯ ಸೂಕ್ಷ್ಮ್ಮಜೀವಿಗಳ ಸಹಾಯದಿಂದ ಕಿಣ್ವನ ಮೂಲಕ ಉತ್ಪಾದಿಸುತ್ತಾರೆ. ಇದನ್ನು ಅಸಿಟೋನ್-ಬ್ಯುಟನಾಲ್-ಎಥೆನಾಲ್ ಎಬಿಇ ಕಿಣ್ವನ ವಿಧಾನವೆಂದು ಕರೆಯುತ್ತಾರೆ. ಈ ಪ್ರಕ್ರಿಯೆಯು ಎರಡು ಹಂತದ ಹುದುಗುವಿಕೆಯನ್ನು ಒಳಗೊಂಡಿರುತ್ತದೆ- ಆಸಿಡೋಜೆನೆಸಿಸ್ (ಆಮ್ಲ ಉತ್ಪಾದನಾ ಹಂತ), ಮತ್ತು ದ್ರಾವಕ ಜನಿಸುವಿಕೆ (ದ್ರಾವಕ ಉತ್ಪಾದನಾ ಹಂತ). ಈ ಪ್ರಕ್ರಿಯೆಯಲ್ಲಿ ಸೂಕ್ಷ್ಮಜೀವಿಯು ಅಸಿಟಿಕ್ ಮತ್ತು ಬ್ಯುಟರಿಕ್ ಆಮ್ಲಗಳನ್ನು, ಅಸಿಟೋನ್, ಬ್ಯುಟೆನಾಲ್ ಮತ್ತು ಎಥೆನಾಲ್ ದ್ರಾವಕಗಳನ್ನು, ಹಾಗೂ ಹೈಡ್ರೋಜನ್ ಮತ್ತು ಕಾರ್ಬನ್‌ಡೈಆಕ್ಸೈಡ್ ಅನಿಲಗಳನ್ನು ಉಪಉತ್ಪನ್ನಗಳಾಗಿ ಉತ್ಪಾದಿಸುತ್ತದೆ.

ಸಾಕಷ್ಟು ಪ್ರಯೋಜನಗಳ ಹೊರತಾಗಿಯೂ ಎಥೆನಾಲಿನ ಈ ದೊಡ್ಡಕ್ಕ ಇನ್ನೂ ಪರದೆಯ ಹಿಂದೇ ಕೂತಿರಲು ಕಾರಣ ಇರಬೇಕಲ್ಲವೇ? ಬಯೋಬ್ಯುಟೆನಾಲ್ ಮುನ್ನಲೆಗೆ ಬರಲು ಎದುರಿಸುತ್ತಿರುವ ಸವಾಲುಗಳನ್ನು ಗಮನಿಸೋಣ: 1. ಎಥೆನಾಲಿನ ಉತ್ಪಾದನೆ ಕೊಂಚ ಸರಳವಾದದ್ದು ಹಾಗೂ ಈಗಾಗಲೆ ಉದ್ಯೋಗವಲಯದಲ್ಲಿ ಜನಜನಿತವಾಗಿ ಸ್ಥಾಪಿಸಲ್ಪಟ್ಟದ್ದು.

ಶರ್ಕರ- ಯೀಸ್ಟ್- ಎಥೆನಾಲ್. ಆದರೆ ಬಯೋಬ್ಯುಟೆನಾಲ್ ಉತ್ಪಾದನೆಯ ಎಬಿಇ ಕಿಣ್ವನದಲ್ಲಿ ಬಳಸುವ ಕ್ಲೊಸ್ಟ್ರಿಡಿಯಮ್ ಜಾತಿಯ ಸೂಕ್ಷ್ಮಜೀವಿಗಳದ್ದೊಂದು ಸಮಸ್ಯೆಯಿದೆ; ಈ ಹುದುಗುವಿಕೆ ಯಿಂದ ಉತ್ಪಾದನೆಯಾಗುವ ಬಯೋಬ್ಯುಟೆನಾಲಿನ ಸಾಂದ್ರತೆ ಹೆಚ್ಚಾಗುತ್ತಿದ್ದಂತೆ ಅದೇ ಈ ಸೂಕ್ಷ್ಮಜೀವಿಗಳನ್ನು ನಾಶಮಾಡಿಬಿಡುತ್ತದೆ.

ಆದ್ದರಿಂದ ಈ ವಿಧಾನದಿಂದ ಕೇವಲ 1-2% ಬಯೋಬ್ಯುಟೆನಾನ್ನು ಮಾತ್ರ ಪಡೆಯಬಹುದು! 2. ಬ್ಯುಟೆನಾಲ್ ಉತ್ಪಾದಿಸುವ ಈ ಕ್ಲೊಸ್ಟ್ರಿಡಿಯಮ್ ಜಾತಿಯ ಸೂಕ್ಷ್ಮಜೀವಿಗಳು ನಿಜಕ್ಕೂ ಸೂಕ್ಷ್ಮ! ಅಂದರೆ ಇವು ಅನೆರೋಬಿಕ್ ಅಂದರೆ ಆಕ್ಸಿಜನ್‌ರಹಿತ ವಾತಾವರಣದಲ್ಲಿ ಮಾತ್ರ ಕೆಲಸ ಮಾಡು ವಂತವುಗಳು.

ಸ್ವಲ್ಪ ಪ್ರಮಾಣದಲ್ಲಿ ಆಕ್ಸಿಜನ್ನಿಗೆ ತೆರೆದುಕೊಂಡರೂ ಇವು ತಮ್ಮ ಕಾರ್ಯ ಕುಂಠಿತಗೊಳಿಸಿ ಬಿಡುತ್ತವೆ. ಇದರಿಂದಾಗಿ ಈ ಕೈಗಾರಿಕಾ ಉತ್ಪಾದನೆಯಲ್ಲಿ ಆಕ್ಸಿಜನ್‌ರಹಿತ ವಾತಾವರಣವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ. 3. ಎಬಿಇ ಕಿಣ್ವನದ ಘಟಕದಲ್ಲಿ ಉತ್ಪಾದನೆಯಾದ, ಮೇಲೆ ಹೇಳಿದ ವಿವಿಧ ದ್ರಾವಕಗಳ ಮಿಶ್ರಣದಿಂದ ಕಡಿಮೆ ಪ್ರಮಾಣದಲ್ಲಿರುವ ಬಯೋಬ್ಯಟೆನಾಲನ್ನು ಪರಿಣಾಮಕಾರಿಯಾಗಿ ಆಸವನದಿಂದ (Distillation) ಪ್ರತ್ಯೇಕಿಸುವುದೂ ಒಂದು ಸವಾಲಿನ ಸಂಗತಿ.

ಆದ್ದರಿಂದ ಇದು ಹೆಚ್ಚು ಶಕ್ತಿವ್ಯಯವಾಗುವ ಪ್ರಕ್ರಿಯೆ. ಇದಕ್ಕಾಗಿ ವಿವಿಧ ದಕ್ಷವಿಧಾನಗಳ ಕುರಿತ ಸಂಶೋಧನೆ ಜಾರಿಯಲ್ಲಿದೆ. 4. ಯೀಸ್ಟ್ ಎಥೆನಾಲನ್ನು ಕ್ಷಿಪ್ರವಾಗಿ ತಯಾರಿಸಿದರೆ, ಕ್ಲೊಸ್ಟ್ರಿಡಿಯಮ್‌ ದಿಂದ ಬ್ಯುಟೆನಾಲ್ ತಯಾರಿಕೆ ತುಂಬಾ ನಿಧಾನ. ನಿಧಾನಗತಿಯ ಕಿಣ್ವನ ಪ್ರಕ್ರಿಯೆ, ಕಡಿಮೆ ಇಳುವರಿ, ಹೆಚ್ಚು ಸಂಕೀರ್ಣವಾದ ಶುದ್ಧೀಕರಣ ಪ್ರಕ್ರಿಯೆ, ಬೇರ್ಪಡಿಸಲು ಅಗತ್ಯವಿರುವ ಹೆಚ್ಚಿನ ಶಕ್ತಿ, ಈ ಎಲ್ಲಾ ಕಾರಣಗಳಿಂದಾಗಿ ಬಯೋಬ್ಯುಟನಾಲ್‌ದ ಉತ್ಪಾದನಾ ವೆಚ್ಚ ಅಧಿಕ.

ಎಥೆನಾಲನ್ನು ಬಯೋಬ್ಯುಟೆನಾಲ್ ಸ್ಥಳಾಂತರಿಸುವಲ್ಲಿ ಇತರೆ ರಾಜಕೀಯ ಕಾರಣಗಳೂ ಎದುರಾ ಗುವ ಸಾಧ್ಯತೆಯಿದೆ. ಈಗಾಗಲೆ ಭಾರತದಲ್ಲಿ ಸಕ್ಕರೆ ಮಿಲ್ಲು ಹಾಗೂ ಡಿಸ್ಟಿಲರಿಗಳ ಮೇಲೆ ಸಾಕಷ್ಟು ಹೂಡಿಕೆ ಮಾಡಿದ್ದಾಗಿದೆ. ಎಥೆನಾಲ್ ಮಿಶ್ರಣದ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿ ದ್ದಾಗಿದೆ.

ರೈತರಿಂದ ಕಚ್ಚಾವಸ್ತುಗಳ ಪೂರೈಕೆಯ ವ್ಯಾಪಾರ ಸರಪಳಿ ಸ್ಥಾಪಿತವಾಗಿಬಿಟ್ಟಿದೆ. ಇವೆಲ್ಲವನ್ನೂ ಕೂಡಲೆ ಬಯೋಬ್ಯುಟೆನಾಲ್‌ಗೆ ಬದಲಾಯಿಸುವಲ್ಲಿ ಸಾಕಷ್ಟು ಮರುಹೂಡಿಕೆ ಮಾಡಬೇಕಾದ ಅನಿವಾರ್ಯತೆ ಬರುತ್ತದೆ. ಇನ್ನು ಸರಕಾರ ಕೂಡ ಖರ್ಚು-ವೆಚ್ಚ, ಹಾಗೂ ವಿವಿಧ ಆಯಾಮಗಳ ಸಾಧಕ-ಬಾಧಕಗಳನ್ನು ತೂಗಿನೋಡದೆ ಕೂಡಲೆ ಹೊಸ ವ್ಯವಸ್ಥೆಗೆ ಬದಲಾಗುವುದು ಕಷ್ಟದಾಯಕ!

ಹಾಗಾದರೆ ಬಯೋಬ್ಯುಟೆನಾಲ್ ಅನ್ನು ಇನ್ನಷ್ಟು ಹತ್ತಿರವಾಗಿಸಲು ಇರುವ ದಾರಿಯೆಂದರೆ ಮತ್ತಷ್ಟು ಚುರುಕಾದ ಸಂಶೋಧನೆ. ಸಂಶೋಧಕರೂ ಕೂಡ ಸುಮ್ಮನೆ ಕುಳಿತಿಲ್ಲ, ಈ ಮುಂದಿನ ಆಯಾಮಗಳಲ್ಲಿ ಸಂಶೋಧನೆ ನಡೆಯುತ್ತಿದೆ: ಹೆಚ್ಚಿನ ಬ್ಯೂಟೆನಾಲ್ ಸಹಿಷ್ಣುತೆ ಹೊಂದಿರುವ, ತಳೀಯವಾಗಿ ಮಾರ್ಪಡಿಸಿದ ಸೂಕ್ಷ್ಮಜೀವಿಗಳು. ನಿರಂತರ ಕಿಣ್ವನ ವ್ಯವಸ್ಥೆಗಳು. ಅಗ್ಗದ ಜೈವಿಕ ಕಚ್ಚಾವಸ್ತುಗಳು; ಕೃಷಿ ಅವಶೇಷಗಳಿಂದ ಲಿಗ್ನೋಸೆಲ್ಯುಲೋಸಿಕ್ ಬ್ಯುಟೆನಾಲ್.

ಬಯೋಬ್ಯುಟೆನಾಲಿನ ಸುಧಾರಿತ ಪ್ರತ್ಯೇಕನಾ ತಂತ್ರಜ್ಞಾನಗಳು. ಈ ಎಲ್ಲಾ ಸಂಶೋಧನಾ ಪ್ರಗತಿಗಳು ಬಯೋಬ್ಯುಟೆನಾಲಿನ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಿದರೆ, ಎಥೆನಾಲಿನ ದೊಡ್ಡಕ್ಕ ಮುನ್ನೆಲೆಗೆ ಬಂದಾಳು! ಸಂಶೋಧನೆ ಎನ್ನುವುದು ಬರಿದೆ ಅಪ್ಪೇಹುಳಿಯನ್ನು ಬಿಯರ್ ಎಂದುಕೊಂಡು ಕುಡಿದಂತಲ್ಲ! ಬದಲಿಗೆ ಸಾಕಷ್ಟು ಪರಿಶ್ರಮ, ಸಂಪನ್ಮೂಲ, ಹಣ, ಸಮಯ, ತಾಳ್ಮೆ ಎಲ್ಲವನ್ನೂ ತೊಡಗಿಸಿ ನಡೆಸುವ ಮಂಥನ ಕ್ರಿಯೆ. ಇದಕ್ಕೆ ಸೂಕ್ತ ವಾತಾವರಣ, ಪ್ರೋತ್ಸಾಹ ದೊರೆತರೆ ಬೆಂಬಿಡದೆ ಸಾಧಿಸುವ ಛಲಂದಕಮಲ್ಲರಂತಹ ವಿಜ್ಞಾನಿಗಳಿಗೇನೂ ಕೊರತೆ ಇಲ್ಲ!

ಇಂಥ ಸಂಶೋಧನೆಯ ಒಂದು ಉದಾಹರಣೆಯನ್ನು ನೋಡೋಣ: ದಕ್ಷಿಣ ಕೊರಿಯಾದ ಆಕ್ಟಿವಾನ್ ಕಂಪನಿಯ ಗ್ರೀನ್ ಕೆಮಿಸ್ಟ್ರಿ ವಿಭಾಗದಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುತ್ತಿರುವ ಭಾರತೀಯರಾದ ಪ್ರವೀಣ್ ಉಪಾರೆ ಹಾಗೂ ಅವರ ತಂಡದವರ ಸಂಶೋಧನೆ ಆಸಕ್ತಿದಾಯಕ ವಾಗಿದೆ. ಈ ತಂಡವು ಬಯೋಬ್ಯುಟೆನಾಲ್ ಅನ್ನು ಸಾಂಪ್ರದಾಯಿಕವಾದ ಎಬಿಇ ಕಿಣ್ವನ ಪ್ರಕ್ರಿಯೆಯಲ್ಲಿ ತಯಾರಿಸುವ ಬದಲು- ನೂತನವಾದ ಎರಡು ಹಂತದ ಜೈವಿಕ-ರಾಸಾಯನಿಕ ಹೈಬ್ರಿಡ್ ವಿಧಾನವನ್ನು ಆವಿಷ್ಕರಿಸಿದ್ದಾರೆ.

ಸೂಕ್ಷ್ಮಜೀವಿಗಳು ನೇರವಾಗಿ ಬಯೋಬ್ಯುಟೆನಾಲನ್ನು ತಯಾರಿಸಲು ಬಿಡದೆ, ಮೊದಲ ಹಂತದಲ್ಲಿ ಅವು ಶರ್ಕರವನ್ನು ಬ್ಯುಟಿರಿಕ್ ಆಮ್ಲವಾಗಿ ಹುದುಗಿಸುವಂತೆ ಮಾಡಲಾಗುತ್ತದೆ; ಕಾರಣ ಬ್ಯಾಕ್ಟೀರಿ ಯಾಗಳು ಸಾಮಾನ್ಯವಾಗಿ ಇಂಥ ಸಾವಯವ ಆಮ್ಲಗಳನ್ನು ಸರಾಗವಾಗಿ ಹೆಚ್ಚುಪ್ರಮಾಣದಲ್ಲಿ ಉತ್ಪಾದಿಸಿಬಿಡುತ್ತವೆ.

ಅನಂತರ, ಹೈಡ್ರೋಜನ್ ಹಾಗೂ ವಿಶೇಷವಾಗಿ ವಿನ್ಯಾಸಗೊಳಿಸಲಾದ ವೇಗವರ್ಧಕವನ್ನು ಬಳಸಿ ಕೊಂಡು ಈ ಬ್ಯುಟಿರಿಕ್ ಆಮ್ಲವನ್ನು ರಾಸಾಯನಿಕವಾಗಿ ಬ್ಯುಟೆನಾಲ್ ಆಗಿ ಪರಿವರ್ತಿಸಿದ್ದಾರೆ. ರುಥೇನಿಯಮ್-ತವರ, ಹಾಗೂ ಜಿಂಕ್ ಆಕ್ಸೆ ಡ್‌ಗಳನ್ನು ಒಳಗೊಂಡ ಈ ನೂತನ ವೇಗವರ್ಧಕವು ಈ ರಾಸಾಯನಿಕ ಕ್ರಿಯೆಯನ್ನು ಅತ್ಯಂತ ದಕ್ಷವಾಗಿ ನಡೆಸಿ ಬಯೋಬ್ಯುಟೆನಾಲ್ ಅನ್ನು ೯೮%ಕ್ಕಿಂತ ಹೆಚ್ಚಿನ ಅಸಾಧಾರಣ ಇಳುವರಿಯಲ್ಲಿ ಉತ್ಪಾದಿಸುತ್ತಿದೆ. ಜೊತೆಗೆ ಈ ವೇಗವರ್ಧಕವು ಅನೇಕ ಮರುಬಳಕೆಯಲ್ಲೂ ಸ್ಥಿರವಾಗಿದ್ದು ಅತ್ಯುತ್ತಮ ಕಾರ್ಯದಕ್ಷತೆಯನ್ನು ತೋರಿದೆ.

ಸಂಶೋಧಕರು ಇನ್ನೂ ಈ ವೇಗವರ್ಧಕದ ಕಾರ್ಯವಿಧಾನದ ಅಧ್ಯಯನ ಮುಂದುವರಿಸಿದ್ದಾರೆ. ಜೊತೆಗೆ ವೇಗವರ್ಧಕದ ವೆಚ್ಚ ತಗ್ಗಿಸುವ ಹಾಗೂ ಅದರ ಪಾರಿಸರಿಕ ಪರಿಣಾಮಗಳ ಕುರಿತೂ ಹೆಚ್ಚಿನ ಸಂಶೋಧನೆ ನಡೆಸಲು ಉದ್ಯುಕ್ತರಾಗಿದ್ದಾರೆ.

ಮನೋಮಯದ ಬೇಲಿಯಾಚೆಗಿನ ಕುತೂಹಲಕ್ಕಿಂತ ನಮ್ಮನ್ನು ವಿವಿಧ ಆಯಾಮಗಳಲ್ಲಿ ಬೆಳೆಯ ದಂತೆ ತಡೆದಿಟ್ಟಿರುವ ಮಿತಿಗಳನ್ನು ಮೀರುವ ವಿಜ್ಞಾನಿಗಳ ಬೌದ್ಧಿಕ ಕಸರತ್ತಿನ ಬೇಲಿ ಮುರಿಯುವ ಕುತೂಹಲ ಯುವಕರನ್ನು ಪ್ರೇರೇಪಿಸುವಂತಾಗಲಿ. ಇಂದು ನಮ್ಮ ವಾಹನಗಳು ಎಥೆನಾಲ್ ಮಿಶ್ರಿತ ಇ-20 ಇಂಧನದಿಂದ ಓಡುತ್ತಿವೆ. ಆದರೆ ಮುಂದಿನ ದಶಕದಲ್ಲಿ ಈ ಸ್ಥಾನವನ್ನು ಬಿ-20...100 ಸರಣಿಯ ಬಯೋ ಬ್ಯುಟೆನಾಲ್ ಪಡೆಯುವುದೇ? ಉತ್ತರವನ್ನು ವಿಜ್ಞಾನ ಮತ್ತು ಸಂಶೋಧನೆಯೇ ನಿರ್ಧರಿಸಲಿದೆ!