ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಪತ್ರಕರ್ತರು ಟಂಕಿಸೋದಕ್ಕೂ ಸೈ, ಟೀಕಿಸೋದಕ್ಕೂ ಸೈ !

ಪತ್ರಕರ್ತರನ್ನು ಎದುರಿಸಬೇಕಲ್ಲ ಎಂದು ಮೊದಲೇ ಯೋಚಿಸಿದ್ದರೆ, ಆತ ಬುದ್ಧನಾಗುವ ಯೋಚನೆಯನ್ನೇ ಕೈ ಬಿಡುತ್ತಿದ್ದ. ಪತ್ರಕರ್ತರು ಅವನನ್ನು ಸುಮ್ಮನೆ ಬಿಡ್ತಾ ಇದ್ದರಾ?" ಓಶೋ ಮಾತಿನಲ್ಲಿ ಉತ್ಪ್ರೇಕ್ಷೆಯೇನೂ ಇಲ್ಲ, ಗೌತಮ ಬುದ್ಧನೇನಾದರೂ ಈಗಿರುವಂತೆ 247 ಟಿವಿ ಪತ್ರಕರ್ತರಿಗೇನಾದರೂ ಸಿಕ್ಕಿದ್ದರೆ?! ಮುಗಿಯಿತು ಕತೆ. ಬುದ್ಧ ಒಂದು ಚಾನೆಲ್ ಸ್ಟುಡಿಯೋಕ್ಕೆ ಹೋಗಿ ಬಂದು ಸುಸ್ತಾಗಿ ಸಾಕಪ್ಪಾ ಸಾಕು ಎಂದು ಹೇಳಿ ಬಿಡುತ್ತಿದ್ದ.

ಪತ್ರಕರ್ತರು ಟಂಕಿಸೋದಕ್ಕೂ ಸೈ, ಟೀಕಿಸೋದಕ್ಕೂ ಸೈ !

-

ನೂರೆಂಟು ವಿಶ್ವ

ಅನೇಕ ಸಲ ಅನಿಸಿದ್ದಿದೆ. ಈಗಿನ ಪತ್ರಿಕೋದ್ಯಮ, ಅದರಲ್ಲೂ ವಿಶೇಷವಾಗಿ ಟಿವಿ ಪತ್ರಿಕೋ ದ್ಯಮ ಹಾಗೂ ಪತ್ರಕರ್ತರನ್ನು ನೋಡಿದಿದ್ದರೆ, ಓಶೋ ರಜನೀಶ್ ಏನು ಹೇಳುತ್ತಿದ್ದರು? ಹೇಗೆ ಪ್ರತಿಕ್ರಿಯಿಸುತ್ತಿದ್ದರು ಎಂಬ ಬಗ್ಗೆ ಅತೀವ ಕುತೂಹಲವಿದೆ. ಈ ಪ್ರಶ್ನೆಗೆ ಏನೇ ಉತ್ತರ ಹೇಳಿದರೂ ಅದು ಕಪೋಲ ಕಲ್ಪಿತ. ಯಾಕೆಂದರೆ ಓಶೋ ನಮ್ಮ ನಡುವೆ ಇಲ್ಲ.

ಇತ್ತೀಚೆಗೆ ಇದೇ ಪ್ರಶ್ನೆ ನಮ್ಮ ಮಧ್ಯೆ ಇಣುಕಿ ಹಾಕಿತು. ಓಶೋ ಅವರೊಂದಿಗೆ ಕೊನೆಯ ಹತ್ತು ವರ್ಷ ಜತೆಯಲ್ಲಿದ್ದ ಸ್ನೇಹಿತರೊಬ್ಬರು ಸಿಕ್ಕಾಗ ಕೂಡ ಈ ಪ್ರಶ್ನೆ ಎದುರಾಯಿತು. “ಖಂಡಿತವಾಗಿಯೂ ಓಶೋ ಈಗಿನ ಜರ್ನಲಿಸಂ ಅನ್ನು ಒಪ್ಪುತ್ತಿರಲಿಲ್ಲ. ಎಲ್ಲ ಕೆಲಸ ಬಿಟ್ಟು ಪತ್ರಕರ್ತರ ಜತೆ ಸಂಘರ್ಷಕ್ಕಿಳಿದಿರುತ್ತಿದ್ದರು.

ನೀವು ಪತ್ರಕರ್ತರು ಅವರ ಹಿಂದೆ ಬಿದ್ದಿರುತ್ತಿದ್ದಿರಿ. ಅದನ್ನು ಅವರು ಸಹಿಸುತ್ತಿರಲಿಲ್ಲ. ಆ ದಿನಗಳಲ್ಲಿಯೇ ಅವರು ಪತ್ರಕರ್ತರನ್ನು ಟೀಕಿಸದೇ ಬಿಟ್ಟವರಲ್ಲ. ಈಗ ಬಿಡ್ತಾ ಇದ್ದರಾ? ಅಷ್ಟಕ್ಕೂ ಈ ಪತ್ರಿಕೋದ್ಯಮವನ್ನಂತೂ ಅವರು ಸಹಿಸುತ್ತಿರಲಿಲ್ಲ" ಎಂದು ತಮ್ಮ ವಾದದ ಸರಣಿಗೆ ಕಿಡಿ ಹಚ್ಚಿದರು.

“ಪತ್ರಿಕೋದ್ಯಮ ಇದೆಯಲ್ಲ ಅದನ್ನು ಗಂಭೀರವಾಗಿ ಪರಿಗಣಿಸಬೇಡಿ, ಪತ್ರಕರ್ತರನ್ನು ಪರಿಗಣಿಸಬೇಡಿ, ಗಂಭೀರವಾಗಿಯೂ ಪರಿಗಣಿಸಬೇಡಿ ಎಂದು ಓಶೋ ಹೇಳುತ್ತಿದ್ದರು" ಎಂದು ನನ್ನನ್ನು ಕೆದಕಿದರು. “ಓಶೋ ಪತ್ರಕರ್ತರಿಂದ ಯಾವ ಪರಿ ಹಾನಿಯನ್ನು ಅನುಭವಿಸಿರಬಹುದು ಅಲ್ವಾ?" ಎಂದು ಕೇಳಿದರು.

ಇದನ್ನೂ ಓದಿ: Vishweshwar Bhat Column: ರಿಸ್ಕ್‌ ಇದ್ದಾಗಲೇ ಬದುಕು ಮತ್ತಷ್ಟು ರೋಚಕ

“ಗೊತ್ತಿರಲಿ, ಓಶೋ ಅವರನ್ನು ದೊಡ್ಡ ವ್ಯಕ್ತಿಯನ್ನಾಗಿ ಮಾಡಿದವರು ಸಹ ಪತ್ರಕರ್ತರೇ" ಎಂದಾಗ ಅವರು ಇಲ್ಲ ಎಂದು ವಾದಿಸಲಿಲ್ಲ. “ಓಶೋಗೆ ಪತ್ರಕರ್ತರ ಬಗ್ಗೆ ವಿಚಿತ್ರ ಕಲ್ಪನೆ ಯಿತ್ತು. ಒಳ್ಳೆಯ ಭಾವನೆಯಂತೂ ಖಂಡಿತ. ಇರಲಿಲ್ಲ..." ಎಂದು ಏನೋ ಹೇಳಲು ಹೋದೆ.

ಆ ಓಶೋ ಅನುಯಾಯಿ ಸ್ನೇಹಿತ ನನ್ನ ಮಾತನ್ನು ಅರ್ಧಕ್ಕೆ ತಡೆದು, “ಈ ಮಾತು ಓಶೋ ಗೆ ಮಾತ್ರ ಅಲ್ಲ, ಈಗಲೂ ನೂರರಲ್ಲಿ ತೊಂಬತ್ತು ಮಂದಿಯನ್ನು ಕೇಳಿ, ಅವರು ಪತ್ರಕರ್ತ ರನ್ನು ಇಷ್ಟಪಡುವುದಿಲ್ಲ" ಅಂದರು.

ಓಶೋ ಹೇಳುತ್ತಿದ್ದರು- “ಗೌತಮ ಬುದ್ಧನ ಕಾಲದನಾದರೂ ಪತ್ರಕರ್ತನಿದ್ದರೆ ಆತ ದೇಶ ಬಿಟ್ಟು ಹೋಗುತ್ತಿದ್ದ ಅಥವಾ ಬಾಯಿಯನ್ನೇ ಬಿಡದೇ ಮೊದಲೇ ಬುದ್ಧನಾಗಿ ಬಿಡುತ್ತಿದ್ದ. ಪತ್ರಕರ್ತರು ಅವನ ಜೀವನವನ್ನು ಹೈರಾಣ ಮಾಡಿ ಬಿಡುತ್ತಿದ್ದರು. ನೀನು ಮನೆ ಬಿಟ್ಟು ಬಂದಿದ್ದು ಸರಿಯಾ? ಹೇಳದೇ ಕೇಳದೇ ಯಾಕೆ ಓಡಿ ಬಂದೆ? ಹೆಂಡತಿ-ಮಕ್ಕಳನ್ನು ಬಿಟ್ಟು ಓಡಿ ಹೋಗುವಂಥ ಪ್ರಮಾದವನ್ನು ಅವರು ಮಾಡಿದ್ದರಾ? ನಿನ್ನ ಕೃತ್ಯದಿಂದ ನಿನ್ನನ್ನು ನಂಬಿದವರಿಗೆ ದ್ರೋಹ ಮಾಡಿದಂತೆ ಆಗಲಿಲ್ಲವಾ? ಅಷ್ಟಕ್ಕೂ ನೀನೇನು ಸಾಧಿಸಿದೆ? ನಿನ್ನ ಜವಾಬ್ದಾರಿಯಿಂದ ನುಣುಚಿಕೊಂಡಂತೆ ಆಗಲಿಲ್ಲವಾ? ಎಂದೆಲ್ಲ ಬುದ್ಧನಿಗೆ ಪ್ರಶ್ನೆ ಕೇಳು ತ್ತಿದ್ದರು.

Screenshot_1 ಋ

ಪತ್ರಕರ್ತರನ್ನು ಎದುರಿಸಬೇಕಲ್ಲ ಎಂದು ಮೊದಲೇ ಯೋಚಿಸಿದ್ದರೆ, ಆತ ಬುದ್ಧನಾಗುವ ಯೋಚನೆಯನ್ನೇ ಕೈ ಬಿಡುತ್ತಿದ್ದ. ಪತ್ರಕರ್ತರು ಅವನನ್ನು ಸುಮ್ಮನೆ ಬಿಡ್ತಾ ಇದ್ದರಾ?" ಓಶೋ ಮಾತಿನಲ್ಲಿ ಉತ್ಪ್ರೇಕ್ಷೆಯೇನೂ ಇಲ್ಲ, ಗೌತಮ ಬುದ್ಧನೇನಾದರೂ ಈಗಿರುವಂತೆ 247 ಟಿವಿ ಪತ್ರಕರ್ತರಿಗೇನಾದರೂ ಸಿಕ್ಕಿದ್ದರೆ?! ಮುಗಿಯಿತು ಕತೆ. ಬುದ್ಧ ಒಂದು ಚಾನೆಲ್ ಸ್ಟುಡಿಯೋಕ್ಕೆ ಹೋಗಿ ಬಂದು ಸುಸ್ತಾಗಿ ಸಾಕಪ್ಪಾ ಸಾಕು ಎಂದು ಹೇಳಿ ಬಿಡುತ್ತಿದ್ದ.

ಓಶೋ ಅನುಯಾಯಿ ಎರಡು ಪ್ರಸಂಗಗಳನ್ನು ವಿವರಿಸಿದರು. ಒಮ್ಮೆ ಬುದ್ಧ ನಡೆದು ಹೋಗುತ್ತಿದ್ದನಂತೆ. ಆಗ ಹೆಣ್ಣು ಮಗಳೊಬ್ಬಳು ಓಡೋಡಿ ಬಂದು ಅವನ ಕಾಲಿಗೆ ನಮಸ್ಕ ರಿಸಿ ಹೋದಳಂತೆ. ಬುದ್ಧ ಸುಮ್ಮನೆ ನಕ್ಕು ಆಶೀರ್ವದಿಸಿದನಂತೆ. ಕೆಲ ಹೊತ್ತಿನ ನಂತರ ಆಕೆಯ ಗಂಡ ಸಹ ಕಾಲಿಗೆರಗಿದನಂತೆ. ಬುದ್ಧ ಪುನಃ ನಕ್ಕು ಆಶೀರ್ವದಿಸಿದನಂತೆ. ಆ ಹೆಂಗಸನ್ನಾಗಲಿ, ಗಂಡಸನಾಗಲಿ, ಬುದ್ಧನನ್ನಾಗಲಿ, ಯಾರೂ ಕೇಳಲಿಲ್ಲ. ಪ್ರಶ್ನಿಸಲಿಲ್ಲ. ಆ ಪ್ರಸಂಗ ತೀರಾ ಸಹಜ ಎಂಬಂತೆ ನಡೆದುಹೋಯಿತು.

ಎರಡನೇ ಪ್ರಸಂಗ: ಗಾಂಧೀಜಿ ಬಂಗಾಲದ ನೌಖಾಲಿ ಎಂಬ ಊರಿನಲ್ಲಿ ನಡೆದು ಹೋಗು ತ್ತಿದ್ದರು. ಹೆಂಗಸೊಬ್ಬಳು ಬಂದು ಗಾಂಧೀಜಿ ಕಾಲಿಗೆ ನಮಸ್ಕರಿಸಿ ಹೋದಳು. ಗಾಂಧೀಜಿ ನಕ್ಕು ಸುಮ್ಮನಾದರು. ಆಕೆ ಹೋಗುವಾಗ, “ಕೆಲ ಹೊತ್ತಿನಲ್ಲಿ ನನ್ನ ಗಂಡ ಬಂದು ನಿಮ್ಮ ಕಾಲಿಗೆರಗಲಿದ್ದಾನೆ. ಅವಕಾಶ ಕೊಡಿ" ಎಂದಳು. ಗಾಂಧೀಜಿ ಸಮ್ಮತಿಸಿದರು.

ಹದಿನೈದು ನಿಮಿಷಗಳ ಬಳಿಕ ಆ ಹೆಂಗಸಿನ ಪತಿ ಬಂದು ಗಾಂಧೀಜಿ ಕಾಲಿಗೆರಗಿದ. ಗಾಂಧೀಜಿ ಅವನನ್ನು ಕಂಡು ನಕ್ಕು ಸುಮ್ಮನಾದರು. ಈ ಘಟನೆಯನ್ನು ಪತ್ರಕರ್ತನೊಬ್ಬ ಗಮನಿಸುತ್ತಿದ್ದ. ಮೊದಲು ಪತ್ನಿ ಬಂದು ಗಾಂಧೀಜಿ ಕಾಲಿಗೆರಗಿ ಹೋಗಿ, ಆನಂತರ ತನ್ನ ಗಂಡನನ್ನು ಕಳಿಸಿಕೊಟ್ಟಳು.

ಕಾರಣ ಅವರಿಬ್ಬರ ಪೈಕಿ ಒಬ್ಬರಿಗೆ ಮಾತ್ರ ತೊಡಲು ಬಟ್ಟೆಯಿತ್ತು. ಗಾಂಧೀಜಿ ಕಾಲಿಗೆರಗಿದ ಪತ್ನಿ ಗುಡಿಸಲಿಗೆ ಹೋಗಿ ಬಟ್ಟೆ ಬಿಚ್ಚಿಕೊಟ್ಟಳು. ಗಂಡ ಅದೇ ಬಟ್ಟೆಯಿಂದ ದೇಹ ಮುಚ್ಚಿ ಕೊಂಡು ಬಂದು ಗಾಂಧೀಜಿಗೆ ನಮಸ್ಕರಿಸಿದ್ದ. ಇದನ್ನೇ ಪತ್ರಕರ್ತ ದೊಡ್ಡ ಸುದ್ದಿ ಮಾಡಿ ಬಿಟ್ಟ, ‘ಗಾಂಧೀಜಿಗೆ ಭಾರತದಲ್ಲಿ ಅದೆಂಥ ಬಡತನವಿದೆ ಎಂಬುದರ ಪರಿವೆಯೇ ಇಲ್ಲ, ತೊಡಲು ಬಟ್ಟೆ ಇಲ್ಲದಿದ್ದರೂ ಅವರ ಮೇಲೆ ಲಕ್ಷ್ಯ ಇಲ್ಲ.

ಕಾಲಿಗೆ ನಮಸ್ಕರಿಸಿಕೊಳ್ಳುವುದೇ ಅವರಿಗೆ ಮುಖ್ಯವಾದಂತೆ ತೋರುತ್ತಿದೆ. ಇದು ಅವರ ವ್ಯಕ್ತಿತ್ವಕ್ಕೆ ತಕ್ಕುದಾದ ವರ್ತನೆಯಲ್ಲ, ಒಂದು ಕ್ಷಣ ಆ ಗಂಡ-ಹೆಂಡಿರ ಕಷ್ಟ-ಸುಖ ಕೇಳಿ ದ್ದರೆ ಅವರಿಗೆ ವಸ್ತುಸ್ಥಿತಿ ಗೊತ್ತಾಗುತ್ತಿತ್ತು. ಗಾಂಧೀಜಿ ತಮ್ಮ ವರ್ತನೆಯನ್ನು ಬದಲಿಸಿ ಕೊಳ್ಳಬೇಕು...’ ಎಂಬ ಧಾಟಿಯಲ್ಲಿ ವರದಿ ಬರೆದುಬಿಟ್ಟ!

ಗಾಂಧೀಜಿಗೆ ಹೇಗಾಗಿರಬೇಡ? ಮರುದಿನ ಗಾಂಧೀಜಿ ಈ ಬಗ್ಗೆ ಸ್ಪಷ್ಟನೆ ನೀಡಬೇಕಾಯಿತು. ಸದ್ಯ ಗೌತಮ ಬುದ್ಧ ಬಚಾವ್ ಆದ, ಆಗ ಪತ್ರಕರ್ತರಿರಲಿಲ್ಲ ನೋಡಿ ಎಂದರು. ಆಗ ಪತ್ರಿಕೋದ್ಯಮ ಈಗಿನಂತೆ ಇರಲಿಲ್ಲ. ಆದರೂ ಓಶೋ ಅತ್ಯಂತ ವಿವಾದಾತ್ಮಕ ವ್ಯಕ್ತಿ ಎಂದೆನಿಸಿಕೊಂಡರು. ಈಗಿನ ಟಿ.ವಿ. ಪತ್ರಕರ್ತರನ್ನು ನೋಡಿದ್ದಿದ್ದರೆ ಅವರು ಏನೆನ್ನುತ್ತಿದ್ದ ರೋ ಏನೋ? ಒಮ್ಮೆ ಓಶೋ ಅವರನ್ನು ಯಾರೋ ಕೇಳಿದ್ದರು- “ಆರೋಗ್ಯಕರ ಪತ್ರಿಕೋ ದ್ಯಮ ಅಂದರೇನು? ಇವತ್ತಿನ ಸಂದರ್ಭದಲ್ಲಿ ಸಕಾರಾತ್ಮಕ ಸುದ್ದಿಗಳ ಪ್ರಕಟಣೆಯ ಮೂಲಕವೇ ಒಂದು ಪತ್ರಿಕೆ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಲು, ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವೆ? ನಿಮ್ಮ ಪ್ರಕಾರ ಇವತ್ತಿನ ಸಂದರ್ಭದಲ್ಲಿ ಮಾಧ್ಯಮದ ಹೊಣೆ ಗಾರಿಕೆ ಏನು ಎಂಬುದನ್ನು ಹೇಳುವಿರಾ?" ಅದಕ್ಕೆ ಓಶೋ ಹೇಳಿದ್ದರು- “ಒಬ್ಬ ಮನುಷ್ಯನ ಇಡೀ ವ್ಯಕ್ತಿತ್ವವನ್ನೇ ಬದಲಿಸಬಲ್ಲಂಥ ಸಾಮರ್ಥ್ಯವನ್ನು ಪತ್ರಿಕೋದ್ಯಮ ಹೊಂದಿದೆ.

ಒಂದು ಪತ್ರಿಕೆ ಎಂದರೆ, ಅದು ಬರೀ ಅವರಿವರ ಹೇಳಿಕೆಗಳ ಸಂಕಲನವಲ್ಲ, ನಿನ್ನೆ ಮೊನ್ನೆ ನಡೆದ ಸುದ್ದಿಗಳ ದಾಖಲೀಕರಣವಷ್ಟೆ ಅಲ್ಲ. ಅದು, ಅರ್ಥಪೂರ್ಣ ಸಂಗತಿಗಳ, ವಿಶಿಷ್ಟ ಛಾಯಾಚಿತ್ರಗಳ ಒಂದು ಬುಟ್ಟಿ, ಒಂದು ಪತ್ರಿಕೆಯೊಳಗೆ ಎಲ್ಲರಿಗೂ ಅರ್ಥವಾಗುವಂಥ ಅಪರೂಪದ ಸಾಹಿತ್ಯವೊಂದು ಅಡಗಿರುತ್ತದೆ; ಪತ್ರಿಕೆ ಓದಿದ ನಂತರ ಒಂದು ಪುಟ್ಟ ಬದಲಾವಣೆಗೆ ಒಬ್ಬ ವ್ಯಕ್ತಿ ಮನಸ್ಸು ಮಾಡಿದನೆಂದರೆ, ಅದೇ ಆರೋಗ್ಯಕರ ಪತ್ರಿಕೋ ದ್ಯಮದ ಲಕ್ಷಣ ಎಂದು ನಾನು ಭಾವಿಸುತ್ತೇನೆ".

ಇಲ್ಲಿ ಒಂದು ವಿಷಯವನ್ನು ಎಲ್ಲರೂ ಗಮನಿಸಬೇಕು. ಪತ್ರಿಕೆ ಎಂದರೆ (ಅದು ದೈನಿಕ ಆಗಿರಬಹುದು ಅಥವಾ ಮಾಸಿಕ ಆಗಿರಬಹುದು) ಅದು ಸುದ್ದಿಗಳನ್ನು ಹೊತ್ತು ತರುತ್ತದೆ ಎಂದೇ ಹಲವರು ಭಾವಿಸಿದ್ದಾರೆ.

ಪತ್ರಿಕೋದ್ಯಮದ ವಿಶಾಲ ಜಗತ್ತಿನಲ್ಲಿ ಸುದ್ದಿಗಳಿಂದಾಚೆಗೂ ಮತ್ತೇನೋ ವಿಶೇಷವಿದೆ ಎಂದು ಹೆಚ್ಚಿನವರು ಯೋಚಿಸುವುದೇ ಇಲ್ಲ. ಈ ಕಾರಣದಿಂದಲೇ ಇಂದಿನ ಪತ್ರಿಕೆ ನಾಳೆ ರದ್ದಿ ಎಂದು ಕರೆಸಿಕೊಳ್ಳುತ್ತದೆ. ಈ ಕಾರಣದಿಂದಲೇ ಹಲವರು- ‘ಅದು ನಿನ್ನೆಯ ಪೇಪರ್ ತಾನೆ? ಅದರನೂ ಅಂಥಾ ಸ್ವಾರಸ್ಯವಿಲ್ಲ. ತೂಕಕ್ಕೆ ಹಾಕಿದ್ರಾಯ್ತು ಬಿಡಿ’ ಅಂದು ಬಿಡುತ್ತಾರೆ.

ಉಹುಂ, ಒಂದು ಪತ್ರಿಕೆಯ ಹೊಣೆ ಒಂದು ದಿನದ ಸುದ್ದಿಯನ್ನು ಹೇಳುವುದಕ್ಕಷ್ಟೆ ಸೀಮಿತ ವಲ್ಲ. ಅದು ಎಂದೆಂದಿಗೂ ಪ್ರಸ್ತುತ ಎಂಬಂಥ ಬರಹಗಳ ಸಂಗ್ರಹವೂ ಆಗಬೇಕಾಗುತ್ತದೆ. ಹೀಗೆ ಆಗಬೇಕಾದರೆ ಪ್ರಕಟವಾಗುವ ಬರಹದಲ್ಲಿ Something Special ಎಂಬಂಥ ಜೀವಂತಿಕೆ ಇರಬೇಕಾಗುತ್ತದೆ. ಅಂಥದೊಂದು ಅಪರೂಪದ ವಸ್ತು ವಿಶೇಷ ದಾಸ್ತೋ ವಸ್ಕಿಯ ಕಾದಂಬರಿಗಳಲ್ಲಿ, ಲಿಯೋ ಟಾಲ್ ಸ್ಟಾಯ್, ಆಂಟನ್ ಚೆಕಾಫ್, ತರ್ಗನೇವ್, ರವೀಂದ್ರನಾಥ ಟ್ಯಾಗೋರ್ ಮುಂತಾದವರ ಬರಹಗಳಲ್ಲಿತ್ತು. ‌

ಒಂದು ಮಾನವೀಯ ಕಾಳಜಿಯನ್ನು ಹೊಂದಿದ್ದ ಕಾರಣದಿಂದಲೇ ಈ ಮಹನೀಯರ ಬರಹಗಳು ಕಾಲ-ದೇಶ ಹಾಗೂ ವರ್ತಮಾನದ ಸಂದರ್ಭವನ್ನು ಮೀರಿ ಜನಪ್ರಿಯ‌ ವಾದವು, ಸಾರ್ವಕಾಲಿಕ ಶ್ರೇಷ್ಠ ಬರಹಗಳು ಅನ್ನಿಸಿಕೊಂಡವು. ಅನುಮಾನವೇ ಬೇಡ. ಎಲ್ಲ ಕಾಲಕ್ಕೂ ಸಲ್ಲುವಂಥ ಅದೆಷ್ಟೋ ಬರಹಗಳಿಗೆ ಪತ್ರಿಕೋದ್ಯಮ ಕೂಡ ವೇದಿಕೆಯಾಗ ಬಲ್ಲದು. ಮುಖ್ಯವಾಗಿ, ಇಂಥದೊಂದು ಮಾನವೀಯ ಅಂತಃಕರಣದ ಬರಹಗಳನ್ನು ಪ್ರಕಟಿಸುವ ಜನರಿಗೆ ಅದನ್ನು ಪರಿಚಯಿಸುವ ಮನಸ್ಸು ಮಾಧ್ಯಮ ಕ್ಷೇತ್ರದ ಸಾರಥಿಗಳಿಗೆ ಇರಬೇಕು.

ಇವತ್ತು ಪತ್ರಿಕೆಗಳಲ್ಲಿ ತುಂಬ ಹೆಚ್ಚು ಜಾಗವನ್ನು ಆಕ್ರಮಿಸುವ ವಿಷಯಗಳು ಯಾವುವು ಹೇಳಿ: ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರದಂಥ ಕ್ರೈಮ್ ಸುದ್ದಿಗಳು, ರಾಜಕಾರಣಿಗಳ ಹೇಳಿಕೆಗಳನ್ನೇ, ಅವರ ಭ್ರಷ್ಟಾಚಾರವನ್ನೇ ಸಾರುವ ಸುದ್ದಿಗಳು. ಇಂಥ ಸುದ್ದಿಗಳಿಗೆ ಪ್ರಾಮುಖ್ಯ ಕೊಡುವುದೇ ತಪ್ಪು. ಒಂದು ಕೊಲೆ ಎಂದಿಟ್ಟುಕೊಳ್ಳಿ.

ಆ ಕೊಲೆ ಹೇಗೆ ನಡೆಯಿತು ಎಂದು ಆರು ಪ್ಯಾರಾಗಳಷ್ಟು ಉದ್ದದ ಸುದ್ದಿ ಬರೆದರೆ ಅದರಿಂದ ಆಗುವ ಉಪಯೋಗವಾದರೂ ಏನು? ಅದೇ ರೀತಿ, ಒಬ್ಬ ರಾಜಕಾರಣಿಯ ಭಾಷಣವನ್ನೇ ಅರ್ಧಪುಟ ಪ್ರಕಟಿಸಿದರೆ ಅದರಿಂದ ಆಗುವ ಸಾಧನೆಯಾದರೂ ಏನು? ನಿಜ ಹೇಳಬೇಕೆಂದರೆ, ಇಂಥವನ್ನೆಲ್ಲ ಸಂಕ್ಷಿಪ್ತ ಸುದ್ದಿಗಳು ಎಂದು ಮಾತ್ರ ಭಾವಿಸಿದರೆ ಸಾಕು. ಹೀಗೆ ಮಾಡುವುದರಿಂದ ಜನಸಾಮಾನ್ಯರಿಗೆ ಮಾನಸಿಕ ನೆಮ್ಮದಿಯಂತೂ ಖಂಡಿತ ದೊರೆ ಯುತ್ತದೆ.

‘ಅಯ್ಯೋ, ಕ್ರೈಂ ಹಾಗೂ ರಾಜಕೀಯದ ಸುದ್ದಿಗಳನ್ನೇ ಕಡೆಗಣಿಸಿದರೆ ಪತ್ರಿಕೆಯ ಪುಟಗಳನ್ನು ತುಂಬಿಸುವುದು ಹೇಗೆ?’ ಎಂದು ಯಾರಾದರೂ ಪ್ರಶ್ನಿಸಿದರೆ, ಅದಕ್ಕೂ ಇಲ್ಲಿ ಉತ್ತರವಿದೆ. ನಮ್ಮ ಮಧ್ಯೆ ಕವಿಗಳಿದ್ದಾರೆ, ಲೇಖಕರಿದ್ದಾರೆ, ಕಲಾವಿದರಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಅಸಾಮಾನ್ಯ ಸಾಧನೆ ಮಾಡಿದವರಿದ್ದಾರೆ.

ಅಂಥವರ ಬದುಕಿನಲ್ಲಿ ಆಗಿಹೋದ ಪ್ರಮುಖ ಘಟನೆಗಳ ಬಗ್ಗೆ ಬರೆಯಬಹುದು. ಸಾಧ್ಯ ವಾದರೆ ಅವರಿಂದಲೇ ಬರೆಸಬಹುದು. ಇದರಿಂದ ಆಗುವ ಪರಿಣಾಮ ಊಹೆಗೆ ಸಿಲುಕ ದಂಥದ್ದು. ಇವತ್ತು ಕೋಟ್ಯಧಿಪತಿ ಅನ್ನಿಸಿಕೊಂಡಿರುವ ವ್ಯಕ್ತಿ, ‘ಒಂದು ಕಾಲದಲ್ಲಿ ನಾನೂ ಪೈಸೆ ಪೈಸೆಗೆ ಪರದಾಡುತ್ತಿದ್ದೆ’ ಎಂದು ಹೇಳಿಕೊಂಡರೆ, ಅದು ಹಲವರನ್ನು ತಟ್ಟುತ್ತದೆ.

ಒಂದೊಂದೇ ಸಂಕಷ್ಟವನ್ನು ಹೇಗೆ ಮೆಟ್ಟಿನಿಂತೆ ಎಂದು ಶ್ರೀಮಂತನೊಬ್ಬ ವಿವರಿಸಿ ಹೇಳಿದರೆ, ಅದು ಹತ್ತು ಮಂದಿಗೆ ಸ್ಪೂರ್ತಿ ಕೊಡುತ್ತದೆ. ಅದೇ ರೀತಿ, ‘ಆರಂಭದ ದಿನಗಳಲ್ಲಿ ಕಥೆ, ಕಾದಂಬರಿ ಎಂದರೆ ಏನೆಂದೇ ಗೊತ್ತಿರಲಿಲ್ಲ’ ಎಂದು ಪ್ರಖ್ಯಾತ ಲೇಖಕನೊಬ್ಬ ಹೇಳಿ ಕೊಂಡರೆ, ಆಗ ತಾನೆ ಬರೆಯಲು ಹೊರಟವರಿಗೆ ಈ ಮಾತು ಸಂಜೀವಿನಿಯಂತೆ ಕಾಣು ತ್ತದೆ.

ಹಾಗೆಯೇ, ಒಂದು ಅಪರೂಪದ ಕಲಾಕೃತಿ ರಚನೆಗೆ ಸ್ಪೂರ್ತಿ ಯಾವುದೆಂದು ಚಿತ್ರಕಾರ ನೊಬ್ಬ ವಿವರಿಸಿ ಹೇಳಿದರೆ, ಅದು ಹತ್ತು ಮಂದಿ ಕಲಾವಿದರಿಗೆ ದಾರಿದೀಪವಾಗುತ್ತದೆ. ಹಾಗಾಗಿ ಇಂಥ ಸುದ್ದಿಗಳಿಗೆ ಪ್ರಾಮುಖ್ಯ ನೀಡುವುದು ಪತ್ರಿಕೋದ್ಯಮದ ಕೆಲಸವಾಗಬೇಕು. ಮನಸ್ಸಿಗೆ ಕಿರಿಕಿರಿ ಉಂಟುಮಾಡುವ ಅಪರಾಧ ಸುದ್ದಿಗಳನ್ನು, ನಮ್ಮ ನಮ್ಮೊಳಗೇ ಒಡಕುಂಟು ಮಾಡುವ ರಾಜಕಾರಣಿಗಳ ಹೇಳಿಕೆಗಳನ್ನು ತುಂಬಾ ವಿವರವಾಗಿ ಪ್ರಕಟಿಸಲೇ ಬೇಕಾದ ಅಗತ್ಯ ಖಂಡಿತ ಇಲ್ಲ.

ಒಂದೊಂದು ಸಂದರ್ಭದಲ್ಲಿ ಪತ್ರಿಕೆಗಳು ತೀರಾ ಸಾಮಾನ್ಯ ಸುದ್ದಿಗೂ ವಿಪರೀತ ಮಹತ್ವ ನೀಡುವುದುಂಟು: ಉದಾಹರಣೆಗೆ, ವ್ಯಕ್ತಿಯೊಬ್ಬ ಒಂದು ರಾಷ್ಟ್ರದ ಅಧ್ಯಕ್ಷನಾಗಿ ಆಯ್ಕೆ ಯಾದ ಎಂದುಕೊಳ್ಳಿ. ಮರುದಿನವೇ ಎಲ್ಲ ಪತ್ರಿಕೆಗಳೂ ಆತನ ಕುರಿತು ಎರಡೆರಡು ಪುಟಗಳಷ್ಟು ಸುದ್ದಿ ಪ್ರಕಟಿಸುತ್ತವೆ.

ಅದರಲ್ಲಿ ಆತನ ಕೌಟುಂಬಿಕ ವಿವರ, ವಿದ್ಯಾರ್ಹತೆ, ಇಷ್ಟದ ತಿಂಡಿ, ಮೆಚ್ಚಿನ ಬಣ್ಣ... ಇತ್ಯಾದಿ ವಿವರಗಳಿರುತ್ತವೆ. ಇಂಥ ವಿವರಣೆಗಳಿಂದ ಇರುವ ಪ್ರಯೋಜನವಾದರೂ ಏನು? ರಾಷ್ಟ್ರಾಧ್ಯಕ್ಷ ಏನು ತಿನ್ನುತ್ತಾನೆ ಅಥವಾ ಏನೇನು ತಿನ್ನುವುದಿಲ್ಲ ಎಂಬುದು ಖಂಡಿತ ಮುಖ್ಯವಲ್ಲ, ಆತ ಸಮರ್ಥನಾಗಿ ಆಡಳಿತ ನಡೆಸಬಲ್ಲನೆ? ಆಡಳಿತಗಾರನಾಗಿ ಆತನಿಗಿರುವ ನೆಗೆಟಿವ್ ಹಾಗೂ ಪಾಸಿಟಿವ್ ಅಂಶಗಳು ಯಾವುವು ಎಂಬುದನ್ನು ಗುರುತಿಸುವುದಷ್ಟೇ ಪತ್ರಿಕೆಗಳ ಕೆಲಸವಾಗಬೇಕು.

ನಮ್ಮ ಪತ್ರಕರ್ತರ ದುರಂತವೇನೆಂದರೆ ಅವರಿಗೆ ಒಳ್ಳೆಯದ್ಯಾವುವೂ ಸುದ್ದಿ ಎಂದೆನಿಸು ವುದಿಲ್ಲ. ಗಂಡ-ಹೆಂಡತಿ ಐವತ್ತು ವರ್ಷಗಳಿಂದ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆಂದು ಹೇಳಿ, ಯಾವ ಪತ್ರಕರ್ತನೂ ಆಸಕ್ತಿ ತೋರಿಸುವುದಿಲ್ಲ. ಅವನಿಗೆ ಅದೊಂದು ಉತ್ತಮ ದಾಂಪತ್ಯ ಸಾಮರಸ್ಯ ಸುದ್ದಿಯಾಗಬಹುದೆಂದು ಅನಿಸುವುದಿಲ್ಲ.

ಮದುವೆಯ ದಿನವೇ ವಿಚ್ಛೇದನ ತೆಗೆದುಕೊಂಡರೆ ಸಾಕು. ಅದನ್ನೇ ದೊಡ್ಡ ಸುದ್ದಿಯಾಗಿ ಮಾಡುತ್ತಾರೆ. ನಟಿಯೇನಾದರೂ ವಿಚ್ಛೇದನ ಪಡೆದರೆ ಒಂದು ವಾರ ಪೂರ್ತಿ ಬಣ್ಣ ಬಣ್ಣದ ಸುದ್ದಿ! ಪತ್ರಕರ್ತರಿಗೆ ಏನಾಗಿದೆ? ಯಾಕೆ ಅವರು ನಕಾರಾತ್ಮಕ ಸುದ್ದಿಗೆ ಹಪಹಪಿಸುತ್ತಾರೆ? ಅವರಿಗೆ ಉತ್ತಮ ಸಂಗತಿಗಳೇಕೆ ಕಣ್ಣಿಗೆ ಬೀಳುವುದಿಲ್ಲ? ಪತ್ರಕರ್ತರು ಒಂದೋ Create ಮಾಡ್ತಾರೆ. ಇಲ್ಲದಿದ್ದರೆ Criticise ಮಾಡ್ತಾರೆ. ಓಶೋರ ಈ ಮಾತುಗಳನ್ನು ಕೇಳಿದರೆ ನೀವೇನಂತೀರೋ? ಪತ್ರಕರ್ತರೇನಂತಾರೋ?