ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ravi Hunj Column: ಅಖಂಡ ವೀರಶೈವ (ಲಿಂಗಾಯತ) ಧರ್ಮೀಯರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು

ಗುರುವು ಸ್ಥೂಲ, ಸೂಕ್ಷ್ಮ ಹಾಗೂ ಕಾರಣ ಶರೀರಗಳಿಗೆ ಪ್ರಾಪ್ತವಾಗಿದ್ದ ಕಾರ್ಮಿಕ, ಮಾಯಾ ಹಾಗೂ ಆಣವವೆಂಬ ಮಲಗಳನ್ನು ಕ್ರಿಯಾ, ಮಂತ್ರ ಹಾಗೂ ವೇಧಾದೀಕ್ಷೆಗಳಿಂದ ಪರಿಹರಿಸಿ ಸ್ಥೂಲಶರೀರ (ತ್ಯಾಗಾಂಗ)ದಲ್ಲಿ ಇಷ್ಟಲಿಂಗವನ್ನೂ ಸೂಕ್ಷ್ಮ ಶರೀರ (ಭೋಗಾಂಗ)ದಲ್ಲಿ ಪ್ರಾಣಲಿಂಗವನ್ನೂ, ಕಾರಣ ಶರೀರ (ಯೋಗಾಂಗ)ದಲ್ಲಿ ಭಾವಲಿಂಗವನ್ನೂ ಸಂಬಂಧ ಮಾಡುವನು. ಈ ಮಲ-ತ್ರಯಗಳ ನಿವಾರಣೆ ಯೆಂದರೆ ಜೀವನನ್ನು ಸುತ್ತಿಕೊಂಡಿದ್ದ ಮೂರು ವಿಧವಾದ ಬಂಧನಗಳಿಂದ ಬಿಡುಗಡೆ ಮಾಡುವು ದಾಗಿದೆ.

ಅಖಂಡ ವೀರಶೈವ (ಲಿಂಗಾಯತ) ಧರ್ಮೀಯರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು

Ashok Nayak Ashok Nayak Aug 19, 2025 11:42 AM

ಬಸವ ಮಂಟಪ

ರವ ಹಂಜ್

(ಭಾಗ-2)

ಕಾರ್ಮಿಕಮಲವು ದ್ರವ್ಯ ಸಂಬಂಧಿಯಾದುದು. ಈಷಣತ್ರಯ ಯುಕ್ತವಾದುದು. ಅರ್ಥದ ಆರ್ತವನ್ನೂ ಈಷಣತ್ರಯಗಳನ್ನೂ ಸಮೂಲವಾಗಿ ತ್ಯಜಿಸಿದಾಗಲೇ ಕಾರ್ಮಿಕಮಲದ ನಿವೃತ್ತಿ ಯು, ಧನಕನಕಾದಿಗಳು ತನ್ನವೆಂದು ಹೋರುವುದು ಒಂದು ಭ್ರಾಂತಿ. ಈ ಧನವನ್ನು ಹುಟ್ಟುವಾಗ ಯಾರೂ ತಂದಿರುವುದಿಲ್ಲ.

ತಾತಮುತ್ತಾತರೂ ತರುವುದಿಲ್ಲ. ಹೋಗುವಾಗ ಹರಣದೊಡನೆ ಒಯ್ಯುವುದಿಲ್ಲ. ನಟ್ಟ ನಡುವೆ ಒಡೆತನ ಹೇಗೆ ತಾನೇ ಬಂದೀತು. ಹಾಗಾಗಿ ಜೀವನೋಪಾಯಕ್ಕೆಂದೂ ಅದನ್ನು ಕೂಡಿಡತಕ್ಕುದಲ್ಲ ಎನ್ನಲಾಗಿದೆ.

ಗುರುವು ಸ್ಥೂಲ, ಸೂಕ್ಷ್ಮ ಹಾಗೂ ಕಾರಣ ಶರೀರಗಳಿಗೆ ಪ್ರಾಪ್ತವಾಗಿದ್ದ ಕಾರ್ಮಿಕ, ಮಾಯಾ ಹಾಗೂ ಆಣವವೆಂಬ ಮಲಗಳನ್ನು ಕ್ರಿಯಾ, ಮಂತ್ರ ಹಾಗೂ ವೇಧಾದೀಕ್ಷೆಗಳಿಂದ ಪರಿಹರಿಸಿ ಸ್ಥೂಲಶರೀರ (ತ್ಯಾಗಾಂಗ)ದಲ್ಲಿ ಇಷ್ಟಲಿಂಗವನ್ನೂ ಸೂಕ್ಷ್ಮ ಶರೀರ (ಭೋಗಾಂಗ)ದಲ್ಲಿ ಪ್ರಾಣಲಿಂಗವನ್ನೂ, ಕಾರಣ ಶರೀರ (ಯೋಗಾಂಗ)ದಲ್ಲಿ ಭಾವಲಿಂಗವನ್ನೂ ಸಂಬಂಧ ಮಾಡುವನು. ಈ ಮಲ-ತ್ರಯಗಳ ನಿವಾರಣೆಯೆಂದರೆ ಜೀವನನ್ನು ಸುತ್ತಿಕೊಂಡಿದ್ದ ಮೂರು ವಿಧವಾದ ಬಂಧನಗಳಿಂದ ಬಿಡುಗಡೆ ಮಾಡುವುದಾಗಿದೆ.

ಈ ಮಲತ್ರಯಗಳನ್ನೇ ವಿಸ್ತರಿಸಿ ಸೂತಕಗಳು ಎಂದು ಬಸವಣ್ಣನವರೂ ತಮ್ಮ ಈ ವಚನದಲ್ಲಿ ಅನುಮೋದಿಸಿದ್ದಾರೆ: “ಜನನಸೂತಕ, ಕುಲಸೂತಕ, ರಜಃಸೂತಕ, ಎಂಜಲಸೂತಕ, ಪ್ರೇತಸೂತಕ ಎಂಬಿವಾದಿಯಾದ ಸರ್ವಸೂತಕಂಗಳು ಅಂಗ ಲಿಂಗ ಸಂಬಂಧಿಗಳಾದ ಲಿಂಗಭಕ್ತರಿಗಿಲ್ಲ ನೋಡಾ, ಅದೆಂತೆಂದೊಡೆ; ಆದಿಬಿಂದುರ್ಭವೇದ್ಬೀಜಂ ಬೀಜಮಧ್ಯಸ್ಥಿತಂ ಕುಲಂ ಬೀಜಂ ನಾಸ್ತಿ ಕುಲಂ ನಾಸ್ತಿ ತಸ್ಮೈ ಶಿವಕುಲಂ ಭವೇತ್ ಎಂದುದಾಗಿ ಪೂರ್ವಾಚಾರವನಳಿದು ಪುನರ್ಜಾತನಾಗಿ, ಅಂಗದ ಮೇಲೆ ಲಿಂಗಸಾಹಿತ್ಯನಾದ ಭಕ್ತಂಗೆ ಜನನಸೂತಕವೆಂಬುದೆ ಪಾತಕ ನೋಡಾ.

ಇದನ್ನೂ ಓದಿ: Ravi Hunj Column: ಬಸವಚರ್ಮ ಹೊದ್ದ ತೋಳಗಳು ಹೊರಡಿಸಿದ ಫರ್ಮಾನು

ಶಿವಭಕ್ತರಾದ ಬಳಿಕ ಭವಿನೇಮಸ್ತರ ಕಳೆದು ಶಿವಕುಲವೆ ಕುಲವಾದ ಭಕ್ತರಿಗೆ ಕುಲಸೂತಕವೆಂಬುದೆ ಪಾತಕ ನೋಡಾ. ಗುರುಪಾದತೀರ್ಥ, ಲಿಂಗಪಾದತೀರ್ಥ, ಜಂಗಮಪಾದತೀರ್ಥ ಆದಿಯಾದ ಲಿಂಗೋದಕ, ಪಾದೋದಕ, ಪ್ರಸಾದೋದಕ ಎಂಬ ತ್ರಿವಿಧೋದಕದಲ್ಲಿ ಸರ್ವಪಾಕಪ್ರಯತ್ನ, ನಾನಾ ಕ್ರಿಯಾವಿಧಾನ, ಸ್ನಾನಪಾನಂಗಳಿಂದ ಬಾಹ್ಯಾಭ್ಯಂತರಂ ಶುಚಿಯಾದ, ಶುದ್ಧ ನಿರ್ಮಲ ದೇಹಿಯಾದ ಭಕ್ತಂಗೆ ರಜಃಸೂತಕವೆಂಬುದೆ ಪಾತಕ ನೋಡಾ. ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದಯುಕ್ತ ವಾದ ಸದಾಸನ್ನಹಿತ ಭಕ್ತಂಗೆ ಎಂಜಲಸೂತಕವೆಂಬುದೆ ಪಾತಕ ನೋಡಾ. ಗುರುವಿನಿಂ ಜನನ, ಚರಲಿಂಗದಿಂ ಸ್ಥಿತಿ, ಪರಮಪಾವನ ಘನಮಹಾಲಿಂಗದೊಳೈಕ್ಯ. ಅದೆಂತೆಂದೊಡೆ; ಸದ್ಗುರೋಃ ಪಾಣಿಜಾತಸ್ಯ ಸ್ಥಿತೇ ಸದ್ಭಕ್ತಸಂಗಿನಾಂ ಲೀಯತೇ ಚ ಮಹಾಲಿಂಗೀ ವೀರಶೈವೋತ್ತಮೋತ್ತಮಂ ಎಂದುದಾಗಿ, ನಿಜಲಿಂಗೈಕ್ಯವಾದ ಸದ್ಭಕ್ತಂಗೆ ಪ್ರೇತಸೂತಕವೆಂಬುದೆ ಪಾತಕ ನೋಡಾ. ಇಂತೀ ಪಂಚಸೂತಕವನುಳ್ಳ ಪಾತಕಂಗಳ ಪಂಚಾಚಾರಯುಕ್ತನಾದ ಸದ್ಭಕ್ತಂಗೆ ಕಲ್ಪಿಸುವ ಪಂಚಮಹಾ ಪಾತಕರ ಅಘೋರ ನರಕದಲ್ಲಿಕ್ಕುವ ಕೂಡಲಸಂಗಯ್ಯ".

ದೀಕ್ಷಾ ವಿಧಾನ: ಇನ್ನು ಚೆನ್ನಬಸವಣ್ಣನು ನಿರೂಪಿಸಿದ ದೀಕ್ಷಾವಿಧಾನವು, “ಭವಿತನಕ್ಕೆ ಹೇಸಿ ಭಕ್ತನಾಗಬೇಕೆಂಬಾತನು ಸದ್ಗುರುವನರಸಿಕೊಂಡು ಬಂದು ಅವರ ಕಾರುಣ್ಯದಿಂದ ಮುಕ್ತಿಯ ಪಡೆವೆನೆಂದು ಆ ಶ್ರೀಗುರುವಿಂಗೆ ದಂಡ ಪ್ರಣಾಮವಂ ಮಾಡಿ ಭಯಭಕ್ತಿಗಳಿಂದ ಕರಂಗಳಂ ಮುಗಿದು ನಿಂದು ಎಲೆ ದೇವಾ! ಎನ್ನ ಭವಿತನವಂ ಹಿಂಗಿಸಿ ನಿಮ್ಮ ಕಾರುಣ್ಯದಿಂದೆನ್ನ ಭಕ್ತನಂ ಮಾಡುವದೆಂದು ಆ ಶ್ರೀಗುರುವಿಂಗೆ ಬಿನ್ನಹವಂ ಮಾಡಲು ಆ ಶ್ರೀಗುರುಲಿಂಗನು ಅಂತಪ್ಪ ಭಯಭಕ್ತಿ ಕಿಂಕರತೆಯೊಳಿಪ್ಪ ಶಿಶುವಂ ಕಂಡು ತಮ್ಮ ಕೃಪಾದಿಲೋಚನದಿಂ ನೋಡಿ ಆ ಭವಿಯ ಪೂರ್ವಾಶ್ರಯಮಂ ಕಳೆದು ಪುನರ್ಜಾತನಂ ಮಾಡಿ ಆತನ ಅಂಗದ ಮೇಲೆ ಲಿಂಗ ಪ್ರತಿಷ್ಠೆಯಂ ಮಾಡುವ ಕ್ರಮವೆಂತೆಂದಡೆ ಮೊದಲಲ್ಲಿ ಕಾಯಶುದ್ಧ ಜೀವಶುದ್ಧ ಆತ್ಮಶುದ್ಧವಂ ಮಾಡುವ ಕ್ರಮವೆಂತೆಂದಡೆ.

ಅದಕ್ಕೆ ಮಂತ್ರ: ಓಂ ಅಗ್ನಿರಿತಿ ಭಸ್ಮ ವಾಯುರಿತಿಭಸ್ಮ ಜಲರಿತಭಸ್ಮ ಸ್ಥಲರಿತಿಭಸ್ಥ ವೋಮೇತಿ ಭಸ್ಮ ಸೋಮೇತಿಭಸ್ಮ ಸೂರ್ಯರಿತಿಭಸ್ಮ ಆತಿಭಸ್ಮ ಎಂದು ಈ ಮಂತ್ರದಿಂದಾತನ ಅಷ್ಟತನುವಂ ಶುದ್ಧವಂ ಮಾಡುವುದು" ಎನ್ನುತ್ತಾ ವೀರಶೈವ (ಲಿಂಗಾಯತ) ದೀಕ್ಷಾ ವಿಧಾನಗಳ ಪ್ರತಿಯೊಂದು ಕ್ರಮ ಮತ್ತು ಕ್ರಮಕ್ಕೆ ಉದ್ಘೋಷಿಸಲೇಬೇಕಾದ ಮಂತ್ರಗಳನ್ನೂ ಬರೆದಿದ್ದಾನೆ.

ಅವುಗಳ ವಿಸ್ತಾರದ ಹರವು ಅಪಾರ. ಅವೆಲ್ಲವನ್ನೂ ಲೇಖನದಲ್ಲಿ ವಿವರಿಸಲಾಗದು. ಹಾಗಾಗಿ ಕೆಲವು ಕ್ರಮಗಳು ಮತ್ತವುಗಳ ಮಂತ್ರಗಳ ಉದಾಹರಣೆಯನ್ನಷ್ಟೇ ಇಲ್ಲಿ ಗಮನಿಸೋಣ. ಇನ್ನು ಜೀವಶುದ್ಧವ ಮಾಡುವ ಕ್ರಮವೆಂತೆಂದಡೆ, ಅದಕ್ಕೆ ಮಂತ್ರ: ಓಂಯಸ್ಯ ಪ್ರಾಣ ಪ್ರತಿಷ್ಠಾಮಂತ್ರಸ್ಯ ಬ್ರಹ್ಮ ವಿಷ್ಣು ಮಹೇಶ್ವರಾ ಈಶ್ವರ ಋಷಯಪಿ ರುಗ್ಯಜುಸ್ಸಾಮಾಥರ್ವಣಶ್ಚಂದಾಂಸಿ ಸದಾಶಿವ ಮಹಾಪ್ರಾಣ ಇಹಪ್ರಾಣ ಮಮಜೀವ ಇಹಜೀವಸ್ವತಾಮಮ ಸಮಸ್ತ ಸರ್ವೇಂದ್ರಿಯಾಣಿ ವಾಜ್ಜನ ಶ್ಚಕ್ಷುಃ ಪ್ರೋತ್ರಜಿಹ್ವಾಪ್ರಾಣ ಮನೋಬುದ್ಧಿ ಚಿತ್ತವಿಜ್ಞಾನ ಮಮಶರೀರೇ ಆಗತ್ಯಾಸುಖಂ ಸ್ಥಿರಂ ತಿಷ್ಯತಿ.

ಇನ್ನು ಆತ್ಮಶುದ್ಧವ ಮಾಡುವ ಕ್ರಮವೆಂತೆಂದಡೆ, ಅದಕ್ಕೆ ಮಂತ್ರ ಓಂ ಶಿವಾತ್ಮಕಂ ಸುಖಂ ಜೀವಂ ಜೀವಾತ್ಮಕ ಸುಖಂ ಶಿವಃ ಶಿವಜೀವಾತ್ಮ ಸಂಯೋಗೇ ಪ್ರಾಣಲಿಂಗ ಯಥಾಭವೇತ್ ಎಂದು ಈ ಮಂತ್ರದಿಂದ ಆತನ ಆತ್ಮವಶುದ್ಧ ಮಾಡುವುದು. ಇನ್ನು ಮನೋಬುದ್ದಿ ಚಿತ್ತ ಅಹಂಕಾರವೆಂಬ ಅಂತಃಕರಣ ಚತುಷ್ಟಯಂಗಳಂ ನಿರ್ವತ್ರನೆಯಂ ಮಾಡುವ ಕ್ರಮವೆಂತೆಂದಡೆ ಮನದಲ್ಲಿ ಧ್ಯಾನ ವಾಗಿ ಬುದ್ಧಿಯಲ್ಲಿ ವಂಚನೆಯಿಲ್ಲದೆ ಚಿತ್ತದಾಸೋಹದಲ್ಲಿ ಅಹಂಕಾರವಿಲ್ಲದೆ ಜ್ಞಾನದಲ್ಲಿ ಇಂತೀ ಈ ಮರಿಯಾದೆಯಲ್ಲಿ ಚತುರ್ಥಮಂ ನಿರ್ವತ್ರನೆಯಂ ಮಾಡುವುದು. ಇನ್ನು ಏಕಭುಕ್ತ ಉಪವಾಸಂಗಳಂ ಮಾಡಿಸಿ ಪಂಚಭೂತಸ್ಥಾನದ ಆದಿದೇವತೆಗಳಂ ತೋರುವುದು ಅವು ಅವಾವೆಂದಡೆ ಸಾಕ್ಷಿ ಬ್ರಹ್ಮವಿಷ್ಣು ರುದ್ರಕ್ಕೆ ಕೇ ಗರ್ಭಗತಶ್ವೇತಃ ತಸ್ಮೈಶ್ರೀಗುರವೇ ನಮಃ ಎಂದು ಈ ಮಂತ್ರದಿಂದ ಆತನ ಪಂಚಭೂತಾತ್ಮ ಶುದ್ಧಾನತ್ಮನಂ ಮಾಡುವುದು.

ಈ ಪ್ರಕಾರದಲ್ಲಿ ಶುದ್ಧಾತ್ಮನ ಮಾಡಿದ ಬಳಿಕ ಆತನ ಗಣತಿಂಥಿಣಿಯ ಮುಂದೆ ನಿಂದಿರಿಸೂದು ನಿಂದಿರ್ದಾತನ ಆ ಗಣತಿಂಥಿಣಿಗೆ ದಂಡಪ್ರಣಾಮವಂ ಮಾಡಿಸುವ ಕ್ರಮವೆಂತೆಂದಡೆ, ಅದಕ್ಕೆ ಮಂತ್ರ: ಅನಂತ ಜನ್ಮ ಸಂಪ್ರಾಪ್ತ ಕರ್ಮಧನ ವಿದಾಹೀನೆ ಜ್ಞಾನಾನಲ ಪ್ರಭಾವೇನ ತಟ್ಟೆ ಶ್ರೀಗುರವೇ ನಮಃ ಪ್ರಣಮ್ಯಂ ದಂಡಮದ್ದೂವಂ ಅಷ್ಟಮಂತ್ರಣಮಾರ್ಚಯೇತ್ ಗುರುಶ್ರೀಪಾದ ಪಾದ್ಯಂಚ ಗಂಧಪುಷ್ಪಾಕ್ಷತಾ ದಿಭಿಃ ಅನ್ಯಥಾ ವಿತ್ತಹೀನೋಪಿ ಗುರವೇ ತತ್ಪರಾಯಣಂ ಕೃತ್ವಾ ದಂಡ ನಮಸ್ಕಾರಂ ಸ್ವಕರೀರಂ ನಿವೇದಯೇತ್ ಎಂದು ಈ ಮಂತ್ರದಿಂದ ನಮಸ್ಕಾರವಂ ಮಾಡಿಸುವುದು.

ನಮಸ್ಕಾರವನ್ನು ಮಾಡಿದಾತನ ಕೈವಿಡಿದೆತ್ತುವ ಕ್ರಮವೆಂತೆಂದಡೆ, ಅದಕ್ಕೆ ಮಂತ್ರ ಗುರುಂ ಮಾತಾ ಗುರುಂ ಪಿತಾ ಗುರೂಣಾಂ ಬಾಂಧಮೇವ ಚ ಗುರು ದೈವಂ ಪರಂನಾಸ್ತೇ ತಸ್ಮೈ ಶ್ರೀ ಗುರವೇ ನಮಃ ಓಂ ಗುರುದೇವೋಭವ ಮಾತೃದೇವೋಭವ ಪಿತೃದೇವೋಭವ ಆಚಾರ್ಯದೇವೋಭವ ಅತಿಥಿ ದೇವೋಭವ ಎಂದು ಈ ಮಂತ್ರದಿಂದ ಆತನ ಕೈವಿಡಿದೆತ್ತುವುದು.

ಇನ್ನು ಭೂಶುದ್ಧವ ಮಾಡಿದ ಬಳಿಕ ಆತನ ಚೌಕಮಧ್ಯದಲ್ಲಿ ಕುಳ್ಳಿರಿಸುವ ಕ್ರಮ, ನಾಲ್ಕು ಕಳಶದ ಪ್ರತ್ಯೇಕ ಪ್ರಧಾನ ದೇವತೆಗಳನ್ನು ಕುಳ್ಳಿರಿಸಿ ಗುರು ಕಳಶಮಂ ಸ್ಥಾಪನೆ ಮಾಡುವ ಕ್ರಮಗಳಿವೆ.

ತದನಂತರ ಜಲಶುದ್ದವ ಮಾಡುವ ಕ್ರಮವೆಂತೆಂದಡೆ, ಅದಕ್ಕೆ ಮಂತ್ರ: ಓಂ ನಮಃ ಶಿವಾಯ ನಮಸ್ತೇಸ್ತು ಭಗವಾನ್ ವಿಶ್ವೇಶ್ವರಾಯ ತ್ರಯಂಬಕಾಯ ತ್ರಿಪುರಾಂತಕಾಯ ತ್ರಿಕಾಲಾಗ್ನಿಕಾಲಾಯ ಕಾಲಾಗ್ನಿರುದ್ರಾಯ ನೀಲಕಂಠಾಯ ಸರ್ವೆಶ್ವರಾಯ ಸದಾಶಿವಾಯ ಮಹಾದೇವಾಯ ನಮಃ ಓಂ ನಿಧಾನಾಯನಮಃ ನಿಧನಪಶ್ಚಂತಿಕಾಯೇಂ ನಮಃ ಊರ್ಧ್ವಯೇಂ ನಮಃ ಊರ್ಧ್ವಲಿಂಗಯೇಂ ನಮಃ ಹಿರಣ್ಯಾಯೆ ನಮಃ ಹಿರಣ್ಯ ಲಿಂಗಾಯೇ ನಮಃ ದಿವ್ಯಾಯೇ ನಮಃ ದಿವ್ಯಲಿಂಗಾಯೇಂ ನಮಃ ಜೇಷ್ಟಾಯೇಂ ನಮಃ ಜೇಷ್ಟಲಿಂಗಾಯೇಂ ನಮಃ ಶ್ರೇಷ್ಠಾಯೇಂ ನಮಃ ಶ್ರೇಷ್ಠಲಿಂಗಾಯೇಂ ನಮಃ ಜ್ವಾಲಾಯ ನಮಃ ಜ್ವಾಲಾಲಿಂಗಾಯೇಂ ನಮಃ ಸ್ಥೂಲಾಯ ನಮಃ ಸ್ಥೂಲಲಿಂಗಾಯೇಂ ನಮಃ ಸೂಕ್ಷ್ಮಾಯ ನಮಃ ಸೂಕ್ಷ್ಮ ಲಿಂಗಾಯೇಂ ನಮಃ ಶೂನ್ಯಾಯ ನಮಃ ಶೂನ್ಯಲಿಂಗಾಯೇಂ ನಮಃ....

ಸಹವೀರ್ಯಂ ಕರವಾವಹೈ ತೇಜಸ್ವಿನಾವಧಿತಮಸ್ತು ಮಾ ವಿದ್ವಿಷವತ್ ಓಂ ಶಾಂತಿ ಶಾಂತಿ ಸರ್ವಶಾಂತಿರಸ್ತು ಎಂದು ಈ ಮಂತ್ರದಿಂದ ಜಲಶುದ್ಧವಂ ಮಾಡುವುದು ಎನ್ನುತ್ತದೆ.

ಅಲ್ಲದೇ ಕುಮಾರರಾವನು ಜಲಾಧಿವಾಸಂ ಮಾಡುವ ಕ್ರಮ, ಹಸ್ತವು ಶುದ್ಧವ ಮಾಡುವ ಕ್ರಮ, ವಿಭೂತಿಯ ಧರಿಸುವ ಕ್ರಮ, ರುದ್ರಾಕ್ಷಿಯ ಧರಿಸುವ ಕ್ರಮ, ಜಲಾಽವಾಸದೊಳಗಣ ಕುಮಾರ ರಾವನು ತೆಗೆಯುವ ಕ್ರಮ, ಶಿಲೆಯ ಪೂರ್ವಾಶ್ರಯವಂ ಕಳೆಯುವ ಕ್ರಮ, ಶಿಲೆಗೆ ಪ್ರಾಣ ಪ್ರತಿಷ್ಠೆಯಂ ಮಾಡುವ ಕ್ರಮಗಳಿಗೆ ಮಂತ್ರಗಳಿವೆ.

ತದನಂತರ ದೇವರಿಗೆ ಸ್ವಪನಕ್ಕೆರೆವರಕ್ಕೆ ವಸ, ಗಂಧ ಅಕ್ಷತೆ, ಪುಷ್ಪ, ಧೂಪ, ದೀಪ, ತಾಂಬೂಲ, ಮಂತ್ರಪುಷ್ಪ, ಅನುಷ್ಠಾನ, ಅನುಷ್ಠಾನ ಮಾಡಿದ ಬಳಿಕ ಆ ಗುರುವು ಶಿಷ್ಯನ ಉರಸೆಜ್ಜೆಯಲ್ಲಿ ಲಿಂಗವ ಧರಿಸುವ ಕ್ರಮ, ಶಿಷ್ಯನ ವಾಯುಪ್ರಾಣಿಯಂ ಕಳೆದು ಲಿಂಗಪ್ರಾಣಿಯಂ ಮಾಡುವ ಕ್ರಮ, ಆ ಶಿಷ್ಯಂಗೆ ಆಗೋದಕವನು ಸರ್ವಾಂಗದಲ್ಲಿ ತಳಿದ ಕ್ರಮ, ಆ ಶಿಷ್ಯನ ಫಲದಲ್ಲಿ ವಿಭೂತಿಯು ಧರಿಸುವ ಕ್ರಮ, ಶಿಷ್ಯನ ದುರಾಕ್ಷರವಂ ತೊಡೆವ ಕ್ರಮ, ಶಿಷ್ಯನ ಲಲಾಟದಲ್ಲಿ ಶಿವ ಲಿಖಿತವಂ ಮಾಡುವ ಕ್ರಮ, ಶಿಷ್ಯನ ಕರ್ಣದಲ್ಲಿ ಶಿವಮಂತ್ರಮಂ ನಿರೂಪಿಸುವ ಕ್ರಮಗಳೆಲ್ಲಕ್ಕೂ ವಿಶೇಷ ಮಂತ್ರಗಳಿವೆ.

ಈ ಎಲ್ಲಾ ಮಂತ್ರಾಚರಣೆಗಳ ನಂತರ “ಶತಪತ್ರದೊಳಗಣ ಮನಸಾಪ್ರಾಣದೊಳಗಿಪ್ಪ ಪ್ರಾಣ ಲಿಂಗಕ್ಕೆ ಒಂದು ಇಷ್ಟಲಿಂಗಸ್ಥಲವಂ ತೋರಿಸಿ ಆ ಶಿಷ್ಯನ ಕೃತಕೃತ್ಯನಂ ಮಾಡುವುದು ಕೂಡಲ ಚನ್ನಸಂಗಯ್ಯ ನಿಮ್ಮ ಧರ್ಮ ನಿಮ್ಮ ಧರ್ಮ" ಎಂದು ಚೆನ್ನಬಸವಣ್ಣ ಸಮಗ್ರವಾಗಿ ದೀಕ್ಷಾ ವಿಧಾನಗಳನ್ನು ನಿರೂಪಿಸಿದ್ದಾನೆ. ಈ ಎಲ್ಲಾ ವಿಧಿ ವಿಧಾನಗಳನ್ನು ಚಾಚೂತಪ್ಪದೆ ಪಾಲಿಸು ವವರು ಪಂಚಪೀಠಾಽಶರು ಮತ್ತು ಗುರುವರ್ಗದ ಮಠಾಧೀಶರು!

ತಮ್ಮ ಹುಟ್ಟಿನ ಅಣವ ಮಲ, ಜಾತಿಯೆಂಬ ಕುಲದ ಮಲ, ಜಾತಿಪೀಠವೆಂಬ ಭೌತಿಕ ಆಸ್ತಿಯ ಕಾರ್ಮಿಕ ಮಲಗಳ ಮಲವೇ ಮೈವೆತ್ತಂತಿರುವ ಈ ನಾಸ್ತಿಕ, ಕಮ್ಯುನಿ ಮಠಾಧೀಶ ಒಕ್ಕೂಟಿಗರು ಚೆನ್ನಬಸವಣ್ಣನು ಹೇಳಿರುವ ದೀಕ್ಷಾವಿಧಾನದ ಯಾವುದೇ ಮಂತ್ರವನ್ನು ಉಚ್ಚರಿಸಬಲ್ಲರೇ? ಹೀಗೆ ಮಲತ್ರಯಿಗಳಾಗಿ ತಮ್ಮ ಮಲತ್ರಯಗಳ ದುರ್ವಾಸನೆಯನ್ನು ಮುಚ್ಚಿಕೊಳ್ಳಲು ಬಸವ/ಕಲ್ಯಾಣ/ವಚನಗಳ ಪುನುಗನ್ನು ಪೂಸಿಕೊಂಡರೆ ಮಾಹಿತಿ ತಂತ್ರಜ್ಞಾನದ ಆಧುನಿಕ ಜಗತ್ತು ಅರಿಯದೇ? ಅಖಂಡ ವೀರಶೈವ (ಲಿಂಗಾಯತ) ಧರ್ಮೀಯರು ಪ್ರಶ್ನಿಸಿಕೊಂಡು ಆತ್ಮವಿಮರ್ಶೆ ಮಾಡಿಕೊಳ್ಳ ಬೇಕು.

ಜಗತ್ತಿನ ಎಲ್ಲಾ ಧರ್ಮಗಳಲ್ಲಿಯೂ ಇರುವಂಥ ಗುರುಶ್ರೇಣಿಗಳಂತೆಯೇ ಅಖಂಡ ವೀರಶೈವ (ಲಿಂಗಾಯತ) ಧರ್ಮದಲ್ಲಿಯೂ ಶ್ರೇಣಿಗಳಿವೆ. ಈ ಧಾರ್ಮಿಕ ಶ್ರೇಣಿಗಳ ಕಾರಣ ಗುರುವರ್ಗದ ಠೇಂಕಾರ ಮತ್ತು ವಿರಕ್ತರ ಠೀವಿ ಆರಂಭಗೊಂಡು ಈಗ ವೀರಶೈವ ಬೇರೆ ಲಿಂಗಾಯತ ಬೇರೆ ಎಂಬ ಕಂದಕಕ್ಕೆ ಕಾರಣವಾಗಿದೆಯೇ ಹೊರತು ಯಾವ ಸೈದ್ಧಾಂತಿಕ ಧಾರ್ಮಿಕ ಭಿನ್ನತೆಯಿಂದಲ್ಲ. ಈ ಠೇಂಕಾರ-ಠೀವಿಗೆ ತುಪ್ಪ ಸುರಿದ ಪಟ್ಟಭದ್ರ ಹಿತಾಸಕ್ತಿಗಳು ಇಂದು ವಿರಕ್ತರನ್ನು ಆಪೋಶನ ಪಡೆದಿವೆ.

ಈ ಆಪೋಶನದ ಕಾರಣವೇ ವಚನಕಾರ ಚೆನ್ನಬಸವಣ್ಣನ ಎಲ್ಲ ದೀಕ್ಷಾ ವಿಧಾನಗಳನ್ನು ಕಟ್ಟೆಸೆದು ವಿರಕ್ತರು ಊಟದ ಮೇಜಿನ ಮೇಲೆ ಪ್ರಭಾವಿಗಳನ್ನು ಕೂರಿಸಿ ಲಿಂಗದೀಕ್ಷೆ ಕೊಟ್ಟು ಪತ್ರಿಕೆಗಳಲ್ಲಿ ರಾರಾಜಿಸುತ್ತಾರೆ. ಏಕೆಂದರೆ ಖುದ್ದು ಅವರಿಗೇ ಚೆನ್ನಬಸವ ಪ್ರಣೀತ ದೀಕ್ಷಾವಿಽ ವಿಧಾನದಂತೆ ದೀಕ್ಷೆಯಾಗಿಲ್ಲ ಮತ್ತು ಶಾಸ್ತ್ರೀಯವಾಗಿ ಇವರು ಲಿಂಗದೀಕ್ಷೆ ಕೊಡಲು ಅರ್ಹರೂ ಅಲ್ಲ! ಹೀಗಿದ್ದಾಗ ಯಾರು ನಿಜ ವೀರಶೈವ (ಲಿಂಗಾಯತ)ರು? ಎಂದು ಅಖಂಡ ವೀರಶೈವ (ಲಿಂಗಾ ಯತ) ಧರ್ಮೀಯರು ಪ್ರಶ್ನಿಸಿಕೊಂಡು ಆತ್ಮವಿಮರ್ಶೆ ಮಾಡಿಕೊಳ್ಳಬೇಕು.

ಇನ್ನು ಜಗತ್ತಿನ ಎಲ್ಲಾ ಧರ್ಮಗಳಲ್ಲಿಯೂ ಮಂತ್ರಗಳನ್ನು ಅವರವರ ಪುರಾತನ ಭಾಷೆಯಲ್ಲಿಯೇ ಈಗಲೂ ಉಚ್ಚರಿಸುತ್ತಾರೆ. ಏಕೆಂದರೆ ಐತಿಹಾಸಿಕ ಪ್ರಾಮುಖ್ಯ, ಪರಂಪರೆ, ತತ್ವಶಾಸ್ತ್ರ ಮತ್ತು ದಿವ್ಯಾರಾಧನೆಯ ಭಾಷೆಯಾಗಿ ಲ್ಯಾಟಿನ್, ಹೀಬ್ರೂ, ಸಂಸ್ಕೃತ ಭಾಷೆಗಳ ಬಳಕೆ ಈಗಲೂ ಇದೆ. ಈ ಭಾಷೆಗಳ ಋಕ್ಕು ಉಚ್ಚಾರವು ದಿವ್ಯ ಧನಾತ್ಮಕ ಶಕ್ತಿಯನ್ನು ಸೃಷ್ಟಿಸುತ್ತದೆ ಎಂಬ ನಂಬಿಕೆ ಇರುವು ದಲ್ಲದೆ ಇವುಗಳ ಧ್ವನಿ ತರಂಗಗಳ ಮೇಲೆ ವೈeನಿಕ ಸಂಶೋಧನೆಗಳು ನಡೆದಿವೆ.

ಹಾಗಾಗಿಯೇ ವ್ಯಾಟಿಕನ್ ಈಗಲೂ ಲ್ಯಾಟಿನ್ ಭಾಷೆಯ ಋಕ್ಕು, ಮಂತ್ರಗಳನ್ನೇ ಬಳಸುತ್ತಿದೆ. ಇದೇ ಯಾದಿಯಲ್ಲಿ ವಚನಕಾರರೂ ಸಂಸ್ಕೃತವನ್ನು ಬಳಸಿzರೆ. ಈಗ ಇಂಥ ಸಂಸ್ಕೃತ ವಾಕ್ಯಗಳಿರುವ ವಚನಗಳನ್ನು ಮತ್ತು ವೀರಶೈವ ಪದವಿರುವ ವಚನಗಳನ್ನು ತಿದ್ದುವ ಕಾರ್ಯವನ್ನು ‘ಬಸವ ಸಮಿತಿ’ ಮಾಡುತ್ತಿದೆ ಎಂದು ವೀರಣ್ಣ ರಾಜೂರ ಅವರು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಯವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅಧಿಕೃತವಾಗಿ ಹೇಳಿದ್ದಾರೆ.

ಅಂದರೆ ಇವರು ಹಿಂದಿನ ಜನ್ಮದಲ್ಲಿ ಬಸವಣ್ಣ ಮತ್ತಿತರೆ ವಚನಕಾರರ ಬದಿಯಲ್ಲಿ ಕುಳಿತು ಕರಡು ತಿದ್ದಿ ಕೊಟ್ಟಿದ್ದರೇನೋ ಎನ್ನುವಷ್ಟರ ಮಟ್ಟಿಗೆ ಈ ಜನ್ಮದಲ್ಲಿ ವಚನ ತಿದ್ದುವ ಕಾರ್ಯಕ್ಕೆ ಬಸವ ಸಮಿತಿಯ ಮೂಲಕ ಸಾಮೂಹಿಕವಾಗಿ ಕೈಹಾಕಿದ್ದಾರೆ. ಯಾವ ವಚನದ ಅಂಕಿತವನ್ನು ‘ಮಾತೆ’ ಮಹಾದೇವಿ ತಿದ್ದಿ ವೀರಶೈವ ಮಹಾಸಭಾದಿಂದ ಕಾನೂನಾತ್ಮಕವಾಗಿ ತದುಕಿಸಿಕೊಂಡಿದ್ದರೋ ಅದಕ್ಕಿಂತ ಘೋರವಾದ ಅಪರಾಧಕ್ಕೆ ಈ ಸಮಿತಿ ಕೈಹಾಕಿದೆ.

ಆದರೆ ವೀರಶೈವ ಮಹಾಸಭಾ ವಯೋವೃದ್ಧವಾಗಿ ನಿರ್ವೀರ್ಯಶವ ಮಹಾಸಭಾ ಆಗಿ ತಣ್ಣಗೆ ಮಲಗಿದೆ. ಹೀಗಿದ್ದಾಗ ಯಾರು ಅಖಂಡ ವೀರಶೈವ (ಲಿಂಗಾಯತ)ರ ಹಿತ ಕಾಪಾಡುವವರು? ಎಂದು ಅಖಂಡ ವೀರಶೈವ (ಲಿಂಗಾಯತ) ಧರ್ಮೀಯರು ಪ್ರಶ್ನಿಸಿಕೊಂಡು ಆತ್ಮವಿಮರ್ಶೆ ಮಾಡಿಕೊಳ್ಳ ಬೇಕು.

ಯಾವ ಕೋನದಿಂದಲೂ ಈ ಲಿಂಗಾಯತ ಮಠಾಧೀಶರ ಒಕ್ಕೂಟದ ಒಕ್ಕೂಟಿಗರು, ತಪ್ಪುತಪ್ಪಾಗಿ ವಚನಗಳನ್ನು ಕಮ್ಯುನಿಸ್ಟ್, ನಾಸ್ತಿಕತೆಗೆ ವ್ಯಾಖ್ಯಾನಿಸುವ ಬುದ್ಧಿಜೀವಿ ಪಂಡಿತರು, ವಚನಗಳನ್ನು ಹಿಗ್ಗಾಮುಗ್ಗಾ ತಿದ್ದುವ ಕಿಂಕರ್ತವ್ಯಮೂಢ ಸಂಶೋಧಕರಾದಿಯಾಗಿ ಎಲ್ಲರೂ ಬಸವ, ಶರಣ, ಲಿಂಗಾಯತ, ಲಿಂಗಾಯತತ್ವದ ಕನಿಷ್ಠ ಅಣುರೇಣು ತೃಣಕಾಷ್ಠಿಗಳಾಗಲೂ ಅರ್ಹರಲ್ಲ!

ಹಾಗಾಗಿ ಅಖಂಡ ವೀರಶೈವ (ಲಿಂಗಾಯತ) ಧರ್ಮೀಯರು ಪ್ರಶ್ನಿಸಿಕೊಂಡು ಆತ್ಮವಿಮರ್ಶೆ ಮಾಡಿ ಕೊಳ್ಳಬೇಕು. ಇನ್ನುಳಿದಂತೆ ಭಕ್ತ ಮಹಾಶಯ ಅಖಂಡ ವೀರಶೈವ (ಲಿಂಗಾಯತ) ಧರ್ಮೀಯರು ತಮ್ಮ ಧಾರ್ಮಿಕ ಲಾಂಛನವಾದ ಚೆನ್ನಬಸವಣ್ಣನ ಈ ವಚನವನ್ನು ಮನದಟ್ಟು ಮಾಡಿಕೊಂಡು ಗಣಾಚಾರರಾಗಿ ತಮ್ಮ ಗಣತಿಯ ನಿರ್ಣಯ ಕೈಗೊಳ್ಳತಕ್ಕದ್ದು: “ಕೇಶ ಕಾಷಾಯಾಂಬರ ವೇಷ ಲಾಂಛನವಾದಡೇನೊ? ಗ್ರಾಸಕ್ಕೆ ಭಾಜನರಲ್ಲದೆ ಲಿಂಗಕ್ಕೆ ಭಾಜನರಲ್ಲ. ಈ ಆಸೆಯ ವೇಷವ ಕಂಡಡೆ ಕಾರಹುಣ್ಣಿಮೆಯ ಹಗರಣವೆಂಬೆ ಕಾಣಾ ಕೂಡಲಚೆನ್ನಸಂಗಮದೇವಾ".

(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)