Keshava Prasad B Column: ಬ್ಯಾಂಕ್ ಸೇವೆ ಹೇಗಿರಬೇಕು ? ಜನ ಯಾವುದನ್ನು ಮರೆಯುವಂತಿಲ್ಲ?
ಸಹೋದರಿಯ ಬ್ಯಾಂಕ್ ಖಾತೆಯಲ್ಲಿ ನಾಮಿನಿಯ ಹೆಸರನ್ನು ಸರಿಯಾಗಿ ನಮೂದಿಸಿರ ಲಿಲ್ಲ. ಹೀಗಾಗಿ ಬ್ಯಾಂಕ್ ವಿಳಂಬಿಸಿತ್ತು. ಮರಣ ಪ್ರಮಾಣಪತ್ರದ ಅಗತ್ಯವೂ ಇತ್ತು. ಆದರೆ, ಇದರಿಂದ ಹತಾಶೆಗೀಡಾದ ಜಿತು ಮುಂಡಾ, ಅಸ್ಥಿಪಂಜರವನ್ನೇ ತಂದಿದ್ದ.ಬ್ಯಾಂಕುಗಳು ಗ್ರಾಹಕರೊಂದಿಗೆ ವ್ಯವಹರಿಸುವಾಗ ಆಐ ರೂಪಿಸಿರುವ ‘ಗ್ರಾಹಕ ಸೇವಾ ಗುಣಮಟ್ಟ’ದ ನಿಯಮ ಗಳನ್ನು ಪಾಲಿಸಬೇಕಾಗುತ್ತದೆ.
-
ಮನಿಮೈಂಡೆಡ್
ಒಡಿಶಾದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದ ತನ್ನ ಸೋದರಿಯ ಬ್ಯಾಂಕ್ ಖಾತೆಯಿಂದ 19,000 ರುಪಾಯಿಗಳನ್ನು ಹಿಂತೆಗೆದುಕೊಳ್ಳಲು ಪಟ್ಟ ಪಡಿಪಾಟಲು ಕಂಡು ಅನೇಕ ಮಂದಿ ಮರುಗಿದ್ದಾರೆ. ಗ್ರಾಮೀಣ ಭಾಗದ ಬಡವನಿಗೆ ಸಹೋದರಿಯ ಬ್ಯಾಂಕ್ ಖಾತೆ ಯಲ್ಲಿದ್ದ ಹಣವನ್ನು ಹೇಗೆ ಹಿಂತೆಗೆದುಕೊಳ್ಳುವುದು ಎಂದು ತಿಳಿದಿರಲಿಲ್ಲ.
ಬ್ಯಾಂಕ್ ಸಿಬ್ಬಂದಿ ಹೇಳಿದರೂ, ಅರ್ಥವಾಗಿರಲಿಲ್ಲ. ಕೊನೆಗೆ ಬೇಸತ್ತು ಸೋದರಿಯ ಅಸ್ಥಿ ಪಂಜರವನ್ನೇ ಹೊತ್ತು ಬ್ಯಾಂಕ್‌ಗೆ ಬಂದಿದ್ದ! ಈ ಘಟನೆ ಬ್ಯಾಂಕಿಂಗ್ ಸೇವೆಯ ಲೋಪ-ದೋಷಗಳ ಬಗ್ಗೆ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಬ್ಯಾಂಕ್‌ಗಳು ಗ್ರಾಹಕರಿಗೆ ಸರಿಯಾಗಿ ಸ್ಪಂದಿಸದಿರುವುದೇ ಇಂಥ ಅನಾಹುತಗಳಿಗೆ ಕಾರಣ ಎಂದು ಬಹುತೇಕ ಮಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದರೆ, ಇಂಡಿಯನ್ ಓವರ್ ಸೀಸ್ ಬ್ಯಾಂಕ್ ನೀಡಿರುವ ಸ್ಪಷ್ಟೀಕರಣವೇ ಬೇರೆ ಆಯಾಮ ದಲ್ಲಿದೆ. ಒಡಿಶಾ ಗ್ರಾಮೀಣ ಬ್ಯಾಂಕ್‌ನಲ್ಲಿ ಸಾವಿನ ದೃಢೀಕರಣಕ್ಕೆ ಸಹೋದರಿಯ ಅಸ್ಥಿ ಪಂಜರವನ್ನು ತಂದಿರುವ ಘಟನೆ ವರದಿಯಾಗಿದೆ. ಈಗ ಸರಕಾರಿ ಅಧಿಕಾರಿಗಳು ಮರಣ ಪತ್ರವನ್ನು ಮತ್ತು ಕಾನೂನಾತ್ಮಕ ಉತ್ತರಾಧಿಕಾರತ್ವದ ದೃಢೀಕರಣ ದಾಖಲೆಗಳನ್ನು ಕೊಟ್ಟಿದ್ದಾರೆ.
ಇವುಗಳನ್ನು ಸ್ವೀಕರಿಸಿದ ಒಡನೆಯೇ ಬ್ಯಾಂಕ್, 19402 ರುಪಾಯಿಗಳ ಕ್ಲೈಮ್ ಅನ್ನು ಇತ್ಯರ್ಥಪಡಿಸಿದ್ದು, ಹಣವನ್ನು ಮೂವರು ವಾರಸುದಾರರಿಗೆ ನಿಯಮಾವಳಿಗಳ ಪ್ರಕಾರ ವಿತರಿಸಿದೆ. ಜಿತು ಮುಂಡಾ ಎಂಬುವರು ಸಹೋದರಿಯ ಬ್ಯಾಂಕ್ ಖಾತೆಯಿಂದ ಹಣ ಹಿಂಪಡೆಯಲು ಬಂದಾಗ, ಅಧಿಕಾರಿಗಳು ಕ್ಲೇಮ್ ಸೆಟ್ಲ್‌ಮೆಂಟ್ ಮಾಡಲು ಮೃತಪಟ್ಟಿರುವ ಸಹೋದರಿಯೇ ಹಾಜರಾಗಬೇಕು ಎಂದು ಹೇಳಿದ್ದಾರೆ ಎಂಬ ವರದಿಗಳು ನಿರಾಧಾರ.
ಇದನ್ನೂ ಓದಿ: Keshava Prasad B Column: ಭಾರತದ ಜಿಡಿಪಿ 4ರಿಂದ ಕ್ಕೆ ಕುಸಿದಿದ್ದೇಕೆ, ಆತಂಕಪಡಬೇಕೆ ?
‘ಘಟನೆ ನಡೆದಾಗ ಜಿತು ಮದ್ಯ ಸೇವಿಸಿದ ಅಮಲಿನಲ್ಲಿದ್ದರು. ಬ್ಯಾಂಕ್ ಮ್ಯಾನೇಜರ್ ಕ್ಲೈಮ್ ಮಾಡಿಕೊಳ್ಳುವ ಪ್ರಕ್ರಿಯೆಗಳನ್ನು ವಿವರಿಸಿದ್ದರೂ, ಅದನ್ನು ಸ್ವೀಕರಿಸಿ ಕೊಳ್ಳದೆಯೇ, ಈ ರೀತಿ ಮಾಡಿದ್ದಾರೆ’ ಎಂದು ಐಒಬಿ ತಿಳಿಸಿದೆ.
ಸಹೋದರಿಯ ಬ್ಯಾಂಕ್ ಖಾತೆಯಲ್ಲಿ ನಾಮಿನಿಯ ಹೆಸರನ್ನು ಸರಿಯಾಗಿ ನಮೂದಿಸಿರ ಲಿಲ್ಲ. ಹೀಗಾಗಿ ಬ್ಯಾಂಕ್ ವಿಳಂಬಿಸಿತ್ತು. ಮರಣ ಪ್ರಮಾಣಪತ್ರದ ಅಗತ್ಯವೂ ಇತ್ತು. ಆದರೆ, ಇದರಿಂದ ಹತಾಶೆಗೀಡಾದ ಜಿತು ಮುಂಡಾ, ಅಸ್ಥಿಪಂಜರವನ್ನೇ ತಂದಿದ್ದ.ಬ್ಯಾಂಕುಗಳು ಗ್ರಾಹಕರೊಂದಿಗೆ ವ್ಯವಹರಿಸುವಾಗ ಆಐ ರೂಪಿಸಿರುವ ‘ಗ್ರಾಹಕ ಸೇವಾ ಗುಣಮಟ್ಟ’ದ ನಿಯಮ ಗಳನ್ನು ಪಾಲಿಸಬೇಕಾಗುತ್ತದೆ.
ಗ್ರಾಹಕರಿಗೆ ಗೌರವಯುತ ಸೇವೆ ನೀಡುವುದು ಮತ್ತು ಅವರ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವುದು ಬ್ಯಾಂಕುಗಳ ಆದ್ಯತೆಯಾಗಿರಬೇಕು. ಆದರೆ, ಪ್ರತಿ ವರ್ಷ ಬ್ಯಾಂಕಿಂಗ್ ಸೇವೆಗಳಲ್ಲಿ ಉಂಟಾಗುವ ಲೋಪ ದೋಷಗಳ ಬಗ್ಗೆ ದೂರುಗಳು ಹೆಚ್ಚುತ್ತಿವೆ. ಖಾತೆದಾ ರರು ಮೃತಪಟ್ಟಾಗ ಅವರ ಅಕೌಂಟ್‌ನಲ್ಲಿರುವ ಹಣವನ್ನು ಹಿಂಪಡೆಯಲು ಕೆಲವು ಕಾರಣಗಳಿಂದ ಸಮಸ್ಯೆಯಾಗಬಹುದು.
ಅವುಗಳೆಂದರೆ- ನಾಮಿನಿ ಇಲ್ಲದಿರುವುದು. ಖಾತೆದಾರರು ತಮ್ಮ ಖಾತೆಗೆ ‘ನಾಮಿನಿ’ ಹೆಸರನ್ನು ಸೇರಿಸಿರದಿದ್ದರೆ ಸಮಸ್ಯೆ ಆರಂಭವಾಗುತ್ತದೆ. ಅಂತಹ ಸಮಯದಲ್ಲಿ ಬ್ಯಾಂಕ್ ಕಾನೂನುಬದ್ಧ ವಾರಸುದಾರರು ಯಾರು ಎಂಬುದನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ದಾಖಲೆಗಳನ್ನು ಕೇಳುತ್ತದೆ.
ಒಂದು ವೇಳೆ, ಖಾತೆದಾರರು ನಾಮಿನಿ ಯಾರೆಂಬುದನ್ನು ಹೆಸರಿಸದಿದ್ದರೆ, ಬ್ಯಾಂಕ್‌ಗಳು Succession Certificate (ಉತ್ತರಾಧಿಕಾರ ಪ್ರಮಾಣಪತ್ರ) ಅಥವಾ Letter of Administration ಕೇಳುತ್ತವೆ. ಇವುಗಳನ್ನು ಪಡೆಯುವುದಕ್ಕೆ ಕಾಲಾವಕಾಶ ಬೇಕಾಗಬಹುದು. ಒಂದಕ್ಕಿಂತ ಹೆಚ್ಚು ವಾರಸುದಾರರು ಇದ್ದು, ಅವರಲ್ಲಿ ಒಮ್ಮತ ಇಲ್ಲದಿದ್ದರೆ ಕೂಡ ಹಣ ಬಿಡುಗಡೆ ಮಾಡಲು ಬ್ಯಾಂಕ್ ಹಿಂದೇಟು ಹಾಕಬಹುದು.
ಮರಣ ಪ್ರಮಾಣಪತ್ರ, ಕೆವೈಸಿ ದಾಖಲೆಗಳು, ಸರಿಯಾದ ಗುರುತಿನ ಚೀಟಿಗಳಿಲ್ಲದಿದ್ದಾಗ ವಿಳಂಬವಾಗಬಹುದು. ಬ್ಯಾಂಕ್‌ಗಳಿಗೆ ಆರ್‌ಬಿಐ ಕೆಲವೊಂದು ಸೂಚನೆಗಳನ್ನು ನೀಡಿದೆ.
ಖಾತೆಗೆ ನಾಮಿನಿ ಇದ್ದರೆ ಮರಣ ಪ್ರಮಾಣಪತ್ರ, ನಾಮಿನಿಯ ಗುರುತಿನ ಚೀಟಿ ಸಲ್ಲಿಸಿದ 15 ದಿನಗಳ ಒಳಗೆ ಬ್ಯಾಂಕ್ ಹಣವನ್ನು ಹಸ್ತಾಂತರಿಸಬೇಕು. ಜಂಟಿ ಖಾತೆಯಾಗಿದ್ದರೆ ಉಳಿದಿರುವ ಖಾತೆದಾರರು ಸುಲಭವಾಗಿ ಖಾತೆಯನ್ನು ಮುಂದುವರಿಸಬಹುದು. ಅಥವಾ ಹಣವನ್ನು ಹಿಂಪಡೆಯಬಹುದು. ಒಂದು ವೇಳೆ ನಾಮಿನಿ ಇರದಿದ್ದರೂ, 15 ಲಕ್ಷ ರುಪಾಯಿ ತನಕದ ಮೊತ್ತ ಹಿಂತೆಗೆಯಲು ಸಾಧ್ಯವಿದೆ. ಅದಕ್ಕೆ ಡೆತ್ ಸರ್ಟಿಫಿಕೇಟ್, ಮುಚ್ಚಳಿಕೆ ಪತ್ರ ಸಾಕಾಗುತ್ತದೆ.
ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಬ್ಯಾಂಕ್ ಖಾತೆ, ನಿಶ್ಚಿತ ಠೇವಣಿ ಮತ್ತು ಲಾಕರ್‌ಗಳಿಗೆ ನಾಮಿನಿಯನ್ನು ಹೆಸರಿಸುವುದು ಅವಶ್ಯಕ. ಹೂಡಿಕೆಗಳು ಮತ್ತು ಬ್ಯಾಂಕ್, ವಿಮೆಗಳ ವಿವರಗಳನ್ನು ಕುಟುಂಬದ ಸದಸ್ಯರಿಗೆ ತಿಳಿಸಿರಬೇಕು.
ಆಧಾರ್-ಪಾನ್‌ಕಾರ್ಡ್‌ಗಳಲ್ಲಿ ಹೆಸರು ಮತ್ತು ವಿಳಾಸಗಳು ಬ್ಯಾಂಕ್ ಖಾತೆಯ ದಾಖಲೆ ಯೊಂದಿಗೆ ತಾಳೆಯಾಗುವಂತೆ ನೋಡಿಕೊಳ್ಳಬೇಕು. ಬ್ಯಾಂಕ್‌ಗಳು ವಂಚನೆಯನ್ನು ತಡೆಯುವ ಮತ್ತು ಸರಿಯಾದ ವ್ಯಕ್ತಿಗೇ ಹಣವು ಸೇರಬೇಕು ಎಂಬ ಉದ್ದೇಶದಿಂದ ಕಟ್ಟುನಿಟ್ಟಾದ ದಾಖಲೆಗಳನ್ನು ಕೇಳುತ್ತವೆ. ಆದರೆ ನಾಮಿನಿಯ ಹೆಸರನ್ನು ನಮೂದಿಸದಿದ್ದರೆ ಪ್ರತಿ ವರ್ಷ ಬ್ಯಾಂಕ್‌ಗಳ ವಿರುದ್ಧ ದೂರುಗಳು ಹೆಚ್ಚುತ್ತಿ ರುವುದಕ್ಕೆ ಕಾರಣವೇನು? ಯುಪಿಐ, ನೆಟ್ ಬ್ಯಾಂಕಿಂಗ್, ಎಟಿಎಂ ವಹಿವಾಟು ನಡೆಸುವಾಗ ಹಣ ಕಟ್ ಆಗಿ ಫಲಾನು ಭವಿಗೆ ತಲುಪದೆ ಇರುವ ಪ್ರಕರಣಗಳು ಹೆಚ್ಚುತ್ತಿವೆ. ಇವುಗಳನ್ನು ಸರಿಪಡಿಸಲು ಬ್ಯಾಂಕುಗಳು ವಿಳಂಬ ಮಾಡುವುದು ದೂರುಗಳಿಗೆ ಕಾರಣಗಳಂದಾಗಿದೆ.
ಬ್ಯಾಂಕ್ ಸಿಬ್ಬಂದಿ ತಮ್ಮ ಟಾರ್ಗೆಟ್ ಪೂರೈಸಲು ಗ್ರಾಹಕರಿಗೆ ಅಗತ್ಯವಿಲ್ಲದ ವಿಮೆ ಅಥವಾ ಮ್ಯೂಚುಯಲ್ ಫಂಡ್ ಯೋಜನೆ ದಾಟಿಸುವುದು ಕೂಡ ದೂರುಗಳಿಗೆ ಕಾರಣವಾಗ ಬಹುದು. ಕನಿಷ್ಠ ಬ್ಯಾಲೆ ಇಲ್ಲದಿರುವುದು, ಎಸ್‌ಎಂಎಸ್ ಶುಲ್ಕ ಅಥವಾ ಎಟಿಎಂ ಬಳಕೆಯ ಶುಲ್ಕಗಳ ಹೆಸರಿನಲ್ಲಿ ಹಣ ಕಡಿತಗೊಳಿಸುವುದು ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗುತ್ತಿದೆ.
ಆನ್ಲೈನ್ ವಂಚನೆಗೆ ಒಳಗಾದ ಗ್ರಾಹಕರು ಬ್ಯಾಂಕಿಗೆ ಹೋದಾಗ, ಬ್ಯಾಂಕ್‌ಗಳು ತಕ್ಷಣವೇ ಕ್ರಮ ಕೈಗೊಳ್ಳದೆ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಕೂಡ ದೂರುಗಳ ಸಂಖ್ಯೆ ಹೆಚ್ಚಲು ಕಾರಣವಾಗಿದೆ. ಕೆಲಸದ ಒತ್ತಡದಿಂದ ಸಿಬ್ಬಂದಿ ಗ್ರಾಹಕರೊಂದಿಗೆ ಒರಟಾಗಿ ನಡೆದುಕೊಂಡು ದೂರಿನ ತನಕ ಹೋಗಬಹುದು.
ಗ್ರಾಹಕರೂ ಓಟಿಪಿ, ಪಿನ್ ಅಥವಾ ಪಾಸ್‌ವರ್ಡ್‌ಅನ್ನು ಬ್ಯಾಂಕ್ ಸಿಬ್ಬಂದಿ ಸೇರಿದಂತೆ ಯಾರೊಂದಿಗೂ ಹಂಚಿಕೊಳ್ಳಬಾರದು. ಸೈಬರ್ ವಂಚಕರ ಬಗ್ಗೆ ಸದಾ ಎಚ್ಚರ ವಾಗಿರಬೇಕು. ಸಮಸ್ಯೆಯಾಗಬಹುದು. ವಾಸ್ತವವಾಗಿ ಬ್ಯಾಂಕುಗಳು ಗ್ರಾಹಕರೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುದರ ಕುರಿತು ಅತ್ಯಂತ ಸ್ಪಷ್ಟವಾದ ಮತ್ತು ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಆರ್‌ಬಿಐ ರೂಪಿಸಿದೆ.
ಬ್ಯಾಂಕ್ ಸಿಬ್ಬಂದಿ ಗ್ರಾಹಕರೊಂದಿಗೆ ಗೌರವ ಮತ್ತು ವಿನಯದಿಂದ ವರ್ತಿಸಬೇಕು. ವಯಸ್ಸು, ಲಿಂಗ, ಧರ್ಮ ಅಥವಾ ಜಾತಿಯ ಆಧಾರದ ಮೇಲೆ ಯಾವುದೇ ತಾರತಮ್ಯ ಮಾಡುವಂತಿಲ್ಲ. ವಿಶೇಷವಾಗಿ ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗೆ ಆದ್ಯತೆಯ ಸೇವೆ ನೀಡಬೇಕು.
ಬಡ್ಡಿದರಗಳು, ಸೇವಾ ಶುಲ್ಕಗಳು/ ದಂಡದ ಬಗ್ಗೆ ಗ್ರಾಹಕರಿಗೆ ಮುಂಚಿತವಾಗಿಯೇ ಸ್ಪಷ್ಟ ಮಾಹಿತಿ ನೀಡಬೇಕು. ಯಾವುದೇ ಗುಪ್ತ ಶುಲ್ಕಗಳನ್ನು (HiddenCharges) ವಿಧಿಸು ವಂತಿಲ್ಲ. ನಿಯಮಗಳು ಮತ್ತು ಷರತ್ತುಗಳನ್ನು ಗ್ರಾಹಕರಿಗೆ ಅರ್ಥವಾಗುವ ಭಾಷೆಯಲ್ಲಿ, ಸ್ಥಳೀಯ ಭಾಷೆಯಲ್ಲಿ ವಿವರಿಸಬೇಕು.
ಗ್ರಾಹಕರ ವೈಯಕ್ತಿಕ ಮಾಹಿತಿ ಮತ್ತು ಹಣಕಾಸಿನ ವಿವರಗಳನ್ನು ಬ್ಯಾಂಕ್ ಅತ್ಯಂತ ಗೌಪ್ಯವಾಗಿ ಇಡಬೇಕು. ಗ್ರಾಹಕರ ಅನುಮತಿ ಇಲ್ಲದೆ ಅವರ ಮಾಹಿತಿಯನ್ನು ಯಾವುದೇ ಮೂರನೇ ವ್ಯಕ್ತಿಗೆ ಅಥವಾ ಮಾರ್ಕೆಟಿಂಗ್ ಕಂಪನಿಗಳಿಗೆ ನೀಡುವಂತಿಲ್ಲ. ಪ್ರತಿಯೊಂದು ಬ್ಯಾಂಕ್ ಶಾಖೆಯಲ್ಲೂ ದೂರು ಪುಸ್ತಕ, ಆನ್ಲೈನ್ ವ್ಯವಸ್ಥೆ ಇರಲೇಬೇಕು.
ಗ್ರಾಹಕರು ನೀಡಿದ ದೂರನ್ನು ಒಂದು ತಿಂಗಳ ಒಳಗಾಗಿ ಬ್ಯಾಂಕ್ ಬಗೆಹರಿಸಬೇಕು. ಒಂದು ವೇಳೆ ಬ್ಯಾಂಕ್‌ನಿಂದ ಸರಿಯಾದ ಸ್ಪಂದನೆ ಸಿಗದಿದ್ದರೆ, ಗ್ರಾಹಕರು ಆರ್‌ಬಿಐ ವ್ಯಾಪ್ತಿ ಯಲ್ಲಿರುವ ಒಂಬ ಡ್ಸ್ಮನ್‌ಗೆ ದೂರು ನೀಡಬಹುದು. ಗ್ರಾಹಕರಿಗೆ ಅಗತ್ಯವಿಲ್ಲದ ವಿಮೆ ಅಥವಾ ಹೂಡಿಕೆ ಯೋಜನೆಗಳನ್ನು ಬಲವಂತವಾಗಿ ಮಾರಾಟ ಮಾಡುವಂತಿಲ್ಲ ( Misselling).
ಗ್ರಾಹಕರ ಆರ್ಥಿಕ ಸ್ಥಿತಿಗೆ ಸೂಕ್ತವಾದ ಉತ್ಪನ್ನಗಳನ್ನು ಮಾತ್ರ ಶಿಫಾರಸು ಮಾಡಬೇಕು. ದಾಖಲೆಗಳ ಪರಿಶೀಲನೆ ಮುಖ್ಯವಾದರೂ, ತುರ್ತು ಸಂದರ್ಭಗಳಲ್ಲಿ (ಉದಾಹರಣೆಗೆ ಅಂತ್ಯಕ್ರಿಯೆ) ಬ್ಯಾಂಕುಗಳು ವಿವೇಚನಾ ಅಧಿಕಾರ ಬಳಸಿ ಸಹಾಯ ಮಾಡಬೇಕು.
ಮರಣ ಹೊಂದಿದ ವ್ಯಕ್ತಿಯ ಖಾತೆಯಿಂದ ಹಣ ಬಿಡುಗಡೆ ಮಾಡಲು ಗ್ರಾಹಕರಿಗೆ ಅನಗತ್ಯ ತೊಂದರೆ ನೀಡಬಾರದು ಮತ್ತು ನಿಗದಿತ ಅವಧಿಯೊಳಗೆ ಕ್ಲೈಮ್ ಇತ್ಯರ್ಥಪಡಿಸಬೇಕು ಎಂದು ಆರ್ʼಬಿಐ ಸೂಚಿಸಿದೆ.
ಹೀಗಿದ್ದರೂ, ಆರ್‌ಬಿಐ ವರದಿಯ ಪ್ರಕಾರ ಒಂಬಡ್ಸ್ಮನ್ ಅಡಿಯಲ್ಲಿ 2024-25ರಲ್ಲಿ ಒಟ್ಟು 13 ಲಕ್ಷಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. 2023-24ರಲ್ಲಿ 11 ಲಕ್ಷದ 75 ಸಾವಿರ ದೂರುಗಳು ದಾಖಲಾಗಿತ್ತು. ಬ್ಯಾಂಕ್‌ಗಳಲ್ಲಿನ ಸೇವೆಗಳಿಗೆ ಸಂಬಂಧಿಸಿ ಹೆಚ್ಚಿನ ದೂರುಗಳು ಬಂದಿವೆ. ಸಾಲ, ಕ್ರೆಡಿಟ್ ಕಾರ್ಡ್, ಡಿಜಿಟಲ್ ಬ್ಯಾಂಕಿಂಗ್ ಕುರಿತ ದೂರುಗಳು ಸಾಕಷ್ಟಿವೆ.
ಭಾರತದಲ್ಲಿ ಶೇ.91ಮಂದಿ ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ. 58 ಕೋಟಿ ಪ್ರಧಾನ ಮಂತ್ರಿ ಜನ್‌ಧನ್ ಖಾತೆಗಳು ಇವೆ. ಜನ್ ಧನ್, ಆಧಾರ್ ಮತ್ತು ಮೊಬೈಲ್ ಲಿಂಕ್ ಆಗಿರುವುದರಿಂದ ಸರಕಾರದ ಸವಲತ್ತುಗಳು, ನೇರ ನಗದು ವರ್ಗಾವಣೆಗಳು ಜನಪ್ರಿಯ ವಾಗಿವೆ. ಹಾಗಾದರೆ ಕೆವೈಸಿ ದಾಖಲೆಗಳ ಅಪ್ಡೇಟ್ ಮಾಡಿಕೊಳ್ಳಬೇಕು.
ವಿಳಾಸ, ಫೋನ್ ಸಂಖ್ಯೆ ಅಥವಾ ಇಮೇಲ್ ಬದಲಾದಾಗ ಬ್ಯಾಂಕಿನಲ್ಲಿ ಅಪ್ಡೇಟ್ ಮಾಡಬೇಕು. ಬ್ಯಾಂಕಿಂಗ್ ಸೇವೆ ಎಂದರೆ ದೇಶದ ಆರ್ಥಿಕತೆಯನ್ನು ಕಟ್ಟುವ ಕೆಲಸವೂ ಹೌದು. 2025ರಜೂನ್ 30ರ ವೇಳೆಗೆ ಭಾರತೀಯ ಬ್ಯಾಂಕ್‌ಗಳಲ್ಲಿ ವಾರಸುದಾರರು ಇಲ್ಲದಿರುವ ಠೇವಣಿಗಳ ಮೊತ್ತ 74,580 ಕೋಟಿ ರುಪಾಯಿಗೆ ಏರಿಕೆಯಾಗಿದೆ!
ಎಸ್‌ಬಿಐ, ಪಿಎನ್‌ಬಿ, ಐಸಿಐಸಿಐ ಮೊದಲಾದ ಬ್ಯಾಂಕ್‌ಗಳಲ್ಲಿ ಈ ರೀತಿ ಅನ್ ಕ್ಲೈಮ್ಡ್ ಡೆಪಾಸಿಟ್‌ಗಳು ಇವೆ! ಪರ್ಸನಲ್ ಫೈನಾನ್ಸ್ ವಿಚಾರದಲ್ಲಿ ಜನ ಎಷ್ಟೊಂದು ಹಿಂದುಳಿದಿ ದ್ದಾರೆ ಎಂಬುದಕ್ಕೆ ಇದೊಂದು ನಿದರ್ಶನವಾಗಿದೆ. ಅಮೆರಿಕ, ಯುರೋಪ್‌ನಂತಹ ಅಭಿವೃದ್ಧಿ ಹೊಂದಿರುವ ದೇಶಗಳಲ್ಲೂ ಅನ್‌ಕ್ಲೈಮ್ಡ್ ಡೆಪಾಸಿಟ್‌ಗಳ ದೊಡ್ಡ ಮೊತ್ತವಿದೆ. ಆದರೂ, ಸೇವೆಯ ಸುಧಾರಣೆಗೆ ಅದು ನೆಪವಾಗಬಾರದು.
ಬ್ಯಾಂಕ್ ಸೇವೆ ಎಂಬುದು ಕೇವಲ ಹಣದ ವ್ಯವಹಾರವಲ್ಲ, ಅದು ಜನ ಸಾಮಾನ್ಯರು ಬ್ಯಾಂಕಿನ ಮೇಲೆ ಇಟ್ಟಿರುವ ‘ನಂಬಿಕೆ’. ತಂತ್ರಜ್ಞಾನದ ನೆರವಿನಿಂದಾಗಿ ಇವತ್ತು ಎಷ್ಟೋ ಬ್ಯಾಂಕಿಂಗ್ ಸೇವೆಗಳನ್ನು ಆನ್ಲೈನ್ ಮೂಲಕವೇ ಪಡೆಯಬಹುದು. ಬ್ಯಾಂಕ್ ಶಾಖೆಗೆ ಹೇಗಲೇಬೇಕೆಂದೇನಿಲ್ಲ. ಈ ಕುರಿತ ಹಣಕಾಸು ಸಾಕ್ಷರತೆಯನ್ನು ಹೆಚ್ಚಿಸುವ ಜವಾಬ್ದಾರಿ ಯೂ ಬ್ಯಾಂಕ್‌ಗಳ ಮೇಲಿದೆ. ಬ್ಯಾಂಕ್‌ಗಳು ಸಾಲದ ಮೇಲಿನ ಬಡ್ಡಿ ಮಾತ್ರವಲ್ಲದೆ, ಸೇವಾ ಶುಲ್ಕಗಳ ಮೂಲಕವೂ ಆದಾಯಗಳಿಸುತ್ತವೆ.
ಮಿನಿಮಮ್ ಬ್ಯಾಲೆನ್ಸ್, ಎಟಿಎಂ, ಎಸ್‌ಎಂಎಸ್ ಅಲರ್ಟ್, ಚೆಕ್ ಬುಕ್, ಕಾರ್ಡ್ ಶುಲ್ಕ ಇರುತ್ತವೆ. ಹೀಗಿರುವಾಗ ಸೇವೆಯ ಗುಣಮಟ್ಟ ವೃದ್ಧಿಯೂ ಮುಖ್ಯವಾಗುತ್ತದೆ.