Keshava Prasad B Column: ಭಾರತದ ಚಹಾ ಅಂಗಡಿಯಿಂದ ಬ್ರಿಕ್ಸ್ ಯುಪಿಐ ಕ್ರಾಂತಿ !
ಯುಪಿಐ ಹಾಗೂ ಇತರ ದೇಶಗಳ ಕ್ಷಿಪ್ರ ಪಾವತಿ ವ್ಯವಸ್ಥೆಗಳು ಪರಸ್ಪರ ಜೋಡಣೆಯಾದರೆ, ಅಂತಾ ರಾಷ್ಟ್ರೀಯ ಹಣ ವರ್ಗಾವಣೆಗೆ ತಗಲುವ ಅಧಿಕ ವೆಚ್ಚ ಮತ್ತು ಸಮಯ ಗಣನೀಯವಾಗಿ ಉಳಿಯುತ್ತದೆ. ಕೇವಲ ಅಂಕಿಅಂಶಗಳನ್ನು ನೋಡುವುದಾದರೆ, 2026ರ ಆಗ ತಿಂಗಳೊಂದರ ಯುಪಿಐ ಬರೋಬ್ಬರಿ 24.85 ಲಕ್ಷ ಕೋಟಿ ಹಣಕಾಸು ವರ್ಗಾವಣೆಗಳನ್ನು ನಡೆಸಿದ್ದು, ಇದರ ಮೌಲ್ಯ 29.8 ಲಕ್ಷ ಕೋಟಿ ರುಪಾಯಿಗಳ ಮೊತ್ತವನ್ನು ದಾಟಿದೆ!
-
ಮನಿ ಮೈಂಡೆಡ್
ಭಾರತದಲ್ಲಿ ಚಹಾದ ಅಂಗಡಿಯಿಂದ ಹಿಡಿದು ದೊಡ್ಡ ಮಾಲ್‌ಗಳವರೆಗೆ ಕ್ರಾಂತಿ ಸೃಷ್ಟಿಸಿರುವ ನಮ್ಮ ಹೆಮ್ಮೆಯ ಯುಪಿಐ (UPI), ಈಗ ಜಾಗತಿಕ ವೇದಿಕೆಯಾದ ಬ್ರಿಡ್ಜ್ (BRICS) ರಾಷ್ಟ್ರಗಳ ಅಂಗಳದಲ್ಲೂ ಸಂಚಲನ ಮೂಡಿಸಲು ಹೊರಟಿದ್ದೆ! ಬ್ರಿಡ್ಜ್ ಎಂದರೆ ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ ಮತ್ತು ಇತ್ತೀಚೆಗೆ ಸೇರ್ಪಡೆಗೊಂಡ ಹೊಸ ದೇಶಗಳ ಒಕ್ಕೂಟ. ಪಾಶ್ಚಾತ್ಯ ರಾಷ್ಟ್ರಗಳ ‘ಸ್ವಿಫ್ಟ್’ ವ್ಯವಸ್ಥೆಗೆ ಪರ್ಯಾಯವಾಗಿ ಡಿಜಿಟಲ್ ವಹಿವಾಟುಗಳನ್ನು ನಡೆಸುವಲ್ಲಿ ಭಾರತದ ಯುಪಿಐ ಅನುಭವ ದೊಡ್ಡ ಪಾತ್ರ ವಹಿಸುತ್ತಿರುವುದು ಗಮನಾರ್ಹ.
ಇದರೊಂದಿಗೆ ಅಂತಾರಾಷ್ಟ್ರೀಯ ಆರ್ಥಿಕ ಚಟುವಟಿಕೆಗಳನ್ನು ಹಲವಾರು ದಶಕಗಳಿಂದ ನಿಯಂತ್ರಿಸುತ್ತಿರುವ ಅಮೆರಿಕದ ಡಾಲರ್ ಅಧಿಪತ್ಯಕ್ಕೆ ಸಣ್ಣದೊಂದು ಸೆಕ್ಯೂರಿಟಿ ಅಲರ್ಟ್ ಎದುರಾಗಿದೆ. ಬ್ರಿಡ್ಜ್ ರಾಷ್ಟ್ರಗಳು ಈಗ ಗಡಿಯಾಚೆಗಿನ ಹಣ ವರ್ಗಾವಣೆಗೆ ಒಂದು ಹೊಸ ಹಾಗೂ ಪರ್ಯಾಯ ಮಾರ್ಗವನ್ನು ಹುಡುಕುತ್ತಿವೆ. ವಿಶೇಷವೆಂದರೆ, ಹಲವು ಆಯಾಮಗಳು ಇರುವ ಈ ಸಂಭವನೀಯ ಜಾಗತಿಕ ಹಣಕಾಸು ವ್ಯವಸ್ಥೆಯಲ್ಲಿ ಭಾರತದ ‘ಯುಪಿಐ’ ಮುಂಚೂಣಿಯಲ್ಲಿ ನಿಲ್ಲುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ.
ಹಾಗಂತ ಬ್ರಿಡ್ಜ್ ಯಾವುದೇ ಹೊಸ ‘ಕಾಮನ್ ಕರೆನ್ಸಿ’ಯನ್ನು ತರುತ್ತಿಲ್ಲ. ಬದಲಿಗೆ ವಿಭಿನ್ನ ದೇಶಗಳ - -ಪೇಮೆಂಟ್ ಸಿಸ್ಟಮ್‌ಗಳು, ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿಗಳು (CBDC) ಮತ್ತು ಸ್ಥಳೀಯ ಕರೆನ್ಸಿಗಳ ವ್ಯಾಪಾರವನ್ನು ಬೆಸೆಯುವ ಬೃಹತ್ ಜಾಲವೊಂದನ್ನು ರೂಪಿಸುತ್ತಿದೆ. ಈ ಪ್ರಸ್ತಾಪದಲ್ಲಿ ಭಾರತದ ಹೆಮ್ಮೆಯ ಯುಪಿಐ ಅತಿ ದೊಡ್ಡ ಬ್ರಹ್ಮಾಸ್ತ್ರವಾಗಿ ಹೊರಹೊಮ್ಮಿದೆ. ಭಾರತ, ಚೀನಾ ಮತ್ತು ಬ್ರೆಜಿಲ್‌ನಂತಹ ದೇಶಗಳಿಗೆ ವಿದೇಶಗಳಿಂದ ಆಯಾ ದೇಶೀಯರ ಹಣದ ಒಳ ಹರಿವು ಹೆಚ್ಚು. ಹಣದ ಹೊರಹರಿವು ಕೂಡ ಗಣನೀಯ ಪ್ರಮಾಣದಲ್ಲಿದೆ.
ಇದನ್ನೂ ಓದಿ: Keshava Prasad B Column: ಭಾರತದ ಜಿಡಿಪಿ ಸತ್ಯವೇ, ಮಿಥ್ಯವೇ? ಏನಿದು ಜಟಾಪಟಿ?!
ಯುಪಿಐ ಹಾಗೂ ಇತರ ದೇಶಗಳ ಕ್ಷಿಪ್ರ ಪಾವತಿ ವ್ಯವಸ್ಥೆಗಳು ಪರಸ್ಪರ ಜೋಡಣೆಯಾದರೆ, ಅಂತಾರಾಷ್ಟ್ರೀಯ ಹಣ ವರ್ಗಾವಣೆಗೆ ತಗಲುವ ಅಧಿಕ ವೆಚ್ಚ ಮತ್ತು ಸಮಯ ಗಣನೀಯವಾಗಿ ಉಳಿಯುತ್ತದೆ. ಕೇವಲ ಅಂಕಿಅಂಶಗಳನ್ನು ನೋಡುವುದಾದರೆ, 2026ರ ಆಗ ತಿಂಗಳೊಂದರ ಯುಪಿಐ ಬರೋಬ್ಬರಿ 24.85 ಲಕ್ಷ ಕೋಟಿ ಹಣಕಾಸು ವರ್ಗಾವಣೆಗಳನ್ನು ನಡೆಸಿದ್ದು, ಇದರ ಮೌಲ್ಯ 29.8 ಲಕ್ಷ ಕೋಟಿ ರುಪಾಯಿಗಳ ಮೊತ್ತವನ್ನು ದಾಟಿದೆ! ಈ ಅಪಾರ ಯಶಸ್ಸು ಮತ್ತು ದಕ್ಷತೆಯೇ ಇಂದು ಜಾಗತಿಕ ವೇದಿಕೆಯಲ್ಲಿ ಭಾರತದ ಕಿರೀಟಕ್ಕೆ ಮತ್ತೊಂದು ಗರಿ ತಂದುಕೊಟ್ಟಿದೆ. ಒಂದು ವೇಳೆ ಈ ಬ್ರಿಕ್ಸ್ ವಲಯದಲ್ಲಿ ಯುಪಿಐ ಯಶಸ್ವಿಯಾಗಿ ಸೇರಿಕೊಂಡರೆ, ನಮ್ಮ ರಫ್ತು ದಾರರು, ಜಾಗತಿಕ ಪ್ರವಾಸಿಗರು ಮತ್ತು ಹೊರದೇಶಗಳಿಂದ ಹಣ ಕಳುಹಿಸುವ ಬಂಧುಗಳಿಗೆ ಹಣಕಾಸು ವರ್ಗಾವಣೆಯ ವ್ಯವಹಾರಗಳು ಕ್ಷಣಾರ್ಧದಲ್ಲಿ ಮುಗಿಯಲಿವೆ.
ಪಾಶ್ಚಿಮಾತ್ಯ ಹಣಕಾಸು ವ್ಯವಸ್ಥೆಗಳು ಮತ್ತು ಡಾಲರ್ ಮೇಲಿನ ಅವಲಂಬನೆ ಕ್ರಮೇಣ ತಗ್ಗಲಿದೆ. ಹೀಗಿದ್ದರೂ, ಡಾಲರ್ ಗುಮ್ಮನಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಬ್ರಿಕ್ಸ್‌ನ ಮತ್ತೊಬ್ಬ ದೈತ್ಯ ಆರ್ಥಿಕ ಶಕ್ತಿಯಾದ ಚೀನಾದ ಮೇಲಿನ ಅತಿಯಾದ ಅವಲಂಬನೆಗೆ ಬಲಿಯಾಗದಂತೆ ಎಚ್ಚರಿಕೆ ವಹಿಸಬೇಕಿದೆ. ಭಾರತವು ತನ್ನ ಸ್ವಂತ ಸಾಮರ್ಥ್ಯದ ಬಲದಿಂದ ಈ ಸಮಾನಾಂತರ ಪಾವತಿಯ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಯಶಸ್ವಿಯಾದರೆ, ಜಾಗತಿಕ ಆರ್ಥಿಕ ನಕ್ಷೆಯಲ್ಲಿ ನಮ್ಮ ದೇಶದ ಪ್ರಭಾವ ಮತ್ತಷ್ಟು ಎತ್ತರಕ್ಕೇರುವುದು ಖಂಡಿತ.
ಒಂದು ಕಾಲವಿತ್ತು; ಜೇಬಿನಲ್ಲಿ ಚಿಲ್ಲರೆ ಇಲ್ಲದಿದ್ದರೆ ಬಸ್ ಟಿಕೆಟ್ ಪಡೆಯುವುದರಿಂದ ಹಿಡಿದು ತರಕಾರಿ ಕೊಳ್ಳುವವರೆಗೆ ಪರದಾಡಬೇಕಿತ್ತು. ಬ್ಯಾಂಕ್‌ಗೆ ಹೋಗಿ ಸಾಲಿನಲ್ಲಿ ನಿಂತು, ಚೆಕ್ ಬರೆದು ಹಣ ಡ್ರಾ ಮಾಡುವುದೇ ಒಂದು ದೊಡ್ಡ ಸಾಹಸವಾಗಿತ್ತು. ಆದರೆ ಇಂದು? ಕೇವಲ ಒಂದು ಸ್ಮಾಟ್ ಫೋನ್ ಮತ್ತು ಬೆರಳ ತುದಿಯ ಸ್ಪರ್ಶವಿದ್ದರೆ ಸಾಕು, ಇಡೀ ಪ್ರಪಂಚವೇ ನಮ್ಮ ಅಂಗೈಯೊಳಗೆ ಬಂದಂತೆ ಭಾಸವಾಗುತ್ತದೆ. ಇದಕ್ಕೆ ಕಾರಣ ನಮ್ಮ ದೇಶದ ಹೆಮ್ಮೆಯ ತಾಂತ್ರಿಕ ವಿಸ್ಮಯ ಯುಪಿಐ. ಇಂದು ಕಿಸೆಯಲ್ಲಿ ಒಂದು ರೂಪಾಯಿ ಹಣವಿಲ್ಲದೆಯೂ ನಾವು ರಾಜ್ಯ ಸುತ್ತಬಹುದು, ಹೋಟೆಲ್ ನಲ್ಲಿ ಊಟ ಮಾಡಬಹುದು, ಮಾಲ್‌ನಲ್ಲಿ ಶಾಪಿಂಗ್ ಮಾಡಬಹುದು. ಕಳ್ಳರ ಭಯವಿಲ್ಲದೆ ನಿರಾಳವಾಗಿ ಓಡಾಡಲು ಯುಪಿಐ ನಮಗೆ ಧೈರ್ಯ ತುಂಬಿದೆ.
ದೇಶದ ಯಾವುದೇ ಮೂಲೆಯಲ್ಲಿರಲಿ, ರಾತ್ರಿಯಿರಲಿ ಅಥವಾ ಹಬ್ಬದ ದಿನವಿರಲಿ-ತುರ್ತು ಸಂದರ್ಭದಲ್ಲಿ ಬಂಧುಗಳಿಗೆ ಹಣ ಕಳುಹಿಸಲು ಅಥವಾ ಪಡೆಯಲು ಬ್ಯಾಂಕ್‌ಗಳ ಗೇಟು ಕಾಯುವ ಅವಶ್ಯಕತೆ ಈಗಿಲ್ಲ. ಕ್ಯೂಆರ್ ಕೋಡ್ (QR Code) ಸ್ಕ್ಯಾನ್ ಮಾಡಿದರೆ ಸಾಕು, ಹಣ ಕ್ಷಣಾರ್ಧದಲ್ಲಿ ಖಾತೆಗೆ ಜಮೆ. ದೊಡ್ಡ ದೊಡ್ಡ ಮಾಲ್‌ಗಳಿಂದ ಹಿಡಿದು ತಳ್ಳುಗಾಡಿಯಲ್ಲಿ ಚಹಾ ಮಾರುವ ಅಣ್ಣನವರೆಗೆ ಎಲ್ಲರ ಅಂಗಡಿ ಯಲ್ಲೂ ಈಗ ಕ್ಯೂಆರ್ ಕೋಡ್ ರಾರಾಜಿಸುತ್ತಿದೆ.
ಇದು ಸಣ್ಣ ವ್ಯಾಪಾರಿಗಳಿಗೂ ಗೌರವಯುತವಾದ ಡಿಜಿಟಲ್ ಬದುಕನ್ನು ನೀಡಿದೆ. ಹಿಂದೆ ನಗದಿನ ರೂಪದಲ್ಲಿ ನಡೆಯುತ್ತಿದ್ದ ವ್ಯವಹಾರಗಳಿಂದ ಕಪ್ಪುಹಣದ ಹಾವಳಿ ಹೆಚ್ಚಿತ್ತು. ಆದರೆ ಈಗ ಪ್ರತಿಯೊಂದು ರೂಪಾಯಿಯೂ ಡಿಜಿಟಲ್ ರೂಪದಲ್ಲಿ ದಾಖಲಾಗುವುದರಿಂದ, ಸರ್ಕಾರದ ತೆರಿಗೆ ಸಂಗ್ರಹಣೆ ಗಣನೀಯ ವಾಗಿ ಹೆಚ್ಚಿ ಆರ್ಥಿಕತೆ ಬಲಗೊಳ್ಳುತ್ತಿದೆ. ಯುಪಿಐ ಯಶಸ್ಸಿನ ಹಿಂದಿನ ತಂತ್ರಜ್ಞಾನ ಮತ್ತು ಸೇವೆಗಳನ್ನು ಒದಗಿಸಲು ನೂರಾರು ಸ್ಟಾರ್ಟಪ್‌ಗಳು ಹುಟ್ಟಿಕೊಂಡಿವೆ.
ಇದು ಲಕ್ಷಾಂತರ ಯುವ ಪ್ರತಿಭೆಗಳಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ. ಇಂದು ಸಿಂಗಾಪುರ, ಫ್ರಾನ್ಸ್, ಯುಎಇಯಂತಹ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಕೂಡ ನಮ್ಮ ಯುಪಿಐ ವ್ಯವಸ್ಥೆಯನ್ನು ಮುಕ್ತಕಂಠದಿಂದ ಪ್ರಶಂಸಿಸಿ ತಮ್ಮ ದೇಶದಲ್ಲೂ ಅಳವಡಿಸಿಕೊಳ್ಳುತ್ತಿವೆ. ಜಾಗತಿಕ ಆರ್ಥಿಕ ನಕ್ಷೆಯಲ್ಲಿ ಭಾರತದ ವರ್ಚಸ್ಸು ಏರಿದೆ. ಈ ಹಿಂದೆ ಬೀದಿಬದಿ ತರಕಾರಿ ಮಾರುವವರು, ತಳ್ಳುಗಾಡಿಯಲ್ಲಿ ವ್ಯಾಪಾರ ಮಾಡುವವರು ಅಥವಾ ಸಣ್ಣ ಅಂಗಡಿ ಇಟ್ಟುಕೊಂಡವರು ಬ್ಯಾಂಕ್‌ನಿಂದ ಸಾಲ ಪಡೆಯಲು ಹೋದರೆ ಸಾಕು, ಹತ್ತಾರು ದಾಖಲೆಗಳನ್ನು ಕೇಳಿ ತಿರುಗಿಸು ತ್ತಿದ್ದರು. ನಿಮ್ಮ ಆದಾಯದ ಪ್ರಮಾಣ ಎಷ್ಟು? ಬ್ಯಾಂಕ್ ಸ್ಟೇಟ್ಮೆಂಟ್ ಎಲ್ಲಿ? ಎಂದರೆ ಆ ಬಡ ವ್ಯಾಪಾರಿಗಳ ಬಳಿ ಉತ್ತರವಿರುತ್ತಿರಲಿಲ್ಲ. ಆದರೆ ಯುಪಿಐ ಬಂದ ಮೇಲೆ ಈ ಚಿತ್ರಣ ಸಂಪೂರ್ಣ ವಾಗಿ ಬದಲಾಗಿದೆ!
ಸಣ್ಣಪುಟ್ಟ ವ್ಯಾಪಾರಿಗಳಿಗೂ ಬ್ಯಾಂಕ್‌ಗಳಿಂದ ಸಾಲ ಸಿಗುತ್ತಿದೆ. ಡಿಜಿಟಲ್ ವಹಿವಾಟೇ ಬಡ ವ್ಯಾಪಾರಿಗಳ ‘ಕ್ರೆಡಿಟ್ ಸ್ಕೋರ್’. ಹಿಂದೆ ಆದಾಯ ತೆರಿಗೆ ರಿಟರ್ನ್ಸ್ (ITR) ಅಥವಾ ದೊಡ್ಡ ದಾಖಲೆ ಗಳನ್ನು ತೋರಿಸಬೇಕಿತ್ತು. ಆದರೆ ಈಗ ಕ್ಯೂಆರ್ ಕೋಡ್ ಮೂಲಕ ಪ್ರತಿದಿನ ಅವರ ಡಿಜಿಟಲ್ ಖಾತೆಗೆ ಬಂದು ಬೀಳುವ ಹಣವೇ ಅವರ ಅತಿ ದೊಡ್ಡ ಆರ್ಥಿಕ ಪ್ರಮಾಣಪತ್ರ. ಒಬ್ಬ ಚಹಾ ಮಾರುವವನು ಅಥವಾ ಹಣ್ಣು ಮಾರುವವನು ದಿನಕ್ಕೆ 50 ಅಥವಾ 100 ಯುಪಿಐ ಪಾವತಿಗಳನ್ನು ಸ್ವೀಕರಿಸಿದರೆ, ಆತನ ಮಾಸಿಕ ಆದಾಯ ಎಷ್ಟು ಎಂಬುದು ಬ್ಯಾಂಕ್‌ಗಳಿಗೆ ಸ್ಪಷ್ಟವಾಗಿ ತಿಳಿಯು ತ್ತದೆ.
ಈ ಪಾರದರ್ಶಕತೆಯೇ ಬ್ಯಾಂಕ್ ಗಳಿಗೆ ಅವರ ಮೇಲಿನ ನಂಬಿಕೆಯನ್ನು ಹೆಚ್ಚಿಸಿದೆ. ಫೋನ್ ಪೇ, ಗೂಗಲ್ ಪೇ, ಪೇಟಿಎಂ ಅಥವಾ ಸಾಂಪ್ರದಾಯಿಕ ಬ್ಯಾಂಕ್‌ಗಳು ಇಂದು ಸಣ್ಣ ವ್ಯಾಪಾರಿಗಳಿಗಾಗಿ ‘ಡಿಜಿಟಲ್ ಬಿಸಿನೆಸ್ ಲೋನ್’ ನೀಡುತ್ತಿವೆ. ವ್ಯಾಪಾರಿಗಳ ಯುಪಿಐ ವಹಿವಾಟಿನ ಹರಿವನ್ನು ಆಧರಿಸಿ ಅವರ ಬ್ಯಾಂಕ್ ಖಾತೆಗೆ ಸಾಲದ ಹಣ ಜಮೆ ಆಗುತ್ತದೆ. ಹೀಗಾಗಿ ಯುಪಿಐ ಎನ್ನುವುದು ಕೇವಲ ಹಣ ಪಾವತಿ ಮಾಡುವ ಸಾಧನವಲ್ಲ. ಅದು ಸಣ್ಣಪುಟ್ಟ ವ್ಯಾಪಾರಿಗಳ ವ್ಯವಹಾರಗಳನ್ನು ದಾಖಲಿಸುವುದರ ಜತೆಗೆ ಅವರನ್ನು ಸಬಲೀಕರಣಗೊಳಿಸುತ್ತಿದೆ.
ಅಂದ ಹಾಗೆ ಬ್ರಿಕ್ಸ್ ರಾಷ್ಟ್ರಗಳಲ್ಲಿ ಯುಪಿಐ ಕ್ರಾಂತಿ ನಡೆದರೆ ಸಿಗುವ ಲಾಭಗಳೇನು? ಭಾರತದಿಂದ ಬ್ರಿಕ್ಸ್ ರಾಷ್ಟ್ರಗಳಿಗೆ ತೆರಳುವ ವ್ಯಾಪಾರಿಗಳು ಹಾಗೂ ಪ್ರವಾಸಿಗರು ಯಾವುದೇ ಕರೆನ್ಸಿ ಪರಿವರ್ತನೆಯ ಕಿರಿಕಿರಿ ಯಿಲ್ಲದೆ ನೇರವಾಗಿ ಯುಪಿಐ ಮೂಲಕವೇ ಪಾವತಿ ಮಾಡಬಹುದು. ಅಮೆರಿಕದ ಡಾಲರ್ ಆಧಾರಿತ ಮಾರ್ಗಗಳನ್ನು ಬೈಪಾಸ್ ಮಾಡಿ, ಸ್ಥಳೀಯ ಕರೆನ್ಸಿಗಳ ನೇರ ವ್ಯಾಪಾರ ನಡೆಸಲು ಈ ವ್ಯವಸ್ಥೆ ಭಾರತಕ್ಕೆ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ. ಬ್ರಿಕ್ಸ್ ದೇಶಗಳಲ್ಲಿ ಯುಪಿಐ ಕ್ರಾಂತಿ ಅಧಿಕೃತವಾಗಿ ಜಾರಿಗೆ ಬರುವುದು ಸದ್ಯಕ್ಕೆ ಚರ್ಚೆಯ ಹಂತದಲ್ಲಿದ್ದರೂ, ಭಾರತ ಈಗಾಗಲೇ ಸಿಂಗಾಪುರ, ಫ್ರಾನ್ಸ್, ಯುಎಇ ಮುಂತಾದ ದೇಶಗಳೊಂದಿಗೆ ತನ್ನ ಪಾವತಿ ವ್ಯವಸ್ಥೆಯನ್ನು ಯಶಸ್ವಿಯಾಗಿ ಜೋಡಿಸಿದೆ.
ಬ್ರಿಕ್ಸ್ ವೇದಿಕೆಯಲ್ಲೂ ಇದು ಸಾಕಾರಗೊಂಡರೆ, ಜಾಗತಿಕ ಹಣಕಾಸು ಮಾರುಕಟ್ಟೆಯಲ್ಲಿ ಭಾರತದ ‘ಸಾಫ್ಟ್ ಪವರ್’ ಅನೂಹ್ಯ ಎತ್ತರಕ್ಕೆ ಏರುವುದು ನಿಶ್ಚಿತ. ಭಾರತದ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ ಎನ್‌ಪಿಸಿಎಲ್‌ನ ಅಂಗಸಂಸ್ಥೆಯಾದ ಎನ್ ಐಪಿಎಲ್ ಮೂಲಕ ಹಲವಾರು ದೇಶಗಳಲ್ಲಿ ಯುಪಿಐ ಸೇವೆಯು ಅಧಿಕೃತವಾಗಿ ಕಾರ್ಯಾಚರಣೆಯಲ್ಲಿದೆ.
ಉದಾಹರಣೆಗೆ ಸಿಂಗಾಪುರದ ಸ್ಥಳೀಯ ಪೇ ನೌ ವ್ಯವಸ್ಥೆಯೊಂದಿಗೆ ಯುಪಿಐ ಲಿಂಕ್ ಆಗಿದೆ. ದುಬೈ ಸೇರಿದಂತೆ ಪ್ರಮುಖ ಮಾಲ್‌ಗಳು, ರಿಟೇಲ್ ಮಳಿಗೆಗಳಲ್ಲಿ ಯುಪಿಐ ಚಾಲ್ತಿಯಲ್ಲಿದೆ. ಯುರೋಪ್ ನಲ್ಲಿ ಯುಪಿಐ ಸ್ವೀಕರಿಸಿದ ಮೊದಲ - ಆಗಿದೆ. ಜಪಾನ್, ಮಲೇಷ್ಯಾ, ಇಸ್ರೇಲ್ ಮುಂತಾದ ದೇಶಗಳಲ್ಲಿ ಯುಪಿಐ ಪ್ರಾಯೋಗಿಕ ಹಂತದಲ್ಲಿದ್ದು ಜಾರಿಗೆ ಬರಲಿದೆ.
ಸಾಮಾನ್ಯವಾಗಿ ಎರಡು ಬೇರೆ ಬೇರೆ ದೇಶಗಳ ನಡುವೆ ವ್ಯಾಪಾರ ನಡೆದಾಗ (ಉದಾಹರಣೆಗೆ ಭಾರತ ಮತ್ತು ಸಿಂಗಾಪುರ್ ಅಥವಾ ಯುಎಇ), ಹಣದ ಮೌಲ್ಯವನ್ನು ಅಳೆಯಲು ಮತ್ತು ವರ್ಗಾಯಿಸಲು ಮೊದಲು ಯುಎಸ್ ಡಾಲರ್ ಅನ್ನು ಮಧ್ಯವರ್ತಿಯಾಗಿ ಬಳಸಲಾಗುತ್ತದೆ. ಆದರೆ ಯುಪಿಐ ಮತ್ತು ನೇರ ಪಾವತಿ ವ್ಯವಸ್ಥೆಗಳ ಮೂಲಕ ಎರಡು ದೇಶಗಳು ತಮ್ಮದೇ ಸ್ವಂತ ಕರೆನ್ಸಿಗಳಾದ ರೂಪಾಯಿ ಮತ್ತು ಆಯಾ ದೇಶದ ಸ್ಥಳೀಯ ಹಣದ ನಡುವೆ ನೇರ ವಿನಿಮಯ ಮಾಡಿಕೊಳ್ಳಬಹುದು. ಇದರಿಂದ ಡಾಲರ್‌ನ ಅಗತ್ಯವೇ ಇರುವುದಿಲ್ಲ.
ಅಮೆರಿಕದ ‘ಸ್ವಿಫ್ಟ್’ ಅಥವಾ ವೀಸಾ/ಮಾಸ್ಟರ್‌ಕಾಡ್ ಗಳಂತಹ ಬಹು ರಾಷ್ಟ್ರೀಯ ನೆಟ್‌ವರ್ಕ್‌ಗಳು ಡಾಲರ್ ಪ್ರಾಬಲ್ಯದ ಮೇಲೆ ನಿಂತಿವೆ. ಆದರೆ ಭಾರತದ ಯುಪಿಐ ಮಾದರಿಯು ಕಡಿಮೆ ವೆಚ್ಚದಲ್ಲಿ, ಅತ್ಯಂತ ವೇಗವಾಗಿ ಕೆಲಸ ಮಾಡುವುದರಿಂದ ಅನೇಕ ಅಭಿವೃದ್ಧಿಶೀಲ ದೇಶಗಳು ತಮ್ಮದೇ ಆದ ಸ್ವಂತ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ನಿರ್ಮಿಸಲು ಯುಪಿಐ ತಂತ್ರಜ್ಞಾನವನ್ನು ಆಯ್ಕೆ ಮಾಡುತ್ತಿವೆ. ಉದಾಹರಣೆಗೆ ಪೆರು, ನಮೀಬಿಯಾ ಮುಂತಾದ ದೇಶಗಳು ಭಾರತದ ಮಾದರಿಯನ್ನು ಅಳವಡಿಸಿಕೊಳ್ಳುತ್ತಿವೆ. ಈಗ ಹೇಳಿ, ಹೇಗಿದೆ ಭಾರತದ ಯುಪಿಐ ಕ್ರಾಂತಿ! ಕೊನೆಯದಾಗಿ ಈ ನಿಟ್ಟಿನಲ್ಲಿ ದಿಲೀಪ್ ಅಸ್ಬೆ, ನಂದನ್ ನಿಲೇಕಣಿ ಅವರ ಕೊಡುಗೆಯನ್ನು ಸ್ಮರಿಸಿಕೊಳ್ಳಲೇಬೇಕು.