Leena Joshi Column: ಕಾಂಗ್ರೆಸ್ ಏರಿಸಿದ ಬೆಲೆ ಬಿಜೆಪಿ ಇಳಿಸುವುದಿಲ್ಲ
ಚುನಾವಣೆಗಳು ಜನರ ಅಭಿಪ್ರಾಯವನ್ನು ಪ್ರತಿಬಿಂಬಿಸುತ್ತವಷ್ಟೇ. ಸರ್ಕಾರದ ನೀತಿಗಳನ್ನು ನಿರ್ಧರಿಸುವ ಪ್ರಕ್ರಿಯೆಯಲ್ಲಿ ಅನೇಕ ಸಂಸ್ಥೆಗಳು, ಉದ್ಯಮಗಳು, ಪಟ್ಟಭದ್ರ ಹಣಕಾಸು ಹಿತಾಸಕ್ತಿಗಳು ಮತ್ತು ಭದ್ರತಾ ವ್ಯವಸ್ಥೆಗಳು ಪ್ರಭಾವ ಬೀರುತ್ತವೆ. ಅಮೆರಿಕದಲ್ಲಿ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ರಾಜಕೀಯ ಪ್ರಚಾರಕ್ಕೆ ಹಣ ನೀಡುತ್ತವೆ.
-
ಅಮೃತಕಾಲ
ಲೀನಾ ಜೋಶಿ
ಅಮೆರಿಕದ ರಾಜಕೀಯ ಬೆಳವಣಿಗೆಗಳು ಜಗತ್ತಿನಾದ್ಯಂತ ಚರ್ಚೆಗೆ ಗ್ರಾಸವಾಗುವುದು ಹೊಸ ವಿಷಯ ವೇನಲ್ಲ. ಅಮೆರಿಕದಲ್ಲಿ ಚುನಾವಣೆ ನಡೆದರೆ ಅದು ಕೇವಲ ರಾಜಕೀಯ ಘಟನೆಯಾಗಿ ಉಳಿಯದೆ ಜಾಗತಿಕ ಆರ್ಥಿಕತೆ, ಯುದ್ಧ, ವ್ಯಾಪಾರ, ಭದ್ರತೆ, ಮೇಲೂ ಅದರ ಪರಿಣಾಮ ಬೀರುತ್ತದೆ. ಇದೇ ಕಾರಣಕ್ಕೆ ಅಮೆರಿಕದ ಮಧ್ಯಂತರ ಚುನಾವಣೆಯ ಫಲಿತಾಂಶದ ಬಗ್ಗೆ ಜಗತ್ತಿನ ವಿವಿಧ ಭಾಗಗಳಲ್ಲಿ ಕಳೆದೆರಡು ದಿನಗಳಿಂದ ವಿಪರೀತ ಚರ್ಚೆಗಳು ನಡೆಯುತ್ತಿವೆ.
2026ರ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟ್ ಗಳು ಕಾಂಗ್ರೆಸ್ನ ಎರಡೂ ಸದನಗಳಲ್ಲಿ ಬಹುಮತ ಸಾಧಿಸಿರುವುದು ಟ್ರಂಪ್ ಆಡಳಿತಕ್ಕೆ ರಾಜಕೀಯ ಹಿನ್ನಡೆಯಾಗಿದೆ. ಇದು ಅಮೆರಿಕದ ಮತದಾರರು ಆಡಳಿತದ ವಿರುದ್ಧ ವ್ಯಕ್ತಪಡಿಸಿದ ಅಸಮಾಧಾನದ ಸಂಕೇತ. ಈ ಫಲಿತಾಂಶದಿಂದ ಟ್ರಂಪ್ ಅಧಿಕಾರ ಕಳೆದುಕೊಳ್ಳುವುದಿಲ್ಲ ಹಾಗೂ ಅಮೆರಿಕದ ಸಂಪೂರ್ಣ ರಾಜಕೀಯ ವ್ಯವಸ್ಥೆ ಬದಲಾಗುವುದೂ ಇಲ್ಲ.
ಮಧ್ಯಂತರ ಚುನಾವಣೆಗಳು ಅಧ್ಯಕ್ಷರನ್ನು ಆಯ್ಕೆ ಮಾಡುವ ಚುನಾವಣೆಗಳಲ್ಲ; ಅಧ್ಯಕ್ಷರ ಅಧಿಕಾರ ಮುಂದುವರಿದರೂ, ಕಾಂಗ್ರೆಸ್ನ ಬಹುಮತ ಬದಲಾಗುವುದರಿಂದ ಆಡಳಿತದ ಕಾರ್ಯವೈಖರಿಯ ಮೇಲೆ ಪರಿಣಾಮ ಬೀರಬಹುದು. ಟ್ರಂಪ್ ಒಬ್ಬರೇ ಅಲ್ಲ, ಜಾರ್ಜ್ ಡಬ್ಲ್ಯೂ. ಬುಷ್, ಬಿಲ್ ಕ್ಲಿಂಟನ್, ಐಸೆನ್ಹೋವರ್ ಕೂಡ ಮಧ್ಯಂತರ ಚುನಾವಣೆಯಲ್ಲಿ ಎರಡೂ ಸದನಗಳ ಬಹುಮತ ಕಳೆದುಕೊಂದಿದ್ದರು. ಅಮೆರಿಕದಲ್ಲಿ ಡೆಮಾಕ್ರಟ್ಗಳು ಅಧಿಕಾರದ ಪ್ರಭಾವ ಹೆಚ್ಚಿಸಿಕೊಂಡರೆ ಜಗತ್ತಿನ ಯುದ್ಧಗಳು ನಿಲ್ಲುವು ದಿಲ್ಲ, ಮಧ್ಯಪ್ರಾಚ್ಯದ ರಾಜಕೀಯ ಬದಲಾಗುವು ದಿಲ್ಲ, ಇಸ್ರೇಲ್ ಜೊತೆಗಿನ ಅಮೆರಿಕದ ಸಂಬಂಧದಲ್ಲಿ ಬಿರುಕು ಬರುವುದಿಲ್ಲ.
ಇದನ್ನೂ ಓದಿ: Leena Joshi Column: ಹಿಂದೂ ಧರ್ಮಕ್ಕೆ ಮರಳುವ ದಾರಿ ತೆರೆದಿದೆಯೇ?
ಚುನಾವಣೆಗಳು ಜನರ ಅಭಿಪ್ರಾಯವನ್ನು ಪ್ರತಿಬಿಂಬಿಸುತ್ತವಷ್ಟೇ. ಸರ್ಕಾರದ ನೀತಿಗಳನ್ನು ನಿರ್ಧರಿಸುವ ಪ್ರಕ್ರಿಯೆಯಲ್ಲಿ ಅನೇಕ ಸಂಸ್ಥೆಗಳು, ಉದ್ಯಮಗಳು, ಪಟ್ಟಭದ್ರ ಹಣಕಾಸು ಹಿತಾ ಸಕ್ತಿಗಳು ಮತ್ತು ಭದ್ರತಾ ವ್ಯವಸ್ಥೆಗಳು ಪ್ರಭಾವ ಬೀರುತ್ತವೆ. ಅಮೆರಿಕದಲ್ಲಿ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ರಾಜಕೀಯ ಪ್ರಚಾರಕ್ಕೆ ಹಣ ನೀಡುತ್ತವೆ. ಶಸ್ತ್ರಾಸ್ತ್ರ ಉತ್ಪಾದನಾ ಕಂಪನಿಗಳು, ತೈಲ ಕಂಪನಿಗಳು ಮತ್ತು ಹಣಕಾಸು ಸಂಸ್ಥೆಗಳು ಸರ್ಕಾರದ ನೀತಿಗಳ ಮೇಲೆ ಪ್ರಭಾವ ಬೀರುತ್ತವೆ.
ಅಮೆರಿಕದಲ್ಲಿ, ಅಧ್ಯಕ್ಷ ದೇಶದ ಮುಖ್ಯಸ್ಥ; ಆದರೆ ಅಧ್ಯಕ್ಷರಿಗಿಂತ ದೊಡ್ಡದಾದ ವ್ಯವಸ್ಥೆಯೂ ಇದೆ. ಆ ವ್ಯವಸ್ಥೆಯಲ್ಲಿ ಹಣ, ಉದ್ಯಮ, ಭದ್ರತೆ ಮತ್ತು ರಾಜಕೀಯ ಹಿತಾಸಕ್ತಿಗಳು ಪರಸ್ಪರ ಜೋಡಿಸಿ ಕೊಂಡಿವೆ. ಡೆಮೋಕ್ರೆಟಿಕ್ ಪಕ್ಷದ ಬರಾಕ್ ಒಬಾಮಾ ಅಮೆರಿಕದ ಅಧ್ಯಕ್ಷರಾದಾಗ ಜಗತ್ತಿನಾದ್ಯಂತ ದೊಡ್ಡ ನಿರೀಕ್ಷೆ ಮೂಡಿತ್ತು. ಅವರ ಚುನಾವಣಾ ಘೋಷಣೆಗಳು ಬದಲಾವಣೆ, ಸಂವಾದ ಮತ್ತು ಹೊಸ ರಾಜಕೀಯ ಸಂಸ್ಕೃತಿಯ ಭರವಸೆಯನ್ನು ನೀಡಿದ್ದವು.
ಅನೇಕರು ಅವರನ್ನು ಅಮೆರಿಕದ ಯುದ್ಧನೀತಿಗೆ ಹೊಸ ದಿಕ್ಕು ನೀಡುವ ನಾಯಕನಾಗಿ ನೋಡಿದರು. ಅವರ ಆಡಳಿತದ ಹತ್ತು ವರ್ಷಗಳ ಅವಧಿಯಲ್ಲಿ ಅಮೆರಿಕದ ವಿದೇಶಾಂಗ ನೀತಿ ಬದಲಾಗಲಿಲ್ಲ. ಅಫ್ಘಾನಿಸ್ತಾನದಲ್ಲಿನ ಯುದ್ಧ, ಲಿಬಿಯಾದಲ್ಲಿನ ಹಸ್ತಕ್ಷೇಪ ಮತ್ತು ಮಧ್ಯಪ್ರಾಚ್ಯದ ಸಂಘರ್ಷಗಳು ಅವರ ಆಡಳಿತದ ಅವಧಿಯಲ್ಲಿಯೂ ಮುಂದುವರಿದವು. ಇದು ಒಬಾಮಾ ಅವರ ವೈಯಕ್ತಿಕ ವೈಫಲ್ಯವಷ್ಟೇ ಅಲ್ಲ, ಅಮೆರಿಕದ ವಿದೇಶಾಂಗ ನೀತಿ ನಿರ್ಧಾರಗಳಲ್ಲಿ ಅಧ್ಯಕ್ಷರ ಜೊತೆಗೆ ಪೆಂಟಗನ್, ಗುಪ್ತಚರ ಸಂಸ್ಥೆಗಳು, ಕಾಂಗ್ರೆಸ್, ರಕ್ಷಣಾ ಉದ್ಯಮ ಮತ್ತು ಜಾಗತಿಕ ಕಾರ್ಯತಂತ್ರದ ಹಿತಾಸಕ್ತಿಗಳೂ ಪಾತ್ರ ವಹಿಸುತ್ತವೆ ಎಂಬುದು ಜಗಜ್ಜಾಹೀರಾಯಿತು.
ಒಬಾಮಾಗೆ ನೊಬೆಲ್ ಶಾಂತಿ ಪ್ರಶಸ್ತಿ ಕೂಡ ದೊರೆಯಿತು! ಈ ಬಾರಿ ಮೊದಲ ಬಾರಿಗೆ ಅಮೆರಿಕದ ಸೆನೆಟ್ಗೆ ಮುಸ್ಲಿಂ ನಾಯಕ ಪ್ರವೇಶಿಸಲಿದ್ದಾರೆ, ಇದರಿಂದ ಮಧ್ಯಪ್ರಾಚ್ಯದ ರಾಜಕೀಯವೇ ಬದಲಾಗುತ್ತದೆ, ಮುಸ್ಲಿಮರ ಪರವಾಗಿ ಅಮೆರಿಕದ ನೀತಿಗಳು ರೂಪುಗೊಳ್ಳುತ್ತವೆ ಹಾಗೂ ಡೆಮಾ ಕ್ರಟಿಕ್ ಪಕ್ಷವು ಮುಸ್ಲಿಮರ ಹಿತಾಸಕ್ತಿಗೆ ಹೆಚ್ಚು ಆದ್ಯತೆ ನೀಡುತ್ತದೆ ಎಂದು ಹೇಳುವವರು ಒಂದು ವಿಷಯವನ್ನು ನೆನಪಿಟ್ಟುಕೊಳ್ಳ ಬೇಕು. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾರ ತಂದೆ ಕೀನ್ಯಾದ ಮುಸ್ಲಿಂ ಕುಟುಂಬಕ್ಕೆ ಸೇರಿದವರಾಗಿದ್ದರು. ಅವರ ಅಧ್ಯಕ್ಷತೆಯ ಅವಧಿಯಲ್ಲಿಯೇ ಲಿಬಿಯಾದ ನಾಯಕ ಮುಅಮ್ಮರ್ ಗಡಾಫಿ ಹತ್ಯೆಗೀಡಾದರು. ಅದೇ ರೀತಿ, ಅಲ್-ಖೈದಾ ನಾಯಕ ಒಸಾಮಾ ಬಿನ್ ಲಾಡೆನ್ನನ್ನು ಪಾಕಿಸ್ತಾನದಲ್ಲಿ ಒಬಾಮಾ ಆಡಳಿತಾವಧಿಯಲ್ಲಿಯೇ ಕೊಲ್ಲಲಾ ಯಿತು.
ಒಬಾಮಾರ ರಾಜಕೀಯ ಹಿನ್ನೆಲೆಯನ್ನು ಚಿಕಾಗೋ ನಗರದಿಂದ ಪ್ರತ್ಯೇಕಿಸಿ ನೋಡಲು ಸಾಧ್ಯ ವಿಲ್ಲ. ಅವರು ಇಲಿನಾಯ್ಸ್ ರಾಜ್ಯವನ್ನು ಪ್ರತಿನಿಧಿಸಿದ್ದರು ಮತ್ತು ಚಿಕಾಗೋ ಅವರ ರಾಜಕೀಯ ಜೀವನದ ಪ್ರಮುಖ ಕೇಂದ್ರವಾಗಿತ್ತು. ಚಿಕಾಗೋ ನಗರ, ಅಮೆರಿಕದ ಗನ್ ಹಿಂಸಾಚಾರದ ವಾಸ್ತವತೆಯನ್ನು ಪರಿಚಯಿಸುತ್ತದೆ. ಅಲ್ಲಿನ ಹಲವು ಪ್ರದೇಶಗಳಲ್ಲಿ ಗುಂಡಿನ ದಾಳಿ, ಕೊಲೆ ಮತ್ತು ಹಿಂಸಾತ್ಮಕ ಅಪರಾಧಗಳು ದೀರ್ಘಕಾಲದಿಂದ ಗಂಭೀರ ಸಮಸ್ಯೆಯಾಗಿವೆ.
ನಗರದ ಕೆಲವು ಪ್ರದೇಶಗಳಲ್ಲಿ ರಾತ್ರಿ ಮಾತ್ರವಲ್ಲ, ಬೆಳಿಗ್ಗೆ ಕೂಡ ಸುರಕ್ಷತೆಯ ಬಗ್ಗೆ ಇಂದಿಗೂ ಆತಂಕ ವಿದೆ. ಅಮೆರಿಕದಲ್ಲಿ ಗನ್ ಹೊಂದುವ ಹಕ್ಕಿನ ಬಗ್ಗೆ ರಾಜಕೀಯ ಮತ್ತು ಕಾನೂನು ಚರ್ಚೆಗಳು ದಶಕ ಗಳಿಂದ ನಡೆಯುತ್ತಿವೆ. ಡೆಮಾಕ್ರಟ್ ಆಡಳಿತ ಬಂದ ಮಾತ್ರಕ್ಕೆ ಗನ್ ಲೈಸನ್ಸ್ ನೀಡುವುದು ನಿಲ್ಲುವುದಿಲ್ಲ. ಯುದ್ಧ ವಿಮಾನಗಳು, ಕ್ಷಿಪಣಿಗಳು, ರಕ್ಷಣಾ ವ್ಯವಸ್ಥೆಗಳು, ನೌಕಾ ತಂತ್ರಜ್ಞಾನ ಮತ್ತು ಆಧುನಿಕ ಸೈನಿಕ ಉಪಕರಣಗಳ ಉತ್ಪಾದನೆಯಲ್ಲಿ ಅಮೆರಿಕದ ಕಂಪನಿಗಳು ದೊಡ್ಡ ಪಾತ್ರವಹಿಸುತ್ತವೆ.
ಯುದ್ಧಗಳು ನಡೆಯುವಾಗ ಶಸ್ತ್ರಾಸ್ತ್ರಗಳ ಬೇಡಿಕೆ ಹೆಚ್ಚಾಗುತ್ತದೆ, ಯುದ್ಧಗ್ರಸ್ತ ದೇಶಗಳು ತಮ್ಮ ರಕ್ಷಣಾ ವೆಚ್ಚವನ್ನು ಹೆಚ್ಚಿಸುತ್ತವೆ. ಹೊಸ ಒಪ್ಪಂದಗಳು, ಉತ್ಪಾದನೆ ಮತ್ತು ಪೂರೈಕೆ ವ್ಯವಸ್ಥೆಗಳು ವಿಸ್ತರಿಸುತ್ತವೆ. ಇದರಿಂದ ರಕ್ಷಣಾ ಉದ್ಯಮದ ಆರ್ಥಿಕ ಚಟುವಟಿಕೆ ಹೆಚ್ಚಾಗುತ್ತದೆ, ಯುದ್ಧ, ಅಮೆರಿಕ ಮತ್ತು ಶಸಾಸ ಉದ್ಯಮದ ನಡುವೆ ಗಾಢ ಆರ್ಥಿಕ ಸಂಬಂಧವಿದೆ.
ಅಮೆರಿಕದ ಮಾಜಿ ಅಧ್ಯಕ್ಷ ರಿಪಬ್ಲಿಕನ್ ಪಕ್ಷದ ಡ್ವೈಟ್ ಐಸೆನ್ಹೋವರ್ 1961ರ ತಮ್ಮ ವಿದಾಯ ಭಾಷಣದಲ್ಲಿ ಮಿಲಿಟರಿ ಉದ್ಯಮ ಸಂಕೀರ್ಣದ (Military Industrial Complex) ಪ್ರಭಾವದ ಬಗ್ಗೆ ಎಚ್ಚರಿಸಿದ್ದರು. ಮುಖ್ಯವಾಗಿ ಮೂರು ಶಕ್ತಿಗಳ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ್ದರು: ಸರ್ಕಾರ- Military Industrial Complex ಖರೀದಿ ಮತ್ತು ರಕ್ಷಣಾ ವೆಚ್ಚಗಳಿಗೆ ಅನುಮೋದನೆ ನೀಡುವ ರಾಜಕಾರಣಿಗಳು, ಸೇನೆ- ಹೆಚ್ಚಿನ ಮಿಲಿಟರಿ ಬಜೆಟ್ ಬಯಸುವ ಸೇನಾ ವ್ಯವಸ್ಥೆ, ಶಸ್ತ್ರಾಸ್ತ್ರ ಉದ್ಯಮ- ಶಸ್ತ್ರಾಸ್ತ್ರಗಳನ್ನು ತಯಾರಿಸಿ ಮಾರಾಟ ಮಾಡುವ ಖಾಸಗಿ ಕಂಪನಿಗಳು. ಈ ಮೂರು ಶಕ್ತಿಗಳು ಪರಸ್ಪರ ಹಿತಾಸಕ್ತಿಗಳಿಗಾಗಿ ಕೈಜೋಡಿಸಿದರೆ ಪ್ರಜಾಪ್ರಭುತ್ವಕ್ಕೆ ಅಪಾಯ ಉಂಟಾಗ ಬಹುದು ಎಂಬುದು ಅವರ ಆತಂಕವಾಗಿತ್ತು. ಈ ಎಚ್ಚರಿಕೆ ಇಂದಿಗೂ ಪ್ರಸ್ತುತವಾಗಿದೆ.
ಮಧ್ಯಪ್ರಾಚ್ಯದ ರಾಜಕೀಯದಲ್ಲಿ ಅಮೆರಿಕದ ಪಾತ್ರ ಅತ್ಯಂತ ನಿರ್ಣಾಯಕವಾಗಿದೆ. ಇಸ್ರೇಲ್ಗೆ ಅಮೆರಿಕ ನೀಡುವ ರಾಜಕೀಯ, ಸೈನಿಕ ಮತ್ತು ಆರ್ಥಿಕ ಬೆಂಬಲವು ದೀರ್ಘಕಾಲದಿಂದ ಅಮೆರಿಕದ ವಿದೇಶಾಂಗ ನೀತಿಯ ಪ್ರಮುಖ ಅಂಶವಾಗಿದೆ. ಡೆಮಾಕ್ರಟ್ ಮತ್ತು ರಿಪಬ್ಲಿಕನ್ ಪಕ್ಷಗಳ ನಡುವೆ ಇಸ್ರೇಲ್ ನೀತಿಗೆ ಸಂಬಂಧಿಸಿದ ಕೆಲವು ವ್ಯತ್ಯಾಸಗಳಿವೆ.
ಡೆಮಾಕ್ರಟ್ ಪಕ್ಷದ ಕೆಲವು ನಾಯಕರು ಇಸ್ರೇಲ್ನ ಸೈನಿಕ ಕಾರ್ಯಾಚರಣೆಗಳನ್ನು ಕಠಿಣವಾಗಿ ವಿಮರ್ಶಿಸುತ್ತಾರೆ. ಮಾನವ ಹಕ್ಕುಗಳು, ಪ್ಯಾಲೆಸ್ಟೀನಿಯರ ಹಕ್ಕುಗಳ ಬಗ್ಗೆ ಒತ್ತು ನೀಡುತ್ತಾರೆ. ಆದರೆ ಇಸ್ರೇಲ್ ಜೊತೆಗಿನ ಅಮೆರಿಕದ ಕಾರ್ಯತಂತ್ರದ ಸಂಬಂಧವು ಕೇವಲ ಒಂದು ಪಕ್ಷದ ನೀತಿಯಲ್ಲ, ಎರಡೂ ಪಕ್ಷಗಳ ಆಡಳಿತಗಳಲ್ಲಿ ಈ ಸಂಬಂಧ ಮುಂದುವರಿದಿದೆ. ಹೀಗಾಗಿ ಡೆಮಾಕ್ರಟ್ ಗಳು ಕಾಂಗ್ರೆಸ್ನಲ್ಲಿ ಬಹುಮತ ಪಡೆದಿದ್ದಾರೆ ಎಂಬ ಕಾರಣಕ್ಕೆ ಇಸ್ರೇಲ್ಗೆ ಅಮೆರಿಕದ ಬೆಂಬಲ ಕಡಿಮೆ ಯಾಗುತ್ತದೆ ಎಂದು ನಿರೀಕ್ಷಿಸುವುದು ವಾಸ್ತವಿಕವಲ್ಲ.
ಅಮೆರಿಕದ ಆಡಳಿತ ಬದಲಾದಾಗ ಭಾರತದ ವ್ಯಾಪಾರ, ತಂತ್ರಜ್ಞಾನ, ರಕ್ಷಣಾ ಸಹಕಾರ, ವಲಸೆ ನೀತಿ, ಮತ್ತು ಜಾಗತಿಕ ರಾಜಕೀಯದ ಮೇಲೆ ಪರಿಣಾಮ ಬೀರುತ್ತದೆ. ಅಮೆರಿಕದೊಂದಿಗೆ ಭಾರತದ ಸಂಬಂಧವು ಕೇವಲ ಒಬ್ಬ ಅಧ್ಯಕ್ಷನ ವೈಯಕ್ತಿಕ ಸ್ನೇಹದ ಮೇಲೆ ಅವಲಂಬಿತವಾಗಿಲ್ಲ. ಅದು ಎರಡೂ ದೇಶಗಳ ಆರ್ಥಿಕ ಮತ್ತು ಕಾರ್ಯತಂತ್ರದ ಹಿತಾಸಕ್ತಿಗಳ ಮೇಲೆ ನಿರ್ಮಿತವಾಗಿದೆ.
ವಾಷಿಂಗ್ಟನ್ನಲ್ಲಿ ಡೆಮಾಕ್ರಟಿಕ್ ಅಥವಾ ರಿಪಬ್ಲಿಕನ್ ಪಕ್ಷಗಳಲ್ಲಿ ಯಾರು ಅಧಿಕಾರಕ್ಕೆ ಬಂದರೂ, ಭಾರತದೊಂದಿಗಿನ ಸಂಬಂಧದಲ್ಲಿ ಸ್ಥಿರತೆ ಕಂಡುಬರುತ್ತದೆ. ಆದರೆ, ಎರಡೂ ಪಕ್ಷಗಳ ವಿದೇಶಾಂಗ ನೀತಿ, ವೀಸಾ ನಿಯಮಗಳು ಮತ್ತು ಪಾಕಿಸ್ತಾನದ ಬಗೆಗಿನ ಧೋರಣೆಗಳಲ್ಲಿ ಸೂಕ್ಷ್ಮ ವ್ಯತ್ಯಾಸಗಳಿವೆ.
ರಿಪಬ್ಲಿಕನ್ ಪಕ್ಷವು ಆರ್ಥಿಕ ಮತ್ತು ರಕ್ಷಣಾ ಸಹಭಾಗಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡುತ್ತದೆ. ಭಾರತದ ಆಂತರಿಕ ವಿಷಯಗಳಾದ ಮಾನವ ಹಕ್ಕುಗಳು ಹಾಗೂ ಜಮ್ಮು-ಕಾಶ್ಮೀರದ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಡೆಮಾಕ್ರಟಿಕ್ ಪಕ್ಷ ಭಾರತದ ಆಂತರಿಕ ರಾಜಕೀಯ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳ ವಿಷಯಗಳ ಬಗ್ಗೆ ವಿನಾಕರಣ ಮೂಗು ತೂರಿಸುತ್ತದೆ. ಯಾರೇ ಅಧಿಕಾರಕ್ಕೆ ಬಂದರೂ ಅಮೆರಿಕದ ಪ್ರಥಮ ಆದ್ಯತೆ ತನ್ನ ದೇಶದ ಆರ್ಥಿಕತೆ ಮತ್ತು ಭದ್ರತೆಯಾಗಿರುತ್ತದೆ.
ರಿಪಬ್ಲಿಕನ್ನರು ಅಮೆರಿಕನ್ ಕಾರ್ಮಿಕರ ರಕ್ಷಣೆಗಾಗಿ ಎಚ್೧ಬಿ ವೀಸಾ ನಿಯಮಗಳನ್ನು ಕಠಿಣ ಗೊಳಿಸಿದ್ದರು. ಡೆಮಾಕ್ರಟರು ಅಧಿಕಾರಕ್ಕೆ ಬಂದಾಗ ಈ ನಿಯಮಗಳನ್ನು ಸಂಪೂರ್ಣವಾಗಿ ಹಿಂಪಡೆಯಲು ಸಾಧ್ಯವಾಗಲಿಲ್ಲ. ಏಕೆಂದರೆ ವೀಸಾ ನೀತಿಗಳು ಕೇವಲ ಪಕ್ಷದ ಸಿದ್ಧಾಂತದ ಮೇಲಲ್ಲದೆ, ಅಮೆರಿಕದ ಸ್ಥಳೀಯ ಉದ್ಯೋಗ ಮಾರುಕಟ್ಟೆಯ ಅಗತ್ಯತೆಗಳ ಮೇಲೆ ನಿರ್ಧಾರ ವಾಗುತ್ತವೆ. ಆದ್ದರಿಂದ ಹಿಂದಿನ ನೀತಿಗಳೇ ಮುಂದುವರಿಯುತ್ತವೆ.
ವಾಷಿಂಗ್ಟನ್ನಲ್ಲಿ ಅಧಿಕಾರ ಬದಲಾವಣೆಯಾದರೂ ಭಾರತ-ಅಮೆರಿಕ ಸಂಬಂಧದಲ್ಲಿ ಯಾವುದೇ ದೊಡ್ಡ ನಕಾರಾತ್ಮಕ ಬದಲಾವಣೆ ಆಗುವುದಿಲ್ಲ. ಚೀನಾವನ್ನು ಎದುರಿಸಲು ಮತ್ತು ಏಷ್ಯಾ-ಪೆಸಿಫಿಕ್ ವಲಯದಲ್ಲಿ ಪ್ರಭಾವ ಕಾಯ್ದುಕೊಳ್ಳಲು ಅಮೆರಿಕಕ್ಕೆ ಭಾರತದ ಅಗತ್ಯವಿದೆ. ರಿಪಬ್ಲಿಕನ್ನರು ಭದ್ರತೆ ಮತ್ತು ರಕ್ಷಣಾ ರಂಗದಲ್ಲಿ ನೇರ ಬೆಂಬಲ ನೀಡಿದರೆ, ಡೆಮಾಕ್ರಟರು ಜಾಗತಿಕ ನೀತಿಗಳಲ್ಲಿ ಸಹಕರಿಸುತ್ತಾರೆ.
ಅಂತಿಮವಾಗಿ, ಅಮೆರಿಕವು ತನ್ನ ದೃಷ್ಟಿಕೋನದಿಂದಲೇ ಯೋಚಿಸಿದರೂ, ಬಲಿಷ್ಠ ಭಾರತದ ಅಸ್ತಿತ್ವವು ಅಮೆರಿಕದ ಹಿತಾಸಕ್ತಿಗೆ ಪೂರಕವಾಗಿದೆ. ಅಮೆರಿಕದ ಮಧ್ಯಂತರ ಚುನಾವಣೆಯ ಫಲಿತಾಂಶವನ್ನು ಸಂಭ್ರಮಿಸುವುದು ಅಥವಾ ಟೀಕಿಸುವುದು ಜನರ ವೈಯಕ್ತಿಕ ಅಭಿಪ್ರಾಯ. ಚುನಾವಣೆಯ ಫಲಿತಾಂಶ ದಿಂದಲೇ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತವೆ ಎಂಬ ನಿರೀಕ್ಷೆ ಹಗಲುಕನಸು. ಒಬಾಮಾ ಬಂದಾಗ ಶಾಂತಿಯ ನಿರೀಕ್ಷೆ ಇತ್ತು; ಯುದ್ಧಗಳು ಮುಂದುವರಿದವು.
ಟ್ರಂಪ್ ಬಂದಾಗ ಅಮೆರಿಕ - ಎಂಬ ಘೋಷಣೆ ಬಲವಾಗಿತ್ತು; ಜಾಗತಿಕ ರಾಜಕೀಯದ ಸಂಘರ್ಷ ಗಳು ಮತ್ತಷ್ಟು ಸಂಕೀರ್ಣವಾದವು. ಈಗ ಡೆಮಾಕ್ರಟ್ಗಳು ಕಾಂಗ್ರೆಸ್ ನಲ್ಲಿ ಬಹುಮತ ಪಡೆದಿದ್ದಾರೆ; ಹೊಸ ನಿರೀಕ್ಷೆಗಳು ಹುಟ್ಟಿಕೊಂಡಿವೆ. ಅಮೆರಿಕದಲ್ಲಿ ಚುನಾವಣೆಗಳು ಸರ್ಕಾರದ ಮುಖವನ್ನು ಬದಲಿಸುತ್ತವೆ, ಸರ್ಕಾರದ ಹಿಂದೆ ಇರುವ ಆರ್ಥಿಕ ಹಿತಾಸಕ್ತಿಗಳು, ಭದ್ರತಾ ವ್ಯವಸ್ಥೆಗಳು ಮತ್ತು ಜಾಗತಿಕ ಕಾರ್ಯತಂತ್ರದ ಒತ್ತಡಗಳನ್ನಲ್ಲ. ಕಾಂಗ್ರೆಸ್ ಸರ್ಕಾರ ಹಾಲಿನ ದರವನ್ನು ಏರಿಸಿದ್ದನ್ನು ಬಿಜೆಪಿ ಅಧಿಕಾರಕ್ಕೆ ಬಂದರೆ ಇಳಿಸುವುದಿಲ್ಲ. ಇಷ್ಟೇ ವ್ಯತ್ಯಾಸ!