Utkarsh K S Column: ಪಾಠ ಓದದೆ ಪರೀಕ್ಷೆಗೆ ಬಂದ ಪ್ರಿಯಾಂಕ್ ಖರ್ಗೆ !
ಪ್ರಿಯಾಂಕ್ ಖರ್ಗೆಯವರು, ಆರೆಸ್ಸೆಸ್‌ನ ಇತಿಹಾಸದ ಅರಿವಿಲ್ಲದೆ ಮಾತನಾಡುತ್ತಿರುವುದು ನಿಜವಾಗಲೂ ಹಾಸ್ಯಾಸ್ಪದವಾದ ಸಂಗತಿ. ಸಂಘದ ಬಗ್ಗೆ ಸದಾ ಕುಹಕದ ಮಾತುಗಳನ್ನು ಆಡುತ್ತಾ, ‘ಸ್ವಾತಂತ್ರ್ಯ ಹೋರಾಟದಲ್ಲಿ ನಿಮ್ಮ ಪಾತ್ರವೇನೂ ಇಲ್ಲ’ ಅಂತ ಹೇಳುವ ಜೂನಿಯರ್ ಖರ್ಗೆ ಅವರೇ, ಆರೆಸ್ಸೆಸ್‌ನ ಸಂಸ್ಥಾಪಕರಾದ ಡಾ.ಕೇಶವ ಬಲಿರಾಮ್ ಹೆಡ್ಗೆವಾರ್ ಅವರು, ಒಬ್ಬ ಸಂಘಟಕರು ಮಾತ್ರವಲ್ಲದೆ ಕ್ರಾಂತಿಕಾರಿ ರಾಷ್ಟ್ರಭಕ್ತರೂ ಆಗಿದ್ದವರು.

-

ತಿರುಗೇಟು
ಉತ್ಕರ್ಷ್ ಕೆ.ಎಸ್
ಭಾರತದ ಸಾಂಸ್ಕೃತಿಕ ಮತ್ತು ರಾಷ್ಟ್ರೀಯ ಚೇತನದ ಹೃದಯಭಾಗದಲ್ಲಿ ನಿಂತಿರುವ ಸಂಸ್ಥೆ ಯೆಂದರೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್). 1925ರಲ್ಲಿ ನಾಗಪುರದಲ್ಲಿ ಆರಂಭವಾದ ಈ ಸಂಘಟನೆ, ಇಂದಿಗೆ ವಿಶ್ವದ ಅತಿ ದೊಡ್ಡ ಸ್ವಯಂಸೇವಕ ಚಳವಳಿಗಳಲ್ಲಿ ಒಂದಾಗಿ ರೂಪಾಂತರಗೊಂಡಿದೆ.
ರಾಷ್ಟ್ರಭಕ್ತಿಯ ಬಲವಾದ ಅಸ್ತಿತ್ವ, ಶಿಸ್ತುಪಾಲನೆಯ ನಿಷ್ಠೆ, ಸೇವಾ ಮನೋಭಾವ ಹಾಗೂ ಸಾಮಾಜಿಕ ಏಕತೆಯ ಮೌಲ್ಯಗಳ ಮೂಲಕ ಆರೆಸ್ಸೆಸ್ ಜನಮನದಲ್ಲಿ ನಂಬಿಕೆಯನ್ನು ಕಟ್ಟಿ ಕೊಂಡಿದೆ. ಸಂಘವು ‘ವ್ಯಕ್ತಿತ್ವ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣ’ ಎಂಬ ಅಸಾಧಾರಣ ದೃಷ್ಟಿಕೋನವನ್ನು ಅಳವಡಿಸಿಕೊಂಡಿದೆ.
ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ನ್ಯಾಯದ ಪ್ರಚಾರದ ಕ್ಷೇತ್ರ ಗಳಲ್ಲಿನ ಅದರ ನಿಷ್ಠಾವಂತ ಸೇವೆಯು ದೇಶದ ನಿಜವಾದ ಪುನರುತ್ಥಾನದ ದಿಕ್ಕಿನಲ್ಲಿ ಮಾರ್ಗ ದರ್ಶಕವಾಗಿದೆ. ಇಷ್ಟೆಲ್ಲಾ ನಿಸ್ವಾರ್ಥ ಸೇವೆ ಮತ್ತು ಅಪ್ರತಿಮ ದೇಶಭಕ್ತಿಯನ್ನು ಹೊಂದಿರುವ ಸಮೂಹದ ವಿರುದ್ಧ, ಹೊಟ್ಟೆಕಿಚ್ಚಿನ ಕೋಳಿಮೊಟ್ಟೆಯ ರೀತಿಯಲ್ಲಿ ಸದಾ ಬೆಂಕಿಯನ್ನೇ ಉಗುಳುತ್ತದೆ ಕಾಂಗ್ರೆಸ್ ಪಕ್ಷ.
ಇದನ್ನೂ ಓದಿ: Utkarsh K S Column: ಸೇವೆ ಸಹಬಾಳ್ವೆಯ ಪ್ರತೀಕ ಧರ್ಮಸ್ಥಳ
ಇದರ ನಾಯಕರಲ್ಲಿ ಒಬ್ಬರಾದ ಮತ್ತು ಹಿರಿಯ ಕಾಂಗ್ರೆಸ್ಸಿಗ ಮಲ್ಲಿಕಾರ್ಜುನ ಖರ್ಗೆಯವರ ಪುತ್ರರೂ ಆದ ಸಚಿವ ಪ್ರಿಯಾಂಕ್ ಖರ್ಗೆಯವರು, ಆರೆಸ್ಸೆಸ್‌ನ ಇತಿಹಾಸದ ಅರಿವಿಲ್ಲದೆ ಮಾತನಾಡುತ್ತಿರುವುದು ನಿಜವಾಗಲೂ ಹಾಸ್ಯಾಸ್ಪದವಾದ ಸಂಗತಿ. ಸಂಘದ ಬಗ್ಗೆ ಸದಾ ಕುಹಕದ ಮಾತುಗಳನ್ನು ಆಡುತ್ತಾ, ‘ಸ್ವಾತಂತ್ರ್ಯ ಹೋರಾಟದಲ್ಲಿ ನಿಮ್ಮ ಪಾತ್ರವೇನೂ ಇಲ್ಲ’ ಅಂತ ಹೇಳುವ ಜೂನಿಯರ್ ಖರ್ಗೆ ಅವರೇ, ಆರೆಸ್ಸೆಸ್‌ನ ಸಂಸ್ಥಾಪಕರಾದ ಡಾ.ಕೇಶವ ಬಲಿರಾಮ್ ಹೆಡ್ಗೆವಾರ್ ಅವರು, ಒಬ್ಬ ಸಂಘಟಕರು ಮಾತ್ರವಲ್ಲದೆ ಕ್ರಾಂತಿಕಾರಿ ರಾಷ್ಟ್ರಭಕ್ತರೂ ಆಗಿದ್ದವರು.
ಬಾಲ್ಯದಲ್ಲಿಯೇ ದೇಶಭಕ್ತಿಯ ಚಿಂತನೆಯ ಬೀಜಗಳನ್ನು ಮನದಲ್ಲಿ ಮೊಳೆಸಿಕೊಂಡಿದ್ದ ಅವರು, ಕೊಲ್ಕತ್ತಾದಲ್ಲಿ ಅಂದು ವೈದ್ಯಕೀಯ ಅಧ್ಯಯನ ಮಾಡುವ ಕಾಲದಲ್ಲೇ ಕ್ರಾಂತಿದಳ ಚಟುವಟಿಕೆ ಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
1920ರ ಅಸಹಕಾರ ಚಳವಳಿಯ ವೇಳೆ ಬ್ರಿಟಿಷ್ ಆಡಳಿತದ ವಿರುದ್ಧ ಧೈರ್ಯವಾಗಿ ದನಿಯೆತ್ತಿದ ಅವರು, ಜೈಲುಶಿಕ್ಷೆಯನ್ನೂ ಅನುಭವಿಸಿದರು. ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸುವಾಗಲೇ ಡಾ.ಹೆಡ್ಗೆವಾರ್ ಅವರಿಗೆ ‘ರಾಷ್ಟ್ರದ ಶಕ್ತಿಯು ಜನರ ಏಕತೆಯಲ್ಲಿದೆ’ ಎಂಬ ನಂಬಿಕೆ ಬಲವಾಗಿ ಮೂಡಿತು. ಈ ನಂಬಿಕೆಯಿಂದಲೇ ಅವರು ನಂತರ ದೇಶದ ಯುವಜನರಲ್ಲೂ ಶಿಸ್ತಿನ, ಸೇವಾ ಭಾವನೆಯ ಹಾಗೂ ಸಂಘಟನೆಯ ಚೈತನ್ಯವನ್ನು ಮೂಡಿಸಲು ಆರೆಸ್ಸೆಸ್ ಅನ್ನು ಸ್ಥಾಪಿಸಿದರು.
ಜೂನಿಯರ್ ಖರ್ಗೆ ಅವರ ಆರಾಧ್ಯ ದೈವವಾದ ನೆಹರು ಅವರು, ‘I will not allow an inch of land to hoist the Bhagawa-Dhwaja’ ಎಂದು ಹೇಳಿ, ‘ಆರೆಸ್ಸೆಸ್ ಅನ್ನು ನಿಷೇಧಿಸುತ್ತೇನೆ’ ಎಂದು ಇದೇ ರೀತಿಯಲ್ಲಿ ಅಬ್ಬರಿಸಿ ಬೊಬ್ಬಿರಿದು, ಕೊನೆಗೆ ಅದೇ ಆರೆಸ್ಸೆಸ್‌ನ 2000 ಸ್ವಯಂಸೇವಕರನ್ನು 1963ರ ಗಣರಾಜ್ಯೋತ್ಸವದ ಮೆರವಣಿಗೆಗೆ ಆಹ್ವಾನಿಸಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಸಂಗತಿ.
ಇಷ್ಟು ಮಾತ್ರವಲ್ಲದೆ, 1975ರಲ್ಲಿ ಇಂದಿರಾ ಗಾಂಧಿ, 1993ರಲ್ಲಿ ಪಿ.ವಿ.ನರಸಿಂಹ ರಾವ್ ಅವರು ನಿಷೇಧಿಸಿದರೂ, ಇದೇ ರೀತಿ ಇನ್ನೂ ಅನೇಕ ಎಡರುತೊಡರುಗಳು ಎದುರಾದರೂ, ಅವೆಲ್ಲವನ್ನೂ ಮೀರಿ ಇವತ್ತು ಜಗತ್ತಿನ ಅತಿದೊಡ್ಡ ಸಂಘಟನೆ ಎನಿಸಿಕೊಂಡಿದೆ, ಬೃಹದಾಕಾರವಾಗಿ ಬೆಳೆದು ನಿಂತಿದೆ ಆರೆಸ್ಸೆಸ್.
ಸದಾ ತಮ್ಮ ಬಾಯಿಚಪಲಕ್ಕೆ ಮಾತನಾಡುವ ಪ್ರಿಯಾಂಕ್ ಖರ್ಗೆ ಅವರು ಹೋದಲ್ಲಿ ಬಂದಲ್ಲಿ “ನಮಸ್ತೇ ಸದಾ ವತ್ಸಲೇ ಮಾತೃಭೂಮೇ ಎಂದು ಹೇಳುವ ಆರೆಸ್ಸೆಸ್ ಭಯೋತ್ಪಾದಕ ಸಂಘಟನೆ" ಅಂತ ಹೇಳುತ್ತಿರುವುದು ನಗೆಪಾಟಲಿನ ವಿಚಾರ. ಏಕೆಂದರೆ, ಇದೇ ಕಾಂಗ್ರೆಸ್‌ನ ಕಾರ್ಯಕರ್ತರು ವಿಧಾನಸೌಧದ ಆವರಣದಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ಕೂಗಿದ್ದು, ಇದೇ ಕಾಂಗ್ರೆಸ್‌ನ ಕನ್ನಯ್ಯ ಕುಮಾರ್ ನೇತೃತ್ವದಲ್ಲಿ ‘ಭಾರತ್ ತೇರೆ ಟುಕ್ಡೆ ಹೋಂಗೆ’ ಎಂದು ಘೋಷಣೆ ಕೂಗಿದ್ದು ಪ್ರಿಯಾಂಕ್ ಖರ್ಗೆ ಅವರಿಗೆ ಗೊತ್ತಿರದ ವಿಷಯವೇನಲ್ಲ. ಆದರೂ ಅವರು ಜಾಣ ಕುರುಡನ್ನು ಪ್ರದರ್ಶನ ಮಾಡುತ್ತಿದ್ದಾರೆ.
ಇದು ಅವರ ನಿಜಮುಖವನ್ನು ಸಮಾಜದ ಮುಂದೆ ಬಯಲು ಮಾಡಿದೆ. ಡಾ.ಅಂಬೇಡ್ಕರ್ ಅವರು 1939ರಲ್ಲಿ, ಪುಣೆಯಲ್ಲಿ ನಡೆಯುತ್ತಿದ್ದ ಸಂಘದ ಶಿಬಿರಕ್ಕೆ ಭೇಡಿ ನೀಡಿ, ಸ್ವಯಂಸೇವಕರನ್ನು ಉದ್ದೇಶಿಸಿ ಹೀಗೆ ಹೇಳುತ್ತಾರೆ: I am surprised to find the Swayamsevaks moving about in absolute equality and Brotherhood without even caring to know the caste of the others ’ ಇನ್ನು, ಮಹಾತ್ಮ ಗಾಂಧಿಯವರು 1934ರಲ್ಲಿ ಮಹಾರಾಷ್ಟ್ರದ ವಾರ್ಧಾದಲ್ಲಿ ನಡೆಯುತ್ತಿದ್ದ ಆರೆಸ್ಸೆಸ್ ಶಿಬಿರಕ್ಕೆ ಭೇಟಿಕೊಟ್ಟು, ಸ್ವಯಂಸೇವಕರನ್ನು ಉದ್ದೇಶಿಸಿ, I am very much surprised by the discipline and absence of untouchability in the camp ಎಂದು ಹೇಳಿದ್ದು, ಇಂದಿಗೂ ಜೂನಿಯರ್ ಖರ್ಗೆಯವರಂಥ ಕಾಂಗ್ರೆಸ್‌ನ ಅನೇಕ ನಾಯಕರುಗಳಿಗೆ ನುಂಗಲಾರದ ಬಿಸಿತುಪ್ಪ ವಾಗಿದೆ. ಏಕೆಂದರೆ, ನಕಲಿ ಅಂಬೇಡ್ಕರ್‌ವಾದಿಗಳಿಗೂ ಮತ್ತು ನಕಲಿ ಗಾಂಧಿವಾದಿಗಳಿಗೂ ಇದು ಸಮಂಜಸ ವಾದ ವಿಚಾರವಲ್ಲ. 2024ರಲ್ಲಿ, ಕಾಂಗ್ರೆಸ್ಸಿಗರ ಪಾಲಿನ ಮನೆದೇವರಾದ ರಾಹುಲ್ ಗಾಂಧಿಯವರು ಪ್ರತಿನಿಧಿಸುತ್ತಿದ್ದ ವಯನಾಡ್ ಕ್ಷೇತ್ರದಲ್ಲಿ ಭೀಕರ ಪ್ರವಾಹ ಸಂಭವಿಸಿದಾಗ, ಯಾವುದೇ ಜಾತಿ, ಮತ, ಪಂಥ, ಪಕ್ಷ ಎಂಬ ಭೇದ-ಭಾವ ಮಾಡದೆ, ಅಲ್ಲಿನ ಜನರಿಗೆ ಸೇವೆಯ ಸಹಾಯಹಸ್ತವನ್ನು ಚಾಚಿದ್ದು ಇದೇ ಆರೆಸ್ಸೆಸ್ ಎಂಬುದು ನಿಮಗೆ ಗೊತ್ತಿರಲಿ ಜೂನಿಯರ್ ಖರ್ಗೆ ಅವರೇ.
ಕಲ್ಯಾಣ ಕರ್ನಾಟಕದಲ್ಲಿ, ವಿಶೇಷವಾಗಿ ಕಲಬುರ್ಗಿಯ ಚಿತ್ತಾಪುರದಲ್ಲಿ ಕಿತ್ತು ತಿನ್ನುವಷ್ಟು ಬಡತನ ವಿದ್ದರೂ, ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮಸ್ಯೆಗಳಿದ್ದರೂ ಅವಕ್ಕೆ ಸರಿಯಾಗಿ ಸ್ಪಂದಿಸದೆ, ಸದಾ ಆರೆಸ್ಸೆಸ್ ಮೇಲೆ ದ್ವೇಷ ಕಾರುತ್ತಿರುವ ನಿಮಗೆ ಸದ್ಬುದ್ಧಿ ಪ್ರಾಪ್ತಿಯಾಗಲಿ ಎಂದು ಕೋರು ತ್ತೇನೆ.
ಆರೆಸ್ಸೆಸ್‌ನ ತತ್ವಗಳು, ತ್ಯಾಗ ಮತ್ತು ನಿಸ್ವಾರ್ಥ ಸೇವಾ ಪರಂಪರೆಯನ್ನು ತಿಳಿಯದೆ ಹೊಮ್ಮಿಸಿದ ಅಸಮರ್ಪಕ ಅಭಿಪ್ರಾಯಗಳಾಗಿವೆ ಪ್ರಿಯಾಂಕ್ ಖರ್ಗೆಯವರ ಇತ್ತೀಚಿನ ಹೇಳಿಕೆಗಳು. ಆರೆಸ್ಸೆಸ್ ಸಂಘಟನೆಯು ಸಮಾಜಸೇವೆಯ ಪಥದಲ್ಲಿ ಜನಶಕ್ತಿಯನ್ನು ಸಂಘಟಿಸಿ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದೆಯೇ ವಿನಾ ರಾಜಕೀಯ ಪಯಣದಲ್ಲಿ ಅಲ್ಲ.
ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಸ್ವಯಂಶಿಸ್ತಿನ ಬೆಳವಣಿಗೆ ಮತ್ತು ದುರಂತದ ಸಂದರ್ಭದಲ್ಲಿ ನೀಡಿದ ನಿರಂತರ ಸೇವೆಗಳು ಆರೆಸ್ಸೆಸ್ ನ ನಿಜವಾದ ಮುಖವನ್ನು ಪ್ರತಿಬಿಂಬಿಸುತ್ತವೆ. ಇಂಥ ಸಂಸ್ಥೆಯ ಕುರಿತು ರಾಜಕೀಯ ದೃಷ್ಟಿಕೋನದಿಂದ ಅಜ್ಞಾನಪೂರಿತ ಟೀಕೆ ಮಾಡುವುದು ಸಾರ್ವಜನಿಕ ಚರ್ಚೆಯ ಮಟ್ಟವನ್ನು ಕುಗ್ಗಿಸುತ್ತದೆ.
ದೇಶದ ಹಿತಾಸಕ್ತಿಯನ್ನು ಪರಿಗಣಿಸುವ ಯಾವುದೇ ನಾಯಕರು ಸಂಘದ ಸೇವಾ ಪರಂಪರೆಯನ್ನು ಗೌರವದಿಂದ ಅಧ್ಯಯನ ಮಾಡುವುದು ಮತ್ತು ನಂತರ ತಮ್ಮ ಅಭಿಪ್ರಾಯವನ್ನು ನೀಡುವುದು ಅವರಿಗೆ ಶೋಭೆ ತರುವ ಸಂಗತಿಯಾಗುತ್ತದೆ.
(ಲೇಖಕರು ಅಂಕಣಕಾರರು)