ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

R Ramaradhya Column: ಬೂದಿಯಿಂದ ಎದ್ದು ನಿಂತ ಜಪಾನ್

ಬದುಕುಳಿದವರು ವಿಕಿರಣದ ಭೀಕರ ಪರಿಣಾಮಗಳೊಂದಿಗೆ ಜೀವನ ನಡೆಸಬೇಕಾಯಿತು. ಆದರೆ ಹಿರೋಷಿಮಾದ ಕಥೆ ಕೇವಲ ವಿನಾಶದ ಕಥೆಯಲ್ಲ. ಅದು ಬೂದಿಯಿಂದ ಎದ್ದು ನಿಂತ ಒಂದು ರಾಷ್ಟ್ರದ ಕಥೆ. ದ್ವಿತೀಯ ವಿಶ್ವಯುದ್ಧದ ಅಂತ್ಯದ ವೇಳೆಗೆ ಜಪಾನ್ ಸಂಪೂರ್ಣವಾಗಿ ಕುಸಿದು ಹೋಗಿತ್ತು. ಎರಡು ಅಣುಬಾಂಬ್ ದಾಳಿಗಳು, ನಗರಗಳ ಮೇಲಿನ ವೈಮಾನಿಕ ದಾಳಿಗಳು, ಕೈಗಾರಿಕೆಗಳ ನಾಶ, ಆಹಾರದ ಕೊರತೆ, ನಿರುದ್ಯೋಗ ಮತ್ತು ಆರ್ಥಿಕ ಸಂಕಷ್ಟ ದೇಶವನ್ನು ಕಂಗೆಡಿಸಿತ್ತು

R Ramaradhya Column: ಬೂದಿಯಿಂದ ಎದ್ದು ನಿಂತ ಜಪಾನ್

-

Profile
Ashok Nayak Aug 5, 2026 11:46 AM

ಶಾಂತಿ ಸ್ಮರಣೆ

ರಾ.ರಾಮಾರಾಧ್ಯ, ಮೈಸೂರು

1945ರ ಆಗ 6ರಂದು ಬೆಳಿಗ್ಗೆ 8.15ಕ್ಕೆ ಜಪಾನಿನ ಹಿರೋಷಿಮಾ ಮೇಲೆ ಇತಿಹಾಸದ ಮೊದಲ ಅಣು ಬಾಂಬ್ ದಾಳಿ ನಡೆಯಿತು. ಹಿರೋಷಿಮಾದ ಜನರು ತಮ್ಮ ದಿನನಿತ್ಯದ ಜೀವನವನ್ನು ಸಾಮಾನ್ಯ ವಾಗಿ ನಡೆಸುತ್ತಿದ್ದರು. ಸಾಂಪ್ರದಾಯಿಕ ವಾಯುದಾಳಿಯ ಎಚ್ಚರಿಕೆ ಸೈರನ್‌ಗಳು ಮೊಳಗಿದರೂ, ಇದು ಸಾಮಾನ್ಯ ಎಂದು ಜನರು ಹೆಚ್ಚಿನ ಆತಂಕ ಪಡಲಿಲ್ಲ. ದಾಳಿಯಲ್ಲಿ ತಕ್ಷಣ ವೇ ಸುಮಾರು 70,000- 80,000 ಜನರು ಸಾವನ್ನಪ್ಪಿದರು.

ನಂತರದ ತಿಂಗಳುಗಳು ಮತ್ತು ವರ್ಷಗಳಲ್ಲಿ ವಿಕಿರಣದ ಪರಿಣಾಮಗಳಿಂದ ಒಟ್ಟು ಸಾವಿನ ಸಂಖ್ಯೆ ಸುಮಾರು 1,40,000ಕ್ಕೆ ತಲುಪಿತೆಂದು ಅಂದಾಜಿಸಲಾಗಿದೆ. ಹಿರೋಷಿಮಾ ನಗರದ ಮೇಲೆ ಅಮೆರಿಕ ಎಸೆದ ಲಿಟಲ್ ಬಾಯ ಅಣುಬಾಂಬ್ ಕ್ಷಣಾರ್ಧದಲ್ಲಿ ಇಡೀ ನಗರವನ್ನು ಭಸ್ಮಗೊಳಿಸಿತು. ಸಾವಿರಾರು ಜನರು ಸ್ಥಳದ ಸಾವನ್ನಪ್ಪಿದರು. ಲಕ್ಷಾಂತರ ಜನರು ಗಾಯಗೊಂಡರು. ಮನೆಗಳು, ಆಸ್ಪತ್ರೆಗಳು, ಶಾಲೆಗಳು, ಕಾರ್ಖಾನೆಗಳು, ರಸ್ತೆಗಳು, ಸೇತುವೆಗಳು- ಎಲ್ಲವೂ ನಾಶವಾದವು.

ಬದುಕುಳಿದವರು ವಿಕಿರಣದ ಭೀಕರ ಪರಿಣಾಮಗಳೊಂದಿಗೆ ಜೀವನ ನಡೆಸಬೇಕಾಯಿತು. ಆದರೆ ಹಿರೋಷಿಮಾದ ಕಥೆ ಕೇವಲ ವಿನಾಶದ ಕಥೆಯಲ್ಲ. ಅದು ಬೂದಿಯಿಂದ ಎದ್ದು ನಿಂತ ಒಂದು ರಾಷ್ಟ್ರದ ಕಥೆ. ದ್ವಿತೀಯ ವಿಶ್ವಯುದ್ಧದ ಅಂತ್ಯದ ವೇಳೆಗೆ ಜಪಾನ್ ಸಂಪೂರ್ಣವಾಗಿ ಕುಸಿದು ಹೋಗಿತ್ತು. ಎರಡು ಅಣುಬಾಂಬ್ ದಾಳಿಗಳು, ನಗರಗಳ ಮೇಲಿನ ವೈಮಾನಿಕ ದಾಳಿಗಳು, ಕೈಗಾರಿಕೆ ಗಳ ನಾಶ, ಆಹಾರದ ಕೊರತೆ, ನಿರುದ್ಯೋಗ ಮತ್ತು ಆರ್ಥಿಕ ಸಂಕಷ್ಟ ದೇಶವನ್ನು ಕಂಗೆಡಿಸಿತ್ತು. ಆದರೂ ಜಪಾನಿನ ಜನರು ಸೋಲನ್ನು ಅಂತ್ಯವೆಂದು ನೋಡಲಿಲ್ಲ; ಹೊಸ ಆರಂಭವೆಂದು ಸ್ವೀಕರಿಸಿದರು.

ಯುದ್ಧ ಮುಗಿದ ನಂತರ ಮೊದಲ ಆದ್ಯತೆ ಬದುಕುಳಿದವರ ರಕ್ಷಣೆಯಾಗಿತ್ತು. ಸಾವಿರಾರು ಸ್ವಯಂ ಸೇವಕರು ಗಾಯಾಳುಗಳಿಗೆ ನೆರವಾದರು. ತಾತ್ಕಾಲಿಕ ಆಸ್ಪತ್ರೆಗಳು ಸ್ಥಾಪಿಸಲ್ಪಟ್ಟವು. ಆಶ್ರಯ ಕಳೆದು ಕೊಂಡವರಿಗೆ ವಸತಿ ಒದಗಿಸಲಾಯಿತು. ವಿಕಿರಣದಿಂದ ಬಳಲುತ್ತಿದ್ದವರಿಗೆ ವಿಶೇಷ ವೈದ್ಯಕೀಯ ನೆರವು ನೀಡಲಾಯಿತು. ಅನಾಥ ಮಕ್ಕಳ ಪುನರ್ವಸತಿಗೂ ವಿಶೇಷ ಯೋಜನೆಗಳನ್ನು ರೂಪಿಸಲಾಯಿತು.

1949ರಲ್ಲಿ ಜಪಾನ್ ಸರಕಾರ ಹಿರೋಷಿಮಾವನ್ನು ಶಾಂತಿಯ ನಗರವಾಗಿ ಅಭಿವೃದ್ಧಿಪಡಿಸುವ ವಿಶೇಷ ಕಾನೂನನ್ನು ಜಾರಿಗೆ ತಂದಿತು. ಈ ಕಾನೂನಿನಡಿ ಕೇಂದ್ರ ಸರಕಾರ ಪುನರ್ನಿರ್ಮಾಣಕ್ಕೆ ವಿಶೇಷ ಅನುದಾನ ನೀಡಿತು. ನಗರವನ್ನು ಆಧುನಿಕ ಯೋಜನೆಯೊಂದಿಗೆ ಮರುನಿರ್ಮಿ ಸಲಾಯಿತು. ಅಗಲವಾದ ರಸ್ತೆಗಳು, ಸಾರ್ವಜನಿಕ ಉದ್ಯಾನಗಳು, ಸುಸಜ್ಜಿತ ಆಸ್ಪತ್ರೆಗಳು, ಶಾಲೆಗಳು ಮತ್ತು ನಾಗರಿಕ ಸೌಲಭ್ಯಗಳು ನಿರ್ಮಾಣಗೊಂಡವು. ಅಣುಸ್ಫೋಟದಿಂದ ಭಾಗಶಃ ಉಳಿದಿದ್ದ ಜೆನ್ಬಾಕು ಡೋಮ್ ಅನ್ನು ಧ್ವಂಸ ಮಾಡದೆ ಸ್ಮಾರಕವಾಗಿ ಉಳಿಸಲಾಯಿತು. ಇಂದು ಅದು ಯುದ್ಧದ ಭೀಕರತೆಯನ್ನು ನೆನಪಿಸುವ ವಿಶ್ವ ಪರಂಪರೆಯ ತಾಣವಾಗಿದೆ. ಅದರ ಪಕ್ಕದ ನಿರ್ಮಿಸಲಾದ ಹಿರೋಷಿಮಾ ಶಾಂತಿ ಸ್ಮಾರಕ ಉದ್ಯಾನ ಮತ್ತು ಶಾಂತಿ ಸಂಗ್ರಹಾಲಯವು ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಅಲ್ಲಿ ಪ್ರದರ್ಶಿಸಲಾದ ಚಿತ್ರಗಳು, ವಸ್ತುಗಳು ಮತ್ತು ಬದುಕುಳಿದವರ ನೆನಪುಗಳು ಅಣ್ವಸಗಳ ವಿನಾಶಕಾರಿ ಪರಿಣಾಮವನ್ನು ಜಗತ್ತಿಗೆ ತಿಳಿಸುತ್ತವೆ. ಪುನರ್ನಿರ್ಮಾಣದಲ್ಲಿ ಶಿಕ್ಷಣಕ್ಕೆ ಜಪಾನ್ ಅತ್ಯಂತ ಹೆಚ್ಚಿನ ಆದ್ಯತೆ ನೀಡಿತು. ಯುದ್ಧದಿಂದ ಹಾಳಾದ ಶಾಲೆಗಳನ್ನು ಮರುನಿರ್ಮಿಸ ಲಾಯಿತು.

ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಲು ಸರಕಾರ ಹೂಡಿಕೆ ಹೆಚ್ಚಿಸಿತು. ವಿಜ್ಞಾನ ಮತ್ತು ತಂತ್ರಜ್ಞಾನ ಶಿಕ್ಷಣಕ್ಕೆ ವಿಶೇಷ ಒತ್ತು ನೀಡಲಾಯಿತು. ಇದೇ ಮುಂದಿನ ದಿನಗಳಲ್ಲಿ ಜಪಾನ್‌ನ ಕೈಗಾರಿಕಾ ಬೆಳವಣಿಗೆಗೆ ಬಲವಾದ ಅಡಿಪಾಯವಾಯಿತು. ಜಪಾನಿನ ಆರ್ಥಿಕ ಪುನರುಜ್ಜೀವನವನ್ನು ಇಂದು ಜಪಾನಿನ ಆರ್ಥಿಕ ಅದ್ಭುತ ಎಂದು ಕರೆಯಲಾಗುತ್ತದೆ.

1950 ಮತ್ತು 1960ರ ದಶಕಗಳಲ್ಲಿ ವಾಹನ, ಉಕ್ಕು, ಹಡಗು ನಿರ್ಮಾಣ, ಯಂತ್ರೋಪಕರಣ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರಗಳಲ್ಲಿ ದೇಶ ವೇಗವಾಗಿ ಅಭಿವೃದ್ಧಿ ಕಂಡಿತು. ಜಾಗತಿಕ ಮಾರುಕಟ್ಟೆಯಲ್ಲಿ ಗುಣಮಟ್ಟದ ಉತ್ಪನ್ನಗಳ ಮೂಲಕ ಜಪಾನ್ ತನ್ನದೇ ಆದ ಸ್ಥಾನವನ್ನು ನಿರ್ಮಿಸಿತು. ಜಪಾನಿನ ಯಶಸ್ಸಿನ ಹಿಂದೆ ಅದರ ಜನರ ಶಿಸ್ತು, ಸಮಯಪಾಲನೆ ಮತ್ತು ಪರಿಶ್ರಮ ಪ್ರಮುಖ ಕಾರಣಗಳಾ ಗಿವೆ. ಪ್ರತಿಯೊಬ್ಬ ನಾಗರಿಕನು ತನ್ನ ಕೆಲಸವನ್ನು ರಾಷ್ಟ್ರ ನಿರ್ಮಾಣದ ಕರ್ತವ್ಯವೆಂದು ಭಾವಿಸಿದನು. ಸರಕಾರ, ಕೈಗಾರಿಕೆಗಳು, ವಿಜ್ಞಾನಿಗಳು ಮತ್ತು ಕಾರ್ಮಿಕರು ಒಂದೇ ಗುರಿಯೊಂದಿಗೆ ಕೆಲಸ ಮಾಡಿದರು.

ಗುಣಮಟ್ಟಕ್ಕೆ ನೀಡಿದ ಆದ್ಯತೆ ಜಪಾನಿನ ಉತ್ಪನ್ನಗಳಿಗೆ ವಿಶ್ವಾದ್ಯಂತ ಗೌರವ ತಂದುಕೊಟ್ಟಿತು. ಯುದ್ಧದ ನಂತರ ಜಪಾನ್ ತನ್ನ ಸಂವಿಧಾನದಲ್ಲಿ ಮಹತ್ವದ ಬದಲಾವಣೆ ಮಾಡಿತು. 1947ರ ಸಂವಿಧಾನದ 9ನೇ ವಿಧಿಯ ಮೂಲಕ ಯುದ್ಧವನ್ನು ರಾಷ್ಟ್ರದ ನೀತಿಯಾಗಿ ತ್ಯಜಿಸುವ ಘೋಷಣೆ ಮಾಡಲಾಯಿತು. ಅಂತಾರಾಷ್ಟ್ರೀಯ ವಿವಾದಗಳನ್ನು ಯುದ್ಧದ ಮೂಲಕ ಪರಿಹರಿಸಬಾರದು ಎಂಬ ಸಂದೇಶವನ್ನು ಜಪಾನ್ ವಿಶ್ವಕ್ಕೆ ನೀಡಿತು. ಈ ಶಾಂತಿಪರ ನಿಲುವು ದೇಶದ ಜಾಗತಿಕ ಗೌರವವನ್ನು ಹೆಚ್ಚಿಸಿತು. ಹಿರೋಷಿಮಾ ಇಂದು ವಿಶ್ವದ ಶಾಂತಿ ರಾಜಧಾನಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ದಾಳಿಯಲ್ಲಿ ಮೃತಪಟ್ಟವರನ್ನು ಸ್ಮರಿಸಿ ಶಾಂತಿಯ ಪ್ರತಿಜ್ಞೆ ಮಾಡಲಾಗುತ್ತದೆ. ವಿಶ್ವದ ವಿವಿಧ ರಾಷ್ಟ್ರಗಳ ಪ್ರತಿನಿಧಿಗಳು ಅಣ್ವಸ್ತ್ರಮುಕ್ತ ಜಗತ್ತಿನ ಅಗತ್ಯವನ್ನು ಒತ್ತಿ ಹೇಳುತ್ತಾರೆ.

ರಾಷ್ಟ್ರೀಯ ಏಕತೆ, ಪ್ರಾಮಾಣಿಕ ಆಡಳಿತ, ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ ಮತ್ತು ಪರಿಶ್ರಮ ಇದ್ದರೆ ಅತ್ಯಂತ ದೊಡ್ಡ ದುರಂತವನ್ನೂ ಮೀರಿ ನಿಲ್ಲಬಹುದು ಎಂಬುದನ್ನು ಜಪಾನ್ ಸಾಬೀತುಪಡಿಸಿದೆ. ಇಂದು ಜಪಾನ್ ವಿಶ್ವದ ಪ್ರಮುಖ ಆರ್ಥಿಕ ಶಕ್ತಿಗಳಲ್ಲಿ ಒಂದಾಗಿದೆ. ಅತ್ಯಾಧುನಿಕ ತಂತ್ರಜ್ಞಾನ, ವೇಗದ ರೈಲುಗಳು, ಅತ್ಯುತ್ತಮ ಉತ್ಪಾದನಾ ಗುಣಮಟ್ಟ, ಶಿಸ್ತು ಮತ್ತು ಸ್ವಚ್ಛತೆಯಿಂದ ಜಗತ್ತಿಗೆ ಮಾದರಿಯಾಗಿದೆ. ಈ ಸಾಧನೆಯ ಹಿಂದೆ ಹಿರೋಷಿಮಾ ಮತ್ತು ನಾಗಾಸಾಕಿಯ ದುರಂತದಿಂದ ಪಡೆದ ಕಠಿಣ ಪಾಠಗಳಿವೆ