Manjunath Adde Column: ಆರೆಸ್ಸೆಸ್ ವಿಪತ್ಕಾರಿ ವ್ಯಾಪಾರಿಗಳ ಸಂಘ...
ತನ್ನ ಆಶಯದಲ್ಲಿ ವೈದಿಕವಾದದ, ವರ್ಣಾಶ್ರಮ ವ್ಯವಸ್ಥೆಯ ತಾರತಮ್ಯದ, ದುಡಿಯುವ ಜನರನ್ನು ಸುಲಿದು ತಿನ್ನುವ ತಾತ್ವಿಕತೆಯನ್ನು ಹೊಂದಿರುವಂಥದ್ದು ಆರೆಸ್ಸೆಸ್. ಒಳಗೆ ವ್ಯಾಘ್ರ, ಹೊರಗೆ ಗೋ ಮುಖದ ವೇಷ ತೊಟ್ಟಿರುವ ಇವರು ನುಡಿಯುವ ‘ನೈತಿಕತೆ, ಸಮಾಜ ಸೇವೆ, ಧರ್ಮ, ರಾಷ್ಟ್ರಪ್ರೇಮ’ ಎಂಬ ಶಬ್ದಗಳು, ದುಡಿಯುವ ಬಹುಸಮುದಾಯಗಳ ಯುವಕ, ಯುವತಿಯರನ್ನು ಯಾಮಾರಿಸಲು ತೋರಿಕೆಗಷ್ಟೆ ಬಳಸುತ್ತಿರುವ ಶಬ್ದಗಳಷ್ಟೇ.

-

ಎದುರೇಟು
ಮಂಜುನಾಥ ಅದ್ದೆ
ಈ ನೆಲದ ಜನರ ಮೇಲೆ, ಕಾನೂನಿನ ಮೇಲೆ ಕಿಂಚಿತ್ತೂ ಗೌರವವಿಲ್ಲದ, ಬದ್ಧತೆಯಿಲ್ಲದ ಸಂಘಟನೆ ಆರೆಸ್ಸೆಸ್. ಇವರು ಬಳಸುವ ಧರ್ಮ, ನೈತಿಕತೆ, ರಾಷ್ಟ್ರಪ್ರೇಮ ಎಂಬ ಶಬ್ದಗಳಿಗೆ ಕ್ರಿಯಾರೂಪದ ಅರ್ಥಗಳೇ ಇಲ್ಲ. ಇವುಗಳನ್ನು ಶಬ್ದ ವಿಜೃಂಭಣೆಗಾಗಿ ಮಾತ್ರ ಇವರು ಬಳಸುತ್ತಾರೆ.
ತನ್ನ ಆಶಯದಲ್ಲಿ ವೈದಿಕವಾದದ, ವರ್ಣಾಶ್ರಮ ವ್ಯವಸ್ಥೆಯ ತಾರತಮ್ಯದ, ದುಡಿಯುವ ಜನರನ್ನು ಸುಲಿದು ತಿನ್ನುವ ತಾತ್ವಿಕತೆಯನ್ನು ಹೊಂದಿರುವಂಥದ್ದು ಆರೆಸ್ಸೆಸ್. ಒಳಗೆ ವ್ಯಾಘ್ರ, ಹೊರಗೆ ಗೋಮುಖದ ವೇಷ ತೊಟ್ಟಿರುವ ಇವರು ನುಡಿಯುವ ‘ನೈತಿಕತೆ, ಸಮಾಜ ಸೇವೆ, ಧರ್ಮ, ರಾಷ್ಟ್ರಪ್ರೇಮ’ ಎಂಬ ಶಬ್ದಗಳು, ದುಡಿಯುವ ಬಹುಸಮುದಾಯಗಳ ಯುವಕ, ಯುವತಿಯರನ್ನು ಯಾಮಾರಿಸಲು ತೋರಿಕೆಗಷ್ಟೆ ಬಳಸುತ್ತಿರುವ ಶಬ್ದಗಳಷ್ಟೇ.
ಸುಳ್ಳು ಪ್ರಸರಣವನ್ನೇ ತಮ್ಮ ಶಕ್ತಿಯಂತೆ ಸಾಮಾಜಿಕ ಜಾಲತಾಣಗಳಲ್ಲಿ ಬಿಂಬಿಸುವ ಸನ್ನಿಪ್ರಜ್ಞೆ ಯ ಇವರು, ಸದನದಲ್ಲಿ ಡಿ.ಕೆ.ಶಿವಕುಮಾರ್ ಅವರು ಮಾಡಿದ ವ್ಯಂಗ್ಯವನ್ನು ‘ತಮ್ಮ ಪರವಾದ ಒಲವು’ ಎಂದು ಬಿಂಬಿಸಲು ಪ್ರಯತ್ನಿಸಿದ್ದರು. ಇನ್ನು ಬಿ.ಕೆ. ಹರಿಪ್ರಸಾದ್‌ರವರು ಬರೆದ ಲೇಖನಕ್ಕೆ ಕನಿಷ್ಠಪಕ್ಷ ಅರ್ಥಬದ್ಧ ಹಾಗೂ ತಾರ್ಕಿಕ ಉತ್ತರವನ್ನು ಕೊಡಲು ಶಕ್ತರಲ್ಲದ ಸಂಘಪರಿವಾರಿಗಳು, ಬಿಜೆಪಿ ನಾಯಕರುಗಳು, ಕೆಟ್ಟ-ಕೊಳಕ ಭಾಷೆಯಲ್ಲಿ ನಿಂದನೆಯ ರೂಪದ ಪ್ರತಿಕ್ರಿಯೆಗಳನ್ನು ಕೊಟ್ಟು ತಮ್ಮ ಆರೆಸ್ಸೆಸ್ ಟ್ರೈನಿಂಗ್‌ನ ವ್ಯಕ್ತಿತ್ವದ ಸಂಸ್ಕಾರ ಎಂಥದೆಂದು ತೋರಿಸಿಕೊಂಡರು.
ಇದನ್ನೂ ಓದಿ: Vishweshwar Bhat Column: ಇದು ವಿಮಾನಯಾನದಲ್ಲಿ ಮಾತ್ರ ಸಾಧ್ಯ!
ಈಗ ಪ್ರಿಯಾಂಕ್ ಖರ್ಗೆಯವರ ಸರದಿ. ಇವರ ಮೇಲೆ ಸಂಘಪರಿವಾರದವರು, ಬಿಜೆಪಿಯ ಸಾಲು ಸಾಲು ನಾಯಕರು ಮುಗಿ ಬಿದ್ದಿದ್ದಾರೆ. ಅದರಲ್ಲೂ ಸಾಂವಿಧಾನಿಕ ಹುದ್ದೆಯಲ್ಲಿರುವ ವಿರೋಧ ಪಕ್ಷದ ನಾಯಕ ಅಶೋಕ್‌ರವರು, ಕೇಂದ್ರ ಮಂತ್ರಿಗಳಾದ ಪ್ರಲ್ಹಾದ್ ಜೋಷಿ, ಬಿಜೆಪಿ ರಾಜ್ಯಾಧ್ಯಕ್ಷ ರಾದ ವಿಜಯೇಂದ್ರ, ಶಾಸಕರಾದ ಸಿ.ಟಿ. ರವಿ, ಸುರೇಶ್ ಕುಮಾರ್, ಸುನೀಲ್ ಕುಮಾರ್, ಅಶ್ವತ್ಥ ನಾರಾಯಣ್ ಮುಂತಾದವರೆಲ್ಲ ಈ ನೆಲದ ಶಾಸನಗಳ ಅಡಿಯಲ್ಲಿ ವಿವಿಧ ಹುದ್ದೆಗಳನ್ನು ಹೊಂದಿದ್ದವರು, ಹೊಂದಿರುವವರು.
ಇವರಿಗೆ ಪ್ರಿಯಾಂಕ್ ಖರ್ಗೆಯವರ ಪತ್ರದಲ್ಲಿ ಯಾವುದು ಸರಿ ಕಂಡಿಲ್ಲ? ‘ಅರೆಸ್ಸೆಸ್ ನೋಂದಾ ಯಿತ ಸಂಸ್ಥೆ ಅಲ್ಲ’ ಎಂಬುದು ಸರಿಯಿಲ್ಲವೆ? ‘ಲಾಠಿ, ತ್ರಿಶೂಲ, ಗದೆ, ಕತ್ತಿಗಳನ್ನು ಸಾರ್ವಜನಿಕ ವಾಗಿ, ಅದರಲ್ಲೂ ಸಾಮೂಹಿಕವಾಗಿ ಪ್ರದರ್ಶನ ಮಾಡಿ, ಸಾರ್ವಜನಿಕರಲ್ಲಿ ಭೀತಿಯನ್ನು ಮೂಡಿಸುವುದು ತಪ್ಪು’ ಎಂದದ್ದು ತಪ್ಪಾಗಿದೆಯೆ? ‘ಸಾರ್ವಜನಿಕ ಸ್ಥಳಗಳಾದ, ಶಾಲಾ ಮೈದಾನ, ಉದ್ಯಾನ, ದೇವಳ, ಆಟದ ಅಂಗಳಗಳಲ್ಲಿ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯದೆ ಯಾವುದೇ ಸಂಸ್ಥೆ ಬೈಠಕ್, ಸಮ್ಮೇಳನ, ಗುಂಪು ಪ್ರದರ್ಶನ, ಧ್ವನಿವರ್ಧಕ ಅಳವಡಿಕೆ ಮಾಡುವುದು ತಪ್ಪು’ ಎಂದದ್ದು ಸರಿಯಾಗಿಲ್ಲವೆ? ‘ಅರೆಸ್ಸೆಸ್-ಬಿಜೆಪಿಯ ಲೀಡರ್‌ಗಳು ಕೊಟ್ಟ ಹುಕುಂಗೆ ಶೂದ್ರರ, ದಲಿತರ, ಹಿಂದುಳಿದವರ, ದೇಶದಲ್ಲಿ ಸಂಪತ್ತನ್ನು ಸೃಷ್ಟಿಸಲು ದುಡಿಯುವವರ ಮಕ್ಕಳು ಬಲಿಯಾಗುತ್ತಿದ್ದಾರೆ.
ಈ ಲೀಡರ್‌ಗಳ ಮಕ್ಕಳು ಇಲ್ಲಿ ಗಾಯಬ್ ಆಗಿ, ದೇಶ-ವಿದೇಶಗಳಲ್ಲಿ ಪ್ರತಿಷ್ಠಿತ ವಿಶ್ವವಿದ್ಯಾಲಯ ಗಳಲ್ಲಿ ವಿದ್ಯಾರ್ಥಿಗಳಾಗಿ, ಸಿಇಓಗಳಾಗಿ, ಬಿಸಿನೆಸ್ ಟೈಕೂನ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಬಡವರ ಮಕ್ಕಳು ರಕ್ತ ಚೆಲ್ಲುತಿದ್ದಾರೆ’ ಎಂದದ್ದು ತಪ್ಪೇ? ಪ್ರಿಯಾಂಕ್ ಅವರ ಈ ಯಾವ ಪ್ರಶ್ನೆಗಳಿಗೂ ಬಿಜೆಪಿ-ಸಂಘಪರಿವಾರದ ಯಾವೊಬ್ಬ ನಾಯಕರೂ ಉತ್ತರ ಕೊಟ್ಟಿಲ್ಲ.
ಸ್ವತಃ ವಿರೋಧ ಪಕ್ಷದ ನಾಯಕರಾದ ಅಶೋಕ್‌ರವರು, ‘ನಿಮಗೆ ತಾಕತ್ತಿದ್ದರೆ ಅರೆಸ್ಸೆಸ್‌ನ ನಿಷೇಧ ಮಾಡಿ’ ಎಂದಿದ್ದಾರೆ. ಇಂಥ ಜವಾಬ್ದಾರಿಯುತ ಸ್ಥಾನದಲ್ಲಿರುವ ಇವರಿಗೆ ‘ತಾಕತ್ತು’ ಶಬ್ದ ಬಳಸು ವುದು ಸರ್ವಾಧಿಕಾರದ, ಗೂಂಡಾಯಿಸಂನ ಲಕ್ಷಣ ಎಂಬುದೇ ತಿಳಿದಿಲ್ಲ. ಇದರ ಬದಲು ಅರೆಸ್ಸೆಸ್‌ನ ತತ್ವವೇನು? ಸಮಾಜಕ್ಕೆ ಅದರ ಕೊಡುಗೆ ಏನು? ಆರೆಸ್ಸೆಸ್‌ನ ಕೊಡೆಯ ಕೆಳಗಡೆ ಇರುವ ರಾಮಸೇನೆ, ವಿಶ್ವ ಹಿಂದೂ ಪರಿಷತ್, ಗೋರಕ್ಷಕ ಪಡೆಗಳು, ಬಜರಂಗದಳ ಮುಂತಾದ ಹತ್ತಾರು ಸಂಘಟನೆಗಳು ದೇಶದ ಪ್ರಗತಿ, ಅಭಿವೃದ್ಧಿ, ಅನಕ್ಷರತೆ ನಿವಾರಣೆ, ಜಾತಿ ತಾರತಮ್ಯ ನಿರ್ಮೂಲನೆ, ಸಂಪತ್ತಿನ ಹಂಚಿಕೆ, ಆಧ್ಯಾತ್ಮಿಕ ಉನ್ನತೀಕರಣಕ್ಕೆ ಏನೇನು ಕೊಡುಗೆ ಕೊಟ್ಟಿವೆ ಎಂಬುದನ್ನು ದಾಖಲೆಗಳ ಸಮೇತ ಅಶೋಕ್‌ರವರು ಜನರ ಮುಂದೆ ಮಂಡಿಸಿ ವಿಶ್ವಾಸ ಪಡೆಯಬಹುದಿತ್ತು.
ಇದನ್ನು ಹೇಳಲು ಆಗದ್ದಿದಕ್ಕೆ ಅಶೋಕ್‌ರವರಿಗೆ ಪಶ್ಚಾತಾಪವಿಲ್ಲ, ಬದಲಿಗೆ ‘ತಾಕತ್ತು’ ಎನ್ನುತ್ತಾರೆ. ಇದೇ ಭಾರತಾಂಬೆಯ ದುರಂತ. ಇನ್ನು ಸಿ.ಟಿ. ರವಿಯವರು ಆರೆಸ್ಸೆಸ್ ಹೆಸರಲ್ಲಿ ‘ರಾಷ್ಟ್ರೀಯ’ ಅಂತ ಇರುವುದೇ ಖರ್ಗೆಯವರ ಹೊಟ್ಟೆ ಉರಿಗೆ ಕಾರಣ ಎಂದಿದ್ದಾರೆ. ಇದೊಂದು ಬಗೆಯ ಬಾಲಿಶ ವಿವರಣೆ. ಇದೇ ತರ್ಕವನ್ನು ವಿಸ್ತರಿಸುವುದಾದರೆ. ‘ಭಾರತ ರಾಷ್ಟ್ರೀಯ ಕಾಂಗ್ರೆಸ್’ ಎಂಬುದು ಪ್ರಿಯಾಂಕ್‌ರವರ ಪಕ್ಷ.
ಹಾಗಾದರೆ ಮೋದಿ-ಶಾರಿಂದ ಮೊದಲ್ಗೊಂಡು ಸಿ.ಟಿ. ರವಿ, ಸುನೀಲ್ ಕುಮಾರ್‌ರ ತನಕ ಎಲ್ಲರೂ ಕಾಂಗ್ರೆಸ್ ಹೆಸರಲ್ಲಿ ‘ರಾಷ್ಟ್ರೀಯ’ ಎಂಬ ಶಬ್ದ ಇರುವುದರಿಂದ ಕಾಂಗ್ರೆಸ್ ವಿರುದ್ಧ ಮುಗಿ ಬಿದ್ದಿದ್ದಾರೆ ಎಂದು ಅರ್ಥವೆ? ಇವರ ರಾಷ್ಟ್ರಭಕ್ತಿಯ ಗುಣಮಟ್ಟ ಎಲ್ಲಿಗೆ ಬಂದು ಇಳಿದಿದೆ ನೋಡಿ. ‘ಸರ್ವರಿಗೂ ಸಮಬಾಳು, ನೆಲದ ಕಾನೂನಿಗೆ ಎಲ್ಲರೂ ಒಂದೇ’ ಎಂದರೆ ‘ಸಿದ್ರಾಮುಲ್ಲಾ ಖಾನ್, ಡಿ.ಕೆ ಸೈಮನ್’ ಎಂದು ಸಿಎಂ ಮತ್ತು ಡಿಸಿಎಂಗೆ ಅನ್ಯ ಧರ್ಮೀಯರ ಹೆಸರು ಕಟ್ಟಿ ಹೀಯಾಳಿಸು ವುದು; ಇದನ್ನು ಯಾವ ಅರ್ಥದಲ್ಲಿ ಹೇಳ್ತಿದ್ದೀರಿ ವಿವರಿಸಿ ಎಂದರೆ, ಅಲ್ಲಿಂದ ಎಸ್ಕೇಪ್ ಆಗುವುದು ಇವರ ಜಾಯಮಾನ. ಇದು ಇವರದ್ದು ಮಾತ್ರವಲ್ಲ. ತಾತ್ವಿಕ ಗಟ್ಟಿತನ, ಜೀವಪರತೆ, ಸಮಾನತೆ, ನಿಜದ ದೇವರು-ಧರ್ಮವನ್ನು ಅರಿಯುವಲ್ಲಿನ ಆರೆಸ್ಸೆಸ್ ನ ಮಿತಿ ಕೂಡ ಆಗಿದೆ.
ಈ ಸಂಘಟನೆಗೆ ಅಂಥಾ ಮಿತಿಗಳು ಇಲ್ಲದಿದ್ದರೆ ಸಮಗ್ರ ಭಾರತದ ಜನರ ಸರ್ವರಕ್ಷಣೆಯ ಕನಸು-ಆಶಯಗಳನ್ನು ಅದು ಹೊಂದಿರುತ್ತಿತು. ದುಡಿಯುವ ಜನಸಮುದಾಯಗಳ ಮಕ್ಕಳ ಎದೆಯಲ್ಲಿ ಸುಳ್ಳಿನ ಅವತಾರಿಕೆಯನ್ನು ಮೂಡಿಸಲು ಇವರು ಕೈ ಹಾಕುತ್ತಿರಲಿಲ್ಲ. ಎಂಥಾ ಕುಚೋದ್ಯ ಇವರದ್ದು ಎಂದರೆ, ಗಾಂಽಜಿ ಕೊಲೆಗಾರ ಸಾವರ್ಕರ್‌ನ ‘ವೀರ’ ಮಾಡುತ್ತಾರೆ; ಗಣವೇಷವನ್ನು ತೊಡಿಸಿ ಗಾಂಧಿ ಪೋಟೋವನ್ನು ಕೈಗೆ ಕೊಟ್ಟು ಮುನಿರತ್ನರನ್ನು ಪ್ರತಿಭಟನೆಯ ಹೆಸರಲ್ಲಿ ಕೂರಿಸುತ್ತಾರೆ.
ಇಂಥಾ ಸತ್ವರಹಿತ, ತತ್ವರಹಿತವಾದ ಆರೆಸ್ಸೆಸ್‌ನ ಸಿದ್ಧಾಂತ ಇಂದು ಹಿತಾಸಕ್ತ ಗುಂಪಿನ ರಾಜಕೀಯ, ಆರ್ಥಿಕ ಲಾಭಕ್ಕಾಗಿ ಮಾಡುತ್ತಿರುವ ಸಂಚಾಗಿದೆ. ಇವರ ಇಂಥಾ ವಿಪತ್ಕಾರಿ ವ್ಯಾಪಾರದ ಕ್ರಿಯಾಹೀನ, ಅರ್ಥರಹಿತ ನಡೆಯಿಂದ ಭಾರತದ ಸಾಮರ್ಥ್ಯ ಆಂತರಿಕ ಕ್ಷೋಭೆಗೆ ಬಲಿಯಾಗಿ ಸೊರಗುತ್ತದೆಯೇ ಹೊರತು ನಳನಳಿಸುವುದಿಲ್ಲ.
(ಲೇಖಕರು ಹಿರಿಯ ಪತ್ರಕರ್ತರು)