Roopa Gururaj Column: ಆರ್.ಕೆ.ನಾರಾಯಣರ ಮಾಲ್ಗುಡಿ ಡೇಸ್ ಹುಟ್ಟಿದ ಕಥೆ
ಫೇಲಾದ ನಂತರ ಸಿಕ್ಕ ಬಿಡುವಿನ ದಿನಗಳಲ್ಲಿ ನಾರಾಯಣ್ ಮೈಸೂರಿನ ಬೀದಿಗಳಲ್ಲಿ ಅಲೆಯು ತ್ತಿದ್ದರು. ಕಣ್ಣಿಗೆ ಕಂಡ ಮನುಷ್ಯರನ್ನು, ಅವರ ನಡವಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಮನೆಯ ಲೈಬ್ರರಿಯಲ್ಲಿ ಕುಳಿತು ಕಥೆಗಳ ಅದ್ಭುತ ಲೋಕದಲ್ಲಿ ಮುಳುಗುತ್ತಿದ್ದರು. ಆ ಒಂಟಿತನವೇ ಅವರನ್ನು ಒಳಗಣ್ಣಿನಿಂದ ಜಗತ್ತನ್ನು ನೋಡುವಂತೆ ಮಾಡಿತು.
-
ಒಂದೊಳ್ಳೆ ಮಾತು
ಆ ಕಹಿ ಘಟನೆಯನ್ನು ನೆನೆದಾಗಲೆ 18 ವರ್ಷದ ಆ ಹುಡುಗನ ಕಣ್ಣುಗಳು ತೇವವಾಗುತ್ತಿದ್ದವು. ಇಂಗ್ಲಿಷ್ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆಯ ಫಲಿತಾಂಶ ಬಂದಿತ್ತು. ಇಂಗ್ಲಿಷ್ ವಿಷಯದ ಆತ ಫೇಲಾಗಿದ್ದ!
ಇಡೀ ಜಗತ್ತೇ ತನ್ನನ್ನು ನೋಡಿ ನಗುತ್ತಿರುವಂತೆ ಆತನಿಗೆ ಭಾಸವಾಗಿತ್ತು. ಆ ದಿನ ಸೋತು ತಲೆತಗ್ಗಿಸಿ ನಿಂತಿದ್ದ ಆ ಹುಡುಗನೇ ರಾಶಿಪುರಂ ಕೃಷ್ಣಸ್ವಾಮಿ ಅಯ್ಯರ್ ನಾರಾಯಣಸ್ವಾಮಿ... ಮುಂದೆ ಜಗತ್ತು ಕೊಂಡಾಡಿದ ನಮ್ಮ ಹೆಮ್ಮೆಯ ಆರ್.ಕೆ.ನಾರಾಯಣ್. ಆದರೆ, ವಿಧಿಯ ಆಟವೇ ಬೇರೆ ಯಾಗಿತ್ತು.
ಫೇಲಾದ ನಂತರ ಸಿಕ್ಕ ಬಿಡುವಿನ ದಿನಗಳಲ್ಲಿ ನಾರಾಯಣ್ ಮೈಸೂರಿನ ಬೀದಿಗಳಲ್ಲಿ ಅಲೆಯು ತ್ತಿದ್ದರು. ಕಣ್ಣಿಗೆ ಕಂಡ ಮನುಷ್ಯರನ್ನು, ಅವರ ನಡವಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಮನೆಯ ಲೈಬ್ರರಿಯಲ್ಲಿ ಕುಳಿತು ಕಥೆಗಳ ಅದ್ಭುತ ಲೋಕದಲ್ಲಿ ಮುಳುಗುತ್ತಿದ್ದರು. ಆ ಒಂಟಿತನವೇ ಅವರನ್ನು ಒಳಗಣ್ಣಿನಿಂದ ಜಗತ್ತನ್ನು ನೋಡುವಂತೆ ಮಾಡಿತು.
ಇದನ್ನೂ ಓದಿ: Roopa Gururaj Column: ಅಂಧಕಾರದ ನಡುವೆ ಜ್ಞಾನದ ಹಸಿವು: ದ್ರೌಪದಿ ಮುರ್ಮು
ಮುಂದೆ ಅವರು ಲಕ್ಷ್ಮೀಪುರಂಗೆ ಸ್ಥಳಾಂತರಗೊಂಡು, ಚನ್ನಪಟ್ಟಣದಲ್ಲಿ ಇಂಗ್ಲಿಷ್ ಶಿಕ್ಷಕರಾಗಿ ಕೆಲಸಕ್ಕೆ ಸೇರಿದರು. ಆದರೆ, ನಾಲ್ಕೇ ದಿನಗಳಲ್ಲಿ ಆ ಕೆಲಸಕ್ಕೆ ಬೇಸತ್ತು ಮೈಸೂರಿಗೇ ಮರಳಿದರು. ಬರವಣಿಗೆಯೇ ಅವರ ಉಸಿರಾಗಿತ್ತು. ಕಾಲೇಜು ದಿನಗಳಲ್ಲಿ ಸ್ಥಳೀಯ ಕೆಫೆಗಳಲ್ಲಿ ಸ್ನೇಹಿತರೊಂದಿಗೆ ಚಹಾದ ಹಬೆಯ ನಡುವೆ ತಾವು ಬರೆದ ಕಥೆಗಳನ್ನು ಹಂಚಿಕೊಳ್ಳುತ್ತಿದ್ದರು. ಆ ಹರಿದ ಕಾಗದದ ತುಂಡುಗಳು ಮುಂದೆ ಸಾಹಿತ್ಯದ ಇತಿಹಾಸ ಸೃಷ್ಟಿಸುತ್ತವೆ ಎಂದು ಆಗ ಯಾರಿಗೂ ತಿಳಿದಿರಲಿಲ್ಲ.
ಹಲವು ವರ್ಷಗಳ ಪರಿಶ್ರಮದ ನಂತರ ಹುಟ್ಟಿಕೊಂಡಿದ್ದೇ ‘ಸ್ವಾಮಿ ಅಂಡ್ ಫ್ರೆಂಡ್ಸ್’ ಹಸ್ತಪ್ರತಿ. ಆದರೆ, ಭಾರತದಲ್ಲಿ ಅದನ್ನು ಪ್ರಕಟಿಸಲು ಯಾರೂ ಒಪ್ಪಲಿಲ್ಲ. ಬೇಸತ್ತ ನಾರಾಯಣ್, ಬ್ರಿಟನ್ ನಲ್ಲಿದ್ದ ತಮ್ಮ ಸ್ನೇಹಿತನಿಗೆ ಆ ಪ್ರತಿಯನ್ನು ಕಳುಹಿಸಿ, ಯಾರಾದರೂ ಪ್ರಕಾಶಕರು ಸಿಕ್ಕರೆ ನೋಡು, ಇಲ್ಲದಿದ್ದರೆ ಅದನ್ನು ಥೇಮ್ಸ್ ನದಿಗೆ ಎಸೆದು ಬಿಡು ಎಂದು ಹತಾಶೆಯಿಂದ ಬರೆದಿದ್ದರು. ಆದರೆ, ಕಥೆಯಲ್ಲಿದ್ದ ಮಣ್ಣಿನ ವಾಸನೆ ಥೇಮ್ಸ್ ನದಿಗೆ ಸೇರಬೇಕಾಗಿರಲಿಲ್ಲ, ಅದು ಇಡೀ ಜಗತ್ತನ್ನು ಆವರಿಸಬೇಕಿತ್ತು. ಆ ಹಸ್ತಪ್ರತಿ ಪ್ರಸಿದ್ಧ ಸಾಹಿತಿ ಗ್ರಹಾಂ ಗ್ರೀನ್ ಅವರ ಕೈ ಸೇರಿತು.
ಸ್ವಾಮಿಯ ಮುಗ್ಧತೆಗೆ ಮನಸೋತ ಗ್ರೀನ್, 1935ರಲ್ಲಿ ಅದನ್ನು ಪ್ರಕಟಿಸಲು ನೆರವಾದರು. ಅಲ್ಲಿಗೆ ಮಾಲ್ಗುಡಿ ಎಂಬ ಮಾಂತ್ರಿಕ ಲೋಕದ ಹೆಬ್ಬಾಗಿಲು ತೆರೆಯಿತು!
ಆದರೆ, ಯಶಸ್ಸಿನ ಬೆನ್ನಲ್ಲೇ ವಿಧಿ ಅವರಿಗೆ ಸಾಲು ಸಾಲು ಆಘಾತಗಳನ್ನು ನೀಡಿತು. 1937ರಲ್ಲಿ ತಂದೆಯ ನಿಧನವಾಯಿತು. ಅದಾಗಿ ಎರಡೇ ವರ್ಷಗಳಲ್ಲಿ, ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದ ಪತ್ನಿ ರಾಜಂ ಡೆಂಘೀ ಜ್ವರದಿಂದ ಕೊನೆಯುಸಿರೆಳೆದರು. ಮನೆಯ ಮೌನ, ಶೂನ್ಯತೆ ಅವರನ್ನು ಕಾಡತೊಡಗಿತು. ಆದರೆ, ಅವರು ಆ ನೋವಿಗೆ ಶರಣಾಗಲಿಲ್ಲ. ತಮ್ಮ ಹೃದಯದ ಅಪಾರ ದುಃಖ ಮತ್ತು ವಿರಹವನ್ನು ಬರವಣಿಗೆಯ ಶಾಹಿಯಾಗಿಸಿಕೊಂಡರು.
ಆ ಒಂಟಿತನ ಮತ್ತು ಮೌನದಿಂದ ಮೂಡಿ ಬಂದಿದ್ದೇ ಭಾರತೀಯ ಸಾಹಿತ್ಯದ ಸಾರ್ವಕಾಲಿಕ ಶ್ರೇಷ್ಠ ಕೃತಿಗಳು. 1942ರಲ್ಲಿ ಬಿಡುಗಡೆಯಾದ ‘ಮಾಲ್ಗುಡಿ ಡೇಸ್’ ಕಥಾ ಸಂಕಲನ, ಸಾಮಾನ್ಯ ಜನರ ಅಸಾಮಾನ್ಯ ಜೀವನವನ್ನು ಜಗತ್ತಿಗೆ ಪರಿಚಯಿಸಿತು. ಮುಂದೆ ದೂರ ದರ್ಶನದಲ್ಲಿ ಮೂಡಿ ಬಂದ ಇದರ ಧಾರಾವಾಹಿ ಪ್ರತಿಯೊಬ್ಬ ಭಾರತೀಯನ ಬಾಲ್ಯದ ಮಧುರ ನೆನಪಾಯಿತು.
ತದನಂತರ ಬಂದ ‘ದ ಗೈಡ್’ ಕಾದಂಬರಿಗೆ 1960ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಒಲಿಯಿತು. ಒಮ್ಮೆ ಇಂಗ್ಲಿಷ್‌ನ ಫೇಲಾಗಿದ್ದ ಹುಡುಗ, ಅದೇ ಇಂಗ್ಲಿಷ್ ಭಾಷೆಯಲ್ಲಿ ಭಾರತದ ಸುಂದರ ಹಳ್ಳಿಗಳ, ಮುಗ್ಧ ಜನರ ಕಥೆಗಳನ್ನು ಜಗತ್ತಿಗೆ ಸಾರಿ ಅತ್ಯಂತ ಪ್ರಭಾವಶಾಲಿ ಬರಹ ಗಾರನಾಗಿ ಬೆಳೆದು ನಿಂತಿದ್ದ.
ಕೆಲವೊಮ್ಮೆ ಸೋಲು ನಮ್ಮ ಆತ್ಮವಿಶ್ವಾಸವನ್ನೇ ಕರಗಿಸಿ ಹೈರಾಣಾಗಿಸುತ್ತದೆ. ಪ್ರಪಂಚಕ್ಕೆ ಇರಲಿ ನಮಗೆ ನಮ್ಮ ಬಗ್ಗೆ ವಿಶ್ವಾಸ ಹೊರಟು ಹೋಗುತ್ತದೆ. ಅಂತಹ ಸಮಯದಲ್ಲೂ ಕೂಡ ಧೈರ್ಯ ತಂದುಕೊಂಡು ಪ್ರಯತ್ನಗಳನ್ನು ಮಾಡುತ್ತಾ ದೃಢವಾಗಿ ಮುಂದೆ ಹೆಜ್ಜೆ ಇರಿಸಿದಾಗ ಮಾತ್ರ ಬೆಳಕಿನ ಆಶಾಕಿರಣ ಬದುಕಿನಲ್ಲಿ ಮೂಡಲು ಸಾಧ್ಯ. ನಡೆಯುವವರು ಎಡುವುದು ಸಹಜ, ಆದರೆ ಪ್ರಯತ್ನವನ್ನೇ ಪಡದೆ ಹೋದರೆ ಗುರಿಯೆಡೆಗೆ ತಲುಪಲು ಸಾಧ್ಯವೇ ಆಗುವುದಿಲ್ಲ.