Keshav Prasad B Column: ರುಪಾಯಿ ಮೌಲ್ಯ ಕುಸಿತದಿಂದ ಭಾರತಕ್ಕೆ ಲಾಭ- ನಷ್ಟವೇನು ?
ಭಾರತ 1947ರಲ್ಲಿ ಸ್ವತಂತ್ರವಾದಾಗ ಡಾಲರ್ ಎದುರು ರುಪಾಯಿಯ ಮೌಲ್ಯ 3 ರುಪಾಯಿ 30 ಪೈಸೆ ಯಷ್ಟಿತ್ತು. ಅದಕ್ಕೆ ಹೋಲಿಸಿದರೆ ಡಾಲರ್ ಎದುರು ರುಪಾಯಿ ಇದುವರೆಗೂ ಕೆಳಗಿಳಿದಿರುವುದೇ ಇತಿಹಾಸ. ಆದರೆ ಆಗ ಭಾರತವನ್ನು ಬ್ರಿಟಿಷರು ಹೇಗೆ ಲೂಟಿ ಹೊಡೆದಿದ್ದರು ಎಂಬುದನ್ನು ತಾತ-ಮುತ್ತಾತಂದಿರನ್ನು ಕೇಳಬೇಕು.
Source : Vishwavani Daily News Paper
ಡಾಲರ್ ಎದುರು ರುಪಾಯಿ ಮೌಲ್ಯವು ಸದ್ಯಕ್ಕೆ 86 ರುಪಾಯಿಗಳ ಗಡಿ ದಾಟಿದೆ. ಈ ವರ್ಷ 90ಕ್ಕೆ ಕುಸಿಯಬಹುದು ಎಂದು ಆರ್ಥಿಕ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಕೆಲವರು ಚಿಂತೆ ಬೇಡ ವೆಂದೂ ಅಭಯ ನುಡಿದಿದ್ದರೆ, “ಬ್ರಿಟಿಷರು ಭಾರತವನ್ನು ಬಿಟ್ಟು ಹೋಗುವಾಗ ಒಂದು ರುಪಾಯಿ ಗೆ ಒಂದು ಡಾಲರ್ ಸಿಗುತ್ತಿತ್ತು. ಆದ್ರೆ ಈಗ ನೋಡಿ, ರುಪಾಯಿ ಹೇಗೆ ಬಿದ್ದಿದೆ" ಎಂಬುದು ಮತ್ತೆ ಕೆಲವರ ಬಿಡುಬೀಸು ಹೇಳಿಕೆ.
ಭಾರತ 1947ರಲ್ಲಿ ಸ್ವತಂತ್ರವಾದಾಗ ಡಾಲರ್ ಎದುರು ರುಪಾಯಿಯ ಮೌಲ್ಯ 3 ರುಪಾಯಿ 30 ಪೈಸೆಯಷ್ಟಿತ್ತು. ಅದಕ್ಕೆ ಹೋಲಿಸಿದರೆ ಡಾಲರ್ ಎದುರು ರುಪಾಯಿ ಇದುವರೆಗೂ ಕೆಳಗಿಳಿದಿರು ವುದೇ ಇತಿಹಾಸ. ಆದರೆ ಆಗ ಭಾರತವನ್ನು ಬ್ರಿಟಿಷರು ಹೇಗೆ ಲೂಟಿ ಹೊಡೆದಿದ್ದರು ಎಂಬುದನ್ನು ತಾತ-ಮುತ್ತಾತಂದಿರನ್ನು ಕೇಳಬೇಕು.
ಭಾರತ ತನ್ನ ದೇಶವಾಸಿಗಳಿಗೆ ಒಪ್ಪೊತ್ತಿನ ಊಟ ಒದಗಿಸಲೂ ಕಷ್ಟಪಡುತ್ತಿತ್ತು ಎಂಬುದನ್ನು ಕೇಳಿ ದರೆ ಸಂಕಟವಾಗದೆ ಇರದು. 1947-48ರ ಮೊದಲ ಬಜೆಟ್ ಪ್ರತಿಯನ್ನು ಓದಿದರೆ ಇದಕ್ಕೆ ಸಾಕ್ಷ್ಯ ಸಿಗುತ್ತದೆ. ಭಾರತ 1944-45ರಿಂದ 1946-47ರ ತನಕ ಮೂರು ವರ್ಷಗಳಲ್ಲಿ 43.80 ಲಕ್ಷ ಟನ್ ಆಹಾರ ಧಾನ್ಯಗಳನ್ನು 127 ಕೋಟಿ ರು. ವೆಚ್ಚದಲ್ಲಿ ಆಮದು ಮಾಡಿಕೊಂಡಿತ್ತು.
ಆಗ ಅದು ಅತಿ ದೊಡ್ಡ ಮೊತ್ತವಾಗಿದ್ದರಿಂದ, ಅಹಾರ ಧಾನ್ಯಗಳ ಆಮದು ಮಾಡುವಷ್ಟರಲ್ಲಿ ಬೊಕ್ಕಸದ ಮೇಲೆ ತೀವ್ರ ಒತ್ತಡ ಉಂಟಾಗುತ್ತಿತ್ತು. ಆದರೆ ಈಗ ಭಾರತ ಆಮದಿಗಿಂತ ಹಲವು ಪಟ್ಟು ಹೆಚ್ಚು ಆಹಾರ ಧಾನ್ಯಗಳನ್ನು ರಫ್ತು ಮಾಡುತ್ತಿದೆ ಎಂಬುದನ್ನು ಮರೆಯಬಾರದು.
ರುಪಾಯಿಯ ಮೌಲ್ಯ ಕುಸಿತದಿಂದ ನಾವು ತಿಳಿದುಕೊಳ್ಳಬೇಕಾಗಿರುವುದೇನು? ಮೊದಲನೆಯದಾಗಿ, ಆಮದು ತುಟ್ಟಿಯಾಗುವುದು ಮತ್ತು ಅದರ ಬೆನ್ನ ಹಣದುಬ್ಬರ ಹೆಚ್ಚುವುದು ಖಚಿತ. ಕಚ್ಚಾ ತೈಲ ಮತ್ತು ಬಂಗಾರದ ಬೆಲೆ ಏರಿಕೆಯಾಗುತ್ತದೆ. ಇದರ ಸರಣಿ ಪರಿಣಾಮಗಳನ್ನೂ ಎದುರಿಸ ಬೇಕಾಗು ತ್ತದೆ. ಬಹುತೇಕ ವಸ್ತು, ಸೇವೆಗಳ ಬೆಲೆ ಹೆಚ್ಚುತ್ತದೆ. ಖಾದ್ಯ ತೈಲ, ಆಹಾರ ಧಾನ್ಯ, ರಸಗೊಬ್ಬರ, ಕಚ್ಚಾ ತೈಲ, ಅನಿಲ, ಬಂಗಾರದ ಆಮದು ಖರ್ಚು ಹೆಚ್ಚುತ್ತದೆ. ಈಗಲೂ ಭಾರತಕ್ಕೆ ಶೇ.88ರಷ್ಟು ಕಚ್ಚಾ ತೈಲ ಮತ್ತು ಅನಿಲವನ್ನು ಆಮದು ಮಾಡಿಕೊಳ್ಳಬೇಕಾಗಿದೆ.
ಸಾರಿಗೆ ವೆಚ್ಚ ಹೆಚ್ಚುವುದರಿಂದ ಆಹಾರೋತ್ಪನ್ನಗಳು ತುಟ್ಟಿಯಾಗುತ್ತವೆ. ಜನ ಸಾಮಾನ್ಯರ, ಮಧ್ಯಮ ವರ್ಗದ ಕುಟುಂಬದ ತಿಂಗಳ ಖರ್ಚು ಜ್ವರದಂತೆ ಏರುತ್ತದೆ. ಉದ್ಯಮಿಗಳಿಗೂ ಕಚ್ಚಾ ವಸ್ತುಗಳ ಆಮದು ಖರ್ಚು ಏರುತ್ತದೆ. ಬೆಲೆ ಏರಿಕೆಯ ಬಿಸಿ ಈಗಾಗಲೇ ತಟ್ಟುತ್ತಿದೆ. ಆದರೆ ರುಪಾಯಿ ಪ್ರಬಲವಾದರೆ ಮಾತ್ರ ಅದು ದೇಶವೇ ಹೆಮ್ಮೆಪಡಬೇಕಾದ ವಿಚಾರ ಎಂಬುದೂ ಅಲ್ಲ.
ಅರ್ಥಶಾಸ್ತ್ರದಲ್ಲಿ ಭಾವನೆಗಳಿಗಿಂತ ಬುದ್ಧಿ ಹೇಳಿದಂತೆ ನಡೆದುಕೊಳ್ಳುವುದರಿಂದ ಲಾಭವಾಗುತ್ತದೆ. ಡಾಲರ್ ಅಥವಾ ಯಾವುದಾದರೂ ಪ್ರಮುಖ ಕರೆನ್ಸಿಯ ಎದುರು ರುಪಾಯಿ ದುರ್ಬಲವಾದಾಗ ಎರಡು ಆಯಾಮಗಳಲ್ಲಿ ಪರಿಣಾಮಗಳು ಉಂಟಾಗುತ್ತವೆ. ರಫ್ತು ಅಗ್ಗವಾಗುತ್ತದೆ, ಹೆಚ್ಚು ಸ್ಪರ್ಧಾ ತ್ಮಕವಾಗುತ್ತದೆ. ಆಮದು ಹೆಚ್ಚು ದುಬಾರಿಯಾಗುತ್ತದೆ, ಸ್ಪರ್ಧಾತ್ಮಕತೆಯನ್ನು ಕಳೆದು ಕೊಳ್ಳುತ್ತದೆ. ಹೀಗಾಗಿ ಬಹುತೇಕ ವಸ್ತು, ಸೇವೆಗಳ ಬೆಲೆ ಹೆಚ್ಚುತ್ತದೆ. ಹೀಗಿದ್ದರೂ, ವಿದೇಶಗಳಿಗೆ ಉತ್ಪನ್ನ ಮತ್ತು ಸೇವೆಗಳನ್ನು ರಫ್ತು ಮಾಡುವವರಿಗೆ ಅನುಕೂಲವಾಗುತ್ತದೆ.
ಉದಾಹರಣೆಗೆ ಐಟಿ, ಫಾರ್ಮಾ, ಜವಳಿ ರಫ್ತುದಾರರಿಗೆ ಆದಾಯ ಮತ್ತು ಲಾಭ ಹೆಚ್ಚಬಹುದು. ಆದ್ದರಿಂದ ಈ ವಲಯದ ‘ಲಾರ್ಜ್ ಕ್ಯಾಪ್’ ಕಂಪನಿಗಳ ಷೇರುಗಳಲ್ಲಿ ಹೂಡಿಕೆಗೆ ಈಗ ಸಕಾಲ. ಆದರೆ ವಿಪತ್ತಿನಲ್ಲಿ ಅವಕಾಶ ಕಂಡುಕೊಳ್ಳುವುದಾದರೆ, ಆಮದು ಮೇಲಿನ ಅವಲಂಬನೆಯನ್ನು ತಗ್ಗಿಸಲು ಕೂಡ ಇದು ಪುಷ್ಟಿ ನೀಡುತ್ತದೆ. ಆದರೆ ಇಲ್ಲಿ ಮತ್ತೊಂದು ಸಮಸ್ಯೆ ಇದೆ. ಜಾಗತಿಕ ಮಾರು ಕಟ್ಟೆಯೂ ಮಂದಗತಿಯಲ್ಲಿದ್ದರೆ ರಫ್ತುದಾರರಿಗೂ ಅಷ್ಟೊಂದು ಪ್ರಯೋಜನ ಆಗುವುದಿಲ್ಲ. ಚೀನಾ ಈ ಹಿಂದೆ ವರ್ಷಗಟ್ಟಲೆ ಕಾಲ ತನ್ನ ಕರೆನ್ಸಿಯನ್ನು ಉದ್ದೇಶಪೂರ್ವಕವಾಗಿಯೇ ಅಪ ಮೌಲ್ಯಗೊಳಿಸಿತ್ತು ಹಾಗೂ ತನ್ನ ರಫ್ತುದಾರರಿಗೆ ಅನುಕೂಲ ಮಾಡಿಕೊಟ್ಟಿತ್ತು.
ಚೀನಾದ ಕೈಗಾರಿಕಾ ನೀತಿಗಳಲ್ಲಿ ಸಬ್ಸಿಡಿ, ಅಗ್ಗದ ಭೂಮಿ, ಉಚಿತ ವಿದ್ಯುತ್ ಪೂರೈಕೆ ಸದ್ದು ಮಾಡುತ್ತದೆ. ಆದರೆ ಆ ದೇಶ ತನ್ನ ಕರೆನ್ಸಿಯನ್ನು ಬೇಕಂತಲೇ ದುರ್ಬಲವಾಗಿಸಿ ಸಹಕರಿಸುತ್ತಿರು ವುದು ಅಷ್ಟಾಗಿ ಸುದ್ದಿಯಾಗುವುದಿಲ್ಲ. ಜಪಾನ್ ಕೂಡ ಡಾಲರ್ ಎದುರು ತನ್ನ ಕರೆನ್ಸಿಯನ್ನು ಅಪಮೌಲ್ಯಗೊಳಿಸಿತ್ತು. ಭಾರತದಲ್ಲಿ ಈಗ ಬದಲಾಗಿರುವ ಪರಿಸ್ಥಿತಿಯನ್ನು ನೋಡೋಣ. ಉದಾ ರೀಕರಣದ ಯುಗ ಶುರುವಾದಾಗಿನಿಂದ ಇದೇ ಮೊದಲ ಬಾರಿಗೆ ಭಾರತದಲ್ಲಿ ಉತ್ಪಾದನಾ ವಲಯ ದಲ್ಲಿ ಸ್ಪರ್ಧಾತ್ಮಕತೆಗೆ ಆದ್ಯತೆ ನೀಡಲಾಗುತ್ತಿದೆ. ಕೈಗಾರಿಕಾ ನೀತಿಗಳಲ್ಲಿ ಉತ್ಪಾದನೆ ಆಧರಿತ ಇನ್ಸೆಂಟಿವ್ (ಪಿಎಲ್ಎ) ಯಶಸ್ವಿಯಾಗಿ ಹಲವು ವಲಯಗಳಲ್ಲಿ ಅನುಷ್ಠಾನವಾಗಿದೆ.
ಇದಕ್ಕೆ ದುರ್ಬಲ ರುಪಾಯಿಯಿಂದ ಮತ್ತಷ್ಟು ಉತ್ತೇಜನ ಸಿಗಲಿದೆ. ಆಮದು ಭಾರತದ ದೊಡ್ಡ ಸವಾಲು. ಭಾರತದಲ್ಲಿ ಸಾಕಷ್ಟು ನೈಸರ್ಗಿಕ ಸಂಪನ್ಮೂಲವಿದ್ದರೂ, ಸುದೀರ್ಘ ಕಾಲದ ನಿರಾಶಾ ವಾದದ ಪರಿಣಾಮ ಆಮದಿನ ಮೇಲಿನ ಅವಲಂಬನೆಯೂ ಮುಂದುವರಿದಿದೆ. ಹೆಚ್ಚು ಆಮದು ಮಾಡುವ ವಸ್ತು ಕಚ್ಚಾ ತೈಲ. ಒಟ್ಟು ಆಮದಿನಲ್ಲಿ ಇದು ಶೇ.20ರಷ್ಟು ಪಾಲನ್ನು ಹೊಂದಿದೆ. ದರ ಎಷ್ಟಿದ್ದರೂ ತೈಲ ಬೇಕು. ಇದರಿಂದ ವ್ಯಾಪಾರ ಕೊರತೆ ಹೆಚ್ಚುತ್ತದೆ. ಬೆಲೆ ಏರಿಕೆಗೂ ಇದು ಕಾರಣವಾಗಿದೆ.
ಎರಡನೇ ದೊಡ್ಡ ಆಮದು ಬಂಗಾರದ್ದು. ಬಂಗಾರದಲ್ಲಿ ಸಂಪತ್ತನ್ನು ರಕ್ಷಿಸಿಡುವುದು ಭಾರತೀಯ ರಿಗೆ ಹೊಸತೇನಲ್ಲ. ಆದರೆ ರುಪಾಯಿ ಮೌಲ್ಯ ಕುಸಿದಾಗ ಬಂಗಾರದ ಆಮದು ಮತ್ತಷ್ಟು ತುಟ್ಟಿ ಯಾಗುತ್ತದೆ. ಸುದೈವವಶಾತ್ ಭಾರತದ ವಿದೇಶಿ ವಿನಿಮಯ ಸಂಗ್ರಹ ಸಮೃದ್ಧವಾಗಿದ್ದು, ರುಪಾ ಯಿಯ ಮೌಲ್ಯವನ್ನು ಸಮತೋಲನದಲ್ಲಿ ಇಡಲು ಸಹಕಾರಿಯಾಗು ತ್ತದೆ. ಆರ್‌ಬಿಐ ಕೂಡ ರಚನಾತ್ಮಕ ತಂತ್ರದ ಭಾಗವಾಗಿ ಇತ್ತೀಚೆಗೆ ಡಾಲರ್ ಎದುರು ರುಪಾಯಿ ಮೇಲಿನ ತನ್ನ ನಿಯಂತ್ರಣವನ್ನು ಸಡಿಲಗೊಳಿಸಿದೆ.
ಹಾಗಾದರೆ ನೀತಿ ನಿರೂಪಕರು (ಪಾಲಿಸಿ ಮೇಕರ್ಸ್) ಏನು ಮಾಡಬಹುದು? ಆಮದು ಮೇಲಿನ ಅವಲಂಬನೆಯನ್ನು ಗಣನೀಯವಾಗಿ ತಗ್ಗಿಸಬೇಕು. ಕಚ್ಚಾ ತೈಲ, ಚಿನ್ನ, ವಜ್ರ, ಖನಿಜಗಳು, ಲೋಹ ಗಳನ್ನು ಭಾರತ ಆಮದು ಮಾಡಿಕೊಳ್ಳುತ್ತಿದೆ. ದೇಶದಲ್ಲಿಯೇ ಇವುಗಳ ಉತ್ಪಾದನೆಯನ್ನು ಹೆಚ್ಚಿಸ ಲು ಯತ್ನಿಸಬೇಕು. ಭಾರತದಲ್ಲಿ ಹೇರಳ ಮತ್ತು ವೈವಿಧ್ಯಮಯ ಖನಿಜ ಸಂಪತ್ತು ಇದೆ. ನೈಸರ್ಗಿಕ ಇಂಧನ ಮೂಲಗಳೂ ಇವೆ.
ದೇಶದಲ್ಲಿ 90 ವಿಧದ ಖನಿಜ ಸಂಪತ್ತುಗಳಿಗೆ ಕೊರತೆ ಇಲ್ಲ. ಭಾರತ ವಿಶ್ವದಲ್ಲಿಯೇ ಮೂರನೇ ಅತಿ ದೊಡ್ಡ ಕಲ್ಲಿದ್ದಲು ಮತ್ತು ಉಕ್ಕು ಉತ್ಪಾದಕ ರಾಷ್ಟ್ರವಾಗಿದೆ. ನಾಲ್ಕನೇ ಅತಿ ದೊಡ್ಡ ಕಬ್ಬಿಣದ ಅದಿರು ಉತ್ಪಾದಕನಾಗಿದೆ. ಬಾಕ್ಸೈಟ್ ನಿಕ್ಷೇಪದಲ್ಲಿ ಐದನೇ ಸ್ಥಾನದಲ್ಲಿದೆ. ಆದರೆ ಆಧುನಿಕ ಗಣಿ ಗಾರಿಕೆ, ಉತ್ಪಾದನೆ ಮತ್ತು ಅಭಿವೃದ್ಧಿಯಲ್ಲಿ ಮುಂಚೂಣಿಗೆ ಬರಬೇಕಾಗಿದೆ.
ಎರಡನೆಯದಾಗಿ ಇಲೆಕ್ಟ್ರಾನಿಕ್ಸ್ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ನೀಡಬೇಕಾಗಿದೆ. ಏಕೆಂದರೆ ಇದಕ್ಕಾಗಿ ಹೆಚ್ಚಿನ ಆಮದು ವೆಚ್ಚವಾಗುತ್ತಿದೆ. ಮೂರನೆಯದಾಗಿ ಭಾರತ ನವೀಕರಿಸಬಹುದಾದ ಇಂಧನ ಮೂಲಗಳಿಂದ ವ್ಯಾಪಕವಾಗಿ ವಿದ್ಯುತ್ ಉತ್ಪಾದಿಸಬೇಕು. ಈ ನಿಟ್ಟಿನಲ್ಲಿ ಭಾರತ ಈಗಾ ಗಲೇ ಮುನ್ನಡೆಯುತ್ತಿರುವುದು ಗಮನಾರ್ಹ.
ಭಾರತ ಇಂದು ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ, ವಿಶ್ವದಲ್ಲಿಯೇ ಮೂರನೇ ಅತಿ ದೊಡ್ಡ ದೇಶವಾಗಿದೆ. 2030ರ ವೇಳೆಗೆ ಶೇ.50ರಷ್ಟು ವಿದ್ಯುತ್ ಅನ್ನು ಸೌರ, ಪವನ ಮತ್ತು ಜಲ ವಿದ್ಯುತ್ ಮೂಲಕ ಭರಿಸಲು ಭಾರತ ಬದ್ಧವಾಗಿದೆ. ಈ ಎಲ್ಲ ಉಪಕ್ರಮಗಳಿಂದ ರುಪಾಯಿ ಮೇಲಿನ ಒತ್ತಡ ಕಡಿಮೆಯಾಗಲಿದೆ. ಆಗ ರುಪಾಯಿಯನ್ನು ಮತ್ತಷ್ಟು ಅಪಮೌಲ್ಯಗೊಳಿಸಿದರೂ, ಲಾಭವೇ ಆಗಲಿದೆ. ಭಾರತವು ಆಮದನ್ನು ಕಡಿಮೆ ಮಾಡಿಕೊಂಡು, ನಿವ್ವಳ ರಫ್ತು ರಾಷ್ಟ್ರವಾಗಿ ಹೊರಹೊಮ್ಮಲು ಅನುಕೂಲವಾಗಲಿದೆ.
ರುಪಾಯಿಯ ಕುಸಿತಕ್ಕೆ ಕಾರಣವೇನು? ಮೊದಲನೆಯ ಕಾರಣ ಡಾಲರ್ ಪ್ರಾಬಲ್ಯ. ಅಮೆರಿಕದಲ್ಲಿ ಟ್ರಂಪ್ ನೇತೃತ್ವದ ಸರಕಾರ ಆಮದು ಮೇಲಿನ ತೆರಿಗೆಯನ್ನು ಹೆಚ್ಚಿಸುವ ನಿರೀಕ್ಷೆ ಇರುವುದರಿಂದ ಡಾಲರ್ ಬಲ ಹೆಚ್ಚಲಿದೆ ಎಂಬ ಅಂದಾಜಿದೆ. ಇತ್ತೀಚೆಗೆ ಉದ್ಯೋಗ ಸೃಷ್ಟಿಯ ಅಂಕಿ-ಅಂಶಗಳೂ ಸಕಾರಾತ್ಮಕವಾಗಿದ್ದು, ಫೆಡರಲ್ ರಿಸರ್ವ್‌ನಿಂದ ಬಡ್ಡಿದರ ಇಳಿಕೆಯ ಸಾಧ್ಯತೆ ಕ್ಷೀಣಿಸಿದೆ.
ಇದೆಲ್ಲವೂ ನಾನಾ ಕರೆನ್ಸಿಗಳೆದುರು ಡಾಲರ್ ಅಬ್ಬರಕ್ಕೆ ಕಾರಣವಾಗಿದೆ. ಹೀಗಿದ್ದರೂ, ರುಪಾ ಯಿಯ ಕುಸಿತ ವಿಶೇಷ ಅನ್ನಿಸಿದೆ. ಇದಕ್ಕೊಂದು ಹಿನ್ನೆಲೆಯಿದೆ. ಈ ಹಿಂದೆ ರುಪಾಯಿ ಕುಸಿತ ಕ್ಕೀಡಾದಾಗ ತಕ್ಷಣ ಆರ್‌ಬಿಐ ಮಧ್ಯಪ್ರವೇಶಿಸುತ್ತಿತ್ತು. ಡಾಲರ್‌ಗಳನ್ನು ಮಾರಾಟ ಮಾಡಿ ರುಪಾಯಿ ಮೌಲ್ಯವನ್ನು ಮತ್ತಷ್ಟು ಕುಸಿಯದಂತೆ ನೋಡಿಕೊಳ್ಳುತ್ತಿತ್ತು. ಆದರೆ ಈ ಸಲ ರುಪಾಯಿ ಯನ್ನು 86ರ ಮಟ್ಟದಲ್ಲಿ ಡಿಫೆಂಡ್ ಮಾಡಿಕೊಳ್ಳುತ್ತಿದೆ.
ಆರ್‌ಬಿಐ ಮಧ್ಯಪ್ರವೇಶದ ತೀವ್ರತೆ ಕಡಿಮೆಯಾಗಿದೆ. ಎಸ್‌ಬಿಐ ವರದಿ ಪ್ರಕಾರ ಇತರ ಕರೆನ್ಸಿಗಳಿಗೆ ಹೋಲಿಸಿದರೆ ರುಪಾಯಿ ಈಗಲೂ ಸ್ಥಿರವಾಗಿದೆ. ಯಾವುದೇ ರಾಷ್ಟ್ರಕ್ಕೆ, ತನ್ನ ಕರೆನ್ಸಿಯನ್ನು ಅಪ ಮೌಲ್ಯಗೊಳಿಸುವುದರಿಂದ ರಫ್ತು ಮಾರುಕಟ್ಟೆಯಲ್ಲಿ ಲಾಭವಾಗುವುದಿದ್ದರೆ, ಸ್ಪರ್ಧಾ ತ್ಮಕತೆಯ ಪ್ರಯೋಜನ ಸಿಗುವುದಿದ್ದರೆ, ಅಮೆರಿಕ ಕೂಡ ಡಾಲರ್‌ನ ಮೌಲ್ಯವನ್ನು ಅಪಮೌಲ್ಯ ಗೊಳಿಸ ಬಹುದಲ್ಲವೇ? ಎಂದು ನೀವು ಕೇಳಬಹುದು. ಅಂಥದೊಂದು ಚರ್ಚೆ ನಡೆಯುತ್ತಿದೆ.
ಡೊನಾಲ್ಡ್ ಟ್ರಂಪ್ ಅವರು ಡಾಲರ್‌ನ ಮೌಲ್ಯವನ್ನು ತಗ್ಗಿಸಲು ಬಯಸುತ್ತಿದ್ದಾರೆ. ಹೀಗಿದ್ದರೂ, ಅವರ ನೀತಿಗಳಿಂದಾಗಿ ಡಾಲರ್‌ನ ವಿದೇಶಿ ವಿನಿಮಯ ದರ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಅದು ಜಾಗತಿಕ ಇಕಾನಮಿಗೆ ಒಳ್ಳೆಯದಲ್ಲ. ಡಾಲರ್ ಮೌಲ್ಯ ತಗ್ಗಿದರೆ ಅಮೆರಿಕದ ರಫ್ತಿಗೆ ಲಾಭ ವಾಗಲಿದೆ. ಅದರ ವ್ಯಾಪಾರ ಕೊರತೆ ತಗ್ಗಿಸಲು ಸಹಕಾರಿಯಾಗಲಿದೆ. ಆದರೆ ಯಾವಾಗ ಟ್ರಂಪ್ ಚುನಾವಣೆ ಗೆದ್ದರೋ, ಆವಾಗಿನಿಂದ ಡಾಲರ್ ದರ ಹೆಚ್ಚುತ್ತಿದೆ. ಡಾಲರ್ ಈ ರೀತಿ ಉಬ್ಬರ ದಲ್ಲಿರು ವುದು ಸ್ವತಃ ಅಮೆರಿಕದ ಆರ್ಥಿಕತೆಗೂ ಒಳ್ಳೆಯದಲ್ಲ.
ಈ ಹಿನ್ನೆಲೆಯಲ್ಲಿ ಟ್ರಂಪ್ ಅವರು ಅಧಿಕಾರ ಸ್ವೀಕರಿಸಿದ ಬಳಿಕ ವಿದೇಶಿ ವಿನಿಮಯ ಮಾರುಕಟ್ಟೆ ಯಲ್ಲಿ ಡಾಲರ್ ಮೌಲ್ಯ ಸ್ಥಿರತೆಯನ್ನು ಕಾಣುವ ನಿರೀಕ್ಷೆ ಇದೆ. ಅಮೆರಿಕದ ವ್ಯಾಪಾರ ಕೊರತೆ ಕಡಿಮೆಯಾಗಬೇಕಿದ್ದರೆ, ಡಾಲರ್ ಸ್ಥಿರತೆಯೂ ನಿರ್ಣಾಯಕ. ಡಾಲರ್ ಮೌಲ್ಯ ಹೆಚ್ಚಿದರೆ ಅಮೆರಿ ಕಕ್ಕೆ ಆಮದು ಅಗ್ಗವಾಗಲಿದ್ದು, ಕಡಿಮೆ ಬೆಲೆಗೆ ಹೆಚ್ಚು ಆಮದು ಮಾಡಿಕೊಳ್ಳಬಹುದು. ಆದರೆ ಮತ್ತೊಂದು ಕಡೆ ಟ್ರಂಪ್ ಅವರು ಚೀನಾ ಮತ್ತು ಇತರ ದೇಶಗಳಿಂದ ಆಮದು ಮೇಲೆ ತೆರಿಗೆಯನ್ನು ಹೆಚ್ಚಿಸುವುದಾಗಿ ಘೋಷಿಸಿದ್ದಾರೆ.
ಆಗ ಅಮೆರಿಕನ್ನರಿಗೆ ಆಮದು ತುಟ್ಟಿಯಾಗಲಿದೆ. ರಫ್ತು ಕೂಡ ಅನುಕೂಲಕರವಾಗುವುದಿಲ್ಲ. ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಡಾಲರ್‌ಗೆ ಪರ್ಯಾಯ ಸಾಧ್ಯವೇ ಎಂಬ ಪ್ರಶ್ನೆ ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿದೆ. ಟ್ರಂಪ್ ಅವರು ಇತ್ತೀಚೆಗೆ, “ಡಾಲರ್ ಅನ್ನು ಕಡೆಗಣಿಸಿದರೆ ಅಂಥ ದೇಶಗಳ ವಿರುದ್ಧ ತೆರಿಗೆಯ ಪ್ರಹಾರ ಮಾಡಲಾಗುವುದು" ಎಂದು ಬೆದರಿಸಿದ್ದಾರೆ. ಅವರಿಗೂ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಕಿಮ್ಮತ್ತು ಕಳೆದುಕೊಳ್ಳುವ ಭೀತಿ ಇದೆ ಎಂಬುದು ಸ್ಪಷ್ಟವಾಗಿದೆ. ಈ ಭಯದಿಂದಾದರೂ ಡಾಲರ್ ಮೌಲ್ಯದ ಸ್ಥಿರತೆಗೆ ಟ್ರಂಪ್ ಆದ್ಯತೆ ನೀಡಬೇಕಾ ಗಿದೆ.
ಇದನ್ನೂ ಓದಿ: Basamma Hiroor Column: ಸಂಜೆಗಿಂತ ಸುಂದರ ಗಳಿಗೆ ಉಂಟೇ ?