Shishir Hegde Column: ಹಾಯಾದ ಬದುಕಿನ ಗುಟ್ಟು: ಕತ್ತೆ ಬಾಲ, ಕುದುರೆ ಜುಟ್ಟು..!
ಒಬ್ಬ ಒಳ್ಳೆಯ ತಂದೆ-ತಾಯಿಯ ಲಕ್ಷಣವೇನು? ಮಕ್ಕಳಿಗೆ ಮಾರ್ಗದರ್ಶಿಸುವುದು ಅಲ್ಲವೇ? “ಹೀಗೆ ಮಾಡು, ಹಾಗೆ ಮಾಡಬೇಡ, ಇದು ಮಾಡಿದರೆ ಹೀಗಾಗುತ್ತದೆ, ನೋಡು ನಾನು ಮೊದಲೇ ಹೇಳಿದ್ದೆ, ಹಿಂದೆಯೇ ಎಚ್ಚರಿಸಿದ್ದೆ, ನಿನಗೆ ಎಷ್ಟು ಹೇಳಿದರೂ ಅಷ್ಟೆ.. ಇತ್ಯಾದಿ. ಇದುವೇ ಮುಂದುವರಿದು ನೀನು ಅಲಸಿ, ಎಂಟಾಣೆ ಪ್ರಯೋಜನಕ್ಕೆ ಬರುವುದಿಲ್ಲ, ನೀನು ಹಾಗೆ ಹೇಳಿದ್ದು ಸರಿಯಲ್ಲ, ಹಾಗೆ ಮಾಡಿದ್ದು, ಮಾತನಾಡಿದ್ದು ಸರಿಯಲ್ಲ ಇತ್ಯಾದಿ.

-

ಶಿಶಿರಕಾಲ
ಒಮ್ಮೆ ಗೌತಮ ಬುದ್ಧನನ್ನು ಭೇಟಿಯಾಗಲು ಕೆಲವೊಂದಿಷ್ಟು ಸನ್ಯಾಸಿಗಳು ಅವನ ಆಶ್ರಮ ‘ಜೆತವನ’ಕ್ಕೆ ಬಂದಿದ್ದರು. ಅವರು ಬುದ್ಧನ ಜತೆ ಮಾತನಾಡುತ್ತಿದ್ದಾಗ ಅಲ್ಲಿಯೇ ತುಸುದೂರದಲ್ಲಿ ಆಶ್ರಮವಾಸಿ, ಸನ್ಯಾಸಿ ‘ಬಢಿಯಾ’ ಏನೋ ಕೆಲಸ ಮಾಡುತ್ತಿದ್ದ. ಬುದ್ಧ ಅವನನ್ನು ತೋರಿಸಿ “ನೋಡಿ, ಅಲ್ಲಿರುವ ಸನ್ಯಾಸಿಯ ಹೆಸರು ‘ಲಕುಂತಕ ಬಢಿಯಾ’, ಅವನು ತನ್ನ ಅಪ್ಪ ಮತ್ತು ಅಮ್ಮನನ್ನು ಕೊಂದಿದ್ದಾನೆ. ಆತ ನಮ್ಮ ಆಶ್ರಮದ ಸರ್ವಶ್ರೇಷ್ಠ ಸನ್ಯಾಸಿಗಳಲ್ಲಿ ಒಬ್ಬ" ಎಂದು ಪರಿಚಯಿಸಿ ಸುಮ್ಮನಾದ.
ಎಲ್ಲರಿಗೂ ಆಶ್ಚರ್ಯ. ‘ಬುದ್ಧ ಎಂದರೆ ಅಹಿಂಸೆಯ ಪ್ರತಿಪಾದಕ; ಇಲ್ಲಿ ನೋಡಿದ್ರೆ ಅಪ್ಪ ಅಮ್ಮ ನನ್ನು ಕೊಂದ ಸನ್ಯಾಸಿಯನ್ನು ಶ್ರೇಷ್ಠ ಎನ್ನುತ್ತಿದ್ದಾನೆ. ಬುದ್ಧನಿಗೇನಾಗಿದೆ?’- ಗುಸುಗುಸು ಮಾತ ನಾಡಿಕೊಳ್ಳುತ್ತ ಅವರೆಲ್ಲ ನಿರ್ಗಮಿಸಿದ ನಂತರ ಅವನ ಶಿಷ್ಯರಿಗೆ ಕೂಡ ಆಶ್ಚರ್ಯ. “ತಥಾಗತ, ಬಢಿಯಾ ಅಪ್ಪ ಅಮ್ಮನನ್ನು ಕೊಂದಿದ್ದಾನೆ ಎಂದು ನಮಗೆ ಗೊತ್ತಿರಲಿಲ್ಲ. ಅಪ್ಪ ಅಮ್ಮನನ್ನು ಕೊಂದವನನ್ನು ಶ್ರೇಷ್ಠ ಎನ್ನುತ್ತಿದ್ದಿ, ಏನು ಕಥೆ?" ಎಂದು ಪ್ರಶ್ನಿಸಿದರು.
ಒಬ್ಬ ಒಳ್ಳೆಯ ತಂದೆ-ತಾಯಿಯ ಲಕ್ಷಣವೇನು? ಮಕ್ಕಳಿಗೆ ಮಾರ್ಗದರ್ಶಿಸುವುದು ಅಲ್ಲವೇ? “ಹೀಗೆ ಮಾಡು, ಹಾಗೆ ಮಾಡಬೇಡ, ಇದು ಮಾಡಿದರೆ ಹೀಗಾಗುತ್ತದೆ, ನೋಡು ನಾನು ಮೊದಲೇ ಹೇಳಿz, ಹಿಂದೆಯೇ ಎಚ್ಚರಿಸಿದ್ದೆ, ನಿನಗೆ ಎಷ್ಟು ಹೇಳಿದರೂ ಅಷ್ಟೆ.. ಇತ್ಯಾದಿ. ಇದುವೇ ಮುಂದುವರಿದು ನೀನು ಅಲಸಿ, ಎಂಟಾಣೆ ಪ್ರಯೋಜನಕ್ಕೆ ಬರುವುದಿಲ್ಲ, ನೀನು ಹಾಗೆ ಹೇಳಿದ್ದು ಸರಿಯಲ್ಲ, ಹಾಗೆ ಮಾಡಿದ್ದು, ಮಾತನಾಡಿದ್ದು ಸರಿಯಲ್ಲ ಇತ್ಯಾದಿ.
ಸ್ವಲ್ಪ ದೊಡ್ಡವರಾಗುತ್ತಿದ್ದಂತೆ ತಂದೆ-ತಾಯಿಯ ಆ ಜವಾಬ್ದಾರಿಯ ಕ್ರಿಯೆಯನ್ನು ಸ್ನೇಹಿತರು, ಸಂಬಂಧಿಗಳು ಎಲ್ಲರೂ ನಿಭಾಯಿಸಲು ಶುರುಮಾಡುತ್ತಾರೆ. ಕ್ರಮೇಣ ಸಮಾಜಕ್ಕೆ ತೆರೆದು ಕೊಂಡಾಗ ಅಲ್ಲಿ ಎಲ್ಲರೂ ಅಪ್ಪ-ಅಮ್ಮಂದಿರಂತೆ ಅನಿಸಿಕೆ, ಅಭಿಪ್ರಾಯ ಕೊಡುತ್ತಿರುತ್ತಾರೆ. ಕಂಡಕಂಡವರೆಲ್ಲ ಏನೋ ಒಂದು ಹೇಳುವವರೇ.
ಇದನ್ನೂ ಓದಿ: Shishir Hegde Column: ಅಸಾಮಾನ್ಯ ಜಗತ್ತಿನ ಸಾಮಾನ್ಯ ಬದುಕು ಇತಿಹಾಸವಾಗುವುದಿಲ್ಲ
ಕೊನೆಗೆ ನಮ್ಮ ಮನಸೇ ಆ ಕೆಲಸ ಶುರುಮಾಡಿಕೊಂಡು ಬಿಡುತ್ತದೆ. ಮನಸ್ಸಿನೊಳಗಿನ ಈ ಅಭಿಪ್ರಯಿಸುವ, ತೀರ್ಮಾನ ಕೊಡುವ, ಬೇರೆಯವರು ಏನಂದುಕೊಳ್ಳುತ್ತಾರೆ? ಎಂಬ ಆ ಧ್ವನಿ ಯನ್ನು ಸನ್ಯಾಸಿ ‘ಲಕುಂತಕ ಬಢಿಯಾ’ ಕೊಂದು ಹಾಕಿzನೆ, ಹಾಗಾಗಿ ಶ್ರೇಷ್ಠ" ಎಂದು ಬುದ್ಧ ಸೂಚ್ಯವಾಗಿ ಹೇಳಿದ್ದು.
ಮನುಷ್ಯನ ಯಾವುದೇ ಗುಣವನ್ನು ಮೂಲದಲ್ಲಿ, ವಿಕಸನದ ಮಸೂರದಲ್ಲಿ ನೋಡಿದಾಗ ಅದು ರಕ್ತಗತ ಗುಣವಾಗಲು ಕಾರಣವೇನಿತ್ತು ಎಂಬುದು ತಿಳಿಯುತ್ತದೆ. ಮನುಷ್ಯ ವಿಕಸನದಲ್ಲಿ ಇನ್ನೊಬ್ಬರ ಅಭಿಪ್ರಾಯ ಅತ್ಯಂತ ಮೌಲ್ಯಯುತವಾದದ್ದಾಗಿತ್ತು. ಏಕೆಂದರೆ ಬೇಟೆಯಿರಬಹುದು, ಅಥವಾ ಆದಿ ಬದುಕಿನ ಏನೇ ಕೆಲಸವಿರಬಹುದು, ನಮ್ಮ ಕುಂದು ಕೊರತೆಯನ್ನು ತಿಳಿಯುವುದು ಮೊದಲ ಅವಶ್ಯಕತೆಯಾಗಿತ್ತು.
ಅದು ಬಹುಕಾಲ ಇನ್ನೊಬ್ಬರ ಅಭಿಪ್ರಾಯದಿಂದಷ್ಟೇ ಸಾಧ್ಯವಾಗುತ್ತಿತ್ತು. ಯಾವುದರಲ್ಲಿ ನಾವು ಹಿಂದಿದ್ದೇವೆ ಎಂದು ತಿಳಿಯಲು ಇನ್ನೊಬ್ಬರ ಅಭಿಪ್ರಾಯ- ‘ನೀನು ಓಡುವಾಗ ಹೀಗೆ ಓಡುತ್ತೀಯ, ಬೇಟೆಯ ಸಮಯದಲ್ಲಿ ಇಂಥ ತಪ್ಪು ಮಾಡುತ್ತಿದ್ದೀಯ, ಜಾಗ್ರತೆಯಿಂದಿರು’ ಎಂಬಿತ್ಯಾದಿ ಎಲ್ಲಾ ಅನಿಸಿಕೆಗಳು ಅತ್ಯಂತ ಮಹತ್ವದ್ದಾಗಿದ್ದವು.
ಅದನ್ನು ಸರಿಮಾಡಿಕೊಳ್ಳದಿದ್ದರೆ ಅದು ಜೀವನ್ಮರಣದ ಪ್ರಶ್ನೆ. ಸಮಾಜ ಬೆಳೆದಂತೆ ವ್ಯಕ್ತಿಗತ ಸಾಮರ್ಥ್ಯಕ್ಕೆ ಅನುಗುಣವಾಗಿಯೇ ಇಂದಿಗೂ ವ್ಯಕ್ತಿಯ ಸಾಮಾಜಿಕ ಶ್ರೇಣಿ ನಿರ್ಧರಿತವಾಗುವುದು. ಹಾಗಾಗಿಯೇ ಇನ್ನೊಬ್ಬರ ಅನಿಸಿಕೆಗೆ ನಾವು ಅಷ್ಟೆ ಮಹತ್ವ ಕೊಡುವುದು. ನಿಂದನೆಗೆ, ಕುಹಕಕ್ಕೆ ನಾವು ಯೋಚಿಸದೆ ಪ್ರತಿಕ್ರಿಯಿಸುವುದು.
“ಜನ ಆಡಿಕೊಳ್ತಾರೆ- ಏನೂ ಮಾಡಲಿಕ್ಕಾಗುವುದಿಲ್ಲ. ನಾವು ಆಡಿಕೊಳ್ಳುವವರನ್ನು ನಿರ್ಲಕ್ಷಿಸ ಬೇಕು, ಉದಾಸೀನ ಮಾಡಬೇಕು" ಎಂದು ಎಲ್ಲರೂ ಹೇಳುತ್ತಾರೆ. ಆದರೆ ಉದಾಸೀನ ಮಾಡುವುದು ಹೇಗೆ? ಹೇಳಿದಷ್ಟು ಸುಲಭವೇ? ಒಮ್ಮೆ ಅಲಕ್ಷಿಸಬಹುದು, ಇನ್ನೊಮ್ಮೆ ನಿರ್ಲಕ್ಷಿಸಬಹುದು, ಯಾರೋ ನಿರಂತರ ನಿಂದನೆಗೆ ತೊಡಗಿದರೆ? ಬೆನ್ನ ಹಿಂದೆ ಪದೇ ಪದೆ ನಿಮ್ಮ ಬಗ್ಗೆ ಮಾತನಾಡಿ ದರೆ? ಸಮಾಜದಲ್ಲಿ, ಎಲ್ಲರಲ್ಲೂ ನಾವು ಸಲ್ಲಬೇಕಲ್ಲ!! ‘ಇನ್ನೊಬ್ಬರು ಏನಂದುಕೊಳ್ಳುತ್ತಾರೆ?’ ಎಂಬುದೇ ನಮ್ಮಲ್ಲಿ ಬಹುತೇಕರ ಬದುಕನ್ನು ನಿರ್ದೇಶಿಸುತ್ತದೆ ಎಂದಾದರೆ ಬದುಕು ಯಾರ ಹಿಡಿತದಲ್ಲಿದೆ ಎಂದಾಯಿತು? ನಿಂದಾ ಸ್ತುತಿಮೌನಮಿತಿ ಪ್ರಹೃಷ್ಟಃ- ಜಾಣನಾದವನು ಹೊಗಳಿ ದಾಗ, ಆರೋಪಿಸಿದಾಗ ಮತ್ತು ಅಲಕ್ಷಿಸಿದಾಗ ಆಂತರ್ಯದಲ್ಲಿ ಕದಡುವುದಿಲ್ಲ ಎಂದು ಯೋಗ ವಾಸಿಷ್ಠದಲ್ಲಿ ಬರುತ್ತದೆ.
ನಮ್ಮನ್ನು ಹೊಗಳಿದಾಗ ಹತೋಟಿಯಲ್ಲಿರಬಹುದು, ತೆಗಳಿದಾಗ? ಆರೋಪ ಚಿಕ್ಕದಿರಲಿ, ದೊಡ್ಡ ದಿರಲಿ, ಹೇಳಿದವರು ಮಿತ್ರರಿರಲಿ, ಶತ್ರುವಿರಲಿ- ಎಲ್ಲರನ್ನೂ, ಎಲ್ಲವನ್ನೂ ಅಲಕ್ಷಿಸುವುದು ಹೇಗೆ? ಅಲಕ್ಷಿಸುವುದು ಕೂಡ ಪ್ರತಿಕ್ರಿಯೆಯಷ್ಟೇ ಕಷ್ಟಕೊಡುವಂಥದ್ದು. ಅವು ನಮ್ಮನ್ನು ಬಾಧಿಸ ದಂತೆ ಬದುಕುವುದು, ಎದುರಿಸುವುದು ಹೇಗೆ? ಉಳಿದವರು ಏನಂದುಕೊಳ್ಳುತ್ತಾರೆ ಎಂಬ ಪ್ರಶ್ನೆ ಯನ್ನು ಮೀರುವುದು ಹೇಗೆ? ಪ್ರಶ್ನೆಯನ್ನೇ ಅಲಕ್ಷಿಸುವಂತಿಲ್ಲ- ಏಕೆಂದರೆ ಏನೇ ಮಾಡಲು ಹೊರಟರೂ ಮೊದಲು ಎದುರಾಗುವ ಪ್ರಶ್ನೆಯೇ ಇದು- ‘ಯಾರು ಏನನಾಡುಕೊಂಡಾರು?’
ಈ ವಿಷಯದಲ್ಲಿ ಬರಹಗಾರ್ತಿ ಮೆಲ್ ರಾಬಿನ್ಸ್ ಅವರ Let Them Theory ಪುಸ್ತಕದ ಒಂದು ವಾಕ್ಯ ನನ್ನನ್ನು ಬಹುವಾಗಿ ಆಕರ್ಷಿಸಿತು- Give the freedom to let others think whatever they want!
ನಿಮ್ಮ ಬಗ್ಗೆ ಏನು ಬೇಕಾದರೂ ಅಂದುಕೊಳ್ಳುವ ಸ್ವಾತಂತ್ರ್ಯವನ್ನು ಉಳಿದವರಿಗೆ ನೀವೇ ಕೊಟ್ಟು ಬಿಡಿ. ಇದು ಅಲಕ್ಷಿಸಿದಂತಲ್ಲ- ಪ್ರತಿಬಾರಿಯೂ ನಾನು ಏನೋ ಒಂದು ಹೊಸ ಬಿಸಿನೆಸ್ ಆರಂಭಿಸಿ ದರೆ, ಪುಸ್ತಕ ಬರೆದರೆ, ಭಾಷಣ ಮಾಡಿದರೆ, ಮಾತನಾಡಿದರೆ, ಏನೇ ಮಾಡಿದರೂ- ಅವರೇನಂದು ಕೊಂಡಾರು? ಇವರೇನಂದುಕೊಂಡಾರು? ಈ ಪ್ರಶ್ನೆ ಉದ್ಭವವಾದಾಗಲೆಲ್ಲ- ಏನಾದರೂ ಅಂದು ಕೊಳ್ಳಲಿ ಎಂದು ಪ್ರತಿ ಕೆಲಸದ ಮೊದಲು ಮೀರಿ ನಿಲ್ಲುವುದು ಕಷ್ಟ.
ಸಮಯ ಮತ್ತು ಶಕ್ತಿವ್ಯರ್ಥ. ಬದಲಿಗೆ ಸಾರಾಸಗಟಾಗಿ- ಇನ್ನು ಮುಂದೆ ಯಾರು ಏನು ಬೇಕಾದರೂ ನಿಮ್ಮ ಬಗ್ಗೆ ಅಭಿಪ್ರಾಯ ಹೊಂದಬಹುದು ಎಂದು ನಾವೇ ಅನುಮತಿಕೊಟ್ಟುಬಿಟ್ಟರೆ? ಸರಾಸರಿ ವ್ಯಕ್ತಿಗೆ ದಿನಕ್ಕೆ ಸುಮಾರು 70 ಸಾವಿರ ಯೋಚನೆ ಬರುತ್ತದಂತೆ. ನಮ್ಮ ಆಜುಬಾಜು ಮಂದಿಗೆ ಈ 70 ಸಾವಿರ ಯೋಚನೆಯಲ್ಲಿ ನಮ್ಮ ಬಗ್ಗೆಯೂ ಅದೆಷ್ಟೋ ಯೋಚನೆಗಳು ಬಂದಿರುತ್ತವೆ.
ಕೆಲವು ಸರಿ, ಕೆಲವು ತಪ್ಪು. ನಮಗೆ ನಮ್ಮದೇ ಯೋಚನೆಗಳನ್ನು ಹದ್ದುಬಸ್ತಿನಲ್ಲಿಡಲಾಗದ ಸ್ಥಿತಿ ಯಿರುವಾಗ ಇನ್ನೊಬ್ಬರು ನಮ್ಮ ಬಗ್ಗೆ ಯೋಚಿಸುವುದನ್ನು ನಾವು ನಿಯಂತ್ರಿಸಲಿಕ್ಕಂತೂ ಸಾಧ್ಯವೇ ಇಲ್ಲ. ಬದಲಿಗೆ ಏನು ಬೇಕಾದರೂ ಅಂದುಕೊಳ್ಳಲಿ ಎಂಬ ಸ್ವಾತಂತ್ರ್ಯವನ್ನು ಎಲ್ಲರಿಗೂ ನಾವೇ ಕೊಟ್ಟುಬಿಟ್ಟರೆ? ಅಯ್ಯೋ, ನಮ್ಮನ್ನು ನಾವು ಸಮರ್ಥಿಸಿಕೊಳ್ಳದೆ ಬದುಕಲಿಕ್ಕಾಗುವುದಿಲ್ಲ ಎನ್ನುತ್ತೀರಾ? ಎಲ್ಲರಿಗೂ ತಮ್ಮ ತಮ್ಮ ಸಾರ್ವಜನಿಕ ಇಮೇಜ್ ಬಹಳ ಮುಖ್ಯ.
ಅದೇನೋ ಸರಿಯೇ, ಹಾಗಂತ ನಾವು ನಮ್ಮನ್ನು ನಿರಂತರ ಸಮರ್ಥಿಸಿಕೊಳ್ಳುತ್ತಲೇ ಇರಬೇಕೆ? ಬದಲಿಗೆ ಸಮರ್ಥಿಸಿಕೊಳ್ಳುವುದನ್ನು ನಿಲ್ಲಿಸಿಬಿಟ್ಟರೆ? ನೀವು ಬೇಕಾದರೆ ಒಂದು ವಾರ ಇದನ್ನು ಪ್ರಯತ್ನಿಸಿ ನೋಡಿ. ಯಾರು ಏನೇ ಹೇಳಲಿ, ಒಮ್ಮೆ ಉತ್ತರಿಸಿ, ಸಮಜಾಯಿಷಿ ಕೊಡಿ. ಆದರೆ ಅದರಾಚೆ ನಿಮ್ಮನ್ನು ಸಮರ್ಥಿಸಿಕೊಳ್ಳುವುದನ್ನು ಸಂಪೂರ್ಣ ನಿಲ್ಲಿಸಿಬಿಡಿ.
ಅವಶ್ಯಕತೆಯಿದ್ದಷ್ಟೇ ವಿವರಣೆ- ಅದರಾಚೆ ಅತಿಯಾದ ವಿವರಣೆ ಇಲ್ಲ. ಸ್ವಸಮರ್ಥನೆಯನ್ನು ನಿಲ್ಲಿಸುತ್ತಿದ್ದಂತೆ ಒಂದು ವಿಚಿತ್ರ ಶಾಂತಿ ನಮ್ಮನ್ನು ಆವರಿಸಿದ ಅನುಭವಾಗುತ್ತದೆ. ನಾನಿಲ್ಲಿ ಮಾನ ಮರ್ಯಾದೆ ಬಿಟ್ಟು ಬದುಕಬೇಕೆನ್ನುತ್ತಿಲ್ಲ. ಕೇವಲ ನಮ್ಮ ವ್ಯಕ್ತಿತ್ವವನ್ನು, ಗುಣವನ್ನು ಸಮರ್ಥಿಸಿ ಕೊಳ್ಳುವುದನ್ನು ಮಾತ್ರ ನಿಲ್ಲಿಸಿಬಿಡುವುದು.
ಉಳಿದವರು ನಿಮ್ಮನ್ನು ಬುದ್ಧಿವಂತರೆಂದುಕೊಳ್ಳಲಿ, ಜ್ಞಾನಿಯೆಂದುಕೊಳ್ಳಲಿ, ದಡ್ಡರೆಂದುಕೊಳ್ಳಲಿ. ನಿಗರ್ವಿಯೆಂದುಕೊಳ್ಳಲಿ ಅಥವಾ ಸೊಕ್ಕಿನವನೆಂದುಕೊಳ್ಳಲಿ. ಒಳ್ಳೆಯವನೆಂದುಕೊಳ್ಳಲಿ, ಕೆಟ್ಟವನೆಂದುಕೊಳ್ಳಲಿ. ಮಿತಿ ಮೀರಿದ ವಿವರಣೆ, ಸ್ವಸಮರ್ಥನೆ ಇಲ್ಲವೇ ಇಲ್ಲ. ಅದೊಂದು ಅನಿರ್ವಚನೀಯ ಸ್ವಾತಂತ್ರ್ಯವನ್ನು ನಮಗೆ ತಂದುಕೊಡುತ್ತದೆ.
ಇನ್ನೊಬ್ಬರ ತಲೆಯಲ್ಲಿ ನಮ್ಮ ಬಗೆಗಿನ ಅಭಿಪ್ರಾಯ, ನಿಲುವನ್ನು ನಿಯಂತ್ರಿಸುವುದು ಅಸಾಧ್ಯದ ಮಾತು. ಚಿಕ್ಕಂದಿನಿಂದಲೂ ನಾವು ಇನ್ನೊಬ್ಬರ ಒಪ್ಪಿಗೆಯನ್ನು ಬಯಸಿಯೇ ಬದುಕಿರುತ್ತೇವೆ: ಅಪ್ಪ-ಅಮ್ಮನಿಗೆ ಹೆಮ್ಮೆಯ ಮಗ/ಮಗಳಾಗಬೇಕು, ಮೇಷ್ಟ್ರ ನೆಚ್ಚಿನ ವಿದ್ಯಾರ್ಥಿಯಾಗಬೇಕು, ಬಾಸ್‌ನ ಅಚ್ಚುಮೆಚ್ಚಿನವನಾಗಬೇಕು, ಸ್ನೇಹಿತರಲ್ಲಿ, ಅಷ್ಟೇ ಅಲ್ಲ ಗುರುತೇ ಇಲ್ಲದ ವ್ಯಕ್ತಿಯಲ್ಲೂ ನನ್ನ ಬಗ್ಗೆ ಒಳ್ಳೆಯ ಇಮೇಜ್ ಇರಬೇಕು.
ಎಲ್ಲರೂ ನಮ್ಮನ್ನು ಒಪ್ಪಬೇಕು ಇತ್ಯಾದಿ. ಎಲ್ಲವೂ ಸರಿ. ಆದರೆ ಜನರು ನಿಮ್ಮ ಬಗ್ಗೆ ಏನು ಬೇಕಾದರೂ ಯೋಚಿಸಬಹುದು- ಅದು ನಮ್ಮ ಕೈಯಲ್ಲಿಲ್ಲ, ಅದು ಅವರ ಸ್ವಾತಂತ್ರ್ಯ ಎಂಬ ನಿರಂತರ ಅರಿವು ನಮ್ಮಂದು ಸಮಾಧಾನವನ್ನು ಹುಟ್ಟುಹಾಕುತ್ತದೆ. ಸ್ವಸಮರ್ಥನೆ ಮನುಷ್ಯಸಹಜ ಗುಣ. ನಮ್ಮ ಯಾವುದೇ ಕೆಲಸದ ಹಿಂದಿನ ಉದ್ದೇಶವನ್ನು ಹತ್ತಿರದವರಿಗೆ ವಿವರಿಸುವ ಅವಶ್ಯಕತೆ ಯಿರುತ್ತದೆ.
ನಮ್ಮ ಆಯ್ಕೆಗಳ ಬಗ್ಗೆ, ನಿರ್ಧಾರಗಳ ಬಗ್ಗೆ ಹೇಳಬೇಕಾಗುತ್ತದೆ. ಅಭಿಪ್ರಾಯ ಪಡೆಯಬೇಕಾಗುತ್ತದೆ. ಅವರು ಯಾವುದಾದರೂ ವಿಷಯದಲ್ಲಿ ತಪ್ಪು ತಿಳಿದುಕೊಂಡರೆ ವಿವರಿಸಬೇಕಾಗುತ್ತದೆ. ನಾನಿಲ್ಲಿ ಅದನ್ನು ಮಾಡಬಾರದು ಎನ್ನುತ್ತಿಲ್ಲ. ಆದರೆ ನೀವು ನಿಮ್ಮ ಕಥೆಯನ್ನು ಅದೆಷ್ಟೇ ಸ್ಪಷ್ಟವಾಗಿ ಹೇಳಿದರೂ ಅದು ಎದುರಿನವರಿಗೆ ಅರ್ಥವಾಗಬೇಕು ಎಂಬ ನಿಯಮವಿಲ್ಲ.
ಎಲ್ಲರೂ ಅವರವರ ತಿಳಿವಳಿಕೆ, ಒಲವು ಮತ್ತು ನಂಬಿಕೆಗಳ ಮೇಲೆಯೇ ನಿಮ್ಮನ್ನು ಅರ್ಥೈಸಿ ಕೊಳ್ಳುವುದು. ಅವರ ಕನ್ನಡಕದ ಬಣ್ಣ ಬದಲಿಸಲಿಕ್ಕೆ ನಮಗೆ ಸಾಧ್ಯವಿಲ್ಲ. ಕೆಲವರು ಸುಮ್ಮನಿರು ವುದನ್ನು, ಸಮರ್ಥಿಸಿಕೊಳ್ಳದಿರುವುದನ್ನು ಸೊಕ್ಕು ಎಂದು ತಪ್ಪುತಿಳಿಯಬಹುದು ಅಥವಾ ಅದನ್ನು ಹೇಡಿತನ ಎಂದುಕೊಳ್ಳಬಹುದು- ಅದು ಕೂಡ ಅವರವರ ವಿಚಾರ. ನಮ್ಮದಲ್ಲ, ಅದು ನಮ್ಮ ಹಿಡಿತದಲ್ಲಿಲ್ಲ. ಇನ್ನೊಬ್ಬರ ವಿಚಾರವನ್ನು ಬದಲಿಸುವಷ್ಟು ವೇದನೆ ಇನ್ನೊಂದಿಲ್ಲ. ಅದು ಅನವಶ್ಯಕ ಘರ್ಷಣೆ.
ಇನ್ನೊಬ್ಬರಿಗೆ ಏನು ಬೇಕಾದರೂ ಅಂದುಕೊಳ್ಳುವ ಸ್ವಾತಂತ್ರ್ಯ ಕೊಡುವುದು ಎಂದರೆ ನಿಮ್ಮ ಬಗೆಗಿನ ಅಭಿಪ್ರಾಯವನ್ನೇ ಅಲಕ್ಷಿಸುವುದು ಎಂದಲ್ಲ. ಧಾರ್ಷ್ಟ್ಯವೂ ಅಲ್ಲ, ಉದ್ಧಟತನವೂ ಅಲ್ಲ. ಸ್ವ-ಸಮರ್ಥನೆಯನ್ನು ನಿಲ್ಲಿಸುವುದು ಎಂದರೆ ಚಪ್ಪಾಳೆಗಾಗಿ ಕುಣಿಯುವುದನ್ನು ನಿಲ್ಲಿಸುವುದು. ನಾವು ನಾವಾಗಿರುವುದಕ್ಕೆ ನಮ್ಮಲ್ಲಿಯೇ ಕ್ಷಮೆ ಕೇಳಿಕೊಳ್ಳುವುದನ್ನು ನಿಲ್ಲಿಸುವುದು. ಇದು ಜನರ ವಿರುದ್ಧ ತಿರುಗಿ ಬೀಳುವ ಕ್ರಿಯೆಯಲ್ಲ ಅಥವಾ ಹೇಳಿದ್ದೆಲ್ಲ ಕೇಳಿ, ಅವಡುಗಚ್ಚಿ ಕೂರುವುದೂ ಅಲ್ಲ. ಬದಲಿಗೆ ನಮ್ಮನ್ನು ನಾವೇ ಒಪ್ಪಿಸಿಕೊಳ್ಳುವುದರ ನಿರಂತರ ಅವಶ್ಯಕತೆಯ ವಿರುದ್ಧ ತಿರುಗಿಬೀಳುವುದು.
ನಮ್ಮ ಎಲ್ಲಾ ಮಾತುಕತೆಗಳಲ್ಲಿ ನಮ್ಮ ಘನತೆಯನ್ನು ನಿರಂತರ ಹೊತ್ತು ತಿರುಗಬೇಕಿಲ್ಲ ಎಂದು ತಿಳಿಯುವುದು. ನಿಮ್ಮ ವ್ಯಕ್ತಿತ್ವವೇನೆಂದು ನಿರಂತರ ಜಾಹೀರಾತು ಮಾಡಿಕೊಂಡಿರಬೇಕಿಲ್ಲ ಎನ್ನುವುದನ್ನು ಮನಗಾಣುವುದು. ಒಬ್ಬ ಕ್ರಿಮಿನಲ್ ಮತ್ತು ಒಬ್ಬ ಸಾಧಕ ಇವರಿಬ್ಬರಲ್ಲೂ ಈ ಗುಣವನ್ನು ನೋಡಬಹುದು. ಅವರೆಂದೂ ಇನ್ನೊಬ್ಬರು ಏನಂದುಕೊಂಡಾರು ಎಂದು ಯೋಚಿಸುತ್ತ ಕುಳಿತುಕೊಳ್ಳುವುದಿಲ್ಲ.
ನಾನಿಲ್ಲಿ ಹೇಳುತ್ತಿರುವುದು ನಿರ್ಲಜ್ಜೆಯ ಅಲಕ್ಷ್ಯವನ್ನಲ್ಲ, ಸಾಧಕನಿಗಿರಬೇಕಾದ ಸ್ವಪ್ರತಿಷ್ಠೆಯ ಅವಶ್ಯಕತೆಯೆಡೆಗಿನ ಅಲಕ್ಷ್ಯವನ್ನು. ನಾವು ಇನ್ನೊಬ್ಬರಿಗೆ ನಮ್ಮ ಬಗ್ಗೆ ಮನವರಿಕೆ ಮಾಡಿಕೊಡು ವುದು ನಿಲ್ಲಿಸುತ್ತಿದ್ದಂತೆ ಅವರ ಅಭಿಪ್ರಾಯ ನಮಗೆ ಇನ್ನಷ್ಟು ಸ್ಪಷ್ಟವಾಗಿ ಕಾಣಿಸುತ್ತದೆ.
ಪ್ರತಿಯೊಬ್ಬರೂ ನಿಮ್ಮ ಬಗ್ಗೆ ರಚಿಸಿಕೊಂಡ ಅವರದೇ ಕಥೆಗಳನ್ನು ನಂಬಿಕೊಂಡಿರುತ್ತಾರೆ. ಆ ನಂಬಿಕೆಯನ್ನು ಅವರೇ ಬದಲಿಸಿಕೊಳ್ಳಬೇಕೆ ವಿನಾ ಅದನ್ನು ಇನ್ನೊಬ್ಬರು, ನಾವು ಬದಲಿಸ ಲಿಕ್ಕಾಗುವುದಿಲ್ಲ. ಅದೇನಿದ್ದರೂ ಅವರವರ ಭಾವಕ್ಕೆ, ಅವರವರ ಭಕುತಿಗೆ. ಹಾಗಾದರೆ ಯಾರು ಏನೇ ಅಂದುಕೊಳ್ಳಲಿ ಎಂದು ನಿರ್ಲಜ್ಜೆಯಿಂದ ಬದುಕುವುದೇ? ಅಥವಾ I don't care ತರಹ ನಿಷ್ಕಾಳಜಿಯಿಂದ ಬದುಕುವುದೇ? ತಂದೆ, ತಾಯಿ, ಹೆಂಡತಿ, ಗಂಡ, ಮಕ್ಕಳು, ಸಂಬಂಧಿಕರು, ಸ್ನೇಹಿತರು, ಅeತರು ಎಲ್ಲರಿಗೂ ನಿಮ್ಮ ಬಗ್ಗೆ ಅವರಿಗೆ ಬೇಕಾದ ಅಭಿಪ್ರಾಯವನ್ನು ಹೊಂದುವ ಸ್ವಾತಂತ್ರ್ಯವನ್ನು ಕೊಟ್ಟಮೇಲೆ, ಅದನ್ನು ಅವರಿಗೆ ಬೇಕಾದಾಗ ಬದಲಿಸಿಕೊಳ್ಳುವ ಸ್ವಾತಂತ್ರ್ಯ ವನ್ನೂ ಕೊಟ್ಟಂತೆ.
ಇನ್ನೊಮ್ಮೆ ನಿಮ್ಮನ್ನು ನೀವು ಸಮರ್ಥಿಸಿಕೊಳ್ಳುವ ಸ್ಥಿತಿ ಎದುರಾದಾಗ ಒಮ್ಮೆ ನಿಂತು ಈ ಪ್ರಶ್ನೆಯನ್ನು ಕೇಳಿಕೊಳ್ಳಿ- “ನಾನು ಇಲ್ಲಿ ನನ್ನನ್ನು ಸಮರ್ಥಿಸಿಕೊಳ್ಳುವ, ನನ್ನ ವಿಚಾರವೇ ಸರಿ, ನಾನು ಮಾಡಿದ್ದೇ ಸರಿ, ನನ್ನ ಜಾಗದಲ್ಲಿ ನೀನಿದ್ದಿದ್ದರೆ ಇದನ್ನೇ ಮಾಡುತ್ತಿz ಎಂದೆಲ್ಲ ಹೇಳುವ ಅವಶ್ಯಕತೆಯಿದೆಯೇ?" ಈ ಪ್ರಶ್ನೆಗೆ ನಮ್ಮ ಉತ್ತರ ಸಾಮಾನ್ಯವಾಗಿ “ಹೌದು, ಸಮರ್ಥಿಸುವುದು ಅವಶ್ಯಕತೆ ಇದೆ, ನನ್ನನ್ನು ನಾನು ಸಮರ್ಥಿಸಿಕೊಳ್ಳದಿದ್ದರೆ ಇನ್ಯಾರು?" ಎಂಬ ಪ್ರಶ್ನೆ ಏಳುತ್ತದೆ.
ಆದರೆ ಒಮ್ಮೆ ಅಲ್ಲಿಯೇ ನಿಲ್ಲಿ. ಸುಮ್ಮನಿರಲು ಸಾಧ್ಯವಾಗುವುದಿಲ್ಲ. ಹೊಟ್ಟೆಯೊಳಗೆಲ್ಲ ಹುಟ್ಟು ಹಾಕಿ ತಿರುಗಿಸಿದಂತಾಗುತ್ತದೆ. ಸಮರ್ಥಿಸಿಕೊಳ್ಳದಿದ್ದರೆ ಇಲ್ಲಿಯೇ ನನ್ನ ಅಂತ್ಯ ಎಂದೆಲ್ಲ ಅನಿಸುತ್ತದೆ. ಪರವಾಗಿಲ್ಲ. ಉಸಿರೆಳೆದುಕೊಳ್ಳಿ. ಅದು ನಮ್ಮೊಳಗಿನ ಅಹಂ ತನ್ನ ಹಿಡಿತವನ್ನು ಕಳೆದುಕೊಳ್ಳುವ ಘಟ್ಟ.
ಮನಸ್ಸಷ್ಟೇ ಅಲ್ಲ, ಇಡೀ ದೇಹ ಸ್ವ-ಸಮರ್ಥಿಸುವಂತೆ ಒತ್ತಾಯಿಸುತ್ತದೆ. ಎದೆಬಡಿತ, ಬಿಪಿ ಜತೆಯಲ್ಲಿ ಮೈ ಉಷ್ಣತೆ ಹೆಚ್ಚುತ್ತದೆ ಇತ್ಯಾದಿ. ಆಗ “ಸಮರ್ಥಿಸಿಕೊಳ್ಳದಿದ್ದರೆ ಏನಾಗುತ್ತದೆ ನೋಡಿಯೇಬಿಡೋಣ?" ಎಂದು ಧೈರ್ಯಮಾಡಿದಿರೋ, ಆಗ ಇಡೀ ಮಾತುಕತೆ ನಮ್ಮ ಹಿಡಿತಕ್ಕೆ ಬಂದುಬಿಡುತ್ತದೆ.
ಬೇರೆಯದೇ ರೂಪ ಪಡೆದುಕೊಂಡು ಬಿಡುತ್ತದೆ. ನೀವು ನಿಮ್ಮನ್ನು ಸಮರ್ಥಿಸುವುದು ನಿಲ್ಲಿಸು ತ್ತಿದ್ದಂತೆ ಕ್ರಮೇಣ ಅದರ ದರ್ದು ಕೂಡ ಕಡಿಮೆಯಾಗುತ್ತಾ ಹೋಗುತ್ತದೆ. ಸ್ವ-ಸಮರ್ಥನೆಯಿಲ್ಲದ ಮಾತುಕತೆಗಳು ಎಂದಿಗೂ ಬೇಸರಕ್ಕೆ ಕಾರಣವಾಗುವುದಿಲ್ಲ. ಮಾತು ಮುಗಿದ ನಂತರ ಕಾಡುವು ದಿಲ್ಲ. ಕ್ರಮೇಣ ಯಾವುದಕ್ಕೂ ಸಮರ್ಥಿಸಿಕೊಳ್ಳುವ ಅವಶ್ಯಕತೆಯೇ ಇರುವುದಿಲ್ಲ. ಎಲ್ಲರೂ ಅವರವರ ವೈಚಾರಿಕತೆಯಲ್ಲಿ ಸ್ವತಂತ್ರರು.
ಅವರು ಆರೋಪಿಸುವ ಗುಣ ಅವರ ಕಥೆಯಲ್ಲಿನ ನಿಮ್ಮ ಪಾತ್ರಕ್ಕೆ ಮಾತ್ರ. ಪಾತ್ರ ನಮ್ಮದಾದರೂ ಕಥೆ, ನಿರ್ಮಾಣ, ನಿರ್ದೇಶನ, ಸಂಗೀತ ಎಲ್ಲವೂ ಅವರವರದ್ದು. ಎಷ್ಟು ಜನರ ಕಥೆಯನ್ನು ಬದಲಿಸುತ್ತೀರಿ? ಸರಿಮಾಡುತ್ತೀರಿ? ಅದೆಷ್ಟೋ ಮಂದಿ ಆತ್ಮಹತ್ಯೆಯ ಮಟ್ಟಕ್ಕೂ ಹೋಗುವುದು ಈ ಬೇರೆಯವರ ಕಥೆಯಲ್ಲಿನ ಅವರ ಪಾತ್ರದ ಗುಣದ ಯೋಚನೆಯಿಂದ ಎಂದಾದರೆ ಉಳಿದವರನ್ನು ಇದೆಷ್ಟು ಕಾಡುತ್ತದೆ? ಈ ಭೂಮಿಯಲ್ಲಿ ನಾನು ಅಥವಾ ನೀವು ಹುಟ್ಟದೇ ಇದ್ದಿದ್ದರೆ ಏನೂ ಬದಲಾಗುತ್ತಿರಲಿಲ್ಲ.
ಸತ್ತಮೇಲೂ ಅಷ್ಟೇ- ನಮ್ಮನ್ನೇ ಜಗತ್ತು ಮರೆಯುವಾಗ ‘ನಮ್ಮ ಬಗೆಗೆ ಯಾರು ಏನೇನಾಡಿ ಕೊಳ್ಳುತ್ತಾರೆ?’ ಎಂದು ಯೋಚಿಸುತ್ತ ಕುಳಿತರೆ? ಯಾರ ಅಭಿಪ್ರಾಯ- ಯಾವ ಕಿಸಬೊಕ್ಕೆ!! ಯಾರು ಏನು ಬೇಕಾದರೂ ಅಂದುಕೊಳ್ಳಲಿ ಎನ್ನುವಾಗ ನಾವು ‘ಕತ್ತೆ ಬಾಲ, ಕುದುರೆ ಜುಟ್ಟು’ ಎಂಬ ಮಾತನ್ನು ಬಳಸುತ್ತೇವೆ. ಇದರ ಅರ್ಥ ಏನೆಂದು ನನಗೆ ಗೊತ್ತಿಲ್ಲ.
ಆದರೆ ಸ್ವ-ಸಮರ್ಥನೆಗೆ ಇಳಿದಷ್ಟೂ ನಮ್ಮ ಬದುಕಿನ ಓಟದ ಕುದುರೆಯ ಜುಟ್ಟನ್ನು ಇನ್ನೊಬ್ಬರ ಕೈಗೆ ಕೊಟ್ಟಂತೆ ಎನ್ನುವುದು ಸುಳ್ಳಲ್ಲ. ‘ಕತ್ತೆ ಬಾಲ ಕುದುರೆ ಜುಟ್ಟು’- ಅದುವೇ ಹಾಯಾದ ಬದುಕಿನ ಗುಟ್ಟು! ಏನಂತೀರಿ?