ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Ravi Hunj Column: ಗಣಾಚಾರವೊಂದು ಮುಖಾಚಾರ ಮೂರು !

ಇವನೊಬ್ಬ ಅರೆಹುಚ್ಚ ಇದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಬೇಕಿಲ್ಲ’ ಎಂದು ಅಭಿಪ್ರಾಯ ಹಂಚಿ ದವರು ಹಂದಿಗುಂದ ಮಠದ ಪೂಜ್ಯ ಶ್ರೀ ಶಿವಾನಂದ ಸ್ವಾಮಿಗಳು! ನಾನು ಈ ಅಸಭ್ಯ ಪರಿಭಾಷೆಯ ಅಭಿಪ್ರಾಯ ನೋಡಿದಾಕ್ಷಣ ಯಾರೋ ಅವಿದ್ಯಾವಂತ ಮುಗ್ಧ, ಅನಾಗರಿಕ ವ್ಯಕ್ತಿಯೆಂದು ಉಪೇಕ್ಷಿ ಸಿದ್ದೆ. ಅಭಿಪ್ರಾಯ ಹಾಕಿರುವ ವ್ಯಕ್ತಿಯ ಹೆಸರನ್ನು ಸಹ ಗಮನಿಸಿರಲಿಲ್ಲ. ಆದರೆ ಓದುಗರೊಬ್ಬರು ಗಮನ ಹರಿಸಲು ತಿಳಿಸಿದ ನಂತರ ಗಮನಿಸಿದೆ.

Ravi Hunj Column: ಗಣಾಚಾರವೊಂದು ಮುಖಾಚಾರ ಮೂರು !

-

Profile
Ashok Nayak Jun 14, 2026 9:56 AM

ವಚನಾಮೃತ

ರವಿ ಹಂಜ್

ಕಳೆದ ವಾರದ ‘ಗಣಾಚಾರವೆಂದರೆ ಪಂಚಾಚಾರ್ಯ ದ್ವೇಷವೇ’ ಎಂಬ ಲೇಖನಕ್ಕೆ ಮೂರು ಪ್ರಮುಖ ಅಭಿಪ್ರಾಯಗಳು ಬಂದಿವೆ. ಅವುಗಳಲ್ಲಿ ಮೊದಲನೆಯದು, ‘ಮೂರ್ಖರೂ ಬರೆಯ ಬಹುದು ಎನ್ನುವುದಕ್ಕೆ ಸಾಕ್ಷಿ ಕಳ್ಳ ಹಂಜ್ ಇವನ ಮಾತುಗಳು. ಯಾವುದೂ ಸತ್ಯವಿಲ್ಲ. ಕಪೋಲ ಕಲ್ಪಿತ. ಯಾರೋ ನೀಡುವ ಹಣದಾಸೆಗೆ ಇಂಥವುಗಳನ್ನು ಬರೆಯುವ ಈತ ಸಗಣಿಯೊಳಗಿನ ಹುಳು.

ಇವನೊಬ್ಬ ಅರೆಹುಚ್ಚ ಇದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಬೇಕಿಲ್ಲ’ ಎಂದು ಅಭಿಪ್ರಾಯ ಹಂಚಿದವರು ಹಂದಿಗುಂದ ಮಠದ ಪೂಜ್ಯ ಶ್ರೀ ಶಿವಾನಂದ ಸ್ವಾಮಿಗಳು! ನಾನು ಈ ಅಸಭ್ಯ ಪರಿಭಾಷೆಯ ಅಭಿಪ್ರಾಯ ನೋಡಿದಾಕ್ಷಣ ಯಾರೋ ಅವಿದ್ಯಾವಂತ ಮುಗ್ಧ, ಅನಾಗರಿಕ ವ್ಯಕ್ತಿಯೆಂದು ಉಪೇಕ್ಷಿಸಿದ್ದೆ. ಅಭಿಪ್ರಾಯ ಹಾಕಿರುವ ವ್ಯಕ್ತಿಯ ಹೆಸರನ್ನು ಸಹ ಗಮನಿಸಿರಲಿಲ್ಲ. ಆದರೆ ಓದುಗರೊಬ್ಬರು ಗಮನ ಹರಿಸಲು ತಿಳಿಸಿದ ನಂತರ ಗಮನಿಸಿದೆ.

ಈ ಅಭಿಪ್ರಾಯ ಹಾಕಿದ ಖಾತೆ ನಿಜಕ್ಕೂ ಹಂದಿಗುಂದ ಶ್ರೀಗಳದ್ದೇ ಎಂದು ಖಚಿತ ಪಡಿಸಿಕೊಂಡು ಒಂದು ವಿಷಾದದ ಮುಗುಳ್ನಗೆ ನಕ್ಕೆ. ಪೂಜ್ಯ ಹಂದಿಗುಂದ ಶ್ರೀಗಳು ವಿದ್ಯಾವಂತರು, ವಾಗ್ಮಿಗಳು, ಕವಿಗಳು, ಸಾಹಿತಿಗಳು ಅದೆಲ್ಲಕ್ಕಿಂತ ಮಿಗಿಲಾಗಿ ಅಯ್ಯಾ ಎಂದರೆ ಸ್ವರ್ಗ.

ಎಲವೋ ಎಂದರೆ ನರಕ ಎಂಬ ಬಸವತತ್ವದ ಪರಮ ಪರಿಚಾರಕರು. ಇಂತಹ ಘನತೆಯ ಪೂಜ್ಯರು ಇಂತಹ ಅನಾಗರಿಕ ಪರಿಭಾಷೆಯನ್ನು ಬಳಸಿದ್ದಾರೆ ಎಂದರೆ ಈ ಲೇಖನ ಶ್ರೀಗಳ ಸುಪ್ತ ಅಂತಃಸಾಕ್ಷಿ‌ ಯನ್ನು ತಟ್ಟಿ ಅಪರಾಧಿ ಪ್ರಜ್ಞೆ ಕಾಡತೊಡಗಿದೆ ಎಂದರ್ಥ.

ಇದನ್ನೂ ಓದಿ: Ravi Hunj Column: ಗಣಾಚಾರ ಎಂದರೆ ಪಂಚಾಚಾರ್ಯ ದ್ವೇಷವೇ ?

ಮನಃಶಾಸ್ತ್ರದಲ್ಲಿ ಅರಿವಿನ ವ್ಯತಿರಿಕ್ತತಾ ಸಂಕೀರ್ಣತೆ ಎಂಬ ಮಾನಸಿಕ ತುಮುಲದ ವಿಷಯವಿದೆ. ನಮ್ಮ ನಂಬಿಕೆಗಳು, ಮೌಲ್ಯಗಳು ಅಥವಾ ಮನೋಭಾವಗಳು ಪೊಳ್ಳೆಂದು ಯಾರಾದರೂ ಸಾಕ್ಷ ಸಮೇತವಾಗಿ ತೋರಿಸಿದಾಗ ಉಂಟಾಗುವ ಮಾನಸಿಕ ಅಸಮಾಧಾನ ಅಥವಾ ಅಸ್ವಸ್ಥತೆಯೇ ಅರಿವಿನ ವ್ಯತಿರಿಕ್ತತಾ ಸಂಕೀರ್ಣತೆ! ಯಾವಾಗ ಇದು ವ್ಯಕ್ತಿಯ ಸುಪ್ತಪ್ರಜ್ಞೆಯನ್ನು ಬಾಧಿಸುತ್ತದೋ ಆಗ ಮನಸ್ಸು ತಾತ್ಕಾಲಿಕ ಉಪಶಮನವಾಗಿ ತಪ್ಪೆಂದು ತೋರಿಸಿದ ವ್ಯಕ್ತಿಗಳನ್ನು ಹೀಯಾಳಿಸುವ ಅಥವಾ ಆತನ ಮೇಲೆ ಆಕ್ರಮಣ ಮಾಡುವ ಚಿಂತನೆಗಳನ್ನು ಮೆದುಳಿಗೆ ದೌಡಾಯಿಸುತ್ತದೆ.

ಆಗ ಅಸ್ವಸ್ಥ ವ್ಯಕ್ತಿಯು ತನ್ನ ನಡವಳಿಕೆಗೆ ವ್ಯತಿರಿಕ್ತವಾಗಿ ನಡೆದುಕೊಳ್ಳಲು ಆರಂಭಿಸುತ್ತಾನೆ. ಉದಾಹರಣೆಗೆ, ಧೂಮಪಾನ ಮಾಡುವದು ತಪ್ಪೆಂದು ಜನಜಾಗೃತಿ ಮಾಡುತ್ತಿದ್ದ ವ್ಯಕ್ತಿ ತನ್ನ ಅಸ್ವಸ್ಥತೆಯನ್ನು ಮರೆಮಾಚಲು ಧೂಮಪಾನಕ್ಕೆ ಶರಣಾಗುತ್ತಾನೆ. ಅದೇ ರೀತಿ ಅಸ್ವಸ್ಥ ಓರ್ವ ಪ್ರಬುದ್ಧ ಸಾಹಿತಿಯಾಗಿದ್ದರೆ ಆತ ಸಂಪೂರ್ಣ ವ್ಯತಿರಿಕ್ತ ಪರಿಭಾಷೆಗೆ ಶರಣಾಗುತ್ತಾನೆ. ಇದೇ ಅಸ್ವಸ್ಥತೆ ಹಂದಿಗುಂದ ಶ್ರೀಗಳಿಗೆ ಇಂದು ಉಂಟಾಗಿದೆ.

ಅಂದ ಹಾಗೆ ವ್ಯಸನಮುಕ್ತ ಚಳುವಳಿ ನಡೆಸಿ ತಂಬಾಕು ಸೇವನೆ ನಿಲ್ಲಿಸಿ ಎಂದು ಪ್ರಚಾರ ಮಾಡುತ್ತ ತಮ್ಮ ಹೊಲಗಳಲ್ಲಿ ತಂಬಾಕು ಬೆಳೆಯುತ್ತಿರುವುದನ್ನು ಅರಿವಿನ ವ್ಯತಿರಿಕ್ತತೆಯ ಅಸ್ವಸ್ಥತೆ ಎನ್ನಲಾ ಗದು. ಅದು ಅವರ ಚತುರ ವ್ಯವಹಾರ ಲಕ್ಷಣವಷ್ಟೇ. ಇರಲಿ, ಹಣದಾಸೆಗೆ ಬರೆಯುವವ ಎಂದಿರುವ ಖುದ್ದು ಸಾಹಿತಿಗಳಾದ ಹಂದಿಗುಂದ ಶ್ರೀಗಳಿಗೆ ಕನ್ನಡ ಸಾಹಿತ್ಯದಲ್ಲಿ ಲೇಖನ, ಕಥೆ, ಕಾದಂಬರಿ ಗಳನ್ನು ಬರೆದು ಯಾರು ಎಷ್ಟು ಹಣ ಮಾಡುತ್ತಿದ್ದಾರೆ ಎಂಬ ವಾಸ್ತವ ಪ್ರಜ್ಞೆ ಇಲ್ಲವೆನಿಸುತ್ತದೆ.

Hand

ಕನ್ನಡ ಸಾರಸ್ವತ ಲೋಕದ ಹಣಕಾಸಿನ ಸಂಗತಿ ಈಗಿನ ಸಂಗತಿಯಲ್ಲ, ನನ್ನ ಬಾಲ್ಯದಲ್ಲಿ ಓದು ತ್ತಿದ್ದ ಪತ್ತೇದಾರಿ ಕಾದಂಬರಿಕಾರ ಎನ್. ನರಸಿಂಹಯ್ಯನವರನ್ನು ಒಬ್ಬರು, ‘ಸಾಹಿತ್ಯ ಸರಿ, ಆದರೆ ಊಟಕ್ಕೆ ಏನು ಮಾಡಿಕೊಂಡಿದ್ದೀರಿ?’ ಎಂದು ಕೇಳಿದ್ದರು ಎಂದು ಕನ್ನಡ ಸಾಹಿತ್ಯಲೋಕದ ಬಡತನದ ಬಗ್ಗೆ ನರಸಿಂಹಯ್ಯನವರೇ ಬರೆದುಕೊಂಡಿದ್ದರು.

ಈಗಲೂ ಇದು ಬದಲಾಗಿಲ್ಲ. ಆದರೂ ಲೆಕ್ಕಾಚಾರಕ್ಕಾಗಿ ಹೇಳಬೇಕೆಂದರೆ ಒಂದು ಪುಸ್ತಕದ ಇಪ್ಪತ್ತೈದು ಸಾವಿರ ಪ್ರತಿಗಳನ್ನು ನೂರು ರೂಪಾಯಿಗೊಂದರಂತೆ ಮಾರಿ ಹದಿನೈದು ಪರ್ಸೆಂಟ್ ರಾಯಧನ ಗಳಿಸಿದರೆ ಸಿಗುವುದು ಮೂರುಮುಕ್ಕಾಲು ಲಕ್ಷ! ಇಂದು ಇಪ್ಪತ್ತೈದು ಸಾವಿರ ಪ್ರತಿ ಬಿಡಿ, ಒಂದು ಸಾವಿರ ಪ್ರತಿಗಳು ಮಾರಾಟವಾದರೆ ಅದೇ ದಾಖಲೆ ಎಂದಾಗಿದೆ!

ಇನ್ನು ಆ ಕೃತಿಯು ಯಾವುದೇ ಅನುದಾನರಹಿತ ಸಂಶೋಧನಾ ನೆಲೆಯದ್ದಾದರೆ ಪರಮ ಲುಕ್ಸಾನಿನ ಬಾಬತ್ತು! ಯಾವುದೇ ಒಂದು ಸಂಶೋಧನೆಗೆ ಸಂಪನ್ಮೂಲಗಳನ್ನು ಒಟ್ಟುಗೂಡಿಸಲು ತಿರುಗಾಡಿ ವ್ಯಯಿಸುವ ಹಣ, ಸುಮಾರು ಐದು ಲಕ್ಷಕ್ಕೂ ಹೆಚ್ಚು. ತಂಡಗಳ ಸ್ವರೂಪದ ಸಂಶೋಧನೆಗಳಾದರೆ ಇನ್ನೂ ಅಧಿಕ. ಅದರಲ್ಲಿಯೂ ಆ ಸಂಶೋಧನೆಗಳು ನನ್ನ ಹುಯೆನ್ ತ್ಸಾಂಗನ ಮಹಾಪಯಣ, ಅಗಣಿತ ಅಲೆಮಾರಿ, ಭಾರತ ಒಂದು ಮರುಶೋಧನೆಯಂತಹ ಅಂತರ ರಾಷ್ಟ್ರೀಯ ವಿಷಯ ವಸ್ತುಗಳಿದ್ದರೆ ಇನ್ನೂ ಹೆಚ್ಚು! ಸರಕಾರಿ ಅನುದಾನಗಳಿಲ್ಲದೆ ಈ ರೀತಿಯ ಪುಸ್ತಕಗಳು ಅಸಾಧ್ಯವೇ ಸರಿ!

ಹೀಗೆ ನಾನು ವೈಯಕ್ತಿಕವಾಗಿ ಬಂಡವಾಳ ವ್ಯಯಿಸಿ ಕಂಡುಕೊಂಡ ಆ ಅರಿವನ್ನು ಸಮಾಜಕ್ಕೆ ಹಂಚಲು ಪುಸ್ತಕವಾಗಿಸಿದಾಗ, ಅಂತಹುದೇ ಲಾಭಾಂಶವನ್ನು ಬಯಸದೇ ಬಂಡವಾಳ ವ್ಯಯಿಸಿದ ಪ್ರಕಾಶನ ಸಂಸ್ಥೆಗಳು ನನ್ನ ಕೃತಿಗಳನ್ನು ಪ್ರಕಟಿಸಿದವು. ನನ್ನ ಪುಸ್ತಕಗಳಿಗೆ ರಾಯಧನ ಕೊಡುತ್ತೇನೆ ಎಂದ ಪ್ರಕಾಶಕರಿಗೆ ಅದನ್ನು ಅವಶ್ಯಕತೆ ಇರುವ ಯಾರಿಗಾದರೂ ಕೊಟ್ಟುಬಿಡಲು ತಿಳಿಸಿದ್ದೇನೆ.

ಏಕೆಂದರೆ ಕನ್ನಡ ಸಾಹಿತ್ಯದಿಂದ ಬರುವ ಹಣ ಗೌರವಧನ, ಅತ್ಯಂತ ಗೌಣ! ಹೊಟ್ಟೆ ತುಂಬಿಸದು. ಹಾಗಾಗಿಯೇ ಅನ್ನಕ್ಕಾಗಿ ಆರ್ಥಿಕ ಬಲಕ್ಕಾಗಿ ನಾನು ದೂರದ ದೇಶದಲ್ಲಿರುವ ಪರದೇಶಿ. ಕಾಯಕ ವಲ್ಲದೆ ಇನ್ನೇನೋ ಮಾಡಿ ಹಣ ಗಳಿಸಲು ನಾನಿರುವ ದೇಶದಲ್ಲಿ ಸಾಧ್ಯವಿಲ್ಲ. ಆದರೆ ಭಾರತದಲ್ಲಿ ಇದೆಲ್ಲವೂ ಸಾಧ್ಯ ಎಂದು ಎಲ್ಲರೂ ಬಲ್ಲರು!

ಅದರಲ್ಲೂ ಬಸವ ಬಸವ ಎಂದು ನಾಮಸ್ಮರಣೆ ಮಾಡುತ್ತ ಅದನ್ನೇ ಉದ್ಯೋಗ ಮಾಡಿಕೊಂಡ, ಬಸವ ಮುಖವಾಡ ಹೊತ್ತ ನೂರಾರು ಜನ ಇದ್ದಾರೆ. ಕೆಲವರು ಹಂದಿಗುಂದ ಶ್ರೀಗಳಂತೆಯೇ ಕಾವಿ, ಶ್ವೇತ ವಸ್ತ್ರಗಳನ್ನು ಧರಿಸಿ ಕೋಟ್ಯಾಂತರ ಹಣ ಮಾಡಿzರೆ. ಕೆಲವರು ಸಾಮಾಜಿಕ ಮಾಧ್ಯಮದಲ್ಲಿ ಕಾಮೆಂಟಿಗೆ ನೂರು, ಪೋಸ್ಟಿಗೆ ಸಾವಿರ, ಭಾಷಣಕ್ಕೆ ಲಕ್ಷದಂತೆ ಶುಲ್ಕ ವಿಧಿಸಿ ನಿತ್ಯ ಪ್ರಸಾದ ಸ್ವೀಕರಿಸುತ್ತಿದ್ದಾರೆ.

ಅದರಲ್ಲಿ ಹಲವರು ಬಸವ ದಟ್ ಬಸವ ದಿಸ್ ಬಸವ ಹಿಯರ್ ಬಸವ ದೇರ್ ಎಂಬ ನೂರಾರು ಸಂಸ್ಥೆಗಳನ್ನೇ ಮಾಡಿಕೊಂಡಿದ್ದಾರೆ. ಇನ್ನು ಕೆಲವು ಸರಕಾರಿ ಅಧಿಕಾರಿ ನೌಕರಶಾಹಿಗಳು ನಿವೃತ್ತಿಯ ನಂತರ ಇಂತಹದ್ದನ್ನೇ ವೃತ್ತಿಯಾಗಿಸಿಕೊಂಡಿದ್ದಾರೆ. ಸದ್ಯಕ್ಕೆ ನಾನು ನಿವೃತ್ತನೂ ಅಲ್ಲ, ಯಾವುದೋ ಒಂದು ಮಠದ ಮಂದಸ್ಮಿತ ಸ್ವಾಮೀಜಿಯೂ ಅಲ್ಲ. ಇತ್ತ ಬಸವ, ಶರಣ, ವಚನ, ಸೋಹಂ ದಾಸೋಹಂ ಎಂಬ ಅನ್ನದ ಸಂಸ್ಥೆಗಳನ್ನೂ ಹೊಂದಿಲ್ಲ. ನಾನೊಬ್ಬ ಕುತೂಹಲಿ ಮಾತ್ರ. ಕುತೂಹಲದಿಂದ ಓದಿ ಸಂಶೋಧಿಸಿ ಅರಿತ ಸತ್ಯವನ್ನು ಹಂಚುತ್ತಿದ್ದೇನಷ್ಟೇ.

ವಾಸ್ತವ ಹೀಗಿರುವಾಗ ಹಂದಿಗುಂದ ಶ್ರೀಗಳು ಓರ್ವ ಲೇಖಕನನ್ನು ಹಣದಾಸೆಗೆ ಬರೆಯುವವ ಎಂದು ಜರೆಯುವುದು ಅವರ ಶುದ್ಧ ಅರಿವಿನ ವ್ಯತಿರಿಕ್ತತಾ ಅಸ್ವಸ್ಥತೆಯ ಪ್ರಮಾಣೀಕರಿಸಿದ ಪುರಾವೆಯಾಗುತ್ತದೆ. ಸಾಹಿತ್ಯಾಸಕ್ತ ಕವಿವರ್ಯರಾದ ಹಂದಿಗುಂದ ಶ್ರೀಗಳು ನನ್ನ ಲೇಖನದ ಸತ್ಯದ ಏಟಿಗೆ ಎಲ್ಲ ಸಾಹಿತ್ಯಿಕ ಪರಿಭಾಷೆಯನ್ನು ಮರೆತು ಬಸವಣ್ಣನ ‘ಅಯ್ಯಾ ಎಂದರೆ ಸ್ವರ್ಗ ಎಲವೋ ಎಂದರೆ ನರಕ’ ಎಂಬ ಶಿಶುವಿಹಾರದ ವಚನವನ್ನೂ ಪಾಲಿಸಲಾಗದೆ ಅನಾಗರಿಕ ಅವಿದ್ಯಾವಂತ ನಂತೆ ಬಡಬಡಿಸುತ್ತಿರುವುದು ಕೇವಲ ಅರಿವಿನ ವ್ಯತಿರಿಕ್ತತಾ ಅಸ್ವಸ್ಥತೆಯ ಕಾರಣವಷ್ಟೇ ಎಂದು ಮತ್ತಷ್ಟು ಪುರಾವೆಗಳನ್ನು ನೀಡುತ್ತದೆ.

ಹಂದಿಗುಂದ ಎಂದರೆ ಹಂದಿ ದಿಬ್ಬ ಎಂಬ ಪಾರಿಭಾಷಿಕ ಅರ್ಥವಿದೆ. ‘ಮಾಡಿದ್ದುಣ್ಣೋ ಮಹರಾಯ’ ಎಂಬ ನಾಣ್ಣುಡಿಯಂತೆ ಹಂದಿಗುಂದ ಶ್ರೀಗಳು ಧರ್ಮಭಂಜಕರೆಂಬ ವರಾಹ ದಿಬ್ಬ(ಣ)ವನ್ನು ಸೇರಿದ ಮೇಲೆ ಇನ್ನೆಂತಹ ಸಾಹಿತ್ಯಿಕ ಪರಿಭಾಷೆ ಅವರಿಂದ ಬರಲಾಗುವುದು? ಶ್ರೀಗಳ ಈ ಪಾರಿಭಾಷಿಕ ಪಲ್ಲಟ ಅವರ ಧಾರ್ಮಿಕ ಅಧಃಪತನದ ಮಾಪಕವಷ್ಟೇ ಅಲ್ಲದೆ ಅವರ ನೈತಿಕತೆ, ಆತ್ಮಾನುಸಂಧಾನ, ಲಿಂಗಾನುಸಂಧಾನದ ಅಧಃಪತನದ ಪ್ರತೀಕ ಸಹ!

ಅರಿವೇ ಗುರುವೆಂದು ಅವರು ಅರಿತರೆ ಅಧ್ಯಾತ್ಮದ ಸಾಕ್ಷಾತ್ಕಾರವಾದೀತು. ಇಲ್ಲದಿದ್ದರೆ ಅಸ್ವಸ್ಥತೆ ಯ ಅಧೋಗತಿ ಶೀಘ್ರಗತಿಯನ್ನು ತಲುಪುತ್ತದೆ. ಆದರೂ ಒಂದೊಮ್ಮೆ ಸಾಹಿತಿ, ಕವಿಗಳಾದ ಹಂದಿಗುಂದ ಶಿವಾನಂದ ಶ್ರೀಗಳಿಗಾಗಿ ಒಟ್ಟಾರೆಯಾಗಿ ದ. ರಾ. ಬೇಂದ್ರೆಯವರ ಕವನದ ಮೂಲಕ ಸಹಜ ಮಾನವ ನಿಲುವಿನ ಜೀವನ ಸಾಕ್ಷ್ಯಾತ್ಕಾರವನ್ನು ಅವರ ಪೂರ್ವಾಶ್ರಮದ ಕವಿಭಾಷೆಯಲ್ಲಿ ಅರ್ಥಮಾಡಿಸೋಣ.

‘ಅನ್ನಕ್ಕೆ ಬಾಳಾಗಿ ಕಾಮಕ್ಕೆ ಹೋಳಾಗಿ ಮಾನಕ್ಕೆ ಆಳಾಗಿ ಉಸಿರೆಳೆದುದು ಬಾಳಲ್ಲ ಬದುಕಲ್ಲ; ಜೀವ ಜೀವಕೆ ಉದ್ದೀಪನವಾದುದೆ ಜೀವನವು!’ ಪೂಜ್ಯ ಹಂದಿಗುಂದ ಶ್ರೀಗಳೇ, ನಿಮ್ಮಲ್ಲಿ ಬಸವಾನುಗ್ರಹ ವುಂಟಾಗಿ ಜೀವ ಜೀವಕೆ ಉದ್ದೀಪನವಾಗಿ ಅಧ್ಯಾತ್ಮದ ಮಹಾಬೆಳಕು ಮೂಡಲಿ ಎಂದು ಹಾರೈಸುವೆ.

ಎರಡನೆಯ ಅಭಿಪ್ರಾಯ ಶ್ರೀಕಂಠ ಚೌಕಿಮಠ ಅವರದ್ದು. ಚೌಕಿಮಠರು, ತಾವು ಪ್ರತ್ಯಕ್ಷದರ್ಶಿಯಾಗಿ 2010ರಲ್ಲಿ ನಡೆದ ಶ್ರೀ ಶಿವಯೋಗ ಮಂದಿರದ ಶತಮಾನೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ ನಡೆದ ಘಟನೆಗಳಿಗೆ, ತಮ್ಮ ಲೇಖನದಲ್ಲಿ ಆರೋಪಿಸಿರುವಂತೆ, ಪೂಜ್ಯ ಮಹಾಸ್ವಾಮಿಗಳ ಯಾವುದೇ ಸಂಬಂಧವಿರಲಿಲ್ಲ ಎಂಬುದನ್ನು ನಾನು ಸಂಪೂರ್ಣ ಜವಾಬ್ದಾರಿಯಿಂದ ಹೇಳಬಲ್ಲೆ ಎಂದಿದ್ದಾರೆ. ಆದರೆ ಅಂದು ಚೌಕಿಮಠರು ಪ್ರತ್ಯಕ್ಷದರ್ಶಿಯಾಗಿ ಗಮನಿಸಿದ್ದುದನ್ನು ಪ್ರಾಮಾಣಿಸಿ ನೋಡಿದ್ದರೆ ಅವರಿಗೆ ಅವರೆದುರೇ ವೇದಿಕೆಯ ಮೇಲೆ ಪಂಚಾಚಾರ್ಯರಿಗಾಗಿ ಹಾಕಿದ್ದ ಆಸನ ಗಳನ್ನು ಕಿತ್ತೆಸೆದದ್ದು, ಪಂಚಾಚಾರ್ಯರು ವಾಹನಗಳ ಮೇಲೆ ಕಸೆದದ್ದು, ಪಂಚಾಚಾರ್ಯರ ಭಕ್ತರು ಪ್ರತಿಭಟಿಸಿದ್ದು ಸ್ಫಟಿಕ ಸದೃಶವಾಗಿ ಕಾಣುತ್ತಿತ್ತಲ್ಲದೆ ಆ ಕಿಡಿಗೇಡಿ ಕೃತ್ಯಗಳ ಹಿಂದಿನ ಕೈವಾಡ ಯಾರದ್ದೆಂದು ಸಮಿತಿಯ ಅಧ್ಯಕ್ಷರನ್ನು ಮತ್ತು ಸದಸ್ಯರನ್ನು ವಿಚಾರಿಸಿದ್ದರೆ ತಮಗೆ ತಿಳಿಯುತ್ತಿತ್ತು. ಅಂದು ಇದೇ ಸಿದ್ಧರಾಮ

ಶ್ರೀಗಳ ಮೇಲೆ ಈ ಕೃತ್ಯಗಳ ಹಿಂದಿರುವ ಕೈ ಎಂಬ ಆರೋಪ ಬಂದರೂ ಅಂದು ಶ್ರೀಗಳು ನಿರಾಕರಿಸ ಲಿಲ್ಲ, ಪುರಸ್ಕರಿಸಲೂ ಇಲ್ಲ. ಈ ವಿಷಯವಾಗಿ ದಯಮಾಡಿ ಚೌಕಿಮಠರು ಪ್ರತ್ಯಕ್ಷ ಕಂಡದ್ದನ್ನು ಪ್ರಾಮಾಣಿಸಿ ನೋಡಲಿ ಎಂದು ವಿನಂತಿಸುವೆ.

ಏಕೆಂದರೆ 2010ರ ಆ ದುರ್ಘಟನೆಯಿಂದ ಇಂದಿನ ವರ್ತಮಾನದವರೆಗೆ ಶ್ರೀಗಳು ಲಿಂಗಾಹತ ಧರ್ಮ ಭಂಜಕರೊಂದಿಗೆ ಅವ್ಯಾಹತವಾಗಿ ಕೈಜೋಡಿಸಿರುವುದು ಎಲ್ಲರೂ ಬಲ್ಲ ಸಾರ್ವತ್ರಿಕ ಸಮಾಚಾರ. ಅದೇ ರೀತಿ ಚೌಕಿಮಠರು, ಬೆಳಗಾವಿಯ ಶ್ರೀ ರುದ್ರಾಕ್ಷಿಮಠದಲ್ಲಿ ಪೂಜ್ಯರು ನಿರ್ಮಿಸಿ ರುವ ಎರಡು ವಿಶಿಷ್ಟ ಪುಸ್ತಕ ಸಂಗ್ರಹಗಳಿವೆ.

ಒಂದರಲ್ಲಿ ಅಪರೂಪದ ಗ್ರಂಥಗಳ ಭಂಡಾರವಿದ್ದರೆ, ಮತ್ತೊಂದು ಸಾರ್ವಜನಿಕರಿಗೆ ಲಭ್ಯವಿರುವ ಮಾರಾಟ ಮಳಿಗೆಯಾಗಿದೆ. ಈ ಎರಡೂ ಸಂಗ್ರಹಗಳಲ್ಲಿ ಪಂಚಪೀಠಗಳನ್ನು ಅವಹೇಳನ ಮಾಡುವ ಯಾವುದೇ ಪುಸ್ತಕಗಳಿಲ್ಲ. ಬದಲಿಗೆ ಸಂಶೋಧನಾ ಗ್ರಂಥಗಳು, ವೀರಶೈವ ಮತ್ತು ಲಿಂಗಾಯತ ಪರಂಪರೆಗಳ ತುಲನಾತ್ಮಕ ಅಧ್ಯಯನಗಳು, ತಾಡೆಯೋಲೆಗಳ ಅಮೂಲ್ಯ ಸಂಗ್ರಹಗಳು ಹಾಗೂ ಇತಿಹಾಸದ ದಾಖಲೆಗಳು ಮಾತ್ರವೇ ಇವೆ ಎನ್ನುತ್ತಲೇ ಪಂಚಪೀಠಗಳ ಕುರಿತು ಅವಹೇಳನಾತ್ಮಕ ಬರಹಗಳಿರುವ ಕೆಲವು ಪುಸ್ತಕಗಳು ಜಾಗತಿಕ ಲಿಂಗಾಯತ ಮಹಾಸಭೆಯ ಕಚೇರಿಯಲ್ಲಿ ದೊರೆಯಬಹುದಾದರೂ, ಆ ವಿಷಯವನ್ನು ಪೂಜ್ಯ ಜಗದ್ಗುರುಗಳ ಪರಿಧಿಗೆ ತರುವುದು ನ್ಯಾಯೋಚಿತವಲ್ಲ ಎಂದಿದ್ದಾರೆ.

ಇಲ್ಲಿ ಚೌಕಿಮಠರ ಹೇಳಿಕೆ ಅನುಕೂಲಸಿಂಧು ಆಯ್ದ ಅಭಿಪ್ರಾಯವಾಗಿದೆ. ಏಕೆಂದರೆ ಚೌಕಿಮಠರು ಸಹ ಸೈದ್ಧಾಂತಿಕವಾಗಿ ಸಾರ್ವತ್ರಿಕವಾಗಿ ವಿರೋಧಿಸಿದ ಜಾಮದಾರ, ಜೆ.ಎಸ್.ಪಾಟೀಲ, ಸತ್ಯಂಪೇಟೆ, ಸಾಣೇಹಳ್ಳಿ ಇನ್ನು ಮುಂತಾದವರ ನಿಲುವು, ಅವಹೇಳನಕಾರಿ ಭಾಷಣ, ಜನಾಂಗೀಯ ದ್ವೇಷದ ಪ್ರಚೋದನೆ ಎಲ್ಲವನ್ನೂ ಶ್ರೀ ಸಿದ್ಧರಾಮ ಜಗದ್ಗುರುಗಳ ಸನ್ನಿಧಿ ಮತ್ತು ಪ್ರಾಯೋಜಕತ್ವದಲ್ಲಿ ಮಾಡಲಾಗಿದೆ.

ಇದೆಲ್ಲದರ ಮಾಹಿತಿ ಬಿಡಿ, ಖುದ್ದು ಚೌಕಿಮಠರೇ ಇದನ್ನೆ ವಿರೋಧಿಸಿ ಲೇಖನಗಳನ್ನು ಬರೆದಿದ್ದಾರೆ. ಹೀಗಿರುವಾಗ ಶ್ರೀಗಳ ಪರಿಧಿಗೆ ಇದನ್ನು ತರುವುದು ನ್ಯಾಯೋಚಿತವಲ್ಲ ಎನ್ನುವುದು ನ್ಯಾಯೋ ಚಿತವೇ ಎನ್ನುವುದನ್ನು ಚೌಕಿಮಠರ ನೈತಿಕ ಜಿಜ್ಞಾಸೆಗೆ ಬಿಡುತ್ತೇನೆ, ಜಿಜ್ಞಾಸಿಸಲಿ. ಏಕೆಂದರೆ ಸಿದ್ಧರಾಮ ಜಗದ್ಗುರುಗಳಿರುವುದೇ ಅನ್ಯಾಯದ ಪರಿಧಿಯ ವ್ಯಾಪ್ತಿಯಲ್ಲಿ ಎನ್ನುವುದು ಸಾರ್ವತ್ರಿಕ ಸತ್ಯವಾಗಿದೆ.

ಚೌಕಿಮಠರು, ಇಂದು ಎಲ್ಲರಿಗೂ ಲಭ್ಯವಾಗಿರುವ ಫ.ಗು.ಹಳಕಟ್ಟಿಯವರ ಶಿವಾನುಭವ ಪತ್ರಿಕೆಯ 1924ರಿಂದ 1964ರವರೆಗಿನ ಎಲ್ಲ ಸಂಚಿಕೆಗಳನ್ನು ಜತನದಿಂದ ಸಂಗ್ರಹಿಸಿ, ದಶಕಗಳ ಹಿಂದೆಯೇ ಪುಣೆಯ ಸ್ಕ್ಯಾನಿಂಗ್ ಕೇಂದ್ರಗಳ ಮೂಲಕ ಡಿಜಿಟಲೀಕರಣಗೊಳಿಸುವ ಮಹತ್ತರ ಕಾರ್ಯವನ್ನು ಪೂಜ್ಯರು ಕೈಗೊಂಡಿದ್ದರು. ಈ ಕಾರ್ಯಕ್ಕಾಗಿ ಅವರು ಸ್ವತಃ ಅನೇಕ ಬಾರಿ ಪುಣೆಗೆ ತೆರಳಿ ಶ್ರಮಿಸಿ ದ್ದನ್ನು ನಾನು ಕಣ್ಣಾರೆ ಕಂಡಿದ್ದೇನೆ.

ನಮ್ಮ ಸಾಹಿತ್ಯ, ಇತಿಹಾಸ ಮತ್ತು ಸಂಸ್ಕೃತಿಯ ಅಮೂಲ್ಯ ಸಂಪತ್ತನ್ನು ಮುಂದಿನ ಪೀಳಿಗೆಗಳಿಗೆ ಉಳಿಸಿಕೊಡುವ ಅವರ ಬದ್ಧತೆ ಅನುಕರಣೀಯವಾಗಿದೆ ಎಂದಿದ್ದಾರೆ. ಹಾಗಿದ್ದಾಗ ಶ್ರೀಗಳು ತಮ್ಮ ಸಂಸ್ಥಾನದಿಂದ ಅಽಕ ಪ್ರಸಂಗಿಯೊಬ್ಬ ಮಾಡಿದ ಕಿತಾಪತಿ ಎಂಬ ಪ್ರಶಂಸನಾ ಪತ್ರವನ್ನು ಏಕೆ ಈಗಲೂ ಸಾರ್ವಜನಿಕವಾಗಿ ಅಲ್ಲಗಳೆಯುತ್ತಿಲ್ಲ? ಆ ಪ್ರಶಂಸನಾ ಪತ್ರವನ್ನು ಯೋಗ್ಯರಿಗೆ ಕೊಡಲಾಗಿದೆ ಎಂದು ಖುದ್ದು ಚೌಕಿಮಠರಿಗೇ ಎನಿಸುತ್ತಿಲ್ಲ!

ಹಾಗಿರುವಾಗ ಶ್ರೀಗಳು ಆ ಪ್ರಶಂಸನಾ ಪತ್ರವನ್ನು ತಪ್ಪು ವ್ಯಕ್ತಿಗೆ ಕೊಡಲಾಗಿದೆ ಎಂದು ವಿಷಾದ ವ್ಯಕ್ತಪಡಿಸುತ್ತಿಲ್ಲವೇಕೆ ಎಂದು ಚೌಕಿಮಠರು ಶ್ರೀಗಳನ್ನು ಪ್ರಶ್ನಿಸಬೇಕಿದೆಯೇ ಹೊರತು ನನ್ನನ್ನಲ್ಲ.