ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಬದುಕಿರುವ ಕೊನೆಯ ಕ್ಷಣದವರೆಗೂ ಕಲಿಕೆ ನಿಲ್ಲುವುದಿಲ್ಲ

ಕಲಿಕೆಗೆ ಕೊನೆಯೆಂಬುದು ಇಲ್ಲವೇ ಇಲ್ಲ. ಬದುಕಿನುದ್ದಕ್ಕೂ ಹೊಸ ಹೊಸ ವಿಷಯಗಳನ್ನು, ಬದುಕನ್ನು ಅರ್ಥಪೂರ್ಣವಾಗಿ ಬದುಕುವ ಕೌಶಲವನ್ನು ನಾವು ಕಲಿಯುತ್ತಲೇ ಇರಬಹುದು. ಆದ್ದರಿಂದಲೇ ಎನಗಿಂತ ಕಿರಿಯರಿಲ್ಲ ಎನ್ನುವ ಬಸವಣ್ಣನವರ ವಚನದಂತೆ ಸದಾ ವಿನಯದಿಂದ, ಏನನ್ನಾದರೂ ಕಲಿಯುವ ಉತ್ಸಾಹದಿಂದ ಪ್ರತಿ ದಿನವನ್ನು ಸ್ವಾಗತಿಸೋಣ.

ಬದುಕಿರುವ ಕೊನೆಯ ಕ್ಷಣದವರೆಗೂ ಕಲಿಕೆ ನಿಲ್ಲುವುದಿಲ್ಲ

-

ಒಂದೊಳ್ಳೆ ಮಾತು

ಒಂದು ದಿನ ಬುದ್ಧನು ಶಿಷ್ಯ ಆನಂದನೊಡನೆ ಕಾಡಿನ ಮೂಲಕ ಹಾದು ಹೋಗುತ್ತಿದ್ದ. ಅದು ಶರತ್ಕಾಲದ ಸಂಜೆಯಾಗಿದ್ದರಿಂದ ಕಾಡಿನ ತುಂಬ ಒಣ ಎಲೆಗಳು ರಾಶಿ ರಾಶಿಯಾಗಿ ಬಿದ್ದಿದ್ದವು. ಸಂಜೆಯ ಗಾಳಿ ಆ ಎಲೆಗಳನ್ನು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಕೊಂಡೊಯ್ಯುತ್ತ ಮಧುರ ಸಂಗೀತವನ್ನು ಕಾಡಿನ ತುಂಬ ಹರಡಿತ್ತು. ಆ ಒಣಗಿದ ಎಲೆಗಳ ಮೇಲೆ ನಡೆಯುವುದೇ ಒಂದು ದಿವ್ಯ ಅನುಭವವಾಗಿತ್ತು.

ಬುದ್ಧನನ್ನು ಉದ್ದೇಶಿಸಿ ಆನಂದನು, “ಬಹಳ ದಿನಗಳಿಂದ ನನ್ನ ಮನಸ್ಸಿನಂದು ಪ್ರಶ್ನೆ ಕಾಡುತ್ತಿದೆ. ಇಂದು ನಮ್ಮ ಸುತ್ತಮುತ್ತ ಬೇರೆ ಯಾರೂ ಇಲ್ಲ. ಇಂಥ ಸಮಯ ನನಗೆ ಅಪರೂಪಕ್ಕೆ ಸಿಕ್ಕಿದೆ. ದಿನದ ಇಪ್ಪತ್ನಾಲ್ಕು ಗಂಟೆಯೂ ನಾನು ನಿನ್ನ ಜತೆ ಇರುತ್ತೇನಾದರೂ, ಬೇರೆ ಯಾರಾದರೊಬ್ಬರು ನಮ್ಮ ನಡುವೆ ಬಂದೇ ಬರುತ್ತಾರೆ ಮತ್ತು ಪ್ರಶ್ನೆ ಕೇಳುವ ಆದ್ಯತೆ ಯಾವಾಗಲೂ ಅವರದಾಗಿರುತ್ತದೆ.

ನಾನು ಸದಾ ನಿನ್ನ ಜತೆ ಇರುತ್ತೇನಾದ್ದರಿಂದ ಇವತ್ತು ಕೇಳಿದ ರಾಯ್ತು ನಾಳೆ ಕೇಳಿದರಾಯ್ತು ಎಂದು ಈ ಪ್ರಶ್ನೆ ನನ್ನೊಳಗೇ ಉಳಿದುಕೊಂಡು ಬಿಟ್ಟಿದೆ. ಇವತ್ತು ನಮ್ಮ ಸುತ್ತ ಬೇರೆ ಯಾರೂ ಇಲ್ಲವಾದ್ದರಿಂದ ಪ್ರಶ್ನೆಯನ್ನ ಕೇಳಿಯೇಬಿಡುತ್ತೇನೆ. ಅದೇನೆಂದರೆ- ನಿನಗೆ ಗೊತ್ತಿರುವ ಎಲ್ಲವನ್ನೂ ನೀನು ಹೇಳಿ ಬಿಟ್ಟಿದ್ದೀಯಾ? ಅಥವಾ ಕೆಲವಾದರೂ ಸಂಗತಿಗಳನ್ನು ನಮಗೆ ಹೇಳದೆ ನಿನ್ನೊಳಗೇ ಇಟ್ಟು ಕೊಂಡಿದ್ದೀಯಾ?" ಎಂದು ಕೇಳಿದ.

ಇದನ್ನೂ ಓದಿ: Roopa Gururaj Column: ಬಯಸಿದ್ದು ದೊರೆಯಬೇಕಾದರೆ ನಾವು ಅರ್ಹರಾಗಬೇಕು

ಬುದ್ಧ ಒಂದು ಜಾಗದಲ್ಲಿ ನಿಂತು ಕೆಳಗೆ ಬಿದ್ದಿದ್ದ ಒಣಗಿದ ಎಲೆಗಳನ್ನ ತನ್ನ ಮುಷ್ಟಿಯಲ್ಲಿ ತುಂಬಿ ಕೊಂಡ. “ಏನು ಮಾಡುತ್ತಿದ್ದೀಯ ತಥಾಗತ?" ಆನಂದ ಬುದ್ಧನನ್ನು ಮತ್ತೆ ಪ್ರಶ್ನೆ ಮಾಡಿದ. “ನಿನ್ನ ಪ್ರಶ್ನೆಗೆ ಉತ್ತರ ಕೊಡುವ ಪ್ರಯತ್ನ ಮಾಡುತ್ತಿದ್ದೇನೆ. ನನ್ನ ಕೈಯೊಳಗೆ ನಿನಗೆ ಏನು ಕಾಣಿಸುತ್ತಿದೆ?" ಬುದ್ಧ ಆನಂದನನ್ನು ಕೇಳಿದ.

“ಕೆಲವು ಒಣಗಿದ ಎಲೆಗಳು" ಎಂದ ಆನಂದ. “ಮತ್ತು ಈ ಕಾಡಿನ ತುಂಬ ನಿನಗೆ ಏನು ಕಾಣಿಸು ತ್ತಿದೆ?" ಎಂದು ಬುದ್ಧ ಕೇಳಿದ್ದಕ್ಕೆ, “ಕೋಟ್ಯಂತರ ಒಣ ಎಲೆಗಳು" ಎಂದು ಆನಂದ ಉತ್ತರಿಸಿದ. “ನಾನು ಜಗತ್ತಿಗೆ ಹೇಳಿದ್ದು ನನ್ನ ಕೈಯಲ್ಲಿರುವ ಒಣ ಎಲೆಗಳಷ್ಟು ಮಾತ್ರ. ನಾನು ಹೇಳದೇ ಇರುವುದು ಇಡೀ ಕಾಡಿನ ತುಂಬ ತುಂಬಿಕೊಂಡಿರುವ ಎಲೆಗಳಷ್ಟು. ನನ್ನ ಬಯಕೆ ನಿಮಗೆ ಮುಷ್ಟಿ ತುಂಬ ಎಲೆಗಳನ್ನು ಕೊಡುವುದಲ್ಲ; ನನ್ನ ಆಸೆ ನಿಮಗೆ ಇಡೀ ಕಾಡಿನ ಪರಿಚಯ ಮಾಡಿಸುವುದು, ಕಾಡಿನ ಸಂಗೀತವನ್ನು ಕೇಳುವಂತೆ ಮಾಡುವುದು.

ಮಕ್ಕಳಂತೆ ನೀವು ಕಾಡಿನ ಒಣ ಎಲೆಗಳ ಮೇಲೆ ಓಡಾಡಿ ಕಾಡಿನ ಸಮಸ್ತದೊಂದಿಗೆ ಒಂದಾಗಬೇಕು. ನನ್ನ ಕೆಲವು ಮಾತುಗಳನ್ನ ಹಿಡಿದುಕೊಂಡು ಹಿಂಜುತ್ತಾ ಅದೇ ಸಮಸ್ತ ಎನ್ನುವ ಭ್ರಮೆಯಲ್ಲಿ ಬೀಳಬೇಡಿ. ಸ್ವತಃ ನೀವು ಕಾಡಿನ ಜತೆ ಒಂದಾಗಿ, ಆಗ ನಿಮ್ಮ ಪ್ರಶ್ನೆಗಳೇ ಇಲ್ಲವಾಗುತ್ತವೆ" ಎಂದು ಬುದ್ಧನು ಆನಂದನ ಪ್ರಶ್ನೆಗೆ ಸಮಾಧಾನ ಹೇಳಿದ. ಓಶೋ ಅವರು ಹೇಳಿದ ಈ ಬುದ್ಧನ ಕಥೆ ನಮ್ಮೆಲ್ಲರಿಗೂ ಸಲ್ಲುತ್ತದೆ.

ವಿದ್ಯಾಭ್ಯಾಸ ಕೇವಲ ಒಂದು ಹಿಡಿಯಷ್ಟು ಜ್ಞಾನವನ್ನು ನಮಗೆ ನೀಡುತ್ತದೆ. ಆದರೆ ಬದುಕಿನ ಅನುಭವಗಳು, ಪ್ರಪಂಚದ ಜನರ ಜತೆಗಿನ ಒಡನಾಟ, ಬೇರೆ ಬೇರೆ ಪರಿಸ್ಥಿತಿಗಳಲ್ಲಿ ನಾವು ಕಲಿಯುವ ಪಾಠಗಳು ನೂರು ಪಟ್ಟು ಜೀವನ ಕೌಶಲವನ್ನು ನಮಗೆ ಕಲಿಸುತ್ತವೆ. ಡಿಗ್ರಿಗಳನ್ನು ಪಡೆದು ಯಾರು ಕೂಡ ಜ್ಞಾನಿಗಳು ಎಂದು ಬೀಗಲು ಸಾಧ್ಯವಿಲ್ಲ. ದೇಶ ಸುತ್ತಿ, ಕೋಶ ಓದಿ, ನೂರಾರು ಜನರ ಬದುಕುಗಳಿಗೆ ಸ್ಪಂದಿಸಿದಾಗ ಮಾತ್ರ ಜೀವನದ ಒಂದು ಪ್ರತಿಶತ ನಮಗೆ ಅರ್ಥ ವಾಗಬಹುದೇನೋ!

ಕಲಿಕೆಗೆ ಕೊನೆಯೆಂಬುದು ಇಲ್ಲವೇ ಇಲ್ಲ. ಬದುಕಿನುದ್ದಕ್ಕೂ ಹೊಸ ಹೊಸ ವಿಷಯಗಳನ್ನು, ಬದುಕನ್ನು ಅರ್ಥಪೂರ್ಣವಾಗಿ ಬದುಕುವ ಕೌಶಲವನ್ನು ನಾವು ಕಲಿಯುತ್ತಲೇ ಇರಬಹುದು. ಆದ್ದರಿಂದಲೇ ಎನಗಿಂತ ಕಿರಿಯರಿಲ್ಲ ಎನ್ನುವ ಬಸವಣ್ಣನವರ ವಚನದಂತೆ ಸದಾ ವಿನಯದಿಂದ, ಏನನ್ನಾದರೂ ಕಲಿಯುವ ಉತ್ಸಾಹದಿಂದ ಪ್ರತಿ ದಿನವನ್ನು ಸ್ವಾಗತಿಸೋಣ. ಪ್ರತಿಯೊಬ್ಬ ರಿಂದಲೂ ನಮಗೆ ಹೊಸದೇನೋ ಕಲಿಯಲು ಸಿಗುತ್ತದೆ. ಅದನ್ನು ಸೂಕ್ಷ್ಮವಾಗಿ ಗಮನಿಸುವ ಮನಸ್ಸು ನಮಗಿರಬೇಕಷ್ಟೇ.