M J Akbar Column: ಅಮೆರಿಕವನ್ನು ದುರ್ಬಲಗೊಳಿಸುತ್ತಿರುವ ಸುಳ್ಳಿನ ದೇವರು
ನಮಗೆಲ್ಲಾ ತಿಳಿದಿರುವಂತೆ ಸ್ವರ್ಗವು ಹೆಚ್ಚುಕಮ್ಮಿ ಅಮೆರಿಕದಂತೆಯೇ ಇದೆ. ಅದರರ್ಥ ಅಲ್ಲಿ ಪ್ರಜಾ ಪ್ರಭುತ್ವ ಇದೆ ಅಂತಾಯಿತು. ಪ್ರಜಾಪ್ರಭುತ್ವ ಅಂದರೆ ಚುನಾವಣೆ. ಪ್ರಜಾಪ್ರಭುತ್ವದಲ್ಲಿ ಯಾರೋ ಒಬ್ಬರು ಅಥವಾ ಯಾವುದೋ ಒಂದು ವ್ಯವಸ್ಥೆ ಶಾಶ್ವತವಾಗಿ ಸಿಂಹಾಸನದ ಮೇಲೆ ಕುಳಿತುಕೊಳ್ಳಲು ಅವಕಾಶ ನೀಡುವುದಕ್ಕೆ ಸಾಧ್ಯವಿಲ್ಲ.

-

ಅಕ್ಬರ್ ನಾಮಾ (ಭಾಗ-1)
ಎಂ.ಜೆ.ಅಕ್ಬರ್
ದೇವರು ಈ ಜಗತ್ತನ್ನು ಏನೇನೋ ಲೋಪದೋಷಗಳ ಸಮೇತ ಸೃಷ್ಟಿಸಿದ ಮೇಲೆ ಯಾವತ್ತಾದರೂ ಜಗತ್ತನ್ನು ಮ್ಯಾನೇಜ್ ಮಾಡಿದ್ದಾನೆಯೇ? ಅದೇ ಟ್ರಂಪ್‌ರನ್ನು ನೋಡಿ. ತಮ್ಮ 2ನೇ ಅವಧಿಯ ಮೊದಲ ನೂರು ದಿನಗಳಲ್ಲೇ ತಾವು ಬೇರೆ ಬೇರೆ ದೇಶಗಳಿಗೆ ದುಬಾರಿ ತೆರಿಗೆ ವಿಧಿಸಿದ್ದರಿಂದ ಸಾಕಷ್ಟು ಪ್ರಯೋಜನವಾಗಿದೆ ಎಂಬುದನ್ನು ಅವರೇ ಹೇಳಿಕೊಂಡಿದ್ದಾರೆ!
ಟೀಕಾಕಾರರು ಒಂದೋ ಬಾಯ್ಮುಚ್ಚಿಕೊಳ್ಳಬೇಕು ಇಲ್ಲವೇ ತಮ್ಮಷ್ಟಕ್ಕೆ ತಾವು ಮೂಲೆಯಲ್ಲಿ ಕುಳಿತುಕೊಳ್ಳಬೇಕು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಾಗಲೇ ಜಗತ್ತಿನ ಒಂದೊಂದು ಮೂಲೆಯಲ್ಲೂ ತಾವು ಹೇಗೆ ಶಾಂತಿ ಸ್ಥಾಪನೆ ಮಾಡಿದ್ದು ಎಂಬುದನ್ನು ದಾಖಲೆ ಸಹಿತ ಎಲ್ಲರಿಗೂ ವಿವರಿಸಿದ್ದಾರೆ. ಅವರೀಗ ಸ್ವರ್ಗಕ್ಕೆ ಹೋಗಬೇಕಿದೆ. ಇದು ಬಹುಶಃ ದೇವರೊಬ್ಬರನ್ನು ಬಿಟ್ಟು ಇನ್ನೆಲ್ಲರಿಗೂ ಗುಡ್ ನ್ಯೂಸ್. ಹೇಗೇ ಅಳೆದು ತೂಗಿ ನೋಡಿದರೂ ದೇವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಗಲು ಸಾಧ್ಯವಿಲ್ಲ.
ಏಕೆಂದರೆ ಮೊದಲ ಅಣುಬಾಂಬ್ ಹಾಕಿಸಿದ್ದರ ಜವಾಬ್ದಾರಿ ದೇವರ ಮೇಲೇ ಇದೆ. ಅದರ ಪರಿಣಾಮ ಇನ್ನೂ ಮುಗಿದಿಲ್ಲ. ಇತಿಹಾಸದಲ್ಲಿ ಯುದ್ಧವೆಂಬುದು ಶುರುವಾಗಿದ್ದೇ ಸ್ವರ್ಗದಲ್ಲಿ. ಅಲ್ಲಿ ದೇವರು ಮತ್ತು ಸೈತಾನರ ಮಧ್ಯೆ ಆಡಮ್ ಮತ್ತು ಈವ್ ವಿಷಯದಲ್ಲಿ ಯುದ್ಧ ನಡೆಯಿತು.
ಹೀಗಾಗಿ ದೇವರು ಶಾಂತಿಪ್ರಿಯನಲ್ಲ ಎಂಬುದು ಸಾಬೀತಾಯಿತು. ಇನ್ನು, ಈ ಜಗತ್ತಿನಲ್ಲಿ ಎಲ್ಲ ಆಸ್ತಿಕರೂ, ತಾವು ಒಳ್ಳೆಯವರು ಮತ್ತು ಶತ್ರುಗಳು ಕೆಟ್ಟವರು ಎಂದೇ ನಂಬುತ್ತಾರೆ. ಜಗತ್ತಿನ ಮೊದಲ ದಂಪತಿ ಕೂಡ ಇದರ ಕ್ರೆಡಿಟ್ ತೆಗೆದುಕೊಳ್ಳಬಹುದು. ಯುದ್ಧದಲ್ಲಿ ನೈತಿಕತೆ ಕೂಡ ಎಷ್ಟು ವಿಚಿತ್ರವಾಗಿ ವರ್ತಿಸುತ್ತದೆ ಅಂದರೆ, ಆಡಮ್ ಮತ್ತು ಈವ್ ಕೂಡ ಐತಿಹಾಸಿಕ ದೇವ-ದಾನವರ ಯುದ್ಧದಲ್ಲಿ ಪಕ್ಷ ಬದಲಿಸಿ ದೇವರಿಗೇ ಮೋಸ ಮಾಡಿದ್ದರು.
ಟ್ರಂಪ್ ಸ್ವರ್ಗಕ್ಕೆ ಹೋದ ಮೇಲೆ ದೇವರಿಗೆ ಸವಾಲೆಸೆಯುವುದರಲ್ಲಿ ಯಾವ ಅನುಮಾನವೂ ಇಲ್ಲ. ಅವರು ಸ್ವರ್ಗದ ಐತಿಹಾಸಿಕ ದಾಖಲೆಗಳನ್ನು ಹೊರತೆಗೆಸುತ್ತಾರೆ. ನಂತರ ಸ್ವರ್ಗವನ್ನು ಮೊದಲಿ ಗಿಂತ ಚೆನ್ನಾಗಿ ಮರುನಿರ್ಮಾಣ ಮಾಡಲು ಉದ್ಯುಕ್ತರಾಗುತ್ತಾರೆ.
ಇದನ್ನೂ ಓದಿ: M J Akbar Column: ಮಮ್ದಾನಿ: ಅಮೆರಿಕದ ಬೀದಿಗಳಿಂದ ಎದ್ದ ಕೋಪ ಸಂದೇಶ
ನಮಗೆಲ್ಲಾ ತಿಳಿದಿರುವಂತೆ ಸ್ವರ್ಗವು ಹೆಚ್ಚುಕಮ್ಮಿ ಅಮೆರಿಕದಂತೆಯೇ ಇದೆ. ಅದರರ್ಥ ಅಲ್ಲಿ ಪ್ರಜಾಪ್ರಭುತ್ವ ಇದೆ ಅಂತಾಯಿತು. ಪ್ರಜಾಪ್ರಭುತ್ವ ಅಂದರೆ ಚುನಾವಣೆ. ಪ್ರಜಾಪ್ರಭುತ್ವದಲ್ಲಿ ಯಾರೋ ಒಬ್ಬರು ಅಥವಾ ಯಾವುದೋ ಒಂದು ವ್ಯವಸ್ಥೆ ಶಾಶ್ವತವಾಗಿ ಸಿಂಹಾಸನದ ಮೇಲೆ ಕುಳಿತುಕೊಳ್ಳಲು ಅವಕಾಶ ನೀಡುವುದಕ್ಕೆ ಸಾಧ್ಯವಿಲ್ಲ.
ಅದು ಒಳ್ಳೆಯದಲ್ಲ. ಅದು ಅಮೆರಿಕದ ಲಕ್ಷಣವಲ್ಲ. ಸೈತಾನರು ಸ್ವರ್ಗವನ್ನು ಸೋತ ನಂತರ ದೇವರಿಗೆ ಬೇರೆ ಯಾವುದೇ ಸವಾಲು ಇರಲಿಲ್ಲ. ಹೀಗಾಗಿ ದೇವರೇ ಇಲ್ಲಿಯವರೆಗೆ ಸ್ವರ್ಗವನ್ನು ಆಳುತ್ತಾ ಬಂದಿದ್ದು. ಆದರೆ ದೇವರ ಆ ಸುವರ್ಣ ಯುಗ ಮುಗಿಯಿತು. ಸ್ವರ್ಗದಲ್ಲೂ ಈಗ ಚುನಾವಣೆ ನಡೆಸುವ ಸಮಯ ಬಂದಿದೆ. ಸ್ವರ್ಗದಲ್ಲಿ ಮತದಾರರ ಸಂಖ್ಯೆ ಸ್ವಲ್ಪ ಹೆಚ್ಚೇ ಇದೆ. ಆದರೆ ಕ್ಯಾಲಿಪೋರ್ನಿಯಾದ (ಡ್ರಗ್ಸ್ ಬೇಕಾದಷ್ಟಿರುವ ಸ್ವರ್ಗ) ನೆರವಿನಿಂದ ದೊಡ್ಡಮತದಾರರನ್ನು ಕೂಡ ಸುಲಭವಾಗಿ ನಿಭಾಯಿಸಲು ಸಾಕಷ್ಟು ತಂತ್ರಜ್ಞಾನಗಳಿವೆ.
ಇನ್ನು, ಸಹಜವಾಗಿಯೇ ಟ್ರಂಪ್ ಅವರು ಗಂಧರ್ವರಿಗೆ ಮತದಾನದ ಹಕ್ಕಿಲ್ಲ ಎಂದು ಹೇಳುತ್ತಾರೆ. ಏಕೆಂದರೆ ಗಂಧರ್ವರು ದೇವರ ಗುಲಾಮರು. ನೋಡುವುದಕ್ಕೆ ಎಷ್ಟೇ ಸುಂದರವಾಗಿದ್ದರೂ ಅವರು ಗುಲಾಮರು. ಸ್ವತಂತ್ರ ಜನರಿಗೆ ಮಾತ್ರ ಮತದಾನದ ಹಕ್ಕಿರುತ್ತದೆ. ಟ್ರಂಪ್ ಅವರ ಚುನಾವಣಾ ವಿಷಯ ಕೂಡ ಈಗಾಗಲೇ ಸಿದ್ಧವಿದೆ. ಅವರು ರೆಡ್ ಕ್ಯಾಪ್‌ಗಳ ಮೇಲೆ ಅದನ್ನು ಬರೆಸುತ್ತಿದ್ದಾರೆ.
ಸ್ವರ್ಗದಲ್ಲಿ ನಡೆಯುವ ಮೊದಲ ಚುನಾವಣೆಯ ಘೋಷಣೆ ಪರಿಣಾಮಕಾರಿಯಾಗಿ, ಮತದಾರ ರನ್ನು ಸೆಳೆಯುವಂತೆ ಇರಬೇಕಲ್ಲವೇ? ಹೀಗಾಗಿ ಸಾಕಷ್ಟು ಯೋಚಿಸಿಯೇ, ‘ಟ್ರಂಪ್ ಹೇಳಿದ್ದೆಲ್ಲವೂ ಸತ್ಯವಾಗಿದೆ’ ಎಂಬ ಘೋಷವಾಕ್ಯ ರಚಿಸಲಾಗಿದೆ. ಇಲ್ಲಿಯವರೆಗೆ ದೇವರು ಮಾತ್ರ ಹೀಗೆ ಹೇಳಿ ಕೊಳ್ಳಲು ಸಾಧ್ಯವಿತ್ತು. ಆದರೆ ಈಗ ದೇವರಿಗೂ ಸ್ಪರ್ಧೆಯಿದೆ. ದೇವರ ಪ್ರಣಾಳಿಕೆಯಲ್ಲಿ ರುವ ದೋಷ ಕೂಡ ಎಲ್ಲರಿಗೂ ಗೊತ್ತಾಗಿದೆ.
ಆಡಮ್ ಮತ್ತು ಈವ್ ಬಗ್ಗೆ ಹಾಗೂ ಸೈತಾನನ ಬಗ್ಗೆ ಅವನು ಹೇಳಿದ್ದು ಸುಳ್ಳಾಗಿದೆ. ಆಡಮ್‌ನನ್ನು ಅವನ ಅಪ್ಪ-ಅಮ್ಮ ತುಂಬಾ ಪ್ರೀತಿಸುತ್ತಿದ್ದರು, ಆದರೆ ಅವನು ಸ್ವರ್ಗದಂತಿದ್ದ ಮನೆಯನ್ನು ಬಿಟ್ಟು ಹೊಸ ಹುಲ್ಲು ಹುಡುಕಿಕೊಂಡು ಬೇರೆ ಕಡೆಗೆ ಹೋದ. ಅದು ಭವಿಷ್ಯದ ಯುವಕರಿಗೆ ಹೊಸ ಮಾದರಿಯೊಂದನ್ನು ತೋರಿಸಿಕೊಟ್ಟಂತಾಯಿತು.
ಸೈತಾನ ಹುಟ್ಟಿದ್ದೇ ಸೇವೆ ಮಾಡುವುದಕ್ಕಾಗಿತ್ತು. ಆದರೆ ಅವನು ಮಾಡಿದ್ದೇನು? ಎಲ್ಲರಿಗೂ ಕೆಟ್ಟದ್ದನ್ನೇ ಮಾಡಿದ. ನಾಗರಿಕ ದಂಗೆಯನ್ನು ಹುಟ್ಟುಹಾಕಿದ. ಟಿವಿ ಚಾನಲ್‌ಗಳಲ್ಲಿ ನೇರ ಪ್ರಸಾರವಾಗುವ ಡಿಬೇಟ್‌ಗಳಲ್ಲಿ ದೇವರು ಇದಕ್ಕೆಲ್ಲ ಹೇಗೆ ಉತ್ತರಿಸುತ್ತಾನೆ? ಇದಕ್ಕೆ ವ್ಯತಿರಿಕ್ತವಾಗಿ, ಟ್ರಂಪ್ ಯಾವತ್ತೂ ಸರಿಯಾದದ್ದನ್ನೇ ಹೇಳಿದ್ದಾರೆ.
ಡೆಮಾಕ್ರಟ್‌ಗಳು ಹೇಗೆ ಅಮೆರಿಕವನ್ನು ನಾಶಪಡಿಸಿದರು ಎಂದು ಅವರು ಸರಿಯಾಗಿ ಹೇಳಿದ್ದಾರೆ. ಏಕೆ ಬೇರೆ ಬೇರೆ ದೇಶಗಳಿಗೆ ದುಬಾರಿ ತೆರಿಗೆ ವಿಧಿಸಬೇಕು ಎಂಬ ಬಗ್ಗೆ ಅವರು ಸರಿಯಾಗಿ ಹೇಳಿ ದ್ದಾರೆ. ಅದನ್ನು ಒಪ್ಪದವರು ಅಜ್ಞಾನಿಗಳಷ್ಟೆ. ದೇವರಿಗೇನಾದರೂ ಜಾಗತಿಕ ವ್ಯಾಪಾರ ಅರ್ಥ ವಾಗುತ್ತದೆಯೇ? ದೇವರು ಯಾವತ್ತಾದರೂ ಬಿಸಿನೆಸ್ ಮಾಡಿದ್ದಾನೆಯೇ? ಅವನು ಟ್ರಂಪ್ ಟವರ್ ನಿರ್ಮಿಸಿದ್ದಾನೆಯೇ? 2025ರ ಜುಲೈ ಮತ್ತು ಆಗಸ್ಟ್‌ನಲ್ಲಿ ರಾಷ್ಟ್ರೀಯ ಸಾಲಕ್ಕೆ ಪ್ರತಿನಿತ್ಯ 21 ಬಿಲಿಯನ್ ಡಾಲರ್‌ನಷ್ಟು ಸೇರ್ಪಡೆ ಮಾಡುವಂತೆ ಅವನು ಯಾವತ್ತಾದರೂ ಅಮೆರಿಕದ ಅಧ್ಯಕ್ಷ ನಾಗಿ ಆಡಳಿತ ನಡೆಸಿದ್ದಾನೆಯೇ? ಮಿಲಿಯನ್ ಅಲ್ಲ ಕಣ್ರೀ, ಬಿಲಿಯನ್!
ಇಪ್ಪತ್ತೊಂದು ಬಿಲಿಯನ್, ಅದೂ ಪ್ರತಿದಿನ! ಹೀಗಾಗಿ ಅಮೆರಿಕದ ಒಟ್ಟು ರಾಷ್ಟ್ರೀಯ ಸಾಲ ಈಗ 40 ಟ್ರಿಲಿಯನ್ ಆಗುತ್ತಿದೆ. ಬಿಲಿಯನ್ ಅಲ್ಲ ಕಣ್ರೀ, ಟ್ರಿಲಿಯನ್! ನಲವತ್ತು ಟ್ರಿಲಿಯನ್! ಅದೂ ಕೂಡ ಡಾಲರ್ ನಲ್ಲಿ ಮಾಡಿರುವ ಸಾಲ. ಯಾವುದೋ ಕ್ಷುಲ್ಲಕ ರೂಬಲ್ ಅಥವಾ ಯುವಾನ್ ಕರೆನ್ಸಿಯಲ್ಲಿ ಅಲ್ಲ.
ಹೀಗಾಗಿ, ದೇವರೇ, ನೀನು ಸ್ವರ್ಗಕ್ಕೆ ಅಧ್ಯಕ್ಷ ನಾಗಿ ಪುನರಾಯ್ಕೆ ಆಗಬೇಕೆಂದರೆ ಇದಕ್ಕೆಲ್ಲ ಉತ್ತರಿಸ ಬೇಕಾಗುತ್ತದೆ. ಆದರೆ ಟ್ರಂಪ್ ಬಳಿ ಇದಕ್ಕೆಲ್ಲ ಉತ್ತರ ಸಿದ್ಧವಿದೆ. ಹಿ ಈಸ್ ದ ಬೆಸ್ಟ್! ಯಾವುದರ ಬಗ್ಗೆ ಕೇಳಿದರೂ ಅವರಲ್ಲಿ ಉತ್ತರವಿದೆ. `I am a perfect physical specimen’ `I know words, I have the words.’ `I know more about grass than any human being ಎಂದು ಅವರೇ ಹೇಳಿದ್ದಾರೆ. ಇನ್ನೇನು ಸಾಕ್ಷಿ ಬೇಕು? ಯಾವ ಹೆಸರು ಸರಿ ಎಂಬುದು ಟ್ರಂಪ್‌ಗೆ ಗೊತ್ತಿದೆ. ಪೆಂಟಗನ್ ಎಂಬ ಹೆಸರಿನಲ್ಲಿ ಏನೂ ಇಲ್ಲ.
ಅದು ಬರೀ ವಾಸ್ತುಶಿಲ್ಪಿಯ ಕಲ್ಪನೆಯಂತಿದೆ. ಅದರ ಬದಲು ‘ಯುದ್ಧದ ಸಚಿವಾಲಯ’ ಎಂದು ಹೇಳುವುದು ಸರಿಯಾಗುತ್ತದೆ. ಹೀಗಾಗಿ ಮುಂದಿನ ಅಜೆಂಡಾ: ಅಮೆರಿಕದ ‘ಡಿಫೆನ್ಸ್ ಇಂಡಸ್ಟ್ರಿ’ಯ ಹೆಸರನ್ನು ‘ಅಫೆನ್ಸ್ ಇಂಡಸ್ಟ್ರಿ’ ಎಂದು ಬದಲಾಯಿಸುವುದು.
ಇದೂ ಕೂಡ ಎಷ್ಟು ಸರಿಯಾಗಿದೆ ಎಂಬುದನ್ನು ನೀವೇ ಗಮನಿಸಿ. ದೇವರು ಈ ಜಗತ್ತನ್ನು ಏನೇನೋ ಲೋಪದೋಷಗಳ ಸಮೇತ ಸೃಷ್ಟಿಸಿದ ಮೇಲೆ ಯಾವತ್ತಾದರೂ ಜಗತ್ತನ್ನು ಮ್ಯಾನೇಜ್ ಮಾಡಿದ್ದಾನೆಯೇ? ಅಥವಾ ಮಾಡುವುದಕ್ಕೆ ಅವನಿಂದ ಸಾಧ್ಯವಾಗಿದೆಯೇ? ಅದೇ ಟ್ರಂಪ್ ಅವರನ್ನು ನೋಡಿ. ಅವರ ಎರಡನೇ ಅವಧಿಯ ಮೊದಲ ನೂರು ದಿನಗಳಲ್ಲೇ ಅವರು ಎಷ್ಟೊಂದು ಸಾಧನೆ ಮಾಡಿದ್ದಾರೆ.
ತಾವು ಬೇರೆ ಬೇರೆ ದೇಶಗಳಿಗೆ ದುಬಾರಿ ತೆರಿಗೆ ವಿಧಿಸಿದ್ದರಿಂದ ಏನು ಪ್ರಯೋಜನವಾಗಿದೆ ಎಂಬು ದನ್ನು ಅವರೇ ಹೀಗೆ ಹೇಳಿದ್ದಾರೆ- ‘ಎಲ್ಲಾ ದೇಶಗಳೂ ಈಗ ನನಗೆ ಫೋನ್ ಮಾಡುತ್ತಿವೆ, ನನ್ನ ಅಂಡಿಗೆ ಮುತ್ತಿಡುತ್ತಿವೆ’. ನೀವೇ ಹೇಳಿ, ಯಾವ ದೇಶ ತಾನೇ ಈವರೆಗೆ ದೇವರಿಗೆ ಫೋನ್ ಮಾಡಿದೆ? ಮಾಡಿದ್ದರೆ ವ್ಯಾಟಿಕನ್ ದೇಶ ಮಾತ್ರ ದೇವರಿಗೆ ಕರೆ ಮಾಡಿರಬಹುದು.
ಆದರೆ ವ್ಯಾಟಿಕನ್‌ನ ಕರೆಯನ್ನು ದೇವರು ರಿಸೀವ್ ಮಾಡುವ ಗೋಜಿಗೆ ಹೋಗಿಲ್ಲ ಎಂಬುದು ಬೇರೆ ವಿಷಯ. ಜಾಗತಿಕ ಮಟ್ಟದಲ್ಲಿ ಯಾವುದೇ ಜನಮತಗಣನೆ ನಡೆದರೂ ದೇವರ ಬಂಡವಾಳ ತಾಪ್ಡ್‌ತೋಪ್ಡ್ ಬಯಲಾಗುತ್ತದೆ. ಜಗತ್ತಿನ ಅರ್ಧಕ್ಕಿಂತ ಹೆಚ್ಚು ಜನರು ದೇವರಿದ್ದಾನೆ ಎಂಬುದನ್ನೇ ನಂಬುವುದಿಲ್ಲ.
ಆದರೆ, ಈ ಭೂಮಂಡಲದಲ್ಲಿ ಇರುವ ಪ್ರತಿಯೊಬ್ಬ ವ್ಯಕ್ತಿಯೂ ಟ್ರಂಪ್ ಇದ್ದಾನೆ ಎಂಬುದನ್ನು ನಂಬುತ್ತಾರೆ. ಹಾಗಿದ್ದರೆ ಯಾರ ವಿಶ್ವಾಸಾರ್ಹತೆ ಹೆಚ್ಚು? ಹೀಗಾಗಿ 2024ರಲ್ಲಿ ಅಮೆರಿಕದ ಅಧ್ಯಕ್ಷ ಹುದ್ದೆಗೆ ನಡೆದ ಚುನಾವಣೆಗಿಂತ ಸ್ವರ್ಗದ ಸಿಂಹಾಸನಕ್ಕಾಗಿ ಆಕಾಶದಲ್ಲಿ ನಡೆಯುವ ಚುನಾವಣೆ ಬಹಳ ಸುಲಭವಾಗಿರುತ್ತದೆ.
ಆ ಚುನಾವಣೆಯಲ್ಲಿ ಗೆಲ್ಲುವವರು ರೆಡ್ ಕ್ಯಾಪ್ ಮೇಲೆ ಎರಡನೇ ಘೋಷಣೆಯನ್ನು ಈಗಾಗಲೇ ಬರೆಸುತ್ತಿದ್ದಾರೆ. ‘ಮೇಕ್ ಹೆವನ್ ಗ್ರೇಟ್ ಅಗೇನ್’. ದೇವರು ಇದನ್ನು ಹೇಗೆ ಎದುರಿಸುತ್ತಾನೋ ನೋಡಿಯೇ ಬಿಡೋಣ. ಸ್ವರ್ಗದಲ್ಲಿ ಸಮಾನತೆಯಿದೆ, ಈ ವಿಶಿಷ್ಟ ಗುಣವನ್ನು ಬೇರಾರಿಂದಲೂ ಮ್ಯಾಚ್ ಮಾಡಲು ಸಾಧ್ಯವಿಲ್ಲ ಎಂದು ದೇವರು ವಾದಿಸಬಹುದು.
ಭೂಮಿಯಲ್ಲಿರುವ ಧರ್ಮ, ವರ್ಗ, ಲಿಂಗ, ಜನಾಂಗ, ವರ್ಣ ಹೀಗೆ ಯಾವ ತಾರತಮ್ಯವೂ ಸ್ವರ್ಗ ದಲ್ಲಿಲ್ಲ. ಆದ್ದರಿಂದ ಇಲ್ಲಿ ಎಲ್ಲರೂ ಶಾಶ್ವತವಾಗಿ ಸುಖದಿಂದ ಇರಬಹುದು ಎಂದು ದೇವರು ಹೇಳಬಹುದು. ಇದು ನಿಜವೇ ಆಗಿದ್ದರೆ ದೇವರು ಸಮಾಜವಾದಿಯೇ ಆಗಿರಬೇಕು. ಆದರೆ ಸಮಾಜ ವಾದಿಗಳು ಕೂಡ ದೇವರನ್ನು ನಂಬುವುದಿಲ್ಲ.
ಈಗ ಟ್ರಂಪ್ ಕಾರ್ಡ್ ಎಸೆಯುವ ಸಮಯ. ಅಮೆರಿಕವನ್ನು ಸೋಷಿಯಲಿಸ್ಟ್ ಮಾಡಲು ಡೊನಾಲ್ಡ್ ಟ್ರಂಪ್‌ಗಿಂತ ಹೆಚ್ಚು ಕೊಡುಗೆ ನೀಡಿದವರು ಯಾರಾದರೂ ಇದ್ದಾರೆಯೇ? ಅವರನ್ನು ರಹಸ್ಯ ಸಮಾಜವಾದಿ ಎಂದು ಕರೆದರೂ ತಪ್ಪಿಲ್ಲ. ರಕ್ಷಣಾತ್ಮಕ ನೀತಿಗಳಿಲ್ಲದ ಟ್ಯಾರಿಫ್ ಗಳು ಸಮಾಜ ವಾದವಲ್ಲದೆ ಮತ್ತೇನು? ಹಿಂದೆ ಸೋವಿಯತ್ ಯೂನಿಯನ್ನಿನ ಸಮಾಜವಾದಿ ರಾಜ್ಯಗಳಲ್ಲಿ ಇದೇ ನೀತಿ ಇತ್ತು. ಸಮಾಜವಾದದ ಎರಡನೇ ಮಂತ್ರವೆಂದರೆ ರಾಷ್ಟ್ರೀಕರಣ. ಟ್ರಂಪ್ ಸರಕಾರ ಟೆಕ್ ಕಂಪನಿಗಳು ಏಕಸ್ವಾಮ್ಯ ಸಾಧಿಸುವುದನ್ನು ತಪ್ಪಿಸಲು ಇಂಟೆಲ್ ಕಂಪನಿಯ ಶೇ.10ರಷ್ಟು ಷೇರುಗಳನ್ನು ಖರೀದಿಸುವುದಾಗಿ ಹೇಳಿದೆ.
ಅದೇ ರೀತಿ, ರಕ್ಷಣಾ ಉದ್ದಿಮೆಗಳಲ್ಲೂ ಅಮೆರಿಕದ ಸರಕಾರ ಭಾಗಿಯಾಗಬೇಕು ಎಂದು ಟ್ರಂಪ್ ಬಯಸಿದ್ದಾರೆ. ಖಾಸಗಿ ಕಂಪನಿಗಳಲ್ಲಿ ಸರಕಾರ ಷೇರು ಖರೀದಿಸುವುದು ಅಂದರೆ ಪರೋಕ್ಷ ರಾಷ್ಟ್ರೀಕರಣ. ಇದು ಸಮಾಜವಾದದ ನೀತಿ. 1970ರ ದಶಕದವರೆಗೂ ಭಾರತ ಈ ನೀತಿಯ ಅಡ್ಡ ಪರಿಣಾಮಗಳಿಂದ ಸಾಕಷ್ಟು ನರಳಿದೆ. ದೇಶದ ಆರ್ಥಿಕತೆ ಬೆಳೆಯದಂತೆ ತಡೆದಿದ್ದೇ ಈ ಧೋರಣೆ. ಏರ್ ಇಂಡಿಯಾವನ್ನು ಮತ್ತೆ ಖಾಸಗಿ ಕಂಪನಿಯನ್ನಾಗಿ ಮಾಡುವುದಕ್ಕೆ ಹೆಚ್ಚುಕಮ್ಮಿ ಏಳು ದಶಕ ಹಿಡಿಯಿತು.
1980ರ ದಶಕದಲ್ಲಿ ಕಾಮ್ರೇಡ್ ಡೆಂಗ್ ಜಿಯಾಪಿಂಗ್ ಚೀನಾದ ಕಣ್ಣು ತೆರೆಸಿ, ಬಿದಿರಿನ ಪರದೆಯ ಹಿಂದಿದ್ದ ಸಮಾಜವಾದವನ್ನು ತೊರೆದು ಚೀನಾವನ್ನು ಬಂಡವಾಳಶಾಹಿ ಆರ್ಥಿಕತೆಯನ್ನಾಗಿ ರೂಪಿಸಿದರು. ಅದರಲ್ಲಿ ಒಂದಷ್ಟು ಸಮತಾವಾದಿ ಲಕ್ಷಗಳನ್ನೂ ಬೆರೆಸಿದರು. ಡೆಂಗ್ ಅವರ ಪ್ರತಿ ಬಿಂಬದಂತೆ ಟ್ರಂಪ್ ಇದ್ದಾರೆ. ಬಂಡವಾಳಶಾಹಿ ನೀತಿಗೆ ವೇಗ ನೀಡಲು ಅವರು ಸಮಾಜವಾದ ವನ್ನು ಬೆರೆಸುತ್ತಿದ್ದಾರೆ.
ಸ್ವರ್ಗದ ಮತದಾರರು ಇದರಿಂದ ಖುಷಿಗೊಂಡು ಇನ್ನಷ್ಟು ವೋಟು ಹಾಕಬಹುದು. ಇದರೊಂದಿಗೆ ನಮ್ಮಲ್ಲೊಂದು ಅಸ್ತಿತ್ವವಾದಿ ಪ್ರಶ್ನೆ ಏಳುತ್ತದೆ: ಸ್ವರ್ಗದ ಚುನಾವಣೆಯಲ್ಲಿ ಸೋತ ನಂತರ ದೇವರು ಅಧಿಕಾರ ಬಿಟ್ಟುಕೊಡುತ್ತಾನೆಯೇ? ದೇವರು ಸರ್ವಾಧಿಕಾರಿಯೇ? ಟ್ರಂಪ್ ಈಗಾಗಲೇ ತಮ್ಮ ಸರಳ ವಾದ ಮಾತುಗಳಲ್ಲಿ ತಾನು ಸರ್ವಾಧಿಕಾರಿಯಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ: ‘ನಾನು ಡಿಕ್ಟೇಟರ್‌ಗಳನ್ನು ಇಷ್ಟಪಡುವುದಿಲ್ಲ.
ನಾನು ಡಿಕ್ಟೇಟರ್ ಅಲ್ಲ. ಅದ್ಭುತವಾದ ಕಾಮನ್ ಸೆನ್ಸ್ ಇರುವ ಬುದ್ಧಿವಂತ ಮನುಷ್ಯ ನಾನು’. ತಮ್ಮ ಆದೇಶಗಳಲ್ಲಿ ಒಮ್ಮೊಮ್ಮೆ ಒಂದೇ ವಾಕ್ಯ ಒಂದಿಡೀ ಕಾಲಂ ಅಥವಾ ಇಡೀ ಪುಟಕ್ಕೆ ವಿಸ್ತಾರ ಗೊಳ್ಳುವಂತೆ ಟ್ರಂಪ್ ನೋಡಿಕೊಂಡಿರುತ್ತಾರೆ. ಅವರಿಗೆ ತಮ್ಮ ವಿಗ್ ಅಥವಾ ಕೂದಲೆಂದರೆ ಇಷ್ಟ. ಅವರಿಗೆ ಸರ್ವಾಧಿಕಾರಕ್ಕಿಂತ ಬಹುಶಃ ನಾರ್ಸಿಸಿಸಂ ಅಂದರೆ ಇಷ್ಟ. ಡಿಕ್ಟೇಟರ್ ಕುರಿತ ಹೇಳಿಕೆ ಸಾಕಷ್ಟು ಚರ್ಚೆಯಾದಾಗ ಅವರು ಇನ್ನೊಮ್ಮೆ ಅದನ್ನು ಮೆಲುಕು ಹಾಕುತ್ತಾ, ‘ತುಂಬಾ ಜನರು ತಮಗೆ ಡಿಕ್ಟೇಟರ್ ಅಂದರೇ ಇಷ್ಟ ಎಂದು ಹೇಳಿದ್ದಾರೆ’ ಎಂದರು. ಇದೊಂದು ಪ್ರಜ್ಞಾಪೂರ್ವಕ ಹೇಳಿಕೆ ಇರಬಹುದು. ನಂತರದ 72 ತಾಸುಗಳಲ್ಲಿ ಇದೇ ಹೇಳಿಕೆಯನ್ನು ಇನ್ನೊಂದಷ್ಟು ಸಲ ರಿಪೀಟ್ ಮಾಡಿದರು.
ದೇವರಿಗೆ ಟ್ರಂಪ್ ಬಗ್ಗೆ ಒಂದು ಪ್ರಶ್ನೆ ಇದ್ದೇ ಇರುತ್ತದೆ. ‘ಶಾಂತಿ ಶಾಂತಿ’ ಎಂದು ಇಷ್ಟೆಲ್ಲಾ ಜಪ ಮಾಡುವ ಸರ್ವಶಕ್ತ ನಾಯಕ ಏಕೆ ಪ್ಯಾಲೆಸ್ತೀನ್‌ನಲ್ಲಿ ಶಾಂತಿ ಸ್ಥಾಪಿಸಲು ಸ್ವಲ್ಪವೂ ಆತುರ ತೋರಲಿಲ್ಲ? ದೇವರ ಪವಿತ್ರಭೂಮಿ ಪ್ಯಾಲೆಸ್ತೀನ್ ಬಗ್ಗೆ ಟ್ರಂಪ್ ಅಲ್ಪಸ್ವಲ್ಪ ಗಮನವನ್ನೇ ನಾದರೂ ನೀಡಿದ್ದರೆ ಅದು ಅಮೆರಿಕದ ಎಲ್ಲಾ ಪಾಶ್ಚಾತ್ಯ ಸ್ನೇಹಿತ ರಾಷ್ಟ್ರಗಳು ಪ್ಯಾಲೆಸ್ತೀನನ್ನು ಸ್ವತಂತ್ರ ರಾಷ್ಟ್ರ ಎಂದು ಗುರುತಿಸಿದ ಮೇಲೆಯೇ.
ಅಬ್ರಹಾಮಿಕ್ ನಂಬಿಕೆಯವರು ಸ್ವರ್ಗದ ಬಾಗಿಲು ಜೆರುಸಲೇಂ ಮೂಲಕ ತೆರೆದುಕೊಳ್ಳುತ್ತದೆ ಎಂದು ನಂಬುತ್ತಾರೆ. ಈ ನಗರ ಶತಮಾನಗಳ ಕಾಲ ರಕ್ತಪಾತವನ್ನು ಕಂಡಿರುವುದಕ್ಕೆ ಇದೂ ಕೂಡ ಒಂದು ಕಾರಣ. ಚರ್ಚಿನಲ್ಲಿ ಪ್ರಾರ್ಥನೆ ಓದಿದವರು, ಮಸೀದಿಗಳಲ್ಲಿ ಶಾಂತಿಯ ಘೋಷಣೆ ಕೂಗಿದವರು, ಮಂದಿರಗಳಲ್ಲಿ ಶಾಂತಿಮಂತ್ರ ಜಪಿಸಿದವರು ಅಬ್ರಹಾಂ, ಜೀಸಸ್ ಮತ್ತು ಮುಹಮ್ಮ ದನ ಈ ನೆಲದಲ್ಲಿ ತಮಗೊಂದು ಜಾಗ ಹುಡುಕುತ್ತಾ ಅಲೆಯುತ್ತಿದ್ದ ಮುಗ್ಧರ ಮಾರಣಹೋಮ ನಡೆಸಿ ಮಂಡಿಯವರೆಗೆ ರಕ್ತ ಹರಿಯುವವರೆಗೂ ಹಿಂಸಾಚಾರ ನಡೆಯಲು ಅವಕಾಶ ನೀಡಿದರು.
ಮಾನವ ಕುಲದ ಇತಿಹಾಸದಲ್ಲಿ ‘ಭೂಮಿ’ ಎಂಬ ಪದಕ್ಕಿಂತ ಕಹಿಯಾದ ಪದ ಇನ್ನೊಂದಿಲ್ಲ. ಪ್ಯಾಲೆಸ್ತೀನ್‌ನ ನೆಲ ಮುಗ್ಧ ಮಕ್ಕಳ ರಕ್ತದಿಂದ ತೋಯ್ದಷ್ಟೂ, ಅಣಕ ಎಂಬ ಪದ ತನ್ನ ಅರ್ಥ ಕಳೆದುಕೊಳ್ಳುತ್ತದೆ.
(ಮುಂದುವರಿಯುವುದು) (ಲೇಖಕರು ಹಿರಿಯ ಪತ್ರಕರ್ತರು)