ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Leena Joshi Column: ಮನೆ ಹೊಳೆಯಲಿ, ರಸ್ತೆ ಕೊಳೆಯಲಿ !

ಮೊದಲು ರಸ್ತೆ ನಿರ್ಮಾಣವಾಗುತ್ತದೆ, ನಂತರ ನೀರಿನ ಪೈಪ್‌ಗಾಗಿ ಅಗೆಯುತ್ತಾರೆ, ಬಳಿಕ ಕೇಬಲ್‌ಗಾಗಿ, ಗ್ಯಾಸ್ ಸಂಪರ್ಕಕ್ಕಾಗಿ, ಒಳಚರಂಡಿಗಾಗಿ, ಮೆಟ್ರೋಗಾಗಿ, ಫ್ಲೈಓವರ್‌ಗಾಗಿ, ಕೊನೆಗೆ ರಸ್ತೆ ಅಗಲೀಕರಣ ಕ್ಕಾಗಿ. ರಸ್ತೆಗೆ ಮೊದಲು ನಿರ್ಮಾಣದ ವೆಚ್ಚ, ನಂತರ ಅಗೆಯುವ ವೆಚ್ಚ, ಮತ್ತೆ ಮುಚ್ಚುವ ವೆಚ್ಚ, ಆಮೇಲೆ ದುರಸ್ತಿ ವೆಚ್ಚ. ಹೀಗೆ ಜನರ ತೆರಿಗೆ ಹಣ ಖರ್ಚಾಗುತ್ತಲೇ ಇರುತ್ತದೆ.

Leena Joshi Column: ಮನೆ ಹೊಳೆಯಲಿ, ರಸ್ತೆ ಕೊಳೆಯಲಿ !

-

Profile
Ashok Nayak Nov 14, 2026 11:26 PM

ಅಮೃತಕಾಲ

ಲೀನಾ ಜೋಶಿ

ಕಷ್ಟಪಟ್ಟು ದುಡಿದ ಹಣವನ್ನು ವರ್ಷಗಳ ಕಾಲ ಉಳಿಸಿ, ಹತ್ತಾರು ಕಡೆ ಸುತ್ತಾಡಿ, ನೂರಾರು ಮನೆಗಳ ವಿನ್ಯಾಸಗಳನ್ನು ನೋಡಿ, ಸ್ನೇಹಿತರು ಮತ್ತು ಸಂಬಂಧಿಕರ ಮನೆಗಳನ್ನು ಪರಿಶೀಲಿಸಿ, ಕೊನೆಗೂ ನಮ್ಮ ಕನಸಿನ ಸುಂದರ ಮನೆಯನ್ನು ನಿರ್ಮಿಸುವಾಗ ಮನೆ ನಿರ್ಮಾಣಕ್ಕೆ ಬೇಕಾದ ಪ್ರತಿಯೊಂದು ವಸ್ತುವನ್ನೂ ಎಚ್ಚರಿಕೆಯಿಂದ ಆಯ್ಕೆ ಮಾಡುತ್ತೇವೆ.

ಗೋಡೆಗಳ ವಿನ್ಯಾಸ, ನೆಲಹಾಸು, ವಿದ್ಯುತ್ ಸಂಪರ್ಕ, ನೀರಿನ ಪೈಪ್‌ಗಳು, ಒಳಚರಂಡಿ ವ್ಯವಸ್ಥೆ, ಬಾಗಿಲು, ಕಿಟಕಿ ಹೀಗೆ ಪ್ರತಿಯೊಂದು ಕೆಲಸವನ್ನೂ ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟು ಕೊಂಡು ಯೋಜಿಸುತ್ತೇವೆ. ಅದೇ ಮನೆ ನಿರ್ಮಾಣವಾದ ಕೆಲವೇ ತಿಂಗಳುಗಳಲ್ಲಿ ಮತ್ತೆ ಅದನ್ನು ಕೆಡವಿ, ಗೋಡೆಗಳನ್ನು ಒಡೆದು, ನೆಲಹಾಸು ಬದಲಿಸಿ, ಪೈಪ್‌ಗಳನ್ನು ಹಾಕಿ, ಮತ್ತೆ ದುರಸ್ತಿ ಮಾಡಬೇಕಾದ ಪರಿಸ್ಥಿತಿ ಬಂದರೆ ನಮ್ಮ ಮನಸ್ಥಿತಿ ಹೇಗಿರಬಹುದು? ಎರಡು ಅಥವಾ ಮೂರು ವರ್ಷಕ್ಕೊಮ್ಮೆ ಇದೇ ಕೆಲಸ ಮುಂದುವರಿದರೆ ನಮ್ಮ ಉಳಿತಾಯದ ಹಣವೆಲ್ಲ ಖಾಲಿಯಾಗುವು ದಿಲ್ಲವೇ? ಮಕ್ಕಳ ಶಿಕ್ಷಣ, ಕುಟುಂಬದ ಖರ್ಚು, ವೃದ್ಧ ಪೋಷಕರ ಆರೈಕೆ ಮತ್ತು ನಮ್ಮ ಜೀವನದ ನೆಮ್ಮದಿ ಎಲ್ಲವೂ ಅಸ್ತವ್ಯಸ್ತವಾಗುವುದಿಲ್ಲವೇ? ಮನೆ ಕಟ್ಟುವಾಗ ಪ್ರತಿಯೊಂದು ಕೆಲಸವನ್ನೂ ಸರಿಯಾಗಿ ಯೋಜಿಸುತ್ತೇವೆ.

ಮುಂದೆ ಯಾವ ಅಗತ್ಯಗಳು ಬರಬಹುದು ಎಂಬುದನ್ನು ಮೊದಲೇ ಯೋಚಿಸಿ ನಿರ್ಮಿಸುತ್ತೇವೆ. ಒಂದು ಕೆಲಸಕ್ಕಾಗಿ ಮತ್ತೆ ಮತ್ತೆ ಹಣ ಖರ್ಚು ಮಾಡಬೇಕಾದ ಪರಿಸ್ಥಿತಿ ಬರಬಾರದು ಎಂಬ ಕಾಳಜಿ ನಮಗಿರುತ್ತದೆ. ಇದೇ ಕಾಳಜಿ ಸಾರ್ವಜನಿಕ ರಸ್ತೆಗಳನ್ನು ನಿರ್ಮಿಸುವಾಗ ಏಕೆ ಕಾಣಿಸುವುದಿಲ್ಲ? ಇಪ್ಪತ್ತೈದಕ್ಕಿಂತ ಹೆಚ್ಚು ವರ್ಷಗಳಿಂದ ಬೆಂಗಳೂರನ್ನು ನೋಡುತ್ತಿದ್ದೇನೆ. ಇಲ್ಲಿ ರಸ್ತೆ ನಿರ್ಮಿಸು ವುದು ಒಂದು ಇಲಾಖೆ, ಅಗೆಯುವುದು ಮತ್ತೊಂದು ಇಲಾಖೆ, ಮತ್ತೆ ಮುಚ್ಚುವುದು ಮೂರನೇ ಇಲಾಖೆ, ಮುಚ್ಚಿದ ರಸ್ತೆಯನ್ನು ಪುನಃ ಅಗೆಯುವುದು ನಾಲ್ಕನೇ ಇಲಾಖೆ. ಇಷ್ಟೆಲ್ಲ ಇಲಾಖೆ ಗಳಿದ್ದರೂ ರಸ್ತೆಗೆ ಮಾತ್ರ ನೆಮ್ಮದಿಯಿಲ್ಲ ಹಾಗೂ ಎಲ್ಲ ಇಲಾಖೆಗಳಿಗೂ ಕೆಲಸದ ಕೊರತೆಯಿಲ್ಲ.

ಇದನ್ನೂ ಓದಿ: Leena Joshi Column: ಕಾಂಗ್ರೆಸ್‌ ಏರಿಸಿದ ಬೆಲೆ ಬಿಜೆಪಿ ಇಳಿಸುವುದಿಲ್ಲ

ಮೊದಲು ರಸ್ತೆ ನಿರ್ಮಾಣವಾಗುತ್ತದೆ, ನಂತರ ನೀರಿನ ಪೈಪ್‌ಗಾಗಿ ಅಗೆಯುತ್ತಾರೆ, ಬಳಿಕ ಕೇಬಲ್‌ಗಾಗಿ, ಗ್ಯಾಸ್ ಸಂಪರ್ಕಕ್ಕಾಗಿ, ಒಳಚರಂಡಿಗಾಗಿ, ಮೆಟ್ರೋಗಾಗಿ, ಫ್ಲೈಓವರ್‌ಗಾಗಿ, ಕೊನೆಗೆ ರಸ್ತೆ ಅಗಲೀಕರಣ ಕ್ಕಾಗಿ. ರಸ್ತೆಗೆ ಮೊದಲು ನಿರ್ಮಾಣದ ವೆಚ್ಚ, ನಂತರ ಅಗೆಯುವ ವೆಚ್ಚ, ಮತ್ತೆ ಮುಚ್ಚುವ ವೆಚ್ಚ, ಆಮೇಲೆ ದುರಸ್ತಿ ವೆಚ್ಚ. ಹೀಗೆ ಜನರ ತೆರಿಗೆ ಹಣ ಖರ್ಚಾಗುತ್ತಲೇ ಇರುತ್ತದೆ.

ರಸ್ತೆ ಕಾಮಗಾರಿಗಳನ್ನು ಕಂಡು ಜನರು ಆಶ್ಚರ್ಯಪಡುವುದಿಲ್ಲ; ಇಂದು ಬೆಂಗಳೂರಿನಲ್ಲಿ ರಸ್ತೆ ನಿರ್ಮಾಣ, ಪುನರ್ನಿರ್ಮಾಣ ಮತ್ತು ಮರುನಿರ್ಮಾಣ ದೈನಂದಿನ ಜೀವನದ ಭಾಗವಾಗಿದೆ. ವಾಹನ ಚಲಾಯಿಸುವಾಗ ಗುಂಡಿಗೆ ಸಿಲುಕಿ ವಾಹನ ಜಾರಿದರೆ ಒಂದೆರಡು ಬೈಗುಳಗಳು ಹೊರಬರುತ್ತವೆ. ಟ್ರಾಫಿಕ್‌ನಲ್ಲಿ ಸಿಲುಕಿದಾಗಲೂ ಅದೇ ಬೈಗುಳಗಳು, ಸರ್ಕಾರಕ್ಕೆ ಒಂದಷ್ಟು ಶಾಪಗಳು. ನಂತರ ಎಲ್ಲವನ್ನೂ ಮರೆತು ನಮ್ಮ ಕೆಲಸಕ್ಕೆ ಹೋಗುತ್ತೇವೆ. ಮರುದಿನ ಅದೇ ರಸ್ತೆ, ಅದೇ ಗುಂಡಿ, ಅದೇ ಟ್ರಾಫಿಕ್, ಅದೇ ಬೈಗುಳ!

ಹೀಗೆ ಸಮಸ್ಯೆಯ ವಿರುದ್ಧ ಧ್ವನಿ ಎತ್ತುವುದಕ್ಕಿಂತ ಅದಕ್ಕೆ ಹೊಂದಿಕೊಂಡು ಬದುಕುವುದನ್ನೇ ನಾವು ಕಲಿತಿದ್ದೇವೆ. ಸಮಸ್ಯೆ ಕೇವಲ ರಸ್ತೆಗಳದ್ದಲ್ಲ; ಇಂತಹ ಪರಿಸ್ಥಿತಿಯನ್ನು ಸಹಜವೆಂದು ಒಪ್ಪಿಕೊಂಡಿರುವ ನಮ್ಮ ಮನೋಭಾವದ್ದು. ಪ್ರತಿದಿನ ಸರ್ಕಾರವನ್ನು ಬೈಯುತ್ತೇವೆ, ಕೆಲವು ದಿನಗಳ ನಂತರ ಎಲ್ಲವನ್ನೂ ಮರೆತುಬಿಡುತ್ತೇವೆ. ರಸ್ತೆ ಮತ್ತೆ ಅಗೆಯಲ್ಪಟ್ಟಾಗಲೂ ಅದೇ ನಿರಾಸೆ, ಅದೇ ಆಕ್ರೋಶ. ಈ ಪುನರಾವರ್ತನೆಗೆ ಶಾಶ್ವತ ಪರಿಹಾರ ಯಾವಾಗ ಎಂಬ ಪ್ರಶ್ನೆ ಮಾತ್ರ ಕೇಳುವುದಿಲ್ಲ.

Leena Joshi 14

ನಿರ್ಮಾಣ, ಪುನರ್ನಿರ್ಮಾಣ ಮತ್ತು ಮರುನಿರ್ಮಾಣದ ಖರ್ಚು ಸಾವಿರಾರು ಕೋಟಿಯ ಪ್ರಮಾಣ ದಲ್ಲಿರುತ್ತದೆ. ಹೊಸ ಕಾಮಗಾರಿಗಳಿಗೆ ಟೆಂಡರ್, ಕಾಮಗಾರಿ ಪೂರ್ಣಗೊಂಡ ಬಳಿಕ ಮತ್ತೊಂದು ಟೆಂಡರ್, ಮತ್ತೆ ದುರಸ್ತಿ, ಮತ್ತೆ ಅಗೆಯುವಿಕೆ, ಮತ್ತೆ ಮರುನಿರ್ಮಾಣ- ಹೀಗೆ ಒಂದು ಕೆಲಸ ಮುಗಿಯುವಷ್ಟರಲ್ಲಿ ಮತ್ತೊಂದು ಕೆಲಸ ಸಿದ್ಧವಾಗುತ್ತದೆ. ಪ್ರತಿಯೊಂದು ಕಾಮಗಾರಿಗೂ ಗುತ್ತಿಗೆ, ಹಣಕಾಸು, ಕಾರ್ಮಿಕರು ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳು ಸಂಬಂಧಿಸಿರುತ್ತವೆ.

ಈ ಚಟುವಟಿಕೆಗಳಿಂದ ಉದ್ಯೋಗಾವಕಾಶಗಳೂ ಸೃಷ್ಟಿಯಾಗುತ್ತವೆ. ಅಗತ್ಯವಿರುವ ಅಭಿವೃದ್ಧಿ ಕಾಮಗಾರಿಗಳಿಂದ ಉದ್ಯೋಗ ಸೃಷ್ಟಿಯಾಗುವುದಕ್ಕೂ, ಯೋಜನೆಯ ಕೊರತೆಯಿಂದ ಒಂದೇ ರಸ್ತೆಯನ್ನು ಪದೇ ಪದೆ ಅಗೆಯುವುದರಿಂದ ಕೆಲಸ ಸೃಷ್ಟಿಯಾಗುವುದಕ್ಕೂ ವ್ಯತ್ಯಾಸವಿದೆ. ಸೂಕ್ತ ಯೋಜನೆ ಇಲ್ಲದಿರುವುದರಿಂದ ಮತ್ತು ಇಲಾಖೆಗಳ ನಡುವೆ ಸಮನ್ವಯದ ಕೊರತೆಯಿಂದ ಒಂದೇ ರಸ್ತೆಗೆ ಮತ್ತೆ ಮತ್ತೆ ಸಾರ್ವಜನಿಕ ಹಣ ಖರ್ಚಾಗುತ್ತಿದ್ದರೆ, ಅದರ ಹೊಣೆಗಾರಿಕೆ (accountability) ಯನ್ನು ನಿಗದಿಪಡಿಸಲೇಬೇಕು.

ಕಾಮಗಾರಿಗಳ ಸಂಖ್ಯೆ, ಖರ್ಚಾದ ಹಣ, ಟೆಂಡರ್ ಗಳ ಸಂಖ್ಯೆಯನ್ನು ಸಾಧನೆಯ ಮಾನದಂಡ ವಾಗಿ ನೋಡುವ ಬದಲು, ನಿರ್ಮಿಸಿದ ರಸ್ತೆ ಎಷ್ಟು ವರ್ಷ ಉತ್ತಮ ಸ್ಥಿತಿಯಲ್ಲಿತ್ತು ಎಂಬುದನ್ನೇ ಮುಖ್ಯ ಮಾನದಂಡವಾಗಿಸಬೇಕು. ಸಾರ್ವಜನಿಕ ಹಣ ಖರ್ಚಾಗುವುದು ಅಭಿವೃದ್ಧಿಗಾಗಿ; ಅದೇ ಕೆಲಸವನ್ನು ಮತ್ತೆ ಮತ್ತೆ ಮಾಡಲಲ್ಲ. ರಸ್ತೆಯನ್ನು ಪದೇ ಪದೆ ಅಗೆಯುವುದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತದೆ, ಸಂಚಾರ ದಟ್ಟಣೆ ಹೆಚ್ಚಾಗುತ್ತದೆ, ಪ್ರಯಾಣದ ಸಮಯ ಹೆಚ್ಚಾಗು ತ್ತದೆ, ಇಂಧನ ವ್ಯರ್ಥವಾಗುತ್ತದೆ, ಧೂಳಿನಿಂದ ಜನರ ಆರೋಗ್ಯಕ್ಕೆ ತೊಂದರೆಯಾಗುತ್ತದೆ, ವ್ಯಾಪಾರಸ್ಥರಿಗೆ ನಷ್ಟವಾಗುತ್ತದೆ, ಆಂಬ್ಯುಲೆನ್ಸ್ ಸಂಚಾರಕ್ಕೂ ಅಡ್ಡಿಯಾಗುತ್ತದೆ. ‌

ನಾವು ನಮ್ಮ ಮನೆಯ ಕೆಲಸಗಳನ್ನು ಮಾಡುವಾಗ ಒಂದು ರೂಪಾಯಿಯನ್ನೂ ವ್ಯರ್ಥ ಮಾಡಬಾರದು ಎಂದು ಯೋಚಿಸುತ್ತೇವೆ. ಒಮ್ಮೆ ಮಾಡಿದ ಕೆಲಸವನ್ನು ಮತ್ತೊಮ್ಮೆ ಮಾಡ ಬೇಕಾದ ಪರಿಸ್ಥಿತಿ ಬರದಂತೆ ನೋಡಿಕೊಳ್ಳುತ್ತೇವೆ. ಸಾರ್ವಜನಿಕ ಕಾಮಗಾರಿಗಳಲ್ಲಿ ಇದೇ ರೀತಿಯ ಜವಾಬ್ದಾರಿಯುತ ಯೋಜನೆ ಏಕೆ ಕಾಣಿಸುತ್ತಿಲ್ಲ? ಸಾರ್ವಜನಿಕ ಹಣ ಯಾರೊಬ್ಬರ ವೈಯಕ್ತಿಕ ಹಣವಲ್ಲ ಎಂಬ ಕಾರಣಕ್ಕೆ ಅದನ್ನು ಹೇಗೆ ಬೇಕಾದರೂ ಖರ್ಚು ಮಾಡಬಹುದೇ? ಜಗತ್ತಿನ ಅನೇಕ ನಗರಗಳು ಮುಂದಿನ ಇಪ್ಪತ್ತು, ಮೂವತ್ತು ವರ್ಷಗಳ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಮೂಲಸೌಕರ್ಯಗಳನ್ನು ಯೋಜಿಸುತ್ತವೆ.

ಬೆಂಗಳೂರಿನಲ್ಲೂ ಇಂತಹ ಸಮನ್ವಯ ಏಕೆ ಸಾಧ್ಯವಾಗುತ್ತಿಲ್ಲ? ಸಂಬಂಧಪಟ್ಟ ಎಲ್ಲಾ ಇಲಾಖೆ ಗಳೂ ಒಂದೇ ಕಡೆ ಕುಳಿತು, ಮುಂದಿನ ವರ್ಷಗಳಲ್ಲಿ ಬೇಕಾಗುವ ಪೈಪ್‌ಲೈನ್‌ಗಳು, ವಿದ್ಯುತ್, ಇಂಟರ್ನೆಟ್ ಕೇಬಲ್‌ಗಳು, ಒಳಚರಂಡಿ ವ್ಯವಸ್ಥೆ ಹಾಗೂ ಇತರ ಸೌಲಭ್ಯಗಳನ್ನು ಮೊದಲೇ ಯೋಜಿಸಿ, ಸಾಧ್ಯ ವಾದಷ್ಟು ಕಾಮಗಾರಿಗಳನ್ನು ಒಟ್ಟಿಗೆ ಪೂರ್ಣಗೊಳಿಸಿದರೆ ಪದೇ ಪದೆ ರಸ್ತೆ ಅಗೆಯುವ ಅಗತ್ಯ ಗಣನೀಯವಾಗಿ ಕಡಿಮೆಯಾಗುವುದಿಲ್ಲವೇ? ಬೆಂಗಳೂರಿನಲ್ಲಿ ವಿಶ್ವದ ದೊಡ್ಡ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಐಟಿ ತಜ್ಞರು, ಎಂಜಿನಿಯರ್ ಗಳು ಮತ್ತು ತಂತ್ರಜ್ಞಾನ ಪರಿಣತರಿದ್ದಾರೆ.

ಕೃತಕ ಬುದ್ಧಿಮತ್ತೆಯ ಯುಗದಲ್ಲಿದ್ದೇವೆ. ಇಂತಹ ಸಂದರ್ಭದಲ್ಲಿ ನಗರದ ರಸ್ತೆ ನಕ್ಷೆ, ಭೂಗತ ಪೈಪ್‌ಲೈನ್ ಗಳು, ವಿದ್ಯುತ್ ಮತ್ತು ಇಂಟರ್ನೆಟ್ ಕೇಬಲ್‌ಗಳು ಹಾಗೂ ಭವಿಷ್ಯದ ಕಾಮಗಾರಿಗಳ ಮಾಹಿತಿಯನ್ನು ಒಂದೇ ಡಿಜಿಟಲ್ ವ್ಯವಸ್ಥೆಯಲ್ಲಿ ಸಂಗ್ರಹಿಸುವುದು ಅಸಾಧ್ಯವೇನಲ್ಲ. ರಸ್ತೆ ಅಗೆಯುವ ಮೊದಲು ಅದರ ಕೆಳಗೆ ಏನಿದೆ ಎಂದು ತಿಳಿದುಕೊಳ್ಳಲು ತಂತ್ರeನ ಬಳಸುವ ವ್ಯವಸ್ಥೆ ರೂಪಿಸುವುದು ಇಂದಿನ ಕಾಲದಲ್ಲಿ ದೊಡ್ಡ ಕೆಲಸವಲ್ಲ.

ಇಲಾಖೆಗಳ ನಡುವಿನ ಸಮನ್ವಯ, ದೀರ್ಘಕಾಲೀನ ಯೋಜನೆ ಮತ್ತು ಹೊಣೆಗಾರಿಕೆಯ ಕೊರತೆಯೆ ಈ ದುಂದುವೆಚ್ಚಕ್ಕೆ ಮೂಲ ಕಾರಣ. ರಸ್ತೆಗಳ ಸಮಸ್ಯೆ ಕೇವಲ ಗುಂಡಿಗಳಿಗೆ ಮತ್ತು ಕಾಮಗಾರಿಗಳಿಗೆ ಸೀಮಿತವಾಗಿಲ್ಲ. ಪಾದಚಾರಿ ಮಾರ್ಗಗಳ ಸ್ಥಿತಿಯೂ ಅಷ್ಟೇ ಶೋಚನೀಯ ವಾಗಿದೆ. ಪಾದಚಾರಿಗಳು ಸುರಕ್ಷಿತವಾಗಿ ನಡೆಯಲು ನಿರ್ಮಿಸಿದ ಮಾರ್ಗಗಳ ಮೇಲೆ ವಾಹನ ಗಳನ್ನು ನಿಲ್ಲಿಸಲಾಗುತ್ತದೆ, ಅಂಗಡಿಗಳನ್ನು ಇಡಲಾಗುತ್ತದೆ, ತರಕಾರಿ- ಹಣ್ಣುಗಳನ್ನು ಮಾರಲಾಗು ತ್ತದೆ, ಸಾಮಾನುಗಳನ್ನು ರಾಶಿ ಹಾಕಲಾಗುತ್ತದೆ.

ಕೊನೆಗೆ ಪಾದಚಾರಿಗಳು ವಾಹನಗಳ ನಡುವೆ ರಸ್ತೆಗೆ ಇಳಿದು ನಡೆಯಬೇಕಾಗುತ್ತದೆ. ಅಪಘಾತ ಸಂಭವಿಸಿ ದಾಗ ಮಾತ್ರ ರಸ್ತೆ ಸುರಕ್ಷತೆಯ ಬಗ್ಗೆ ಚರ್ಚೆ ನಡೆಯುತ್ತದೆ. ನಾಗರಿಕರಿಗೆ ರಸ್ತೆಯ ಬದಿ, ವೃತ್ತಗಳ ಬಳಿ ಖರೀದಿಸಲು ಬಲು ಇಷ್ಟ. ಕಡಿಮೆ ಬೆಲೆ ಮತ್ತು ಅನುಕೂಲಕ್ಕಾಗಿ ಜನರು ವಾಹನ ಗಳನ್ನು ರಸ್ತೆಯ ನಿಲ್ಲಿಸಿ ಖರೀದಿಸುವುದರಿಂದ ಸಂಚಾರ ದಟ್ಟಣೆ ಹೆಚ್ಚುತ್ತದೆ. ಜನರ ಬೇಡಿಕೆಯೂ ಇಂತಹ ವ್ಯಾಪಾರ ಮುಂದುವರಿಯಲು ಒಂದು ಕಾರಣವಾಗುತ್ತದೆ.

ತೆರವುಗೊಳಿಸಿದ ಅಂಗಡಿಗಳು ಕೆಲವೇ ದಿನಗಳಲ್ಲಿ ಮತ್ತೆ ಪಾದಚಾರಿ ಮಾರ್ಗಗಳನ್ನು ಆಕ್ರಮಿಸಿ ಕೊಳ್ಳುತ್ತವೆ. ಹೀಗೆ ಅಧಿಕಾರಿಗಳ ತೆರವು ಕಾರ್ಯಾಚರಣೆ ತಾತ್ಕಾಲಿಕ ಪರಿಹಾರವಾಗಿ ಉಳಿಯುತ್ತದೆ. ಸಮಸ್ಯೆ ಪರಿಹಾರವಾಗಬೇಕಾದರೆ ಸರ್ಕಾರ, ವ್ಯಾಪಾರಿಗಳು ಮತ್ತು ಸಾರ್ವಜನಿಕರು ಮೂವರೂ ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು.

ಸಣ್ಣ ವ್ಯಾಪಾರಿಗಳ ಜೀವನೋಪಾಯವನ್ನು ಕಾಪಾಡುವ ವ್ಯವಸ್ಥೆಯೂ ಇರಬೇಕು; ಪಾದಚಾರಿ ಗಳು ತಮ್ಮ ಹಕ್ಕಿನ ಮಾರ್ಗದಲ್ಲಿ ಸುರಕ್ಷಿತವಾಗಿ ನಡೆಯುವಂತೆಯೂ ಇರಬೇಕು. ಇನ್ನು ವಸತಿ ಪ್ರದೇಶಗಳಲ್ಲಿ ಮನೆಯ ಮುಂದಿರುವ ಸಾರ್ವಜನಿಕ ಫುಟ್‌ಪಾತ್‌ಗಳನ್ನು ಗಿಡಮರಗಳ ಬೆಳೆಸುವಿಕೆ ಹಾಗೂ ಬೇಲಿ ಹಾಕುವ ಮೂಲಕ ಒತ್ತುವರಿ ಮಾಡಲಾಗಿದೆ.

ಕೆಲವು ಮನೆಗಳ ಮುಂದೆ ಫುಟ್‌ಪಾತ್‌ನಲ್ಲಿ ಗಿಡಗಳನ್ನು ನೆಟ್ಟು, ಫೆನ್ಸಿಂಗ್ ಹಾಕಿ ಖಾಸಗಿ ಆಸ್ತಿಯಾಗಿ ಮಾರ್ಪಡಿಸಲಾಗಿದೆ. ಮಹಾನಗರ ಪಾಲಿಕೆಯ ಅಧಿಕಾರಿಗಳು ಇಂತಹ ಒತ್ತುವರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಮೀನ ಮೇಷ ಎಣಿಸುತ್ತಾರೆ. ಬೆಂಗಳೂರಿನ ಪ್ರಗತಿಯನ್ನು ಎಷ್ಟು ರಸ್ತೆಗಳು ನಿರ್ಮಾಣವಾಗಿವೆ ಎಂಬುದರಿಂದ ಮಾತ್ರ ಅಳೆಯಲಾಗದು; ನಿರ್ಮಿಸಿದ ರಸ್ತೆಗಳನ್ನು ಎಷ್ಟು ವರ್ಷ ಸಮರ್ಪಕವಾಗಿ ಉಳಿಸಿಕೊಳ್ಳಲಾಗಿದೆ ಎಂಬುದರಿಂದಲೂ ಅಳೆಯಬೇಕು.

ನಮ್ಮ ಮನೆಯ ಗೋಡೆಗಳನ್ನು ಪದೇಪದೆ ಒಡೆಯಲು ನಾವು ಒಪ್ಪುವುದಿಲ್ಲ; ಹಾಗೆಯೇ ಜನರ ತೆರಿಗೆ ಹಣದಿಂದ ನಿರ್ಮಿಸಿದ ರಸ್ತೆಗಳನ್ನೂ ಪದೇಪದೆ ಅಗೆಯುವುದನ್ನು ಸಹಜವೆಂದು ಒಪ್ಪಿಕೊಳ್ಳ ಲಾಗದು. ಕಳೆದ ಒಂದು ದಶಕದಲ್ಲಿ ಹಲವು ಬಾರಿ ಲಂಡನ್, ಬರ್ಲಿನ್ ಪ್ರಮುಖ ಬೀದಿಗಳಲ್ಲಿ ಸುತ್ತಾಡಿದ್ದೇನೆ. ನಗರದ ಮೂಲಸೌಕರ್ಯದಲ್ಲಿ ಅನಗತ್ಯ ಬದಲಾವಣೆಗಳನ್ನು, ಪದೇಪದೆ ರಸ್ತೆಗಳನ್ನು ಅಗೆದು ಮತ್ತೆ ನಿರ್ಮಿಸುವ ದೃಶ್ಯಗಳನ್ನು ಗಮನಿಸಿಲ್ಲ.

ಅಭಿವೃದ್ಧಿ ಹೊಂದಿದ ದೇಶಗಳ ಉದಾಹರಣೆಗಳನ್ನು ಬದಿಗಿಟ್ಟು, ದಶಕಗಳಿಂದ ಯುದ್ಧ, ಆರ್ಥಿಕ ಸಂಕಷ್ಟ ಮತ್ತು ರಾಜಕೀಯ ಅಸ್ಥಿರತೆಯನ್ನು ಎದುರಿಸುತ್ತಿರುವ ಲೆಬನಾನ್ ರಾಜಧಾನಿ ಬೈರುತ್‌ ನಲ್ಲಿಯೂ ಫ್ರೆಂಚ್ ಆಡಳಿತದ ಕಾಲದಿಂದ ಉಳಿದುಬಂದಿರುವ ಅನೇಕ ಪ್ರಮುಖ ರಸ್ತೆಗಳು ತಮ್ಮ ಮೂಲ ಸೌಂದರ್ಯವನ್ನು ಇಂದಿಗೂ ಕಾಪಾಡಿಕೊಂಡಿವೆ. ಅವುಗಳ ನಿರ್ವಹಣೆ ಮತ್ತು ಸ್ವಚ್ಛತೆಯೂ ಗಮನ ಸೆಳೆಯುತ್ತದೆ.

ಇದರಿಂದ ಒಂದು ವಿಷಯ ಸ್ಪಷ್ಟವಾಗುತ್ತದೆ: ನಗರದ ರಸ್ತೆಗಳ ಉತ್ತಮ ನಿರ್ವಹಣೆಗೆ ಶ್ರೀಮಂತಿಕೆ ಅಥವಾ ಬಡತನ ಮಾನದಂಡವಲ್ಲ. ಸಾರ್ವಜನಿಕ ಆಸ್ತಿಯ ಬಗ್ಗೆ ಜನರು ಮತ್ತು ಆಡಳಿತ ಹೊಂದಿರುವ ಮನೋಭಾವ, ದೂರದೃಷ್ಟಿ, ಶಿಸ್ತು ಮತ್ತು ಜವಾಬ್ದಾರಿಯೇ ಮುಖ್ಯ.