ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ravi Hunj Column: ತಾಯ್ನಾಡನ್ನು ಪ್ರೀತಿಸುವುದು ನಿನ್ನ ಧರ್ಮದ ಭಾಗ..

ಸಮಗ್ರವಾಗಿ ಸೃಷ್ಟಿಯ ಪ್ರತಿಯೊಂದೂ ದೈವಸ್ವರೂಪ ಎನ್ನುವ ಹಿಂದೂ ಸಂಸ್ಕೃತಿಯ ಮೂಲದ ಕಾರಣ ಭಾರತೀಯ ನಾಡು-ನುಡಿಗಳನ್ನು ದೇವಿಯ ಸ್ವರೂಪದಲ್ಲಿ ನಿರೂಪಿಸಲಾಗಿದೆ ಎನ್ನುವುದು ಲೋಕಾಭಿಮತ. ಆದರೆ ಇಲ್ಲಿ ಕೇವಲ ಹಿಂದೂ ಸಂಸ್ಕೃತಿ ಯಲ್ಲದ ಸಂಸ್ಕೃತಿಯ ಜನರೂ ಇದ್ದಾರೆ ಎನ್ನುವುದಾದರೆ ಅಂಥ ಸಂಸ್ಕೃತಿಯ ಅಬ್ರಹಾಮಿಕ್ ಮತಧರ್ಮಗಳು ಈ ಬಗ್ಗೆ ಏನು ಹೇಳುತ್ತವೆ ಎನ್ನುವುದು ಪರಿಗಣಿತವಾಗುತ್ತದೆ.

Ravi Hunj Column: ತಾಯ್ನಾಡನ್ನು ಪ್ರೀತಿಸುವುದು ನಿನ್ನ ಧರ್ಮದ ಭಾಗ..

-

Ashok Nayak Ashok Nayak Sep 8, 2025 5:57 PM

ಬಸವ ಮಂಟಪ‌ (ಭಾಗ-1)

ರವಿ ಹಂಜ್

ಸೃಷ್ಟಿಯ ಪ್ರತಿಯೊಂದೂ ದೈವಸ್ವರೂಪ ಎನ್ನುವ ಹಿಂದೂ ಸಂಸ್ಕೃತಿಯ ಮೂಲದ ಕಾರಣ ಭಾರತೀಯ ನಾಡು-ನುಡಿಗಳನ್ನು ದೇವಿಯ ಸ್ವರೂಪದಲ್ಲಿ ನಿರೂಪಿಸಲಾಗಿದೆ. ಆದರೆ ಇಲ್ಲಿ ಕೇವಲ ಹಿಂದೂ ಸಂಸ್ಕೃತಿಯಲ್ಲದ ಸಂಸ್ಕೃತಿಯ ಜನರೂ ಇದ್ದಾರೆ ಎನ್ನುವುದಾದರೆ ಅಂಥ ಸಂಸ್ಕೃತಿಯ ಅಬ್ರಹಾಮಿಕ್ ಮತಧರ್ಮಗಳು ಈ ಬಗ್ಗೆ ಏನು ಹೇಳುತ್ತವೆ ಎನ್ನುವುದು ಪರಿಗಣಿತವಾಗುತ್ತದೆ.

ನಮಸ್ತೇ ಸದಾ ವತ್ಸಲೇ ಮಾತೃಭೂಮೇ, ತ್ವಯಾ ಹಿಂದುಭೂಮೇ ಸುಖಂ ವಧಿತೋಹಮ್ | ಮಹಾಮಂಗಲೇ ಪುಣ್ಯಭೂಮೇ ತ್ವದರ್ಥೇ, ಪತತ್ವೇಷ ಕಾಯೋ ನಮಸ್ತೇ ನಮಸ್ತೇ ||’

ಎಂಬುದು ಮಾತೃಭೂಮಿಯನ್ನು ಕೃತಜ್ಞತೆಯಿಂದ, ಭಕ್ತಿಪೂರ್ವಕವಾಗಿ ವಂದಿಸುವ ಪ್ರಾರ್ಥನೆಯ ಸಾಲುಗಳಾಗಿವೆ. ಎಲ್ಲಾ ಕೋನಗಳಿಂದಲೂ ಇದು ಕೇವಲ ಭೌತಿಕ ಭೌಗೋಳಿಕವಾಗಿಯಲ್ಲದೆ ಅಲೌಕಿಕ ಅಖಂಡತೆಯನ್ನು ಸಾರುತ್ತದೆ. ಇಂಥ ವಿಶಾಲಾರ್ಥದ ಪ್ರಾರ್ಥನೆಯು ಕೇವಲ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕಷ್ಟೇ ಸೀಮಿತ ಎನ್ನುವುದು ಸ್ವಘೋಷಿತ ಉದಾರವಾದಿಗಳ ಸಂಕುಚಿತ ಮನೋಭಾವ.

ಏಕೆಂದರೆ, ಕರ್ನಾಟಕದ ನಾಡಗೀತೆಯಾಗಿರುವ ಕುವೆಂಪುರವರ ‘ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ...’ ಯಲ್ಲದೇ ರಾಷ್ಟ್ರಗೀತೆಯಾದ ಟ್ಯಾಗೋರರ ‘ಜನಗಣಮನ ಅಧಿನಾಯಕ ಜಯಹೇ..’ದಲ್ಲಿ ಸಹ ಇದೇ ಭಾವವನ್ನು ಪ್ರತಿಪಾದಿಸಲಾಗಿದೆ. ಹಾಗಾಗಿ ‘ನಮಸ್ತೇ ಸದಾ ವತ್ಸಲೇ’ ಹಾಡಿದ ಜನಪ್ರತಿನಿಧಿಯೋರ್ವರು ತಾವು ಹಾಡಿದ್ದಕ್ಕೆ ಕ್ಷಮೆ ಯಾಚಿಸುತ್ತಾರೆ ಎಂದರೆ ಅವರು ಮುಂದೆ ರಾಷ್ಟ್ರಗೀತೆ ಮತ್ತು ನಾಡಗೀತೆ ಹಾಡುವುದಕ್ಕೂ ಕ್ಷಮೆ ಯಾಚಿಸುವ ಸನ್ನಿವೇಶ ಬರಬಹುದಲ್ಲವೇ? ಇಂಥದೇ ಪರಿಕಲ್ಪನೆಯ ಭುವನೇಶ್ವರಿಯ ಸ್ವರೂಪವನ್ನು, “ಕನ್ನಡ ಭಾಷೆಯನ್ನು ಭುವನೇಶ್ವರಿಯಾಗಿಸಿ ನಮ್ಮನ್ನು ಹೊರಗಿರಿಸಲಾಗಿದೆ" ಎಂಬ ಒಂದು ಕೋಮಿನ ಉದಾರವಾದಿ ಚಿಂತಕಿಯ ಮಾತುಗಳನ್ನು ನಾಡಿನ ಚಿಂತಕ ಬುದ್ಧಿಜೀವಿಗಳ ಆಣತಿಯಂತೆ ಒಪ್ಪುವುದಾದರೆ ನಾಡಗೀತೆ ಯನ್ನು, ರಾಷ್ಟ್ರಗೀತೆಯನ್ನು ಸಹ ಪುನರ್‌ಪರಿಶೀಲಿಸಿ ಸೆಕ್ಯುಲರ್ ಗೀತೆಗಳನ್ನು ರಚಿಸಿ ಬಳಸಬೇಕಾಗುತ್ತದೆ!

ಇದನ್ನೂ ಓದಿ: Ravi Hunj Column: ಅಖಂಡ ವೀರಶೈವ (ಲಿಂಗಾಯತ) ಧರ್ಮೀಯರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು

ಸದ್ಯಕ್ಕೆ ಬೂಕರ್ ಸಮಾನ ವಿಜೇತೆಯವರ ಅಭಿಪ್ರಾಯವು ಇಸ್ಲಾಂ ಧಾರ್ಮಿಕ ಹಿನ್ನೆಲೆಯಲ್ಲಿ ಸರಿಯೇ ಎಂದು ನೋಡೋಣ. ಏಕೆಂದರೆ ಭಾಷೆಯ ದೈವೀಕರಣ ಇಸ್ಲಾಮಿಗೆ ಸಲ್ಲದು ಎಂಬುದು ಇವರ ಜನಸಾಹಿತ್ಯ ಅಧ್ಯಕ್ಷೀಯ ಭಾಷಣದ ಅಂಬೋಣವಾಗಿದೆ.

ಸಮಗ್ರವಾಗಿ ಸೃಷ್ಟಿಯ ಪ್ರತಿಯೊಂದೂ ದೈವಸ್ವರೂಪ ಎನ್ನುವ ಹಿಂದೂ ಸಂಸ್ಕೃತಿಯ ಮೂಲದ ಕಾರಣ ಭಾರತೀಯ ನಾಡು-ನುಡಿಗಳನ್ನು ದೇವಿಯ ಸ್ವರೂಪದಲ್ಲಿ ನಿರೂಪಿಸಲಾಗಿದೆ ಎನ್ನುವುದು ಲೋಕಾಭಿಮತ. ಆದರೆ ಇಲ್ಲಿ ಕೇವಲ ಹಿಂದೂ ಸಂಸ್ಕೃತಿ ಯಲ್ಲದ ಸಂಸ್ಕೃತಿಯ ಜನರೂ ಇzರೆ ಎನ್ನುವುದಾದರೆ ಅಂಥ ಸಂಸ್ಕೃತಿಯ ಅಬ್ರಹಾಮಿಕ್ ಮತಧರ್ಮಗಳು ಈ ಬಗ್ಗೆ ಏನು ಹೇಳುತ್ತವೆ ಎನ್ನುವುದು ಪರಿಗಣಿತವಾಗುತ್ತದೆ.

ಹಾಗಾಗಿ ಆ ದೃಷ್ಟಿಯಿಂದ ನೋಡಿದಾಗ ಅಬ್ರಹಾಮಿಕ್ ಯಹೂದಿ ಧರ್ಮವು, “ನಿಮ್ಮನ್ನು ರೂಪಿಸಿ ರುವ ನಗರದ ಶಾಂತಿಗಾಗಿ ಪ್ರಾರ್ಥಿಸಿ, ಅದರ ಕ್ಷೇಮಕ್ಕಾಗಿ ದೇವರನ್ನು ಬೇಡಿಕೊಳ್ಳಿರಿ. ಏಕೆಂದರೆ, ಆ ನಾಡಿನ ಶಾಂತಿಯಲ್ಲಿ ನಿಮ್ಮ ಶಾಂತಿಯೂ ನೆಲೆಸಿರುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಿರಿ" ಎಂದು ತನ್ನ ಶ್ಲೋಕವೊಂದರಲ್ಲಿ ಹೇಳುತ್ತದೆ. (Jeremiah 29:7). ಇದೇ ರೀತಿ ಹೀಬ್ರೂ ಭಾಷೆಯನ್ನು ಯಹೂದಿಗಳ ಪವಿತ್ರ ಭಾಷೆ ( Holy Tongue) ಎಂದೇ ಧಾರ್ಮಿಕವಾಗಿ ಪರಿಗಣಿಸಲಾಗಿದೆ. ಅಬ್ರಹಾ ಮಿಕ್ ಇಸ್ಲಾಂ ಧರ್ಮದ ಪ್ರವಾದಿ ಮೊಹಮ್ಮದರು, ‘ಹಬ್ ಆಲ್ ವತನ್ ಮಿನ್ ಆಲ್ ಇಮಾನ್!’ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಅಂದರೆ ‘ತಾಯ್ನಾಡನ್ನು ಪ್ರೀತಿಸುವುದು ನಿನ್ನ ಧರ್ಮದ ಭಾಗ’ ಎಂದಾಗುತ್ತದೆ. ಇದೇ ರೀತಿ ಭಾಷೆಯ ಕುರಿತಾಗಿಯೂ, ಕುರಾನನ್ನು ಬೋಧಿಸಲಾದ ಅರೇಬಿಕ್ ಭಾಷೆಗೆ ದೇವಭಾಷೆ ಎಂದೇ ಪ್ರಾಮುಖ್ಯ ಕೊಡಲಾಗಿದೆ. ಅಲ್ಲದೆ ಜಗತ್ತಿನಲ್ಲಿರುವ ವಿವಿಧ ಭಾಷೆಗಳೆಲ್ಲವೂ ಅಹುವಿನ ಶಕ್ತಿ ಎಂದೇ ಇಸ್ಲಾಮಿನಲ್ಲಿ ಪರಿಗಣಿತವಾಗಿದೆ. ಹಾಗಾಗಿ ಕನ್ನಡ ಭಾಷೆಯ ಭುವನೇಶ್ವರಿ ಎಂಬ ದೈವಿಕ ಸ್ವರೂಪ ವೂ ಅಹು ಎಂಬ ದೈವಿಕ ಸ್ವರೂಪದ ಶಕ್ತಿಯೇ ಆಗುತ್ತದೆ.

ಇನ್ನು ಅಬ್ರಹಾಮಿಕ್ ಕ್ರಿಶ್ಚಿಯನ್ ಧರ್ಮವು ಇವೆರಡಕ್ಕಿಂತ ಭಿನ್ನವಾಗಿ ಹಿಂದೂ ಸಂಸ್ಕೃತಿಯ ‘ಅಲ್ಲಿರುವುದು (ಸ್ವರ್ಗ) ನಮ್ಮನೆ, ಇಲ್ಲಿರುವೆವು (ಭೂಮಿ) ಸುಮ್ಮನೆ’ ಎನ್ನುವಂತೆ ದ್ವಿಪೌರತ್ವವನ್ನು ಪರಿಗಣಿಸುತ್ತದೆ. ಹಾಗೆಯೇ ಯಾವುದೇ ಒಂದು ಭಾಷೆಗೆ ಪ್ರಾಮುಖ್ಯವನ್ನೂ ಕೊಟ್ಟಿಲ್ಲ. ಒಟ್ಟಿನಲ್ಲಿ ಧಾರ್ಮಿಕವಾಗಿ ತಾಯ್ನಾಡು, ತಾಯ್ನುಡಿಗಳ ಕುರಿತು ಧರ್ಮಗಳು ಹೀಗೆ ಹೇಳಿರುವಾಗ ನಾಮಾಂಕಿತ ದಸರಾ ಉದ್ಘಾಟಕರ ದ್ವಂದ್ವ ಮನಸ್ಥಿತಿ ಅವರ ವಿಶಾಲ ತಿಳಿವಳಿಕೆಯ ಬಗ್ಗೆ ಒಂದು ವಿಷಾದದ ನಗೆಯನ್ನು ತರಿಸುತ್ತದಷ್ಟೇ.

ತಮ್ಮ ಎರಡು ವರ್ಷದ ಹಿಂದಿನ ಅಭಿಪ್ರಾಯಕ್ಕೆ ಒಂದು ಸಣ್ಣ ವಿಷಾದವನ್ನೂ ವ್ಯಕ್ತಪಡಿಸದೆ ಈಗ “ತಾಯಿ ಚಾಮುಂಡೇಶ್ವರಿ ನನ್ನ ಹರಕೆ ತೀರಿಸಿಕೊಳ್ಳಲು ಕರೆಸಿಕೊಳ್ಳುತ್ತಿದ್ದಾಳೆ" ಎಂಬ ಈ ವಿಜೇತೆಯ ನವನುಡಿಗಳೂ ಒಂದು ವಿಷಾದದ ನಗೆಯನ್ನು ತರಿಸುತ್ತದಷ್ಟೇ ಹೊರತು ಇಸ್ಲಾಮ ನ್ನಾಗಲಿ ಹಿಂದುತ್ವದ ತಾತ್ವಿಕ ಸಿದ್ಧಾಂತವನ್ನಾಗಲಿ ಕಿಂಚಿತ್ತೂ ಅಳುಕಿಸುವುದಿಲ್ಲ.

ಎರಡೂ ಧರ್ಮದ ಸದಭಿಮಾನಿಗಳ ಕಣ್ಣಲ್ಲಿ ಈ ವಿಜೇತೆ ಪರಾಜಿತೆಯೇ ಆಗಿದ್ದಾರೆ. ಏಕೆಂದರೆ ಹಿಂದೂ ಸಂಸ್ಕೃತಿ ಸಹ ‘ಸತ್ಯಮೇವ ಜಯತೆ’ ಎನ್ನುತ್ತದೆ. ಇಸ್ಲಾಂ ಸಹ ‘ಸತ್ಯವನ್ನು ನಿರಾಕರಿಸುವ ಪ್ರೌಢಿಮೆ ಧರ್ಮ ಬಾಹಿರ’ ಎನ್ನುತ್ತದಲ್ಲದೇ ಅಂಥ ವ್ಯಕ್ತಿಗಳಿಗೆ ಸ್ವರ್ಗಪ್ರವೇಶವನ್ನು ನಿರಾಕರಿಸು ತ್ತದೆ.

ಈ ಕುರಿತಾದ ಸುರಾಹ್ ಆಲ್ ಇಸ್ರಾ ಹೀಗಿದೆ, “ವಾ ಲಾ ತಮ್ಶಿ ಫಿಲ-ಅರ್ದಿ ಮರಹನ್, ಇನ್ನಕ ಲನ್ ಖ್ರಿಕಲ-ಅರ್ದ ವ ಲನ್ ತಬ್ಲುಘಲ-ಜಿಬಾಲ ತೂಲಾ ( Surah Al-Isra; 17:37)". ಅಂದರೆ “ನೀನು ಭೂಮಿಯ ಮೇಲೆ ಅಹಂಕಾರದಿಂದ ನಡೆಯಬೇಡ. ನಿಶ್ಚಿತವಾಗಿ ನೀನು ಭೂಮಿಯನ್ನು ವಿಭಜಿ ಸಲು ಸಾಧ್ಯವಿಲ್ಲ ಮತ್ತು ಪರ್ವತಗಳ ಎತ್ತರವನ್ನು ಎಂದಿಗೂ ಮುಟ್ಟಲು ಸಾಧ್ಯವಿಲ್ಲ".

ಅದೇ ರೀತಿ ಸುರಾಹ್ ಅಲ್ ಮುಮಿನನ್, “ಲಾ ಯದ್ಖುಲು ಅಲ-ಜನ್ನತ ಮನ್ ಕಾನ ಫಿ ಕಲ್ಬಿಹಿ ಮಿತ್ಕಲು ದರ್ರ‍ಾಹ್ ಮಿನ್ ಕಿಬ್ರಿನ್ ( Surah Al-Mu'minun; 23:46 )"ಎನ್ನುತ್ತದೆ. ಅಂದರೆ, “ಯಾರ ಹೃದಯದಲ್ಲಿ ಸಾಸಿವೆಯ ಒಂದು ಕಣದಷ್ಟು ಅಹಂಕಾರ ಇದೆಯೋ, ಅವನು ಸ್ವರ್ಗಕ್ಕೆ ಪ್ರವೇಶಿ ಸಲು ಸಾಧ್ಯವಿಲ್ಲ". ಈ ಎಲ್ಲಾ ಧಾರ್ಮಿಕ ಕಾರಣಗಳಿಗಾಗಿಯೇ ಶ್ರದ್ಧಾಳು ಮುಸ್ಲಿಂ ಬಾಂಧವರು ವಿಜೇತೆಯ ವಿಷಯವಾಗಿ ಮೌನಕ್ಕೆ ಶರಣಾಗಿದ್ದಾರೆ.

ಹೀಗೆ ತಮ್ಮ ತಪ್ಪಿಗೆ ವಿಷಾದವನ್ನೂ ವ್ಯಕ್ತಪಡಿಸದ ಒಣ ಪ್ರತಿಷ್ಠೆದಾರರನ್ನು ಹಿಂದೂ-ಮುಸ್ಲಿಂ ಧರ್ಮಗಳೆರಡೂ ತಿರಸ್ಕರಿಸುತ್ತವೆ. ಈ ದ್ವಂದ್ವ ವಿಜೇತೆಯದಷ್ಟೇ ಅಲ್ಲದೆ ನಾಡಿನ ಬಹುಪಾಲು ಸ್ವಘೋಷಿತ ಬುದ್ಧಿಜೀವಿ ಚಿಂತಕರದ್ದು ಸಹ ಆಗಿದೆ.

ನುಡಿಯ ಮೂರ್ತರೂಪ ಭುವನೇಶ್ವರಿ ಹೊರಗೆ, ಆದರೆ ನಾಡಿನ ಮೂರ್ತರೂಪ ಚಾಮುಂಡೇಶ್ವರಿ ಒಳಗೆ ಎನ್ನುವ ಕಾರಣಕ್ಕಾಗಿ ನಾಡು ಬೂಕರ್ ಸಮಾನ ವಿಜೇತೆಯ ದಸರಾ ಉದ್ಘಾಟನೆಯನ್ನು ವಿರೋಽಸುತ್ತಿದೆಯೇ ಹೊರತು ಆಕೆಯ ಹುಟ್ಟಿನ ಧರ್ಮದ ಕಾರಣಕ್ಕಲ್ಲ. ಆದರೆ ವಾಲಿಕೆ ಓಲೈಕೆಯ ರಾಜಕಾರಣಿಗಳ ಮತ್ತು ಬುದ್ಧಿಜೀವಿಗಳ ಜಗತ್ತು, ಈಕೆ ಅಲ್ಪಸಂಖ್ಯಾತೆಯಾದ ಕಾರಣ ಬಹು ಸಂಖ್ಯಾತ ಹಿಂದುತ್ವ ವಾದಿಗಳು ಈಕೆಯನ್ನು ವಿರೋಧಿಸುತ್ತಿದ್ದಾರೆ ಎನ್ನುತ್ತಿದೆ.

ಅಸಲಿಗೆ ಅಲ್ಪಸಂಖ್ಯಾತ ಎನ್ನುವ ಟ್ರಂಪ್ ಕಾರ್ಡ್ ಬಳಸಿ ಜನರನ್ನು ವಿಭಜಿಸುತ್ತಿರುವುದು ಯಾರು? ನಾಡಿಗೆ ಸ್ಪಷ್ಟತೆಯನ್ನು ಕೊಡಬೇಕಾದ ಈ ಉದಾರವಾದಿ ಬುದ್ಧಿಜೀವಿ ವಲಯದ ಇಂಥ ಅತಾರ್ಕಿಕ ಸಂಕುಚಿತ ವಿಭಜಕ ದ್ವಂದ್ವಕ್ಕೆ ಏನು ಕಾರಣ? ಇದೆಲ್ಲಕ್ಕೂ ಬಹುತ್ವದ ಪ್ರಜಾಪ್ರಭುತ್ವವನ್ನು ಭಜಿಸುತ್ತಲೇ ಏಕದೇವೋಪಾಸಕ ಅಬ್ರಹಾಮಿಕ್ ತತ್ವದಂತೆ ಒಂದು ಪಕ್ಷದ ಅದರಲ್ಲೂ ಓರ್ವ ವ್ಯಕ್ತಿಯ ಭಜನೆಯಲ್ಲಿ ಕನ್ನಡನಾಡಿನ ಬುದ್ಧಿಜೀವಿಗಳು ತೊಡಗಿರುವುದೇ ಪ್ರಮುಖ ಕಾರಣ.

ಹಾಗಾಗಿಯೇ ಇವರದೇ ಗುಂಪಿನ ಅಂತಾರಾಷ್ಟ್ರೀಯ ಬೂಕರ್ ಬಹುಮಾನದ ‘ಸಮಾನ ವಿಜೇತೆ’ ಯ ಹಿಂದಿನ ಮತ್ತು ಇಂದಿನ ದ್ವಂದ್ವದ ಮಾತುಗಳು ಪ್ರತಿಧ್ವನಿಸುತ್ತಿವೆಯಷ್ಟೇ! ಏಕೆಂದರೆ ಈ ಗುಂಪಿನವರು ಮತ್ತದರ ಪ್ರಾಯೋಜಕರ ಧರ್ಮಭಂಜಕ ಕ್ರಿಯಾಶೀಲತೆಯನ್ನು ದಶಕದಿಂದ ಲೂ ನಾಡು, ವೀರಶೈವ-ಲಿಂಗಾಯತ ಧರ್ಮದ ಭಂಜಕ ಕಾರ್ಯದಲ್ಲಿ ಕಂಡಿದೆ.

ಹಾಗೆಯೇ ಪ್ರಸ್ತುತ ವೀರಶೈವ ಲಿಂಗಾಯತ ಎರಡೂ ಬೇರೆ ಬೇರೆ ಎನ್ನುವ ಇವರ ಭಂಜಕ ಕಾರ್ಯ ದಲ್ಲಿ ಎಳ್ಳಷ್ಟೂ ಸತ್ವವಿಲ್ಲವೆಂಬುದನ್ನು ಸಹ ನಾಡು ‘ವಿಶ್ವವಾಣಿ’ಯ ‘ಬಸವ ಮಂಟಪ’ ಅಂಕಣ ಮಾಲೆಯಲ್ಲಿ ಕಂಡುಕೊಂಡಿದೆ. ಆದರೆ ವೀರಶೈವ ಲಿಂಗಾಯತ ಧರ್ಮಭಂಜಕ ರಾಜಕಾರಣದ ‘ಸಿದ್ಧ’ ಮಾದರಿಯ ಜತೆಜತೆಗೆ ಜನಾಂಗೀಯವಾಗಿ ಹಿಂದೂ ಸಂಸ್ಕೃತಿಯನ್ನು ಒಡೆದು ಚೂರು ಚೂರಾಗಿಸಲು ಸಹ ವ್ಯವಸ್ಥಿತ ಯೋಜನೆಗಳು ಕರುನಾಡಿನಲ್ಲಿ ಕಳೆದ ದಶಕದಿಂದಲೂ ರೂಪು ಗೊಂಡವು. ಇದಕ್ಕೆ ತಕ್ಕಂತೆ ಪ್ರಾಯೋಜಿತರ ಕೃಪಾಕಟಾಕ್ಷದಲ್ಲಿ ಯುಟ್ಯೂಬ್ ಚಾನಲ್ಲುಗಳು ಮತ್ತು ಅವಳ ಪತ್ರಿಕೆ, ಇವನ ಪತ್ರಿಕೆ, ಆದಿನ, ಈದಿನ, ಓದಿನ ಎಂಬ ಪತ್ರಿಕೆಗಳು ಸೃಷ್ಟಿಯಾದವು.

ಅಲ್ಲದೇ ಸಂವಿಧಾನ ಓದು, ಬಹುತ್ವ ಕೇಳು, ಜನಸಾಹಿತ್ಯ, ಮೇ ಸಾಹಿತ್ಯ, ಮುಸ್ಲಿಂ ಚಿಂತಕರ ಚಾವಡಿ ಎಂಬ ಭಂಜಕ ಜನಸಂಘಟನೆಗಳು ಹೆಚ್ಚು ಹೆಚ್ಚು ಕ್ರಿಯಾಶೀಲಗೊಂಡವು. ಇವರನ್ನು ಪುರಸ್ಕರಿಸಲೆಂದೇ ಅವ್ವ, ಅಕ್ಕ, ಅಮ್ಮ, ಅಪ್ಪ ಎಂಬ ಪ್ರಶಸ್ತಿಗಳು ಮೊದಲ್ಗೊಂಡು ಬುದ್ಧ, ಬಸವ, ಅಂಬೇಡ್ಕರ್, ಕುವೆಂಪು ಅವರನ್ನು ಗುರಾಣಿಯಾಗಿಸಿ ಜಾತ್ಯಸಗಳಿಂದ ಸಮಾಜವನ್ನು ತಿವಿತಿವಿದು ಉದ್ದೀಪನಗೊಳಿಸಲಾಯಿತು.

ಅಸಲಿಗೆ ಪ್ರಜಾಪ್ರಭುತ್ವದ ಬಹುತ್ವ ಮಾದರಿಯ ಬಹುದೇವೋಪಾಸನೆಯ ದೇವಲೋಕವನ್ನು ಪ್ರತಿಪಾದಿಸುವ ಹಿಂದೂ ಸಂಸ್ಕೃತಿಯನ್ನು ‘ಜಾತಿ ಅಸ್ಮಿತೆ’ ಎಂಬ ಸುಂದರ ಸ್ವಪ್ನದಿಂದ ವಿಚ್ಛಿದ್ರ ಗೊಳಿಸಿ ಸರ್ವಾಧಿಕಾರ ಪ್ರತಿಪಾದನೆಯ ಅಬ್ರಹಾಮಿಕ್ ತತ್ತ್ವಗಳನ್ನು ‘ಅಲ್ಪಸಂಖ್ಯಾತ’ ಎಂಬ ಸುಂದರ ಕಲ್ಪನೆಯಿಂದ ಅಸಮಾನತೆಯನ್ನು ಅಸಾಮಾನ್ಯವಾಗಿ ಜನಜನಿತ ಮಾಡಲಾಯಿತು.

ಅಸಲಿಗೆ ಧರ್ಮ, ಜಾತಿ ಎನ್ನುವುದು ಖಾಸಗಿಯಾಗಿ ಇರಬೇಕಾದುದನ್ನು ಇಂದು ಪ್ರಜಾಪ್ರಭುತ್ವದ ಏಕಮಾತ್ರ ಸಾಂವಿಧಾನಿಕ ಅಂಶವಾಗಿಸಲಾಯಿತು. ಅಲ್ಲಿಗೆ ದೇಶ, ರಾಜ್ಯ, ಪಟ್ಟಣ, ಬೀದಿ, ಮನೆ, ಮನಗಳಲ್ಲಿ ದ್ವಂದ್ವ ಶಾಶ್ವತವಾಗಿ ನೆಲೆಯೂರಿತು. ಪರಂಪರೆ, ಇತಿಹಾಸ, ಸತ್ಯ, ತರ್ಕ ನೆಗೆದು ಬಿದ್ದವು. ಬಸವಣ್ಣನ ವಿಡಂಬನಾತ್ಮಕ ವಚನಗಳು ಅತಾರ್ಕಿಕವಾಗಿ ಬಳಕೆಯಾದವು. ಅರುಹು ಸತ್ತು ಕುರುಹೇ ಸ್ವಸ್ಥ ಸಮಾಜದ ಅಸ್ವಸ್ಥ ಆಸನದ ಕುರುವಾಯಿತು. ಹೀಗೆ ಪ್ರಾಯೋಜಕರ ಮೊದಲ ಅಧಿಕಾರಾವಧಿಯಲ್ಲಿ ಈ ಮಾದರಿಯನ್ನು ಸ್ಥಾಪಿಸಿ ಯಶಸ್ವಿಯಾಗಿಸಲಾಯಿತು!

ಈಗ ಪ್ರಾಯೋಜಕರ ಎರಡನೇ ಅವಽಯಲ್ಲಿ ಮತ್ತದೇ ವೀರಶೈವ ಲಿಂಗಾಯತ ಪ್ರತ್ಯೇಕ ಎಂಬ ಭಂಜನೆಯೊಂದಿಗೆ ದೊಡ್ಡಮಟ್ಟದಲ್ಲಿ ಹಿಂದೂಗಳ ಭಂಜಕ ಕೃತ್ಯಕ್ಕೆ ಯೋಜನೆ ರೂಪಿಸಲಾಗಿದೆ. ಹಿಂದೂ-ಜೈನ, ವೈದಿಕ-ಅವೈದಿಕ ಎನ್ನುವ ಭಂಜನೆಗೆ ಈಗ ಹೆಚ್ಚು ಒತ್ತು ಕೊಟ್ಟು ಧರ್ಮಸ್ಥಳದ ಮೇಲೆ ಆಕ್ರಮಣವಾಗುತ್ತಿರುವುದನ್ನು ನಾಡು ನೋಡುತ್ತಿದೆ. ಈ ಬಗ್ಗೆ ತನಿಖೆಯಾಗುತ್ತಿರುವುದರಿಂದ ಇದನ್ನು ಹೆಚ್ಚು ವಿಶ್ಲೇಷಿಸಬೇಕಿಲ್ಲ.

ಆದರೆ ಈ ಎಲ್ಲ ಆಗುಹೋಗುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಇದೆಲ್ಲವೂ ಬಲಿತ-ದಮನಿತ, ಮಾಲೀಕ-ಕಾರ್ಮಿಕ ಎನ್ನುವ ಕಮ್ಯುನಿ ಸಾಮಾಜಿಕ ಸಿದ್ಧಾಂತದ ವಿಸ್ತೃತ ಅಂಶವೇ ಆಗಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ತಮ್ಮ ಭಂಜಕ ಯೋಜನೆಯ ಕಾರ್ಯರೂಪಕ್ಕಾಗಿಯೇ ಬೂಕರ್ ಸಮಾನ ಬಹುಮಾನ ವಿಜೇತೆಯ ಬಳಕೆ ಆಗುತ್ತಿದೆ ಎಂದು ಏಕೆ ಅನ್ನಿಸಬಾರದು? ವಾಕ್ ಸ್ವಾತಂತ್ರ್ಯ ಎಂದು ಭಜಿಸುವ ಬುದ್ಧಿಜೀವಿಗಳು ತಮ್ಮ ನಾಯಕರ ಭಂಜಕ ಕೃತ್ಯದ ನಡೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಕಟುವಾಗಿ ಟೀಕಿಸಿದವರ ಮೇಲೆ ಮೊಕದ್ದಮೆ ಹೂಡುವುದನ್ನು ಚಪ್ಪಾಳೆ ತಟ್ಟಿ ಸ್ವಾಗತಿಸುತ್ತಿದ್ದಾರೆ!

ಆದರೆ ಪ್ರಜಾಪ್ರಭುತ್ವದ ಸಾಂವಿಧಾನಿಕ ನ್ಯಾಯಾಂಗವು ಖುದ್ದು ಸರಕಾರಿ ಪ್ರಾಯೋಜಕತ್ವದಲ್ಲಿ ಪರೋಕ್ಷವಾಗಿ ಸಮಾಜದ ಸ್ವಾಸ್ಥ್ಯ ಕೆಡಿಸುವ ರಾಜಕಾರಣಿ ಕೃತ್ಯಗಳಿಗೆ ಏನೂ ಮಾಡದಾಗಿದೆ. ಇದು ಬಹುದೊಡ್ಡ ಪ್ರಜಾಪ್ರಭುತ್ವದ ಗರಿಮೆಯೋ ಏನೋ ಎಂಬುದು ಚಿಂತನಾರ್ಹ. (ಮುಂದುವರಿಯುವುದು)

(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)