ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Surendra Pai Column: ನಮ್ಮ ಬದುಕು ಪ್ರದರ್ಶನಕ್ಕೋ, ಅನುಭವಕ್ಕೋ ?

‘ನಾನಿದ್ದೇನೆ, ನನ್ನನ್ನು ಗಮನಿಸಿ’ ಎಂಬ ಆಧುನಿಕ ಯುಗದ ಜನರ ಅಂತರಂಗದ ಹಂಬಲವೇ ಈ ಡಿಜಿಟಲ್ ಲೋಕದ ಪ್ರದರ್ಶನ ಪ್ರವೃತ್ತಿಗೆ ಮುಖ್ಯ ಕಾರಣ. ಆದರೆ, ಈ ಪ್ರವೃತ್ತಿ ದಿನದಿಂದ ದಿನಕ್ಕೆ ಇಷ್ಟೊಂದು ಹೆಚ್ಚುತ್ತಿರುವುದರ ಹಿಂದೆ ಮಾನಸಿಕ, ಸಾಮಾಜಿಕ ಹಾಗೂ ತಾಂತ್ರಿಕ ಪ್ರಭಾವಗಳ ಸೂಕ್ಷ್ಮವಾದ ಜಾಲವೊಂದಿದೆ ಎಂಬುದನ್ನು ನಾವು ಗ್ರಹಿಸಬೇಕಿದೆ.

ನಮ್ಮ ಬದುಕು ಪ್ರದರ್ಶನಕ್ಕೋ, ಅನುಭವಕ್ಕೋ ?

-

Profile
Ashok Nayak Oct 29, 2026 7:37 AM

ಮಾಯಾಪರದೆ

ಸುರೇಂದ್ರ ಪೈ, ಭಟ್ಕಳ

ಇಂದಿನ ಡಿಜಿಟಲ್ ಜಗತ್ತಿನಲ್ಲಿ ಬೆಳಿಗ್ಗೆ ಎದ್ದ ತಕ್ಷಣ ಕುಡಿಯುವ ಕಾಫಿಯಿಂದ ಹಿಡಿದು, ರಾತ್ರಿ ಮಲಗುವ ಮುನ್ನದ ಎಲ್ಲಾ ಚಿಕ್ಕ ಚಿಕ್ಕ ಸಂಗತಿಯ ತನಕವೂ ಪ್ರತಿಯೊಂದನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಡೇಟ್ ಮಾಡುವುದು ಒಂದು ಸಹಜ ಅಭ್ಯಾಸವಾಗಿ ಬಿಟ್ಟಿದೆ. ಎಲ್ಲಿಗೆ ಹೋದೆವು, ಏನು ತಿಂದೆವು, ಯಾರನ್ನು ಭೇಟಿಯಾದೆವು, ಕೊನೆಗೆ ನಮ್ಮ ವೈಯಕ್ತಿಕ ದುಃಖ-ಸಂತೋಷಗಳೇನು ಎಂಬಿತ್ಯಾದಿ ಕ್ಷಣಕ್ಷಣದ ಮಾಹಿತಿಯನ್ನೂ ಪ್ರಪಂಚಕ್ಕೆ ತೆರೆದಿಡುವುದು ಇಂದು ಒಂದು ಸಂಸ್ಕೃತಿಯಾಗಿ ಬೆಳೆದಿದೆ.

‘ನಾನಿದ್ದೇನೆ, ನನ್ನನ್ನು ಗಮನಿಸಿ’ ಎಂಬ ಆಧುನಿಕ ಯುಗದ ಜನರ ಅಂತರಂಗದ ಹಂಬಲವೇ ಈ ಡಿಜಿಟಲ್ ಲೋಕದ ಪ್ರದರ್ಶನ ಪ್ರವೃತ್ತಿಗೆ ಮುಖ್ಯ ಕಾರಣ. ಆದರೆ, ಈ ಪ್ರವೃತ್ತಿ ದಿನದಿಂದ ದಿನಕ್ಕೆ ಇಷ್ಟೊಂದು ಹೆಚ್ಚುತ್ತಿರುವುದರ ಹಿಂದೆ ಮಾನಸಿಕ, ಸಾಮಾಜಿಕ ಹಾಗೂ ತಾಂತ್ರಿಕ ಪ್ರಭಾವಗಳ ಸೂಕ್ಷ್ಮವಾದ ಜಾಲವೊಂದಿದೆ ಎಂಬುದನ್ನು ನಾವು ಗ್ರಹಿಸಬೇಕಿದೆ. ಮನೋವಿಜ್ಞಾನದ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಗೂ ಸಮಾಜದಿಂದ ‘ಮಾನ್ಯತೆ’ ಪಡೆಯುವ ತೀವ್ರ ಬಯಕೆಯಿರುತ್ತದೆ. ಹಿಂದೆ ಈ ಮಾನ್ಯತೆ ಕುಟುಂಬ, ನೆರೆಹೊರೆ ಹಾಗೂ ಆಪ್ತ ಗೆಳೆಯರ ವೃತ್ತಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ, ಇಂದಿನ ಜಾಗತೀಕರಣ ಮತ್ತು ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಈ ಗಡಿಗಳು ಅಳಿದು‌ ಹೋಗಿವೆ.

ಫೇಸ್‌ಬುಕ್, ಇನ್ಸ್ಟಾಗ್ರಾಮ್, ಎಕ್ಸ್‌ʼನಂತಹ ವೇದಿಕೆಗಳಲ್ಲಿ ನಾವು ಹಂಚಿಕೊಳ್ಳುವ ಪ್ರತಿಯೊಂದು ಲೇಖನ, ಫೋಟೋ ಅಥವಾ ವೀಡಿಯೊಗೆ ಬರುವ ಲೈಕ್ಸ್, ಕಾಮೆಂಟ್ಸ್ ಮತ್ತು ಶೇರ್‌ಗಳು ನಮ್ಮ ಮೆದುಳಿನಲ್ಲಿ ‘ಡೋಪಮೈನ್’ ಎಂಬ ರಾಸಾಯನಿಕವನ್ನು ಬಿಡುಗಡೆ ಮಾಡುತ್ತವೆ. ಈ ಡೋಪಮೈನ್ ನಮಗೆ ಕ್ಷಣಿಕ ಸಂತೋಷ ಮತ್ತು ತೃಪ್ತಿಯನ್ನು ನೀಡುತ್ತದೆ. ಒಮ್ಮೆ ಈ ಕ್ಷಣಿಕ ಸುಖದ ಅನುಭವವಾದರೆ, ಮೆದುಳು ಮತ್ತೆ ಮತ್ತೆ ಅದೇ ಮಾನ್ಯತೆಗಾಗಿ ಹಂಬಲಿಸುತ್ತದೆ. ‌

ಇದನ್ನೂ ಓದಿ: Surendra Pai Column: ಪೌರ ಪ್ರಜ್ಞೆ: ಸುಧಾರಿತ ಸಮಾಜದ ನಿಜವಾದ ಕನ್ನಡಿ

ಪರಿಣಾಮವಾಗಿ, ಪ್ರತಿಯೊಂದು ಸಣ್ಣ ಘಟನೆಯನ್ನೂ ಜಾಲತಾಣಕ್ಕೆ ಅಪ್ಡೇಟ್ ಮಾಡುವ ಚಟಕ್ಕೆ ಮನುಷ್ಯ ದಾಸನಾಗುತ್ತಾನೆ. ಇಂದು ಸಾಮಾಜಿಕ ಜಾಲತಾಣಗಳು ಕೇವಲ ಅಭಿವ್ಯಕ್ತಿಯ ಮಾಧ್ಯಮ ವಾಗಿ ಉಳಿದಿಲ್ಲ. ಅವು ಕೃತಕ ಬುದ್ಧಿಮತ್ತೆ ಹಾಗೂ ಅಲ್ಗಾರಿದಮ್‌ಗಳ ಆಧಾರದ ಮೇಲೆ ರೂಪುಗೊಂಡ ಬೃಹತ್ ವ್ಯಾಪಾರಿ ತಂತ್ರಜ್ಞಾನಗಳು. ಈ ಅಪ್ಲಿಕೇಶನ್‌ಗಳನ್ನು ವಿನ್ಯಾಸಗೊಳಿಸಿರು ವುದೇ ಬಳಕೆದಾರರನ್ನು ಸಾಧ್ಯವಾದಷ್ಟು ಹೆಚ್ಚು ಸಮಯ ಡಿಜಿಟಲ್ ಪರದೆಯ ಮೇಲೆಯೇ ಹಿಡಿದಿಟ್ಟುಕೊಳ್ಳುವುದಕ್ಕಾಗಿ. ನಾವು ಎಷ್ಟು ಹೆಚ್ಚು ಅಪ್ಡೇಟ್ ಮಾಡುತ್ತೇವೆಯೋ, ಅಷ್ಟು ಹೆಚ್ಚು ನೋಟಿಫಿಕೇಶನ್‌ಗಳು ನಮಗೆ ಬರುತ್ತವೆ.

ನಾವು ಎಲ್ಲಿ ಇತರರಿಗಿಂತ ಹಿಂದೆ ಬಿದ್ದುಬಿಡುತ್ತೇವೆಯೋ ಅಥವಾ ಇತರರಿಗಿಂತ ನಮ್ಮ ಬದುಕು ನೀರಸವಾಗಿದೆಯೋ ಎಂಬ ಭಯವು ಜನರನ್ನು ಸದಾ ಜಾಗೃತರಾಗಿರುವಂತೆ ಮಾಡುತ್ತದೆ. ಇತರರ ವರ್ಣರಂಜಿತ ಜೀವನದ ಅಪ್ಡೇಟ್‌ಗಳನ್ನು ನೋಡಿದಾಗ ಉಂಟಾಗುವ ಕೀಳರಿಮೆಯನ್ನು ಮುಚ್ಚಿ ಕೊಳ್ಳಲು, ಜನರು ತಮ್ಮ ಜೀವನವೂ ಅಷ್ಟೇ ಸುಂದರವಾಗಿದೆ ಎಂದು ತೋರಿಸಿಕೊಳ್ಳುವ ಒತ್ತಡಕ್ಕೆ ಸಿಲುಕುತ್ತಾರೆ. ಈ ಪ್ರದರ್ಶನ ಶೋಕಿ ದಿನದಿಂದ ದಿನಕ್ಕೆ ಹೆಚ್ಚಾಗಲು ಈ ಮಾನಸಿಕ ಅಭದ್ರತೆಯೇ ಪ್ರಮುಖ ಚಾಲಕ ಶಕ್ತಿಯಾಗಿದೆ.

ಸಾಮಾಜಿಕ ಜಾಲತಾಣಗಳ ದುಷ್ಪರಿಣಾಮ ಹಾಗೂ ಆನ್ ಲೈನ್ ಚಟದ ಕುರಿತು ಜಾಗತಿಕ ಹಾಗೂ ಮಟ್ಟದಲ್ಲಿ ಹಲವು ಪ್ರತಿಷ್ಠಿತ ಸಂಸ್ಥೆಗಳು ಮತ್ತು ಮನೋವಿಜ್ಞಾನಿಗಳು ಗಂಭೀರ ಅಧ್ಯಯನ ಗಳನ್ನು ಹಾಗೂ ಸಮೀಕ್ಷೆಗಳನ್ನು ನಡೆಸಿವೆ. ಅಮೆರಿಕನ್ ಸೈಕಲಾಜಿಕಲ್ ಅಸೋಸಿಯೇಷನ್ ಸಮೀಕ್ಷೆ ಪ್ರಕಾರ ಡಿಜಿಟಲ್ ಮಾಧ್ಯಮಗಳ ನಿರಂತರ ಬಳಕೆಯಿಂದ ಯುವಜನರಲ್ಲಿ ಶೇಕಡಾ 70ಕ್ಕೂ ಹೆಚ್ಚು ಮಂದಿ ‘-ಮೋ’ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಬಹಿರಂಗಪಡಿಸಿದೆ. ಇತರರ ಆನ್‌ಲೈನ್ ಜೀವನಶೈಲಿಯನ್ನು ನೋಡಿ ತಮ್ಮ ಬದುಕು ಹೂವಿನ ಹಾಸಿಗೆಯಲ್ಲವಲ್ಲ ಎಂಬ ಕೀಳರಿಮೆ ಮತ್ತು ಆತಂಕಕ್ಕೆ ಒಳಗಾಗುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.

S Pai 29 ok

ಪಿಲ್ವೊಟಲ್ ರಿಸರ್ಚ್ ಮತ್ತು ಗ್ಯಾಲಪ್ ವರದಿಯ ಜಾಗತಿಕವಾಗಿ ಸರಾಸರಿ ವ್ಯಕ್ತಿಯು ದಿನವೊಂದಕ್ಕೆ ಸುಮಾರು 2.5ರಿಂದ 3 ಗಂಟೆಗಳನ್ನು ಕೇವಲ ಸಾಮಾಜಿಕ ಜಾಲತಾಣಗಳ ಸ್ಕ್ರೋಲಿಂಗ್ ಮತ್ತು ಅಪ್ಡೇಟ್‌ಗಳಿಗಾಗಿಯೇ ಮೀಸಲಿಡುತ್ತಿದ್ದಾನೆ. ಇದರಲ್ಲಿ ಶೇಕಡಾ 40ಕ್ಕೂ ಹೆಚ್ಚು ಯುವಕರು ತಮ್ಮ ಖಾಸಗಿ ಸಾಧನೆಗಳು ಅಥವಾ ಭಾವನಾತ್ಮಕ ಕ್ಷಣಗಳನ್ನು ತಕ್ಷಣವೇ ಜಾಲತಾಣ ಗಳಲ್ಲಿ ಹಂಚಿಕೊಳ್ಳದಿದ್ದರೆ ತೀವ್ರ ಅಶಾಂತಿ ಅಥವಾ ಅಪೂರ್ಣತೆಯ ಭಾವನೆಗೆ (Validation Seeking Behavior) ಒಳಗಾಗುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

ವಿಶ್ವ ಆರೋಗ್ಯ ಸಂಸ್ಥೆಯ ಡಿಜಿಟಲ್ ವ್ಯಸನ ಅಧ್ಯಯನದ ಪ್ರಕಾರ ಅತಿ ಹೆಚ್ಚು ಸಮಯ ಪರದೆಯ ಮುಂದೆ ಕಳೆಯುವುದು (Screen Time) ಮಾನವನ ನಿದ್ರಾಹೀನತೆ, ಕಣ್ಣಿನ ದೋಷ ಹಾಗೂ ನರಮಂಡಲದ ಮೇಲಿನ ಒತ್ತಡಕ್ಕೆ ನೇರ ಕಾರಣವಾಗುತ್ತಿದೆ ಎಂದು ಎಚ್ಚರಿಸಿದೆ.

ಮೆದುಳಿನ ಸತತ ಡೋಪಮೈನ್ ಬಿಡುಗಡೆಯು ಮಾದಕ ದ್ರವ್ಯದ ವ್ಯಸನದಷ್ಟೇ ತೀವ್ರವಾದ ಮಾನಸಿಕ ಅವಲಂಬನೆಯನ್ನು ಸಾಮಾಜಿಕ ಜಾಲತಾಣಗಳ ಕುರಿತು ಹುಟ್ಟುಹಾಕುತ್ತದೆ ಎಂದು ವೈದ್ಯಕೀಯ ಸಂಶೋಧನೆಗಳು ಸಾಬೀತುಪಡಿಸಿವೆ. ಇನ್ನೊಂದೆಡೆ, ಈ ಸತತ ಅಪ್ಡೇಟ್ ಮಾಡುವ ಪ್ರವೃತ್ತಿಯು ಮನುಷ್ಯನ ‘ಖಾಸಗಿತನ’ದ ಪರಿಕಲ್ಪನೆಯನ್ನೇ ಸಂಪೂರ್ಣವಾಗಿ ಬದಲಾಯಿಸಿ ಹಾಕಿದೆ. ಒಂದು ಕಾಲದಲ್ಲಿ ಮನೆತನದ ವೈಯಕ್ತಿಕ ವಿಚಾರಗಳು, ಕೌಟುಂಬಿಕ ಕಾರ್ಯಕ್ರಮಗಳು ಅಥವಾ ರಹಸ್ಯಗಳು ನಾಲ್ಕು ಗೋಡೆಗಳ ಮಧ್ಯೆ ಇರುತ್ತಿದ್ದವು. ಆದರೆ ಇಂದು ಖಾಸಗಿತನ ಎಂಬುದು ಹಳೆಯ ಕಾಲದ ಕಲ್ಪನೆಯಂತೆ ಕಾಣುತ್ತಿದೆ.

ವೈಯಕ್ತಿಕ ಸುಖ-ದುಃಖಗಳು, ಸಣ್ಣಪುಟ್ಟ ಜಗಳಗಳು ಮತ್ತು ಅತ್ಯಂತ ಆಪ್ತ ಕ್ಷಣಗಳೂ ಸಹ ಇಂಟರ್ನೆಟ್‌ನಲ್ಲಿ ‘ಕಂಟೆಂಟ್’ ಆಗಿ ಪರಿವರ್ತಿತವಾಗುತ್ತಿವೆ. ಪ್ರತಿಯೊಂದನ್ನೂ ಜಗತ್ತಿಗೆ ಪ್ರದರ್ಶಿಸು ವ ಈ ಧಾವಂತದಲ್ಲಿ, ನೈಜ ಅನುಭವಗಳನ್ನು ಅನುಭವಿಸುವ ಸಾಮರ್ಥ್ಯವನ್ನು ಮನುಷ್ಯ ಕಳೆದುಕೊಳ್ಳುತ್ತಿದ್ದಾನೆ.

ಸುಂದರವಾದ ಸೂರ್ಯಾಸ್ತವನ್ನು ಕಣ್ಣುತುಂಬಿಕೊಂಡು ಆನಂದಿಸುವುದಕ್ಕಿಂತ, ಅದನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ‌ ಹಿಡಿದು ತಕ್ಷಣವೇ ಇನ್ಸ್ಟಾಗ್ರಾಮ್ ಸ್ಟೋರಿಗೆ ಹಾಕಿ ‘ಲೈಕ್ಸ್’ ಎಣಿಸುವುದೇ ಮುಖ್ಯವಾಗುತ್ತಿದೆ. ಅಂದರೆ, ‘ಅನುಭವಿಸುವುದಕ್ಕಿಂತ ಪ್ರದರ್ಶಿಸುವುದೇ ಮುಖ್ಯ’ ಎಂಬ ವಿಪರ್ಯಾಸಕ್ಕೆ ಆಧುನಿಕ ಸಮಾಜ ತಲುಪಿದೆ.

ಈ ಮನಸ್ಥಿತಿಯು ವ್ಯಕ್ತಿಯ ಮಾನಸಿಕ ಆರೋಗ್ಯದ ಮೇಲೆಯೂ ಅತ್ಯಂತ ನಕಾರಾತ್ಮಕ ಪರಿಣಾಮ ವನ್ನು ಬೀರುತ್ತಿದೆ. ಕೃತಕವಾಗಿ ಸೃಷ್ಟಿಸಿದ ‘ಪರ್ ಫೆಕ್ಟ್’ ಜೀವನದ ಬಿಂಬವನ್ನು ಉಳಿಸಿಕೊಳ್ಳುವ ಒತ್ತಡವು ನಿರಂತರ ಆತಂಕ ಮತ್ತು ಖಿನ್ನತೆಗೆ ಕಾರಣವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜನರು ಸಾಮಾನ್ಯವಾಗಿ ತಮ್ಮ ಜೀವನದ ಅತ್ಯುತ್ತಮ ಕ್ಷಣಗಳನ್ನು ಮಾತ್ರ ಹಂಚಿಕೊಳ್ಳುತ್ತಾರೆ, ಕಷ್ಟಗಳನ್ನಲ್ಲ. ಆದರೆ, ಇತರರ ಈ ‘ಅತ್ಯುತ್ತಮ ಕ್ಷಣಗಳನ್ನು’ ನೋಡುವ ಸಾಮಾನ್ಯ ವ್ಯಕ್ತಿಯೊಬ್ಬ ತನ್ನ ದೈನಂದಿನ ಕಷ್ಟ-ಕೋಟಲೆಗಳ ಬದುಕನ್ನು ಅವರೊಂದಿಗೆ ಹೋಲಿಸಿಕೊಂಡು ದುಃಖಿತ ನಾಗುತ್ತಾನೆ. ‌

ಇದರಿಂದಾಗಿ ಹದಿಹರೆಯದವರು ಮತ್ತು ಯುವಜನರಲ್ಲಿ ಆತ್ಮವಿಶ್ವಾಸ ಕುಸಿಯುವುದು, ಏಕಾಂಗಿತನ ಹೆಚ್ಚುವುದು ಮತ್ತು ಸಂಬಂಧಗಳಲ್ಲಿ ಬಿರುಕು ಮೂಡುವುದು ಸಾಮಾನ್ಯವಾಗಿದೆ. ನೈಜ ಜಗತ್ತಿನ ಸಂಬಂಧಗಳಿಗಿಂತ ಡಿಜಿಟಲ್ ಜಗತ್ತಿನ ಕಲ್ಪನಾತ್ಮಕ ಅಭಿಮಾನಿಗಳೇ ಮುಖ್ಯ ವೆನಿಸುವ ವಿಚಿತ್ರ ಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆಯಿಂದ ಹೊರಬರಲು ಮತ್ತು ಆರೋಗ್ಯಕರ ಡಿಜಿಟಲ್ ಜೀವನವನ್ನು ರೂಪಿಸಿಕೊಳ್ಳಲು ಸಮಾಜದಲ್ಲಿ ಮತ್ತು ವ್ಯಕ್ತಿಗತ ಮಟ್ಟದಲ್ಲಿ ತೀವ್ರವಾದ ಜಾಗೃತಿ ಅಗತ್ಯವಿದೆ. ತಂತ್ರಜ್ಞಾನವನ್ನು ನಾವು ಬಳಸಬೇಕೇ ಹೊರತು, ತಂತ್ರಜ್ಞಾನವೇ ನಮ್ಮನ್ನು ಆಳಲು ಬಿಡಬಾರದು.

‘ಡಿಜಿಟಲ್ ಡಿಟಾಕ್ಸ್’ ಅಂದರೆ ನಿಯಮಿತವಾಗಿ ಸಾಮಾಜಿಕ ಜಾಲತಾಣಗಳಿಂದ ದೂರವಿರುವುದು, ನೈಜ ಪ್ರಪಂಚದ ಜನರೊಂದಿಗೆ ಮುಖಾಮುಖಿ ಸಂವಹನ ನಡೆಸುವುದು, ಮತ್ತು ಪ್ರಕೃತಿಯ ಮಡಿಲಲ್ಲಿ ಸಮಯ ಕಳೆಯುವುದು ಇಂದಿನ ತುರ್ತು ಅಗತ್ಯವಾಗಿದೆ. ‌

ಪ್ರತಿಯೊಂದು ಕ್ಷಣವನ್ನೂ ಸಾಮಾಜಿಕ ಮಾಧ್ಯಮದಲ್ಲಿ ದಾಖಲಿಸುವುದಕ್ಕಿಂತ, ಅದನ್ನು ಹೃದಯ ದಲ್ಲಿ ಭದ್ರವಾಗಿ ಕಾಯ್ದಿರಿಸಿಕೊಳ್ಳುವ ಕಲೆಯನ್ನು ನಾವು ಮತ್ತೆ ಕಲಿಯಬೇಕಿದೆ. ಗ್ರೀಕ್ ಪುರಾಣದ ‘ನಾರ್ಸಿಸಸ್’ (Narcissus) ತನ್ನದೇ ಪ್ರತಿಬಿಂಬವನ್ನು ನೀರಿನಲ್ಲಿ ನೋಡಿ ಮೋಹ ಗೊಂಡು ಕೊನೆಗೆ ಪ್ರಾಣ ಕಳೆದುಕೊಂಡ ಕಥೆಯಂತೆ, ಆಧುನಿಕ ಮಾನವ ಸ್ಕ್ರೀನ್ ಮೇಲೆ ಕಾಣುವ ತನ್ನದೇ ವರ್ಣರಂಜಿತ ಭ್ರಮಾ ಪ್ರಪಂಚದಲ್ಲಿ ಕಳೆದುಹೋಗುತ್ತಿದ್ದಾನೆ.

ನಮಗೆ ಬೇಕಿರುವುದು ಪರದೆಯ ಮೇಲಿನ ಡಿಜಿಟಲ್ ಚಪ್ಪಾಳೆಯಲ್ಲ;. ಬದಲಿಗೆ ನೈಜ ಜಗತ್ತಿನ ಅನುಭೂತಿ ಮತ್ತು ಒಡನಾಟ. ಸಾಮಾಜಿಕ ಜಾಲತಾಣಗಳು ಕೇವಲ ಸಂಪರ್ಕದ ಸಾಧನಗಳಾಗ ಬೇಕೇ ಹೊರತು, ನಮ್ಮ ಆತ್ಮಗೌರವ ಹಾಗೂ ಜೀವನದ ಮೌಲ್ಯವನ್ನು ಅಳೆಯುವ ಮಾನದಂಡ ಗಳಾಗಬಾರದು. ‘ನನ್ನ ಬದುಕು ಪ್ರದರ್ಶನಕ್ಕಲ್ಲ, ಸ್ವಯಂ ಅನುಭವಕ್ಕೆ’ ಎಂಬ ಸತ್ಯವನ್ನು ಪ್ರತಿಯೊಬ್ಬರೂ ಅರಿತುಕೊಂಡಾಗ ಮಾತ್ರ ಈ ಕೃತಕ ಡಿಜಿಟಲ್ ಲೋಕದ ಚಟದಿಂದ ಮುಕ್ತಿ ಪಡೆಯಲು ಸಾಧ್ಯ.