Vinayak V Bhat Column: ಸಂಗೀತ ಸರಸ್ವತಿಯ ಜತೆಗೆ ಮೈತ್ರಿ ಸಾಧಿಸಿದ ಲಕ್ಷ್ಮಿ
ತಮಗೆ ವಿಶ್ವಸಂಸ್ಥೆಯಲ್ಲಿ ಹಾಡುವ ಅಪರೂಪದ ಅವಕಾಶ ಒದಗಿ ಬಂದಿದೆ, ನಿಮ್ಮ ಆಶೀರ್ವಾದ ಬೇಕು ಎಂದು ಅನುಗ್ರಹ ಬಯಸಿ ಬಂದಿದ್ದ ಸುಬ್ಬುಲಕ್ಷ್ಮಿಯವರಿಗೆ, ಪರಮಾಚಾರ್ಯರೆಂದೇ ಖ್ಯಾತಿವೆತ್ತಿದ್ದ ಮಹಾನ್ ಗುರು, ಕಂಚಿಯ ಶ್ರೀ ಚಂದ್ರಶೇಖರೇಂದ್ರ ಸ್ವಾಮಿಗಳವರು ಸಂಸ್ಕೃತದಲ್ಲಿ ರಚಿಸಿಕೊಟ್ಟಿದ್ದ ಕೀರ್ತನೆಯಾಗಿತ್ತು ಅದು.
-
ವಿದ್ಯಮಾನ
ಎಲ್ಲಿ ನೋಡಿದರೂ ಹಿಂಸೆ, ಯುದ್ಧ, ಜಗಳ, ಆಕ್ರಮಣಕಾರಿ ಧೋರಣೆ, ದೇಶ ದೇಶಗಳ ನಡುವೆ ಸಮರೋತ್ಸಾಹ. ಈ ಎಲ್ಲ ಜಾಗತಿಕ ಕ್ಷೋಭೆಗಳನ್ನು ನೋಡುತ್ತಿರುವಾಗ, ಮಿತ್ರತ್ವವನ್ನು ಜಗತ್ತಿಗೆ ಸಾರುವ ಕಂಚಿಯ ಪರಮಾಚಾರ್ಯರು ರಚಿಸಿದ್ದ, ‘ಭಾರತ ರತ್ನ’ ಪುರಸ್ಕೃತರಾದ ಎಂ.ಎಸ್. ಸುಬ್ಬುಲಕ್ಷ್ಮಿ ಅವರು ವಿಶ್ವಸಂಸ್ಥೆಯಲ್ಲಿ ಹಾಡಿದ್ದ ‘ಮೈತ್ರೀಮ್ ಭಜತ’ ಹಾಡು ಏಕೋ ನೆನಪಾ ಯಿತು.
ಜತೆಗೆ, ಅವರು ಅಮರವಾಗಿಸಿದ ವೆಂಕಟೇಶ್ವರ ಸುಪ್ರಭಾತ ಸ್ಮರಣೆಗೆ ಬಂತು, ಪ್ರಸಿದ್ಧ ‘ಬಾಲಾಜಿ ಪಂಚರತ್ನ’ ಮನಸ್ಸಿಗೆ ಬಂತು; ಇವುಗಳ ಹಿನ್ನೆಲೆಯ ಬಗ್ಗೆ, ಅವರ ಸರಳತೆ, ನಿಸ್ಪೃಹತೆಗಳ ಬಗ್ಗೆ ಬರೆಯಬೇಕೆನಿಸಿತು.
1966ರ ಅಕ್ಟೋಬರ್‌ನಲ್ಲಿ ವಿಶ್ವಸಂಸ್ಥೆಯಲ್ಲಿ ಎಂ.ಎಸ್.ಸುಬ್ಬುಲಕ್ಷ್ಮಿ ಅವರ ಸಂಗೀತ ಕಛೇರಿ ಯನ್ನು ಏರ್ಪಡಿಸಲಾಗಿತ್ತು. ಗಾಯಕಿಯ ಸಾಮರ್ಥ್ಯ, ಸಂದರ್ಭ ಮತ್ತು ಸ್ಥಳ ಎಲ್ಲವೂ ಸೇರಿ ಈ ಸಂಗೀತ ಕಛೇರಿಯು ಸದಾ ಸ್ಮರಣೆಯಲ್ಲುಳಿಯುವ ಘಟನೆಯಾಯಿತು.
ಅಷ್ಟೇ ಅಲ್ಲದೆ, ಕಾರ್ಯಕ್ರಮದ ಮುಕ್ತಾಯದ ತುಣುಕು, ‘ಮೈತ್ರೀಮ್ ಭಜತ’ ಎನ್ನುವ ಕೀರ್ತನೆ ಯಿಂದಲೂ ಈ ಕಛೇರಿ ಐತಿಹಾಸಿಕವಾಯಿತು. ಎಂ.ಎಸ್.ಸುಬ್ಬುಲಕ್ಷ್ಮಿ ಅವರು ಹೀಗೆ ಕಛೇರಿ ನಡೆಸಿ ಕೊಡುತ್ತಿದ್ದಾಗ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯೂ ಸೇರಿದಂತೆ ವಿಶ್ವದ ಅನೇಕ ಗಣ್ಯರು ಹಾಜರಿದ್ದು ಕಛೇರಿಯನ್ನು ಆನಂದಿಸಿದ್ದರು.
‘ಮೈತ್ರೀಮ್ ಭಜತ’ ಎನ್ನುವ ಮುಕ್ತಾಯದ ಕೀರ್ತನೆಯು ಸಂಸ್ಕೃತ ರಚನೆಯಾಗಿದ್ದರಿಂದ, ವಿಶ್ವದ ವಿವಿಧ ದೇಶಗಳ ಪ್ರತಿನಿಧಿಗಳಿಗೆ ಅರ್ಥವಾಗಲಿ ಎನ್ನುವ ಕಾರಣಕ್ಕೆ ಹಾಡಿನ ಅರ್ಥವನ್ನು ಮುದ್ರಿಸಿದ್ದ ಹಾಳೆಯನ್ನು ಮೊದಲೇ ಎಲ್ಲರಿಗೂ ನೀಡಲಾಗಿತ್ತು. ಈ ಕೀರ್ತನೆಯ ಕೊನೆಯಲ್ಲಿ ಎಲ್ಲ ಸಭಿಕರೂ ಎದ್ದು ನಿಂತು ಮನದುಂಬಿ ಚಪ್ಪಾಳೆ ತಟ್ಟಿದ್ದು ಭಾರತೀಯ ಸಂಗೀತ ಪ್ರಕಾರವೊಂದಕ್ಕೆ ಹಾಗೂ ಭಾರತೀಯ ಮಾನಸಿಕತೆಗೆ ಸಂದ ವೈಶ್ವಿಕ ಗೌರವವಾಗಿತ್ತು.
ಇದನ್ನೂ ಓದಿ: Vinayak V Bhat Column: ಸಂಪ್ರದಾಯ ಮೀರದ ಹೊಸತನಕ್ಕೆ ಸದಾ ಸ್ವಾಗತವಿದೆ
ತಮಗೆ ವಿಶ್ವಸಂಸ್ಥೆಯಲ್ಲಿ ಹಾಡುವ ಅಪರೂಪದ ಅವಕಾಶ ಒದಗಿ ಬಂದಿದೆ, ನಿಮ್ಮ ಆಶೀರ್ವಾದ ಬೇಕು ಎಂದು ಅನುಗ್ರಹ ಬಯಸಿ ಬಂದಿದ್ದ ಸುಬ್ಬುಲಕ್ಷ್ಮಿಯವರಿಗೆ, ಪರಮಾಚಾರ್ಯರೆಂದೇ ಖ್ಯಾತಿವೆತ್ತಿದ್ದ ಮಹಾನ್ ಗುರು, ಕಂಚಿಯ ಶ್ರೀ ಚಂದ್ರಶೇಖರೇಂದ್ರ ಸ್ವಾಮಿಗಳವರು ಸಂಸ್ಕೃತದಲ್ಲಿ ರಚಿಸಿಕೊಟ್ಟಿದ್ದ ಕೀರ್ತನೆಯಾಗಿತ್ತು ಅದು.
ಪರಮಾಚಾರ್ಯರ ವಿಶ್ವಶಾಂತಿಯ ಸಂದೇಶ, ಸುಬ್ಬುಲಕ್ಷ್ಮಿಯವರ ಕಂಠದಿಂದ ಹೊರಹೊಮ್ಮಿ ವಿಶ್ವದ ಗಮನವನ್ನು ಸೆಳೆದಿತ್ತು. ವಿಶ್ವಶಾಂತಿಯನ್ನು ಸಾರುವ ಭಾರತೀಯ ಸನಾತನ ಸಿದ್ಧಾಂತಕ್ಕೂ, ಭಾರತೀಯ ದಕ್ಷಿಣಾದಿ ಸಂಗೀತಕ್ಕೂ ಗೌರವವನ್ನು ತಂದಿತ್ತು. ಮುಂದೆ ಸುಬ್ಬುಲಕ್ಷ್ಮಿಯವರು ತಮ್ಮ ಅನೇಕ ಸಂಗೀತ ಕಛೇರಿಗಳ ಕೊನೆಯ ಹಾಡಾಗಿ ಈ ಹಾಡನ್ನು ಹಾಡಿರುವುದೂ ಇದೆ.
‘ಮೈತ್ರೀಮ್ ಭಜತ, ಅಖಿಲ ಹೃಜ್ಜೇತ್ರೀಮ, ಆತ್ಮವದೇವ ಪರಾನಪಿ ಪಶ್ಯತ, ಯುದ್ಧಂ ತ್ಯಜತ, ಸ್ಪರ್ಧಾಂ ತ್ಯಜತ, ತ್ಯಜತ ಪರೇಶು ಅಕ್ರಮಣಂ. ಜನನಿ ಪೃಥಿವೀ ಕಾಮದುಘಾಸ್ಥೇ ಜನಕೋ ದೇವಃ ಸಕಲ ದಯಾಲುಃ ದಮ್ಯತ ದತ್ತ ದಯಾಧ್ವಂ ಜನತಃಶ್ರೇಯೋ ಭುಯಾತ್ ಸಕಲ ಜನಾನಾಮ್’ ಎನ್ನುವುದು ಈ ಹಾಡಿನ ಪೂರ್ಣಪಾಠವಾಗಿದೆ.
‘ಎಲ್ಲರ ಹೃದಯಗಳನ್ನು ಗೆಲ್ಲುವ ಸ್ನೇಹವನ್ನು ಬೆಳೆಸು, ಇತರರನ್ನು ನಿನ್ನಂತೆ ನೋಡು, ಯುದ್ಧ ವನ್ನು ತ್ಯಜಿಸು; ಸ್ಪರ್ಧೆಯನ್ನು ತ್ಯಜಿಸಿ ಇತರರ ಮೇಲಿನ ಆಕ್ರಮಣಶೀಲತೆಯನ್ನು ಕೈಬಿಡು. ಭೂಮಿ ತಾಯಿ ನಮ್ಮ ಎಲ್ಲಾ ಆಸೆಗಳನ್ನು ಈಡೇರಿಸುತ್ತಾಳೆ. ನಮ್ಮ ಪ್ರಭು, ನಮ್ಮ ತಂದೆ ಈ ಪ್ರಪಂಚದ ಎಲ್ಲಾ ಜನರಿಗೆ ಕರುಣಾಮಯಿಯಾಗಿದ್ದಾನೆ, ನಿಮ್ಮನ್ನು ಸಂಯಮದಿಂದಿರಿಸಿಕೊಳ್ಳಿ, ದಾನ ಮಾಡಿ ಮತ್ತು ಎಲ್ಲರಿಗೂ ದಯೆ ತೋರಿಸಿ. ಎಲ್ಲಾ ಜನರು ಸಂತೋಷದಿಂದಿದ್ದು ಸಮೃದ್ಧರಾಗಿರಲಿ’ ಎನ್ನುವುದು ಈ ಸಂಸ್ಕೃತ ಕೃತಿಯ ಭಾವಾರ್ಥವಾಗಿದೆ.
1963ರಲ್ಲಿ ಬಿಡುಗಡೆಯಾದ ಸುಬ್ಬುಲಕ್ಷ್ಮಿಯವರ ಸರ್ವ ಜನಪ್ರಿಯ ‘ವೆಂಕಟೇಶ್ವರ ಸುಪ್ರಭಾತಮ’ ಇವತ್ತಿಗೂ ಭಾರತದ ಅತ್ಯಂತ ಹೆಚ್ಚು ಮಾರಾಟವಾದ ಚಲನಚಿತ್ರೇತರ ರೆಕಾರ್ಡಿಂಗ್‌ಗಳಲ್ಲಿ ಒಂದಾಗಿದೆ. ಇದು ಲಕ್ಷಾಂತರ ಹಿಂದೂ ಕುಟುಂಬಗಳಿಗೆ ದೈನಂದಿನ ಬೆಳಗಿನ ಗೀತೆ ಮತ್ತು ಭಾರಿ ಮಾರಾಟದ ದಾಖಲೆಯಾಗಿ ಉಳಿದಿದೆ.
ಸುಬ್ಬುಲಕ್ಷ್ಮಿ ಅವರು ಈ ರೆಕಾರ್ಡಿಂಗ್‌ನಿಂದ ಬಂದ ಸಂಪೂರ್ಣ ರಾಯಧನವನ್ನು ತಿರುಮಲ ತಿರುಪತಿ ದೇವಸ್ಥಾನಂ ನಡೆಸುತ್ತಿರುವ ವೇದ ಪಾಠಶಾಲೆಗೆ ದಾನ ಮಾಡಿದರು ಎನ್ನುವುದು ಇನ್ನೊಂದು ವಿಶೇಷ.
‘ಬಾಲಾಜಿ ಪಂಚರತ್ನ ಮಾಲಾ’ ಎನ್ನುವ ಅವರ ಸಾರ್ವಕಾಲಿಕ ದಾಖಲೆಯ ಧ್ವನಿಮುದ್ರಣದ ಹಿನ್ನೆಲೆಯ ಕುರಿತ ಇನ್ನೊಂದು ಅಪರೂಪದ ಸಂಗತಿಯ ಬಗ್ಗೆ ಹೇಳಬೇಕು. 1979ರ ಆರಂಭದ ಕಾಲ, ಆಗಲೇ ತಮ್ಮ ಅಪ್ರತಿಮ ಸಂಗೀತ ಸಾಧನೆಯಿಂದ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಡಿ ಗೇರಿಸಿಕೊಂಡು ಕೀರ್ತಿಯ ಶಿಖರ ಸ್ಥಾನದಲ್ಲಿದ್ದ ಎಂ.ಎಸ್.ಸುಬ್ಬುಲಕ್ಷ್ಮಿ ಮತ್ತು ಸದಾಶಿವಂ ದಂಪತಿಗಳು ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿದ್ದ ಕಾಲವದು.
ಅವರಿಗೆ ತುರ್ತು ಸಹಾಯದ ಅಗತ್ಯವಿತ್ತು. ಪರಮ ದೈವಭಕ್ತೆ, ಸಾಧ್ವಿಯಾಗಿದ್ದ ಎಂ.ಎಸ್.ಸುಬ್ಬು ಲಕ್ಷ್ಮಿ ಅವರನ್ನು ತಕ್ಷಣ ಈ ಆರ್ಥಿಕ ಬಿಕ್ಕಟ್ಟಿನಿಂದ ಹೊರತರಲು ದಯವಿಟ್ಟು ಏನಾದರೂ ಮಾಡಿ ಎಂದು ಕಂಚಿ ಕಾಮಕೋಟಿ ಪೀಠದ ಪರಮಾಚಾರ್ಯ ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ಸ್ವಾಮಿ ಗಳವರು, ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟಿನ ಕಾರ್ಯನಿರ್ವಾಹಕ ಅಧಿಕಾರಿ ಪಿ.ವಿ.ಆರ್.ಕೆ.ಪ್ರಸಾದ್ ಅವರಿಗೆ ತುರ್ತು ಟೆಲಿಗ್ರಾಂ ಸಂದೇಶವೊಂದನ್ನು ಕಳಿಸಿದ್ದರು.
‘ಎಂಎಸ್’ ಪ್ರಪಂಚದಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದವರು ಮತ್ತು ಅವರು ಅಂಥ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿzರೆ ಎಂದು ತಿಳಿದರೆ ಯಾರೂ ಸುಮ್ಮನಿರುವುದಿಲ್ಲ. ಏನಾದರೂ ಸಹಾಯ ಮಾಡೇ ಮಾಡುತ್ತಾರೆ. ಹೀಗಿದ್ದೂ ಪರಮಾಚಾರ್ಯರು ನನ್ನಿಂದ ಏಕೆ ಸಹಾಯವನ್ನು ನಿರೀಕ್ಷೆ ಮಾಡುತ್ತಿದ್ದಾರೆ ಎಂದು ತಿಳಿಯದೇ ಗೊಂದಲಕ್ಕೀಡಾದರು ಪ್ರಸಾದ್.
ಪರಮಾಚಾರ್ಯರೇ ಸ್ವತಃ ಸಂದೇಶ ಕಳುಹಿಸಿದ ಮೇಲೆ ಸುಮ್ಮನಿರಲಿಕ್ಕಂತೂ ಆಗುವುದಿಲ್ಲ. ಹಾಗಾಗಿ ಪ್ರಸಾದ್ ಅವರು ಮದ್ರಾಸ್ ನಗರದಲ್ಲಿನ ತಮ್ಮ ಅಧಿಕೃತ ಮೂಲಗಳ ಮೂಲಕ ಸುಬ್ಬು ಲಕ್ಷ್ಮಿಯವರ ಸ್ಥಿತಿಗತಿಗಳ ಕುರಿತು ತಕ್ಷಣ ಅವಲೋಕನ ನಡೆಸಿದರು, ಎಂ.ಎಸ್. ಮತ್ತು ಸದಾಶಿವಂ ದಂಪತಿ ಮದ್ರಾಸಿನ ತಮ್ಮ ಕಲ್ಕಿ ಎಸ್ಟೇಟ್ ಅನ್ನು ಮಾರಾಟಮಾಡಿ ಹಳೆ ಮದ್ರಾಸಿನ ಉಪನಗರ ವೊಂದರ ನಿರ್ಜನ ಸ್ಥಳವಾಗಿದ್ದ ವಲ್ಲುವರ್ ಕೊಟ್ಟಂನಲ್ಲಿ ಒಂದು ಸಣ್ಣ ಬಾಡಿಗೆ ಮನೆಯಲ್ಲಿ ವಾಸಮಾಡುತ್ತಿದ್ದರು.
ಸದಾಶಿವಂ ಅವರು ‘ಕಲ್ಕಿ’ ಎಂಬ ಹೆಸರಿನ ಪತ್ರಿಕೆಯನ್ನು ನಡೆಸುತ್ತಿದ್ದರು, ದುರದೃಷ್ಟವಶಾತ್ ಅದು ಭಾರಿ ನಷ್ಟಕ್ಕೆ ಸಿಲುಕಿತು. ದೊಡ್ಡ ಮೊತ್ತದ ಸಾಲಗಳನ್ನು ತೀರಿಸಲು ತಮ್ಮ ಬೆಲೆ ಬಾಳುವ ಆಸ್ತಿಯನ್ನು ಮಾರಾಟ ಮಾಡುವ ಅನಿವಾರ್ಯತೆ ಈ ದಂಪತಿಗೆ ಉಂಟಾಗಿತ್ತು ಎನ್ನುವುದು ತಿಳಿಯಿತು.
ಹೆಚ್ಚಿನ ಸಮಯವನ್ನು ವ್ಯರ್ಥ ಮಾಡದೆ, ಪ್ರಸಾದ್ ಟಿಟಿಡಿ ಮಂಡಳಿಯ ತುರ್ತು ಸಭೆಯನ್ನು ಕರೆದು ‘ಎಂಎಸ್’ ಮತ್ತು ಅವರ ಪತಿಗೆ ತಕ್ಷಣ ಸಾಧ್ಯವಾದಷ್ಟು ಪರಿಹಾರವನ್ನು ನೀಡಲು ಅದರ ತಜ್ಞರಿಂದ ಸಲಹೆ ಕೇಳಿದರು. ಅವರು ಈಗಾಗಲೇ ಟಿಟಿಡಿಯ ಅಸ್ಥಾನ ವಿದ್ವಾನ್ ಆಗಿದ್ದಾರೆ ಮತ್ತು ನಮ್ಮಿಂದ ಕೆಲವು ಗೌರವಧನ ಮತ್ತು ಸವಲತ್ತುಗಳನ್ನು ಅನುಭವಿಸುತ್ತಿದ್ದಾರೆ. ಈ ಹಂತದಲ್ಲಿ ನಾವು ಹೆಚ್ಚಿನದೇನೂ ಮಾಡಲಾಗುವುದಿಲ್ಲ ಎನ್ನುವ ತೀರ್ಮಾನ ಬಂತು.
ಬಹಳ ವಿಚಲಿತರಾದ ಪ್ರಸಾದರು ಆ ಸಂಜೆ ದೇವಾಲಯದಿಂದ ಹೊರಟಾಗ, ಅದರ ಮುಂದೆ ಕುಳಿತಿದ್ದ ಬಡ ಗಾಯಕರ ಗುಂಪೊಂದು ಅನ್ನಮಾಚಾರ್ಯರ ಭಜನೆಗಳನ್ನು ಹಾಡುತ್ತಿರುವುದನ್ನು ಗಮನಿಸಿದರು. ಪ್ರಸಾದ್ ಕೆಲವು ನಿಮಿಷಗಳ ಕಾಲ ಅಲ್ಲಿಯೇ ನಿಂತರು. ಆ ಗಾಯಕರ ಅದ್ಭುತ ಪ್ರತಿಭೆಯಿಂದ ಮತ್ತು ಅವರ ಹಳ್ಳಿಗಾಡಿನ ಸೊಗಡಿನ ಗಾಯನ ಶೈಲಿಯಿಂದ ಅವರು ಮಂತ್ರಮುಗ್ಧ ರಾದರು.
ಕೆಲವು ಕ್ಷಣ ಅವರ ಭಜನೆಯನ್ನು ಮೌನವಾಗಿ ಕೇಳಿದ ನಂತರ ಏನೋ ಯೋಚನೆಯುಂಟಾಗಿ ಪ್ರಸಾದರು ಸಮಾಧಾನದಿಂದ ಮುಗುಳ್ನಕ್ಕು ಅಲ್ಲಿಂದ ಹೊರಟರು. ನಿರಾಳವಾದ ಮನಸ್ಥಿತಿಯಿಂದ ಮರುದಿನ ಬೆಳಗ್ಗೆಯೇ ಪ್ರಸಾದರು ಕಂಚಿಗೆ ಹೊಗಿ ಪರಮಾಚಾರ್ಯರನ್ನು ಭೇಟಿಯಾದರು.
‘ಎಂಎಸ್’ ಅವರಿಗೆ ಆರ್ಥಿಕ ಸಹಾಯವಾಗಬಹುದಾದ, ತಮ್ಮ ಮನಸ್ಸಿನಲ್ಲಿ ಮೂಡಿದ ಕಾರ್ಯ ಯೋಜನೆಯ ಬಗ್ಗೆ ಅವರಿಗೆ ವಿವರವಾಗಿ ತಿಳಿಸಿದರು. “ಸ್ವಾಮಿ, ಎಂ.ಎಸ್.ಸುಬ್ಬುಲಕ್ಷ್ಮಿ ಅವರ ಬಗ್ಗೆ ನಿಮ್ಮ ತಂತಿ ಬಂದ ನಂತರ ನಾನು ತುಂಬಾ ವಿಚಲಿತನಾಗಿದ್ದೆ. ನಾನು ಟಿಟಿಡಿ ಕಾರ್ಯಕಾರಿ ಮಂಡಳಿಯ ತುರ್ತು ಸಭೆಯನ್ನು ಕರೆದು ಸಲಹೆಗಳನ್ನು ಕೇಳಿದೆ; ಆದರೆ ದೃಢವಾದ ನಿರ್ಧಾರಕ್ಕೆ ಬರಲಾಗಲಿಲ್ಲ. ಅದೇ ದಿನ ಸಂಜೆ ನಾನು ವೆಂಕಟೇಶ್ವರ ದೇವರಲ್ಲಿ ‘ಎಂಎಸ್’ ಅವರಿಗೆ ಸಹಾಯ ಮಾಡಲು ಮಾರ್ಗದರ್ಶನ ಮತ್ತು ಆಶೀರ್ವಾದವನ್ನು ಕೋರಿ ಹೊರಬರುತ್ತಿದ್ದಾಗ, ಬಡ ಗಾಯಕರ ಗುಂಪು ದೇವಾಲಯದ ಮುಂದೆ ಕುಳಿತು ಭಗವಂತನನ್ನು ಸ್ತುತಿಸುತ್ತಾ ಅನ್ನಮಾಚಾರ್ಯರ ಕೀರ್ತನೆಗಳನ್ನು ಹಾಡುತ್ತಿರುವುದನ್ನು ನೋಡಿದೆ.
ಅವರ ಭಕ್ತಿ ಗಾಯನದಿಂದ ನಾನು ಮಂತ್ರಮುಗ್ಧನಾಗಿದ್ದಲ್ಲದೆ, ಆ ಕ್ಷಣದಲ್ಲಿ ನನ್ನ ಮನಸ್ಸಿನಲ್ಲಿ ‘ಎಂಎಸ್’ಗೆ ಸಹಾಯ ಮಾಡುವ ಒಂದು ಉತ್ತಮ ಆಲೋಚನೆ ಹುಟ್ಟಿಕೊಂಡು ಮನಸ್ಸು ಸ್ವಲ್ಪ ಹಗುರವಾಯಿತು. ಶತಮಾನಗಳ ಹಿಂದೆ ಸಂತ ಅನ್ನಮಾಚಾರ್ಯರು ವೆಂಕಟೇಶ್ವರನ ಬಗ್ಗೆ ಹಲವಾರು ಕೀರ್ತನೆಗಳನ್ನು ರಚಿಸಿದರು. ಆದರೆ ಅವುಗಳಲ್ಲಿ ಕೆಲವೇ ಕೆಲವು ಬೆಳಕನ್ನು ಕಂಡಿವೆ.
ಉಳಿದವುಗಳನ್ನು ಹೊರ ತರಬೇಕಾಗಿದೆ. ನನ್ನ ಯೋಜನೆಯ ಪ್ರಕಾರ, ಟಿಟಿಡಿ ಈಗ ಅನ್ನಮಾಚಾ ರ್ಯರ ಕೆಲವು ಅಪರಿಚಿತ ಕೀರ್ತನೆಗಳನ್ನು ಗುರುತಿಸುತ್ತದೆ ಮತ್ತು ಟಿಟಿಡಿ ಪರವಾಗಿ ನಾನು ‘ಎಂಎಸ್’ ಅವರನ್ನು ಭೇಟಿ ಮಾಡಿ ಆ ಕೀರ್ತನೆಗಳನ್ನು ಹಾಡಲು ವಿನಂತಿಸುತ್ತೇನೆ. ಅವರು ಅನ್ನಮಾಚಾರ್ಯರ ಕೀರ್ತನೆಗಳನ್ನು ಧ್ವನಿಮುದ್ರಿಸಲು ಒಪ್ಪುತ್ತಾರೆ ಎಂದು ನನಗೆ ಖಾತ್ರಿಯಿದೆ.
ನಂತರ, ಟಿಟಿಡಿ ಆ ಧ್ವನಿಮುದ್ರಣಗಳನ್ನು ತಿರುಮಲಕ್ಕೆ ಭೇಟಿ ನೀಡುವ ಲಕ್ಷಾಂತರ ಭಕ್ತರಿಗೆ ಮಾರಾಟ ಮಾಡುವ ಮೂಲಕ ಸಾಕಷ್ಟು ಆದಾಯವನ್ನು ತರುತ್ತದೆ. ಈ ಧ್ವನಿಮುದ್ರಣದ ಮಾರಾಟದಿಂದ ಬರುವ ರಾಯಧನಕ್ಕೆ ಆಕೆ ಅರ್ಹರಾಗುವುದರಿಂದ ಅವರಿಗೆ ಶಾಶ್ವತ ಸಹಾಯ ವಾಗಲಿದೆ" ಎಂದು ತಮ್ಮ ಯೋಜನೆಯನ್ನು ವಿವರಿಸಿದರು.
ಪ್ರಸಾದ್ ಅವರ ಯೋಜನೆಯಿಂದ ಸಂತೋಷಗೊಂಡ ಪರಮಾಚಾರ್ಯರು “ನಿಮ್ಮ ಆಲೋಚನೆ ಯೇನೋ ಅದ್ಭುತವಾಗಿದೆ, ಆದರೆ ಸುಬ್ಬುಲಕ್ಷ್ಮಿಯವರು ಊಹಿಸಲಾಗದ ಮಟ್ಟದ ಸ್ವಾಭಿಮಾನಿ ಮಹಿಳೆ. ಆರ್ಥಿಕ ನೆರವು ನೀಡಲು ನೀವು ಅವರ ಬಳಿಗೆ ಬಂದಿದ್ದೀರಿ ಎಂದು ಅವರು ಭಾವಿಸದಂತೆ ನೋಡಿಕೊಳ್ಳಿ. ಅಲ್ಲದಿದ್ದರೆ ಆಕೆ ನಿಮ್ಮ ಪ್ರಸ್ತಾಪವನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತಾರೆ. ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಿ, ಶುಭವಾಗಲಿ" ಎಂದು ಹರಸಿ ಕಳುಹಿಸಿದರು
ಒಂದು ದಿನ ಮುಂಜಾನೆ, ಪ್ರಸಾದ ರೂಪವಾಗಿ ಶ್ರೀ ವೆಂಕಟೇಶ್ವರನ ಭಾವಚಿತ್ರವನ್ನು ಹೊತ್ತ ಟಿಟಿಡಿಯ ಇತರ ಇಬ್ಬರು ಅಧಿಕಾರಿಗಳು ಎಂ.ಎಸ್. ದಂಪತಿ ವಾಸಿಸುತ್ತಿದ್ದ ಮದ್ರಾಸಿನ ಸಣ್ಣ ಬಾಡಿಗೆ ಮನೆಗೆ ಹೋಗಿ ತಾವು ಬಂದ ಉದ್ದೇಶವನ್ನುವಿವರವಾಗಿ ತಿಳಿಸಿದರು.
“ಶ್ರೀಮಂತ ಭಾರತೀಯ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಮೌಲ್ಯಗಳನ್ನು ಉತ್ತೇಜಿಸಲು ಟಿಟಿಡಿ ಸಾಕಷ್ಟು ಪ್ರಚಾರ ಚಟುವಟಿಕೆಗಳನ್ನು ಮಾಡುತ್ತಾ ಬಂದಿದೆ. ಇದುವರೆಗೂ ಜಗತ್ತಿಗೆ ತಿಳಿದಿಲ್ಲದ ಅನ್ನಮಾಚಾರ್ಯರ ಅನೇಕ ಕೀರ್ತನೆಗಳನ್ನು ಪ್ರಕಟಪಡಿಸಲು ಆಲೋಚಿಸಿದ್ದೇವೆ. ಐದು ಸಂಪುಟ ಗಳಲ್ಲಿ ಸುಬ್ಬುಲಕ್ಷ್ಮಿಯವರ ಧ್ವನಿ ಸುರುಳಿಯನ್ನು ಹೊರತರುವುದು ನಮ್ಮ ಯೋಜನೆಯಾಗಿದೆ" ಎಂದು ತಿಳಿಸಿದರು.
ಕೀರ್ತನೆಗಳನ್ನು ತೆಲುಗು ಭಾಷೆಯಲ್ಲಿ ಬರೆಯಲಾಗಿದೆ ಎಂದು ತಿಳಿದಾಗ, ‘ಎಂಎಸ್’ ಅವರು ಹಾಡುವ ಭಾಷೆಯ ಮೇಲೆ ಹಿಡಿತವನ್ನು ಹೊಂದಲು ಇಷ್ಟಪಡುತ್ತಾರೆ; ಒಂದು ತೆಲುಗು ಕೀರ್ತನೆ ಯನ್ನು ಅಭ್ಯಾಸ ಮಾಡಲು ಆಕೆಗೆ ಕನಿಷ್ಠ ಒಂದು ವಾರದ ಸಮಯ ಬೇಕು ಮತ್ತು ಸುಮಾರು ಐವತ್ತು ಕೀರ್ತನೆಗಳಿವೆ ಎಂದಮೇಲೆ ಆಕೆಗೆ ಸುಮಾರು ಒಂದು ವರ್ಷ ಬೇಕಾಗಬಹುದು.
ಅರವತ್ತಮೂರನೆಯ ವಯಸ್ಸಿನಲ್ಲಿ ಅಂಥ ಶ್ರಮದಾಯಕ ಕೆಲಸದಿಂದ ಅವರಿಗೆ ತೊಂದರೆ ನೀಡುವುದು ಸರಿಯಲ್ಲ ಎಂದು ಅವರ ಪತಿ ಹೇಳಿಬಿಟ್ಟರು. ಆದರೆ, ‘ಎಂಎಸ್’ ಅವರು, “ಇದು ನನಗೆ ದೇವರು ಕಳುಹಿಸಿದ ಅವಕಾಶ ಮತ್ತು ಈ ಕಾರ್ಯವನ್ನು ಸಾಧಿಸಲು ಯಾವುದೇ ಕಷ್ಟಗಳನ್ನು ಎದುರಿಸಲು ನಾನು ಸಿದ್ಧಳಾಗಿದ್ದೇನೆ, ಈ ಅವಕಾಶವನ್ನು ಬಿಡುವುದಿಲ್ಲ" ಎಂದರು.
ಮ್ಯೂಸಿಕ್ ಆಲ್ಬಂಗೆ ಸಂಬಂಧಿಸಿದ ಎಲ್ಲಾ ಚರ್ಚೆಗಳು ಮುಗಿದ ನಂತರ, ಸಂಭಾವನೆಯನ್ನು ಅಂತಿಮಗೊಳಿಸುವ ಅತ್ಯಂತ ನಿರ್ಣಾಯಕ ಹಂತವು ಬಂತು. “ಅಮ್ಮಾ, ನೀವು ಈ ಜವಾಬ್ದಾರಿ ಯನ್ನು ತೆಗೆದುಕೊಳ್ಳಲು ಒಪ್ಪಿದ್ದಕ್ಕೆ ನಮಗೆಲ್ಲರಿಗೂ ತುಂಬಾ ಸಂತೋಷವಾಗಿದೆ. ಈಗ ಸಂಭಾ ವನೆಯ ಬಗ್ಗೆ ಮಾತನಾಡಲು ಇಚ್ಛಿಸುತ್ತೇನೆ" ಎಂದು ಪೀಠಿಕೆ ಹಾಕುವುದರಲ್ಲಿದ್ದ ಪ್ರಸಾದರು ಇನ್ನೂ ವಾಕ್ಯವನ್ನು ಪೂರ್ಣಗೊಳಿಸುವ ಮೊದಲೇ ಅವರ ಮಾತನ್ನು ತಡೆದ ಸುಬ್ಬುಲಕ್ಷ್ಮಿ ಯವರು, “ಯಾವ ಸಂಭಾವನೆಯ ಬಗ್ಗೆ ಮಾತನಾಡುತ್ತಿದ್ದೀರಿ? ಇದು ದೇವರ ಸೇವೆಯಾಗಿದೆ, ಮಧ್ಯದಲ್ಲಿ ಹಣ ತರಬೇಡಿ. ಈ ಕೆಲಸಕ್ಕಾಗಿ ನಾನು ಒಂದು ರುಪಾಯಿಯನ್ನೂ ತೆಗೆದುಕೊಳ್ಳುವು ದಿಲ್ಲ" ಎಂದು ನಿರ್ಧಾರವಾಗಿ ಹೇಳಿಬಿಟ್ಟರು.
ಆಗ ಪ್ರಸಾದ್ ಅವರು, “ವಾಸ್ತವವಾಗಿ ಟಿಟಿಡಿ ಈ ಆಲ್ಬಮ್ ಅನ್ನು ಭಾರತ ಮತ್ತು ವಿದೇಶಗಳಲ್ಲಿನ ತನ್ನ ಎಲ್ಲಾ ಕೌಂಟರ್‌ಗಳಲ್ಲಿ ಮಾರಾಟ ಮಾಡುವ ಮೂಲಕ ವಾಣಿಜ್ಯ ರೀತಿಯಲ್ಲಿ ಪ್ರಚಾರ ಮಾಡಲು ಯೋಜಿಸುತ್ತಿದೆ. ಇದು ಟಿಟಿಡಿಗೆ ಸಾಕಷ್ಟು ಹಣವನ್ನು ತರುತ್ತದೆ ಮತ್ತು ನೀವು ಅದನ್ನು ಸ್ವೀಕರಿಸಲು ಕಾನೂನುಬದ್ಧವಾಗಿ ಅರ್ಹರಾಗಿರುವುದರಿಂದ ಅದರಿಂದ ಸ್ವಲ್ಪ ಹಣವನ್ನು ತೆಗೆದು ಕೊಳ್ಳಲು ಮಾತ್ರ ನಿಮ್ಮನ್ನು ವಿನಂತಿಸುತ್ತಿದ್ದೇವೆ. ಟಿಟಿಡಿಯು ನಿಮ್ಮಂಥ ಮಹಾನ್ ಗಾಯಕರ ಸೇವೆಯನ್ನು ಉಚಿತವಾಗಿ ತೆಗೆದುಕೊಳ್ಳುವುದು ಸರಿಯಾಗುವುದಿಲ್ಲ" ಎಂದು ಹೇಳಿದರು.
ಅಂತಿಮವಾಗಿ ಅವರ ಒತ್ತಾಯಕ್ಕೆ ಮಣಿದು ರಾಯಧನದ ಸ್ವೀಕೃತಿಗೆ ಸುಬ್ಬುಲಕ್ಷ್ಮಿಯವರು ಒಪ್ಪಿಗೆ ಕೊಡುತ್ತಾರೆ. ಅನ್ನಮಾಚಾರ್ಯರ ಈ ಸಂಗೀತ ಆಲ್ಬಂನ ಶೀರ್ಷಿಕೆ ‘ಬಾಲಾಜಿ ಪಂಚರತ್ನಮಾಲಾ’ ಎಂದಿರಬೇಕು ಎನ್ನುವುದನ್ನೂ ಸುಬ್ಬುಲಕ್ಷ್ಮಿಯವರೇ ತೀರ್ಮಾನಿಸುತ್ತಾರೆ. ನಂತರ ಎಚ್ಎಂವಿ ರೆಕಾರ್ಡಿಂಗ್ ಕಂಪನಿಯು ಟಿಟಿಡಿಯೊಂದಿಗೆ ಮಾಡಿಕೊಂಡ ಒಪ್ಪಂದದ ಭಾಗವಾಗಿ ತಕ್ಷಣ ‘ಎಂಎಸ್’ ಹೆಸರಿನಲ್ಲಿ ನಾಲ್ಕು ಲಕ್ಷ ರುಪಾಯಿ, ಅವರ ಪತಿ ಸದಾಶಿವಂ ಹೆಸರಿನಲ್ಲಿ ಎರಡು ಲಕ್ಷ ರುಪಾಯಿ ಮತ್ತು ಮ್ಯೂಸಿಕ್ ಆಲ್ಬಮ್ ಯೋಜನೆಯಲ್ಲಿ ಭಾಗವಹಿಸಲಿರುವ ಅವರ ಮಗಳು ರಾಧಾ ವಿಶ್ವನಾಥನ್ ಹೆಸರಿನಲ್ಲಿ ಒಂದು ಲಕ್ಷ ರುಪಾಯಿಗಳ ಮೊತ್ತವನ್ನು ಸ್ಥಿರ ಠೇವಣಿಯಲ್ಲಿ ಇಟ್ಟು ಸಂಚಿತ ಮಾಸಿಕ ಬಡ್ಡಿಯು ಅವರು ಬಯಸುವಷ್ಟು ಕಾಲ ಬರುವಂತೆ ವ್ಯವಸ್ಥೆ ಮಾಡಲಾಯಿತು.
1980ರಲ್ಲಿ ಅದರ ರೆಕಾರ್ಡಿಂಗ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ‘ಬಾಲಾಜಿ ಪಂಚರತ್ನಮಾಲಾ’ ಆಲ್ಬಂ ಏಕಕಾಲದಲ್ಲಿ ಭಾರತದಾದ್ಯಂತ ಬಿಡುಗಡೆಯಾಯಿತು. ಬಿಡುಗಡೆ ಯಾದ ಮೊದಲ ವರ್ಷದಲ್ಲಿಯೇ ಅದು ಅದ್ಭುತ ಯಶಸ್ಸನ್ನು ಪಡೆದು ದಾಖಲೆಯ ಆದಾಯ ವನ್ನು ಗಳಿಸಿತು. ಈ ಆಲ್ಬಮ್ ಭಾರತದಲ್ಲಿನ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ‘ಎಂಎಸ್’ ಅವರನ್ನು ದೇಶಾದ್ಯಂತ ಮನೆಮಾತಾಗಿಸಿತು ಎನ್ನುವುದು ಇತಿಹಾಸ.
ಅವರ ವಿಷ್ಣು ಹಾಗೂ ಲಲಿತಾ ಸಹಸ್ರನಾಮಗಳು, ಮೋಹಮುದ್ಗರ ಎಲ್ಲವೂ ಭಾರತೀಯ ಮನಸ್ಸು ಗಳಲ್ಲಿ ಅಚ್ಚಾಗಿ ಉಳಿದವುಗಳೇ ಆಗಿವೆ. ಅಂತರಂಗದ ಭಕ್ತಿಯಿಂದ ಹಾಡಿದಾಗ ಮಾತ್ರ ಅದು ಭಕ್ತಿಗೀತೆಯಾಗುತ್ತದೆ, ಅಂಥ ಭಕ್ತಿಗೀತೆಗಳು ಮಾತ್ರ ಶಾಶ್ವತವಾಗುತ್ತವೆ ಎನ್ನುವುದನ್ನು ಸುಬ್ಬುಲಕ್ಷ್ಮಿ ಯವರು ತೋರಿಸಿ ಕೊಟ್ಟಿದ್ದರು.