Shashidhara Halady Column: ಕನ್ನಡ ಓದುಗರ ಅಭಿರುಚಿ ಮತ್ತು ಗ್ರಂಥಾಲಯ ಖರೀದಿ
‘ತೇಜಸ್ವಿ, ಭೈರಪ್ಪ, ಕಾರಂತ ಇಂತಹವರ ಪುಸ್ತಕಗಳನ್ನು ಹೊರತುಪಡಿಸಿದರೆ, ಕನ್ನಡ ಪುಸ್ತಕ ಮಾರಾಟಗಾರರು ತಮ್ಮ ವೃತ್ತಿಯನ್ನು ಮುಂದುವರಿಸಲು ಅನುಕೂಲವಾಗುವಂತೆ ಮಾರಾಟ ವಾಗುವ ಕನ್ನಡ ಪುಸ್ತಕಗಳು ಯಾವುವು?’ ಎಂದು ಕೇಳಿದೆ. ಒಂದರ ಹಿಂದೆ ಒಂದರಂತೆ ಕೇಳಿದ ನನ್ನ ಕೆದಕುವ ಪ್ರಶ್ನೆಗಳು ಅವರ ತಾಳ್ಮೆಯನ್ನೇ ಪರೀಕ್ಷಿಸಿರಬೇಕು.
-
ಶಶಾಂಕಣ
ಕನ್ನಡದ ಪ್ರಮುಖ ಪುಸ್ತಕದ ಮಾರಾಟಗಾರರೊಬ್ಬರು ಇತ್ತೀಚೆಗೆ ಮಾತಿಗೆ ಸಿಕ್ಕಿದ್ದರು; ಅವರು ಹೇಳಿದ ವಿಚಾರ ಕೇಳಿ ತುಸು ಅಚ್ಚರಿ, ತುಸು ಕಳವಳ, ತುಸು ಗಾಬರಿಯೂ ಆಯಿತು; ಕನ್ನಡ ಪುಸ್ತಕಗಳ ಓದುಗರ ಅಭಿರುಚಿಯನ್ನು ಅವರು ಬಹುಕಾಲದಿಂದ ಗಮನಿಸಿದ್ದರು, ಚೆನ್ನಾಗಿ ಗುರುತಿಸಿದ್ದರು; ಮತ್ತು ಸ್ಪಷ್ಟವಾಗಿ ವಿಶ್ಲೇಷಿಸಬಲ್ಲರು. ಅವರ ಮಾತಿನಂತೆ, ಈ ವರ್ಷ ಅತಿ ಹೆಚ್ಚು ಮಾರಾಟವಾದ ಕನ್ನಡ ಪುಸ್ತಕಗಳು ಯಾವುವು ಎಂದು ನೋಡಿದರೆ, ಹೆಚ್ಚಿನವು ಬೇರೆ ಭಾಷೆಯಿಂದ ಕನ್ನಡಕ್ಕೆ ಅನುವಾದಗೊಂಡ ಪುಸ್ತಕಗಳು!
ಬೇರೆ ಭಾಷೆಯಲ್ಲಿ ಹೆಚ್ಚು ಪ್ರಸಿದ್ಧವಾಗಿರುವ ಪುಸ್ತಕಗಳ ಕನ್ನಡ ಅನುವಾದಗಳು ಈಗ ಚೆನ್ನಾಗಿ ಮಾರಾಟವಾಗುತ್ತವಂತೆ! ಉದಾಹರಣೆಗೆ ಅವರ ಏಜೆನ್ಸಿಯಲ್ಲಿ, ಪ್ರತಿ ವಾರ ಮಾರಾಟಗೊಂಡ 100 ಕನ್ನಡ ಪುಸ್ತಕಗಳನ್ನು ಗಮನಿಸಿದರೆ, ಶೇ.60ರಷ್ಟು ಅನುವಾದಿತ!
‘ಇದೇಕೆ ಹೀಗೆ?’ ಎಂದು ಕೇಳಿದೆ; ‘ಜನರ ಅಭಿರುಚಿ ಬದಲಾಗಿದೆ’ ಎಂಬುದು ಒಂದು ಉತ್ತರ; ಇನ್ನೊಂದು ಉತ್ತರವೆಂದರೆ, ‘ಕನ್ನಡದಲ್ಲಿ ಗುಣಮಟ್ಟದ ಒರಿಜಿನಲ್ ಪುಸ್ತಕಗಳು ಪ್ರಕಟ ವಾಗುವುದೇ ಕಡಿಮೆಯಾಗಿದೆ’ ಎಂದರು. ಕನ್ನಡದಲ್ಲಿ ವರ್ಷಕ್ಕೆ 8000 ಟೈಟಲ್‌ಗಳು ಪ್ರಕಟ ವಾಗುತ್ತವೆಂದು ಒಂದು ಖಚಿತ ಅಂದಾಜು.
ಇಷ್ಟಿದ್ದರೂ, ಗುಣಮಟ್ಟದ ಪುಸ್ತಕಗಳು ಬರುತ್ತಿಲ್ಲ ಎಂದರೆ, ಭಾಷೆಯೊಂದರ ಬೆಳವಣಿಗೆ ಯ ಪ್ರಮಾಣ ಕಡಿಮೆಯಾಗಿದೆಯೆ? ಅದೇ ಪುಸ್ತಕ ಮಾರಾಟಗಾರರ ಅನುಭವದಂತೆ, ಕನ್ನಡದಲ್ಲಿ ಈಗ ಹೆಚ್ಚು ಮಾರಾಟವಾಗುವ ಪುಸ್ತಕಗಳು ತೇಜಸ್ವಿ, ಭೈರಪ್ಪ ಮೊದಲಾದ ಹಿರಿಯ ಲೇಖಕರ ಪುಸ್ತಕಗಳು ಮಾತ್ರ.
ಇದನ್ನೂ ಓದಿ: Shashidhara Halady Column: ಕಾಡು ಹಣ್ಣುಗಳ ಸವಿ ರುಚಿಯ ತಖ್ತೆ !
‘ತೇಜಸ್ವಿ, ಭೈರಪ್ಪ, ಕಾರಂತ ಇಂತಹವರ ಪುಸ್ತಕಗಳನ್ನು ಹೊರತುಪಡಿಸಿದರೆ, ಕನ್ನಡ ಪುಸ್ತಕ ಮಾರಾಟಗಾರರು ತಮ್ಮ ವೃತ್ತಿಯನ್ನು ಮುಂದುವರಿಸಲು ಅನುಕೂಲವಾಗುವಂತೆ ಮಾರಾಟವಾಗುವ ಕನ್ನಡ ಪುಸ್ತಕಗಳು ಯಾವುವು?’ ಎಂದು ಕೇಳಿದೆ. ಒಂದರ ಹಿಂದೆ ಒಂದರಂತೆ ಕೇಳಿದ ನನ್ನ ಕೆದಕು ಪ್ರಶ್ನೆಗಳು ಅವರ ತಾಳ್ಮೆಯನ್ನೇ ಪರೀಕ್ಷಿಸಿರಬೇಕು.
‘ಲಲಿತಾ ಸಹಸ್ರನಾಮದಂತಹ ಪುಸ್ತಕಗಳು!’ ಎಂದರು ಮುಗುಮ್ಮಾಗಿ. ಮೂಲ ಕನ್ನಡ ಪುಸ್ತಕಗಳಿಗಿಂತ, ಅನುವಾದಿತ ಪುಸ್ತಕಗಳನ್ನೇ ಕನ್ನಡ ಓದುಗರು ಹೆಚ್ಚು ಖರೀದಿಸುತ್ತಿದ್ದಾರೆ ಎಂಬ ಈ ಮಾಹಿತಿ ಮೊದಲಿಗೆ ತುಸು ಅಚ್ಚರಿ ಹುಟ್ಟಿಸೀತು. ಆದರೆ, ಕಳೆದ ಕೆಲವು ದಶಕ ಗಳಿಂದ ಕನ್ನಡ ಭಾಷೆಯ ಬೆಳವಣಿಗೆ, ಭಾಷಾ ಮಾಧ್ಯಮ, ಜನಸಾಮಾನ್ಯರ ಮನೋಗತ ಮೊದಲಾದವುಗಳನ್ನು ಗಮನಿಸುತ್ತಾ ಹೋದರೆ, ಕನ್ನಡದಲ್ಲಿ ಗುಣಮಟ್ಟದ ಪುಸ್ತಕಗಳು ಹೊರಬರುವುದು ಕಡಿಮೆಯಾಗಿದೆ ಎಂಬುದಕ್ಕೆ ಕಾರಣಗಳನ್ನು ಹುಡುಕುತ್ತಾ ಹೋಗಬ ಹುದು.
ಕನ್ನಡಿಗರು ಮೊದಲಿಂದಲೂ ಉತ್ತಮ ಸಾಹಿತ್ಯ ಓದುವವರು; ಉತ್ತಮ ಲೇಖಕರು ಸಹ ಈ ನೆಲದಲ್ಲಿ ಸಾಕಷ್ಟು ಜನಿಸಿದ್ದಾರೆ. ಹಾಗಿದ್ದರೆ, ಈಚಿನ ವರ್ಷಗಳಲ್ಲಿ ಗುಣಮಟ್ಟದ ಪುಸ್ತಕ ಗಳು ಹೆಚ್ಚಿನ ಸಂಖ್ಯೆಯಲ್ಲಿ ಏಕೆ ಹೊರ ಬರುತ್ತಿಲ್ಲ? ಉತ್ತರ ಭಾರತದಲ್ಲಿ ‘ಮೈಥಿಲಿ’ ಎಂಬ ಭಾಷೆ ಇದೆ.
ಹನ್ನೆಡನೆಯ ಶತಮಾನದ ತನಕ ಆ ಭಾಷೆ ಬಳಸಿ, ಶಿಲಾಶಾಸನಗಳನ್ನು ರಚಿಸುತ್ತಿದ್ದರು; ದೇಶಕ್ಕೆ ಸ್ವಾತಂತ್ರ ಬರುವ ತನಕವೂ ಅದೊಂದು ಪ್ರಮುಖ ಭಾಷೆ ಎನಿಸಿತ್ತು; ಆ ಭಾಷೆ ಯಲ್ಲಿ ಕಾವ್ಯಗಳೂ ರಚನೆಗೊಂಡಿದ್ದವು. ಅದಕ್ಕೆ ರಾಜಾಶ್ರಯವೂ ಇತ್ತು. ಸ್ವಾತಂತ್ರ್ಯ ದೊರಕಿದ ನಂತರ, ಅಲ್ಲೆಲ್ಲಾ ಹಿಂದಿ ಶಾಲೆಗಳು ಆರಂಭಗೊಂಡು, ಮೈಥಿಲಿ, ಭೋಜಪುರಿ, ಮಾಗಧಿ ಮೊದಲಾದ ಭಾಷೆಯನ್ನು ಮಾತೃಭಾಷೆಯಾಗಿ ಹೊಂದಿದವರೆಲ್ಲರೂ, ಸಾರಾ ಸಗಟಾಗಿ ಹಿಂದಿಯನ್ನು ಕಲಿತೊಡಗಿದರು; ಹಳ್ಳಿ ಹಳ್ಳಿಗಳಲ್ಲಿ ಶಾಲೆಗಳು ತೆರೆದಲ್ಲೆಲ್ಲಾ ಹಿಂದಿಯದ್ದೇ ಕಾರುಬಾರು. ಹೀಗೆ ನಾಲ್ಕಾರು ದಶಕ ಹಿಂದಿಯನ್ನು ಓದಿದ ತಲೆಮಾರು, ತನ್ನ ಮಾತೃಭಾಷೆಯ ಕಾವ್ಯ ಮತ್ತು ಸಾಹಿತ್ಯವನ್ನೇ ಮರೆತಿದೆ!
ಮೈಥಿಲಿಯಲ್ಲಿ ಈಗ ಬರೆಯುವವರು ಕಡಿಮೆ. ಆ ಭಾಷೆಯ ಕೃತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದ್ದರೂ, ಓದುವವರ, ಬರೆಯುವವರ ಸಂಖ್ಯೆ ಕಡಿಮೆಯಾಗಿದೆ! ಮನೆಯಲ್ಲಿ ಮಾತನಾಡುತ್ತಾರೆ, ಜತೆಗಾರರ ಜತೆ ಮಾತನಾಡುತ್ತಾರೆ. ಆದರೆ ಓದುವ ಬರೆಯುವ ವಿಚಾರಕ್ಕೆ ಬಂದಾಗ, ಹಿಂದಿ ಮತ್ತು ಕೆಲವು ಕಡೆ ಇಂಗ್ಲಿಷ್. ಆದ್ದರಿಂದ, ಮೈಥಿಲಿ ‘ಅಡಿಗೆ ಮನೆ’ ಭಾಷೆಯಾಗಿ ಬದಲಾಗಿ ಹೋಗಿದೆ!
ಕನ್ನಡ ಈಗ ಅಂಥದ್ದೇ ಸ್ಥಿತ್ಯಂತರ ಸನ್ನಿವೇಶದಲ್ಲಿ ಇದೆಯೇ? ಈ ಪ್ರಶ್ನೆ ಬಲು ಸೂಕ್ಷ್ಮ ವಾದುದು. ಏಕೆಂದರೆ, ಕನ್ನಡ ಭಾಷಾಭಿಮಾನಿಗಳು, ನನ್ನನ್ನೂ ಸೇರಿದಂತೆ, ಕನ್ನಡವು ದಿನದಿಂದ ದಿನಕ್ಕೆ ಕಸುವುಗೊಳ್ಳುತ್ತಾ ಬೆಳೆಯುತ್ತಿದೆ ಎಂದೇ ನಂಬಿದ್ದಾರೆ.
‘ಕನ್ನಡಕ್ಕೆಂದೂ ಅಳಿವಿಲ್ಲ’. ಆದರೆ, ಗುಣಮಟ್ಟದ ಸಾಹಿತ್ಯ ರಚನೆಯ ವಿಚಾರಕ್ಕೆ ಬಂದಾಗ, ಮೊದಲಿನಷ್ಟು ಸಮೃದ್ಧವಾಗಿ ಮುಂದುವರಿಯುತ್ತಿಲ್ಲವೇ ಎಂಬ ಗುಮಾನಿ ಬರುತ್ತಿದೆ. ಕನ್ನಡದಲ್ಲಿ ಇಪ್ಪತ್ತನೆಯ ಶತಮಾನದಲ್ಲಿ ರಚನೆಗೊಂಡ ಸಾಹಿತ್ಯಕೃತಿಗಳೇ, ಇಂದಿಗೂ ಹೆಚ್ಚು ಮಾರಾಟವಾಗುತ್ತಿರುವ ಕೃತಿಗಳು ಎಂಬ ಅಂಕಿ ಅಂಶಗಳು ಈ ವಿಚಾರಕ್ಕೆ ಪುಷ್ಟಿ ಕೊಡುತ್ತಿವೆ.
ಹಾಗಿದ್ದರೆ ಈಚಿನ ವರ್ಷಗಳಲ್ಲಿ ಉತ್ತಮ ಕೃತಿಗಳ ಸಂಖ್ಯೆ ಕಡಿಮೆಯಾಗಿದೆಯೇ? ಇದೊಂದು ಬಹು ಪ್ರಮುಖ ಪ್ರಶ್ನೆ.ಕಳೆದ ನಾಲ್ಕು ದಶಕಗಳಲ್ಲಿ, ಕನ್ನಡ ಮಾತೃಭಾಷೆ ಹೊಂದಿರುವ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮ ದಲ್ಲಿ ಶಿಕ್ಷಣ ಕೊಡಿಸಿದ್ದಾರೆ; ಜತೆಗೆ, ಇದೇ ಅವಧಿಯಲ್ಲಿ, ಭಾಷಾ ವಿಷಯಗಳ ಅಧ್ಯಯನಕ್ಕೆ ಹೋಲಿಸಿದರೆ, ತಾಂತ್ರಿಕ ವಿದ್ಯಾಭ್ಯಾಸಕ್ಕೆ ಅಪಾರ ಪ್ರೋತ್ಸಾಹ ದೊರಕಿದೆ; ಸಾವಿರಾರು ಯುವಜನತೆ ಪ್ರತಿವರ್ಷ ತಾಂತ್ರಿಕ, ವೈದ್ಯಕೀಯ, ಕಂಪ್ಯೂಟರ್ ಶಿಕ್ಷಣ ಪಡೆಯುತ್ತಿದ್ದಾರೆ; ಅವೆಲ್ಲವೂ ಇಂಗ್ಲಿಷ್ ಮಾಧ್ಯಮದಲ್ಲೇ ಬೋಧನೆ ಗೊಳ್ಳುತ್ತಿರುವುದರಿಂದ, ಅಷ್ಟರ ಮಟ್ಟಿಗೆ ಗುಣಮಟ್ಟದ ಕನ್ನಡದ ಕಲಿಕೆ ಕಡಿಮೆಯಾಗಿದೆ.
ಮುಂದುವರಿದು, ಈಗ ಒಂದೆರಡು ವರ್ಷಗಳಿಂದ, ಹಳ್ಳಿ ಹಳ್ಳಿಗಳಲ್ಲೂ ಸರಕಾರಿ ಶಾಲೆಗಳು ಇಂಗ್ಲಿಷ್ ಮಾಧ್ಯಮಕ್ಕೆ ಹೊರಳಿ ಕೊಳ್ಳುತ್ತಿವೆ. ಹಳ್ಳಿಯ ಜನರು ತಮ್ಮ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲೇ ಓದಲಿ ಎಂದು ಬಯಸುತ್ತಿದ್ದಾರೆ. ಪರಿಣಾಮ, ಮುಂದಿನ ಒಂದೆರಡು ದಶಕಗಳಲ್ಲಿ, ಕನ್ನಡ ಭಾಷೆಯ ಮೇಲೆ ಆಗಿಯೇ ಆಗುತ್ತದೆ. ಜನರು ಕನ್ನಡ ಮಾತನಾಡುವು ದನ್ನು ಬಿಡಲಾರರು; ಆದರೆ, ಗುಣಮಟ್ಟದ ಸಾಹಿತ್ಯವು ಕನ್ನಡದಲ್ಲಿ ರಚನೆಗೊಳ್ಳುವ ಅವಕಾಶ ಕಡಿಮೆಯಾಗುತ್ತಾ ಹೋಗುತ್ತದೆ.
ಇನ್ನು, ಅದೇಕೆ ಕನ್ನಡಕ್ಕೆ ಅನುವಾದಗೊಂಡ ಪುಸ್ತಕಗಳು ಹೆಚ್ಚು ಜನಪ್ರಿಯವಾಗುತ್ತಿವೆ? ಒಂದು ಸರಳ ಉತ್ತರವೆಂದರೆ, ಕನ್ನಡದ ಓದುಗರು, ಬೇರೆ ಭಾಷೆಗಳಲ್ಲಿ ರಚನೆಗೊಂಡ ಕೃತಿಗಳ ಪರಿಚಯವನ್ನು ಮಾಡಿಕೊಳ್ಳಬಯಸುತ್ತಿದ್ದಾರೆ ಮತ್ತು ವಿಶ್ವದ ಬೇರೆ ಬೇರೆ ವಿದ್ಯಮಾನಗಳ ಪರಿಚಯವನ್ನು ಕನ್ನಡದಲ್ಲೇ ಮಾಡಿಕೊಳ್ಳಬಯಸುತ್ತಿದ್ದಾರೆ!
ಈ ಉತ್ತರ ಮೇಲ್ನೋಟಕ್ಕೆ ಒಪ್ಪಿತವಾದರೂ, ಅನುವಾದಿತ ಕೃತಿಗಳಿಗೆ ಸಮನಾದ ಸಂಖ್ಯೆ ಯಲ್ಲಿ ಗುಣಮಟ್ಟದ ಕನ್ನಡ ಪುಸ್ತಕಗಳೇಕೆ ಪ್ರಕಟಗೊಳ್ಳುತ್ತಿಲ್ಲ ಎಂಬ ಪ್ರಶ್ನೆ, ಹಾಗೆಯೇ ಉಳಿಯುತ್ತಿದೆ. ಇದಕ್ಕೆ ಹಲವು ಉತ್ತರಗಳು ದೊರಕಬಹುದು; ಆದರೆ, ಕಳವಳ ಮತ್ತು ಅತೃಪ್ತಿ ಉಳಿದೇ ಇರುತ್ತದೆ.
ಕನ್ನಡದಲ್ಲಿ ಪ್ರತಿವರ್ಷ 8000 ಟೈಟಲ್‌ಗಳು ಪ್ರಕಟವಾಗುತ್ತಿವೆ ಮತ್ತು ಹಲವು ಟೈಟಲ್‌ಗಳು ಬೇಗನೆ ಮರುಮುದ್ರಣಗೊಳ್ಳುತ್ತಿವೆ ಎಂಬ ಮಾಹಿತಿಯ ಬಗ್ಗೆ ಅನುಮಾನವಿಲ್ಲ. ಆದರೆ, ಇಷ್ಟೊಂದು ದೊಡ್ಡ ಮಟ್ಟದ ಪುಸ್ತಕ ಪ್ರಕಾಶನ ಉದ್ಯಮವು, ಈಗ ಒಂದು ವರ್ಷದಿಂದ ತೀವ್ರ ತೊಳಲಾಟದಲ್ಲಿದೆ ಎಂಬ ವಿಚಾರವನ್ನು ಗಮನಿಸಬಹುದು.
ಕಳೆದ ಒಂದು ವರುಷದಿಂದ ವ್ಯಕ್ತವಾದ ಕನ್ನಡ ಪುಸ್ತಕ ಪ್ರಕಾಶಕರ ನೋವು, ಅಳಲು, ಒತ್ತಾಯ ಇವುಗಳನ್ನು ಗಮನಿಸಿದರೆ, ಪ್ರಕಾಶಕರು ತೀವ್ರ ಒತ್ತಡದಲ್ಲಿದ್ದಾರೆ. ಅದಕ್ಕೆ ಮುಖ್ಯ ಕಾರಣ ಎಂದರೆ ಪ್ರಭುತ್ವದ ನಿಲುವು! ಏನದು? ಇಷ್ಟು ಕಾಲ, ಪ್ರತಿ ವರ್ಷವೂ, ದೊಡ್ಡ ಮೊತ್ತದ ಪುಸ್ತಕಗಳನ್ನು ಸರ್ಕಾರಿ ಗ್ರಂಥಾಲಯಗಳು ಖರೀದಿಸುತ್ತಿದ್ದವು. ಆ ಖರೀದಿಯಿಂದ ದೊರಕಿತ ಲಾಭವೇ, ಕನ್ನಡ ಪ್ರಕಾಶನ ಉದ್ಯಮಕ್ಕೆ ಬೆನ್ನೆಲುಬಿನ ರೀತಿ ಪ್ರೋತ್ಸಾಹ ನೀಡು ತ್ತಿತ್ತು.
ಆದರೆ, ಈಗ ಒಂದೆರಡು ವರ್ಷಗಳಿಂದ, ಗ್ರಂಥಾಲಯಗಳಿಂದ ಪುಸ್ತಕ ಖರೀದಿ ಬಹು ಮಟ್ಟಿಗೆ ನಿಂತುಹೋಗಿದೆ, ಅಥವಾ ಏರುಪೇರಾಗಿದೆ. ಎಷ್ಟರ ಮಟ್ಟಿಗೆ ಎಂದರೆ, 2020-21ರ ಸಾಲಿನಲ್ಲಿ ಗ್ರಂಥಾಲಯ ಇಲಾಖೆಯಿಂದ ಆಯ್ಕೆಯಾದ ಪುಸ್ತಕಗಳನ್ನು ಇನ್ನೂ ಸರಕಾರ ವು ಖರೀದಿಸಿಲ್ಲವಂತೆ!
ಇದರಿಂದಾಗಿ, ಅಂತಹ ಪುಸ್ತಕಗಳನ್ನು ಪ್ರಕಟಿಸಿದ ಪ್ರಕಾಶಕರು, ಹಾಕಿದ ಬಂಡವಾಳ ವಾಪಸು ಬರದೇ, ತೀವ್ರ ಒತ್ತಡದಲ್ಲಿದ್ದಾರೆ. ಇನ್ನೂ ಒಂದು ಪ್ರಮುಖ ಸಂಗತಿ ಎಂದರೆ, ಪುಸ್ತಕ ಖರೀದಿಗೆಂದೇ ಪ್ರಭುತ್ವವು ಸಾರ್ವಜನಿಕರಿಂದ ಸೆಸ್ ಸಂಗ್ರಹಿಸಿದ್ದು, 600 ಕೋಟಿ ರುಪಾಯಿಗೂ ಅಧಿಕ ಮೊತ್ತದ ಅಂತಹ ಸೆಸ್ ಪ್ರಭುತ್ವದ ವಶದಲ್ಲಿದೆಯಂತೆ. ಆದರೆ, ಆ ಹಣವನ್ನು ಬಳಸಿ, ಗ್ರಂಥ ಖರೀದಿ ಮಾತ್ರ ನಡೆಯುತ್ತಿಲ್ಲ!
ಇದು ನಿಜಕ್ಕೂ ವಿಷಾದದ ಸಂಗತಿ. ಒಂದು ಉದ್ದೇಶಕ್ಕೆ ಹಣವನ್ನು ಸಾರ್ವಜನಿಕರಿಂದ ಸಂಗ್ರಹಿಸಿ, ಆ ಹಣವನ್ನು ಸೂಕ್ತವಾಗಿ ಖರ್ಚು ಮಾಡದಿರುವುದು ಸಮಂಜಸವಲ್ಲ. ಜತೆಗೆ, ಈ ಚಟುವಟಿಕೆಯ ಹಿಂದೆ ಒಂದು ಘನ ಉದ್ದೇಶವಿದೆ : ಜನರಲ್ಲಿ, ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವುದು, ಹಳ್ಳಿ ಹಳ್ಳಿಯಲ್ಲಿರುವ ಗ್ರಂಥಾಲಯಕ್ಕೆ ಕನ್ನಡ ಪುಸ್ತಕಗಳನ್ನು ಸರಬರಾಜು ಮಾಡುವುದು. ಆದರೆ, ಆ ಉದ್ದೇಶವೇ ಇಂದು ವಿಫಲವಾದಂತಿದೆ.
ಹಾಗಿದ್ದರೆ, ಕನ್ನಡ ಪುಸ್ತಕಗಳು ಇಷ್ಟೊಂದು ಸಂಖ್ಯೆಯಲ್ಲಿ ಹೊರಬರಲು, ಗ್ರಂಥಾಲಯ ಇಲಾಖೆಯ ಬೆಂಬಲವೇ ತೀರಾ ಅಗತ್ಯವೇ? ಅಕಸ್ಮಾತ್, ಪ್ರಭುತ್ವವು ಪುಸ್ತಕ ಖರೀದಿಸುವು ದನ್ನು ನಿಲ್ಲಿಸಿದರೆ, ಹೆಮ್ಮೆಯಿಂದ ಹೇಳಿಕೊಳ್ಳಬಹುದಾದ 8000 ಟೈಟಲ್ ಗಳು ಹೊರ ಬರುವುದಿಲ್ಲವೇ? ಇದು ಮೇಲ್ನೋಟಕ್ಕೆ ನಿಜವೆಂದೇ ಕಾಣಿಸುವಂತಿದೆ.
ನಾವೆಲ್ಲಾ ಈಗಿನ ವ್ಯವಸ್ಥೆಗೆ ಎಷ್ಟರ ಮಟ್ಟಿಗೆ ಒಗ್ಗಿಕೊಂಡು, ಒಪ್ಪಿಕೊಂಡು ಬಿಟ್ಟಿದ್ದೇ ವೆಂದರೆ, ಕನ್ನಡ ಪುಸ್ತಕಗಳನ್ನು ಪ್ರತಿವರ್ಷ ಖರೀದಿಸುವುದು ಪ್ರಭುತ್ವದ ಕರ್ತವ್ಯ ಎಂಬ ಭಾವನೆ ಸಾರ್ವತ್ರಿಕವಾಗಿದೆ. ಬಹು ಹಿಂದೆ, ಉದಾಹರಣೆಗೆ 1960-70ರ ದಶಕಗಳಲ್ಲಿ, ಅದಕ್ಕೂ ಮುಂಚೆ, ಇಷ್ಟೊಂದು ದೊಡ್ಡ ಮೊತ್ತದ ಪುಸ್ತಕ ಖರೀದಿಯನ್ನು ಗ್ರಂಥಾಲಯ ಇಲಾಖೆಗಳು ಮಾಡುತ್ತಿರಲಿಲ್ಲ; ಆಗ ಕನ್ನಡದಲ್ಲಿ ಪ್ರಕಟವಾಗುವ ಟೈಟಲ್‌ಗಳು ಕಡಿಮೆ ಯಿದ್ದವು. ಆದರೆ, ಗುಣಮಟ್ಟದ ಪುಸ್ತಕಗಳು ಹೊರಬರುತ್ತಿದ್ದವು!
ಕನ್ನಡದ ಶ್ರೇಷ್ಠ ಕೃತಿಗಳ ಸಾಲಿನಲ್ಲಿ ನಿಲ್ಲುವ ಮರಳಿ ಮಣ್ಣಿಗೆ, ಮಲೆಗಳಲ್ಲಿ ಮದುಮಗಳು, ಚೋಮನದುಡಿ ಮೊದಲಾದ ಕೃತಿಗಳು ಆ ಅವಧಿಯಲ್ಲೇ ಪ್ರಕಟಗೊಂಡವು! ಅವುಗಳನ್ನು ಜನರು ಇಂದಿಗೂ ಖರೀದಿಸಿ ಓದುತ್ತಿದ್ದಾರೆ! ಆದ್ದರಿಂದ, ಗುಣಮಟ್ಟದ ಪುಸ್ತಕಗಳು ಹೊರ ಬರಬೇಕೆಂದರೆ, ಪ್ರಭುತ್ವದ ಸಗಟು ಖರೀದಿಯ ಬೆಂಬಲ ತೀರಾ ಅಗತ್ಯ ಎಂದೇನಿಲ್ಲ!
ಬಹುದೊಡ್ಡ ಮೊತ್ತದ ಪುಸ್ತಕಗಳನ್ನು ಗ್ರಂಥಾಲಯ ಇಲಾಖೆ ಖರೀದಿಸುತ್ತದೆ ಎಂಬ ನಂಬಿಕೆಯಿಂದ ಪ್ರತಿವರ್ಷ 8000 ಟೈಟಲ್‌ಗಳು ಹೊರಬರುತ್ತವೆ ಎಂದಾದಾಗ, ಅಲ್ಲಿ ಗುಣಮಟ್ಟಕ್ಕಿಂತ ಸಂಖ್ಯೆಗೇ ಹೆಚ್ಚು ಪ್ರಾಧಾನ್ಯವೇ? ಈ ವಿಷಯವನ್ನು ಮತ್ತೆ ಮತ್ತೆ ಚರ್ಚೆ ಗೊಳಪಡಿಸಬಹುದು; ಆದರೆ, ಕಳೆದ ಮೂರ‍್ನಾಲ್ಕು ವರ್ಷಗಳಿಂದ ಗ್ರಂಥಾಲಯ ಇಲಾಖೆ ಸಗಟು ಖರೀದಿಯನ್ನು ತಡೆ ಹಿಡಿದಿರುವುದರಿಂದಾಗಿ, ಒಟ್ಟಾರೆ ಕನ್ನಡ ಪ್ರಕಾಶನ ಉದ್ಯಮಕ್ಕೆ, ಹೊಸ ಲೇಖಕರಿಗೆ, ಗುಣಮಟ್ಟದ ಕೃತಿಗಳನ್ನು ಬರೆಯುವ ಸಾಹಿತಿಗಳಿಗೆ ಅಷ್ಟರ ಮಟ್ಟಿಗೆ ಹೊಡೆತ, ತೊಡಕುಂಟಾಗಿರುವುದಂತೂ ನಿಜ.
ಸಗಟು ಖರೀದಿಯ ಕುರಿತು ಮಾತನಾಡುವಾಗಲೇ, ಇಂದಿನ ಕಾಲಮಾನದಲ್ಲಿ ಬದಲಾಗು ತ್ತಿರುವ ಓದುಗರ ಅಭಿರುಚಿಯನ್ನೂ ಗಮನಿಸಬೇಕು. ಕನ್ನಡ ನಾಡಿನ ಜನರಲ್ಲಿ ಓದುವ ಅಭಿರುಚಿ ಜಾಸ್ತಿ ಎಂಬ ಮಾತಿದೆ. ಆದರೆ, ತಂತ್ರಜ್ಞಾನದ ಅಭಿವೃದ್ಧಿಯಿಂದಾಗಿ, ಈಚಿನ ವರ್ಷಗಳಲ್ಲಿ ನಾನಾ ಮಾಧ್ಯಮಗಳಲ್ಲಿ ಜನರ ಅಭಿರುಚಿ ಹಂಚಿಹೋಗಿದೆ.
ಸಾಮಾಜಿಕ ಜಾಲತಾಣ, ರೀಲ್ಸ್ ಮೊದಲಾದ ಮಾಧ್ಯಮಗಳಲ್ಲಿ ಪ್ರತಿಭಾವಂತರು ತಮ್ಮ ಸೃಜನಶೀಲತೆ ತೋರುತ್ತಿದ್ದಾರೆ. ಅಂತಹ ಹೊಸ, ಹೆಚ್ಚು ಚುರುಕಾದ, ಹೆಚ್ಚು ಮನ ಮುಟ್ಟುವ ಮಾಧ್ಯಮಗಳನ್ನು ನೋಡುವ ಜನರೂ ಹೆಚ್ಚಳಗೊಂಡಿದ್ದಾರೆ. ಕನ್ನಡ ಮಾತೃಭಾಷೆಯ ಜನರು, ಇಂಗ್ಲಿಷ್ ಭಾಷೆಯ ಸಾಹಿತ್ಯವನ್ನು, ರೀಲ್ಸ್‌ಗಳನ್ನು ಹೆಚ್ಚು ನೋಡುತ್ತಿದ್ದಾರೆ; ನಾಡಿನ ಬಹುಪಾಲು ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವುದೂ ಇದಕ್ಕೆ ಒಂದು ಕಾರಣ.
ಈ ನಡುವೆ, ಎ.ಐ. ಪ್ರಗತಿಯು ಸಾಹಿತ್ಯ ರಚನೆಯ ಮೇಲೆ ಬೀರಿರುವ ಪರಿಣಾಮವೂ ಚರ್ಚೆಯಾಗುತ್ತಿದೆ. ಹಾಗೆಂದು, ಯುವಜನತೆ, ಕನ್ನಡದ ಉತ್ತಮ ಕೃತಿಗಳನ್ನು ಓದುತ್ತಿಲ್ಲ ವೆಂದಲ್ಲ! ಓದುತ್ತಿದ್ದಾರೆ, ಆದರೆ ಇಂಗ್ಲಿಷ್‌ನಲ್ಲಿ, ಲ್ಯಾಪ್‌ಟಾಪ್‌ನಲ್ಲಿ, ಟ್ಯಾಬ್‌ನಲ್ಲಿ! ಈ ಬರಹದ ಆರಂಭದಲ್ಲಿ ಪ್ರಸ್ತಾಪಿಸಿದ ಕನ್ನಡ ಪುಸ್ತಕ ಮಾರಾಟಗಾರರು ಹೇಳಿದ ಇನ್ನೊಂದು ಸಂಗತಿಯೊಂದಿಗೆ, ಈ ಬರಹವನ್ನು ಮುಕ್ತಾಯ ಗೊಳಿಸುತ್ತೇನೆ : ‘ಇಂದಿನ ಯುವಜನರು (ಇಂಗ್ಲಿಷ್ ಮಾಧ್ಯಮದಲ್ಲಿ ಓದಿದವರು) ಕುವೆಂಪು, ಕಾರಂತ, ತೇಜಸ್ವಿ, ಭೈರಪ್ಪನವರ ಉತ್ತಮ ಕೃತಿಗಳನ್ನು ಕೇಳಿಕೊಂಡು ಬರುತ್ತಾರೆ. ಆದರೆ, ಅವುಗಳ ಇಂಗ್ಲಿಷ್ ಆವೃತ್ತಿ ಇದೆಯೇ ಎಂದು ಕೇಳಿ, ಖರೀದಿಸುತ್ತಾರೆ.
ಮೂಲದಲ್ಲಿ, ಅಂದರೆ, ಕನ್ನಡದಲ್ಲಿ ಓದಲು ತಮ್ಮಿಂದ ಆಗುವುದಿಲ್ಲ ಎಂದೇ ಹೇಳುತ್ತಾರೆ!’ ಎಂದರು ಅವರು. ಕನ್ನಡನಾಡಿನಲ್ಲಿ ಸಾಹಿತ್ಯಾಸಕ್ತಿ ಉಳಿದಿದೆ, ಬೆಳೆದಿದೆ, ಮುಂದುವರಿಯು ತ್ತಿದೆ, ಆದರೆ ಯಾವ ದಿಕ್ಕಿನಲ್ಲಿ ಎಂಬುದಕ್ಕೆ ಅವರ ಈ ಹೇಳಿಕೆಯು ಉತ್ತಮ ದಿಕ್ಸೂಚಿ! ಅಲ್ಲವೇ?