Roopa Gururaj Column: ಒಂದು ನಗರವನ್ನೇ ನಿರ್ಮಿಸಿದ ಜೂಲಿಯಾ ಮಾರ್ಗನ್
1906ರ ಏಪ್ರಿಲ್ 18ರಂದು ಭೀಕರ ಭೂಕಂಪವು ಸ್ಯಾನ್ ಫ್ರಾನ್ಸಿಸ್ಕೋವನ್ನು ಧ್ವಂಸಗೊಳಿಸಿತು. ನಗರ ದಲ್ಲಿ ಶೇ.80ರಷ್ಟು ಕಟ್ಟಡಗಳು ಕುಸಿದವು. ಸಾವಿರಾರು ಜನರು ಸಾವನ್ನಪ್ಪಿದರು. ಆದರೆ ಓಕ್‌ಲ್ಯಾಂಡಿನ ಮಿಲ್ಸ್ ಕಾಲೇಜಿನಲ್ಲಿ ಜೂಲಿಯಾ ವಿನ್ಯಾಸಗೊಳಿಸಿದ reinforced concrete ನ ಘಂಟಾಗೋಪುರ ಅಚಲವಾಗಿ ನಿಂತಿತ್ತು. ಅವಳ ಕೆಲಸವೇ ಅವಳ ಉತ್ತರವಾಗಿತ್ತು.
-
ಒಂದೊಳ್ಳೆ ಮಾತು
ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ 1872ರಲ್ಲಿ ಜನಿಸಿದಾಕೆ ಜೂಲಿಯಾ ಮಾರ್ಗನ್. ಆಕೆಯ ಬದುಕಿನ ಕಾಲಘಟ್ಟದಲ್ಲಿ ಕಟ್ಟುನಿಟ್ಟಾದ ನಿಯಮಗಳಿದ್ದವು. ಮಹಿಳೆಯರು ಶಿಕ್ಷಕರಾಗಬಹುದು, ನರ್ಸ್ ಆಗಬಹುದು, ಮನೆಗಳನ್ನು ಅಲಂಕರಿಸಬಹುದು; ಆದರೆ ಅವರು ಕಟ್ಟಡಗಳನ್ನು ವಿನ್ಯಾಸ ಗೊಳಿಸಲು, ನಗರಗಳನ್ನು ನಿರ್ಮಿಸಲು ಸಾಧ್ಯವಿಲ್ಲ.
ಅದು ಪುರುಷರ ಕೆಲಸ ಎಂದು ಸಮಾಜ ತೀರ್ಮಾನಿಸಿತ್ತು. ಜೂಲಿಯಾ ವಾದಕ್ಕೆ ನಿಲ್ಲಲಿಲ್ಲ, ಆದರೆ ಅದನ್ನು ಸುಳ್ಳೆಂದು ಸಾಧಿಸಿ ತೋರಿಸಿದಳು. 18ನೇ ವಯಸ್ಸಿನಲ್ಲಿ ಅವಳು ಬೆರ್ಕ್ಲಿಯ ಕ್ಯಾಲಿಫೋ ರ್ನಿಯಾ ವಿಶ್ವವಿದ್ಯಾಲಯದಲ್ಲಿ ಸಿವಿಲ್ ಎಂಜಿನಿಯರಿಂಗ್ ಅಧ್ಯಯನಕ್ಕೆ ಸೇರಿಕೊಂಡಳು.
ಪುರುಷ ವಿದ್ಯಾರ್ಥಿಗಳ ಮಧ್ಯೆ, ಅವಳೊಬ್ಬಳೇ ಮಹಿಳೆ. 1896ರಲ್ಲಿ ಎಂಜಿನಿಯರಿಂಗ್ ತರಗತಿಯಲ್ಲಿ ಪದವಿ ಪಡೆದ ಏಕೈಕ ಮಹಿಳೆ ಎನಿಸಿಕೊಂಡಳು. ಅವಳ ಪ್ರತಿಭೆಯನ್ನು ಕಂಡ ಪ್ರೊಫೆಸರ್, “ಇನ್ನೂ ಎತ್ತರಕ್ಕೆ ಹೋಗು; ಪ್ಯಾರಿಸ್‌ನ Ecole des Beaux-Arts ಜಗತ್ತಿನ ಅತ್ಯಂತ ಪ್ರತಿಷ್ಠಿತ ವಾಸ್ತುಶಿಲ್ಪ ಶಾಲೆ, ಅಲ್ಲಿಗೆ ಅರ್ಜಿ ಹಾಕು" ಎಂದರು.
ಆದರೆ ಅಂದಿನವರೆಗೆ ಅಲ್ಲಿ ಒಬ್ಬ ವಿದ್ಯಾರ್ಥಿನಿಯೂ ಸೇರಿರಲಿಲ್ಲ. 1897ರಲ್ಲಿ, ಫ್ರೆಂಚ್ ಮಹಿಳಾ ಕಲಾವಿದರ ಒತ್ತಡದಿಂದ ಶಾಲೆಯು ಮಹಿಳೆಯರಿಗೆ ಪ್ರವೇಶ ಪರೀಕ್ಷೆ ಬರೆಯಲು ಅವಕಾಶ ನೀಡಿತು. ಜೂಲಿಯಾ ಪರೀಕ್ಷೆ ಬರೆದಳು, 42ನೇ ಸ್ಥಾನ ಪಡೆದಳು. ಅವಳ ಅದೃಷ್ಟಕ್ಕೆ ಅಲ್ಲಿ ಕೇವಲ ಮೊದಲ 30 ಮಂದಿಗೆ ಮಾತ್ರ ಪ್ರವೇಶ.
ಇದನ್ನೂ ಓದಿ: Roopa Gururaj Column: ಬೃಹದೀಶ್ವರ ದೇವಾಲಯದ ಮುಂದಿನ ಅಳಗಿ ಕೊಳ
ಆರು ತಿಂಗಳ ನಂತರ ಮತ್ತೆ ಪ್ರಯತ್ನಿಸಿದಳು, ಮತ್ತೆ ವಿಫಲವಾದಳು. ಅವಳ ಅಂಕಗಳನ್ನು ಕೇವಲ ಮಹಿಳೆ ಎಂಬ ಕಾರಣಕ್ಕೆ ಕಡಿಮೆ ಮಾಡಲಾಗಿದೆ ಎಂದು ಇತಿಹಾಸಕಾರರು ನಂಬುತ್ತಾರೆ. ಸಂದೇಶ ಸ್ಪಷ್ಟವಾಗಿತ್ತು: ‘ನೀನು ಇಲ್ಲಿಗೆ ಬೇಕಿಲ್ಲ’. ಪಟ್ಟು ಬಿಡದ ಜೂಲಿಯಾ ಮೂರನೇ ಬಾರಿ ಪರೀಕ್ಷೆ ಬರೆದಳು. ಈ ಬಾರಿ ಅವಳು 392 ಅಭ್ಯರ್ಥಿಗಳಲ್ಲಿ 13ನೇ ಸ್ಥಾನ ಪಡೆದಳು. ಇನ್ನು ಶಾಲೆ ಅವಳನ್ನು ನಿರಾಕರಿಸಲು ಸಾಧ್ಯವಿರಲಿಲ್ಲ. ಅವಳು Ecole des Beaux-Arts ಗೆ ಪ್ರವೇಶ ಪಡೆದ ಮೊದಲ ಮಹಿಳೆ ಯಾದಳು. ಆದರೆ ಅವಳ ಸಮಸ್ಯೆಗಳು ಮುಗಿಯಲಿಲ್ಲ. 30 ವರ್ಷ ತುಂಬುವ ಮೊದಲು ಪದವಿ ಪಡೆಯಬೇಕಿತ್ತು. ಜೂಲಿಯಾಗೆ ಆಗಲೇ 25 ವರ್ಷ. ಅವಳು ಮೌನವಾಗಿ, ಶಿಸ್ತಿನಿಂದ, ಅಹೋರಾತ್ರಿ ಓದಿದಳು.
ಯಾವುದೇ ಗದ್ದಲವಿಲ್ಲ, ದೂರುಗಳಿಲ್ಲ. 1902ರ ಫೆಬ್ರವರಿಯಲ್ಲಿ ತನ್ನ 30ನೇ ಹುಟ್ಟುಹಬ್ಬಕ್ಕೆ ಒಂದು ತಿಂಗಳು ಬಾಕಿ ಇರುವಾಗ ಅವಳು ಪದವಿ ಪಡೆದಳು. ಕಾಲೇಜಿನಲ್ಲಿ ಇತಿಹಾಸವೇ ನಿರ್ಮಾಣ ವಾಯಿತು.
ಕ್ಯಾಲಿಫೋರ್ನಿಯಾಗೆ ಮರಳಿ, ಒಂದು ವಾಸ್ತುಶಿಲ್ಪ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಂಡಳು. ಅವಳ ಬುದ್ಧಿಮತ್ತೆಯನ್ನು ಹೊಗಳಿದ ಮಾಲೀಕ, ಅದೇ ಉಸಿರಿನಲ್ಲಿ “ಮಹಿಳೆ ಆದ್ದರಿಂದ ಅವಳಿಗೆ ಕಡಿಮೆ ಸಂಬಳ ಕೊಡಬಹುದು" ಎಂದನು. ಜೂಲಿಯಾ ತನ್ನ ಹಕ್ಕಿಗಾಗಿ ಕೇಳಿದಳು, ನಂತರ ಮೌನವಾಗಿ ಹಣ ಉಳಿಸಿದಳು, ಯೋಜನೆ ರೂಪಿಸಿದಳು, ಅವಕಾಶ ಸಿಗುತ್ತಲೇ ಅಲ್ಲಿಂದ ಹೊರನಡೆದಳು.
1904ರಲ್ಲಿ, ಕ್ಯಾಲಿಪೋರ್ನಿಯಾದಲ್ಲಿ ಲೈಸೆನ್ಸ್ ಪಡೆದ ಮೊದಲ ಮಹಿಳಾ ವಾಸ್ತುಶಿಲ್ಪಿಯಾಗಿ ತನ್ನದೇ ಕಚೇರಿಯನ್ನು ಆರಂಭಿಸಿದಳು. 1906ರ ಏಪ್ರಿಲ್ 18ರಂದು ಭೀಕರ ಭೂಕಂಪವು ಸ್ಯಾನ್ ಫ್ರಾನ್ಸಿಸ್ಕೋವನ್ನು ಧ್ವಂಸಗೊಳಿಸಿತು. ನಗರದಲ್ಲಿ ಶೇ.80ರಷ್ಟು ಕಟ್ಟಡಗಳು ಕುಸಿದವು. ಸಾವಿರಾರು ಜನರು ಸಾವನ್ನಪ್ಪಿದರು. ಆದರೆ ಓಕ್‌ಲ್ಯಾಂಡಿನ ಮಿಲ್ಸ್ ಕಾಲೇಜಿನಲ್ಲಿ ಜೂಲಿಯಾ ವಿನ್ಯಾಸ ಗೊಳಿಸಿದ reinforced concrete ನ ಘಂಟಾಗೋಪುರ ಅಚಲವಾಗಿ ನಿಂತಿತ್ತು. ಅವಳ ಕೆಲಸವೇ ಅವಳ ಉತ್ತರವಾಗಿತ್ತು. ಗ್ರಾಹಕರು ಹರಿದು ಬಂದರು. ಅವಳು ನಂತರ ಅನೇಕ ಹೋಟೆಲ್‌ಗಳು, ಚರ್ಚ್‌ಗಳು, ಆಸ್ಪತ್ರೆಗಳು, ವಿಶ್ವವಿದ್ಯಾಲಯಗಳು ಮತ್ತು 30ಕ್ಕೂ ಹೆಚ್ಚು YWCA ಕಟ್ಟಡಗಳನ್ನು ನಿರ್ಮಿಸಿದಳು. Hearst Castle ಎಂಬ ಭವ್ಯ ಯೋಜನೆಯನ್ನು 28 ವರ್ಷಗಳ ಕಾಲ ನೇರವಾಗಿ ಮೇಲ್ವಿಚಾರಣೆ ಮಾಡಿದಳು. 1951ರಲ್ಲಿ ನಿವೃತ್ತಿಯಾದಾಗ, ಜೂಲಿಯಾ ಮಾರ್ಗನ್ 700ಕ್ಕೂ ಹೆಚ್ಚು ಕಟ್ಟಡಗಳನ್ನು ವಿನ್ಯಾಸಗೊಳಿಸಿದ್ದಳು.
1957ರಲ್ಲಿ ಅವಳು ವಿಧಿವಶಳಾದಳು. ಅವಳ ಸಾಧನೆಗಳು ವರ್ಷಗಳ ಕಾಲ ಮರೆತೇ ಹೋಯಿತು. ಆದರೆ ಕಟ್ಟಡಗಳು ಅವಳ ಸಾಧನೆಗೆ ಗುರುತಿನ ಹಾಗೆ ಎದೆಯುಬ್ಬಿಸಿ ನಿಂತಿದ್ದವು.
2014ರಲ್ಲಿ ಅವಳ ನಿಧನದ 57 ವರ್ಷಗಳ ನಂತರ ಅಮೆರಿಕನ್ ಇನ್ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಟ್ಸ್ ಸಂಸ್ಥೆ ತನ್ನ ಅತ್ಯುನ್ನತ ಗೌರವವಾದ AIA Gold Medal ಅನ್ನು ಜೂಲಿಯಾ ಮಾರ್ಗನ್‌ಗೆ ನೀಡಿತು. ಈ ಗೌರವವನ್ನು ಪಡೆದ ಮೊದಲ ಮಹಿಳೆ ಜೂಲಿಯಾ ಮಾರ್ಗನ್. ಅವಳು ಜಗತ್ತಿನ ವಿರುದ್ಧ ಭಾಷಣಗಳಿಂದ ಹೋರಾಡಲಿಲ್ಲ. ಅವಳು ಅಡಿಪಾಯಗಳಿಂದ, ಕಲ್ಲಿನಿಂದ, ಉಕ್ಕಿನಿಂದ ತನ್ನ ಭವಿಷ್ಯ ಬರೆದಳು.
ಇಂಥವರ ಜೀವನ ಚರಿತ್ರೆಗಳು ಶತಮಾನಗಳು ಕಳೆದರೂ ನಮಗೆ ಪ್ರೇರಣೆ ನೀಡುವಂಥವು. ಇಂಥ ಜೂಲಿಯಾ ಮಾರ್ಗನ್ ನಮ್ಮ ಮನೆಗಳಲ್ಲಿ ಇರಬಹುದು. ಅವರಿಗೆ ಬೇಕಾದ ಪ್ರೋತ್ಸಾಹ ಕೊಡಬೇಕಾದ ಜವಾಬ್ದಾರಿ ನಮ್ಮದು.