ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Ganapathi V Avadhani Column: ಪ್ರತಿಭಾ ಪಲಾಯನ ನಿಲ್ಲಲಿ, ದೇಶದ ಯುವಶಕ್ತಿ ಗೆಲ್ಲಲಿ

ಕಳೆದ 20 ವರ್ಷಗಳಿಂದೀಚೆಗೆ ಉನ್ನತ ಶಿಕ್ಷಣ ಮತ್ತು ವೃತ್ತಿಗಳನ್ನು ಅರಸಿ, ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ ಮುಂತಾದ ದೇಶಗಳಿಗೆ ವಲಸೆಹೋಗಿ, ಮರಳಿ ಬಾರದಿರು ವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಭಾರತದ ಅಭಿವೃದ್ಧಿಯ ನಿಟ್ಟಿನಲ್ಲಿ ಇದು ಮಾರಕವೇ. ಈ ಪ್ರತಿಭಾ ಪಲಾಯನವು ಮಂದುವರಿದ ರಾಷ್ಟ್ರ ಗಳಿಗೆ ವರವಾದರೆ, ಭಾರ ತದ ಮಟ್ಟಿಗೆ ಶಾಪವೇ ಸರಿ. ಕಾರಣ, ಮಾನವ ಸಂಪನ್ಮೂ ಲವು ನಮ್ಮ ದೇಶಕ್ಕೆ ಆಧಾರ ಸ್ತಂಭ; ನಮ್ಮ ವ್ಯಕ್ತಿ-ಶಕ್ತಿಗಳನ್ನು ಕಳೆದುಕೊಳ್ಳಬಾರದು.

ಪ್ರತಿಭಾ ಪಲಾಯನ ನಿಲ್ಲಲಿ, ದೇಶದ ಯುವಶಕ್ತಿ ಗೆಲ್ಲಲಿ

Profile Ashok Nayak Mar 1, 2025 7:35 AM

ಕಳಕಳಿ

ಗಣಪತಿ ವಿ.ಅವಧಾನಿ

ಕಳೆದ 20 ವರ್ಷಗಳಿಂದೀಚೆಗೆ ಉನ್ನತ ಶಿಕ್ಷಣ ಮತ್ತು ವೃತ್ತಿಗಳನ್ನು ಅರಸಿ, ಅಮೆ ರಿಕ, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ ಮುಂತಾದ ದೇಶಗಳಿಗೆ ವಲಸೆಹೋಗಿ, ಮರಳಿ ಬಾರದಿರು ವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಭಾರತದ ಅಭಿವೃದ್ಧಿಯ ನಿಟ್ಟಿನಲ್ಲಿ ಇದು ಮಾರಕವೇ. ಈ ಪ್ರತಿಭಾ ಪಲಾಯನವು ಮಂದುವರಿದ ರಾಷ್ಟ್ರ ಗಳಿಗೆ ವರವಾದರೆ, ಭಾರ ತದ ಮಟ್ಟಿಗೆ ಶಾಪವೇ ಸರಿ. ಕಾರಣ, ಮಾನವ ಸಂಪನ್ಮೂ ಲವು ನಮ್ಮ ದೇಶಕ್ಕೆ ಆಧಾರ ಸ್ತಂಭ; ನಮ್ಮ ವ್ಯಕ್ತಿ-ಶಕ್ತಿಗಳನ್ನು ಕಳೆದುಕೊಳ್ಳ ಬಾರದು.

ಯಾವುದೇ ಒಂದು ದೇಶವು ಸದೃಢವೆನಿಸಿಕೊಳ್ಳುವುದು ತನ್ನ ಬೆನ್ನೆಲುಬಾಗಿರುವ ಯುವ ಶಕ್ತಿಯಿಂದ ಮಾತ್ರ. ಅದೊಂದು ಕಾಲದಲ್ಲಿ ಭಾರತವು ವಿಶ್ವಮಾನ್ಯವೆನಿಸಿದ್ದು, ಜ್ಞಾನ-ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಗಳಿಗೆ ತಾನು ನೀಡಿದ ಕೊಡುಗೆಯಿಂದ. ಜಗತ್ತಿಗೆ ಅರಿವು ನೀಡುವ ಜ್ಞಾನದೇಗುಲವೆನಿಸಿದ್ದ ಭಾರತ ದೇಶವು ಮೆಕಾಲೆಯ ಆಗಮನದಿಂದಾಗಿ ತನ್ನ ಮೌಲ್ಯಾಧರಿತ ಶಿಕ್ಷಣ ವ್ಯವಸ್ಥೆಯನ್ನೇ ಕಳೆದುಕೊಂಡಿತು.

ನಳಂದಾ, ತಕ್ಷಶಿಲಾ ಮುಂತಾದ ವಿಶ್ವವಿಖ್ಯಾತ ವಿದ್ಯಾಲಯಗಳಿಂದ ಪ್ರಸಿದ್ಧಿ ಹೊಂದಿ ಎಲ್ಲೆಡೆಯಿಂದ ಅಸಂಖ್ಯಾತ ಜನರನ್ನು ಆಕರ್ಷಿಸಿ ‘ವಿಶ್ವದ ಜ್ಞಾನದೇಗುಲ’ ಎನಿಸಿದ್ದ ಭಾರತವು ತನ್ನ ಗತವೈಭವವನ್ನು ಮರೆತುಹೋಗುವಂಥ ಸ್ಥಿತಿಯನ್ನು ತಲುಪಿದ್ದು ಒಂದು ದುರಂತವೇ ಸರಿ!

ಕಾಲಕ್ರಮೇಣ ಜಾಗತೀಕರಣದೊಂದಿಗೆ ಬದಲಾಗತೊಡಗಿದ ಭಾರತವು ಎದುರಿಸಿದ ವೈವಿಧ್ಯಮಯ ಸಮಸ್ಯೆಗಳಲ್ಲಿ, ‘ಬ್ರೇನ್ ಡ್ರೈನ್’ ಅಥವಾ ‘ಪ್ರತಿಭಾ ಪಲಾಯನ’ವು ಅತಿ ಮುಖ್ಯವಾದ ಸಮಸ್ಯೆ ಎನಿಸಿಕೊಂಡಿದೆ. ಸ್ವಾಮಿ ವಿವೇಕಾನಂದರಿಂದ ಹಿಡಿದು ಅಬ್ದುಲ್ ಕಲಾಂರವರವರೆಗಿನ ಸಾವಿರಾರು ಧೀಮಂತರು ನಂಬಿದ, ಸದೃಢ ಭಾರತದ ನಿರ್ಮಾಣದ ಕನಸು ಸಾಕಾರಗೊಳ್ಳಬೇಕಿರುವುದು ಈ ದೇಶದ ಯುವಶಕ್ತಿಯಿಂದ.

ಇದನ್ನೂ ಓದಿ: Dr Prabhu Basarakoda Column: ಉದ್ಯೋಗಗಳ ನವೀನ ಯುಗಕ್ಕೆ ಮುನ್ನುಡಿ

ಆದರೆ, ಭಾರತವನ್ನು ಮುಂದುವರಿದ ದೇಶವನ್ನಾಗಿಸುವ ಹೊಣೆ ಹೊರಬೇಕಿರುವ 25ರಿಂದ 45 ವರ್ಷಗಳ ವಯೋಮಾನದ ನಡುವಿನ ನಮ್ಮ ಯುವಜನರು ವಿದೇಶಗಳ ಪಾಲಾಗುತ್ತಿರುವುದು ದುಃಖದ ವಿಚಾರ. ಪ್ರತಿಭಾ ಪಲಾಯನವು ನಾವೆಲ್ಲರೂ ಗಂಭೀರ ವಾಗಿ ಆಲೋಚಿಸಬೇಕಾದ ಪ್ರಮುಖ ಸಮಸ್ಯೆಯಾಗಿದೆ.

ಇದು ದೇಶವೊಂದರ ಯಶಸ್ವಿ ಮತ್ತು ಪ್ರತಿಭಾವಂತ ವ್ಯಕ್ತಿಗಳು ಹೆಚ್ಚಿನ ಅವಕಾಶಗಳನ್ನು ಹುಡುಕಲು ವಿದೇಶಗಳಿಗೆ ಹಾರುವ ಪ್ರಕ್ರಿಯೆಯನ್ನು ಸೂಚಿಸುತ್ತದೆ. ಅಂದರೆ, ಹೆಚ್ಚಿನ ಸಾಮರ್ಥ್ಯ, ವಿಶೇಷತೆ ಇರುವ ವ್ಯಕ್ತಿಗಳು ತಮ್ಮ ಜನ್ಮಸ್ಥಳವನ್ನು ಬಿಟ್ಟು ಇನ್ನೊಂದು ದೇಶಕ್ಕೆ ವಲಸೆ ಹೋಗುವುದು.

ಇದು, ವೃತ್ತಿಪರ ಸುಧಾರಣೆಗಳನ್ನು ಅನುಸರಿಸಲು ಮತ್ತು ಉತ್ತಮ ಜೀವನ ಮಟ್ಟವನ್ನು ಪಡೆಯಲು ವಿಕಸಿತ ಮತ್ತು ಸಮೃದ್ಧ ದೇಶಗಳಿಗೆ ತೆರಳುವ ಒಂದು ಪ್ರಕ್ರಿಯೆಯಾಗಿದೆ. ಈ ಪರಿಪಾಠವು ನಮ್ಮ ದೇಶದ ಪರಂಪರೆ, ಸಾಮಾಜಿಕ ಸ್ಥಿತಿಗತಿ, ಆರ್ಥಿಕತೆ ಮತ್ತು ಅಭಿವೃದ್ಧಿ ಯ ಮೇಲೆ ದೊಡ್ಡ ರೀತಿಯಲ್ಲಿ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ.

ನಮ್ಮ ದೇಶಕ್ಕೆ ಬುದ್ಧಿವಂತಿಕೆ ಮತ್ತು ಆರ್ಥಿಕ ನೆಲೆಗಟ್ಟಿನಲ್ಲಿ ನಷ್ಟವಾಗಿ ಶ್ರೇಷ್ಠ ಉದ್ಯೋಗಿ ಗಳ ಕೊರತೆಯುಂಟಾದರೆ, ವಲಸಿಗ ದೇಶಕ್ಕೆ ಅವಷ್ಟೂ ಲಭ್ಯವಾಗುತ್ತವೆ. ಕಳೆದ 20 ವರ್ಷ ಗಳಿಂದೀಚೆಗೆ ಉನ್ನತ ಶಿಕ್ಷಣ ಮತ್ತು ವೃತ್ತಿಗಳನ್ನು ಅರಸಿ, ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ ಮುಂತಾದ ದೇಶಗಳಿಗೆ ವಲಸಿಹೋಗಿ, ಮರಳಿ ಬಾರದಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ.

ಭಾರತದ ಅಭಿವೃದ್ಧಿಯ ನಿಟ್ಟಿನಲ್ಲಿ ಇದು ಮಾರಕವೇ (ಈ ಪಟ್ಟಿಯಲ್ಲಿ ಜಪಾನ್‌ನ ಹೆಸರಿಲ್ಲ; ಏಕೆಂದರೆ ಅಲ್ಲಿರುವ ಶೇ.98ರಷ್ಟು ಜನರು ಮೂಲ ಜಪಾನಿಯರೇ!). ಈ ಪ್ರತಿಭಾ ಪಲಾಯನವು ಮಂದುವರಿದ ರಾಷ್ಟ್ರಗಳಿಗೆ ವರವಾದರೆ, ಭಾರತದ ಮಟ್ಟಿಗೆ ಶಾಪವೇ ಸರಿ. ಕಾರಣ, ಮಾನವ ಸಂಪನ್ಮೂಲವು ನಮ್ಮ ದೇಶಕ್ಕೆ ಆಧಾರಸ್ತಂಭ; ನಮ್ಮ ವ್ಯಕ್ತಿ-ಶಕ್ತಿಗಳನ್ನು ಕಳೆದುಕೊಂಡರೆ, ಮುಂದಿನ ಅಭಿವೃದ್ಧಿಯ ದೃಷ್ಟಿಯಲ್ಲಿ ಅದು ಆತಂಕಕಾರಿ ಬೆಳವಣಿಗೆ ಯಲ್ಲವೇ? ಪ್ರತಿಭಾ ಪಲಾಯನಕ್ಕಿರುವ ಒಂದಷ್ಟು ಕಾರಣಗಳು ಹೀಗಿವೆ: ಜಾತಿ ಕೇಂದ್ರಿತ, ಕೇಂದ್ರೀಕೃತ ಮೀಸಲಾತಿ ನಿಯಮಗಳಿಂದಾಗಿ ಮುಂದುವರಿದ ಜಾತಿಗಳ ಹಲವು ಪ್ರತಿಭಾನ್ವಿತ ವಿದ್ಯಾರ್ಥಿಗಳು ಭಾರತದಲ್ಲಿ ಲಭ್ಯವಿರುವ ಉನ್ನತ ಶಿಕ್ಷಣದ ಅವಕಾಶ ಗಳಿಂದ ವಂಚಿತರಾಗುತ್ತಿದ್ದಾರೆ.

ಮುಂದುವರಿದ ವಿಜ್ಞಾನ-ತಂತ್ರಜ್ಞಾನ-ಎಂಜಿನಿಯರಿಂಗ್-ವೈದ್ಯಕೀಯ (ಖSಉI) ಕ್ಷೇತ್ರ ಗಳಲ್ಲಿನ ಉತ್ತಮ ಶಿಕ್ಷಣ ಮತ್ತು ಸಂಶೋಧನಾ ಅವಕಾಶಗಳಿಗಾಗಿ ಅನೇಕ ವಿದ್ಯಾರ್ಥಿಗಳು ಹಾಗೂ ಸಂಶೋಧಕರು ವಿದೇಶಗಳಿಗೆ ಹೋಗುತ್ತಾರೆ. ವಿದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಸರಕಾರಿ/ಸಾರ್ವಜನಿಕ ವಲಯದಲ್ಲಾಗಲೀ ಅಥವಾ ಖಾಸಗಿ ಕ್ಷೇತ್ರದಲ್ಲಾಗಲೀ ಉನ್ನತ ವೇತನದ ಹುದ್ದೆಗಳು ಕಡಿಮೆ. ವಿದೇಶಿ ಉದ್ಯೋಗಗಳು ಹೆಚ್ಚಿನ ವೇತನ ಮತ್ತು ಉತ್ತಮ ಕಾರ್ಯನಿಬಂಧನೆಗಳನ್ನು ಒದಗಿಸುತ್ತವೆ.

ಈ ಕಾರಣದಿಂದಲೂ ನಮ್ಮ ದೇಶದ ಪ್ರತಿಭಾವಂತರು ವಿದೇಶಗಳೆಡೆಗೆ ಮುಖ ಮಾಡು ತ್ತಾರೆ. ಅನೇಕ ದೇಶಗಳು ಉತ್ತಮ ಜೀವನಮಟ್ಟ, ಆರೋಗ್ಯಸೇವೆ ಮತ್ತು ಸಾಮಾಜಿಕ ಸುರಕ್ಷತಾ ವ್ಯವಸ್ಥೆಯನ್ನು ಒದಗಿಸುತ್ತವೆ. ಈಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಈ ಕ್ಷೇತ್ರ ಗಳಲ್ಲಿ ಸಾಕಷ್ಟು ಅಭಿವೃದ್ಧಿಯಾದರೂ, ಕೆಲ ಅನ್ಯದೇಶಗಳಲ್ಲಿನ ಗುಣಮಟ್ಟಕ್ಕೆ ಹೋಲಿಸಿ ದರೆ ಇನ್ನೂ ಸಾಕಷ್ಟು ಪ್ರಗತಿಯಾಗಬೇಕಿದೆ. ಈ ಕಾರಣದಿಂದಲೂ ಪ್ರತಿಭಾವಂತರು ಆ ದೇಶಗಳಿಗೆ ಹೋಗಲು ತೀರ್ಮಾನಿಸುತ್ತಾರೆ.

ನಮ್ಮ ಕೆಲ ಭಾರತೀಯರ ಮನಸ್ಥಿತಿಯೂ ವಿಚಿತ್ರ! ಸಣ್ಣ ಪುಟ್ಟದ್ದಕ್ಕೂ ದೇಶಭಕ್ತಿಯನ್ನು ಮೆರೆಯುವುದೇ ನಮ್ಮ ಸಹಜಗುಣ. ಭಾರತೀಯ ಮೂಲದ ವ್ಯಕ್ತಿಗಳು ಮತ್ತೆಲ್ಲೋ ಮಿಂಚಿ ಸುದ್ದಿಯಾದ ವಿಚಾರಗಳನ್ನೇ ಮತ್ತೆ ಮತ್ತೆ ಮೆಲುಕುಹಾಕಿ ಸುದ್ದಿಯಾಗಿಸುತ್ತೇವೆ.

“ಅಮೆರಿಕದಲ್ಲಿರುವ ಶೇ.70ರಷ್ಟು ವೈದ್ಯರು, ನಾಸಾದ ಶೇ.40ರಷ್ಟು ವಿಜ್ಞಾನಿಗಳು ನಮ್ಮವರು; ಅನೇಕ ಪ್ರಸಿದ್ಧ ಕಂಪನಿಗಳ ಸಿಇಒಗಳು ಭಾರತೀಯ ಮೂಲದವರು, ಅನೇಕ ಸಾಧಕರು ನಮ್ಮವರು" ಎಂದು ನಾವೇನೋ ಹೆಮ್ಮೆಪಡುತ್ತೇವೆ. ಅಮೆರಿಕದ ಸೆನೆಟ್‌ನಲ್ಲಿ ಭಾರತೀಯರಿದ್ದಾರೆಂದರೆ ಸಂತಸಪಡುತ್ತೇವೆ, ಭಾರತೀಯ ಮೂಲದ ಸುನೀತಾ ವಿಲಿ ಯಮ್ಸ್ ಆಗಸ ತಲುಪಿ ದಾಖಲೆ ನಿರ್ಮಿಸಿದಾಗ, ನಮ್ಮ ಮನೆಮಗಳು ಸಾಧನೆ ಮಾಡಿದ ಳೆಂದು ಹರ್ಷಿಸುತ್ತೇವೆ.

ಆದರೆ, ಇವರೆಲ್ಲರನ್ನೂ ಕಳೆದುಕೊಂಡ ನಮ್ಮ ದೇಶದ ಸ್ಥಿತಿಯೇನು?! ಪ್ರತಿಭಾ ಪಲಾಯನ ವನ್ನು ತಡೆಯುವ ಕುರಿತು ಈಗಾಗಲೇ ಸಾಕಷ್ಟು ಸಂಶೋಧನೆಗಳು ಮತ್ತು ವರದಿ ಗಳಿದ್ದರೂ, ಈ ಪಿಡುಗನ್ನು ಹತ್ತಿಕ್ಕಲಾಗದ ಪರಿಸ್ಥಿತಿ ನಮ್ಮದು. ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಬೆಂಗಳೂರು (ಐಐಎಂ-ಬಿ) ನಡೆಸಿದ ಸಮೀಕ್ಷೆ‌ ಯಿಂದ ದೊರೆತ ಮಾಹಿತಿಯ ಪ್ರಕಾರ, ಉನ್ನತ ವ್ಯಾಸಂಗಕ್ಕೆಂದು ವಿದೇಶಕ್ಕೆ ವಲಸೆ ಹೋಗುತ್ತಿರುವವರ ಸಂಖ್ಯೆಯು ಕಳೆದ 10 ವರ್ಷಗಳಲ್ಲಿ ಶೇ.256ರಷ್ಟು ಹೆಚ್ಚಿದೆ!

ಭಾರತೀಯರ ಮಟ್ಟಿಗೆ ವ್ಯಾಸಂಗ ಮತ್ತು ಉದ್ಯೋಗಕ್ಕಾಗಿ ವಲಸೆ ಹೋಗಲು ಅಮೆರಿಕ ಮೊದಲ ಆದ್ಯತೆಯಾದರೆ, ನಂತರದ ಸ್ಥಾನಗಳಲ್ಲಿವೆ ಬ್ರಿಟನ್, ಆಸ್ಟ್ರೇಲಿಯಾ, ಜರ್ಮನಿ ಮತ್ತು ಫ್ರಾನ್ಸ್. ಭಾರತದ ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ ಯುವಶಕ್ತಿಯ ನಷ್ಟ ವಾಗುತ್ತಿರುವ ಆತಂಕಕಾರಿ ಬೆಳವಣಿಗೆಯನ್ನು ಈ ಸಮೀಕ್ಷೆಯು ನಿಜಾರ್ಥದಲ್ಲಿ ಬಿಂಬಿಸಿದೆ ಎನ್ನಬೇಕು.

ಯುನೆಸ್ಕೋ ಗ್ಲೋಬಲ್ ಎಜುಕೇಷನ್ ಡೈಜೆಸ್ಟ್‌ನ ವರದಿಯಂತೆ, ಪ್ರತಿವರ್ಷ ವಿದೇಶಕ್ಕೆ ವಲಸೆ ಹೋಗುವ ವಿಷಯದಲ್ಲಿ ಚೀನಿಯರದ್ದು ಅಗ್ರಸ್ಥಾನ. ಚೀನಾದಿಂದ ಹೀಗೆ ವಲಸೆ ಗಾರಿಕೆ ನಡೆಸುವವರ ಸಂಖ್ಯೆ 421000ದಷ್ಟಿದ್ದರೆ, ನಂತರದ ಸ್ಥಾನಗಳಲ್ಲಿ ಭಾರತ (153000) ಮತ್ತು ರಿಪಬ್ಲಿಕ್ ಆಫ್ ಕೊರಿಯಾ (105000) ಬರುತ್ತವೆ. ಈ ಮಾಹಿತಿಯನ್ನು ಆಧರಿಸಿ, ವಲಸೆಗಾರಿಕೆಯಿಂದಾಗಿ ದೇಶದ ಮೇಲಾಗುತ್ತಿರುವ ವ್ಯತಿರಿಕ್ತ ಪರಿಣಾಮಗಳನ್ನು ವಿಶ್ಲೇಷಿಸ‌ ಬೇಕಾದ್ದು ಹಾಗೂ ಕಾರಣಗಳನ್ನು ಹುಡುಕಿ ಪರಿಹಾರಗಳನ್ನು ಕಂಡುಕೊಳ್ಳಬೇಕಾದ್ದು ಈ ಕ್ಷಣದ ಅನಿವಾರ್ಯತೆ.

ಭಾರತದಲ್ಲಿ ಉನ್ನತ ವ್ಯಾಸಂಗ ಅಥವಾ ಸಂಶೋಧನೆಗಳಿಗೆ ಸಿಗುವ ಆರ್ಥಿಕ ನೆರವು/ಅವಕಾಶ ಕಡಿಮೆಯೆನ್ನುವುದು ಮೇಲ್ನೋಟಕ್ಕೆ ಕಂಡುಬಂದರೂ, ಮತ್ತಷ್ಟು ಕಾರಣಗಳೂ ಇವೆಯೆಂಬುದು ಸತ್ಯ! ಅನೇಕರ ಅಭಿಪ್ರಾಯದಲ್ಲಿ, ಎಷ್ಟೇ ಕಷ್ಟಪಟ್ಟು ಅಂಕಗಳನ್ನು ಗಳಿಸಿದರೂ, ಮೀಸಲಾತಿ ವ್ಯವಸ್ಥೆಯಿಂದಾಗಿ ಸರಕಾರಿ ಉದ್ಯೋಗಗಳಿಂದ ವಂಚಿತರಾಗು ವವರು ಅನಿವಾರ್ಯವಾಗಿ ಖಾಸಗಿ ಕಂಪನಿಗಳಲ್ಲಿ ಕೆಲಸ ಪಡೆದು, ನಂತರ ಇನ್ನೂ ಹೆಚ್ಚಿನ ಸಾಧನೆಗೆ ಅಲ್ಲಿಂದಲೇ ವಿದೇಶಗಳಿಗೆ ಹೋಗುತ್ತಾರೆ ಎನ್ನುವ ಮಾತು ನಿಜವೇ. ಭಾರತಕ್ಕೆ ಹೋಲಿಸಿದರೆ ವಿದೇಶಿ ಶಿಕ್ಷಣದ ವೆಚ್ಚವು ದುಬಾರಿಯಾದರೂ, ನಮ್ಮ ವಿದ್ಯಾರ್ಥಿ ಗಳು ಆಕರ್ಷಿತರಾಗುತ್ತಿರುವುದು ಭವಿಷ್ಯದಲ್ಲಿ ಕಾದಿರುವ ಉದ್ಯೋಗ ಮತ್ತು ಆರ್ಥಿಕ ಭದ್ರತೆಯ ದೃಷ್ಟಿಯಿಂದ.

ಇದಲ್ಲದೇ, ತಾವು ವಲಸೆ ಹೋದ ದೇಶಗಳಲ್ಲೇ ನೆಲೆಸುವ ನಿರ್ಧಾರವನ್ನು ಅವರು ತಳೆಯುವುದಕ್ಕೂ ಕಾರಣಗಳಿವೆ. ಆಕರ್ಷಕ ಸಂಬಳದ ನಿರೀಕ್ಷೆಯೊಂದಿಗೆ ಸಿಗುವ ಉನ್ನತ ಜೀವನಶೈಲಿಯ ಹಂಬಲದಿಂದಾಗಿ ಅವರು ಭಾರತಕ್ಕೆ ಮರಳುವ ಆಲೋಚನೆಯನ್ನೇ ಕೈಬಿಡುವ ಹಂತ ತಲುಪಿಬಿಡುತ್ತಾರೆ.

ವಿಪರ್ಯಾಸವೆಂದರೆ, ನಮ್ಮ ದೇಶದ ಐಐಎಂ ಮತ್ತು ಐಐಟಿಗಳು ವಿದೇಶಿ ಸಂಸ್ಥೆಗಳನ್ನು ಆಕರ್ಷಿಸುವ ಪ್ರಮುಖ ಕೇಂದ್ರಗಳಾಗುತ್ತಿವೆಯೇ ಹೊರತು, ಮುಂದಿನ ಹೊಸದೊಂದು ಪೀಳಿಗೆಯನ್ನು ಆಧರಿಸಿದ ಅಭಿವೃದ್ಧಿ ಹೊಂದಿದ ದೇಶದ ಕಲ್ಪನೆಯ ಜ್ಞಾನದೇಗುಲ ಗಳಾಗುತ್ತಿಲ್ಲ!

ಹೀಗಾಗಿ ವ್ಯವಸ್ಥಿತ ವಿದೇಶಿ ಸಂಚಿಗೆ ನಮ್ಮ ಸ್ಥಳೀಯ ಪ್ರತಿಭೆಗಳು ಬಲಿಯಾಗುತ್ತಿದ್ದಾರೆ ಎನ್ನುವ ಭಾವನೆ ಮೂಡುವುದು ಸಹಜ. ಆದಾಗ್ಯೂ, ನಮ್ಮ ಇಂದಿನ ಯುವಜನತೆಯ ವಿದೇಶಿ ಆಕರ್ಷಣೆಯ ಹಿಂದಿರುವ ಕಾರಣಗಳೇನು? ಬದಲಾದ ನಮ್ಮ ಯುವಶಕ್ತಿಯ ಮನಸ್ಥಿತಿಯೇ? ಅಚ್ಚರಿಯ ಸಂಗತಿಯೆಂದರೆ, ಭಾರತಕ್ಕೆ ಬಂದು ನಮ್ಮ ತತ್ವಗಳು ಮತ್ತು ಸನಾತನ ವಿಚಾರಗಳನ್ನು ಅಧ್ಯಯನ ಮಾಡಲು ಬಯಸುವ ಅನೇಕ ವಿದೇಶಿಯರು ನಮ್ಮಲ್ಲಿನ ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ ಎಡತಾಕುತ್ತಿದ್ದಾರೆ.

ಆದರೆ ಇವ್ಯಾವುದೂ ನಮ್ಮವರಿಗೆ ಅಧ್ಯಯನದ ವಿಷಯಗಳಾಗಿಲ್ಲ. ಇಂದಿನ ಯುವಜನರು ಕೇವಲ ಓದಿ, ಅಂಕ ಗಳಿಸಿ, ಉದ್ಯೋಗಗಳನ್ನು ಅರಸುವ ಒತ್ತಡದ ಜೀವನಕ್ಕೆ ಬಲಿಯಾ ಗುತ್ತಿದ್ದಾರೆ. ಕೆಲವೊಮ್ಮೆ ಕಷ್ಟಪಟ್ಟು ಅಂಕಗಳಿಸಿ ಪದವಿ ಪಡೆದರೂ ಉದ್ಯೋಗ ಪಡೆಯಲಾಗದ ಅವರ ಹತಾಶೆಯೂ ಇದಕ್ಕೆ ಕಾರಣವೇ?

ಸಂಪೂರ್ಣ ಸಾಕ್ಷರತೆ/ಎಲ್ಲರಿಗೂ ಶಿಕ್ಷಣ ನಮ್ಮ ಕನಸು. ತನ್ನ ನೆಲದಿಂದ ಆಗುತ್ತಿರುವ ಪ್ರತಿಭಾ ಪಲಾಯನವನ್ನು ತಡೆಯುವ ನಿಟ್ಟಿನಲ್ಲಿ ಭಾರತವು ಎಡೆಬಿಡದ ಪ್ರಯತ್ನ ವನ್ನೇನೋ ನಡೆಸಿದೆ. ಆದರೆ, ನಮ್ಮ ಪ್ರತಿಭಾವಂತರಿಗೆ ಹೊಸ ಉದ್ಯೋಗಾವಕಾಶಗಳನ್ನು ಕಲ್ಪಿಸುವುದರ ಜತೆಗೆ ವ್ಯವಸ್ಥೆಯಲ್ಲಿಯೂ ಬದಲಾವಣೆ ತರಬೇಕಾದ್ದು ಅತ್ಯಗತ್ಯ.

ಇದರೊಂದಿಗೆ ಮುಂಬರುವ ದಿನಗಳಲ್ಲಿ ನಮ್ಮ ಪ್ರತಿಭೆಗಳನ್ನು ಕಾಪಿಟ್ಟುಕೊಳ್ಳುವು ದರೊಂದಿಗೆ ಪೋಷಿಸುವುದೂ ಅವಶ್ಯಕವಾಗಿದೆ. ಮುಂದಿನ ದಿನಗಳಲ್ಲಿ ಅಮೆರಿಕಕ್ಕೆ ತೆರಳುವ ನಮ್ಮ ವೈದ್ಯಕೀಯ ವಿದ್ಯಾರ್ಥಿಗಳು, ತಮ್ಮ ವ್ಯಾಸಂಗದ ಅವಧಿಯ ನಂತರ ಭಾರತಕ್ಕೆ ಹಿಂದಿರುಗುವ ನಿಬಂಧನೆಯನ್ನು ಒಳಗೊಂಡ ಒಪ್ಪಂದವನ್ನು ಅಲ್ಲಿನ ಸರಕಾರದೊಂದಿಗೆ ಮಾಡಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಸರಕಾರವು ಆಲೋಚಿಸು ತ್ತಿರುವುದು ಸ್ವಾಗತಾರ್ಹ.

ಇದರಿಂದಾಗಿ ನಮ್ಮವರನ್ನು ಉಳಿಸಿಕೊಳ್ಳುವ ಭರವಸೆಯನ್ನಾದರೂ ಕಾಣಬಹುದು. ಹತ್ತು ಹಲವು ವರ್ಷಗಳಿಂದ ತಮ್ಮ ಕನಸುಗಳನ್ನು ನನಸಾಗಿಸುವ ಭರದಲ್ಲಿ ವಿದೇಶದಲ್ಲಿ ನೆಲೆ ಸಲು ಮುಂದಾಗುವ ನಮ್ಮವರು ಇಲ್ಲಿ ಅವಕಾಶವಂಚಿತರಾಗಿರಬಹುದು. ಬದಲಾಗು ತ್ತಿರುವ ಮನಸ್ಥಿತಿ, ತೃಪ್ತಿಯಿಲ್ಲದ ಜೀವನಶೈಲಿ, ಮೌಲ್ಯಾಧಾರಿತ ಶಿಕ್ಷಣದ ಕೊರತೆಯೂ ಈ ವಿಷಯದಲ್ಲಿ ಬಲವಾದ ಕಾರಣಗಳೆನಿಸಿಕೊಳ್ಳುತ್ತವೆ.

ಇದು ಬದಲಾಗಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತಮ್ಮ ಕನಸುಗಳನ್ನು ನನಸಾಗಿ ಸುವ ಭರದಲ್ಲಿ, ತಮ್ಮ ಮಕ್ಕಳಲ್ಲಿ ಡಾಕ್ಟರ್ -ಎಂಜಿನಿಯರ್‌ಗಳನ್ನಾಗಿಸುವ ಇಚ್ಛಾಶಕ್ತಿ ಯನ್ನು ತುಂಬುವುದರೊಂದಿಗೆ, ನಮ್ಮ ಪೋಷಕರು ಈ ದೇಶದ ಮಣ್ಣಿನ ಗುಣ ಹಾಗೂ ಒಂದಿಷ್ಟಾದರೂ ದೇಶಭಕ್ತಿಯನ್ನೂ ತುಂಬಿದಲ್ಲಿ ಒಳಿತು. ಜತೆಗೆ ಮಕ್ಕಳಿಗೆ ರಾಷ್ಟ್ರೀಯ ವಿಚಾರಗಳನ್ನು ಅರ್ಥಮಾಡಿಸಿದಲ್ಲಿ, ನಮ್ಮ ದೇಶದಲ್ಲಿ ಅರ್ಹತೆಗೆ ಸೂಕ್ತ ಅವಕಾಶ ಸಿಗುವಂಥ ಮಾರ್ಪಾಟುಗಳಾದಲ್ಲಿ, ನೂರಾರು ಸಾವಿರಾರು ವೈದ್ಯರೂ, ವಿಜ್ಞಾನಿ ಗಳೂ ನಮ್ಮ ದೇಶದಲ್ಲೇ ನೆಲೆಸಿ ಸಾಧನೆ ಮಾಡುವಂತಾಗುವುದನ್ನು ನಾವು ಭವಿಷ್ಯದಲ್ಲಿ ಕಾಣಬಹುದು.

ಪ್ರತಿಭಾ ಪಲಾಯನವನ್ನು ತಡೆಯಲು ಅತ್ಯುತ್ತಮ ಶಿಕ್ಷಣ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಬೇಕು. ನಮ್ಮ ದೇಶದಲ್ಲೇ ಗುಣಮಟ್ಟದ ಶಿಕ್ಷಣ ಮತ್ತು ಸಂಶೋಧನೆಯ ಅವಕಾಶ ಗಳನ್ನು ಒದಗಿಸಿದರೆ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ನಮ್ಮಲ್ಲೇ ಉಳಿಸಿಕೊಳ್ಳಬಹುದು. ಇದರ ಜತೆಗೆ ಉದ್ಯೋಗಾವಕಾಶಗಳ ಹೆಚ್ಚಳವೂ ಇಂದಿನ ಅಗತ್ಯವಾಗಿದೆ. ಇದು ಕೈಗೂಡಿ ದಲ್ಲಿ, ನಮ್ಮ ದೇಶದಲ್ಲೇ ಕಾರ್ಯನಿರ್ವಹಿಸಲು ಪ್ರತಿಭಾವಂತರಿಗೆ ಸಾಕಷ್ಟು ಅವಕಾಶ ಗಳನ್ನು ನೀಡಬಹುದಾಗಿದೆ.

ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಗಳಿಗೆ ಹೆಚ್ಚಿನ ಹಣಕಾಸು ಒದಗಿಸಿ, ಆವಿಷ್ಕಾರ ಗಳನ್ನು ಉತ್ತೇಜಿಸಬಹುದು. ಈ ರೀತಿಯ -ನಿಲುವುಗಳನ್ನು ತಳೆಯುವ ಮೂಲಕ ನಾವು ಪ್ರತಿಭಾ ಪಲಾಯನವನ್ನು ತಡೆಯಲು ಯತ್ನಿಸಬೇಕು. ಈಗಾಗಲೇ ವಿವಿಧ ರಾಜಕೀಯ ಪಕ್ಷಗಳ ‘ಫ್ರೀಬೀ’ಗಳಿಂದಾಗಿ ಜನರು ಕೆಲಸ ಮಾಡುವ ಮನಸ್ಥಿತಿಯಿಂದಲೇ ದೂರವಾಗು ತ್ತಿದ್ದಾರೆ.

ಇಂಥ ಯೋಜನೆಗಳಿಂದ ಜನರು ದುಡಿಮೆಯಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತಿದ್ದು ಪರಾವಲಂಬಿಗಳ ವರ್ಗವು ಸೃಷ್ಟಿಯಾಗುತ್ತಿದೆ. ಇದು ಸಾಲದೆಂಬಂತೆ, ಪ್ರತಿಭಾ ಪಲಾಯನ ವೂ ಅದರೊಂದಿಗೆ ಸೇರಿಕೊಂಡು ನಮ್ಮ ದೇಶದ ಅಭಿವೃದ್ಧಿಗೆ ದೊಡ್ಡ ಹೊಡೆತ ಬೀಳುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಸರಕಾರ, ಸಾರ್ವಜನಿಕರು ಮತ್ತು ಕಾರ್ಪೊರೇಟ್ ವಲಯದ ಘಟಾನುಘಟಿಗಳು ಪರಸ್ಪರ ಕೈಜೋಡಿಸಬೇಕಿದೆ. ಪ್ರತಿಭಾ ಪಲಾಯನವನ್ನು ತಗ್ಗಿಸಿದರೆ ನಮ್ಮ ದೇಶದ ಪ್ರಗತಿ ಕಟ್ಟಿಟ್ಟಬುತ್ತಿ ಎಂಬುದನ್ನು ಮರೆಯ ದಿರೋಣ.

(ಲೇಖಕರು ಸಾಫ್ಟ್‌ ವೇರ್ ಕಂಪನಿಯೊಂದರ ಸಹಾಯಕ ಉಪಾಧ್ಯಕ್ಷರು)